ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂತರ್ಜೀವಿಗಳು
ಅಂತರ್ಜೀವಿಗಳು
ಜೀವಿಗಳಲ್ಲಿ ವಾಸಿಸುವ ಜೀವಿಗಳಿಗೆ ಈ ಹೆಸರಿದೆ (ಎಂಡೋಫೈಟ್ಸ್) ಅಂತರ್ಜೀವಿಗಳು ಸಾಮಾನ್ಯವಾಗಿ ಬೇರೆ ಜೀವಿಗಳಲ್ಲಿ ವಾಸವಾಗಿದ್ದರೂ ಪರಾವಲಂಬಿಗಳಾಗಿರುವುದಿಲ್ಲ. ಕೆಲವೊಮ್ಮೆ ಸಹಜೀವನವನ್ನೂ ತೋರ್ಪಡಿಸಬಹುದು. ಅಂತರ್ಜೀವಿಗಳಲ್ಲಿ ಕೆಲವು, ಅಪ್ಪು ಗಿಡಗಳಂತೆ ಆಶ್ರಯದಾತನಿಗೆ ತೊಂದರೆಯನ್ನೀಯದೆ ಸ್ವತಂತ್ರವಾಗಿ ಜೀವಿಸಿದರೆ ಮತ್ತೆ ಕೆಲವು ಸಸ್ಯದ ಬೆಳೆವಣಿಗೆಯನ್ನು ಕುಂಠಿತಗೊಳಿಸುತ್ತವೆ. ನಿಮ್ನವರ್ಗದ ಸಸ್ಯಗಳಾದ ಆಲ್ಗೆಗಳಲ್ಲಿ ಅದರಲ್ಲಿಯೂ ಅನೆಬೆನ, ರಿವ್ಯುಲೇರಿಯಾ, ಸೈಟೋನಿಮಾ, ನಾಸ್ಟಾಕ್, ಪ್ರೋಟೊಕಾಕಸ್ ಇತ್ಯಾದಿಗಳು ಅಧಿಕವಾಗಿ ಉಚ್ಚವರ್ಗದ ಸಸ್ಯವರ್ಗದಲ್ಲಿ ಜೀವಿಸುವುದನ್ನು ಕಾಣಬಹುದು. ಅಂತರ್ಜೀವಿಗಳನ್ನು ಬುಷ್ಟು ಜಾತಿಗೆ (ಫಂಗೈ) ಸೇರಿದ ಶಿಲಾ ವಲ್ಕಗಳಲ್ಲಿಯೂ ಸೈಕಾಸ್ ಮತ್ತಿತರ ಅನಾವೃತಬೀಜಸಸ್ಯದ ಬೇರುಗಳಲ್ಲೂ ಕಾಣಬಹುದು. ಆವೃತಬೀಜಸಸ್ಯಗಳಾದ ಲೆಗ್ಯೂಮಿನೇಸಿ ಕುಟುಂಬದ ಸಸ್ಯಗಳಲ್ಲೂ ಕೆಲವು ಉಪಯುಕ್ತ ಬ್ಯಾಕ್ಟೀರಿಯಾಗಳು ಅಂತರ್ಜೀವಿಗಳಾಗಿ ಜೀವಿಸುತ್ತವೆ. ಕೆಲವೇ ಬಗೆಯ ಸಸ್ಯಗಳಲ್ಲಿ ಅಂತರ್ಜೀವಿಗಳಿರುವ ಔಚಿತ್ಯದ ಬಗ್ಗೆ ಸಂಶೋಧನೆಗಳು ನಡೆಯಬೇಕಾಗಿದೆ.
(ಎ.ಎನ್.ಎಸ್.)