ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂತರ್ವಿಕಾಸ

ವಿಕಿಸೋರ್ಸ್ದಿಂದ

ಅಂತರ್ವಿಕಾಸ ಇದು ದಿಮ್ಮಿತಡೆಯ ಒಂದು ನಮೂನೆ. ದಿಮ್ಮಿಯು ಚಲಿಸುವ ಚಕ್ರದ ಒಳ ಮೈಮೇಲೆ ಒತ್ತುವಂತೆ ಇದರಲ್ಲಿ ಅಳವಡಿಸಿದೆ. ಈ ಜೋಡಣೆಯನ್ನು ಚಿತ್ರ 1 ಮತ್ತು 2 ರಲ್ಲಿ ತೋರಿಸಿದೆ. ರಬ್ಬರ್ ಟೈರ್ ಹೊದಿಕೆ ಇರುವ ಚಕ್ರಗಳಿಂದ ರಚಿಸಲ್ಪಟ್ಟ ಬಂಡಿಗಳಲ್ಲಿ ಚಕ್ರದ ಹೊರಗಡೆ ದಿಮ್ಮಿಗಳನ್ನು ಅಳವಡಿಸುವುದು ಸಾಧ್ಯವಿಲ್ಲ. ಇಂಥ ಸನ್ನಿವೇಶಗಳಲ್ಲಿ ಹೊರ ದಿಮ್ಮಿಗಳನ್ನು ಒತ್ತುವುದಕ್ಕೆ ಬೇರೆ ಚಕ್ರಗಳನ್ನು ಅಳವಡಿಸಬೇಕು. ಈ ತೊಂದರೆಯನ್ನು ಅಂತಸ್ಥವಾಗಿ ಅರಳುವ ದಿಮ್ಮಿಗಳ ಜೋಡಣೆಯಿಂದ ನಿವಾರಿಸಬಹುದು. ಚಕ್ರದ ಹೊರ ಮೈಮೇಲೆ ರಬ್ಬರ್ ಹೊದಿಕೆಗಳನ್ನು ಅಳವಡಿಸಿ ಅದೇ ಚಕ್ರದ ಒಳ ಮೈಯಲ್ಲಿ ಅರಳುವ ದಿಮ್ಮಿಗಳನ್ನು ಅಳವಡಿಸಬಹುದು. ಈ ದಿಮ್ಮಿಗಳನ್ನು ಪ್ರಯೋಗಿಸಲು ಮಾನವಶಕ್ತಿಯನ್ನಾಗಲಿ ಅಥವಾ ದ್ರವಶಕ್ತಿಯನ್ನಾಗಲಿ ಉಪಯೋಗಿಸಬಹುದು. ದಿಮ್ಮಿಗಳಿಗೆ ಫೆರಾಡೊ ಅಥವಾ ಮಿನ್‍ಟೆಕ್ಸ್ ಹೊದಿಕೆಗಳನ್ನು ಸಾಮಾನ್ಯವಾಗಿ ಸಜ್ಜುಗೊಳಿಸಿರುತ್ತಾರೆ. ಚಕ್ರದ ಒಳಗಡೆ ಅಳವಡಿಸಿರುವುದರಿಂದ ದಿಮ್ಮಿ ಮತ್ತು ಚಕ್ರಗಳ ಮಧ್ಯೆ ದೂಳು, ನೀರು ಇವುಗಳ ಸಂಪರ್ಕವಿಲ್ಲದಂತೆ ಇಡಲು ಸಾಧ್ಯ. ದ್ರವಶಕ್ತಿಯಿಂದ ನಡೆಸಲ್ಪಟ್ಟ ಈ ನಮೂನೆಯ ತಡೆಗಳು ಸ್ವಯಂಚಾಲಿತ ಬಂಡಿಗಳಲ್ಲಿ (ಆಟೊಮೋಟಿವ್) ಬಹಳವಾಗಿ ಬಳಕೆಯಲ್ಲಿವೆ. ಚಿತ್ರ 3 ರಲ್ಲಿ ಈ ತರಹದ ಒಂದು ಜೋಡಣೆಯನ್ನು ಕಾಣಬಹುದು.

(ಎಸ್.ಎಸ್.)