ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂತಾರಾಷ್ಟ್ರೀಯ ಸಮ್ಮೇಳನಗಳು

ವಿಕಿಸೋರ್ಸ್ ಇಂದ
Jump to navigation Jump to search

ಅಂತಾರಾಷ್ಟ್ರೀಯ ಸಮ್ಮೇಳನಗಳು[ಸಂಪಾದಿಸಿ]

ಸಮ್ಮೇಳನಗಳು ಒಂದನೆಯ ಮಹಾಯುದ್ಧದಿಂದೀಚೆಗೆ ರೂಢಿಗೆ ಬಂದವು. 1964ರಲ್ಲಂತೂ ಇಂಥ ನೂರಾರು ಸಮ್ಮೇಳನಗಳು ಜರುಗಿದುವು. ಇವುಗಳನ್ನು ಸರ್ಕಾರಿ ಸಮ್ಮೇಳನಗಳು (ಉದಾ : ಕೈರೋ ನಗರದಲ್ಲಿ ನಡೆದ ಅಲಿಪ್ತ ರಾಷ್ಟ್ರಗಳ ಸಮ್ಮೇಳನ) ಮತ್ತು ಖಾಸಗಿ ಸಮ್ಮೇಳನಗಳು (ಉದಾ: ಜರ್ಮನಿಯ ಹೋಹೆನ್ ಬೀಸ್ಟೀನ್ನಲ್ಲಿ ಜರುಗಿದ ಕ್ರೈಸ್ತವಿದ್ಯಾ ಸಮ್ಮೇಳನ) ಎಂದು ಎರಡು ವಿಭಾಗ ಮಾಡಬಹುದು. ಅಂತರಸರ್ಕಾರೀ ಸಮ್ಮೇಳನಗಳನ್ನು ಮಾತ್ರ ಅಂತಾರಾಷ್ಟ್ರೀಯ ಎಂದು ಹೇಳುವುದು ತಪ್ಪಾಗುತ್ತದೆ. ಮೂರು ಅಥವಾ ಹೆಚ್ಚು ರಾಷ್ಟ್ರಗಳ ಪ್ರತಿನಿಧಿಗಳನ್ನೊಳಗೊಂಡು, ಧ್ಯೇಯದಲ್ಲಿ, ಕಾರ್ಯಕ್ರಮಗಳಲ್ಲಿ, ಅಂತಾರಾಷ್ಟ್ರೀಯ ರೂಪು ಪಡೆದಿರುವ ಎಲ್ಲ ಸಮ್ಮೇಳನಗಳನ್ನೂ ಅಂತಾರಾಷ್ಟ್ರೀಯ ಸಮ್ಮೇಳನಗಳೆಂದು ಕರೆಯುವುದು ಸೂಕ್ತ.

ಆದರೂ ಸಾಮಾನ್ಯ ಜನರ ಭಾವನೆಯಲ್ಲಿ ಮಾತ್ರ, ಅಂತಾರಾಷ್ಟ್ರೀಯ ಸಂಸ್ಥೆಗಳೆಂದರೆ: 1. ರಾಷ್ಟ್ರಗಳಿಗೆ ಸಮಾನವಾಗಿ ಸಂಬಂಧಿಸಿದ ವಿಷಯಗಳನ್ನು, ಸಮಸ್ಯೆಗಳನ್ನು, ಚರ್ಚಿಸಿ ನಿರ್ಧರಿಸಲು ಆ ದೇಶಗಳ ಪ್ರತಿನಿಧಿಗಳನ್ನೊಳಗೊಂಡ ಸಮ್ಮೇಳನಗಳು. 2. ವ್ಯವಸ್ಥಿತ ಅಂತಾರಾಷ್ಟ್ರೀಯ ಸಂಸ್ಥೆಗಳು. ಇಂಥ ಸಮ್ಮೇಳನಗಳನ್ನು ಕರೆಯಲು ಕಾರಣವಾದ ಮುಖ್ಯ ವಿಷಯಗಳೆಂದರೆ, ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸುವುದು, ನಡೆಯಬಹುದಾದ ಯುದ್ಧವನ್ನು ತಡೆಗಟ್ಟುವುದು. 1919ರಲ್ಲಿ ವಿಶ್ವಸಮರವನ್ನು ನಿಲ್ಲಿಸುವುದಕ್ಕೆಂದು ಆಹ್ವಾನಿಸಿದ ಪ್ಯಾರಿಸ್ ಶಾಂತಿ ಸಮ್ಮೇಳನ ಮೊದಲನೆಯದಕ್ಕೆ ಉದಾಹರಣೆ; ಶಾಂತಿಯುತವಾಗಿ ಅಂತಾರಾಷ್ಟ್ರೀಯ ವಿವಾದಗಳನ್ನು ಬಗೆಹರಿಸುವುದಕ್ಕಾಗಿ 1907ರಲ್ಲಿ ಕರೆದ ಹೇಗ್ ಸಮ್ಮೇಳನ ಎರಡನೆಯದಕ್ಕೆ ಉದಾಹರಣೆ. ಅಂತಾರಾಷ್ಟ್ರೀಯ ಸಮ್ಮೇಳನಗಳಿಗೆ ಕಾರಣವಾದ ಇತರ ವಿಷಯಗಳೆಂದರೆ ವಾಣಿಜ್ಯ, ಆರೋಗ್ಯ, ಕಾರ್ಮಿಕರ ಸ್ಥಿತಿ, ಶಿಕ್ಷಣ ಮತ್ತು ಶಿಶುಪೋಷಣೆ.

ಅಂತಾರಾಷ್ಟ್ರೀಯ ಸಮ್ಮೇಳನಗಳು ಯಶಸ್ವಿಯಾಗಬೇಕಾದರೆ, ಎರಡು ವಿಧದ ಸಿದ್ಧತೆಗಳನ್ನು ನಡೆಸಬೇಕಾಗುತ್ತದೆ : 1. ಆಡಳಿತ ಇಲಾಖೆ ಮತ್ತು ನೌಕರ ವರ್ಗದವರು ಮಾಡುವ ಏರ್ಪಾಡುಗಳು. 2. ಸಮ್ಮೇಳನಕ್ಕೆ ಸಂಬಂಧಿಸಿದ ತಾಂತ್ರಿಕ ರೀತಿಯ ಏರ್ಪಾಡುಗಳು.

  1. . ಆಡಳಿತ ವರ್ಗದ ಏರ್ಪಾಡಿನಲ್ಲಿ ವಾಹನಸೌಕರ್ಯ, ವಾಸಸ್ಥಳದ ಅನುಕೂಲತೆಗಳು, ಆಡಳಿತ ಶಾಖೆಗೆ, ಸಮ್ಮೇಳನಕ್ಕೆ ಬೇಕಾದ ಸ್ಥಳಾವಕಾಶಗಳನ್ನು ಒದಗಿಸುವುದು ಸಮಾಚಾರ ಸಾಗಣೆ, ಭಾಷಾಂತರೀಕರಣಕ್ಕೆ, ಅರ್ಥವಿವರಣೆಗೆ ಬೇಕಾದ ಸೌಲಭ್ಯಗಳು, ಅವಶ್ಯಸಾಮಗ್ರಿಗಳ ಸರಬರಾಜು, ಬ್ಯಾಂಕು ವ್ಯವಸ್ಥೆ ಸಮ್ಮೇಳನದ ಕಾರ್ಯಕಲಾಪಗಳು ಸೌಹಾರ್ದದಿಂದ ಯಶಸ್ವಿಯಾಗಿ ಪುರೈಸಬೇಕಾದರೆ ಈ ಸೌಲಭ್ಯಗಳು ದೋಷರಹಿತವಾಗಿರಬೆಕು. ಉದಾಹರಣೆಗೆ: ಸಮಿತಿಗಳ ಕೊಠಡಿಗಳಲ್ಲಿ ನಿರಾಳವಾಗಿ ಕೂಡುವ ವ್ಯವಸ್ಥೆ ಇಲ್ಲದಿದ್ದರೆ, ಶ್ರವಣ ಸಾಧನಗಳ ಏರ್ಪಾಡು ಸರಿಯಾಗಿಲ್ಲದೆ ಇದ್ದರೆ, ಸದಸ್ಯರು ಗಮನವಿಟ್ಟು ವ್ಯವಹರಿಸುವುದು ಸಾಧ್ಯವಿಲ್ಲ.
  2. . ತಾಂತ್ರಿಕ ರೀತಿಯ ಏರ್ಪಾಡುಗಳಲ್ಲಿ ಬಗೆಹರಿಸಬೇಕಾದ ಸಮಸ್ಯೆಗಳ ನಿಷ್ಕೃಷ್ಟ ನಿರೂಪಣೆ, ಸಮ್ಮೇಳನ ಸಾಧಿಸಬೇಕಾದ ಧ್ಯೇಯಗಳು (ಅಜೆಂಡ ಅಥವಾ ಕಾರ್ಯಸೂಚಿ), ಕಾರ್ಯಕ್ರಮದ ಸ್ವರೂಪ ಮತ್ತು ಸಾಧನಗಳ ನಿರ್ಣಯ ಅಂದರೆ ಸರ್ವಸದಸ್ಯಸಮ್ಮೇಳನಗಳು ಎಷ್ಟು ಬಾರಿ ಸೇರಬೇಕು, ಸಮಿತಿಗಳೆಷ್ಟಿರಬೇಕು ಎಂಬುದು ಮತ್ತು ಚರ್ಚೆಗಳಲ್ಲಿ ಭಾಗವಹಿಸುವವರಿಗೆ ಬೇಕಾದ ಆಧಾರ ಕಾಗದ ಪತ್ರಗಳನ್ನೊದಗಿಸುವುದು-ಇತ್ಯಾದಿ.

ಅಂತಾರಾಷ್ಟ್ರೀಯ ಸಮ್ಮೇಳನಗಳು ಈ ಮೂರರಲ್ಲಿ ಯಾವುದಾರೊಂದು ರೀತಿಯಲ್ಲಿ ಮುಕ್ತಾಯಗೊಳ್ಳಬಹುದು. 1. ಸಾಂಪ್ರದಾಯಿಕ ಅಥವಾ ಔಪಚಾರಿಕ ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಎಲ್ಲರೂ ಸಹಿ ಹಾಕಬಹುದು; ಉದಾ: 1919ರಲ್ಲಿ ನಡೆದ ಪ್ಯಾರಿಸ್ ಸಮ್ಮೇಳನದ ಫಲವಾಗಿ ಎಲ್ಲರ ಒಪ್ಪಿಗೆ ಪಡೆದ ವರ್ಸೆಲ್್ಸ ಕರಾರು; 2. ಕಾರ್ಯಕಲಾಪಗಳ ಸಂಕ್ಷಿಪ್ತ ವರದಿ ಮಾತ್ರ ಹೊರಬೀಳಬಹುದು; 3. ಸದಸ್ಯರ ಒಟ್ಟು ಅಭಿಪ್ರಾಯವನ್ನೊಳಗೊಂಡು ಅಧಿಕಾರಯುತ ಪ್ರಕಟನೆಯನ್ನು ಕೊಡಬಹುದು; ಉದಾ: 1953ರ ಬಾಂಡುಂಗ್ ಸಮ್ಮೇಳನದ ವರದಿ.