ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂದಾಜು
ಗೋಚರ
ಅಂದಾಜು
[ಸಂಪಾದಿಸಿ]ಬೆಲೆ ಕಟ್ಟುವ ಅಥವಾ ನಿಶ್ಚಯಿಸುವ ಕ್ರಮ. ಇದು ಒಟ್ಟು ಮೊತ್ತ, ಪ್ರಮಾಣ ಅಥವಾ ಸನ್ನಿವೇಶ ಇವುಗಳನ್ನು ಮೂಲವಾಗಿಟ್ಟುಕೊಂಡು ನಿರ್ಧರಿಸುವ ಒಂದು ಸರಿಸುಮಾರಾದ ತೀರ್ಮಾನ ಮಾತ್ರ.
ಎಂಜಿನಿಯರಿಂಗ್ ಉದ್ಯೋಗದಲ್ಲಿ ಅಂದಾಜು ಆಗಬೇಕಾಗಿರುವ ಒಂದು ಕೆಲಸಕ್ಕೆ, ಅದರ ನಕ್ಷೆಯ ಆಧಾರದ ಮೇಲೆ, ಈ ಕೆಲಸಕ್ಕೆ ಬೇಕಾಗುವ ಶರೀರಶ್ರಮ ಮತ್ತು ಸಾಮಗ್ರಿಗಳ ಪ್ರಮಾಣವನ್ನನುಸರಿಸಿ ಅದಕ್ಕಾಗುವ ಅಂದಾಜು ಖರ್ಚನ್ನು ತಿಳಿಸುವ ಕ್ರಮ ಬಳಕೆಯಲ್ಲಿದೆ.
ನಿರ್ಮಾಣಕಾರ್ಯವೊಂದನ್ನು ಕೈಗೊಳ್ಳಲು ಬೇಕಾದ ಹಣವನ್ನು ಸಾರ್ವಜನಿಕ ನಿಧಿಯಿಂದ ಪಡೆಯುವ ಬಗ್ಗೆ ಸರ್ಕಾರಿ ಖಜಾನೆ ಅಥವಾ ಹಣಕಾಸಿನ ಇಲಾಖೆಗೆ ಪುರ್ವಭಾವಿ ತಿಳಿವಳಿಕೆ ನೀಡಲು ಈ ಅಂದಾಜನ್ನು (ಎಸ್ಟಿಮೇಟ್) ತಯಾರಿಸಲಾಗುವುದು.
ಕೆಲವು ವೇಳೆ ನಿರ್ದಿಷ್ಟವಾದ ಒಂದು ಕೆಲಸವನ್ನು ಕೈಗೊಳ್ಳುವ ಕಂತ್ರಾಟುದಾರರು ಅಥವಾ ಇತರ ಕಸಬುದಾರರು, ತಾವು ಎಷ್ಟು ಖರ್ಚಿನಲ್ಲಿ ಆ ಕೆಲಸವನ್ನು ಮುಗಿಸುವುದಾಗಿ ತಿಳಿಸುವ ಒಂದು ಹೇಳಿಕೆಗೂ ಅಂದಾಜು ಎಂದು ಹೇಳಬಹುದು.