ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂದಾನಪ್ಪ ದೊಡ್ಡಮೇಟಿ
ಅಂದಾನಪ್ಪ ದೊಡ್ಡಮೇಟಿ
[ಸಂಪಾದಿಸಿ]1908-72. ಕರ್ನಾಟಕ ಏಕೀಕರಣಕ್ಕಾಗಿ ದುಡಿದ ರಾಜಕಾರಣಿ. ಇಂದಿನ ಗದಗ ಜಿಲ್ಲೆಯ ಗದಗ ತಾಲ್ಲೂಕಿನ ಜಕ್ಕಲಿ ಗ್ರಾಮದಲ್ಲಿ 1908 ಮಾರ್ಚ್ 8ರಂದು ಜನಿಸಿದರು. ಚಿಕ್ಕಂದಿನಲ್ಲಿ ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದರು. 22ನೆಯ ವಯಸ್ಸಿನಲ್ಲಿ ಅಸಹಕಾರ ಆಂದೋಲನ ಮತ್ತು ಸತ್ಯಾಗ್ರಹಗಳಲ್ಲಿ ಭಾಗವಹಿಸಿದರು. 1933ರ ಕಾಯಿದೆ ಭಂಗ ಚಳವಳಿಯಲ್ಲಿ ಪಾಲ್ಗೊಂಡು ಸರ್ಕಾರದ ಆಗ್ರಹಕ್ಕೆ ಒಳಗಾಗಿ ಬಂದಿsಸಲ್ಪಟ್ಟರು. ಇವರು ಅನೇಕ ಬಾರಿ ಕಾರಾಗೃಹ ವಾಸ ಅನುಭವಿಸಿದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿ ದುಡಿದರು.
ಶ್ರಿಮಂತ ಜಮೀನುದಾರರಾಗಿದ್ದ ಅಂದಾನಪ್ಪನವರು ಒಮ್ಮೆ ಊರಿಗೆ ಬರ ಬಂದಾಗ ತಮ್ಮಲ್ಲಿದ್ದ ಧಾನ್ಯವನ್ನು ಜನರಿಗೆ ಹಂಚಿದರಲ್ಲದೆ ನಿರುದ್ಯೋಗ ನಿವಾರಣೆಗಾಗಿ ಜನರಿಗೆ ಕೆಲಸ ಒದಗಿಸಿದರು. ಹಾವು ಸಾಕುವುದು ಇವರ ಒಂದು ಹವ್ಯಾಸವಾಗಿತ್ತು. ತಮ್ಮ ಪ್ರೀತಿ ಪಾತ್ರ ಹಾವೊಂದು ಸತ್ತಾಗ ಇವರು ಉಪವಾಸ ಮಾಡಿದರಂತೆ. ಅಂದಾನಪ್ಪವನರು ಕನ್ನಡ ಸಾಹಿತ್ಯವನ್ನು ಆಳವಾಗಿ ಅಭ್ಯಸಿಸಿದ್ದರು. ಕನ್ನಡ ಭುವನೇಶ್ವರಿಯನ್ನು ಸ್ತುತಿಸುವ ಕರ್ನಾಟಕ ಮಹಿಮಾಸ್ತೋತ್ರ ಎಂಬುದು ಇವರ ಕವನಸಂಗ್ರಹ. ಇವÀರು ಪತ್ರಿಕೋದ್ಯಮಿ ಯಾಗಿದ್ದರು. ಕಲ್ಕಿ ಎಂಬ ಮಾಸಪತ್ರಿಕೆ ಯನ್ನು ಇವರು ಕೆಲವುಕಾಲ ಗದಗಿನಿಂದ ಪ್ರಕಟಿಸುತ್ತಿದ್ದರು. ಮುಂಬಯಿಯ ವಿಧಾನಸಭೆಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ಕನ್ನಡ ದಲ್ಲಿ ಮಾತನಾಡಿದರು. ಕರ್ನಾಟಕ ಏಕೀಕರಣ ಪ್ರಯತ್ನವನ್ನು ಬಲ ಪಡಿಸಿ,ಹೆಚ್ಚು ಕಾಲವನ್ನು ಅದಕ್ಕಾಗಿ ಮೀಸಲಿಟ್ಟು ಮುಂಬಯಿ ವಿಧಾನ ಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಏಕೀಕರಣಗೊಂಡ ವಿಶಾಲ ಮೈಸೂರು ರಾಜ್ಯದ ಹೆಸರನ್ನು ಕರ್ನಾಟಕ ಎಂದು ಬದಲಾಯಿಸಲು ವಿಧಾನ ಸಭೆಯಲ್ಲಿ ಪದೇಪದೇ ವಾದಿಸುತ್ತಿದ್ದರು. 1970-71ರಲ್ಲಿ ದೊಡ್ಡಮೇಟಿಯವರು ರಾಜ್ಯದ ನೀರಾವರಿ ಖಾತೆಯ ಸಹಾಯಕ ಮಂತ್ರಿಗಳಾಗಿದ್ದರು. 1972 ಫೆಬ್ರವರಿ 21ರಂದು, ನಿಧನರಾದರು.