ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಬಕೇರಿ
ಅಂಬಕೇರಿ
[ಸಂಪಾದಿಸಿ]ಸಹರಿನ್ಪುರ್ ಜಿಲ್ಲೆಯ ರೂರ್ಕೀ ತಹಸೀಲಿನ ಮುಂಡ್ಲನಗೆ ಉತ್ತರಕ್ಕೆ ಅರ್ಧ ಕಿಮೀ ದೂರದಲ್ಲಿರುವ ಪುರಾತತ್ತ್ವ ನೆಲೆ. 1963-64 ರಲ್ಲಿ ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವತಿಯಿಂದ ಎಂ.ಎಸ್.ದೇಶಪಾಂಡೇ ಮತ್ತು ಇತರರ ನೇತೃತ್ವದಲ್ಲಿ ಉತ್ಖನನವನ್ನು ನಡೆಸಲಾಯಿತು. ಮಳೆಯ ನಾಲೆಗಳಿಂದ ಭಾಗಶಃ ಕೊಚ್ಚಿ ಹೋಗಿರುವ ಮತ್ತು ಬೇರೆ ಬೇರೆ ಭಾಗಗಳಲ್ಲಿ ವ್ಯವಸಾಯ ನಡೆಸಿರುವುದರಿಂದ ಕೇವಲ 1.10 ಮೀ ದಪ್ಪಗಿರುವ ಅಂತ್ಯಕಾಲೀನ ಹರಪ್ಪ ಸಂಸ್ಕೃತಿಯ ಸಮಕಾಲೀನ ಸಾಂಸ್ಕೃತಿಕ ಅವಶೇಷಗಳು ಆರು ಸ್ತರಗಳಲ್ಲಿ ಕಂಡು ಬಂದಿದೆ. ಎಲ್ಲಾ ಸ್ತರಗಳಲ್ಲಿಯೂ ಇದುವರೆಗೆ ಬೆಳಕಿಗೆ ಬಂದಿರುವ ಮಾಸಲು ಕಂದುಬಣ್ಣದ ಹಲವು ಪ್ರಕಾರಗಳ ಮಡಕೆಗಳಿದ್ದವು. ಈ ಮಡಕೆಗಳನ್ನು ಚೆನ್ನಾಗಿ ಹದಮಾಡಿರುವ ಜೇಡಿಮಣ್ಣಿನಿಂದ ತಿಗರಿಯ ಮೇಲೆ ತಯಾರಿಸಲಾಗಿದೆ. ಇವು ಪಾಶರ್್ವಭಾಗಗಳಲ್ಲಿ ಪುರ್ಣ ಅಥವಾ ಭಾಗಶಃ ಕಂದುಬಣ್ಣದ್ದಾಗಿದ್ದು ಹೊಂದಾಣಿಕೆಗಾಗಿ ಮರಳು ಮತ್ತು ಮೈಕವನ್ನು ಉಪಯೋಗಿಸಲಾಗಿದೆ. ದಪ್ಪ ಮಡಕೆಗಳಲ್ಲಿ ಕತ್ತರಿಸಿರುವ ಹುಲ್ಲನ್ನು ಉಪಯೋಗಿಸಿರುವಂತೆ ಕಂಡುಬರುವುದು. ಮಡಕೆಗಳನ್ನು ಸಂಪುರ್ಣವಾಗಿ ಸುಟ್ಟಿಲ್ಲದಿರುವುದು ಮತ್ತು ಮೇಲಿನ ಲೇಪನ ಮಡಕೆಯ ಚೂರುಗಳಲ್ಲಿ ವರ್ಣರಂಜಿತ ಚಿತ್ರಗಳಾಗಲೀ ಗೀರಿದ ಚಿತ್ರಗಳಾಗಲೀ ಇಲ್ಲದಿದ್ದರೂ ಇವುಗಳ ಹೊರಮೈಯಲ್ಲಿ ಹುರಿಯ ಗುರುತುಗಳೂ ಹೆಣೆದ ಚಾಪೆಯ, ಅಡ್ಡಡ್ಡಲಾಗಿ ಗುರುತಿಸಿರುವ ಗೆರೆಗಳಿವೆ.
ಮಣ್ಪಾತ್ರೆಯ ಪ್ರಧಾನವಾದ ಮಾದರಿಗಳೆಂದರೆ ಶೇಖರಣೆ ಜಾಡಿ, ನೀರಿನ ದೋಣಿ, ದಂಡ ಮೇಲಿನ ತಟ್ಟೆ, ಉದ್ದ ಕತ್ತಿನ ಜಾಡಿ, ಕೊಕ್ಕಿನಂತೆ ಅಡ್ಡಲಾಗಿ ಹೊರಚಾಚಿರುವ ಅಂಚಿನ ಬೋಗುಣಿ ಅಥವಾ ತಾಂಬಾಳ, ಕಾಲುಗಳುಳ್ಳ ಮಡಕೆ, ಬಟ್ಟಲು ಮಾದರಿಯ ಹಿಡಿಕೆ, ಮುಚ್ಚಳ. ದಪ್ಪನಾದ ಸಮತಲ ತಳದ ಸಣ್ಣ ಬಟ್ಟಲು ಮುಂತಾದವುಗಳು ದಪ್ಪ ಮತ್ತು ತೆಳ್ಳನೆಯ ಕಂದುಬಣ್ಣದ ವಿವಿಧ ಪ್ರಕಾರಗಳ ಮಡಕೆಗಳಿವೆ.
ಯಾವುದೇ ಒಂದು ನಿರ್ದಿಷ್ಟ ಆಕಾರಗಳಿಲ್ಲದ ಅರೆಸುಟ್ಟಿರುವ ಇಟ್ಟಿಗೆಗಳನ್ನು ಉಪಯೋಗಿಸಿ ಕಟ್ಟಿರುವ ಒಲೆ ನಿರ್ಮಿತಗಳಲ್ಲಿ ಒಂದು. ಇದು 58 ಸೆಂಮೀ ಉದ್ದ, 30 ಸೆಂಮೀ ಅಗಲ ಮತ್ತು 18ಸೆಂಮೀ ಎತ್ತರವಾಗಿದೆ. ದಕ್ಷಿಣಭಾಗದ ಇಟ್ಟಿಗೆಯ ಅಳತೆ 33x18x8 ಸೆಂಮೀ ಆಗಿದೆ. ಇದರ ಪುರ್ವಭಾಗದ ನೆಲಗಟ್ಟನ್ನು ಇಟ್ಟಿಗೆ ಚೂರುಗಳಿಂದ ನಿರ್ಮಿಸಲಾಗಿದೆ. ಈ ಒಲೆಯಲ್ಲಿ ಸ್ವಲ್ಪ ಬೂದಿಯೂ ಕಂಡುಬಂದಿದೆ.
ನಿವೇಶನದ ದಕ್ಷಿಣ ಪರಿಧಿಯಲ್ಲಿ ಒಂದು ಇಟ್ಟಿಗೆಗೂಡು ಕಂಡು ಬಂದಿದೆ. ಇದು 1.60ಮೀ ಉದ್ದ ಮತ್ತು 30ಸೆಂಮೀ ಅಗಲವಾಗಿದ್ದು ಪುರ್ವ-ಪಶ್ಚಿಮಾಭಿಮುಖವಾಗಿದೆ. ಇಟ್ಟಿಗೆಗೂಡನ್ನು ಒಂದು ಡೊಗರಿರುವ ಗುಣಿಯಲ್ಲಿ ಮಾಡಿದೆ. ಇದರ ಪಕ್ಕಗಳನ್ನು ಒಣಹುಲ್ಲು ಮಿಶ್ರಿತ ಜೇಡಿಮಣ್ಣಿನಿಂದ ಗಿಲಾವು ಮಾಡಲಾಗಿದೆ. ಇಟ್ಟಿಗೆಗೂಡು ಉಪಯೋಗದಲ್ಲಿದ್ದಾಗ ಗಿಲಾವು ಮಾಡಿರುವ ಭಾಗ ಸುಟ್ಟಿದೆ. ಇದಕ್ಕೆ ಹತ್ತಿರದಲ್ಲಿಯೇ ಬಹಳಷ್ಟು ನಾಶವಾಗಿರುವ ಇದೇ ರೀತಿಯ ಇನ್ನೊಂದು ಇಟ್ಟಿಗೆ ಗೂಡು ಇತ್ತು. ಈ ಗೂಡಿನಲ್ಲಿ ಸುಟ್ಟ ಮಣ್ಣಿನ ಬೊಂಬೆ ಮತ್ತು ಚಕ್ರದ ಮಧ್ಯಭಾಗವೂ ದೊರಕಿದೆ.
ಕಲ್ಲಿನ ಒಂದು ಮಣಿ ಮತ್ತು ಡುಬ್ಬವಿರುವ ಸುಟ್ಟ ಮಣ್ಣಿನ ಗೂಳಿ, ಮಣಿಗಳು ಅಂಡಾಕೃತಿಯ ಚಪ್ಪಟೆ ಬಿಲ್ಲೆಗಳು ಮೊದಲಾದವು ಮತ್ತು ಕೆಲವು ಇತರ ಪ್ರಾಚೀನ ವಸ್ತುಗಳು ದೊರಕಿವೆ. ಕೆಲವು ವಸ್ತುಗಳ ಮೇಲೆ ಬೆರಳಿನ ಗುರುತುಗಳಿವೆ. ಮೂರು ಕಡೆ ರಂಧ್ರಗಳಿರುವ ಒಂದು ಇಟ್ಟಿಗೆ ಚೂರು ಸಹ ದೊರಕಿದೆ. ಈ ರಂಧ್ರಗಳ ಒಂದು ಕೊನೆಯಲ್ಲಿ ವೃತ್ತಾಕಾರವಾಗಿಯೂ ಮತ್ತೊಂದು ಕೊನೆಯಲ್ಲಿ ಲಂಬಾಕಾರವಾಗಿಯೂ ಇದೆ. ಒಂದು ಅರೆಯುವ ಕಲ್ಲು ಮತ್ತು ರುಬ್ಬು ಗುಂಡುಗಳು ದೊರಕಿವೆ.
ಕೆಲವು ಮಡಕೆಗಳ ಆಕಾರಗಳು ಹರಪ್ಪ ಸಂಸ್ಕೃತಿಯ ಅಂತ್ಯ ಕಾಲದ ಗಂಗಾ-ಯಮುನಾ ಸಂಗಮದ ಮತ್ತು ಪುರ್ವ ಪಂಜಾಬಿನ ಮಡಕೆಗಳನ್ನು ಹೋಲುತ್ತವೆ. ಇದನ್ನು ಗಮನಿಸಿದರೆ ಈ ಸಂಸ್ಕೃತಿಗಳು ಸಮಕಾಲೀನವಾಗಿದ್ದಿರಬಹುದು ಅಥವಾ ಈ ಸಂಸ್ಕೃತಿಗಳ ಪರಸ್ಪರ ಸಂಪರ್ಕದಿಂದ ಉಂಟಾಗಿರಬಹುದೆಂದು ಹೇಳಬಹುದು.