ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಬಲಿ ಚನ್ನಬಸಪ್ಪ
ಅಂಬಲಿ ಚನ್ನಬಸಪ್ಪ
[ಸಂಪಾದಿಸಿ]1895-1962. ಸ್ವಾತಂತ್ರ್ಯಯೋಧ ಮತ್ತು ಕರ್ನಾಟಕ ಏಕೀಕರಣದ ನೇತಾರ. ಬಿಜಾಪುರ ತಾಲ್ಲೂಕಿನ ಅರ್ಜುಣಗಿ ಗ್ರಾಮದಲ್ಲಿ ಒಕ್ಕಲುತನದ ಮನೆತನದಲ್ಲಿ ಜನಿಸಿದರು. ತಂದೆ ಜಗದೇವಪ್ಪ. ಶಿಕ್ಷಣ ಕನ್ನಡ ನಾಲ್ಕನೆಯ ತರಗತಿಯವರೆಗೆ. 1914ರಲ್ಲಿ ಒಂದನೆಯ ಮಹಾಯುದ್ಧ ನಿದಿsಗಾಗಿ ಗ್ರಾಮಕ್ಕೆ ಬಂದ ಮಾಮಲೆೆದಾರರನ್ನು ವಿರೋದಿsಸಿ ಮೂರುದಿನ ಉಪವಾಸಮಾಡಿ ಬಂಧsನದ ಶಿಕ್ಷೆ ಅನುಭವಿಸುವುದರೊಂದಿಗೆ ಇವರ ಸ್ವಾತಂತ್ರ್ಯಹೋರಾಟ ಪ್ರಾರಂಭವಾಯಿತೆನ್ನಬಹುದು. ಗಾಂದಿsಯವರ ಅನುಯಾಯಿಯಾಗಿ ಬಿಜಾಪುರದಲ್ಲಿ ಒಂದು ಸಂಘ ಕಟ್ಟಿ ಭೂಕಂದಾಯ ವಸೂಲಿಯನ್ನು ವಿರೋದಿsಸಿದರು. 1919ರ ಜಲಿಯನ್ವಾಲಾಬಾಗ್ ಹತ್ಯಾಕಾಂಡ ಇವರನ್ನು ಸಂಪೂರ್ಣವಾಗಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಎಳೆದು ತಂದಿತು. ಚಳವಳಿಯಲ್ಲಿ ಭಾಗವಹಿಸಿ ಮೊದಲು 1919ರಲ್ಲಿ ಕಾರಾಗೃಹ ಶಿಕ್ಷೆ ಅನುಭವಿಸಿದರು. ಅನಂತರ ಕಾಯದೆಭಂಗ ಚಳವಳಿಯಲ್ಲಿ ಜೈಲು (1931) ಸೇರಿ ಬಿಜಾಪುರ ಹಾಗೂ ವಿಸಾಪುರಗಳಲ್ಲಿ ಬಂಧನದಲ್ಲಿದ್ದರು.
ಸರ್ಕಾರದ ಕಿರುಕುಳ ಹೆಚ್ಚಾದಾಗ ಇವರು ಬಿಜಾಪುರ ಬಿಟ್ಟು ಸಂಸಾರಸಮೇತ ಸೊಲ್ಲಾಪುರಕ್ಕೆ ಹೋಗಬೇಕಾಯಿತು. ಅಲ್ಲಿ ಜೀವನವನ್ನು ಸಾಗಿಸಲು ನೌಕರಿ ಹಿಡಿದರೂ ಕಾಯದೆಭಂಗ ಚಳವಳಿಯಲ್ಲಿ ಮತ್ತೆ ಸೇರಿ ಲಷ್ಕರಿ ಕಾನೂನಿನ ಕಾಲದಲ್ಲಿ ಸರ್ಕಾರದ ಕಣ್ಣುತಪ್ಪಿಸಿ ಸೊಲ್ಲಾಪುರದಿಂದ ಮತ್ತೆ ಬಿಜಾಪುರಕ್ಕೆ ಬಂದರು. 1930-33ರ ಸಾರ್ವತ್ರಿಕ ಕಾಯದೆಭಂಗ ಚಳವಳಿಯಲ್ಲಿ ಮುಖ್ಯಪಾತ್ರ ವಹಿಸಿದ್ದಕ್ಕಾಗಿ ಸರ್ಕಾರ ಇವರಿಗೆ ಕಠಿಣಶಿಕ್ಷೆ ವಿದಿsಸಿತು. ಜೈಲುವಾಸದ ಕಾಲದಲ್ಲಿ ಇವರು ಕನ್ನಡ, ಹಿಂದಿ ಮತ್ತು ಮರಾಠಿ ಭಾಷೆಗಳನ್ನು ಕಲಿತರು.
1940ರಲ್ಲಿ ಇವರು ಕೆ.ಪಿ.ಸಿ.ಸಿ. ಕಾರ್ಯದರ್ಶಿಯಾಗಿ ಹುಬ್ಬಳ್ಳಿ ಧಾರವಾಡಗಳಲ್ಲಿ ವಾಸಮಾಡತೊಡಗಿದರು. 1942ರಲ್ಲಿ ಕಾರ್ಯಕರ್ತರಾಗಿ, ಚಲೇಜಾವ್ ಸಮಿತಿಯ ಅಧ್ಯಕ್ಷರಾಗಿ ದುಡಿದರು. ಟಪಾಲು ಲೂಟಿ ಮಾಡುವುದು, ಸರ್ಕಾರಿ ಮಹತ್ತ್ವದ ಕಾಗದಪತ್ರಗಳನ್ನು ಸುಡುವುದು ಮುಂತಾದ ವಿಧ್ವಂಸಕ ಕೃತ್ಯಗಳನ್ನು ಕೈಗೊಂಡರು. ಇವರ ನೇತೃತ್ವದಲ್ಲಿ ಮಿಂಚನಾಳ ಮತ್ತು ಜುಮನಾಳ ಸ್ಟೇಷನ್ಗಳು ಅಗ್ನಿಗೆ ಆಹುತಿಯಾದವು. ಮುಂಬಯಿಯಿಂದ ಇಂಗ್ಲೆಂಡಿಗೆ ಬಂಗಾರ, ಸಾಮಾನುಸರಂಜಾಮು ತುಂಬಿಕೊಂಡು ಹೊರಟ ಹಡಗೊಂದರ ಜಲಸಮಾದಿs ಮಾಡಿದ ಕೀರ್ತಿ ಇವರದು. ಆ ಕಾಲದಲ್ಲಿ ಇವರನ್ನು ಹಿಡಿದುಕೊಟ್ಟರೆ ರೂ.5,000 ಬಹುಮಾನ ಕೊಡುವುದಾಗಿ ಸರ್ಕಾರ ಸಾರಿತು. 1955ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ, 1952 ಮತ್ತು 1957ರಲ್ಲಿ ಶಾಸನಸಭಾ ಸದಸ್ಯರಾಗಿ ಇವರು ಆಯ್ಕೆಹೊಂದಿದರು. ಕರ್ನಾಟಕ ಏಕೀಕರಣಕ್ಕಾಗಿ ಮತ್ತು ಅಸ್ಪ್ನೃಶ್ಯತಾ ನಿವಾರಣೆಗಾಗಿ ದುಡಿದರು. ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಬೇಕೆಂಬುದು ಇವರ ಹಟವಾಗಿತ್ತು. ಪಾಶರ್್ವವಾಯುಪೀಡಿತರಾಗಿ 1962 ಮಾರ್ಚ್ 1ರಂದು ನಿಧನರಾದರು. ಅರ್ಜುಣಗಿಯಲ್ಲಿ ಇವರ ಸಮಾದಿs ಇದೆ.