ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಶುವರ್ಮನ್
ಅಂಶುವರ್ಮನ್
[ಸಂಪಾದಿಸಿ]610-23. ನೇಪಾಳದ ಲಿಚ್ಛವಿ ವಂಶದ ರಾಜನಾದ ಶಿವದೇವನ ಮಹಾಸಾಮಂತ (ಠಾಕುರಿ ರಾಜಪುತ್ರನೆಂದೂ ಠಾಕುರಿ ವಂಶದ ಸಂಸ್ಥಾಪಕನೆಂದೂ ಶಾಸನಗಳಿಂದ ತಿಳಿದುಬರುತ್ತದೆ. ಈ ವಂಶ ನೇಪಾಳಕ್ಕೆ 18 ರಾಜರನ್ನು ಕೊಟ್ಟಿತು). 7ನೆಯ ಶತಮಾನದ ಆದಿಭಾಗದಲ್ಲಿ ಆಭೀರರು ಲಿಚ್ಛವಿ ರಾಜ್ಯದ ಮೇಲೆ ದಂಡಯಾತ್ರೆಯನ್ನು ನಡೆಸಿದಾಗ ಅಂಶುವರ್ಮ ಅವರ ವಿರುದ್ಧ ಯುದ್ಧಮಾಡಿ, ಗೆದ್ದು ಶ್ರೇಷ್ಠ ಸೇನಾಪತಿಯೆನಿಸಿಕೊಂಡ. ಇವನ ಕೀರ್ತಿ ಎಲ್ಲ ಕಡೆಯೂ ಪ್ರಸರಿಸಿತು. ಕ್ರಮೇಣ ಇವನೇ ನೇಪಾಳಕ್ಕೆ ರಾಜನಾದ. ಲಿಚ್ಛವಿ ವಂಶದ ರಾಜನ ಮಗಳನ್ನೇ ಮದುವೆ ಮಾಡಿಕೊಂಡು ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡ. ಮಾನಗೃಹವೇ ನಡೆದುಬಂದ ರಾಜಧಾನಿಯಾಗಿದ್ದರೂ ಕೈಲಾಸಕೂಟವನ್ನು ತನ್ನ ನಿವಾಸಸ್ಥಾನವನ್ನಾಗಿ ಮಾಡಿಕೊಂಡ. ಭಾರತಕ್ಕೆ ಬಂದ ಯುವಾನ್ ಚಾಂಗ್ ಇವನನ್ನು ನೇಪಾಳದ ಖ್ಯಾತಿವೆತ್ತ ದೊರೆಯೆಂದೂ ಘನವಿದ್ವಾಂಸನೆಂದೂ ಹೇಳುತ್ತಾನೆ. ವ್ಯಾಕರಣವನ್ನು ಬರೆದುದರಿಂದ ಇವನ ಕೀರ್ತಿ ಎಲ್ಲೆಲ್ಲೂ ಹರಡಿತು. ಟಿಬೆಟ್ ರಾಜ್ಯಕ್ಕೆ ದೊರೆಯಾದ ಸ್ರಾನ್ತ್ಸಾನ್ ಗಾಂಪೊ, ಅಸ್ಸಾಂ ಮತ್ತು ನೇಪಾಳ ರಾಜ್ಯಗಳನ್ನು ವಶಪಡಿಸಿಕೊಂಡು, ಅಂಶುವರ್ಮನ ಮಗಳನ್ನು ಮದುವೆಯಾದ. ಕ್ರಮೇಣ ನೇಪಾಳ ಟಿಬೆಟ್ಟಿನ ಹತೋಟಿಗೆ ಬಂದುದರಿಂದ ಅಂಶುವರ್ಮ ಟಿಬೆಟ್ ರಾಜನ ಸಾಮಂತನಾಗಿ ಉಳಿಯಬೇಕಾಯಿತು.