ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಕ್ಕಮಹಾದೇವಿ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಅಕ್ಕಮಹಾದೇವಿ : - ಅಕ್ಕಮಹಾದೇವಿ ೧೨ ನೆಯ ಶತಮಾನದ ಪ್ರಸಿದ್ಧ ಶಿವಶರಣೆ. ಕನ್ನಡದ ಮೊದಲ ಕವಯಿತ್ರಿ ಎಂಬ ಬಿರುದಿಗೆ ಪಾತ್ರಳಾಗಿದ್ದಾಳೆ. ಇವಳು ಉಡುತಡಿಯವಳು ಎಂದು ಹರಿಹರ ಮುಂತಾದವರು ಹೇಳಿದ್ದಾರೆ. ಉಡುತಡಿ ಈಗಿನ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಉಡುಗಣಿ ಮತ್ತು ತಡುಗಣಿಗಳೇ ಆಗಿವೆ ಎಂದು ಸಾಮಾನ್ಯವಾಗಿ ಭಾವಿಸಲಾಗಿದೆ. ಇವಳ ತಂದೆತಾಯಿಗಳ ಹೆಸರುಗಳನ್ನು ಬೇರೆ ಬೇರೆ ಕವಿಗಳು ಬೇರೆ ಬೇರೆ ರೀತಿಗಳಲ್ಲಿ ಹೇಳಿದ್ದಾರೆ. ಹರಿಹರ ಅವರನ್ನು ಶಿವಭಕ್ತರೆಂದು ಸಾಮಾನ್ಯ ರೂಪದಲ್ಲಿ ಹೆಸರಿಸಿದ್ದರೆ, ಚಾಮರಸ ಅವರ ಹೆಸರನ್ನು ನಿರ್ಮಲ, ಸುಮತಿ ಎಂಬುದಾಗಿ ಹೇಳುತ್ತಾನೆ. ರಾಚಕವಿ ಓಂಕಾರಶೆಟ್ಟಿ, ಲಿಂಗಮ್ಮ ಎಂದು ಹೇಳುತ್ತಾನೆ. ಚಾಮರಸನ ಹೆಸರುಗಳು ಅವನ ಕಾವ್ಯದಲ್ಲಿ ಬರುವ ಇತರ ಹೆಸರುಗಳಂತೆ ಸಾಂಕೇತಿಕ ಎಂದು ಭಾವಿಸಬಹುದು. ರಾಚಕವಿ ಬಹಳ ಈಚಿನವನು. ಆದ್ದರಿಂದ ಆ ಬಗ್ಗೆ ಏನನ್ನೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ.

ಈಕೆ ಶಿವನಲ್ಲಿ ಅಪಾರವಾದ ಭಕ್ತಿಯನ್ನಿಟ್ಟುದಲ್ಲದೆ, ಅವನನ್ನೇ ತನ್ನ ಗಂಡನೆಂದು ಭಾವಿಸಿದ್ದಳು. ಊರಿನ ರಾಜ ಕೌಶಿಕನ ದೃಷ್ಟಿ ಈ ಯುವತಿಯ ಮೇಲೆ ಬಿತ್ತು. ಮದುವೆಯಾಗಬಯಸಿದ. ಇವಳಿಗಾದರೋ ಅವನ ಕೈಹಿಡಿಯಲು ಸ್ವಲ್ಪವೂ ಇಷ್ಟವಿರಲಿಲ್ಲ. ರಾಜನಿಂದ ತನ್ನ ತಂದೆ ತಾಯಿಗಳಿಗೆ ಉಂಟಾಗಬಹುದಾದ ತೊಂದರೆಗಳನ್ನು ನೆನೆದು ಮೂರು ಷರತ್ತುಗಳೊಂದಿಗೆ ಮದುವೆಯಾಗಲು ಒಪ್ಪಿದಳು. ಮದುವೆಗೆ ಇದಕ್ಕಿಂತಲೂ ಇದ್ದ ದೊಡ್ಡ ಅಡ್ಡಿಯೆಂದರೆ ಕೌಶಿಕ ಜೈನ, ಅಷ್ಟೇ ಅಲ್ಲ, ಭವಿ. ಆತ ಸಂಸಾರದಲ್ಲಿ ಆಸಕ್ತ, ರಾಗಿ; ಇವಳು ಸಂಸಾರದಲ್ಲಿ ನಿರಾಸಕ್ತೆ, ವಿರಾಗಿ. ಕೌಶಿಕ ಲೌಕಿಕವ್ಯಕ್ತಿ; ಮಹಾದೇವಿ ಅಲೌಕಿಕವ್ಯಕ್ತಿ. ಅವನ ವ್ಯವಹಾರವೆಲ್ಲ ಪ್ರಾಪಂಚಿಕ, ಇವಳದೋ ಆಧ್ಯಾತ್ಮಿಕ.

ಮದುವೆಯಾದರೂ ಆ ದಾಂಪತ್ಯ ಹೆಚ್ಚುಕಾಲ ಉಳಿಯಲಿಲ್ಲ. ಕೌಶಿಕ ತನ್ನ ಮೂರು ಷರತ್ತುಗಳನ್ನೂ ಮುರಿದಾಗ, ಇವಳು ಅವನನ್ನು ತ್ಯಜಿಸಿ ಕೇಶಾಂಬರಿಯಾಗಿ, ಚೆನ್ನಮಲ್ಲಿಕಾರ್ಜುನನನ್ನು ಅರಸುತ್ತ ಹೊರಟು ದಾರಿಯಲ್ಲಿ ಹಲವಾರು ರೀತಿಯ ಕೋಟಲೆಗಳನ್ನು ಅನುಭವಿಸಿದಳು. ಈ ಎಲ್ಲ ಅಸಹನೀಯವಾದ ನೋವನ್ನೂ ನುಂಗಿ ಸಹಿಸಿಕೊಳ್ಳಲು ಧೈರ್ಯ ಕೊಟ್ಟದ್ದು ಇವಳ ಶಿವನಿಷ್ಠೆ. ತಾನು ಶಿವನ ವಧುವಾದ್ದರಿಂದ ಯಾರಿಗೂ ಅಳುಕಬೇಕಾಗಿಲ್ಲವೆಂಬ ಕೆಚ್ಚು ಇವಳದು. ಶ್ರೀಶೈಲಕ್ಕೆ ಹೋಗುವ ಮಾರ್ಗದಲ್ಲಿ ಈಕೆ ಕಲ್ಯಾಣಕ್ಕೂ ಬಂದಳು. ಕಲ್ಯಾಣ ಆಗ ವೀರಶೈವ ಧಾರ್ಮಿಕ ಚಟುವಟಿಕೆಗಳಿಂದ ತುಂಬಿ ತುಳುಕುತ್ತಿದ್ದಿತು. ಬಸವ, ಅಲ್ಲಮ ಮುಂತಾದವರ ನೇತೃತ್ವದಲ್ಲಿ ಸಾಮಾಜಿಕ ಕ್ರಾಂತಿಯೊಂದು ರೂಪುಗೊಳ್ಳುತ್ತಿದ್ದಿತು. ಆ ಶರಣರ ಕಿವಿಗಾಗಲೇ ಅಕ್ಕನ ನಿಷ್ಠೆ ಭಕ್ತಿಗಳು ಕೇಳಿ ಬಂದಿದ್ದವು. ಕಲ್ಯಾಣದಲ್ಲಿ ಕೆಲವು ಕಾಲ ನಿಂತು ಅನುಭಾವಿಗಳ ಸಂಗದಲ್ಲಿ ಸುಖ ಶಾಂತಿಗಳನ್ನು ಕಂಡಳು. ಬಸವಣ್ಣ, ಅಲ್ಲಮಪ್ರಭು-ಮುಂತಾದ ಅನುಭಾವಿಗಳಿಂದ ಮಹಾಶಿವಶರಣೆ ಎಂಬ ಹೊಗಳಿಕೆಗೆ ಪಾತ್ರಳಾದಳು. ಅಲ್ಲಿಂದ ಈಕೆ ಎಲ್ಲರ ಹರಕೆಯನ್ನೂ ಹೊತ್ತು, ತನ್ನ ಗಂಡ ಶ್ರೀಚೆನ್ನಮಲ್ಲಿಕಾರ್ಜುನನನ್ನು ಅರಸುತ್ತ ಶ್ರೀ ಶೈಲಕ್ಕೆ ಬಂದು, ಕದಳಿವನ ಪ್ರವೇಶಿಸಿ, ತನ್ನ ಆರಾಧ್ಯದೈವದ ಸಾನ್ನಿಧ್ಯದಲ್ಲಿ ಕೊನೆಯುಸಿರೆಳೆದಳು. ಹೀಗೆ ಸಾಂಪ್ರದಾಯಿಕ ಸಮಾಜದ ಸಂಕೋಲೆಗಳನ್ನು ಮುರಿದೊಗೆದು ಇವಳು ಮಾಡಿದ ಉಗ್ರಸಾಧನೆ, ಪಡೆದ ಸಿದ್ಧಿ ಅಪೂರ್ವವಾದುದು.

ಅಕ್ಕಮಹಾದೇವಿ ಶ್ರೇಷ್ಠ ಅನುಭಾವಿಯಾಗಿರುವಂತೆ ಶ್ರೇಷ್ಠ ವಚನ ಕಾರ್ತಿಯೂ ಆಗಿದ್ದಾಳೆ. ಚೆನ್ನಮಲ್ಲಿಕಾರ್ಜುನ ಎಂಬುದು ಇವಳ ವಚನಗಳ ಅಂಕಿತ. ಇವಳ ವಚನಗಳಲ್ಲಿ ಇವಳ ಅಂತರಂಗದ ಎಲ್ಲ ತುಮುಲಗಳೂ ಆಸೆ-ನಿರಾಸೆಗಳೂ ಸಂದೇಹ-ನಂಬಿಕೆಗಳೂ ವ್ಯಕ್ತವಾಗಿವೆ. ಅವು ಇವಳ ತೀವ್ರ ಅನುಭವದ ಅಗಳಾಗಿ ಹೊಮ್ಮುವುದರಿಂದ ಅನೇಕ ಕಡೆ ಶುದ್ಧ ಭಾವ ಗೀತೆಯ ಲಕ್ಷಣಗಳನ್ನು ಪಡೆದಿವೆ. ಸೃಷ್ಟಿಯಲ್ಲಿ ಒಂದಾಗಿಯೂ ಸೃಷ್ಟಿಯಿಂದ ಬೇರೆಯಾಗಿಯೂ ಇರುವ ಭಗವಂತನ ನಿಲುವನ್ನು ಬಹು ಪರಿಣಾಮ ಕಾರಿಯಾದ ರೀತಿಯಲ್ಲಿ ಚಿತ್ರಿಸುವ ಅಕ್ಕನ ವಚನವೊಂದು ಹೀಗಿದೆ:

  ೧.ಈಳೆ ನಿಂಬೆ ಮಾವು ಮಾದಲಕ್ಕೆ ಹುಳಿನೀರನೆರೆದವರಾರಯ್ಯ?

ಕಬ್ಬು ಬಾಳೆ ಹಲಸು ನಾರಿವಾಳಕ್ಕೆ ಸಿಹಿನೀರನೆರೆದವರಾರಯ್ಯ? ಕಳವೆ ರಾಜಾನ್ನ ಶಾಲ್ಯನ್ನಕ್ಕೆ ಓಗರದ ಉದಕವನೆರೆದವರಾರಯ್ಯ? ಮರುಗ ಮಲ್ಲಿಗೆ ಪಚ್ಚೆ ಮುಡಿವಾಳಕ್ಕೆ ಪರಿಮಳದುದಕವನೆರೆದವರಾರಯ್ಯ? ಇಂತೀ ಜಲವು ಒಂದೆ ನೆಲನು ಒಂದೆ ಆಕಾಶವು ಒಂದೆ ! ಜಲವು ಹಲವು ದ್ರವ್ಯಂಗಳ ಕೂಡಿ ತನ್ನ ಪರಿ ಬೇರಾಗಿಹ ಹಾಗೆ . ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನು ಹಲವು ಜಗಂಗಳ ಕೂಡಿಕೊಂಡಿರ್ದಡೇನ? ತನ್ನ ಪರಿ ಬೇರೆ !. ಚೆನ್ನಮಲ್ಲಿಕಾರ್ಜುನನಿಗಾಗಿ ಕಾತರಿಸಿ ಕಳವಳಪಟ್ಟ ಇವಳ ಅಂತರಂಗದ ವೇದನೆಯನ್ನು ಕೆಳಗಿನ ವಚನ ಚೆನ್ನಾಗಿ ಚಿತ್ರಿಸುತ್ತದೆ:

  ೨.ಎರೆಯಂತೆ ಕರಕರಗಿ ಮಳಲಂತೆ ಜರಿಜರಿದು,

ಕನಸಿನಲ್ಲಿ ಕಳವಳಿಸಿ ಆನು ಬೆರಗಾದೆ, ಆವಿಗೆಯ ಕಿಚ್ಚಿನಂತೆ ಸುಳಿಸುಳಿದು ಬೆಂದೆ, ಆಪತ್ತಿಗೆ ಸಖಿಯರನಾರನೂ ಕಾಣೆ, ಅರಸಿ ಕಾಣದ ತನುವ, ಬೆರಸಿ ಕೂಡದ ಸುಖವ, ಎನಗೆ ನೀ ಕರುಣಿಸಾ, ಚೆನ್ನಮಲ್ಲಿಕಾರ್ಜುನಾ!.

  ೩.ತೆರಣಿಯ ಹುಳು ತನ್ನ ಸ್ನೇಹಕ್ಕೆ ಮನೆಯ ಮಾಡಿ ತನ್ನ ನೂಲ ತಾನು ಸುತ್ತಿ ಸಾವ ತೆರನಂತೆ!  
  ೪.ಚಂದನವ ಕಡಿದು ಕೊರೆದು ತೇದೊಡೆ ನೊಂದೆನೆಂದು ಕಂಪಬಿಟ್ಟಿತ್ತೆ.! .                       
  ೫. ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಂಗಳಿಗಂಜಿದೊಡೆಂತಯ್ಯ, ಸಮುದ್ರದ ತಡಿಯಲೊಂದು ಮನೆಯ ಮಾಡಿ ನೊರೆತೆರೆಗಳಿಗಂಜಿದೊಡೆಂತಯ್ಯ!.       
  ೬.ಚಿಲಿಪಿಲಿ ಎಂದೋದುವ ಗಿಳಿಗಳಿರಾ ನೀವು ಕಾಣಿರೆ ನೀವು ಕಾಣಿರೆ!.                          
   -ಈ ಮುಂತಾದ ವಚನಗಳಲ್ಲಿ ಸಹಜ ಅನುಭವದ ತೀವ್ರತೆಯುಳ್ಳ ಭಾವಗೀತೆಯ ಲಕ್ಷಣಗಳನ್ನು ಕಾಣಬಹುದಾಗಿದೆ. ಸಾಹಿತ್ಯಗುಣ ಇಂಥ ಹಲವಾರು ವಚನಗಳಲ್ಲಿ ಘನೀಭೂತವಾಗಿದೆ. ಸಮಾಜ ವಿಮರ್ಶೆಯ, ಬೋಧನೆಯ ವಚನಗಳು ಅಕ್ಕನಲ್ಲಿ ಬಹಳ ಕಡಿಮೆ. ಈಕೆ ವಚನಗಳನ್ನಲ್ಲದೆ ಯೋಗಾಂಗ ತ್ರಿವಿದಿ ಎಂಬ 67 ತ್ರಿಪದಿಗಳನ್ನೊಳಗೊಂಡ ತಾತ್ತ್ವಿಕ ವಿಷಯನಿರೂಪಣೆಯುಳ್ಳ ಒಂದು ಗ್ರಂಥವನ್ನು ಬರೆದಿದ್ದಾಳೆ. ಇದರಲ್ಲಿ ತಾತ್ತ್ವಿಕ ವಿಷಯಗಳು ಕೆಲವು ಸಲ ಸರಳವಾಗಿಯೂ ಹಲವು ಸಲ ಬೆಡಗಿನ ವಚನಗಳ ಮಾದರಿಯಲ್ಲಿಯೂ ನಿರೂಪಿತವಾಗಿವೆ. ಈ ಕೃತಿ ಚಿಕ್ಕದಾದರೂ ಅಕ್ಕನ ಅನುಭಾವಸಂಪತ್ತಿಗೆ ಸಾಕ್ಷಿಯಾಗಿದೆ. ಇಡೀ ವಚನಸಾಹಿತ್ಯದಲ್ಲಿ ಗುಣದ ದೃಷ್ಟಿಯಿಂದ ನಾಲ್ಕಾರು ಕೃತಿಕಾರರ ಹೆಸರುಗಳನ್ನು ಹೇಳಬೇಕಾದಾಗ ಅದರಲ್ಲಿ ಅಕ್ಕಮಹಾದೇವಿಯ ಹೆಸರು ಖಂಡಿತ ಸೇರುತ್ತದೆ.