ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಗಸೆನಾರು

ವಿಕಿಸೋರ್ಸ್ದಿಂದ

ಅಗಸೆನಾರು[ಸಂಪಾದಿಸಿ]

ಲೈನೇಸೀ ಸಸ್ಯ ಕುಟುಂಬದ ಲೈನಮ್ ಯುಸಿಟಾಟಿಸಿಮಮ್ ಜಾತಿಗೆ ಸೇರಿದ ಸಸ್ಯ (ಲಿನ್ಸೀಡ್). ಸಾಮಾನ್ಯವಾಗಿ ಇದನ್ನು ಅಗಸೆನಾರು ಅಥವಾ ನಾರಗಸೆ (ಫ್ಲಾಕ್ಸ್) ಎಂದೂ ತೊಗಟೆಯ ನಾರನ್ನು ಬ್ಯಾಸ್್ಟ ನಾರೆಂದೂ ಕರೆಯುತ್ತಾರೆ.

ಅಗಸೆನಾರು ಒಂದು ವಾರ್ಷಿಕ ಬೆಳೆ. ಸಮಶೀತೋಷ್ಣ ವಾಯುಗುಣವಿದ್ದೆಡೆಯೆಲ್ಲ ಚೆನ್ನಾಗಿ ಬೆಳೆಯುತ್ತದೆ. ಇದನ್ನು ನಾರಿಗಾಗಿಯೂ ಬೀಜಕ್ಕಾಗಿಯೂ ಬೆಳೆಸುತ್ತಾರೆ. ಬೀಜದಿಂದ ಉತ್ತಮ ಎಣ್ಣೆ (ಲಿನ್ಸೀಡ್ ಆಯಿಲ್) ಮತ್ತು ಹಿಂಡಿ ಉತ್ಪನ್ನವಾಗುತ್ತವೆ.

ಗಿಡ್ಡನೆಯ ಸಸ್ಯಜಾತಿಗೆ ಸೇರಿದ ಈ ಗಿಡ 30-120ಸೆಂಮೀ ಎತ್ತರ ಬೆಳೆಯುತ್ತದೆ. ತಾಯಿ ಬೇರಿದ್ದರೂ ಇತರ ಬೇರುಗಳು ಗುಚ್ಛವಾಗಿ ಮೇಲ್ಪದರದಲ್ಲೇ ಹರಡಿರುತ್ತವೆ. ತೆಳ್ಳಗಿನ ನೀಳಕಾಂಡದಲ್ಲಿ ಅನೇಕ ಕೊಂಬೆಗಳಿರುತ್ತವೆ. ಬೀಜದಿಂದಲೇ ಬೆಳೆ. ಎಲೆಗಳು ಅತಿ ಕಿರಿದಾಗಿರುತ್ತವೆ. ಹೂಗಳು ಬಿಳುಪು ಅಥವಾ ನೀಲಿ ಬಣ್ಣವಿದ್ದು ಸುಮಮಿತಿಯುಳ್ಳ ಸ್ವಪರಾಗಸಂಪರ್ಕದವಾಗಿವೆ. ಹೂವಿನಲ್ಲಿ 5 ಪುಷ್ಪಪತ್ರಗಳೂ 5 ಪುಷ್ಪದಳಗಳೂ 10 ಕೇಸರಗಳೂ 10 ಬೀಜ ಉತ್ಪನ್ನಮಾಡುವ 5 ವಿಭಾಗದ ಅಂಡಕೋಶವೂ ಇರುತ್ತವೆ. ಬೀಜ ಹೊಳಪುಕಂದು ಅಥವಾ ಕಪ್ಪು ಬಣ್ಣದ್ದು.

ಈ ಜಾತಿಯ ಗಿಡಗಳಲ್ಲಿ ದೇಶದ ವಾಯುಗುಣ ಮತ್ತು ಭೂಗುಣಕ್ಕೆ ಹೊಂದಿಕೊಂಡಂಥ ಅನೇಕ ಪ್ರಭೇದಗಳಿವೆ. ನಾರಿನ ಜಾತಿಯನ್ನು ಒತ್ತಾಗಿ ಬಿತ್ತಬೇಕು. ಅದರ ಕಾಂಡ ನೇರ, ರೆಂಬೆಗಳು ಕಡಿಮೆ. ಕೇವಲ ನಾರಿಗಾಗಿ ಬೆಳೆಸುವ ಈ ಗಿಡದಲ್ಲಿ ಬೀಜದ ಉತ್ಪತ್ತಿ ಕಡಿಮೆ. ಬೀಜದ ಜಾತಿಯನ್ನು ಸ್ವಲ್ಪ ವಿರಳವಾಗಿ ಬಿತ್ತಬೇಕು; ಗಿಡ ಗಿಡ್ಡ; ರೆಂಬೆಗಳು ಹೆಚ್ಚು; ನಾರು ಒರಟು; ಬೀಜ ಹೆಚ್ಚು.

ಅಗಸೆ ಬಹುಶಃ ಭೂಮಧ್ಯಪ್ರದೇಶದ ಆಗ್ನೇಯ ರಾಷ್ಟ್ರಗಳಲ್ಲಿ ಮೊದಲು ಹುಟ್ಟಿ ಆ ಪ್ರದೇಶದಲ್ಲೆಲ್ಲ ಹರಡಿ ಅಲ್ಲಿಂದ ಕ್ರಮೇಣ ಯುರೋಪ್, ಅಮೆರಿಕ ಮತ್ತು ಆಸ್ಟ್ರೇಲಿಯಗಳಿಗೆ ಪ್ರಸರಿಸಿದೆ. ಅಲ್ಲದೆ ಏಷ್ಯ ಮತ್ತು ಆಫ್ರಿಕದಲ್ಲೂ ಈಗ ಹೆಚ್ಚಾಗಿ ಕಾಣಿಸಿಕೊಂಡಿದೆ.

ಈ ನಾರಿನ ಮಾದರಿಗಳು ಸ್ವಿóಟ್ಸರ್ಲೆಂಡ್ ದೇಶದ ಸರೋವರಗಳ ವಸಾಹತುಗಳಲ್ಲೂ ಈಜಿಪ್್ಟದೇಶದ ಪುರಾತನ ಸಮಾಧಿಗಳಲ್ಲೂ ಕಂಡುಬಂದಿದೆ. ಅಲ್ಲದೆ ಶಿಲಾಯುಗದಲ್ಲೂ ಇದರ ಬಳಕೆ ಹೆಚ್ಚಾಗಿತ್ತೆಂಬುದಕ್ಕೆ ಪುರಾವೆಗಳಿವೆ. ಇದರಿಂದ ಬಹುಶಃ ಯುರೋಪ್ ಪ್ರದೇಶದಲ್ಲಿ ಅಗಸೆನಾರೂ ಏಷ್ಯಖಂಡದಲ್ಲಿ ಸಣಬುನಾರೂ ಮಾನವೇತಿಹಾಸದ ಆದಿಯಿಂದಲೂ ಬಳಕೆಯಲ್ಲಿದ್ದಿರಬಹುದೆಂದು ಊಹಿಸಲಾಗಿದೆ. ಅರ್ಜೆಂಟೈನ ಮತ್ತು ಕ್ಯಾಲಿಫೋರ್ನಿಯಗಳಲ್ಲಿ ಅಗಸೆನಾರಿನ ಬೀಜವನ್ನು ಶರತ್ಕಾಲದಲ್ಲಿ ಬಿತ್ತುತ್ತಾರೆ. ಅದು ಐದು ತಿಂಗಳ ಕಾಲಾವಧಿಯಲ್ಲಿ ಮಾಗುತ್ತದೆ. ಉತ್ತರವಲಯದಲ್ಲಿ ವಸಂತಕಾಲದಲ್ಲಿ ಬಿತ್ತುತ್ತಾರೆ. 100-120 ದಿನಗಳಲ್ಲೇ ಅದು ಕೊಯಿಲಿಗೆ ಸಿದ್ಧವಾಗುತ್ತದೆ. ಅಲ್ಲಿ ಅವುಗಳ ಬೇಸಾಯ ಸಾಮಾನ್ಯವಾಗಿ ಗೋದಿ ಮತ್ತಿತರ ಸಣ್ಣಕಾಳುಗಳಂತೆಯೇ ಇದ್ದು, ಅವೆಲ್ಲಕ್ಕೂ ಒಂದೇ ರೀತಿಯ ಯಾಂತ್ರಿಕ ಉಪಕರಣಗಳು ಬಳಕೆಯಲ್ಲಿವೆ.

ಭಾರತದ ಅಗಸೆನಾರಿನ ಗಿಡ ಗಿಡ್ಡಜಾತಿಯದು. ಅಬಿಸೀನಿಯ ದೇಶದ್ದಕ್ಕೆ ದಪ್ಪಕಾಂಡವಿದ್ದು ಎಲೆಗಳು ದಟ್ಟವಾಗಿರುತ್ತವೆ. ಭೂಮಧ್ಯಪ್ರದೇಶದಲ್ಲಿ ಗಿಡದ ಬೀಜ ದಪ್ಪವಾಗಿದ್ದು ನಾರು ಹಳದಿ ಅಥವಾ ಬಂಗಾರದ ಬಣ್ಣದ್ದಾಗಿದ್ದು ನೀಳವಾಗಿರುತ್ತದೆ.

ಯುರೋಪ್ ಖಂಡದಲ್ಲಿ ಮಾತ್ರ ನಾರಿನ ಬೆಳೆಗೆ ಅತಿ ಹೆಚ್ಚಿನ ಪ್ರಾಶಸ್ತ್ಯವಿದೆ. ರಷ್ಯವೊಂದರಲ್ಲೇ ಪ್ರಪಂಚದಲ್ಲಿನ ಉತ್ಪನ್ನದ ಅಧಿಕಭಾಗ ಬೆಳೆಯುವುದು. ಆದರೆ ಅದು ಉತ್ತಮ ದರ್ಜೆಯದಲ್ಲ. ಎಕರೆಯೊಂದಕ್ಕೆ ಬರುವ ಉತ್ಪನ್ನವೂ ಕಡಿಮೆ. ಉತ್ತಮದರ್ಜೆಯ ನಾರು ಫ್ರಾನ್್ಸ, ಬೆಲ್ಜಿಯಂ ಮತ್ತು ಹಾಲೆಂಡ್ ದೇಶಗಳಲ್ಲಿ ಉತ್ಪಾದನೆಯಾಗುತ್ತದೆ. ಐರ್ಲೆಂಡ್ ಮತ್ತು ಕೆನಡಗಳಲ್ಲೂ ಸ್ವಲ್ಪಮಟ್ಟಿಗೆ ಈಗ ಇದನ್ನು ಬೆಳೆಸಲಾಗುತ್ತಿದೆ. ಅಮೆರಿಕ ಸಂಯುಕ್ತ ಸಂಸ್ಥಾನಗಳು, ಕೆನಡ ಮತ್ತು ಅರ್ಜೆಂಟೈನ ದೇಶಗಳಲ್ಲಿ ಅದು ಈಚೆಗೆ ಹೆಚ್ಚು ಪ್ರಮುಖವಾಗುತ್ತಿದೆ.

ಮುಖ್ಯವಾಗಿ ಸಮಶೀತೋಷ್ಣವಲಯದ ಬೆಳೆಯಾಗಿದ್ದರೂ ಅಗಸೆ ಬೇರೆ ಯಾವ ಪ್ರದೇಶದಲ್ಲಾದರೂ ಅನುಕೂಲವೇರ್ಪಡಿಸಿದಲ್ಲಿ ಹೊಂದಿಕೊಂಡು ಬೆಳೆಯಬಲ್ಲುದು. ಅದನ್ನು ಭಿನ್ನ ಭಿನ್ನ ವಾಯುಗುಣ, ಭೂಗುಣಗಳ ಪ್ರದೇಶಗಳಲ್ಲಿ ಬೆಳೆಸಲಾಗುತ್ತಿದೆ. ಹೆಚ್ಚಿನ ಉಷ್ಣಾಂಶ ಮತ್ತು ಅತಿ ಹೆಚ್ಚಿನ ಮಳೆ ಇದಕ್ಕೆ ಅನುಕೂಲವಲ್ಲ.

ನಾರಿನ ವ್ಯವಸಾಯ ದೇಶಕ್ಕನುಗುಣವಾಗಿ ಮಾರ್ಪಾಟು ಹೊಂದುತ್ತದೆ. ಜೇಡಿಮಣ್ಣು ಮತ್ತು ಹೆಚ್ಚಿನ ಸಾವಂiÀÄವವಸ್ತುಗಳಿದ್ದಲ್ಲಿ ಬೆಳೆ ಚೆನ್ನಾಗಿ ಬಾರದು. ಹಾಗೂ ಕರಲು ಅಥವಾ ಕಲ್ಲು ಭೂಮಿಗಳೂ ಅದರ ಬೆಳಸಿಗೆ ಯೋಗ್ಯವಲ್ಲ. ಭೂಮಿ ಸ್ವಲ್ಪ ಫಲವತ್ತಾಗಿದ್ದರೂ ಮರಳುಮಿಶ್ರಿತ ಲಘು ಜೇಡಿಮಣ್ಣಿದ್ದರೂ ಗಿಡ ಹಸನಾಗಿ ಬೆಳೆಯುತ್ತದೆ. ಬಿತ್ತನೆಗೆ ಮೊದಲು ಭೂಮಿಯನ್ನು ಅನೇಕ ಸಲ ಉತ್ತು ಹದಗೊಳಿಸಬೇಕು. ರಾಸಾಯನಿಕ ಗೊಬ್ಬರ ಕೊಟ್ಟಲ್ಲಿ ಒಂದೇ ಎತ್ತರಕ್ಕೆ ಗಿಡ ಬೆಳೆಯುವುದಿಲ್ಲವಾದ್ದರಿಂದ ಅದನ್ನು ಬಳಸುವುದಿಲ್ಲ. ಆದರೆ ಅದರ ಹಿಂದಿನ ಬೆಳೆಗೆ ಹೆಚ್ಚು ಗೊಬ್ಬರ ಒದಗಿಸಿದ್ದಲ್ಲಿ. ಉಳಿದ ಗೊಬ್ಬರ ಭೂಮಿಯಲ್ಲಿ ಹರಡಿಕೊಂಡು ಸಹಾಯಕವಾಗುತ್ತದೆ. ಬೀಜವನ್ನು ಎರಚಬಹುದು, ಸಾಲಾಗಿ ಬಿತ್ತಬಹುದು, ಕೂರಿಗೆ ಹೊಡೆಯಬಹುದು. ಭೂಮಿಯನ್ನು ಸಣ್ಣ ಪಾತಿಗಳನ್ನಾಗಿಸಿ, ಬಿತ್ತಿ, ಮೇಲೆ ಭಾರವಾದ ಕಲ್ಲು ಮುಂತಾದುವನ್ನು ಆಡಿಸಿ ಗಟ್ಟಿಗೊಳಿಸುವುದರಿಂದ ಉತ್ತಮ ಮೊಳಕೆ ಉತ್ಪನ್ನವಾಗುತ್ತದೆ. ಬಿತ್ತನೆ ಪ್ರಮಾಣ ಸು. 40-65 ಕಿಗ್ರಾಂ. ಬೆಳೆಯ ಅವಧಿಯಲ್ಲಿ ಕಳೆತೆಗೆದು ಉಪಬೇಸಾಯ ಕೈಗೊಳ್ಳುತ್ತಾರೆ. ಬೀಜ ಅರ್ಧ ಬಲಿತಿರುವಾಗ ಅದು ಕೊಯಿಲಿಗೆ ಸಿದ್ಧ. ಗಿಡವನ್ನು ಭೂಮಟ್ಟಕ್ಕೆ ಕತ್ತರಿಸಬಹುದು ಅಥವಾ ಬೇರುಸಮೇತ ಕೀಳಲೂಬಹುದು. ಈಗ ಯಂತ್ರಗಳಿಂದ ಕೊಯಿಲುಮಾಡುವುದು ಅಮೆರಿಕ ಸಂಯುಕ್ತಸಂಸ್ಥಾನ ಮುಂತಾದ ರಾಷ್ಟ್ರಗಳಲ್ಲಿ ಸಾಮಾನ್ಯ. ಕೊಯಿಲು ಆದೊಡನೆ ಗಿಡಗಳನ್ನು ಅದೇ ಹೊಲದಲ್ಲಿ ಗುಂಪು ಗುಂಪಾಗಿ ಶೇಖರಿಸಿ ನಿಲ್ಲೊಟ್ಟಲು ಹಾಕಿ ಒಣಗಿಸುತ್ತಾರೆ. ಬೀಜವನ್ನು ಒಣಗಿಸಿ ಅನಂತರ ಶೇಖರಿಸುತ್ತಾರೆ. ಅದರ ಶೇಖರಣೆಯಲ್ಲೂ ವೈವಿಧ್ಯವಿದೆ. ಬಿತ್ತನೆಗೂ ದನದ ಮೇವಿಗೂ ಎಣ್ಣೆಗೂ ಅದನ್ನು ಬಳಸಲಾಗುತ್ತದೆ.

ವಿವಿಧ ದೇಶಗಳಲ್ಲಿ ಅಲ್ಲಿನ ಅನುಕೂಲಕ್ಕೆ ತಕ್ಕಂತೆ ನಾರನ್ನು ಕಾಂಡದಿಂದ ಬೇರ್ಪಡಿಸುತ್ತಾರೆ. ಇದರಲ್ಲಿ ಎರಡು ಮುಖ್ಯ ವಿಧಾನಗಳಿವೆ. ಮೊದಲನೆಯದರಲ್ಲಿ, ಕಾಂಡವನ್ನು ಇಬ್ಬನಿಯಲ್ಲಿ ದೀರ್ಘಕಾಲ ನೆನೆಸುತ್ತಾರೆ. ಎರಡನೆಯದರಲ್ಲಿ, ಬೇಗ ನೆನೆಯುವಂತೆ ನೀರಿನಲ್ಲಿ ಕೊಳೆಹಾಕುತ್ತಾರೆ. ಮೊದಲನೆಯ ವಿಧಾನ ರಷ್ಯದಲ್ಲಿ ಹೆಚ್ಚು.. ಇಬ್ಬನಿ ಮಳೆ ಮತ್ತು ಹಿಮದ ನೀರು, ಸೂಕ್ಷ್ಮಾಣುಗಳು ಮತ್ತು ಬೂಷ್ಟುಗಳ ಕಾರ್ಯಾಚರಣೆ ಗಳನ್ನವಲಂಬಿಸಿ ಅವು ಎಷ್ಟು ಚೆನ್ನಾಗಿದ್ದರೆ ಅಷ್ಟು ಬೇಗನೆ ಗಿಡ ನೆನೆದು ಹದವಾಗುತ್ತದೆ. ನೀರಿನಲ್ಲೇ ಆದರೆ ಗಿಡ ಬಹು ಬೇಗ ಹದವಾಗುತ್ತದೆ. ಕಾಂಡದ ಮಧ್ಯಭಾಗ ಮೃದುವಾಗಿ, ಸುಲಭವಾಗಿ ಸೀಳಬಹುದಾದಾಗ ನಾರು ತೆಗೆಯಲು ಬರುತ್ತದೆ. ನೀರಿನಲ್ಲಿ ಕೊಳೆಹಾಕುವ ಮಾರ್ಗವನ್ನೇ ಅನೇಕ ಮುಖ್ಯ ರಾಷ್ಟ್ರಗಳು ಅನುಸರಿಸುತ್ತಿವೆ. ನೀರಿನಲ್ಲಿ ನಾರಿನ ಮಧ್ಯೆ ಹಾಗೂ ಮೇಲ್ಭಾಗದ ಅಂಗಾಂಶಗಳು ಪುರ್ಣ ಕೊಳೆಯುತ್ತವೆ. ಹೊಂಡ, ಕೆರೆ, ತೆಳ್ಳಗೆ ಹರಿಯುವ ಝರಿ, ಸರೋವರ ಮತ್ತು ಸಾಧ್ಯವಾದೆಡೆ ದೊಡ್ಡ ದೊಡ್ಡ ಕೊಪ್ಪರಿಗೆಗಳಲ್ಲೂ ಅದನ್ನು ನೆನೆಹಾಕಬಹುದು. ಈ ಕೊನೆಯವಿಧಾನದಲ್ಲಿ ಉಷ್ಣತೆಯನ್ನು ನಿಯಂತ್ರಣಗೊಳಿಸಿಡಲು ಸಾಧ್ಯವಾದ ಪಶ್ಚಿಮ ಮತ್ತು ಮಧ್ಯ ಯುರೋಪ್ ಹಾಗೂ ಸಂಯುಕ್ತಸಂಸ್ಥಾನಗಳಲ್ಲಿ ಬಳಕೆಯಲ್ಲಿದೆ. ಅದಕ್ಕೆ ಬೇಕಾದ ನಿರ್ದಿಷ್ಟ ಸೂಕ್ಷ್ಮಾಣುಗಳನ್ನು ಹೆಚ್ಚಾಗಿ ಬೆಳೆಸಿ ರಾಸಾಯನಿಕ ಪ್ರಯೋಗದ ಸಹಾಯದಿಂದ ನಾರು ಬಿಡಿಸುವ ಮಾರ್ಗ ಸಂಶೋಧನೆಗಳಿಂದ ಸಿದ್ಧಿಸಿದ್ದರೂ ಸಾಮಾನ್ಯವಾಗಿ ಬಳಕೆಯಲ್ಲಿಲ್ಲ.

ಹೀಗೆ ಕೊಳೆಸಿ ಒಣಗಿಸಿದ ಹುಲ್ಲನ್ನು ಚೆನ್ನಾಗಿ ಜಜ್ಜಬೇಕು. ನಾರು ತುಂಡಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ. ವಿವಿಧ ಯಾಂತ್ರಿಕ ಸಲಕರಣೆಗಳ ಸಹಾಯದಿಂದ ಅದನ್ನು ನಿರ್ವಹಿಸಲಾಗುತ್ತದೆ. ಜಜ್ಜಿದ ಹುಲ್ಲಿನಲ್ಲಿನ ಬೆಂಡು ಮತ್ತು ಸ್ವಚ್ಛನಾರುಗಳನ್ನು ಬೇರ್ಪಡಿಸಿ ಎಳೆಗಳು ಮುದ್ದೆಯಾಗದೆ ಸರಳವಾಗಿರುವಂತೆ ಹಣಿಗೆಯ ಸಹಾಯದಿಂದ ಹೆಕ್ಕಿಯೋ ವಿವಿಧ ನಾರುಬಿಡಿಸುವ ಯಂತ್ರಗಳನ್ನು ಬಳಸಿಯೋ ನಾರಿನ ಸಿಕ್ಕನ್ನು ಬಿಡಿಸುತ್ತಾರೆ. ನೀಳವಾಗಿ ನವುರಾಗಿರುವ ಎಲೆಗಳನ್ನು ಗಂಟುಬಿದ್ದು ತುಂಡಾಗಿರುವ ಎಲೆಗಳಿಂದ ಬೇರ್ಪಡಿಸಿ ಅವೆಲ್ಲವನ್ನೂ ಪ್ರತ್ಯೇಕ ಪ್ರತ್ಯೇಕ ಗಂಟುಗಳಾಗಿ ಕಟ್ಟಿ ನೂಲುವ ಕಾರ್ಖಾನೆಗಳಿಗೆ ಒದಗಿಸಲಾಗುತ್ತದೆ.

ನಾರಿನ ಉತ್ಪತ್ತಿ ಫ್ರಾನ್್ಸನಲ್ಲೇ ಹೆಚ್ಚು. ಆಸ್ಟ್ರೇಲಿಯ ಮತ್ತು ಹಾಲೆಂಡ್ಗಳು ದ್ವಿತೀಯ ಸ್ಥಾನ ಪಡೆಯುತ್ತವೆ. ಪಶ್ಚಿಮ ಯುರೋಪಿನಲ್ಲಿ ಎಕರೆಗೆ ಸು. 175 ಕಿ.ಗ್ರಾಂ; ರಷ್ಯದಲ್ಲಿ ಸು. 140 ಕಿ.ಗ್ರಾಂ.; ಸಂಯುಕ್ತ ಸಂಸ್ಥಾನದಲ್ಲಿ, ಸು. 185 ಕಿ.ಗ್ರಾಂ.

ಯುರೋಪ್ನಲ್ಲಿ ನಾರಿನಿಂದ ವಿವಿಧ ಬಗೆಯ ದಾರಗಳನ್ನೂ ಗಟ್ಟಿ ಹುರಿಗಳನ್ನೂ ಹಗ್ಗಗಳನ್ನೂ ತಯಾರಿಸುವರು. ಉತ್ತಮದರ್ಜೆಯ ಬಟ್ಟೆಗಳು, ಅಲಂಕಾರದ ಪಟ್ಟೆಗಳು ಇದರಿಂದ ಉತ್ಪನ್ನವಾಗುತ್ತದೆ. ಅಮೆರಿಕದಲ್ಲಿ ಜಮಖಾನೆಗಳಿಗಾಗಿ ಬೇಕಾದ ನೂಲು, ದಾರಕ್ಕೂ ಹೆಂಗಸರ ಕಾಲುಚೀಲಗಳ ತಯಾರಿಕೆಯಲ್ಲೂ ಉಪಯೋಗಿಸುತ್ತಾರೆ.

ಅರ್ಜೆಂಟೈನ, ಭಾರತ, ಸಂಯುಕ್ತಸಂಸ್ಥಾನ ಮತ್ತು ಕೆನಡ ದೇಶಗಳು ಬೀಜಕ್ಕಾಗಿ ಈ ಗಿಡವನ್ನು ಬೆಳೆಸುತ್ತವೆ. ಅರ್ಜೆಂಟೈನ ದೇಶವೊಂದರಿಂದಲೇ ಪ್ರಪಂಚದ ಒಟ್ಟು ಉತ್ಪತ್ತಿಯ ಅರ್ಧಭಾಗ ರಫ್ತಾಗುತ್ತದೆ. ಬೀಜದಿಂದ ಶೇ.30-ಶೇ.40 ಭಾಗ ಎಣ್ಣೆ ಉತ್ಪನ್ನವಾಗುತ್ತದೆ. ಎಣ್ಣೆಯಿಂದ ಬಣ್ಣ, ವಾರ್ನಿಷ್ (ಮೆರುಗೆಣ್ಣೆ) ಅಲ್ಲದೆ ಕಪ್ಪು ಮೆರುಗಿನ ಬಟ್ಟೆ ತಯಾರಿಕೆಗಾಗಿಯೂ ತೊಗಲಿನ ಮೇಲಿನ ಕಪ್ಪು ಬಣ್ಣಕ್ಕಾಗಿಯೂ ಉಪಯೋಗ ವಾಗುವ ಮಸಿ-ಹೀಗೆ ಅನೇಕ ವಸ್ತುಗಳು ತಯಾರಾಗುತ್ತವೆ. ಎಣ್ಣೆಯನ್ನು ಹಾಗೆಯೇ ಅನೇಕ ಕೆಲಸಗಳಿಗೆ ಬಳಸುತ್ತಾರೆ. ಹಿಂಡಿಯಲ್ಲಿ 30-40 ಭಾಗ ನೈಟ್ರೋಜನ್ ಇರುವುದರಿಂದ ಕರಾವುಹಸುಗಳ ಮೇವಿಗೆ ಅದು ಅತಿ ಮುಖ್ಯ ವಸ್ತುವಾಗಿದೆ.