ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಗ್ನಿವಿಮೆ
ಅಗ್ನಿವಿಮೆ
ಪ್ರಪಂಚದಾದ್ಯಂತ ಚಾಲ್ತಿಯಲ್ಲಿರುವ ಈ ವಿಮೆ 17ನೆಯ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ಆರಂಭವಾಯಿತು. ಜೀವವಿಮೆ, ಕಳ್ಳತನದ ವಿರುದ್ಧ ಮಾಡುವ ವಿಮೆ ಮುಂತಾದ ವಿಮೆಗಳಂತೆಯೇ ಅಕಸ್ಮಾತ್ತಾಗಿ ಒದಗುವ ಬೆಂಕಿಯ ಅನಾಹುತದಿಂದೊದಗಬಹುದಾದ ಚರ ಹಾಗೂ ಸ್ಥಿರಸ್ವತ್ತುಗಳ ನಷ್ಟವನ್ನು ತುಂಬಲು ಮಾಡಿಕೊಳ್ಳುವ ವಿಮೆಯ ಬಗೆಯಿದು.
ಈ ಪಾಲಿಸಿಯಲ್ಲಿ ಅದರ ವ್ಯಾಪ್ತಿಗೆ ಬರುವ ಸ್ವತ್ತಿನ ಬೆಲೆ ನಮೂದನೆಯಾಗದಿರಬಹುದು. ಇದಕ್ಕೆ ಬದಲಾಗಿ ಸ್ವತ್ತು ಬೆಂಕಿಯ ಅನಾಹುತಕ್ಕೊಳಗಾದಾಗ ಇಂತಿಷ್ಟೆ ಪರಿಹಾರಧನವನ್ನು ಕೊಡಬೇಕೆಂಬುದರ ಬಗ್ಗೆ ಮೊದಲೇ ಅದರಲ್ಲಿ ನಮೂದಿಸಿರಲೂಬಹುದು. ಕೆಲವು ಸಂದರ್ಭಗಳಲ್ಲಿ ಸ್ವತ್ತಿನ ಪರಿಮಾಣ, ಜಾಗ ಹಾಗೂ ಮೌಲ್ಯ ವ್ಯತ್ಯಾಸ ಹೊಂದುವುದಾಗಿದ್ದು, ಅಂಥ ಸ್ವತ್ತುಗಳ ಮೇಲಿನ ಅಗ್ನಿ ವಿಮಾಪಾಲಿಸಿ ಅನಿಶ್ಚಿತ ಅನಿರ್ದಿಷ್ಟ (ಫ್ಲೋಟಿಂಗ್) ವರ್ಗಕ್ಕೆ ಸೇರುತ್ತದೆ.
ಅಗ್ನಿವಿಮೆ ಮಾಡಿದ ಸ್ವತ್ತಿನ ಪರಿಪೂರ್ಣ ವರ್ಣನೆಯನ್ನು ಕರಾರಿನಲ್ಲಿ ಬರೆಯಬೇಕಲ್ಲದೆ ಅದರ ಒಡೆತನದ ಬಗ್ಗೆ ವಿಮೆ ಮಾಡಿಸುವವನು ಬರೆವಣಿಗೆಯಲ್ಲಿ ಹೇಳಿಕೆಯನ್ನು ಕೊಡಬೇಕು.
ಅಗ್ನಿವಿಮೆ ಕರಾರಿನಲ್ಲಿ ಅಡಕವಾಗಿರುವ ಕರಾರುಗಳನ್ನೆಲ್ಲ ವಿಮೆ ಮಾಡಿಸುವವರು, ವಿಮೆ ಮಾಡುವವರು ನಿಷ್ಠೆಯಿಂದ ಪಾಲಿಸಬೇಕು. ವಿಮಾಸಂಸ್ಥೆ ಒಪ್ಪಿಗೆಯ ಪತ್ರವನ್ನು (ರಿಸ್ಕ್ ನೋಟ್) ವಿಮೆ ಮಾಡಿಸಿದವನಿಗೆ ತಲುಪಿಸಿದ ಕ್ಷಣದಿಂದ ವಿಮಾ ಸಂಸ್ಥೆಯ ಹೊಣೆ (ರಿಸ್ಕ್) ಆರಂಭವಾಗುವುದಾದರೂ ಸಾಮಾನ್ಯವಾಗಿ ವಿಮೆಯ ಕಂತಿನ (ಪ್ರೀಮಿಯಂ) ಹಣ ಕೊಟ್ಟ ಬಳಿಕವೇ ಅದು ಜಾರಿಗೆ ಬರುತ್ತದೆ. ಸಾಮಾನ್ಯವಾಗಿ ಅಗ್ನಿವಿಮೆಯ ಅಪಾಯ ಹೊಣೆಯ ಅವಧಿ ಒಂದು ವರ್ಷ. ಈ ಅವಧಿಯನ್ನು ಮತ್ತೆ ಊರ್ಜಿತಪಡಿಸಬಹುದು.
ಅಗ್ನಿವಿಮೆ ಮಾಡಿದ ಸ್ವತ್ತು ಕಳವು ಮುಂತಾದ ಇತರ ರೀತಿಯಲ್ಲಿ ಕಳೆದು ಹೋದರೆ ವಿಮಾಸಂಸ್ಥೆಗೆ ಪರಿಹಾರ ಧನವನ್ನು ಕೊಡುವ ಹೊಣೆ ಇಲ್ಲ. ಅಂಥ ಸ್ವತ್ತು ಬೆಂಕಿಯಿಂದಾಗಲಿ ಬೆಂಕಿ ಹೊತ್ತಿದಾಗ ಅದನ್ನು ಆರಿಸುವಾಗಾಗಲಿ ಸುಡುವ ಸ್ಥಳದಿಂದ ಬೇರೆಡೆಗೆ ಸಾಗಿಸುವಾಗಾಗಲಿ ನಾಶವಾದಾಗ ಮಾತ್ರ ಹಾಗೂ ಅದನ್ನು ವಿಮಾದಾರನು ಸಿದ್ಧಪಡಿಸಿದ ಮೇಲೆ ಪರಿಹಾರಧನವನ್ನು ಕೊಡಲಾಗುವುದು. ವಿಪರೀತ ಬಿಸಿಲು, ಯುದ್ಧ, ನಾಗರಿಕ ಆಂದೋಲನಗಳಿಂದ ವಿಮೆ ಮಾಡಿದ ಸ್ವತ್ತಿಗೆ ಉಂಟಾಗುವ ನಷ್ಟಕ್ಕೆ ಪರಿಹಾರ ತೆರಲು ವಿಮಾ ಸಂಸ್ಥೆ ಬದ್ಧವಿಲ್ಲ ಎಂಬ ಶರತ್ತು ಅಗ್ನಿವಿಮೆ ಪಾಲಿಸಿಯಲ್ಲಿ ಇರುತ್ತದೆ. ಪಾಲಿಸಿಯನ್ನು ಅವಧಿ ಮುಗಿಯುವ ಮೊದಲೇ ರದ್ದುಪಡಿಸುವ ಷರತ್ತನ್ನು ಅದರಲ್ಲಿ ಸೇರಿಸಬಹುದು. ವಿಮೆ ಮಾಡಿಸುವವನು ಅಪ್ರಾಮಾಣಿಕ ಮಾಹಿತಿ ಕೊಟ್ಟಿದ್ದರೆ ಅಥವಾ ಪಾಲಿಸಿಯ ವಿಶೇಷ ಜವಾಬ್ದಾರಿಯನ್ನು (ವಾರಂಟಿ) ಪಾಲಿಸದಿದ್ದರೆ ಪಾಲಿಸಿ ರದ್ದಾಗಬಹುದಲ್ಲದೆ, ವಿಮಾಸಂಸ್ಥೆಯ ಹೊಣೆ ತಪ್ಪಬಹುದು. ಅಗ್ನಿವಿಮೆಯ ಒಪ್ಪಂದ ಇತರ ಒಪ್ಪಂದಗಳಂತೆ ಉಭಯ ಪಕ್ಷದವರಿಗೂ ಅನ್ವಯಿಸುತ್ತದೆ.
ವಿಮಾಸಂಸ್ಥೆ ಅಗ್ನಿಯಿಂದ ಉಂಟಾದಷ್ಟು, ಸಂಭವಿಸಿದಷ್ಟು ಮಾತ್ರ ಪರಿಹಾರ ಧನವನ್ನು ತೆರಲು ಬದ್ಧವಾಗಿದೆ. ಹಣ ಕೊಡುವ ಬದಲು ಧಕ್ಕೆ ಹೊಂದಿದ ಸ್ವತ್ತನ್ನು ಅದು ಮೊದಲಿದ್ದಂತೆಯೇ ಸರಿಪಡಿಸಿಕೊಡಬಹುದು. ಏನೇ ಆಗಲಿ ಪಾಲಿಸಿದಾರನು ಬೆಂಕಿ ಅನಾಹುತದಿಂದ ಹೆಚ್ಚು ನಷ್ಟ ಉಂಟಾಗದಂತೆ ನೋಡಿಕೊಳ್ಳಬೇಕು.
ಭಾರತದಲ್ಲಿ ವಿಮೆಯ ವ್ಯವಹಾರ 1950ರವರೆಗೂ ಖಾಸಗಿಯಾಗಿಯೇ ನಡೆಯುತ್ತಿದ್ದು ಅನಂತರ ಸರ್ಕಾರದ ವಶಕ್ಕೆ ಬಂದಮೇಲೆ ಭಾರತದ ಲೈಫ್ ಇನ್ಷೂರೆನ್ಸ್ ಕಾರ್ಪೋರೇಷನ್ ಎಂಬ ಸಂಸ್ಥೆ ಅಸ್ತಿತ್ವಕ್ಕೆ ಬಂತು. ತನ್ನ ಇತರ ವಿಮೆಗಳ ಜೊತೆಗೆ ಈ ಸಂಸ್ಥೆ ಈಗ ಅಗ್ನಿವಿಮೆಯ ಹೊಣೆಯನ್ನೂ ಹೊತ್ತಿದೆ. ಅಗ್ನಿವಿಮೆಯ ಸೌಲಭ್ಯವನ್ನು ಅನೇಕ ಇತರ ಖಾಸಗೀ ವಿಮಾಸಂಸ್ಥೆಗಳೂ ನಡೆಸುತ್ತಿವೆ.
(ಎನ್.ಎಸ್.ಎಂ.)