ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅನೇಕಾಂತವಾದ

ವಿಕಿಸೋರ್ಸ್ದಿಂದ
Jump to navigation Jump to search

ಅನೇಕಾಂತವಾದ

ಜ್ಞೇಯವಸ್ತು ಅನೇಕಾಂತಸ್ವರೂಪಿಯಾಗಿದೆ. ಅಂದರೆ ಅದರ ಧರ್ಮಗಳು, ಗುಣಗಳು ಅನೇಕವಾಗಿವೆ. ಆ ಅನೇಕ ಧರ್ಮಗಳು ಒಂದೊಂದು ಸ್ವರೂಪದಲ್ಲಿ ಆ ವಸ್ತುವಿನಲ್ಲಿ ಇದ್ದೂ ಪರಸ್ಪರ ಒಂದರಿಂದ ಇನ್ನೊಂದು ಭಿನ್ನವಾಗಿವೆ. ವಸ್ತುವಿನ ಅನ್ಯಧರ್ಮಗಳ ಅಪೇಕ್ಷೆಯನ್ನು ಗಮನಿಸದೆ ಒಂದೇ ಧರ್ಮವನ್ನು ಗ್ರಹಣ ಮಾಡುವುದು ಏಕಾಂತ. ಅವುಗಳನ್ನು ಗೌಣ ಮತ್ತು ಮುಖ್ಯ ಭಾವಗಳಿಂದ ಪರಸ್ಪರ ಸಾಪೇಕ್ಷತೆಯಿಂದ ತಿಳಿಯುವುದೇ ಅನೇಕಾಂತ. ವಸ್ತುವಿನ ಯಥಾರ್ಥಜ್ಞಾನ ಅನೇಕಾಂತದಿಂದಲೇ ಆಗುತ್ತದೆ. ಅದೇ ಪ್ರಮಾಣ. ಅನೇಕಾಂತವಾದಕ್ಕೆ ಅಪೇಕ್ಷಾವಾದ. ವಿಭಜ್ಯವಾದ ಅಥವಾ ಪೃಥಕ್ಕರಣಮಾಡಿ ವಿಭಜನೆಮಾಡಿ, ಯಾವುದಾದರೊಂದು ತತ್ತ್ವವನ್ನು ವಿವೇಚಿಸುವ ವಾದ ಎಂದು ವಿವರಿಸುವುದು ಸಮರ್ಪಕವಾಗುವುದು. ಅಪೇಕ್ಷಾಭೇದದಿಂದ ವಸ್ತುಸ್ವರೂಪವನ್ನು ವಿವೇಚಿಸುವಾಗ ಸ್ಯಾತ್ ಶಬ್ದಾಂಕಿತ ಪ್ರಯೋಗ ಆಗಮಗಳಲ್ಲಿ ದೊರೆಯುತ್ತದೆ. ಸ್ಯಾತ್ ಶಬ್ದಕ್ಕೆ ಕಥಂಚಿತ್ ಕೆಲವು ದೃಷ್ಟಿಯಿಂದ ಎಂದು ಅರ್ಥವಾಗುವುದು. ವಾದಶಬ್ದ ಕಥನವೆಂಬರ್ಥದಲ್ಲಿದೆ. ಇದರ ಭಾವವಿಷ್ಟೆ. ಪದಾರ್ಥ ಕೆಲವು ದೃಷ್ಟಿಯಿಂದ ಹೀಗಿದೆ; ಹಲವು ದೃಷ್ಟಿಯಿಂದ ಹಾಗಿದೆ. ಈ ರೀತಿ ವಸ್ತುವಿನ ಅನೇಕ ಧರ್ಮ, ಗುಣಗಳ ದೃಷ್ಟಿಯಲ್ಲಿ ಗೌಣವಾಗಿಟ್ಟು ಕೆಲವೊಂದು ವಿಶೇಷಗುಣಕ್ಕೆ ಪ್ರಾಮುಖ್ಯಕೊಟ್ಟು ಪ್ರತಿಪಾದನ ಮಾಡುವ ಅನೇಕಾಂತವೇ ಸ್ಯಾದ್ವಾದವೆನಿಸುತ್ತದೆ. ನಿತ್ಯಾನಿತ್ಯತ್ವ, ಸಾಮಾನ್ಯವಿಶೇಷತ್ವ, ವಾಚ್ಯಾವಾಚ್ಯತ್ವ, ಸತ್ ಅಸತ್ ಇತ್ಯಾದಿ ವಸ್ತುವಿನ ಗುಣಗಳು ಈ ಪದ್ಧತಿಯಲ್ಲಿ ಸ್ಪಷ್ಟವಾಗಿ ದೃಗ್ಗೋಚರವಾಗುತ್ತವೆ. ಇದೇ ಅನೇಕಾಂತ ದೃಷ್ಟಿ. ಇದರಲ್ಲಿ ಏಕಾಂತಕ್ಕೆ, ದುರಾಗ್ರಹಕ್ಕೆ ಆಸ್ಪದವಿಲ್ಲ.

(ಎನ್.ಎನ್.ಯು.)