ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಬ್ದುಲ್ ಕಲಾಂ, ಎ ಪಿ ಜೆ

ವಿಕಿಸೋರ್ಸ್ದಿಂದ

ಅಬ್ದುಲ್ ಕಲಾಂ, ಎ ಪಿ ಜೆ ( 1931 - ) ಭಾರತ ಗಣರಾಜ್ಯದ ಹನ್ನೊಂದನೆಯ ರಾಷ್ಟ್ರಪತಿ. ಪೂರ್ಣ ಹೆಸರು ಅವುಲ್ ಪಕೀರ್ ಜೈನುಲಾಬ್ದೀನ್ ಅಬ್ದುಲ್ ಕಲಾಂ. ಶ್ರೇಷ್ಠ ವಾಯುಯಾನ ಎಂಜಿನಿಯರ್. ಜನನ ತಮಿಳುನಾಡಿನ ರಾಮೇಶ್ವರದಲ್ಲಿ (15 ಅಕ್ಟೋಬರ್, 1931). ತಂದೆ ಜೈನುಲಾಬ್ದೀನ್ ಮರಕಯಾರ್, ತಾಯಿ ಆಶಿಯಮ್ಮ - ಸಂಪ್ರದಾಯಸ್ಥ ಮುಸ್ಲಿಂ ಕುಟುಂಬ. ತಂದೆ ರಾಮೇಶ್ವರದ ಯಾತ್ರಿಗಳನ್ನು ದೋಣಿಯಲ್ಲಿ ಕೊಂಡೊಯ್ಯುವ ಕೆಲಸದಿಂದ ಜೀವನ ನಿರ್ವಹಿಸುತ್ತಿದ್ದರು. ಅಲ್ಲಿನ ದೇವಾಲಯದ ಪ್ರಧಾನ ಅರ್ಚಕರೊಂದಿಗೆ ಗೆಳೆತನ ಹೊಂದಿದ್ದರು. ಏಳು ಮಕ್ಕಳಲ್ಲಿ ಕಲಾಂ ಕೊನೆಯ ಮಗ. ರಾಮನಾಥಪುರಂನ ಶ್ವಾರ್ಸ್ ಶಾಲೆಯಲ್ಲಿ ಕಲಾಂ ಅವರ ಪ್ರಾರಂಭಿಕ ಅಧ್ಯಯನ. ಮುಂದೆ ತಿರುಚಿಯ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಬಿ.ಎಸ್ಸಿ. ಪದವಿ (1950). ಭೌತವಿಜ್ಞಾನ ಅವರ ಅಧ್ಯಯನದ ಪ್ರಧಾನ ವಿಷಯ. ಆದರೆ ಅವರು ತಂತ್ರಜ್ಞಾನದತ್ತ ಆಕರ್ಷಿತರಾದರು. ಮದ್ರಾಸ್ ತಾಂತ್ರಿಕ ಸಂಸ್ಥೆ (ಎಂ.ಐ.ಟಿ) ಸೇರಿದರು (1954). ತಂತ್ರಜ್ಞಾನದ ಜೊತೆಗೆ ಟಾಲ್‍ಸ್ಟಾಯ್, ಹಾರ್ಡಿ, ಸ್ಕಾಟ್ ಅವರ ಅಭಿಜಾತ ಸಾಹಿತ್ಯದಿಂದ ಪ್ರಭಾವಿತರಾದರು. ತಮಿಳಿನಲ್ಲಿ ಪ್ರಬಂಧಗಳನ್ನು ಬರೆಯುವುದನ್ನು ಆಗಲೇ ರೂಢಿಸಿಕೊಂಡಿದ್ದರು. ವೈಮಾನಿಕ ಎಂಜಿನಿಯರಿಂಗ್ ಅವರ ಅಧ್ಯಯನ ಕ್ಷೇತ್ರ. ಬಡತನದ ಸ್ಥಿತಿ. ಅಕ್ಕ ಸೋಹರ್ ತನ್ನಲ್ಲಿದ್ದ ಆಭರಣಗಳನ್ನು ಮಾರಿ ಕಲಾಂ ಅವರ ವಿದ್ಯಾಭ್ಯಾಸಕ್ಕೆ ನೆರವಾದರು. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದುದರಿಂದ ವಿದ್ಯಾರ್ಥಿ ವೇತನವೂ ದೊರೆಯುತ್ತಿತ್ತು. ಸ್ವತಂತ್ರವಾಗಿ ವೈಮಾನಿಕ ಕ್ಷೇತ್ರಕ್ಕೆ ಸಂಬಂಧಿಸಿದ ವಿನ್ಯಾಸಗಳನ್ನು ರೂಪಿಸುವುದನ್ನು ಕರಗತಮಾಡಿಕೊಂಡರು. ಮುಂದೆ ಅವರ ಈ ಸ್ವಸಾಮಥ್ರ್ಯವೇ ಅವರ ಬದುಕನ್ನು ಬದಲಿಸಿತು; ಆತ್ಮವಿಶ್ವಾಸ ಹೆಚ್ಚಿತು.

ಮದ್ರಾಸಿನ ಎಂ.ಐ.ಟಿ.ಯಿಂದ ಹೊರಬಂದ ನಂತರ ಹೆಚ್ಚಿನ ತರಪೇತಿಗಾಗಿ ಬೆಂಗಳೂರಿನ ಹಿಂದೂಸ್ಥಾನ್ ಏರೋನಾಟಿಕಲ್ ಲಿ. ಸಂಸ್ಥೆಗೆ ಬಂದರು. ಪಿಸ್ಟನ್ ಮತ್ತು ಟರ್ಬೈನ್ ಎಂಜಿನ್ನುಗಳ ಬಗ್ಗೆ ಹೆಚ್ಚಿನ ನೈಪುಣ್ಯ ಗಳಿಸಿದರು. ಇದು ವೃತ್ತಿಪರ ಏರೋನಾಟಿಕಲ್ ಎಂಜಿನಿಯರ್ ಆಗಿ ರೂಪುಗೊಳ್ಳಲು ಅವಕಾಶ ಕಲ್ಪಿಸಿತು. ಅವರ ಮುಂದೆ ಎರಡು ಆಯ್ಕೆಗಳಿದ್ದುವು. ವಾಯುಪಡೆ ಸೇರುವುದು ಅವರ ಬಾಲ್ಯದ ಕನಸು, ಇನ್ನೊಂದು, ರಕ್ಷಣಾ ಇಲಾಖೆಯ ತಾಂತ್ರಿಕ ಅಭಿವೃದ್ಧಿ ಮತ್ತು ಉತ್ಪಾದನಾ ವಿಭಾಗದ ನಿರ್ದೇಶನಾಲಯದಲ್ಲಿ (ಡಿ.ಟಿ.ಡಿ.&ಪಿ) ವಿಜ್ಞಾನಿಯಾಗುವುದು. ವಾಯುಪಡೆಯಲ್ಲಿ 25 ಮಂದಿ ಅಭ್ಯರ್ಥಿಗಳು ಆಯ್ಕೆ ಸಮಿತಿಯ ಮುಂದೆ ನಿಂತಾಗ ಎಂಟು ಮಂದಿ ಮಾತ್ರ ಆಯ್ಕೆಯಾದರು. ಕಲಾಂ ಒಂಬತ್ತನೆಯವರು. ತತ್‍ಕ್ಷಣದಲ್ಲಿ ನಿರಾಶೆಯಾದರೂ ಅನಂತರ ಹೃಷಿಕೇಶದ ಸ್ವಾಮಿ ಶಿವಾನಂದ ಅವರನ್ನು ಭೇಟಿಯಾದಾಗ ಸಾಂತ್ವನಗೊಂಡು ಬದುಕಿನಲ್ಲಿ ದೊಡ್ಡ ತಿರುವು ಪಡೆದರು. ಮುಂದೆ ರಕ್ಷಣಾ ಇಲಾಖೆಯ ತಾಂತ್ರಿಕ ಅಭಿವೃದ್ಧಿ ಮತ್ತು ಉತ್ಪಾದನಾ ವಿಭಾಗವನ್ನು ಸೇರಿ (1961) ಅವರು ಶ್ರೇಷ್ಠ ತಂತ್ರಜ್ಞರಾಗಿ ಬೆಳೆದರು. ಯಶಸ್ಸಿನ ಹಾದಿಯಲ್ಲಿ ನಡೆದ ಕಲಾಂ ಮತ್ತೆ ಹಿಂತಿರುಗಿ ನೋಡಲಿಲ್ಲ. ಅನಂತರ ಕಾನ್ಪುರದಲ್ಲಿ ತರಪೇತಿ ಪಡೆದು ಹೊಸದಾಗಿ ಸ್ಥಾಪನೆಯಾಗಿದ್ದ ಎ.ಡಿ.ಇ. ಎಂದರೆ ವಿಮಾನಯಾನ ಅಭಿವೃದ್ಧಿ ಸಂಸ್ಥೆಯಲ್ಲಿ ಹಾವರ್‍ಕ್ರಾಫ್ಟ್ ಎಂಬ ದೇಸಿ ಹಗುರ ಹಾರುವ ಮೆಷಿನ್ನನ್ನು ವಿನ್ಯಾಸಗೊಳಿಸಿದರು. ರಕ್ಷಣಾ ಇಲಾಖೆಯ ಮಂತ್ರಿ ಕೃಷ್ಣಮೆನೆನ್ ಪ್ರಾರಂಭಿಕ ಹಾರಾಟದಲ್ಲಿ ಇವರೊಡನಿದ್ದರು. ಕಲಾಂ ಅವರ ತಾಂತ್ರಿಕ ನೈಪುಣ್ಯದ ಬಗ್ಗೆ ಮೆಚ್ಚುಗೆ ಸೂಸಿದರು. ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯ ಎಂ.ಜಿ.ಕೆ ಮೆನೆನ್ ಅವರು ಕಲಾಂ ಅವರ ಸಾಮಥ್ರ್ಯ ಕಂಡು ಅಂತರಿಕ್ಷ ಸಂಶೋಧನೆಯ ಭಾರತೀಯ ಸಮಿತಿ (ಇಂಡಿಯನ್ ಕಮಿಟಿ ಫಾರ್ ಸ್ಪೇಸ್ ರಿಸರ್ಚ್ — ಇನ್‍ಕೋಸ್ಟಾರ್) ಯಲ್ಲಿ ರಾಕೆಟ್ ಎಂಜಿನಿಯರ್ ಹುದ್ದೆಗೆ ಕಲಾಂ ಅವರನ್ನು ಆಯ್ಕೆ ಮಾಡಿದರು. ಇಲ್ಲಿ ತರಪೇತಿ ಪಡೆದ ನಂತರ ಕೇರಳದ ತುಂಬಾಕ್ಕೆ ಮುಂದಿನ ಪಯಣ. 1962ರಲ್ಲಿ ಭಾರತದ ಮಹತ್ವಾಕಾಂಕ್ಷೆಯ ತುಂಬಾ ರಾಕೆಟ್ ಉಡಾವಣಾ ಕೇಂದ್ರ ಸ್ಥಾಪನೆಯಾಯಿತು. ಆರು ತಿಂಗಳ ನಂತರ ಅಮೆರಿಕೆಯ ನಾಸಾ ಸಂಸ್ಥೆಯಲ್ಲಿ ತರಪೇತಿ ಪಡೆದರು. ಆ ಅವಧಿಯಲ್ಲಿ ಟಿಪ್ಪು ಸುಲ್ತಾನ್ ರಾಕೆಟ್ ಹಾರಿಸುತ್ತಿದ್ದ ಚಿತ್ರವನ್ನು ಕಂಡು ಬೆರಗಾದರು. ಅವರ ಬದುಕಿನಲ್ಲಿ ಇದು ಹೆಚ್ಚಿನ ಪ್ರೇರಣೆ ಒದಗಿಸಿತು. ತುಂಬಾದಲ್ಲಿ ಅಮೆರಿಕದಿಂದ ಸೌಂಡಿಂಗ್ ರಾಕೆಟ್ ನೈಕ್ ಅಪಾಚೆ ಉಡಾಯಿಸಿದಾಗ (ಸೆಪ್ಟೆಂಬರ್ 21, 1963) ಕಲಾಂ ಅವರು ರಾಕೆಟ್ ಜೋಡಣೆ ಮತ್ತು ಸುರಕ್ಷತೆಯ ಹೊಣೆ ಹೊತ್ತಿದ್ದರು. ಇದರ ಯಶಸ್ಸು ವಿಕ್ರಂ ಸಾರಾಭಾಯಿ ಅವರಿಗೆ ಬಾಹ್ಯಾಕಾಶದಲ್ಲಿ ಹೆಚ್ಚಿನ ಪ್ರಯೋಗಗಳನ್ನು ಮಾಡಲು ಸ್ಥೈರ್ಯ ಕೊಟ್ಟಿತು. ಭಾರತೀಯ ಉಪಗ್ರಹ ಉಡಾವಣಾ ವಾಹನಗಳ ನಿರ್ಮಾಣ ಮಾಡುವುದು ಸಾರಾಭಾಯಿ ಅವರ ಅನುದಿನದ ಕನಸಾಗಿತ್ತು. ರಾಕೆಟ್ ನೆರವು ಪಡೆದ ಮೋಟಾರ್ ವ್ಯವಸ್ಥೆಯ (ರಾಕೆಟ್ ಅಸಿಸ್ಟೆಡ್ ಟೇಕ್ ಆಫ್ ಸಿಸ್ಟಂ) ನಿರ್ವಹಣೆಯನ್ನೂ ಕಲಾಂ ಅವರಿಗೆ ವಹಿಸಲಾಗಿತ್ತು. ಅಂದಿನ ಸೋವಿಯತ್ ರಷ್ಯ ಮತ್ತು ಫ್ರಾನ್ಸ್‍ನ ವೈಮಾನಿಕ ಎಂಜಿನಿಯರುಗಳ ಜೊತೆ ಕೆಲಸ ಮಾಡುವಾಗ ಅಪಾರ ಅನುಭವ ಪಡೆದರು. ರಾಕೆಟ್ ತಂತ್ರಜ್ಞಾನವೇ ಅಲ್ಲದೆ ಅಂತಹ ದೊಡ್ಡ ಯೋಜನೆಗಳನ್ನು ಹೇಗೆ ನಿಭಾಯಿಸಬೇಕೆಂಬ ಅನುಭವವನ್ನು ಸಾರಾಭಾಯಿ ಅವರಿಂದ ಕಲಾಂ ಅವರು ಕಲಿತರು.

1967ರಲ್ಲಿ ರೋಹಿಣಿ-75 ಪ್ರಥಮ ಭಾರತೀಯ ರಾಕೆಟ್ ಉಡಾವಣೆ ಯಶಸ್ವಿಯಾಯಿತು. 1969ರಲ್ಲಿ ಹಿಮಾಲಯದ ಉನ್ನತ ಪರ್ವತ ಭಾಗದಿಂದ ಫೈಟರ್ ವಿಮಾನಗಳನ್ನು ಉಡಾಯಿಸಲು ಯೋಜನೆ ರೂಪಿಸಿದ ಸಾರಾಭಾಯಿ ಅವರು ಕಲಾಂ ಅವರನ್ನು ಅದರ ಮುಖ್ಯಸ್ಥರನ್ನಾಗಿ ನೇಮಿಸಿದರು. ಹದಿನೆಂಟು ತಿಂಗಳುಗಳೊಳಗೆ ಅದನ್ನು ಕಲಾಂ ಸಾಧಿಸಿ ತೋರಿಸಿದರು. ರಕ್ಷಣಾ ಸಚಿವಾಲಯದಲ್ಲಿ ಕ್ಷಿಪಣಿ ಯೋಜನೆಯ ಸದಸ್ಯರನ್ನಾಗಿ ಅವರನ್ನು ನೇಮಿಸಲಾಯಿತು. ಕ್ಷಿಪಣಿ ತಯಾರಿಕೆಗೆ ಬೇಕಾದ ತಂತ್ರಜ್ಞಾನವನ್ನು ದೇಸೀಯವಾಗಿ ರೂಪಿಸುವ ಮಹತ್ತರ ಯೋಜನೆಗೆ ಅದು ನಾಂದಿಯಾಯಿತು. ಕಲಾಂ ಅವರ ತಾಂತ್ರಿಕ ನೈಪುಣ್ಯ ಪ್ರಕಟವಾದದ್ದು ಇಸ್ರೋ ಸಂಸ್ಥೆಯಲ್ಲಿ. ಅಲ್ಲಿ ಉಪಗ್ರಹ ಉಡಾವಣಾ ವಾಹನವನ್ನು ನಿರ್ಮಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು. 1971ರಲ್ಲಿ ಡಾ. ವಿಕ್ರಂ ಸಾರಾಭಾಯಿ ಅವರ ನಿಧನದಿಂದ ಬಾಹ್ಯಾಕಾಶ ಸಂಶೋಧನೆಗೆ ತಾತ್ಕಾಲಿಕ ಹಿನ್ನೆಡೆಯಾದರೂ ಆ ವೇಳೆಗೆ ಕಲಾಂ ಅವರು ಅತ್ಯಂತ ದಕ್ಷ ತಂತ್ರಜ್ಞ ಎಂಬ ಹೆಸರು ಗಳಿಸಿದ್ದರು. ಎಸ್.ಎಲ್.ವಿ.-3ರ ನಿರ್ದೇಶಕರಾಗಿ ಅವರು ಹೊಸ ಹೊಣೆ ಹೊತ್ತರು. ಅನೇಕ ತಂಡಗಳನ್ನು ಸಮನ್ವಯಗೊಳಿಸಿ ಕಾರ್ಯ ಸಾಧಿಸಬೇಕಾಗಿತ್ತು. 1979ರ ಮಾರ್ಚ್ 19ರಂದು ಉಡ್ಡಯನ ಮಾಡಲು ಮಾಡಿದ ಪ್ರಯತ್ನ ವಿಫಲವಾಯಿತಾದರೂ ಜುಲೈ 1980ರಲ್ಲಿ ಎಸ್.ಎಲ್.ವಿ.-3 ಯಶಸ್ವಿಯಾಗಿ ಗಗನಕ್ಕೆ ಚಿಮ್ಮಿತು. ರೋಹಿಣಿ ಉಪಗ್ರಹವನ್ನು ಅದು ಭೂಕಕ್ಷೆಗೆ ಸೇರಿಸಿ ಭಾರತಕ್ಕೆ ಅಂತರಿಕ್ಷ ಕೂಟದ ಸದಸ್ಯತ್ವ ಗಳಿಸಿಕೊಟ್ಟ ಚಾರಿತ್ರಿಕ ಸಾಧನೆಯಾಯಿತು. ಎರಡನೇ ಮಹಾಯುದ್ಧದಲ್ಲಿ ವಿ-1 ಮತ್ತು ವಿ-2 ರಾಕೆಟ್‍ಗಳನ್ನು ಉಡಾಯಿಸಿ ಲಂಡನ್ ನಗರಕ್ಕೆ ಭಾರಿ ಧಕ್ಕೆ ತರಲು ಕಾರಣವಾಗಿದ್ದ ವರ್ನರ್ ವಾನ್ ಬ್ರೌನ್ ರಾಕೆಟ್ ಕ್ಷೇತ್ರದ ದೈತ್ಯ ಎಂದೇ ಖ್ಯಾತಿ ಪಡೆದಿದ್ದರು. ಅವರು ತುಂಬಾಕ್ಕೆ ಭೇಟಿ ನೀಡಿದಾಗ ಕಲಾಂ ಅವರ ಸಾಧನೆಯ ಬಗ್ಗೆ ಅತ್ಯಂತ ಅಭಿಮಾನ ತಳೆದಿದ್ದರು. `ನಿಮಗೆ ನಿಮ್ಮದೇ ಆದ ಸಮಸ್ಯೆಗಳಿರಬಹುದು, ನೆನಪಿಡಿ ಕೇವಲ ಯಶಸ್ಸಿನ ಸೋಪಾನಗಳ ಮೇಲೆಯೇ ನಮ್ಮ ಸಾಧನೆ ನಿಂತಿರುವುದಿಲ್ಲ. ವೈಫಲ್ಯ ಕೂಡ ಯಶಸ್ಸಿಗೆ ಸೋಪಾನವಾಗಬಹುದು` ಎಂಬ ವಾಸ್ತವತೆಯನ್ನು ಕಲಾಂ ಅವರಿಗೆ ಬ್ರೌನ್ ಅರುಹಿದ್ದರು. ಕಲಾಂ ಅವರ ಸಾಧನೆಯ ಹಾದಿಯಲ್ಲಿ ಇನ್ನೊಂದು ತಿರುವು ಆದದ್ದು ಇಸ್ರೋ ಸಂಸ್ಥೆಯಿಂದ ರಕ್ಷಣಾ ಸಂಶೋಧನೆಯ ಅಭಿವೃದ್ಧಿಯ ಪ್ರಯೋಗಾಲಯಕ್ಕೆ ಅವರ ಕಾರ್ಯಕ್ಷೇತ್ರ 1982ರಲ್ಲಿ ಬದಲಾದಾಗ. ಭಾರತದ ಪರಮಾಣು ಯೋಜನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ರಾಜಾ ರಾಮಣ್ಣ ಅವರು ಕಲಾಂ ಅವರ ಸಾಧನೆಗೆ ಈ ಪ್ರಯೋಗಾಲಯ ಅತ್ಯಂತ ಯುಕ್ತವೆಂದು ಬಗೆದಿದ್ದರು. ಶಸ್ತ್ರಾಸ್ತ್ರಗಳ ಅಭಿವೃದ್ಧಿಗೆ ಭಾರತ ಅತ್ಯಂತ ಗಂಭೀರವಾಗಿ ತೊಡಗಿಕೊಳ್ಳಬೇಕಾದ ಅಗತ್ಯವಿದೆ ಎಂಬುದನ್ನು ಕಲಾಂ ಮನಗಂಡರು. ಶತ್ರುಗಳು ಮುನ್ನುಗ್ಗುವುದನ್ನು ತಡೆದರಷ್ಟೇ ಸಾಲದು, ಯಾವ ಘಳಿಗೆಯಲ್ಲಿ ಸಮರ ಸನ್ನಿಹಿತವಾದರೂ ಅದಕ್ಕೆ ತಕ್ಕ ಸಿದ್ಧತೆ ಇರಬೇಕೆನ್ನುವುದು ಅವರ ಸಂಕಲ್ಪವಾಗಿತ್ತು. `ಸಾಮಥ್ರ್ಯ ಸಾಮಥ್ರ್ಯವನ್ನು ಗೌರವಿಸುತ್ತದೆ ಎನ್ನುವುದು ಕಲಾಂ ಅವರ ಸುಪ್ರಸಿದ್ಧ ನುಡಿ. ಸ್ವದೇಶಿ ತಂತ್ರಜ್ಞಾನದಿಂದ ಕ್ಷಿಪಣಿಗಳನ್ನು ತಯಾರಿಸುವುದು ಅವರ ಧ್ಯೇಯವಾಗಿತ್ತು. ಸಂಕಲಿತ ನಿರ್ದೇಶಿತ ಕ್ಷಿಪಣಿ ಅಭಿವೃದ್ಧಿ ಯೋಜನೆಯ (ಇಂಟೆಗ್ರೇಟೆಡ್ ಗೈಡೆಡ್ ಮಿಸೈಲ್ ಡೆವಲಪ್‍ಮೆಂಟ್ ಪ್ರೋಗ್ರಾಮ್) ಉನ್ನತ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ಹುದ್ದೆ ವಹಿಸಿಕೊಂಡರು. ದೇಶದ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯದ 400 ಮಂದಿ ಪರಿಣತರನ್ನು ಯೋಜನೆಯಲ್ಲಿ ತೊಡಗಿಸಿಕೊಂಡರು. ತ್ರಿಶೂಲ್ 1985ರ 15ರಂದು ಗಗನಕ್ಕೆ ಚಿಮ್ಮಿ ಸಮರಾಸ್ತ್ರಗಳ ಅಭವೃದ್ಧಿಗೆ ಇಂಬುಗೊಟ್ಟಿತು. ಕೆಲವು ಆರಂಭಿಕ ಪ್ರಯತ್ನಗಳು ತಾಂತ್ರಿಕ ದೋಷಗಳಿಂದಾಗಿ ಹಿನ್ನಡೆ ಅನುಭವಿಸಿದರೂ ಅನಂತರ ಈ ಸರಣಿಯ ಅಗ್ನಿ ಕ್ಷಿಪಣಿ ಮೇ 12ರಂದು ಯಶಸ್ವಿಯಾಗಿ ಉಡಾವಣೆಯಾಯಿತು. ಸರ್ವಋತುವಿನಲ್ಲೂ ಕಾರ್ಯ ನಿರ್ವಹಿಸುವ, ನೆಲದಿಂದ ನೆಲಕ್ಕೆ ಚಿಮ್ಮುವ 1000 ಕಿ.ಗ್ರಾಂ. ತೂಕದ ಸಿಡಿತಲೆಯನ್ನು 150ಕಿ.ಮೀ. ದೂರ ಒಯ್ಯಬಲ್ಲ ಪೃಥ್ವಿ ಕ್ಷಿಪಣಿ 1988ರ ಫೆಬ್ರವರಿ 25ರಂದು ಗಗನಕ್ಕೆ ಚಿಮ್ಮಿತು. ಮಧ್ಯಮಗಾಮಿ, ಉತ್‍ಕ್ಷೇಪಕ ಕ್ಷಿಪಣಿ ಅಗ್ನಿ. ಇದರ ನಿರ್ಮಾಣ ಕೂಡ ಅಬ್ದುಲ್ ಕಲಾಂ ಅವರ ನೇತೃತ್ವದಲ್ಲೇ. ಸಂಪೂರ್ಣವಾಗಿ ಭಾರತದ ತಂತ್ರಜ್ಞಾನದ ಸ್ವಾವಲಂಬನೆಯ ಪ್ರತೀಕವಾದ ಈ ಕ್ಷಿಪಣಿ 1989ರ ಮೇ 22ರಂದು ಎಲ್ಲ ಪರೀಕ್ಷೆಗಳನ್ನೂ ಗೆದ್ದು ಗಗನಕ್ಕೆ ಚಿಮ್ಮಿದಾಗ ಭಾರತದ ಶಕ್ತಿಸಾರಥಿಯಾಗಿ ಅಬ್ದುಲ್ ಕಲಾಂ ದೇಶದ ರಕ್ಷಣೆಗೆ ಸುಭದ್ರ ಬುನಾದಿ ಹಾಕಿದರು.

1992-99ರ ನಡುವೆ ಕಲಾಂ ರಕ್ಷಣಾ ಮಂತ್ರಿಗಳಿಗೆ ವೈಜ್ಞಾನಿಕ ಸಲಹೆಗಾರರಾಗಿ ನಿಯುಕ್ತರಾದರು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಹುದ್ದೆಯನ್ನು ವಹಿಸಿಕೊಂಡ ಅವರು ಈ ಅವಧಿಯಲ್ಲಿ ಭಾರತದ ರಕ್ಷಣಾಪಡೆಗೆ ಬೇಕಾದ ಯುದ್ಧಾಸ್ತ್ರಗಳ, ವಿಶೇಷವಾಗಿ ಕ್ಷಿಪಣಿ ನಿರ್ಮಾಣ ತಂತ್ರಜ್ಞಾನಕ್ಕೆ ಒತ್ತುಕೊಟ್ಟರು. ಪರಮಾಣು ಇಲಾಖೆಯ ಸಹಯೋಗದೊಂದಿಗೆ ಪೋಕ್ರಾನಿನಲ್ಲಿ ಎರಡನೇ ಪರಮಾಣು ಬಾಂಬು ಸ್ಫೋಟನೆಯಲ್ಲಿ ಪಾಲ್ಗೊಂಡರು (ಮೇ 12, 1998). ಇದು ಭಾರತವನ್ನು ಪರಮಾಣು ರಾಷ್ಟ್ರವಾಗಿ ರೂಪಿಸಿತು. ಪಶ್ಚಿಮ ರಾಷ್ಟ್ರಗಳು ಈ ಬೆಳವಣಿಗೆಯಿಂದ ವಿಸ್ಮಯಗೊಂಡವು. ಹಗುರ ಯುದ್ಧ ವಿಮಾನಗಳನ್ನು ಭಾರತ ನಿರ್ಮಿಸಲು ಕಲಾಂ ಉತ್ತೇಜನ ನೀಡಿದರು.

1988ರಲ್ಲಿ ಪ್ರಾರಂಭವಾದ ತಾಂತ್ರಿಕ ಮಾಹಿತಿ ಮುನ್ನೋಟ ಮತ್ತು ಮೌಲ್ಯಮಾಪನ ಸಮಿತಿಯನ್ನು (ಟೆಕ್ನಾಲಜಿ ಇನ್‍ಫರಮೇಷನ್ ಫÉೂೀರ್‍ಕಾಸ್ಟಿಂಗ್ ಅಂಡ್ ಅಸೆಸ್‍ಮೆಂಟ್ ಕೌನ್ಸಿಲ್) ಎಂಬ ವಿಜ್ಞಾನ ಮತ್ತು ತಂತ್ರಜ್ಞಾನ ಸ್ವಾಯತ್ತ ಸಂಸ್ಥೆಗೆ 1993ರಲ್ಲಿ ಕಲಾಂ ಅವರು ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಬಂದರು. 500 ಮಂದಿ ಸದಸ್ಯರೊಂದಿಗೆ ಕೂಲಂಕಷವಾಗಿ ಚರ್ಚಿಸಿ 17 ತಂಡಗಳನ್ನು ರಚಿಸಿ `ಭಾರತ -2020 ಹೊಸ ಸಹಸ್ರಮಾನಕ್ಕೊಂದು ದೃಷ್ಟಿ ಎಂಬ ಕೃತಿ ರಚಿಸಿ ಭಾರತ ಸಮೃದ್ಧ, ಸ್ವಾವಲಂಬಿ, ಬಲಾಢ್ಯ ರಾಷ್ಟ್ರವಾಗಬೇಕೆಂಬ ಗುರಿ ಇರಿಸಿಕೊಂಡು ಅನೇಕ ವಿಶ್ಲೇಷಣೆಗಳನ್ನೂ ಸಲಹೆಗಳನ್ನೂ ನೀಡಿದರು. ಭಾರತದ ಆರ್ಥಿಕ, ವೈಜ್ಞಾನಿಕ, ಮಿಲಿಟರಿ ಕ್ಷೇತ್ರವಷ್ಟೇ ಅಲ್ಲದೆ ವರದಿ ರೂಪದ ಈ ಕೃತಿಯಲ್ಲಿ ಕೃಷಿ, ಶಿಕ್ಷಣ, ಆರೋಗ್ಯ ಕ್ಷೇತ್ರಗಳು ಹೇಗೆ ಸಂಪನ್ಮೂಲ ರೂಢಿಸಿಕೊಂಡು ಬೆಳೆಯಲು ಸಾಧ್ಯ ಎಂಬುದರ ತೃಣಮೂಲ ಸ್ತರದ ವಿಶ್ಲೇಷಣೆಯೂ ಇದೆ. 1998ರಿಂದ 2001ರವೆಗೆ ಅವರು ಭಾರತ ಸರ್ಕಾರಕ್ಕೆ ಮುಖ್ಯ ವಿಜ್ಞಾನ ಸಲಹೆಗಾರರಾಗಿ ನೇಮಕಗೊಂಡರು. ಕ್ಯಾಬಿನೆಟ್ ಮಂತ್ರಿಯ ಹುದ್ದೆಗೆ ಇದು ಸರಿಸಮವಾದ ಹುದ್ದೆ. ದೇಶದ ಸರ್ವತೋಮುಖ, ವೈಜ್ಞಾನಿಕ, ತಾಂತ್ರಿಕ ಅಭಿವೃದ್ಧಿಗೆ ಯಾವ ಯೋಜನೆಗಳನ್ನು ಸರ್ಕಾರ ಅನುಷ್ಠಾನಗೊಳಿಸಬೇಕು ಎಂಬುದನ್ನು ಕುರಿತು ಅನೇಕ ಶಿಫಾರಸುಗಳನ್ನು ಮಾಡಿದರು. 2001ರಲ್ಲಿ ಆ ಹುದ್ದೆಗೆ ರಾಜೀನಾಮೆ ನೀಡಿ ಚೆನ್ನೈನ `ಅಣ್ಣಾ ವಿಶ್ವವಿದ್ಯಾಲಯದಲ್ಲಿ, ತಂತ್ರಜ್ಞಾನ ಮತ್ತು ಸಾಮಾಜಿಕ ಪರಿವರ್ತನೆಯ ವಿಭಾಗದಲ್ಲಿ ಪ್ರೊಫೆಸರ್ ಹುದ್ದೆ ಸ್ವೀಕರಿಸಿ ಆ ಕುರಿತು ದೇಶಾದ್ಯಂತ ಬೋಧನೆಗೆ ತೊಡಗಿದರು. ವಿಶೇಷವಾಗಿ ಶಾಲಾ ಮಕ್ಕಳೊಡನೆ ಬೆರೆತು ಅವರಲ್ಲಿ ದೇಶದ ಬಗ್ಗೆ ಅಕ್ಕರೆ ಹುಟ್ಟಿಸಿ ಸ್ಫೂರ್ತಿ ತುಂಬುವ ಅನೇಕ ಅಂಶಗಳನ್ನು ಮನದಲ್ಲಿ ಬಿತ್ತಿದರು. ಅವರು ಕೇಳುವ ಮುಗ್ಧ ಪ್ರಶ್ನೆಗಳಿಗೆ ಉತ್ತರ ಕೊಡುತ್ತ `ಕಲಾಂ ಸರ್` ಎಂದು ಮಕ್ಕಳು ಸಂಬೋಧಿಸುವಂತಾಯಿತು.

ಕಲಾಂ, ಸಂಗೀತ ಮತ್ತು ಸಾಹಿತ್ಯದ ಬಗ್ಗೆ ಅನುರಕ್ತವಾದವರು. ಅವರ ಸಾಮಾಜಿಕ ಕಳಕಳಿ ಅವರು ರಚಿಸಿರುವ ಎಲ್ಲ ಕೃತಿಗಳಲ್ಲೂ ಎದ್ದು ಕಾಣುತ್ತದೆ. ಅಭಿವೃದ್ಧಿಶೀಲ ಭಾರತ —ಅಭಿವೃದ್ಧಿಯಾದ ಭಾರತವಾಗಬೇಕೆಂಬುದು ಅವರ ದಿವ್ಯ ಮಂತ್ರ. `ವಿಂಗ್ಸ್ ಆಫ್ ಫÉೈಯರ್` ಎಂಬ ಅವರ ಆತ್ಮಚರಿತ್ರೆಯ ಕೃತಿ ಅವರ ಸಾಧನೆಯ ಮೆಟ್ಟಿಲುಗಳ ಜೊತೆಗೆ ಅವರ ಪ್ರಗತಿಪರ ದೃಷ್ಟಿಕೋನವನ್ನೂ ಬಿಂಬಿಸುತ್ತದೆ. `ಇಗ್ನೈಟೆಡ್ ಮೈಂಡ್ಸ್` ಮತ್ತು `ಇಂಡಿಯ ಮೈ ಡ್ರೀಮ್ ` `ಎನ್‍ವಿಷನಿಂಗ್ ಅವರ್ ಎನ್‍ಪವರ್ಡ್ ನೇಷನ್ ` ಇವು ಕಲಾಂ ಅವರ ಜನಪ್ರಿಯ ಕೃತಿಗಳು. ಭಾರತದ ಅನೇಕ ಭಾಷೆಗಳಿಗೆ ಅನುವಾದಗೊಂಡಿವೆ. ಕಲಾಂ ಅವರು ಭಾರತದ ಶ್ರೇಷ್ಠ ತಂತ್ರಜ್ಞಾನರ ಪೈಕಿ ಒಬ್ಬರು. 30 ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳು ಇವರಿಗೆ ಗೌರವ ಡಾಕ್ಟೋರೇಟ್ ನೀಡಿವೆ. ಭಾರತ ಸರ್ಕಾರದ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಇವರು ಭಾಜನರು - ಪದ್ಮಭೂಷಣ (1981) ಪದ್ಮವಿಭೂಷಣ (1990) ಹಾಗೂ ಭಾರತ ಸರ್ಕಾರದ ಅತ್ಯುನ್ನತ ಪ್ರಶಸ್ತಿ `ಭಾರತರತ್ನ (1997). ವಾಜಪೇಯಿ ಅವರ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗ (ಎನ್.ಡಿ.ಎ) ಕಲಾಂ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲಿಸಿತು (2002 ಜೂನ್ 10). ಇಂಡಿಯನ್ ನ್ಯಾಷನಲ್ ಆರ್ಮಿಯ ಖ್ಯಾತೆ 87ರ ಹರೆಯದ ಕ್ಯಾಪ್ಟನ್ ಲಕ್ಷ್ಮೀ ಸೆಹಗಲ್ ಎಡಪಕ್ಷದ ಅಭ್ಯರ್ಥಿಯಾಗಿ ನಿಂತರು. ಕಲಾಂ ರಾಷ್ಟ್ರಪತಿ ಹುದ್ದೆಗೆ 2002 ಜೂನ್ 18ರಂದು ನಾಮಪತ್ರ ಸಲ್ಲಿಸಿದರು. ಶೇ. 90 ಭಾಗ ಮತ ಗಳಿಸಿ ವಿಜಯಿಯಾದರು. 2002ರ ಜುಲೈ 25ರಂದು ಭಾರತ ಗಣರಾಜ್ಯದ ಹನ್ನೊಂದನೆಯ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದರು. 2020ರ ಹೊತ್ತಿಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ರೂಪಿಸಬೇಕೆಂಬುದು ಕಲಾಂ ಅವರ ಬಯಕೆ.

(ಟಿ.ಆರ್.ಅನಂತರಾಮು)