ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಭಿನವಗುಪ್ತ

ವಿಕಿಸೋರ್ಸ್ದಿಂದ

ಅಭಿನವ ಗುಪ್ತ : -
ಭಾರತದ ಮಧ್ಯಯುಗೀನ ತತ್ತ್ವಜ್ಞಾನಿಗಳ ಮಾಲಿಕೆಯಲ್ಲಿ ಈತನ ಹೆಸರು ಶಾಶ್ವತ ಕೀರ್ತಿಗೆ ಪಾತ್ರವಾಗಿದೆ. ಇವನ ಅಪಾರವೈದುಷ್ಯ, ಬಹುಮುಖ ಪ್ರತಿಭೆ, ವಿಸ್ತøತಗ್ರಂಥರಚನೆ, ಆಧ್ಯಾತ್ಮ ಸಾಕ್ಷಾತ್ಕಾರ, ಎಲ್ಲವೂ ಅಪೂರ್ವವಾಗಿದೆ. ಇವನಿಗೆ ಶಾಸ್ತ್ರಗಳಲ್ಲಿ ಪ್ರಭುತ್ವವಿದ್ದಂತೆಯೇ ಕಾವ್ಯದಲ್ಲಿ ಕೌಶಲವೂ ಇತ್ತು. ದರ್ಶನಗಳಲ್ಲಿ ಪ್ರಬೋಧವಿದ್ದಂತೆಯೇ ಗೀತನಾಟ್ಯಾದಿ ಲಲಿತಕಲೆಗಳಲ್ಲೂ ಪಾಂಡಿತ್ಯವಿತ್ತು. ಹೆಚ್ಚಾಗಿ ವ್ಯಾಖ್ಯಾನಗಳನ್ನೇ ಬರೆದರೂ ಇವನ ಕೃತಿಗಳಲ್ಲಿ ನೂತನಾವಿಷ್ಕರಣದ ಪ್ರತಿಭೆ ಕೋರೈಸುತ್ತದೆ; ಸ್ವತಂತ್ರ್ಯ ವಿಚಾರಸರಣಿ ಎದ್ದು ಕಾಣುತ್ತದೆ. ಇತ್ತ ತತ್ತ್ವಜ್ಞಾನದಲ್ಲಿ ಕಾಶ್ಮೀರ ಶೈವಪಂಥದ ಪ್ರತ್ಯಭಿಜ್ಞಾದರ್ಶನವನ್ನು ಮೂಲ ಶೈವಾಗಮಗಳ ಪುನರನುಸಂಧಾನದಿಂದ ಶಾಸ್ತ್ರಾವ್ಯಾಖ್ಯಾನ ಕೌಶಲದಿಂದ ಗಟ್ಟಿಯಾದ ತಳಹದಿಯ ಮೇಲೆ ನಿಲ್ಲಿಸಿದಂತೆಯೇ ಅತ್ತ ಭರತನ ನಾಟ್ಯಶಾಸ್ತ್ರವನ್ನು ಆಮೂಲಾಗ್ರವಾಗಿ ವಿವರಿಸಿ ರಸಸಿದ್ಧಾಂತವನ್ನು ಪ್ರಮಾಣಪುರಸ್ಸರವಾಗಿ ಪ್ರತಿಷ್ಠಾಪಿಸಿದ ಯಶಸ್ಸು ಇವನದು. ಅದೂ ಅಲ್ಲದೆ, ಸಂಸ್ಕøತ ಕಾವ್ಯಲಕ್ಷಣಕಾರರಲ್ಲಿ ರಸ, ರೀತಿ, ಗುಣಾಲಂಕಾರ ವಾದಗಳು ಪರಸ್ಪರ ಸ್ಪರ್ಧೆಯಿಂದ ಅನನ್ವಿತವಾಗುವುದನ್ನು ತಪ್ಪಿಸಲು ಧ್ವನಿತತ್ತ್ವವನ್ನು ಸಾರಿದ ಆನಂದವರ್ಧನನ ಧ್ವನ್ಯಾಲೋಕ ಗ್ರಂಥಕ್ಕೆ ಲೋಚನವೆಂಬ ಸಾರ್ಥಕ ವಿವರಣೆಯನ್ನು ಬರೆದು ಎಲ್ಲರ ಕಣ್ಣನ್ನೂ ತೆರೆಯಿಸಿ ಧ್ವನಿಪ್ರತಿಷ್ಠಾಪನ ಪರಮಾಚಾರ್ಯನೆಂಬ ಪ್ರಶಸ್ತಿಯನ್ನು ಗಳಿಸಿದ್ದನಲ್ಲದೆ ಇವನ ವ್ಯಾಖ್ಯಾಗ್ರಂಥಗಳು ಆಯೇ ಶಾಸ್ತ್ರಗಳಲ್ಲಿ ಸೂತ್ರಭಾಷ್ಯಗಳಷ್ಟೇ ಪ್ರಾಮಾಣ್ಯ ಹೊಂದಿವೆ; ಇವನ ಸ್ವತಂತ್ರ ಸ್ತೋತ್ರಕಾವ್ಯಗಳು ಇಂದಿಗೂ ಪ್ರತಭಾಸ್ಪೂರ್ತಿಯನ್ನು ಒದಗಿಸುವಂತಿವೆ. ಕಾಶ್ಮೀರಿಗಳಂತೂ ಇವನನ್ನು ಪರಶಿವನ ಅವತಾರವೆಂದು ಗೌರವಿಸುತ್ತಾರೆ.

ಇತರ ಭಾರತೀಯ ಗ್ರಂಥಕಾರರಂತೆ ಈತ ತನ್ನ ಜನನ, ಕಾಲ, ದೇಶ, ಜೀವನ ಮತ್ತು ಕೃತಿಗಳ ಬಗೆಗೆ ಮೌನತಾಳದೆ ತಾನೇ ಉಪಯುಕ್ತ ಮಾಹಿತಿಯನ್ನೆಲ್ಲ ಒದಗಿಸಿದ್ದಾನೆ. ಅದನ್ನು ಹೀಗೆ ಸಂಗ್ರಹಿಸಬಹುದು.

==ಬಾಲ್ಯಜೀವನ==
ಚುಖಲ ಅಥವಾ ನರಸಿಂಹಗುಪ್ತ ಎಂಬುದು ಅಭಿನವಗುಪ್ತನ ತಂದೆಯ ಹೆಸರು; ತಾಯಿ ವಿಮಲಾ. ನರಸಿಂಹಗುಪ್ತನ ಮಗ; ಅತ್ರಿಗುಪ್ತನ ಮೊಮ್ಮಗ. ಗಂಗಾಯಮುನಾ ನದಿಗಳ ನಡುವಣ ಪ್ರದೇಶವಾಸಿಯಾಗಿದ್ದ ಅತ್ರಿಗುಪ್ತನನ್ನು ಕಾಶ್ಮೀರದ ರಾಜ ಲಲಿತಾದಿತ್ಯ (ಕ್ರಿ.ಶ. 725-761) ಗೌರವಿಸಿ ಕರೆಸಿಕೊಂಡನಂತೆ. ಈ ವಂಶದವರೆಲ್ಲರೂ ವೈದುಷ್ಯಕ್ಕೆ ಹೆಸರಾಂತವರು. ಕಾಶ್ಮೀರದಲ್ಲಿ ವಿತಸ್ತಾ (ಜೀಲಮ್) ನದಿಯ ದಂಡೆಯ ಮೇಲೆ ಶಿವಾಲಯದ ಎದುರಿಗೆ ಇವರ ಮನೆಯಿತ್ತು. ಅಭಿನವಗುಪ್ತನ ಜನ್ಮ ಕ್ರಿ.ಶ. 950 ಇರಬೇಕು. ವಿದ್ಯಾಭ್ಯಾಸಕ್ಕಾಗಿ ಆಶ್ರಯಿಸಿದ ಗುರುಗಳ ಸಂಖ್ಯೆ ಇಪ್ಪತ್ತನ್ನು ಮೀರಿದೆ. ಒಂದೊಂದು ಶಾಸ್ತ್ರದಲ್ಲೂ ಪರಿಣತರನ್ನು ಹುಡುಕಿಕೊಂಡು ಕಾಶ್ಮೀರದ ಹೊರಗೆ ಜಾಲಂಧರ ಮುಂತಾದ ಕಡೆಗಳಿಗೂ ಹೋಗಿದ್ದ. ನಾಟ್ಯಶಾಸ್ತ್ರದ ಗುರು ಭಟ್ಟತೌತ; ಧ್ವನಿತತ್ತ್ವದ ಗುರು ಭಟ್ಟ ಇಂದುರಾಜ; ಬ್ರಹ್ಮವಿದ್ಯೆಗೆ ಭೂತಿರಾಜ, ವ್ಯಾಕರಣ, ತಂತ್ರ, ಶೈವಾಗಮ, ತರ್ಕ, ಮೀಮಾಂಸ, ಜೈನ-ಬೌದ್ಧದರ್ಶನ ಮುಂತಾದವು ಆತ ಕಲಿತ ಇತರ ವಿಷಯಗಳು. ಯೌವನದಲ್ಲೇ ಗ್ರಂಥರಚನೆ ಆರಂಭಮಾಡಿದ. 70 ವರ್ಷಗಳವರೆಗಾದರೂ ಬದುಕಿದ್ದನೆಂದು ತೋರುತ್ತದೆ. ಕ್ರಿ.ಶ. 980-1020ರವರೆಗೆ ಇವನ ಸಾಹಿತ್ಯ ನಿರ್ಮಾಣದ ಅವಧಿಯೆನ್ನಿಬಹುದು. ಅಭಿನವಗುಪ್ತ ತನ್ನ 1200 ಶಿಷ್ಯರ ಸಂಗಡ ಭೈರವಸ್ತೋತ್ರವನ್ನು ಪಠಿಸುತ್ತ ಶ್ರೀನಗರದ ಬಳಿ ಬಿರೂ ಎಂಬಲ್ಲಿರುವ ಪರ್ವತಗುಹೆಯನ್ನು ಪ್ರವೇಶಿಸಿ ಕೈಲಾಸಕ್ಕೆ ನಡೆದನೆಂಬ ಐತಿಹ್ಯವಿದೆ. ಈತ ಸಂಸ್ಯಾಸಿಯಾಗಿಯೇ ತನ್ನ ಜೀವನವನ್ನು ಕಳೆದ ಸಂಗತಿ ಸಂಶೋಧಕರಿಂದ ಸ್ಥಿರಿಕರಿಸಲ್ಪಟ್ಟಿದೆ.

ಅಭಿನವಗುಪ್ತನ ಪ್ರಮುಖ ಕೃತಿಗಳು: 1 ತಂತ್ರಶಾಸ್ತ್ರ: ಮಾಲಿನೀ ವಿಜಯವಾರ್ತಿಕ, ಪರಾತ್ರಿಂಶಿಕಾವಿವೃತಿ, ತಂತ್ರಾಲೋಕ (ಬೃಹದ್ಗ್ರಂಥ), ಅನುತ್ತರ ತತ್ತ್ವವಿಮರ್ಶಿನೀವೃತ್ತಿ. 2 ಪ್ರತ್ಯಭಿಜ್ಞಾದರ್ಶನ: ಈಶ್ವರಪ್ರತ್ಯಭಿಜ್ಞಾವಿಮರ್ಶಿನೀ, ಶಿವದೃಷ್ಟ್ಯಾ ಲೋಚನ, ಪರಮಾರ್ಥಸಾರ, ಭಗದ್ಗೀತಾರ್ಥಸಂಗ್ರಹ, ಇತ್ಯಾದಿ. 3 ನಾಟ್ಯ ಮತ್ತು ಕಾವ್ಯಶಾಸ್ತ್ರ: ಅಭಿನವಭಾರತೀ, ಧ್ವನ್ಯಾಲೋಕಲೋಚನ. 4 ಸ್ತೋತ್ರಗಳು: ಕ್ರಮಸ್ತೋತ್ರ, ದೇಹಸ್ಥದೇವತಾಚಕ್ರಸ್ತೋತ್ರ, ಭೈರವ ಸ್ತೋತ್ರ, ಶಿವಶಕ್ತ್ಯ ವಿನಾಭಾವಸೋತ್ರ, ಅನುಭವನಿವೇಧನಮ್ ಇತ್ಯಾದಿ.

ಅಭಿನವಗುಪ್ತನ ಕಾಲಕ್ಕೆ ಆಗಲೇ ಸೋಮನಂದನ ಶಿವದೃಷ್ಟಿ ಹಾಗೂ ಉತ್ಪಲ ದೇವನ ಪ್ರತ್ಯಭಿಜ್ಞಾನಸೂತ್ರ ಮತ್ತು ವೃತ್ತಿ, ವಿವೃತಿಗಳು, ವಸುಗುಪ್ತನ ಶಿವಸೂತ್ರ, ಸ್ಫಂದಕಾರಿಕಾ ಮುಂತಾದ ಕೃತಿಗಳು ರಚಿತವಾಗಿದ್ದು ಪ್ರತ್ಯಭಿಜ್ಞಾ ಎಂಬ ಆಧ್ಯಾತ್ಮದರ್ಶನ ಅಸ್ತಿತ್ವಕ್ಕೆ ಬಂದಿತ್ತು. ಶೈವಾಗಮಮೂಲವಾದ ಲಕುಲೀಶ, ಪಾಶುಪತ, ಕಾಲಾಮುಖ, ಶೈವಸಿದ್ಧಾಂತ ಮುಂತಾದ ಶೈವದರ್ಶನಗಳೂ ಪ್ರಚಾರದಲ್ಲಿದ್ದುವು. ಇವುಗಳೆಲ್ಲ ವಿವಿಧಾಚಾರಗಳಿಗೆ ಪ್ರಾಸ್ತ್ಯವಿತ್ತು ಅಧ್ಯಾತ್ಮಾನುಭವದ ಮೂಲಸ್ತೋತ್ರವನ್ನು ಶಾಸ್ತ್ರಸರಣಿಯಿಂದ ಪೂರ್ವಪಕ್ಷ ಸಿದ್ಧಾಂತ ರೀತಿಯಿಂದ ನಿರ್ಣಯಿಸಲಾರದೆ ಹಲವಾಗಿ ಹರಡಿಹೋಗಿದ್ದುವು. ಅದ್ವೈತಕ್ಕೆ ಶಂಕರಾಚಾರ್ಯರು ಭಾಷ್ಯ ಬರೆದಂತೆ ಪ್ರತ್ಯಭಿಜ್ಞಾದರ್ಶನಕ್ಕೆ ಭಾಷ್ಯರಚನೆ ಮಾಡಿದ ಯಶಸ್ಸು ಅಭಿನವಗುಪ್ತನದು.

ಈ ದರ್ಶನದಲ್ಲಿ ಪರಬ್ರಹ್ಮಾ ಅಥವಾ ಪರಮಾತ್ಮನನ್ನು ಶಿವನೆನ್ನಲಾಗುತ್ತದೆ. ಅವನ ಸ್ವರೂಪವೇ ಪ್ರಕಾಶ, ಶಕ್ತಿಯೇ ವಿಮರ್ಶ. ಅವೆರಡೂ ಯಾವಾಗಲೂ ಕೂಡಿಯೇ ಇರುತ್ತವೆ. ವಿಶ್ವಸೃಷ್ಟಿ ಶಕ್ತಿವಿಕಾಸದ ಅವಸ್ಥೆ; ಅದರ ಸಂಕೋಚವೇ ಪ್ರಳಯ; ಎಂದರೆ ಶಿವರೂಪದಲ್ಲಿ ಅಡಗುವಿಕೆ. ಹೀಗೆ ವಿಶ್ವದ ಉನ್ಮೇಷ ನಿಮೇಷಗಳಲ್ಲೆಲ್ಲ ಶಿವಾದಿ ಕ್ಷಿತ್ಯಂತವಾದ ಮೂವತ್ತಾರು ತತ್ತ್ವಗಳಿವೆ. ಇವುಗಳಿಂದ ಯಾವ ಲೋಪವೂ ಲೇಪವೂ ಇಲ್ಲದ ವಿಶ್ವೋತ್ತೀರ್ಣಪರಮಾರ್ಥವೇ ಪರಶಿವ. ದ್ವೈತ, ದ್ವೈತಾದ್ವೈತಗಳನ್ನೆಲ್ಲ ತನ್ನ ಹೊಟ್ಟೆಯಲ್ಲಿ ಅಡಗಿಸಿಕೊಳ್ಳುವ ಅದ್ವೈತವೇ ಪರಮತತ್ತ್ವ.

ಶುದ್ಧಪ್ರಕಾಶರೂಪನಾದ ಶಿವನೇ ಸಕಲ ಅನುಭವಗಳಿಗೂ ಮೂಲ. ಆದರೆ ಸರ್ವಸ್ವತಂತ್ರನಾದ ಅವನ ಮಾಯಾಶಕ್ತಿಯ ಮೂಲಕ ಜೀವನು ತಾನೇ ಪ್ರಕಾಶ ಸ್ವರೂಪನೆಂಬುದನ್ನು ಮರೆಯುತ್ತಾನೆ; ದೇಹಾಭಿಮಾನದ ಭೂಮಿಕೆಯಲ್ಲಿದ್ದಾಗ ಚಾರ್ವಾಕನಂತೆ ದೇಹವೇ ಆತ್ಮವೆನ್ನುತ್ತಾನೆ; ಅದಕ್ಕಿಂತ ಮೇಲಿನ ಪ್ರಾಣಾಭಿಮಾನದ ಭೂಮಿಕೆಯಲ್ಲಿ ಬಂದಾಗ ಕೆಲವು ಉಪನಿಷತ್ತುಗಳಲ್ಲಿ ಉಕ್ತವಾಗಿರುವಂತೆ ಪ್ರಾಣವೇ ಆತ್ಮವೆನ್ನುತ್ತಾನೆ; ಇನ್ನೂ ಮುಂದಿನ ಭೂಮಿಕೆಗೆ ಬಂದಾಗ ವೈಶೇಷಿಕರಂತೆ ಬುದ್ದಿಯನ್ನೇ ಆತ್ಮವೆನ್ನುತ್ತಾನೆ; ಅದೂ ವೇದ್ಯವೇ ಎಂಬ ಅನುಭವ ಯೋಗದೆಶೆಯಲ್ಲಿ ಬಂದ ಸಾಂಖ್ಯ ಬುದ್ದಿಗೂ ಮೂಲವಾದ ಪ್ರಮಾತೃತತ್ತ್ವವನ್ನು ಶೂನ್ಯದೋಪಾದಿಯಲ್ಲಿ ಗ್ರಹಿಸುತ್ತಾನೆ. ಅಂತೂ ಶುದ್ಧಾತ್ಮ ಮಾತ್ರ ಶಿವೋಹಂ ಎಂದು ಸಾಕ್ಷಾತ್ಕಾರದ ಅನುಭವವನ್ನು ಪಡೆಯುತ್ತಾನೆ. ಇದೇ ಪ್ರತ್ಯಭಿಜ್ಞೆ. ಎಂದರೆ ಮೊದಲಿನಿಂದಲೂ ಇರುವ, ನಿಜಸ್ವರೂಪದ ಅನುಸಂಧಾನ ಅಥವಾ ಬುದ್ದಿಗೋಚರ ಅನುಭವ. ವಸ್ತುಸ್ವರೂಪವಿದ್ದರೆ ಆಗಲಿಲ್ಲ; ಅದರ ಗುರುತು ಹಿಡಿಯುವ ಅನುಭವವೂ ಅಗತ್ಯವೆನ್ನಲು ಅಭಿನವಗುಪ್ತ ಒಂದು ಸುಂದರ ಲೌಕಿಕ ಉದಾಹರಣೆಯನ್ನಿತ್ತಿದ್ದಾನೆ.

ಕಾಮಿನಿಯೊಬ್ಬಳು ಎಷ್ಟೋ ಕಷ್ಟದಿಂದ ದೂತಿಯರೊಂದಿಗೆ ಹೇಳಿ ಕಳುಹಿಸಿ ತನ್ನ ಪ್ರಿಯತಮನನ್ನು ಕರೆಸಿರಬಹುದು. ಅವನು ಅವಳ ಕರೆಯನ್ನು ಮನ್ನಿಸಿ ಬಂದೂ ಇರಬಹುದು. ಅವಳು ಅವನ ಸಮಾಗಮಕ್ಕಾಗಿ ಕಾತರಳಾಗಿಯೂ ಇರಬಹುದು. ಏಕಾಂತ ಸ್ಥಳ, ರಮ್ಯಸನ್ನಿವೇಶ ಎಲ್ಲವೂ ಅನುಕೂಲವಾಗಿರಬಹುದು. ಆದರೂ ಬಂದಿರುವಾತ ತನ್ನ ಪ್ರಿಯತಮನೇ ಎಂಬ ಗುರುತು ಸಿಕ್ಕುವವರೆಗೆ ಅವನಾರೋ ಆಗಂತುಕನೆಂಬ ಭಾವವಿರುವವರೆಗೆ ರತಿಕ್ರೀಡೆಗೆ ಅವಕಾಶವೇ ಇಲ್ಲ. ಅದೇ ರೀತಿ ಆತ್ಮಾನಂದ ಸಿಕ್ಕಬೇಕಾದರೂ ಸ್ವಾತ್ಮನ ಗುರುತಾಗಬೇಕಾಗುತ್ತದೆ. ಇದೇ ಸಾಕ್ಷಾತ್ಕಾರ. ಸಾಕ್ಷಾತ್ಕಾರ ಕಾಲದಲ್ಲಿ ಅಹಂ ಎನ್ನುವುದೆಲ್ಲ ಪ್ರಕಾಶರೂಪವೇ ಎನ್ನುವ ಅರಿವಾಗುವಂತೆಯೇ ಇದಂ ಎನ್ನುವುದೆಲ್ಲವೂ ಅದೇ ಪ್ರಕಾಶದ ರೂಪಾಂತರವೆಂಬರಿವೂ ಮೂಡುತ್ತದೆ. ದ್ವೈತಭಾವವಳಿಯುತ್ತದೆ.

ತತ್ತ್ವಶಾಸ್ತ್ರದಲ್ಲಿ ಎರಡು ವಸ್ತು ಅಥವಾ ವ್ಯಕ್ತಿಗಳ ವಸ್ತು ಅಥವಾ ವ್ಯಕ್ತಿಗಳ ಸಂಬಂಧವನ್ನು ನಿರ್ಣಯಿಸುವಾಗ ಬೇರೆ ಬೇರೆ ವಾದಗಳು ಮೂಡುತ್ತವೆ - ಪರಿಣಾಮ, ಸಂಯೋಗ, ಸಮವಾಯ, ಇತ್ಯಾದಿ. ಆದರೆ ಎಲ್ಲ ವಸ್ತುಗಳೂ ಜ್ಞಾನಾಕಾರವನ್ನು ತಳೆದಾಗ ಏಕೀಭಾವವನ್ನು ಕೂಡ ತೋರಿಸುವುದು ಅನುಭವಸಿದ್ಧ. ಅಭಿನವಗುಪ್ತ, ಸಾಂಖ್ಯ, ವೈಶೇಷಿಕ, ಬೌದ್ಧ ಮುಂತಾದ ವಾದಗಳನ್ನೆಲ್ಲ ಈ ಅನುಭವಪ್ರಾಮಾಣ್ಯದಿಂದ ನಿರಾಕರಿಸಿ ಆಧ್ಯಾತ್ಮಾನುಭವವನ್ನು ಎತ್ತಿ ಹಿಡಿದಿರುವುದು ಆತನ ತಾತ್ವ್ತಿಕ ವಿವೇಚನಾ ಸಾಮಥ್ರ್ಯಕ್ಕೆ ಕೈಗಂಬವಾಗಿದೆ. ಜಾತಿ, ಗುಣ, ಕ್ರಯಾ, ದ್ರವ್ಯ, ಕಾಲ ಮುಂತಾದ ಪದಾರ್ಥಗಳೆಲ್ಲವೂ ಪರಮಾರ್ಥತಃ ಪ್ರಕಾಶವೇ ಹೊರತು ಬೇರೆಯಲ್ಲವೆಂದು ಆತ ಸಾಧಿಸಿದ್ದಾನೆ. ಅಜ್ಞಾನದಶೆಯಲ್ಲಿ ಈ ವಿಭೇದಗಳುಂಟೇ ಹೊರತು ಮುಕ್ತದಶೆಯಲ್ಲಿಲ್ಲ.

ಅಭಿನವಗುಪ್ತನ ದರ್ಶನದಲ್ಲಿ ಆಚಾರಕ್ಕೆ ಪ್ರಾಶಸ್ತ್ಯವಿದ್ದರೂ ಮುಕ್ತಿಗೆ ಅನಧಿಕಾರಿಗಳಾರೂ ಇಲ್ಲ. ಜಾತಿಬೇಧಗಳ ಜಂಜಾಟ ಮೋಕ್ಷಮಾರ್ಗಕ್ಕೆ ಅನ್ವಯಿಸುವುದಿಲ್ಲ. ಪರಮುಕ್ತಿಯಂತೆಯೇ ಜೀವನ್ಮುಕ್ತಿಗೂ ಆಸ್ಪದವಿದೆ. ಬೌದ್ಧರ ವಿಜ್ಞಾನವಾದಕ್ಕೂ ಶೈವಾಗಮದರ್ಶನಕ್ಕೂ ಶಾಂಕರ ಅದ್ವೈತಕ್ಕೂ ಒಂದು ಸೇತುವೆಯಂತೆ ಅಭಿನವ ಗುಪ್ತನ ತತ್ತ್ವಸರಣಿ ಸಾಗಿದೆ.

ಕಾವ್ಯನಾಟಕಾದಿಗಳು ತತ್ತ್ವನಿರ್ವಚನೆಯಲ್ಲೂ ಇದೇ ರೀತಿಯ ಸಮನ್ವಯದೃಷ್ಟಿ, ಸಾರಗ್ರಹಣತುಷ್ಟಿ, ನೂತನೋನ್ಮೇಷ ಸೃಷ್ಟಗಳನ್ನು ಅಭಿನವಭಾರತಿಯಂತೆ ಧ್ವನ್ಯಾಲೋಕಲೋಚನದಲ್ಲೂ ನೋಡುತ್ತೇವೆ. ನಾಟ್ಯದ ಗುರಿಯೆಲ್ಲ ರಸ; ರಸಕ್ಕಾಗಿಯೇ ನಾಟ್ಯದ ವಿಭಾವ, ಅನುಭಾವ, ವ್ಯಭಿಚಾರಿಗಳೆಲ್ಲ ಮೀಸಲು-ಎಂಬ ಭರತನ ಮೂಲಸಿದ್ಧಾಂತವನ್ನು ಒಬ್ಬೊಬ್ಬರು ಒಂದೊಂದು ರೀತಿಯಾಗಿ ಹೀಗೆ ಗ್ರಹಿಸುತ್ತಿದ್ದರೆಂಬುದನ್ನು ಅಭಿನವಭಾರತಿಯಿಂದಲೇ ಅರಿಯಬೇಕು. ರತಿ, ಶೋಕ, ಕ್ರೋಧ, ಮುಂತಾದ ಸ್ಥಾಯಿಭಾವಗಳಿಗೆ ಉಚಿತ ವಿಭಾವ (ಎಂದರೆ ಉದ್ದೀಪಕ ಪ್ರಕೃತಿ ಹಾಗೂ ಆಲಂಬನ ವ್ಯಕ್ತಿಗಳ ಚಿತ್ರಣ); ಅನುಭಾವ (ಕಟಾಕ್ಷಾದಿ ಅಭಿನಯಗಳು); ವ್ಯಭಿಚಾರೀಭಾವಗಳ (ನಿರ್ವೇದ; ಗ್ಲಾನಿ, ಶಂಕಾ, ಮುಂತಾದ ಮನೋಭಾವಗಳು) ಅಭಿನಯದಿಂದ ಅಥವಾ ಕಾವ್ಯವರ್ಣನೆಯಿಂದ ಪರಿಪುಷ್ಟಿಯುಂಟಾಗುತ್ತದೆ. ಅದೇ ರಸಿಕರಿಗೆ ಆಸ್ವಾದ್ಯವೆನಿಸಿ ಶೃಂಗಾರ, ಕರುಣ, ರೌದ್ರ ಇತ್ಯಾದಿ ರಸವೆನಿಸುತ್ತದೆಂದು ಲೊಲ್ಲಟನ ಮತ; ರತ್ಯಾದಿ ಸ್ಥಾಯಿಭಾವಗಳು ಮೂಲತಃ ನಾಯಕಾದಿಗಳಲ್ಲಿರುವ ಕಾರಣ, ಅವರಲ್ಲಿಯೇ ನಿಜವಾದ ರಸೋತ್ಪತ್ತಿ; ಅವರ ಅನುಕರಣೆ ಮಾಡುವ ನಟರಲ್ಲಿ ರಸಭ್ರಾಂತಿ; ನೋಡುವ ಪ್ರೇಕ್ಷಕರಿಗೆ ಅದರ ಆಸ್ವಾದ, ಎಂದಿದರ ತಾತ್ಪರ್ಯ, ಅಭಿನವಗುಪ್ತ ಇಲ್ಲಿಂದಾರಂಭಿಸಿ ಶಂಕುಕ, ಭಟ್ಟನಾಯಕರೆಂಬ ಇತರ ಭರತವ್ಯಾಖ್ಯಾಕಾರರ ವಾದಗಳನ್ನು ವಿಸ್ತಾರವಾಗಿ ಮಂಡಿಸಿ ವಿವೇಚಿಸಿ, ಕಡೆಗೆ ತನ್ನ ಹೊಸನಿರ್ಣಯವನ್ನು ಘೋಷಿಸಿದ್ದಾನೆ. ನಟವ್ಯಾಪಾರವೊಂದು ವಿಶಿಷ್ಟ ಅನುಭವ. ಹೀಗೆಲ್ಲ ನಟರಾಡಲು ಅಭಿನಿತಸ್ಥಾಯಿಭಾವಗಳೇ ಮೂಲವೆಂದು ಪ್ರೇಕ್ಷಕನಿಗೆ ಮನವರಿಕೆಯಾದಾಗ ಕಣ್ಣಮುಂದಿರುವ ನಟರನ್ನೇ ಸ್ಥಾಯಿಭಾವಗಳಿಗೆ ಆಶ್ರಯವೆಂದು ಬುದ್ಧಿ ಪೂರ್ವಕವಾಗಿ ಕಲ್ಪಿಸಿಕೊಂಡು, ಸಾಮಾಜಿಕರು ಆ ಅನುಮಾನದಿಂದ ರಸಾಸ್ವಾದ ಪಡೆಯುತ್ತಾರೆಂದು ಶಂಕುಕನ ವಿವರಣೆ. (ಇದನ್ನು ಕೋಲೆರಿಜ್ ಹೇಳುವ ವಿಲ್ಲಿಂಗ್ ಸಸ್ ಪೆನ್ಷನ್ ಆಫ್ ಡಿಸ್ ಬಿಲೀಫ್ ಎನ್ನುವ ಪ್ರಕ್ರಿಯೆಯೊಡನೆ ಹೋಲಿಸಬಹುದು). ಭಟ್ಟನಾಯಕನಿಗೆ ಇವೆರಡು ವಾದಗಳು ಒಪ್ಪಿಗೆಯಿಲ್ಲ. ರಸದ ರಹಸ್ಯವನ್ನರಿಯಲು ಶಬ್ದಾರ್ಥಗಳಿಗೆ ಸರ್ವಸಮ್ಮತವಾದ ಅಭಿಧಾವ್ಯಾಪಾರವಲ್ಲದೆ ಭಾವಕತ್ವ, ಭೋಜಕತ್ವ ವ್ಯಾಪಾರಗಳನ್ನು ಒಪ್ಪಬೇಕೆಂದು ಅವನ ವಾದ. ಭೋಗವೆಂದರೆ ಆನಂದ, ರಜಸ್ಸು ಕರಗಿ, ತಮಸ್ಸು ನಿಷ್ಕ್ರಿಯವಾಗಿ, ಸತ್ತ್ವ ಉಕ್ಕುವುದೇ ಆನಂದಮೀಮಾಂಸೆ. ಇದು ತಾತ್ಕಾಲಿಕ, ಬ್ರಹ್ಮಾನಂದ ಶಾಶ್ವತ-ಇಷ್ಟೇ ಎರಡಕ್ಕೂ ಇರುವ ವ್ಯತ್ಯಾಸ.

ಈ ಮೂರೂ ಮೆಟ್ಟಲುಗಳನ್ನು ದಾಟಿ ಅಭಿನವಗುಪ್ತ ತನ್ನ ರಸಮೀಮಾಂಸೆಯನ್ನು ಮಂಡಿಸುತ್ತಾನೆ. ಭಟ್ಟನಾಯಕನ ತತ್ತ್ವವನ್ನೆಲ್ಲ ಪೂರ್ಣವಾಗಿ, ಅಂಗೀಕರಿಸಿದರೂ ಭಾವಕತ್ವ ಭೋಜಕತ್ವಗಳೆರಡರ ಕಾರ್ಯವೂ ಒಂದೇ 'ಧ್ವನಿ ಅಥವಾ ವ್ಯಂಜನಾವ್ಯಾಪಾರದಿಂದ ಸಿದ್ಧವಾಗುವುದನ್ನು ಬಿಡಿಸಿ ತೋರಿಸುತ್ತಾನೆ. ರಸ ಪ್ರತೀತಿ ಕೇವಲ ಕಾವ್ಯನಾಟಕಗಳ ವೈಲಕ್ಷಣ್ಯವೆಂದಮೇಲೆ ಒಂದು ಶಬ್ದಾರ್ಥಗಳ ಲೋಕೋತ್ತರ ವ್ಯಾಪಾರದಿಂದಲೇ ಎಲ್ಲವೂ ಸಿದ್ಧಿಸುವಾಗ ಎರಡರ ಅಗತ್ಯವೇನೆಂದು ಕೇಳುತ್ತಾನೆ. ಅಭಿನವಗುಪ್ತ ವಿವರಿಸುವಂತೆ ಪ್ರತಿಭಾ ಅಥವಾ ಭಾವನಾ ಶಕ್ತಿಯುಳ್ಳ ಕೆಲವು ಸಹೃದಯರಿಗೆ ಮಾತ್ರ ರಸಧ್ವನಿಯ ಅರಿವು ಶಕ್ಯ. ಇಷ್ಟೇ ಅಲ್ಲದೆ, ರಸ ಕಾರ್ಯವೂ ಅಲ್ಲ; ಅನುಮಿತವಾದ ಅಂಶವೂ ಅಲ್ಲ; ಕೇವಲ ಸ್ವಾನುಭವಸಿದ್ಧವಾದ ಚಿತ್ರವಿಶ್ರಾಂತಿಯ ಅವಸ್ಥೆಯೆನ್ನುವುದನ್ನು ಅಭಿನವಗುಪ್ತ ಮೊತ್ತಮೊದಲಿಗೆ ಸಾರಿ, ಪ್ರತ್ಯಭಿಜ್ಞಾದರ್ಶನದಂತೆ ಕಾವ್ಯದರ್ಶನದಲ್ಲಿಯೂ ತನ್ನ ಅಧಿಕಾರ ವಾಣಿಯನ್ನು ಸ್ಥಾಪಿಸಿದ್ದಾನೆ. ದರ್ಶನಶಾಸ್ತ್ರದಲ್ಲಿಯೂ ಅಷ್ಟೆ; ಕಾವ್ಯಶಾಸ್ತ್ರದಲ್ಲಿಯೂ ಅಷ್ಟೆ. ಅಭಿನವಗುಪ್ತನ ಅನಂತರ ಹತ್ತಾರು ಮಹಾಮೇಧಾವಿಗಳು ಗ್ರಂಥರಚನೆ ಮಾಡಿದರೂ ಇವನ ಮಾತನ್ನು ಕಡೆಯ ಮಾತೆಂದು ಮರುಮಾತಿಲ್ಲದೆ ಅಂಗೀಕರಿಸಿದರೇ ವಿನಾ, ಇದನ್ನು ಮತ್ತೆ ಪರಿಷ್ಕರಿಸುವ ಸಾಹಸಕ್ಕೆ ಕೈಹಾಕಲಿಲ್ಲ, ಭಾರತೀಯ ಚಿಂತನಶೀಲದಲ್ಲಿ ಅಭಿನವಗುಪ್ತನ ಸ್ಥಾನ ಎಷ್ಟು ಹೆಚ್ಚಿನದೆಂಬುದಕ್ಕೆ ಉತ್ತರಕಾಲೀನ ಲೇಖರ ಮೇಲೆ ಈತನ ಅನ್ಯಾದೃಶ ಪ್ರಭಾವವೇ ಸಾಕ್ಷಿ.

ಧ್ವನಿತತ್ತ್ವ ಭಟ್ಟನಾಯಕಾದಿಗಳಿಂದ ದೂಷಣೆಗೊಳಗಾದರೂ ಸಂಸ್ಕøತ ಅಲಂಕಾರ ಶಾಸ್ತ್ರದಲ್ಲಿ ಕಡೆಯ ತನಕ ತನ್ನ ಗೌರವವನ್ನುಳಿಸಿಕೊಂಡುದನ್ನು ಪರಿಭಾವಿಸಿದಲ್ಲಿ ಧ್ವನ್ಯಾಲೋಕಲೋಚನದ ಮಹತ್ತ್ವ ಸ್ಪಷ್ಟವಾಗುತ್ತದೆ. ವಸ್ತು, ಅಲಂಕಾರ, ರಸಗಳೆಂಬ ತ್ರಿವಿಧ ವ್ಯಂಗ್ಯಗಳನ್ನು ಆನಂದವರ್ಧನ ವಿಭಾಗಿಸಿ ತೋರಿಸಿದ್ದರೂ ಅವನ ಅಭಿಸಂಧಿಯೆಲ್ಲ ಮುಖ್ಯವಾಗಿ ರಸಧ್ವನಿಯ ಕಡೆಗೇ ಎಂದು ಸ್ಪಷ್ಟವಾಗಿ ಪ್ರತಿಪಾದಿಸಿದ ಯಶಸ್ಸು ಅಭಿನವಗುಪ್ತನದು. ಅಭಿಧಾ, ಲಕ್ಷಣಾ, ಇವು ಕಾವ್ಯ ಕಾವ್ಯೇತರ ಸಾಧರಣವಾದ ವ್ಯಾಪಾರಗಳೇ ಹೊರತು ವ್ಯಂಜನೆಯಂತೆ ಕಾವ್ಯಮಾತ್ರವಿಲಕ್ಷಣ ವ್ಯಾಪಾರಗಳಲ್ಲವೆಂದು ನಿರ್ಣಯಿಸಿದ್ದುದನ್ನು ಕಾವ್ಯಪ್ರಕ್ರಿಯೆಗಳಿಗೆಲ್ಲ ಅನ್ವಯಿಸಿ ಅಲಂಕಾರ, ಗುಣ, ರೀತಿ, ವೃತ್ತಿ, ದೋಷ, ಔಚಿತ್ಯ, ಮುಂತಾದ ಮಿಕ್ಕ ಪ್ರಕ್ರಿಯೆಗಳೊಡನೆ ಸರ್ವಸಮ್ಮತವಾಗುವಂಥ ಸಮನ್ವಯವನ್ನು ಕಲ್ಪಿಸಲು ನೆರೆವಾದುದು ಸಣ್ಣ ಕೆಲಸವಲ್ಲ. ಕಾವ್ಯದ ಆತ್ಮ ರಸಧ್ವನಿಯೇ ಎಂದು ಘೋಷಿಸಿದ ಅಭಿನವಗುಪ್ತ ಆನಂದವರ್ಧನನಿಗಿಂತ ಎಷ್ಟೋವೇಳೆ ಮುಂದೆಹೋಗಿ ಕಾವ್ಯಶರೀರವೇ ಸಿದ್ಧಿಸಲು ಉಚಿತಗುಣಾಲಂಕಾರಗಳ ಅಗತ್ಯವೆಷ್ಟೆಂಬುದನ್ನು ಸೋದಾಹರಣವಾಗಿ ತೊರಿಸಿದ್ದಾನೆ. ಎಲ್ಲಕಿಂತ ಹೆಚ್ಚಾಗಿ, ನಾಟ್ಯಶಾಸ್ತ್ರವಿವೃತಿಯಂತೆ ಲೋಚನದಲ್ಲೂ ಭಟ್ಟನಾಯಕಾದಿಗಳು ಧ್ವನಿವಾದದ ಮೇಲೆತ್ತಿದ ಆಕ್ಷೇಪಗಳಿಗೆ ಅಭಿನವಗುಪ್ತ ಸಮರ್ಪಕವಾದ ಉತ್ತರಗಳನ್ನಿತ್ತಿದ್ದಾನೆ. ತನ್ನ ರಸಿಕದೃಷ್ಟಿಗೆ ದ್ಯೋತಕವಾಗಿ ಮೂಲದ ಅರ್ಥವಿಕಾಸಕ್ಕೆ ಅನುಗುಣವಾದ ಹತ್ತಾರು ಸ್ವತಂತ್ರ ಉದಾಹರಣೆಗಳನ್ನಿತ್ತಿದ್ದಾನೆ. ಪ್ರಾಚೀನ ಲಾಕ್ಷಣಿಕರ ಅಭಿಪ್ರಾಯಗಳನ್ನೆಲ್ಲ ಸಮರ್ಥವಾಗಿ ಸಂಗ್ರಹಿಸಿದ್ದಾನೆ. ಹೀಗೆ ಧ್ವನ್ಯಾಲೋಕಲೋಚನ ಸಂಸ್ಕøತ ಅಲಂಕಾರಶಾಸ್ತ್ರದಲ್ಲಿ ಬರಿಯ ವ್ಯಾಖ್ಯಾ ಗ್ರಂಥವಾಗಿರದೆ ಪ್ರಮಾಣಗ್ರಂಥವೂ ಆಗಿದೆ.

ಶಂಕರಾಚಾರ್ಯ, ಪುಷ್ಪದಂತ, ಮುಂತಾದವರ ಸ್ತೋತ್ರಗಳಂತೆ ಅಭಿನವಗುಪ್ತ ರಚಿತಸ್ತೋತ್ರಗಳು ಕೂಡ ಭಾಷೆಯ ಸೌಭಾಗ್ಯ, ಭಾವದ ಲಾಲಿತ್ಯ, ಆಧ್ಯಾತ್ಮಿಕ ರಹಸ್ಯಗಳ ಪ್ರಕಟನೆಗಳ ಮೂಲಕ ಸಂಸ್ಕøತಸ್ತೋತ್ರಸಾಹಿತ್ಯದ ಸಂಪತ್ತನ್ನು ಹೆಚ್ಚಿಸಿವೆ.

ಇಂದು ಅನುಪಲಭ್ಯವಾದ ನೂರಾರು ಶಾಸ್ತ್ರ, ತಂತ್ರ, ಕಾವ್ಯ, ನಾಟಕಗಳನ್ನು ಅಭಿನವಗುಪ್ತ ಯಥೋಚಿತವಾಗಿ ಉದಾಹರಿಸುವುದನ್ನು ನೋಡಿದಾಗ ಅವನೇ ಒಬ್ಬ ವಿಶ್ವಕೋಶವಾಗಿದ್ದನೆಂಬ ಭಾವನೆ ಬಾರದಿರಲಾರದು. ಮಿಕ್ಕ ಕೆಲವು ವ್ಯಾಖ್ಯಾಕಾರರಂತೆ ಒಮ್ಮೆಯೂ ಆತ ಕಣ್ಣಾರೆ ನೋಡದ ಗ್ರಂಥದಿಂದ ಅವತರಣಿಕೆಯನ್ನು ಎತ್ತುವುದಿಲ್ಲ. ಸಂಸ್ಕøತ ಕವಿಕಾವ್ಯಪರಿಚಯಕ್ಕೂ ಅಭಿನವಗುಪ್ತನ ಗ್ರಂಥಾಧ್ಯಯನದಿಂದ ಎಷ್ಟೋ ನೆರವಾಗುತ್ತದೆ.

(ಕೆ.ಕೆ.)