ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಭ್ರಕ
ಅಭ್ರಕ ಒಂದು ಬಗೆಯ ಖನಿಜ. ರೂಢಿಯ ಹೆಸರು ಕಾಗೆಬಂಗಾರ. ಜ್ವಾಲಾಮುಖಿಯ ಶಿಲಾಪ್ರವಾಹದ ಮೂಲಕ ಉತ್ಪನ್ನವಾಗಿ ಅದೇ ಮೂಲದ ಶಿಲೆಗಳಲ್ಲಿ ಅಥವಾ ಸ್ವತಂತ್ರವಾಗಿ ಪದರಗಳ ರೂಪದಲ್ಲಿ ದೊರೆಯುತ್ತದೆ. ರಾಸಾಯನಿಕವಾಗಿ ಇದರಲ್ಲಿ ಎರಡುವಿಧ: ಪೊಟಾಷ್ ಅಭ್ರಕ ಅಥವಾ ಶ್ವೇತ ಆಭ್ರಕ; ಮಸ್ಕೊವೈಟ್-[ಊ2ಏಂಟ2(Siಔ4) 3]; ಫೆರ್ರೊಮ್ಯಾಗ್ನೀಷಿಯಂ ಅಭ್ರಕ ಅಥವಾ ಶ್ಯಾಮ ಅಭ್ರಕ-[ಏ2ಊಒg6ಂಟ3(Siಔ4ಂ)6]. ಅಭ್ರಕದ ವಿವಿಧ ಬಗೆಗಳ ಒಟ್ಟು ಹೆಸರು ಅಭ್ರಕವರ್ಗ, ಮಸ್ಕೊವೈಟ್, ಪರಾಗೊನೈಟ್, ಲೆಪಿಡೊಲೈಟ್, ಜಿನ್ ವಾಲ್ಡೈಡ್, ಬಯೊಟೈಟ್ ಮತ್ತು ಫ್ಲಾಗೊಪೈಟ್ ಅಭ್ರಕವರ್ಗದ ಮುಖ್ಯ ವಿಭಾಗಗಳು. ಮಸ್ಕೊವೈಟ್ (ಬಿಳಿ ಅಥವಾ ತಿಳಿಹಸಿರು ಅಥವಾ ತಿಳಿಗೆಂಪು), ಲೆಪಿಡೊಲೈಟ್ (ಲಿಥಿಯಂ ಅಭ್ರಕ, ಊದಾ) ಫ್ಲಾಗೊಸೈಟ್ (ಮ್ಯಾಗ್ನಿಷಿಯಂ ಅಭ್ರಕ, ಎಣ್ಣೆಗೆಂಪು ಮತ್ತು ಬಯೊಟೈಟ್, ಕಪ್ಪು)-ಇವೆಲ್ಲವೂ ಮಾನೊಕ್ಲಿನಿಕ್ ಹರಳುವರ್ಗಕ್ಕೆ ಸೇರಿವೆ. ಹೊರ ಆಕಾರದಲ್ಲಿ ಫಲಕಾಕೃತಿ, ಪುಸ್ತಕಾಕೃತಿ ಮತ್ತು ತೆಳುವಾದ ರೇಕುಗಳ ಮುದ್ದೆ ಯಾಕೃತಿಗಳಲ್ಲಿ ಇವನ್ನು ಕಾಣಬಹುದು. ಇವುಗಳ ತೆಳುವರ್ಣರಹಿತ ಪೊರೆಗಳನ್ನು ಕಷ್ಟವಿಲ್ಲದೆ ಒರೆಗಲ್ಲಿನ ಮೇಲೆ ಉಜ್ಜಬಹುದು. ಒರೆ ವರ್ಣರಹಿತ. ಇಲ್ಲವೆ ಬಿಳಿಗಾಜು, ಮತ್ತು ಅಥವಾ ರೇಷ್ಮೆಯಂತೆ ಹೊಳೆಪು; ಮಿತ ಪಾರದರ್ಶಕ, ಉತ್ತಮ ಬಗೆಯ ಸೀಳುಗಳಿರುವ ಕಾರಣ ಇವನ್ನು ಪುಸ್ತಕದಲ್ಲಿನ ಹಾಳೆಗಳಂತೆ ಸುಲಭವಾಗಿ ಬಿಡಿಸಬಹುದು. ಮಸ್ಕೊವೈಟ್ ಅಥವಾ ಫ್ಲಾಗೊಸೈಟ್ ಅಭ್ರಕದ ರೇಕುಗಳು 1"/1000 ಅಥವಾ ಒಂದು ಮಿಲಿಮೀಟರಿನಷ್ಟು ತೆಳು. ಹೀಗೆ ಬಿಡಿಸಿದ ತೆಳುರೇಕುಗಳು ಮುರಿಯದೆ ಯಾವ ಆಕಾರಕ್ಕೆ ಬೇಕಾದರೂ ಬಾಗುತ್ತವೆ. ಉತ್ತಮ ಸ್ಥಿತಿಸ್ಥಾಪಕಶಕ್ತಿಯನ್ನು ಹೊಂದಿದ್ದು ತಮ್ಮ ಮೊದಲಿನ ಆಕಾರವನ್ನು ಎಳ್ಳನಿತೂ ಕೆಡಿಸಿಕೊಳ್ಳವುದಿಲ್ಲ. ಬಿಗುಪು ಉತ್ತಮ ದರ್ಜೆಯದು. ಇವುಗಳ ಕಾಠಿಣ್ಯ 2-2.5 ಅಂದರೆ ಉಗುರಿನಿಂದ ಖನಿಜವನ್ನು ಗೀರಬಹುದು. ಸಾಪೇಕ್ಷಸಾಂದ್ರತೆ 2-76-3.
ರಾಸಾಯನಿಕಸಂಯೋಜನೆಯಲ್ಲಿ ಅಭ್ರಕಗಳನ್ನು ಅರ್ಥೊಸಿಲಿಕೇಟ್‍ಗಳೆಂದೂ ಪರಮಾಣುರಚನೆಗನುಗುಣವಾಗಿ ಹಾಳೆ (ಶೀಟ್) ಸಿಲಿಕೇಟ್‍ಗಳೆಂದೂ ನಿರ್ಣಯಿಸಲಾಗಿದೆ. ಇವುಗಳಲ್ಲಿ ಮುಖ್ಯವಾಗಿ ಅಲ್ಯೂಮಿನಿಯಂ, ಪೊಟ್ಯಾಸಿಯಂ ಮತ್ತು ಜಲ ಜನಕ ಧಾತುಗಲೂ ಅನೇಕ ವೇಳೆ ಮೆಗ್ನೀಸಿಯಂ ಮತ್ತು ಫೆರ್ರಸ್ ಕಬ್ಬಿಣ, ಕೆಲವು ವೇಳೆ ಫೆರ್ರಿಕ್ ಕಬ್ಬಿಣ, ಸೋಡಿಯಂ, ಲಿಥಿಯಂ, ರುಬಡಿಯಂ ಮತ್ತು ಸೀಸಿಯಂ ಧಾತುಗಳೂ ಅಪೂರ್ವವಾಗಿ ಬೇರಿಯಂ, ಮ್ಯಾಂಗನಿಸ್, ಕ್ರೋಮಿಯಂ, ಕ್ಲೋರಿನ್ ಮತ್ತು ಟೈಟೀನಿಯಂ ಸಹ ಅಲ್ಪ ಪ್ರಮಾಣದಲ್ಲಿ ಕಂಡುಬರುತ್ತವೆ.
ಉತ್ತಮ ವಿದ್ಯುನ್ನಿರೋಧಕ ಮತ್ತು ಶಾಖನಿರೋಧಕಶಕ್ತಿ ಇವುಗಳ ವಿಶೇಷಗುಣ, ರಾಸಾಯನಿಕದ್ರಾವಕಗಳು ಅಭ್ರಕಗಳನ್ನು ಸುಲಭವಾಗಿ ಕರಗಿಸಲಾರವು. ಅಲ್ಲದೆ ಹೆಚ್ಚಿನ ಉಷ್ಣಕ್ಕೆ ಒಡ್ಡಿದಾಗ ಇವು ಸುಲಭವಾಗಿ ಕರಗುವುದೂ ಇಲ್ಲ.
ಅಭ್ರಕಗಳನ್ನು ಬಹುಮಟ್ಟಿಗೆ ಗ್ರಾನೈಟ್, ಸಯನೈಟ್ ಮತ್ತು ಪೆಗ್ಮಟೈಟ್ ಮುಂತಾದ ಅಗ್ನಿಶಿಲೆಗಳಲ್ಲೂ ರೂಪಾಂತರಿತಶಿಲೆಗಳಾದ ನೈಸ್ (ಪಟ್ಟೆಶಿಲೆ) ಮತ್ತು ಷಿಸ್ಟ್‍ಗಳಲ್ಲೂ (ಪದರಶಿಲೆ) ಕಾಣಬಹುದು. ಅಲ್ಲದೆ ಜಲಜಶಿಲೆಗಳಾದ ಮರಳು ಶಿಲೆಗಳಲ್ಲಿ ಸಾಮಾನ್ಯವಾಗಿ ಶ್ವೇತಾಭ್ರಕದ ಸಣ್ಣ ಸಣ್ಣ ರೇಕುಗಳನ್ನು ಕಾಣಬಹುದು. ಈ ಬಗೆಯ ಅನುಷಂಗಿಕ ಶಿಲೆಗಳಲ್ಲಿ ಕೃಷ್ಣಾಭ್ರಕ ಕಾಣುವುದೇ ಅಪೂರ್ವ.
ಅಭ್ರಕದ ಗಣಿಗಳು ಅಗ್ನಿಶಿಲೆಗಳಾದ ಪೆಗ್ಮಟೈಟ್ ಒಡ್ಡುಗಳಲ್ಲಿ ಕಂಡುಬರುತ್ತವೆ. ಈ ಶಿಲೆ ಕ್ವಾಟ್ರ್ಸ್ ಮತ್ತು ಫೆಲ್ಡ್ ಸ್ಪಾರ್ ಬಹು ದಪ್ಪ ದಪ್ಪ ಕಣಗಳಿಂದಾದುದು. ಈ ಖನಿಜಗಳ ನಡುವೆ ಅಲ್ಲಲ್ಲಿ ಅಭ್ರಕದ ಗುಚ್ಛಗಳನ್ನು ನೋಡಬಹುದು. ಹಲವುಬಾರಿ ಅಭ್ರಕ ದೊಡ್ಡ ಪುಸ್ತಕಗಳಂತೆ ಹುದುಗಿರುವುದೂ ಉಂಟು. ಪೆಗ್ಮಟೈಟ್‍ಗಳಲ್ಲಿ ಸಾಮಾನ್ಯವಾಗಿ ಮಸ್ಕೊವಯಟ್ ಮತ್ತು ಲೆಪಿಡೊಲೈಟ್ ಅಭ್ರಕಗಳಿಸುತ್ತವೆ. ಹಲವು ವೇಳೆ ಮಾನಜೈಟ್, ಪಿಚ್ ಬ್ಲೆಂಡ್, ಟೂರ್ಮಲೀನ್, ಗಾರ್ನೆಟ್ ಮಾನeóÉೈಟ್, ಟೂರ್ಮಲೀನ್, ಗಾರ್ನೆಟ್ ಅಪಟೈಟ್, ಬೆರಿಲ್, ಕೊಲಂಬೈಟ್-ಟ್ಯಾಂಟಲೈಟ್, ಈ ಮೊದಲಾದ ಖನಿಜಗಳನ್ನೂ ನೋಡಬಹುದು. ಬಯೊಟೈಟ್ ರೂಪಾಂತರವರ್ಗದ ಪದರ ಶಿಲೆಗಳಲ್ಲಿ ಕಂಡುಬರುತ್ತದೆ.
ಅಭ್ರಕ ದೊರೆಯುವ ಅನೇಕ ಪೆಗ್ಮಟೈಟ್ ಒಡ್ಡುಗಳಲ್ಲಿ ಒಂದು ಬಗೆಯ ವಲಯಾಕಾರದ ವಿನ್ಯಾಸವನ್ನು ಗುರುತಿಸುವುದು ಸಾಧ್ಯ. ಕೇಂದ್ರಭಾಗದಲ್ಲಿ ಕ್ವಾಟ್ರ್ಸ್ ಇದ್ದು ಅದರ ಅಕ್ಕಪಕ್ಕ ಫೆಲ್ಡ್ ಸ್ಪಾರ್ ಇರುತ್ತದೆ. ಇವೆರಡರ ಅಥವಾ ಫೆಲ್ಡ್ ಸ್ಪಾರ್ ಮತ್ತು ನಾಡಶಿಲೆಯ ಮಧ್ಯೆ ಅಭ್ರಕ ಶೇಖರವಾಗುತ್ತದೆ. ಫ್ಲಾಗೋ ಪೈಟ್ ಪೈರಾಕ್ಸೀನ್ ಪೆಗ್ಮಟೈಟ್ ಮೊದಲಾದ ಪ್ರತ್ಯಾಸಮ್ಲೀಯ ಒಡ್ಡುಶಿಲೆಗಳಲ್ಲೂ ಮೆಗ್ನೀಷಿಯಂ ಸುಣ್ಣಶಿಲೆ ಅಥವಾ ಡಾಲೊಮೈಟ್‍ಗಳಲ್ಲೂ ದೊರೆಯುತ್ತದೆ. ಪೆಗ್ಮಟೈಟ್ ಒಡ್ಡುಶಿಲೆಗಳಲ್ಲಿ ಕಾವುನೀರಿನ (ಹೈಡ್ರೊಥರ್ಮಲ್) ಕಾರ್ಯಾಚರಣೆಯಿಂದ ಅಭ್ರಕ ಉಂಟಾಗಿರುವ ಸ್ಪಷ್ಟ ಕುರುಹುಗಳನ್ನು ಕಾಣಬಹುದು.
ಭಾರತ ಮತ್ತು ಬ್ರೆಜಿûಲ್ ಅಭ್ರಕ ಹೆಚ್ಚಾಗಿ ದೊರೆಯುವ ಸ್ಥಳಗಳು. ಪ್ರಪಂಚದ ಅಭ್ರಕದ ಮಾರುಕಟ್ಟೆಯಲ್ಲಿ ಭಾರತದ ಸ್ಥಾನ ಬಹು ಪ್ರಮುಖ. ಒಟ್ಟು ಬೇಡಿಕೆಯ ಸುಮಾರು 80ರಷ್ಟು ಭಾಗವನ್ನು ಭಾರತವೇ ಒದಗಿಸುತ್ತದೆ. ಮಸ್ಕೊವೈಟ್ ಅಭ್ರಕ ಆಂಧ್ರಪ್ರದೇಶ, ಬಿಹಾರ್, ಬಂಗಾಳ, ಮೈಸೂರು, ಮಧ್ಯಪ್ರದೇಶ, ಒರಿಸ್ಸ ಮತ್ತು ರಾಜಾಸ್ಥಾನಗಳಲ್ಲಿ ದೊರೆಯುತ್ತದೆ. ಫ್ಲಾಗೊಪೈಟ್ ಕೇರಳದ ಕ್ವಿಲಾನ್ ಜಿಲ್ಲೆ. ಆಂಧ್ರದ ವಿಶಾಖಪಟ್ಟಣ ಮತ್ತು ಮದ್ರಾಸಿನ ಕೊಯಮತ್ತೂರು ಜಿಲ್ಲೆಗಳಿಗೂ ಲೆಪಿಡೊಲೈಟ್ ರಾಜಾಸ್ಥಾನ ಮತ್ತು ಬಿಹಾರ ಪ್ರಾಂತಗಳೂ ಸೀಮಿತವಾಗಿವೆ.
ನಮ್ಮ ದೇಶದ ಉತ್ಪನ್ನದ ಬಹುಭಾಗ ಬಿಹಾರ್, ರಾಜಾಸ್ಥಾನ ಮತ್ತು ಆಂಧ್ರಪ್ರದೇಶಗಳಿಂದ ಬರುತ್ತಿವೆ. ಇವುಗಳಲ್ಲಿ ಬಹು ಹೆಸರುವಾಸಿಯೆನಿಸಿದ ಬಿಹಾರಿನ ಅಭ್ರಕದ ಜಾಡು ಸುಮಾರು 20 ಮೈ. ಅಗಲವಿದ್ದು ಸುಮಾರು 90 ಮೈ. ಉದ್ದಕ್ಕೂ ಹರಡಿದೆ. ಇದು ಗಯಾ ಜಿಲ್ಲೆಯಲ್ಲಿ ಪ್ರಾರಂಭವಾಗಿ ಹಜಾರಿಬಾಗ್ ಮತ್ತು ಮಾಂಘೀರ್ ಜಿಲ್ಲೆಗಳಲ್ಲಿ ಹಾದು ಭಾಗಲ್ಪುರ ಜಿಲ್ಲೆಯಲ್ಲಿ ಕೊನೆಮುಟ್ಟುತ್ತದೆ. ದೇಶದ ಅತ್ಯುತ್ತಮ ಮಸ್ಕೊವೈಟ್ ಗಣಿಗಳನ್ನು ಕೋಡರ್ಮ, ಗವಾನ್ ಮತ್ತುಪರ್ಸಬಾದ್ ಸುತ್ತಮುತ್ತ ನೋಡಬಹುದು. ಒಟ್ಟು ಉತ್ಪನ್ನದ ಸುಮಾರುಅರ್ಧದಷ್ಟನ್ನು ಇವು ಪೂರೈಸುತ್ತವೆ. ಈ ಅಭ್ರಕ ತಿಳಿಗೆಂಪು ಛಾಯೆಯಿಂದ ಕೂಡಿದ್ದು ಯಾವ ಲೋಪದೋಷಗಳಿಲ್ಲದೆ ಉತ್ತಮ ಪಾರದರ್ಶಕವಾದ ಹಾಳೆಗಳೋ ಪಾದಿಯಲ್ಲಿದೆ. ಇದರ ಹೆಸರು ರೂಬಿಮೈಕ. ರಾಜಾಸ್ಥಾನದಲ್ಲಿ ಅಭ್ರಕವನ್ನು ಹೊಂದಿರುವ ಪೆಗ್ಮಟೈಟ್‍ಗಳ ಜಾಡು 60 ಮೈ. ಅಗಲ 200 ಮೈ. ಉದ್ದವಾಗಿದ್ದು ಜೈಪುರದಿಂದ ಉದಯಪುರದವರೆಗೂ ವಿಸ್ತರಿಸಿದೆ. ಭಿಲ್ವಾರ, ಟೋಂಕ್, ಅಜ್ಮೀರ್, ಜೈಪುರ ಮತ್ತು ಉದಯಪುರ ಜಿಲ್ಲೆಗಳಲ್ಲಿ ಅಭ್ರಕದ ಗಣಿಗಳಿವೆ. ಇವುಗಳಲ್ಲಿ ದೊರೆಯುವ ಕೆಂಪು ಮತ್ತು ಹಸಿರು ಛಾಯೆಯಿಂದ ಕೂಡಿದ ಅಭ್ರಕ ಬಿಹಾರಿನದರಷ್ಟು ಉತ್ತಮವಲ್ಲ.
ಆಂಧ್ರಪ್ರದೇಶದ ಅಭ್ರಕದ ಜಾಡು ಗೂಡುರು ಮತ್ತು ಸಂಗಂ ನಡುವೆ 60 ಮೈ. ಹರಡಿದ್ದು 8-10 ಮೈ. ಅಗಲವಾಗಿದೆ. ಅದರಲ್ಲೂ ಗೂಡೂರು ಮತ್ತು ನೆಲ್ಲೂರು ಅಭ್ರಕದ ಗಣಿಗಳಿಗೆ ಬಹು ಪ್ರಸಿದ್ಧ. ಇಲ್ಲಿ ದೊರೆಯುವ ಅಭ್ರಕ ಬಹುಮಟ್ಟಿಗೆ ಹಸಿರು ಛಾಯೆಯದು.
ಅಭ್ರಕದ ಬೆಲೆ ಅದರ ಗುಣಗಳನ್ನು ಅವಲಂಬಿಸಿದೆ. ಯಾವಬಗೆಯ ಲೋಪ ದೋಷಗಳಿಲ್ಲದೆಯೂ ಬಿರುಕುಗಳಿಲ್ಲದೆಯೂ ಸಾಧ್ಯವಾದಷ್ಟು ಅಗಲವಾಗಿಯೂ ಇದಲ್ಲಿ ಬೆಲೆ ಹೆಚ್ಚು. ಹೀಗಾಗಿ ಶಿಲೆಯಲ್ಲಿ ಹುದುಗಿರುವ ಅಭ್ರಕವನ್ನು ಬಹು ಜಾಗರೂಕತೆಯಿಂದ ಬಿಡಿಸಬೇಕು. ಪುಸ್ತಕಗಳೊಪಾದಿಯಲ್ಲಿರುವ ಅಭ್ರಕ 6"-12" ಅಗಲವಿದ್ದು 3"-4" ಮಂದವಾಗಿದ್ದು ಅಸಂಖ್ಯಾತ ತೆಳುಪೊರೆಗಳಿಂದ ಕೂಡಿರುತ್ತದೆ. ಮೊದಲು ಈ ಪುಸ್ತಕಗಳಿಂದ ಹಾಳೆಗಳನ್ನು ಬಿಡಿಸಿ ಒಪ್ಪಮಾಡುತ್ತಾರೆ. ಬಿಹಾರಿನಲ್ಲಿ ಇದಕ್ಕೆ ಕುಡುಗೋಲನ್ನು ಉಪಯೋಗಿಸುವ ಕಾರಣ ಅಲ್ಲಿನ ಅಭ್ರಕವನ್ನು ಕುಡುಗೋಲಿನಿಂದ ಒಪ್ಪಮಾಡಿದ ಅಭ್ರಕವೆಂದೂ (ಸಿಕಲ್ ಟ್ರಿಮ್ಡ್ ಮೈಕ), ಆಂಧ್ರ ಪ್ರದೇಶದಲ್ಲಿ ಚಾಕು ಅಥವಾ ಕತ್ತರಿಯನ್ನು ಉಪಯೋಗಿಸುವುದರಿಂದ ಅಲಗಿನಿಂದ ಒಪ್ಪುಮಾಡಿದ ಅಭ್ರಕವೆಂದೂ (ಷಿಯರ್ ಟ್ರಿಮ್ಡ್ ಮೈಕ) ಕರೆದಿದ್ದಾರೆ. ಹೀಗೆ ಒಪ್ಪಮಾಡಿದ ಅಭ್ರಕವನ್ನು ಹಾಳೆ ಅಭ್ರಕ (ಷೀಟ್ ಮೈಕ) ಅಥವಾ ಚದರ ಅಭ್ರಕ (ಬ್ಲಾಕ್ ಮೈಕ) ಎನ್ನುತ್ತಾರೆ. ಅನಂತರ ಖನಿಜದ ಬಣ್ಣ ಮತ್ತು ಉದ್ದಗಲವನ್ನು ಅನುಸರಿಸಿ ಪೊರೆಗಳು (ಫಿಲ್ಮ್ ಸ್) ಚೂರುಗಳು (ಸ್ಪ್ಲಿಟಿಂಗ್ಸ್), ಪಂಚ್, ವೃತ್ತ ಮತ್ತು ವಾಷರ್ ಎಂದು ವಿವಿಧದರ್ಜೆಗಳನ್ನಾಗಿ ವಿಂಗಡಿಸುತ್ತಾರೆ.
ಒಪ್ಪಮಾಡಿ ವಿಂಗಡಿಸುವ ಕೆಲಸದಲ್ಲಿ ಬಿಹಾರಿನ ಗಣಿಯ ಕೆಲಸಗಾರರು ಬಹು ನಿಷ್ಣಾತರು. ಅವರಿಗೆ ಈ ಕೆಲಸ ಬಹುಕಾಲದಿಂದ ಒಂದು ಕಲೆಯಾಗಿ ಪರಿಣಮಿಸಿದೆ. ಇಂದಿಗೂ ಅನೇಕ ದೇಶಗಳು ಈ ಕಾರ್ಯಕ್ಕಾಗಿ ಅಭ್ರಕವನ್ನು ನಮ್ಮ ದೇಶಕ್ಕೆ ರಫ್ತು ಮಾಡುವುದುಂಟು.
ಉಪಯೋಗಗಳು : ಬಿಳಿಯ ಅಭ್ರಕವನ್ನು ಮುಖ್ಯವಾಗಿ ವಿದ್ಯುಚ್ಛಕ್ತಿಯ ಸಲಕರಣೆಗಳ ತಯಾರಿಕೆಯಲ್ಲಿ ವಿದ್ಯುತ್ ನಿರೋಧಕವಸ್ತುವಾಗಿ ಬಳಸುತ್ತಾರೆ. ಡೈನಮೊ, ಮೋಟಾರ್, ಕೃತಕ ಅಯಸ್ಕಾಂತಗಳು. ವೈರ್ ಲೆಸ್ ಉಪಕರಣಗಳು ಫ್ಯೂಸ್ ಪೆಟ್ಟಿಗೆಗಳು, ಸ್ಪಾರ್ಕ್‍ಪ್ಲಗ್, ರೇಡಿಯೋ, ರೆಡಾರ್, ಟೆಲಿವಿಷನ್ ಮತ್ತು ಟೆಲಿಫೋನ್‍ಗಳ ತಯಾರಿಕೆಗೆ ಅಭ್ರಕ ಅತ್ಯವಶ್ಯ. ಸ್ವಚ್ಛವಾದ ಗಾಜಿನಂತಿರುವ ಮಸ್ಕೊವೈಟ್ ಅಭ್ರಕದ ಅಗಲವಾದ ಹಾಳೆಗಳನ್ನು ವಿದ್ಯುದೊಲೆಗಳು, ಚಿಮಣಿಗಳು, ಕಲುಮೆಗಳು ವಿಶೇಷರೀತಿಯ ಕನ್ನಡಕಗಳು, ಟೋಸ್ಟರ್ ಮತ್ತು ವಿದ್ಯುತ್ ಕಾವಲಿಗಳಲ್ಲಿ ಉಪಯೋಗಿಸುತ್ತಾರೆ.
ಅಭ್ರಕದ ಸಣ್ಣ ಸಣ್ಣ ಚೂರುಗಳಿಂದ ಮೈಕನೈಟ್, ಮೈಕಾಬಟ್ಟೆ ಮತ್ತು ಮೈಕಾಟೇಪುಗಲನ್ನು ತಯಾರಿಸುತ್ತಾರೆ. ಪುಡಿ ಅಭ್ರಕದಿಂದ ಹಗುರವಾದ ಶಾಖನಿರೋಧಕ ಇಟ್ಟಿಗೆಗಳು, ದ್ರವಬಣ್ಣಗಳು, ವಿಶೇಷ ರೀತಿಯ ಕಾಗದ, ರಬ್ಬರ್ ಮತ್ತು ಪ್ಲಾಸ್ಟಿಕ್ ವಸ್ತುಗಳು ಮತ್ತು ಎರೆಗಳನ್ನು (ಲ್ಯೂಬ್ರಿಕೆಂಟ್ಸ್) ತಯಾರಿಸುತ್ತಾರೆ. ಅಭ್ರಕಭಸ್ಮ, ಅಭ್ರಕಚೂರ್ಣ-ಇವನ್ನು ಹಲವು ಬಗೆಯ ಆಯುರ್ವೇದ ಮತ್ತು ಯುನಾನಿ ಔಷಧಗಳಲ್ಲಿ ಉಪಯೋಗಿಸುವುದುಂಟು. ಲೆಪಿಡೊಲೈಟ್ ಅಭ್ರಕ ಲಿಥಿಯಂ ಖನಿಜದ ಮುಖ್ಯವಾದ ಅದುರುಗಳಲ್ಲೊಂದು. ಲಿಥಿಯಂ ಲೋಹ ಪಡೆಯಲು ಮತ್ತು ಗಾಜು, ಪಿಂಗಾಣಿ ಮತ್ತು ಎನ್ಯಾಮಲ್ ವಸ್ತುಗಳ ತಯಾರಿಕೆಯಲ್ಲಿ ಇದರ ಮುಖ್ಯ ಉಪಯೋಗವುಂಟು. ಈಚೆಗೆ ಇದನ್ನು ಅಣುಶಕ್ತಿಯ ಖನಿಜವಾಗಿ ಬಳಸುತ್ತಿದ್ದಾರೆ. (ಬಿ.ವಿ.ಜಿ.; ಕೆ.ಎಸ್.ಕೆ.)