ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಮೃತ ಶೇರ್ಗಿಲ್

ವಿಕಿಸೋರ್ಸ್ದಿಂದ

ಅಮೃತ ಶೇರ್‍ಗಿಲ್ ಭಾರತೀಯ ಚಿತ್ರಕಲಾವಿದರಲ್ಲಿ ಖ್ಯಾತಳು (1913-1941). ತಂದೆ ಸಿಖ್ ಪಂಗಡದವ. ತಾಯಿ ಹಂಗೇರಿಯಾಕೆ. ಬಾಲ್ಯ ಯೂರೋಪಿನಲ್ಲಿ ಕಳೆಯಿತು; 1921ರ ವರೆಗೆ ತಾಯ್ನಾಡಿಗೆ ಬರಲಾಗಲಿಲ್ಲ. ಜೀವನದ ಮೇಲೆ ತಂದೆಯ ಪ್ರಭಾವ ಬಹಳ. ಆದರೂ ತಾನು ಭಾರತೀಯಳೆಂಬ ಪ್ರಜ್ಞೆ ಅವಳಿಂದ ದೂರವಾಗಲಿಲ್ಲ. ಅವಳ ಚಿತ್ರಕಲಾ ಪ್ರತಿಭೆಗೆ ಮನೆಯಲ್ಲಿ ತಾಯಿಯ ಪ್ರೋತ್ಸಾಹ ಸಿಕ್ಕಿತು. ಅನಂತರ 1924ರಲ್ಲಿ ಫ್ಲಾರೆನ್ಸಿನಲ್ಲಿ ಇಟಲಿ ಕಲಾವಿದೆಯಿಂದ ಚಿತ್ರಕಲಾಭ್ಯಾಸವಾಯಿತು. ಆಮೇಲೆ 5 ವರ್ಷ ಪ್ಯಾರಿಸ್ಸಿನಲ್ಲಿ ತರಬೇತಿ ಮುಂದುವರಿಯಿತು. 1929ರಲ್ಲಿ ಅಲ್ಲಿಯೇ ತೈಲಚಿತ್ರ ಬರೆವ ಶಿಕ್ಷಣ ದೊರೆಯಿತು. 1929-31ರ ವರೆಗೆ ಭಾವಚಿತ್ರ ಮತ್ತು ನಿರ್ಜೀವ ವಸ್ತುಚಿತ್ರಣಕ್ಕಾಗಿ ಅನೇಕ ಪ್ರಥಮ ಬಹುಮಾನಗಳನ್ನು ಗಳಿಸಿದಳು.

ಯೂರೋಪಿನ ಸೆಝಾನ್ ಮತ್ತು ಗೋಗಾಂರ ಚಿತ್ರಕಲಾಪ್ರೌಢಿಮೆಯ ಪ್ರಭಾವ ಈಕೆಯ ಕಲಾಭಾವನೆಯನ್ನು ವೃದ್ಧಿಗೊಳಿಸಿತು. ಪರಿಣಾಮವಾಗಿ ಚಿತ್ರಕಲೆಯಲ್ಲಿ ತನ್ನದೇ ಆದ ವೈಶಿಷ್ಟ್ಯ ತೋರಿದಳು. ಕ್ರಿ.ಶ. 1934ರಲ್ಲಿ ತಾಯ್ನಾಡಿನ ಹಂಬಲದಿಂದ ಭಾರತಕ್ಕೆ ಬಂದು ಪಂಜಾಬ್ ದೇಶವನ್ನು ಸುತ್ತಿದಳು. ಮೊದಲಬಾರಿಯೆಂಬಂತೆ ಆಕೆ ಹಿಂದೂದೇಶದ ಹಳ್ಳಿಗಳನ್ನು ಕಂಡಳು. ಅನಂತವಾಗಿ ಹರಡಿದ ಭೂವಿಸ್ತಾರ, ಅದರ ಮೇಲೆ ಸಂಚರಿಸುವ ಕಂದುಮೈಗಳ ದೀನ ಮುಖಗಳ ಸ್ತ್ರೀ ಪುರುಷರು, ದಿಗಂತಕ್ಕೆ ಎದುರಾಗಿ ಕಪ್ಪು ಆಕೃತಿಗಳನ್ನು ಪಡೆವುದನ್ನು ಕಂಡಳು. ಭಾರತೀಯರನ್ನು ಅದರಲ್ಲೂ ಬಡ ಭಾರತೀಯರನ್ನು-ಚಿತ್ರಿಸುವ ಹಂಬಲವಾಯಿತು. ಅವರ ಮೌನ ಆಕೃತಿಗಳು, ಅವರ ಅಸಾಮಾನ್ಯ ಪರವಶತೆ ಮತ್ತು ತಾಳ್ಮೆ, ಅವರ ಎಲುಬಿನ ಮೊನೆ ಕಾಣುವ ಕಂದುಬಣ್ಣದ ದೇಹಗಳು, ಆ ಕುರೂಪತೆಯಲ್ಲೂ ಎದ್ದು ಕಾಣುವ ಸೌಂದರ್ಯ, ಅವರ ದುಃಖಭರಿತ ಕಣ್ಣುಗಳು-ಇವೆಲ್ಲವನ್ನೂ ಚಿತ್ರಿಸುವ ಸ್ಫೂರ್ತಿ ಬಂತು. 1934-1937ರ ವರೆಗೆ ಆಕೆ ಗುಡ್ಡಪ್ರದೇಶದ ಪುರುಷರು, ಗುಡ್ಡ ಪ್ರದೇಶದ ಸ್ತ್ರೀಯರು, ಬಾಲಿಕಾ ಪತ್ನಿ, ಮೂರು ಹುಡುಗಿಯರು, ಮದುಮಗಳ ಶೃಂಗಾರ, ಬ್ರಹ್ಮಚಾರಿಗಳು ಮತ್ತು ದಕ್ಷಿಣ ಹಿಂದೂದೇಶದ ಹಳ್ಳಿಜನರು ಸಂತೆಗೆ ಹೋಗುವುದು ಮುಂತಾದ ಚಿತ್ರಗಳನ್ನು ಪ್ರಾದೇಶಿಕ ವಿವರ ಮತ್ತು ವಾತಾವರಣಗಳೊಂದಿಗೆ ಚಿತ್ರಿಸಿದಳು. ಆ ಸಮಯದಲ್ಲಿ ಇಂಥ ದೃಶ್ಯಗಳನ್ನು ಆಧುನಿಕ ಚಿತ್ರ ಕಲೆಯಲ್ಲಿ ಕಾಣುವುದು ಹೊಸತಾಗಿತ್ತು. 1936ರಲ್ಲಿ ಅಜಂತ ಗುಹೆಗಳಲ್ಲಿ ಸಂಚರಿಸಿ ಆ ಚಿತ್ರಪದ್ಧತಿಯನ್ನು ಕಂಡು ಭಾರತೀಯರ ಅಂತರ್ಯವನ್ನು ಇನ್ನೂ ಆಳವಾಗಿ ತಿಳಿದಳು. 1938-1941ರಲ್ಲಿ ಅವಳು ಚಿತ್ರಿಸಿದ ಕಲೆಯಲ್ಲಿ ಆಕೆಯ ಮನೋಭಾವದ ಬದಲಾವಣೆ ಕಂಡುಬರುತ್ತದೆ. ಆಕೆಯ ಚಿತ್ರಕಲೆಯನ್ನು ಭಾರತದೇಶದ ನವ್ಯ ಪಂಥದವರು ಒಪ್ಪಲಿಲ್ಲ. ಅವರ ಮನೋವೃತ್ತಿಯ ಫಲವಾಗಿ ಚಿತ್ರಕಲೆಯಲ್ಲಿ ಆಕೆಗಿದ್ದ ಆಸಕ್ತಿ ಕ್ಷೀಣಿಸಿತು. ಅಷ್ಟರಲ್ಲಿ ತನ್ನ 28ನೆಯ ವಯಸ್ಸಿನಲ್ಲಿ ಆಕೆ ನ್ಯೂಮೋನಿಯದಿಂದ ತೀರಿಕೊಂಡಳು. (ಯು.ಎಸ್.ಕೆ.)