ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಯ್ಯರ್, ಜಿ ವಿ
ಅಯ್ಯರ್, ಜಿ ವಿ 1917-2003. ಗಣಪತಿ ವೆಂಕಟರಮಣ ಅಯ್ಯರ್. ಕನ್ನಡ ಚಲನಚಿತ್ರರಂಗದಲ್ಲಿ ವಿಶಿಷ್ಟ ಹೆಸರು. ಅವರನ್ನು ಕನ್ನಡ ಚಿತ್ರರಂಗದ ಭೀಷ್ಮ ಎಂದು ಬಣ್ಣಿಸುವುದೂ ಉಂಟು. ಅವರ ಆತ್ಮೀಯರು ತುಸು ಚೇಷ್ಟೆಯಿಂದ ಆದರೆ ಅಭಿಮಾನದಿಂದ ಬರಿಗಾಲು ನಿರ್ದೇಶಕ ಎಂದು ಕರೆಯುತ್ತಿದ್ದುದೂ ಉಂಟು. ಬದುಕಿನ ಯಾವುದೇ ಒಂದು ಹಂತದಲ್ಲಿ ನಾನು ಚಪ್ಪಲಿ ಮೆಟ್ಟುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಕೊನೆಯ ತನಕ ಬರಿಗಾಲಿನಲ್ಲಿ (ಕೊರೆಯುವ ಚಳಿ ಇರಲಿ, ಸುಡುವ ನೆಲ ಇರಲಿ) ನಡೆಯುತ್ತಿದ್ದುದರಿಂದ ಅವರಿಗೆ ಆ ಹೆಸರು ಅಂಟಿಕೊಂಡಿತ್ತು. ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಬಹುಮುಖ ಪ್ರತಿಭಾವಂತ. ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಜನನ (ಸೆಪ್ಟೆಂಬರ್ 3, 1917)ರಂದು. ತಂದೆ-ತಾಯಿ ಇಟ್ಟ ಹೆಸರು ವೆಂಕಟರಮಣ. ತಂದೆ ಗಣಪತಿ ಅಯ್ಯರ್.
ಜಿ.ವಿ.ಅಯ್ಯರ್ ಅವರ ಬದುಕನ್ನು ನಾಲ್ಕು ಹಂತಗಳಲ್ಲಿ ಗುರುತಿಸಬಹುದು. ಮೊದಲನೆಯದು ರಂಗಭೂಮಿ, ಎರಡನೆಯದು ಮುಖ್ಯವಾಹಿನಿಯ ಚಿತ್ರರಂಗ, ಮೂರನೆಯದು ಚಿತ್ರರಂಗದಲ್ಲಿ ಹೊರಟದಾರಿ, ಕೊನೆಯದು ಆಧ್ಯಾತ್ಮದ ಸೆಳೆತ.
ನಂಜನಗೂಡಿನ ಬಡ ಬ್ರಾಹ್ಮಣ ಕುಟುಂಬವೊಂದರಲ್ಲಿ ಜನಿಸಿದ ಅಯ್ಯರ್ ಎಂಬ ಹುಡುಗ ಬಣ್ಣದ ಬೆನ್ನು ಹತ್ತಿ ಹೊರಟಾಗ ಎಂಟು ವರ್ಷ. ಅಂದಿನ ಕಾಲಕ್ಕೆ ಇಂಥ ಬಣ್ಣದ ಹುಚ್ಚಿನ ಹುಡುಗರಿಗೆ ತೆರೆದ ಬಾಗಿಲಿನಂತಿದ್ದ ಗುಬ್ಬಿ ಕಂಪನಿಯೇ ಹುಡುಗನ ಮೊದಲ ನಿಲ್ದಾಣ. ಅಲ್ಲಿ ಅವರಿಗೆ ಆರಂಭದಲ್ಲಿ ದೊರೆತ ಕೆಲಸ ಪೋಸ್ಟರ್ ಮತ್ತು ಸೈನ್ ಬೋರ್ಡ್ ಬರೆಯುವುದು. ಸಾಹುಕಾರ ಎನ್ನುವ ಆಗಿನ ಪ್ರಸಿದ್ಧ ನಾಟಕದಲ್ಲಿ ಪ್ರಧಾನ ಪಾತ್ರ. ಮುಂದೆ ಪ್ರಸಿದ್ಧಿಗೆ ಬಂದ ಟಿ.ಎನ್.ಬಾಲಕೃಷ್ಣ, ನರಸಿಂಹರಾಜು ಅವರ ಸಹ ಕಲಾವಿದರು. ಮೂವರೂ ಹಾಸ್ಯ ಪ್ರಧಾನ ಪಾತ್ರಗಳಲ್ಲಿ ಮಿಂಚುತ್ತಿದ್ದರು. ಅಡ್ಡದಾರಿ, ಕಾಲಚಕ್ರ ನಾಟಕಗಳಲ್ಲಿ ಅವರು ಅಭಿನಯಿಸಿದ ಪ್ರಮುಖ ನಾಟಕಗಳು. ಮುಂದೆ ಕರ್ನಾಟಕ ನಾಟಕ ಸಭಾ ಕಂಪನಿಗೆ ಸೇರಿ ಬೇಡರ ಕಣ್ಣಪ್ಪ, ಭಾರತಲಕ್ಷ್ಮಿ, ಟಿಪ್ಪೂಸುಲ್ತಾನ್, ವಿಶ್ವಾಮಿತ್ರ, ಮುಂತಾದ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಅಯ್ಯರ್ ಅವರ ರಂಗಭೂಮಿ ಒಲವು. ಅವರು ಚಿತ್ರರಂಗ ಪ್ರವೇಶಿಸಿದ ಎಷ್ಟೋ ವರ್ಷಗಳ ನಂತರವೂ ಬತ್ತಿರಲಿಲ್ಲ. ಬಿ.ವಿ.ಕಾರಂತ ನಿರ್ದೇಶಿಸಿದ ಸತ್ತವರ ನೆರಳು ನಾಟಕದಲ್ಲಿ ಅವರು ಅಭಿನಯಿಸಿದ್ದು ಇದಕ್ಕೆ ಉದಾಹರಣೆ.
ಅಯ್ಯರ್ ಅವರ ಮುಂದಿನ ಮಜಲು ಚಿತ್ರರಂಗ. 1943ರಲ್ಲಿ ತಯಾರಾದ ರಾಧಾರಮಣ ಅಯ್ಯರ್‍ಗೆ ಚಿತ್ರರಂಗದ ಪ್ರವೇಶ ದ್ವಾರವಾಯಿತು. 1954ರಲ್ಲಿ ತಯಾರಾದ ಎಚ್.ಎಲ್.ಎನ್.ಸಿಂಹ ಅವರ ಬೇಡರ ಕಣ್ಣಪ್ಪ ಅಯ್ಯರ್ ಚಿತ್ರರಂಗದಲ್ಲಿ ಶಾಶ್ವತ ನೆಲೆ ಕಂಡ ಚಿತ್ರವಾಯಿತು. ಈ ಚಿತ್ರ ಇನ್ನೂ ಒಂದು ಕಾರಣಕ್ಕೆ ಕನ್ನಡ ಚಿತ್ರರಂಗದಲ್ಲಿ ಒಂದು ಮೈಲಿಗಲ್ಲು. ಈ ಚಿತ್ರದ ಮೂಲಕವೇ ಇಂದು ಕನ್ನಡ ಚಿತ್ರರಂಗದಲ್ಲಿ ನಟಸಾರ್ವಭೌಮ ರಾಜ್‍ಕುಮಾರ್ ಪ್ರವೇಶಿಸಿದ್ದು. ಈ ಚಿತ್ರದ ನಂತರ ಅಯ್ಯರ್ ಹಿಂತಿರುಗಿ ನೋಡಲಿಲ್ಲ. ಮಹಾಕವಿ ಕಾಳಿದಾಸ, ಸೋದರಿ, ಹರಿಭಕ್ತ, ಸದಾರಮೆ, ಜಗಜ್ಯೋತಿ ಬಸವೇಶ್ವರ, ಕಣ್ತೆರೆದು ನೋಡು ಚಿತ್ರಗಳಲ್ಲಿ ಅಭಿನಯಿಸಿದರು. ಭೂದಾನ, ತಾಯಿ ನೆರಳು, ಲಾಯರ್ ಮಗಳು, ಪೋಸ್ಟ್ ಮಾಸ್ಟರ್, ಕಿಲಾಡಿರಂಗ, ರಾಜಶೇಖರ, ಮೈಸೂರು ಟಾಂಗ, ನಾನೇ ಭಾಗ್ಯವತಿ, ಚೌಕದ ದೀಪ ಅಯ್ಯರ್ ನಿರ್ದೇಶಿಸಿದ ಚಿತ್ರಗಳು. 60ರ ದಶಕದ ಕೊನೆಯ ಹೊತ್ತಿಗೆ ಅಯ್ಯರ್ ನಟನೆಯ ಕ್ಷೇತ್ರದಿಂದ ನಿರ್ದೇಶನ ಸ್ಥಾನಕ್ಕೆ ಬಡ್ತಿ ಪಡೆದಿದ್ದರು. ಚೌಕದ ದೀಪ ಅಯ್ಯರ್ ಅವರಿಗೆ ಒಳ್ಳೆಯ ಹೆಸರನ್ನೇನೂ ತರಲಿಲ್ಲ. ಆದರೆ ಅದೇ ಅವರ ವೃತ್ತಿಯ ಹೊಗಳುದಾರಿಯಾಯಿತೆಂದು ಗುರುತಿಸಲಾಗಿದೆ.
ಗಿರೀಶ್ ಕಾರ್ನಾಡ್ ಅಭಿನಯಿಸಿದ ಪಟ್ಟಾಭಿರಾಮರೆಡ್ಡಿ ನಿರ್ದೇಶಿಸಿದ ಯು.ಆರ್.ಅನಂತಮೂರ್ತಿ ಕಾದಂಬರಿ ಆಧಾರಿತ ಸಂಸ್ಕಾರ ಚಿತ್ರದೊಂದಿಗೆ 70ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸಗಾಳಿ ಬೀಸ ತೊಡಗಿತು. ಹೊಸ ಅಲೆ, ಪರ್ಯಾಯ, ಸಮಾಂತರ ಚಿತ್ರಗಳೆಂದು ವ್ಯಾಖ್ಯಾನಕ್ಕೆ ಒಳಗಾದ, ಆವರೆಗಿನ ಚಿತ್ರಗಳಿಂದ ಧಾಟಿಯಲ್ಲಿ, ನಿರೂಪಣೆಯಲ್ಲಿ, ಅಭಿವ್ಯಕ್ತಿಯಲ್ಲಿ ಭಿನ್ನವಾದ ಚಿತ್ರಗಳು ಬರತೊಡಗಿದವು.
ಈ ಬದಲಾದ ಗಾಳಿಗೆ ತಮ್ಮನ್ನು ತಾವು ತೆರದುಕೊಂಡ ವಾಣಿಜ್ಯ ಚಿತ್ರಗಳ ಪ್ರಮುಖ ವ್ಯಕ್ತಿ ಎಂದರೆ ಜಿ.ವಿ.ಅಯ್ಯರ್. ಈ ದಶಕ ಅಯ್ಯರ್ ಅವರ ಮೂರನೆಯ ಅವತಾರದ ಕಾಲ.
ಶ್ರೀ ಅನಂತಲಕ್ಷ್ಮೀ ಪಿಕ್ಚರ್ಸ್ ಲಾಂಛನದಲ್ಲಿ ಎಸ್.ಎಲ್.ಭೈರಪ್ಪ ಅವರ ವಂಶವೃಕ್ಷ (1972) ಚಿತ್ರವನ್ನು ನಿರ್ಮಿಸಿದರು. ಗಿರೀಶ್ ಕಾರ್ನಾಡ್, ಬಿ.ವಿ.ಕಾರಂತ ಈ ಚಿತ್ರದ ನಿರ್ದೇಶಕರು. ಮುಂದೆ ಕನ್ನಡ ಚಿತ್ರರಂಗದ ಸಾಹಸ ಸಿಂಹ ನಾದ ವಿಷ್ಣುವರ್ಧನ (ಆಗಿನ್ನೂ ಕುಮಾರ್) ಅದರಲ್ಲಿ ಒಂದು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಸಂಸ್ಕಾರದ ನಂತರ ಹೊಸ ಅಲೆಯಲ್ಲಿ ಪ್ರಮುಖವಾದ ಚಿತ್ರ ವಂಶವೃಕ್ಷ. ಹೊಸ ಅಲೆಯ ಚಿತ್ರಕ್ಕೆ ನಿರ್ಮಾಪಕನಾಗುವಷ್ಟಕ್ಕೇ ಅವರು ತೃಪ್ತರಾಗರಿಲ್ಲ. ತ.ರಾ.ಸು ಕಾದಂಬರಿ ಆಧಾರಿತ ಹಂಸಗೀತೆಯ (1975) ನಿರ್ದೇಶನ, ನಿರ್ಮಾಣದ ಹೊಣೆ ಹೊತ್ತರು. ಕನ್ನಡ ಚಿತ್ರರಂಗದಲ್ಲಿ ಹಂಸಗೀತೆ ವಿಶಿಷ್ಟ ಕಲಾತ್ಮಕ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಅನಂತನಾಗ್ ಈ ಚಿತ್ರದ ಪ್ರಧಾನ ಪಾತ್ರಧಾರಿ. ಅಯ್ಯರ್ ಅವರ ರೂಪಾಂತರದ ಪರಿಪಕ್ವತೆಯನ್ನು ಕಾಣಬಹುದಾದ ಚಿತ್ರ ಇದು. ಇದರ ನಂತರ ಮತ್ತೆರಡು ಪ್ರಾಯೋಗಿಕ ಚಿತ್ರಗಳನ್ನು ತಯಾರಿಸಿದರು. ನಾಳೆಗಳನ್ನು ಮಾಡುವವರು ಹಾಗೂ ಕುದುರೆ ಮೊಟ್ಟೆ, ಹಂಸಗೀತೆಯ ಮಟ್ಟಕ್ಕೆ ಏರದೆ ಪ್ರಾಯೋಗಿಕ ನೆಲೆಯಲ್ಲಿ ಮುಖ್ಯವಾಯಿತು ಅಷ್ಟೇ.
ಮುಂದೆ ಅಯ್ಯರ್ ಆಧ್ಯಾತ್ಮದತ್ತ ಹೊರಳಿಕೊಂಡರು. ಶ್ರೀ ಆದಿಶಂಕಾರಾಚಾರ್ಯ, ಶ್ರೀ ಮಧ್ವಾಚಾರ್ಯ, ಶ್ರೀ ರಾಮಾನುಜಾಚಾರ್ಯ- ಈ ಆಚಾರ್ಯತ್ರಯರ ಮೇಲೆ ಚಿತ್ರಗಳನ್ನು ನಿರ್ಮಿಸಿದರು. ಶ್ರೀ ಆದಿ ಶಂಕಾರಾಚಾರ್ಯ ಸಂಸ್ಕøತದಲ್ಲಿ ನಿರ್ಮಾಣವಾದ ಮೊಟ್ಟಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಕಾರಣವಾಯಿತು. ಆಧ್ಯಾತ್ಮಕ ವಿಚಾರಗಳನ್ನು ದೃಶ್ಯರೂಪಕಗಳಲ್ಲಿ ಕಾಣಿಸುವ ಅತ್ಯಂತ ಯಶಸ್ವೀ ಚಿತ್ರ ಎಂದೂ ಶಂಕರಾಚಾರ್ಯರ ಬಗ್ಗೆ ಹೇಳಬಹುದು. ಅಯ್ಯರ್ ಅವರ ಶ್ರಮ, ಅಧ್ಯಯನ, ಚಿತ್ರಮಾಧ್ಯಮದ ಅನನ್ಯ ಹಿಡಿತ ಎಲ್ಲವೂ ಇದರಲ್ಲಿ ಕಂಡುಬರುತ್ತದೆ. ಇದಕ್ಕೆ ಸ್ವರ್ಣ ಕಮಲ ಪ್ರಶಸ್ತಿಯೂ ದೊರಕಿತು. ಆದರೆ ಮಧ್ವಾಚಾರ್ಯ, ರಾಮಾನುಜಾಚಾರ್ಯ ಈ ಎತ್ತರವನ್ನು ಕಾಣಲಿಲ್ಲ. ತಮ್ಮೆಲ್ಲ ಪ್ರತಿಭೆಯನ್ನು ಶಂಕಾರಾಚಾರ್ಯಕ್ಕೆ ಧಾರೆ ಎರೆದಿದ್ದಾರೇನೋ ಎನ್ನುವಂತೆ ಮಾಧ್ವ, ರಾಮಾನುಜ ಪೇಲವವಾದವು. ಈ ಚಿತ್ರಗಳಲ್ಲೂ ಅಧ್ಯಯನಶೀಲತೆಯನ್ನು ಕಾಣಬಹುದಾದರೂ ಶಂಕರದಲ್ಲಿ ಕಂಡ ಅಯ್ಯರ್ ಛಾಪು ಇವುಗಳಲ್ಲಿ ಇರಲಿಲ್ಲ.
ಭಗವದ್ಗೀತೆಯನ್ನು ಚಿತ್ರಮಾಧ್ಯಮದಲ್ಲಿ ತರಬಹುದೆಂದು ಕಲ್ಪಿಸಿಕೊಳ್ಳುವುದು ಅಯ್ಯರ್ ಅವರಿಗೆ ಮಾತ್ರ ಸಾಧ್ಯ. ಅದನ್ನು ಅವರು ಕಾರ್ಯಗತಗೊಳಿಸಿದರೂ ಕೂಡಾ. ಆದರೆ ಅದು ಅಂಥ ಯಶಸ್ಸು ಪಡೆಯಲಿಲ್ಲ. ಅರ್ಥವಾಗದ ಚಿತ್ರಗಳ ಪಟ್ಟಿಗೆ ಅದೂ ಸೇರಿಹೋಗಿದೆ. ಸ್ವಾಮಿ ವಿವೇಕಾನಂದರ ಬಗ್ಗೆ ಒಂದು ನೇರ ನಿರೂಪಣೆಯ ಚಿತ್ರವನ್ನು ಅಯ್ಯರ್ ತಯಾರಿಸಿದರು. ಇದು ಕೂಡಾ ಅಷ್ಟಾಗಿ ಗಮನ ಸೆಳೆಯಲಿಲ್ಲ. ಅಯ್ಯರ್ ರಾಮಾಯಣಕ್ಕೆ ಕೈ ಹಾಕಿದರು. ಅದನ್ನೊಂದು ವಿನೂತನ ಚಿತ್ರ ನಮೂನೆಯಲ್ಲಿ ಕೊಡಬೇಕೆಂಬ ಮಹತ್ವಾಕಾಂಕ್ಷೆಯಿಂದ ಹೊರಟಿದ್ದರು. 86ರ ಹರೆಯದಲ್ಲಿ ತಮ್ಮೆಲ್ಲ ಉತ್ಸಾಹ, ಕ್ರಿಯಾಶೀಲತೆಯನ್ನು ಒಗ್ಗೂಡಿಸಿಕೊಂಡು ರಾಮಾಯಣ ತಯಾರಿಸಲು ಸಿದ್ಧತೆ ನಡೆಸಿದರು. ಆದರೆ ಆ ಆಸೆ ಪೂರೈಸುವ ಮುನ್ನವೇ ಸಾವು ಅವರನ್ನು ಸೆಳೆದೊಯ್ದಿತು.
ಈ ನಡುವೆ ಅಯ್ಯರ್ ಬಾಣಭಟ್ಟನ ಕಾದಂಬರಿಯನ್ನು ಹಿಂದಿ-ಸಂಸ್ಕøತದಲ್ಲಿ ಟಿ.ವಿ. ಸೀರಿಯಲ್‍ಗೆ ಅಳವಡಿಸಿಕೊಟ್ಟಿದ್ದರು. ಅದು ಪ್ರಸಾರವಾಗುತ್ತದೋ, ಇಲ್ಲವೋ ಎನ್ನುವಂತಾಗಿತ್ತು. ಆದರೆ ಕೊನೆಯಲ್ಲಿ ಅದು ಪ್ರಸಾರವಾಯಿತು. ಆದರೆ ವೀಕ್ಷಕರ ಮೆಚ್ಚುಗೆಗಳಿಸುವಲ್ಲಿ ವಿಫಲವಾಯಿತು. ಕಿರುತೆರೆಗೆ ಕೃಷ್ಣಲೀಲಾ, ನಾಟ್ಯರಾಣಿ ಶಾಂತಲಾ ಚಿತ್ರಿಸಿದ್ದಾರೆ. ಇವರು ನಿರ್ಮಿಸಿದ ಕುದುರೆ ಮೊಟ್ಟೆ, ವಾಲ್ ಪೋಸ್ಟರ್ ತೆರೆ ಕಾಣಲಿಲ್ಲ. ಸಹಕಾರಿ ಯೋಜನೆಯಡಿ ತಯಾರಿಸಿದ ನಾಳೆಗಳನ್ನು ಮಾಡುವವರು ಒಂದು ಪ್ರಯೋಗ. ರಾಜ್ಯಸರ್ಕಾರಕ್ಕಾಗಿ ತಗಡೂರು ರಾಮಚಂದ್ರರಾಯರನ್ನು ಕುರಿತ ಸಾಕ್ಷ್ಯಚಿತ್ರ ತಯಾರಿಸಿದರು. ಜಿ.ವಿ.ಅಯ್ಯರ್ ನಟ, ನಿರ್ಮಾಪಕ, ನಿರ್ದೇಶಕ, ಅಷ್ಟೇ ಅಲ್ಲ. ಐವತ್ತು, ಅರವತ್ತರ ದಶಕದಲ್ಲಿ ಅಯ್ಯರ್ ಚಿತ್ರಗೀತೆಗಳನ್ನು ರಚಿಸಿದ್ದರು. ಅದೂ ಸಾಹಿತ್ಯದ ಗುರುತುಗಳುಳ್ಳ ಗೀತೆಗಳು. ಸುಮಾರು 850 ಗೀತೆಗಳನ್ನು ಅವರು ರಚಿಸಿದ್ದರು. ಶಂಕರಾಚಾರ್ಯ, ಭಗವದ್ಗೀತೆ, ಸಂಸ್ಕøತ ಚಿತ್ರಗಳಿಗೆ ರಾಷ್ಟ್ರಪತಿಗಳ ಸ್ವರ್ಣಪದಕ ಲಭ್ಯವಾಯಿತು. ಹತ್ತಾರು ಚಲನಚಿತ್ರಗಳಿಗೆ ಸಾಹಿತ್ಯ, ನೂರಾರು ಗೀತೆಗಳ ರಚನೆ, ಇಪ್ಪತ್ತು ಚಲನಚಿತ್ರಗಳನ್ನು ನಿರ್ದೇಶಿಸಿರುವ ಇವರಿಗೆ ರಾಜ್ಯಸರ್ಕಾರ 1987-88ನೇ ಸಾಲಿನಲ್ಲಿ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ನೀಡಿ ಗೌರವಿಸಿದೆ. ಕನ್ನಡ ಚಲನ ಚಿತ್ರರಂಗದ ಭೀಷ್ಮ 2003ರಲ್ಲಿ ನಿಧನರಾದರು. (ಜಿ.ಎಸ್.ಎಸ್)