ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅರಬ್ಬೀ ಭಾಷೆ

ವಿಕಿಸೋರ್ಸ್ದಿಂದ

ಅರಬ್ಬೀ ಭಾಷೆ

ಬ್ಯಾಬಿಲೋನಿಯನ್, ಹೀಬ್ರೂ, ಹಿಮ್ಯರೈಟ್ (ದಕ್ಷಿಣ ಅರಬ್ಬೀ), ಅರಾಮೇಯಿಕ್, ಫೊನೀಷಿಯನ್, ಇಥಿಯೋಪಿಕ್ ಮತ್ತು ಅರಬ್ಬೀ(ಇಂಥ ಏಷ್ಯದ ನೈಋತ್ಯ ಭಾಗದಲ್ಲಿರುವ ದೇಶಗಳ ಪ್ರಾಚೀನಭಾಷೆಗಳು ಸಿಮಿಟಿಕ್ ಭಾಷೆಯ ಗುಂಪಿಗೆ ಸೇರಿವೆ. ಬೈಬಲಿನ ವಂಶಾನುಕ್ರಮಣಿಕೆಯ ಪ್ರಕಾರ ಆದಂ ಎಂಬುವನ ವಂಶಪರಂಪರೆಗೆ ಸೇರಿದ ನೋವ ಎಂಬಾತನ ಮಗ ಸ್ಯಾಮ್‍ನ ಹೆಸರನ್ನು ಅನುಸರಿಸಿ ಈ ಭಾಷೆಗಳನ್ನು ಸಿಮಿಟಿಕ್ ಭಾಷೆಗಳೆಂದು ಕರೆಯುತ್ತಾರೆ. ಅವುಗಳ ಮೂಲಮಾತೃಕೆ ಎಲ್ಲಿ ಯಾವಾಗ ಹುಟ್ಟಿತು ಎಂಬುದು ತಿಳಿಯದು. ಆದರೆ ಅವುಗಳಲ್ಲಿ ಪರಸ್ಪರವಾಗಿ ನಿಕಟ ಸಂಬಂಧವುಂಟಲ್ಲದೆ ಪದಗಳಲ್ಲೂ ವ್ಯಾಕರಣನಿಷ್ಪತ್ತಿಗಳಲ್ಲೂ ಕಂಡು ಬರುವ ಹೊಂದಾಣಿಕೆಯನ್ನು ನೋಡಿದರೆ ಅವುಗಳೆಲ್ಲ ಯಾವುದೋ ಒಂದು ಮೂಲ ಭಾಷೆಯಿಂದ ಹುಟ್ಟಿದುವು ಎಂಬಂತೆ ತೋರುತ್ತದೆ. ಸಿಮಿಟಿಕ್ ಭಾಷೆಗಳ ಮೂಲಮಾತೃಕೆ ಸಂಪೂರ್ಣವಾಗಿ ಕಣ್ಮರೆಯಾಗಿದೆ. ಎಂದು ಸಾಮಾನ್ಯವಾಗಿ ಭಾವಿಸಲಾಗಿದೆ. ಬೇರೆ ಯಾವ ಐತಿಹಾಸಿಕಾಂಶಗಳೂ ದೊರೆಯದಿರುವ ಪ್ರಯುಕ್ತ ಮೇಲೆ ನಮೂದಿಸಿರುವ ಜನ್ಯಭಾಷೆಗಳಲ್ಲಿ ಅರಬ್ಬೀ ಭಾಷೆಯೊಂದೇ ಅತ್ಯಂತ ಕಿರಿಯದೆಂದೂ ಈಗ ಅದೊಂದೇ ಜೀವಂತವಾಗಿದೆಯೆಂದೂ ಊಹಿಸಲಾಗಿದೆ. ಅಲ್ಲದೇ ಅರಬ್ಬರು ತಮ್ಮ ಭೌಗೋಲಿಕ ಸ್ಥಾನದ ದೆಸೆಯಿಂದಲೂ ಮರಳುಗಾಡಿನಲ್ಲಿ ವಾಸ ಮಾಡುತ್ತಿರುವುದರಿಂದಲೂ ಮೂಲ ಭಾಷೆಯ ಗುಣವನ್ನು ಹೆಚ್ಚು ಶುದ್ಧವಾಗಿ, ಹೆಚ್ಚು ಸ್ಫುಟವಾಗಿ ತಮ್ಮ ಭಾಷೆಯಲ್ಲಿ ಉಳಿಸಿಕೊಂಡಿದ್ದಾರೆ. ಈ ಭಾಷೆಗಳಿಗೆ ತಮ ತಮಗೆ ವಿಶಿಷ್ಟವಾದ ಗುಣಗಳಿವೆ. ಅವುಗಳನ್ನು ಕೆಳಗೆ ಕಾಣಿಸಿರುವಂತೆ ಮೂರು ವರ್ಗಗಳಾಗಿ ವಿಂಗಡಿಸಬಹುದು. 1 ಪೂರ್ವ ಸಿಮಿಟಿಕ್, (ಬ್ಯಾಬಿಲೋನಿಯನ್ ಮತ್ತು ಅಸ್ಸಿರಿಯನ್(ಇಂಥವುಗಳು). 2 ಉತ್ತರ ಮತ್ತು ವಾಯುವ್ಯ ಬಾಗದ ಸಿಮಿಟಿಕ್ (ಫೊನೀಷಿಯನ್, ಹೀಬ್ರೂ, ಅರಾಮೇಯಿಕ್). 3 ದಕ್ಷಿಣ ಮತ್ತು ನೈಋತ್ಯ ಭಾಗದ ಸಿಮಿಟಿಕ್. ಇದನ್ನು ಉತ್ತರ ಅರಬ್ಬೀ ದಕ್ಷಿಣ ಅರಬ್ಬೀ, (ಹಿಮ್ಯರೈಟ್) ಎಂದು ವಿಭಾಗಿಸಲಾಗಿದೆ. ಕೆಲವು ವ್ಯಾಕರಣಸಿದ್ಧರೂಪಗಳಲ್ಲೂ ಅಕ್ಷರಮಾಲಿಕೆಯಲ್ಲೂ ಶಬ್ದಗಳಲ್ಲೂ ದಕ್ಷಿಣ ಅರಬ್ಬೀ ಭಾಷೆ ಚೊಕ್ಕಭಾಷೆಯನ್ನು ಹೋಲುತ್ತದೆ. ಕ್ರಿ.ಶ. ಆರನೆಯ ಶತಮಾನದ ವೇಳೆಗೆ ಯಮೆನ್ನಿನಲ್ಲಿ ಹಿಮ್ಯರೈಟ್ ಸಾಮ್ರಾಜ್ಯದ ಪತನವಾದ ಬಳಿಕ, ದಕ್ಷಿಣ ಅರಬ್ಬೀ ಮೃತಭಾಷೆಯಾಯಿತು. ಉತ್ತರ ಅರಬ್ಬೀ ಭಾಷೆ ಎಲ್ಲೆಲ್ಲೂ ತನ್ನ ಪ್ರಭುತ್ವವನ್ನು ಸ್ಥಾಪಿಸಿತು.

ಪ್ರಾಚೀನ ಸಂಶೋಧನೆಗಳು ಅರಬ್ಬೀಯರ ನಾಗರಿಕತೆಯ ಚರಿತ್ರೆಯನ್ನು ಕ್ರಿ.ಪೂ. 4,000 ವರ್ಷಗಳ ಹಿಂದಕ್ಕೆ ಒಯ್ದರೂ ಬ್ಯಬಿಲೋನಿಯನ್ ಶಾಸನಗಳು ಕ್ರಿ.ಪೂ. 3,000-500 ವರ್ಷಗಳ ಪರ್ಯಂತ ಹೋಗುತ್ತವೆ. ಹೀಬ್ರೂ ಶಾಸನಗಳು ಕ್ರಿ,ಪೂ. 1,500ರಿಂದ ಪ್ರಾರಂಭವಾಗುತ್ತವೆಯಲ್ಲದೆ ದಕ್ಷಿಣ ಅರಬ್ಬೀಯವು ಕ್ರಿ.ಪೂ. 800ರಿಂದ ಮೊದಲಾಗುತ್ತದೆ. ಅವುಗಳಲ್ಲಿ ಉಪಯೋಗಿಸಿರುವ ಭಾಷೆ ತಕ್ಕಷ್ಟು ಸುಸಂಸ್ಕøತವಾಗಿತ್ತೆಂಬುದನ್ನೂ ಕ್ರಿ. ಪೂ. 1,500 ವರ್ಷಗಳ ವೇಳೆಗೆ ಲೇಖನಕಲೆ ಸಂಪೂರ್ಣವಾಗಿ ಬೆಳೆದಿತ್ತೆಂಬುದನ್ನೂ ಈ ಶಾಸನಗಳು ತೋರಿಸುತ್ತವೆ. ಅಲ್ಲದೆ ಉತ್ತರ ಅರಬ್ಬೀ ಭಾಷೆಯೂ ಪೌರ ಸಂಸ್ಕøತಿಯೊಂದನ್ನು ಬೆಳೆಸಿಕೊಂಡಿತ್ತು. ಬಹು ಪುರಾತನ ಅಕಾಲದಿಂದಲೂ ಧರ್ಮ ಮತ್ತು ಸಂಸ್ಕøತಿಗಳ ಕೇಂದ್ರವಾಗಿದ್ದ ಮೆಕ್ಕ ಪಟ್ಟಣವೂ ಉತ್ತರ ಅರಬ್ಬೀ ಭಾಷೆಯನ್ನು ಅಭಿವೃದ್ಧಿಗೊಳಿಸುವುದರಲ್ಲಿ ಬಹು ಪರಿಣಾಮಕಾರಿಯಾದ ಪಾತ್ರ ವಹಿಸಿದೆ. ದಕ್ಷಿಣ ಅರೇಬಿಯ ದೇಶದ ಕುಲುಗಳು, ಮೆಕ್ಕಕ್ಕೆ ಯಾತ್ರೆ ಹೋಗುತ್ತಿದ್ದು ಪರ್ಷಿಯನ್ನರಂತೆಯೇ ಆಗಿರುವ ಮೆಸಪೋಟೇಮಿಯ ದೇಶದ ಅರಬ್ಬರ ಪ್ರಭಾವಗಳೂ ಉತ್ತರ ಅರಬ್ಬೀ ಭಾಷೆಯ ಬೆಳೆವಣಿಗೆಗೆ ಪುಷ್ಟಿಕೊಟ್ಟಿವೆ. ಉತ್ತರ ಅರೇಬಿಯದ ಶಾಸನಗಳು, ಮುಖ್ಯವಾಗಿ ಧಾಮುಡಿಯನ್, ಲಿಹ್ಯಾನಿ, ಸಾಫ ಮತ್ತು ಆನ್-ನಮಾರಗಲ (ಕ್ರಿ.ಶ.328) ಶಾಸನಗಳು, ಉತ್ತರ ಅರಬ್ಬೀ ಭಾಷೆ ಪ್ರಾರಂಭದಲ್ಲಿ ಹೇಗೆ ಬೆಳೆಯಿತೆಂಬ ವಿಚಾರದಲ್ಲಿ ಪೂರ್ಣ ಮಾಹಿತಿಗಳನ್ನು ಒದಗಿಸಿಲ್ಲ. ಈಗ ಉಪಯೋಗದಲ್ಲಿರುವ ಅರಬ್ಬೀ ಲಿಪಿಗಳು ಕ್ರಿ.ಶ.ಆರನೆಯ ಶತಮಾನದ ಶಾಸನಗಳಲ್ಲಿ ಮಾತ್ರ ಕಂಡುಬರುತ್ತವೆ.

ಈ ಭಾಷೆಗಳ, ಅದರಲ್ಲೂ ಅರಬ್ಬೀ ಭಾಷೆಗಳ, ಮುಖ್ಯ ವೈಲಕ್ಷಣ್ಯಗಳು ಹೀಗಿವೆ: ವಾಕ್ಯಗಳು ಚಿಕ್ಕವು, ನಿಷ್ಕøಷ್ಟಾರ್ಥವನ್ನು ಕೊಡಲೂ ಬಹು ಸೂಕ್ಷ್ಮಭಾವಗಳನ್ನು ವಿವರಿಸಲೂ ತಕ್ಕವು. ಒಂದೇ ಒಂದು ವಸ್ತುವನ್ನು ಹೇಳಲು ನೂರಾರು ಪದಗಳಿವೆ. ಮೂಲ ಭಾವನೆಗಳನ್ನು ಹೇಳಬೇಕಾದರೆ ವ್ಯಂಜನಗಳ ಉಪಯೋಗವಿದೆ. ನಾಮಪದಗಳಿಗೂ ಕ್ರಿಯಾಪದಗಳಿಗೂ ಪ್ರಕೃತಿಯಾಗಿರುವ ಮೂರೇ ಮೂರು ವ್ಯಂಜನಗಳಿಂದ ಭಾವನೆಗಳಲ್ಲಿ ಹೆಚ್ಚಿನವನ್ನು ನಿರ್ವಹಿಸುತ್ತಾರೆ. ಈ ಮೂಲ ಪ್ರಕೃತಿಗಳ ಅರ್ಥದಲ್ಲಿ ಮುಖ್ಯ ಬದಲಾವಣೆಗಳನ್ನು ಮಾಡಬೇಕಾದಾಗ ಅವುಗಳೊಳಗಿನ ಸ್ವರಗಳನ್ನು ಬದಲಾಯಿಸುವುದರ ಮೂಲಕವೋ ಅವುಗಳಿಗೆ ಪ್ರತ್ಯಯಗಳನ್ನು ಹಚ್ಚುವುದರ ಮೂಲಕವೋ ನಿರ್ವಹಿಸುತ್ತಾರೆ. ಹೀಗೆ ಸರಳವಾದ ಕ್ರಿಯಾಪದಗಗಳಿಂದ, ಆಧಿಕ್ಯಾರ್ಥ, ಕಾರಕಾರ್ಥ ಮತ್ತು ಸ್ವಾರ್ಥಕ ಕ್ರಿಯಾವಾಚಕಗಳು ನಿಷ್ಪನ್ನವಾಗುತ್ತವೆ. ಪ್ರಕೃತಿಯನ್ನು ಹೀಗೆ ಬದಲಾಯಿಸಿಕೊಳ್ಳುವ ಸೌಲಭ್ಯ, ಶಬ್ದಭಂಡಾರ ಹಾಗೂ ಪರ್ಯಾಯಪದಗಳ ಬಾಹುಳ್ಯದಿಂದ ಅರಬ್ಬೀ ಭಾಷೆಯ ಅಡಕವಾದ ಶೈಲಿಗೆ ತುಂಬ ಸಹಾಯಕವಾಗಿದೆ. ಈ ಒಂದು ವಿಶಿಷ್ಟಗುಣದಿಂದಲೂ ಶಬ್ದಸಮೃದ್ಧಿಯಿಂದಲೂ ಅರಬ್ಬೀ ಭಾಷೆ ಅನ್ಯಭಾಷೆಗಳಿಂದ ಏನನ್ನೂ ಬೇಡದೆ, ಪ್ರತಿಯೊಂದು ನವ ನಿರ್ಮಾಣಕ್ಕೆ ತಕ್ಕ ಪದಗಳನ್ನು ತನ್ನ ಪ್ರಕೃತಿರೂಪದ ಅಲ್ಪಸ್ವಲ್ಪ ಬದಲಾವಣೆಯ ಮೂಲಕ ಕಲ್ಪಿಸಬಲ್ಲ ಸಿರಿವಂತಿಕೆಯನ್ನು ಪಡೆದಿದೆ. ಅಲ್ಲದೆ ತನ್ನ ಈ ಆಂತರಿಕ ಚೈತನ್ಯದ ಪ್ರಭಾವದಿಂದಲೇ ಅದು ತನ್ನ ಬಳಗಕ್ಕೆ ಸೇರಿದ ಇತರ ಎಲ್ಲ ಸಮಕಾಲೀನ ಭಾಷೆಗಳು ನಾಶವಾಗಿದ್ದರೂ ತಾನು ಮಾತ್ರ ಪುರಾತನ ಕಾಲದಿಂದ ಇದುವರೆಗೂ ಉಳಿದುಕೊಂಡು ಬಂದಿದೆ. ಇಸ್ಲಾಂ ಧರ್ಮ ಉದ್ಭವವಾದ ಸಂಧಿಕಾಲದಲ್ಲಿ ಅರಬ್ಬರು ಕೌಲಿಕ ಮತ್ತು ಚರ ಜೀವನವನ್ನು ನಡೆಸುತ್ತಿದ್ದರಲ್ಲದೆ ಭಿನ್ನ ಭಿನ್ನ ಉಪಭಾಷೆಗಳನ್ನಾಡುತ್ತಿದ್ದರು. ಶಬ್ದ ಮತ್ತು ವ್ಯಾಕರಣಗಳ ರಚನೆಯಲ್ಲಿ ಈ ಉಪಭಾಷೆಗಳು ಅಲ್ಪ ಸ್ವಲ್ಪ ವ್ಯತ್ಯಾಸಗಳನ್ನು ಹೊಂದಿದ್ದರೂ ಎಲ್ಲರಿಗೂ ಸಾಮಾನ್ಯವಾಗಿ ತಿಳಿಯುವಂಥ ಸಾಮಾನ್ಯ ಸಾಹಿತ್ಯಭಾಷೆಯೊಂದು ಅವರಲ್ಲಿತ್ತು; ಆದ್ದರಿಂದಲೆ ಮೆಕ್ಕದ ಅರಬ್ಬೀ ಕವಿಗಳ ಸ್ತುತಿಗೀತೆಗಳನ್ನು ಇರಾಕಿನ (ಮೆಸಪೋಟೇಮಿಯ) ಅರಸರೂ ಮತ್ತು ಸಿರಿಯದ ದೊರೆಗಳೂ ತಮ್ಮ ಉಪಭಾಷೆಗಳು ಭಿನ್ನವಾಗಿದ್ದರೂ ಮೆಚ್ಚುತ್ತಿದ್ದರು.

ಇಸ್ಲಾಂ ಮತ ಹರಡಿದ ಮೇಲೆ ಕುರಾನು ಕರೈಷಿಗಳ (ಉತ್ತರ ಅರಬ್ಬೀ ಮಾತನಾಡುವ ಕುಲ) ಭಾಷೆಯನ್ನು ಶ್ರೇಷ್ಠ ದರ್ಜೆಯನ್ನಾಗಿ ಮಾಡಿತ್ತು; ಮಿಕ್ಕೆಲ್ಲ ಕುಲಗಳ ಉಪಭಾಷೆಗಳನ್ನೂ ಹಿಂದಕ್ಕೆ ಹಾಕಿತು. ಕುರಾನಿನ ಉಪದೇಶಗಳು ಹರಡಿದಂತೆಲ್ಲ, ಅರೇಬಿಯದ ಪ್ರವಾದಿಯ ಕುಟುಂಬದ ಜನರೂ ಆತನ ಸಂಗಡಿಗರೂ ಕುರಾನಿನ ಪ್ರತಿಗಳನ್ನು ತಯಾರಿಸುವುದರಲ್ಲಿ ತೊಡಗಿದುದರ ಪರಿಣಾಮವಾಗಿ ಭಾಷೆಯ ಪ್ರವಾದಿಯ ಆಚರಣೆಯ ಸಂಪ್ರದಾಯಗಳನ್ನು ಸಂಗ್ರಹಿಸಲು ತೊಡಗಿದುದರ ಪರಿಣಾಮವಾಗಿ ಭಾಷೆಯ ಲೇಖನವಾಚನಗಳೂ ಅಭಿವೃದ್ಧಿ ಹೊಂದಿದುವು. ಸಾಮಾಜಿಕ ಜೀವನವನ್ನು ಧಾರ್ಮಿಕ ತಳಹದಿಯ ಮೇಲೆ ಸಂಸ್ಥಾಪಿಸುವುದಕ್ಕಾಗಿ ಕುರಾನಿನ ದೈವಶಾಸ್ತ್ರವನ್ನೂ ಪ್ರಚೋದಿಸಿದವಲ್ಲದೆ ವಿದ್ಯಪ್ರಸರಣ ಕಾರ್ಯಗಳನ್ನೂ ಚುರುಕುಗೊಳಿಸುದುವು. ತತ್ಫಲವಾಗಿ ಹೊಸ ಶಬ್ದಗಳ ನಿರ್ಮಾಣ, ಪ್ರಾಚೀನಶಬ್ದಗಳಿಗೆ ಹೊಸ ಅರ್ಥಗಳನ್ನು ಹೊಂದಿಸುವುದು, ಧಾರ್ಮಿಕಕಲ್ಪಗಳಿಗೂ ಹೊಸಪರಿಭಾಷೆಯನ್ನು ರಚಿಸುವುದು(ಮುಂತಾದ ಕೆಲಸಗಳು ನಡೆದುವು.

ಪೂರ್ವದ ನಾಲ್ವರು ಕಲೀಫರ ಆಳ್ವಿಕೆಯಲ್ಲಿ ರಾಜಕೀಯ ಮತ್ತು ಆಡಳಿತಗಳಿಗೆ ಬೇಕಾದ ಪದಗಳನ್ನು ಅರಬ್ಬಿಗೆ ತರಲಾಯಿತು. ಕುರಾನಿನ ಪದಗಳು ಪದಪುಂಜಗಳೂ ಇಸ್ಲಾಮೀ ಶಬ್ದಗಳೂ ಅರಬ್ಬೀ ಗದ್ಯ ಮತ್ತು ಪದ್ಯಗಳಲ್ಲಿ ತಲೆದೋರಲು ಮೊದಲಿಟ್ಟುವು. ಉಮಾಯಿದ್ ಕಲೀಫರ ಆಳ್ವಿಕೆಯಲ್ಲಿ (ಕ್ರಿ.ಶ 661-750) ಇಸ್ಲಾಮೀ ಚಕ್ರಾಧಿಕಪತ್ಯ ಸ್ಪೇನ್ ಮತ್ತು ಸಿಸಿಲಿಯಿಂದ ಭಾರತಕ್ಕೆ ಹಬ್ಬಿ ಇಸ್ಲಾಮಿನ ಆಸರೆಗೆ ಅನೇಕ ಕುಲಗಳೂ ರಾಷ್ಟ್ರಗಳೂ ಜನಾಂಗಗಳೂ ಬಂದುದರ ಪರಿಣಾಮವಾಗಿ, ಪರ್ಷಿಯನ್, ಲ್ಯಾಟಿನ್ ಮತ್ತು ಸಂಸ್ಕøತ ಶಬ್ದಗಳು ಅರಬ್ಬೀ ಭಾಷೆಗೆ ಬಂದು ಸೇರಿಕೊಂಡುವು. ಜೊತೆಗೆ ಅರಬ್ಬೀ ವ್ಯಾಕರಣವನ್ನು ಸೂತ್ರೀಕರಿಸಲಾಯಿತು. ವೈದ್ಯ, ರಸಾಯನಶಾಸ್ತ್ರ, ದರ್ಶನ ಮುಂತಾದ ಅನೇಕ ವಿಷಯಗಳಲ್ಲಿ ಪರದೇಶೀಯ ಶಾಸ್ತ್ರಗ್ರಂಥಗಳನ್ನು ಅರಬ್ಬೀ ಭಾಷೆಗೆ ಪರಿವರ್ತಿಸಲಾಯಿತು. ಕುರಾನಿನ ಭಾಷ್ಯ, ಪ್ರವಾದಿಯ ಪರಂಪರೆಯಿಂದ ಪ್ರಾಪ್ತವಾದ ಉಪದೇಶಗಳು, ಭಾಷಾಶಾಸ್ತ್ರ(ಇತ್ಯಾದಿ ಕುರಾನಿಗೆ ಸಂಬಂಧಪಟ್ಟ ಶಾಸ್ತ್ರಗಳ ಮೇಲೆ ಪುಸ್ತಕಗಳು ರಚಿತವಾದುವು.

ಅಬ್ಬಾಸಿದ್ ಕಲೀಫರ ಕಾಲದಲ್ಲಿ ಭಾಷೆಯ ಲಿಪಿಮಾಲಿಕೆ ಸಂಪೂರ್ಣವಾಗಿ ಬೆಳೆಯಿತಲ್ಲದೆ ಸೊಬಗುಳ್ಳದ್ದೂ ಆಯಿತು. ಒಂದು ಕಡೆ ಕುರಾನಿಗೆ ಸಂಬಂಧಪಟ್ಟ ಕುರಾನು ಭಾಷ್ಯ, ನ್ಯಾಯಶಾಸ್ತ್ರ, ಅತಿಸೂಕ್ಷ್ಮತರ್ಕದ ದೇವತಾಶಾಸ್ತ್ರ, ಸೂಫೀತತ್ತ್ವ, ಇತಿಹಾಸ(ಇತ್ಯಾದಿ ಶಾಸ್ತ್ರಗ್ರಂಥಗಳು ರಚಿತವಾದುವಲ್ಲದೆ ಗ್ರೀಕರ ವಿಜ್ಞಾನಕ್ಕೆ ಸಂಬಂಧಪಟ್ಟ ಖಗೋಳ, ಗಣಿತ, ವೈದ್ಯ, ಭೂಗೋಳ(ಇತ್ಯಾದಿ ಶಾಸ್ತ್ರಗಳ ವ್ಯಾಸಂಗವೂ ನಡೆದು ಅನೇಕ ಗ್ರೀಕ್ ಪಸ್ತಕಗಳು ಅರಬ್ಬಿಗೆ ಪರಿವರ್ತನೆಗೊಂಡವು. ಈ ಭಾಷಾಂತರಗಳು ವಿಜ್ಞಾನಕ್ಕೂ ದರ್ಶನಕ್ಕೂ ಸಂಬಂಧಿಸಿದ ಅನೇಕ ಹೊಸ ಶಬ್ದಗಳನ್ನು ಭಾಷೆಗೆ ಒದಗಿಸಿದುವು. ಇವುಗಳನ್ನೆಲ್ಲ ಸೇರಿಸಿಕೊಂಡು, ಅಬ್ಬಾಸಿದ್ ಕಾಲದ ಒಬ್ಬ ಭಾಷಾಶಾಸ್ತ್ರಜ್ಞ ಗುಣಿಸಿರುವ ಪ್ರಕಾರ ಆಗಿನ ಅರಬ್ಬೀ ಭಾಷೆಯಲ್ಲಿ 1,22,35,412 ಶಬ್ದಗಳಿದ್ದುವು. ಮತ್ತೆ ಕೆಲವರ ಅಭಿಪ್ರಾಯದಲ್ಲಿ ಈ ಶಬ್ದಗಳ ಸಂಖ್ಯೆ 66,99,400.

ಈ ಪ್ರಕಾರ ಕ್ರಿ.ಶ.ಏಳನೆಯ ಶತಮಾನದಿಂದ ಈಚೆಗೆ ಇಸ್ಲಾಂ ಮತ ಹರಡಿದಂತೆಲ್ಲ ಅರಬ್ಬೀ ಭಾಷೆ ಜನಜೀವನದಲ್ಲೂ ರಾಜ್ಯ ಮತ್ತು ಆಡಳಿತಗಳಲ್ಲೂ ತನ್ನ ಸತ್ತ್ವವನ್ನು ಮೆರೆಯಿತು. ಅರೇಬಿಯ ಪರ್ಯಾಯ ದ್ವೀಪವೊಂದರಲ್ಲೇ ಅಲ್ಲದೆ ಮಧ್ಯಪ್ರಾಚ್ಯದ ಎಲ್ಲ ಏಷ್ಯ ರಾಜ್ಯಗಳಲ್ಲೂ ಆಫ್ರಿಕದ ಉತ್ತರ ಮತ್ತು ಪೂರ್ವಭಾಗದ ಪ್ರದೇಶಗಳಲ್ಲೂ ಸ್ಪೇನ್, ಸಿಸಿಲಿ ಮುಂತಾದ ಪಾಶ್ಚಾತ್ಯ ದೇಶಗಳಲ್ಲೂ ಅರಬ್ಬೀ ಭಾಷೆ ಹರಡಲು ಮೊದಲಿಟ್ಟು ಆಯಾ ದೇಶಭಾಷೆಗಳ ಮೇಲೆ ತನ್ನ ಪ್ರಭಾವವನ್ನು ಬೀರಿತು. ಅಲ್ಲದೆ, ಕೆಲವು ಪ್ರಾಂತ್ಯಗಳಲ್ಲಿ ಈಜಿಪ್ಟಿನಲ್ಲೆಸಗಿದಂತೆ, ಸ್ಥಳೀಯ ಉಪಭಾಷೆಗಳನ್ನು ಮೂಲೆಗೊತ್ತಿತ್ತು. ಲೌಕಿಕಾಧಿಕಾರ ಕಳೆದುಕೊಂಡ ಮೇಲೂ ಅರಬ್ಬೀ ಭಾಷೆ ತನ್ನ ಮತೀಯ ಪ್ರಭಾವವನ್ನು ದೃಢಪಡಿಸಿಕೊಳ್ಳದಿರಲಿಲ್ಲ, ಏಕೆಂದರೆ ಈಗಲೂ ಇಸ್ಲಾಂ ಮತ ಪಶ್ಚಿಮ ಏಷ್ಯದಲ್ಲೂ ಆಫ್ರಿಕದಲ್ಲೂ ಸಾರ್ವಭೌಮ ಪದವಿಯಲ್ಲಿದೆ. ಯೂರೋಪಿನ ನೆಲದಲ್ಲೂ ಸ್ಪೇನ್-ಸಿಸಿಲಿಗಳು ತನ್ನನ್ನು ಹೊರಹಾಕಿದ್ದಕ್ಕೆ ತಕ್ಕ ಪರಿಹಾರವನ್ನು ಅದು ತುರ್ಕಿದೇಶದಲ್ಲಿ ಪಡೆದಿದೆ. ಈ ಪ್ರದೇಶಗಳ ಸ್ಥಳೀಯ ಪ್ರಭಾವಗಳಿಂದ ಅರಬ್ಬೀ ಭಾಷೆ ಅನೇಕ ಉಪಭಾಷೆಗಳಾಗಿ ಬೆಳೆದಿದ್ದರೂ ಕುರಾನಿನ ಭಾಷೆಯನ್ನೇ ಮಾದರಿಯನ್ನಾಗಿ ಕಳೆದ 1,400 ವರ್ಷಗಳಿಂದಲೂ ಇಟ್ಟುಕೊಂಡಿದ್ದರ ಪರಿಣಾಮವಾಗಿ ಈ ದೇಶಗಳ ಗ್ರಾಂಥಿಕ ಭಾಷೆ ಒಂದೇ ತೆರನಾಗಿ ಉಳಿದು ಬಂದಿದೆ. ಮಧ್ಯಪ್ರಾಚ್ಯದ ಅನೇಕ ದೇಶಗಳಲ್ಲಿ ಇದು ಮಾತೃಭಾಷೆಯಾಗಿರುವುದಲ್ಲದೆ, ಸಮಸ್ತ ಮುಸ್ಲಿಂ ಜಗತ್ತಿನ ಧರ್ಮ ಮತ್ತು ಸಂಸ್ಕøತಿಯ ಭಾಷೆಯಾಗಿದೆ, ಈ ಭಾಷೆಯಲ್ಲಿ ಸಾವಿರಾರು ದಿನಪತ್ರಿಕೆಗಳನ್ನೂ ಕಾಲಿಕ ಪತ್ರಿಕೆಗಳನ್ನೂ ಪುಸ್ತಕಗಳನ್ನೂ ಇಂದಿಗೂ ಪ್ರಕಟಿಸುತ್ತಿರುವ ಅರಬ್ಬೀಯನ್ನಾಡುವ ದೇಶಗಳಲ್ಲಿ ಇದು ಪಾಠಪ್ರವಚನಗಳಿಗೂ ಸಂಭಾಷಣೆಗೂ ಉಪಯೋಗಿಸಲ್ಪಡುತ್ತಿದೆಯಲ್ಲದೆ ಉತ್ತರ ಮತ್ತು ದಕ್ಷಿಣ ಅಮೆರಿಕಗಳಲ್ಲಿ ವಲಸೆ ಹೋಗಿ ನಿಂತಿರುವ ಅರಬ್ಬರ ನೆಲೆಗಳಲ್ಲಿ ಬರೆವಣಿಗೆಗೂ ಸಂಭಾಷಣೆಗೂ ಬಳಕೆಯಾಗುತ್ತಿದೆ. ಅನೇಕ ಸಿಮಿಟಿಕ್ ಭಾಷೆಗಳು, ಸಂದಿಗ್ಧವಾದ ಐತಿಹಾಸಿಕ ದಾಖಲೆಗಳನ್ನು ಮಾತ್ರ ಉಳಿಸಿ ನಾಶಹೊಂದಿವೆಯಾದರೂ ಅರಬ್ಬೀ ಭಾಷೆಯಲ್ಲಿ ಮಾತ್ರ ಅದರ ಬೆಳೆವಣಿಗೆಯ ಪ್ರತಿಯೊಂದು ಮುಖವನ್ನು ರೇಖಿಸುವುದಕ್ಕೂ ಅರಬ್ಬರ ರಾಷ್ಟ್ರೀಯ ಜೀವನಕ್ರಮ ಮತ್ತು ಆಲೋಚನೆಗಳ ಇತಿಹಾಸವನ್ನು ಬರೆಯುವುದಕ್ಕೂ ಸಹಕಾರಿಯಾಗುವ ವಿಪುಲ ವಿಷಯ ಸಂಪತ್ತು ಇದೆ. (ಎಂ.ಎ.ಎಂ.)