ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅರಿಸ್ಟಾಟಲ್

ವಿಕಿಸೋರ್ಸ್ದಿಂದ

ಅರಿಸ್ಟಾಟಲ್
ಪ್ರ.ಶ.ಪೂ.384-322. ಗ್ರೀಸ್ ದೇಶದ ಪ್ರಸಿದ್ಧ ತತ್ತ್ವಜ್ಞಾನಿ. ಥ್ರೇಸಿನ ರೇವುಪಟ್ಟಣವಾದ ಸ್ಟಗಿರದಲ್ಲಿ ಜನಿಸಿದ. ತಂದೆ ನೈಕೊಮ್ಯಾಕಸ್ ಮ್ಯಾಸಿಡೋನಿಯ ದೊರೆ ಎರಡನೆಯ ಅಮಿನ್‍ಟಾಸ್‍ನ ಆಸ್ಥಾನ ವೈದ್ಯನಾಗಿದ್ದ. 17ನೆಯ ವಯಸ್ಸಿನಲ್ಲಿ ಉಚ್ಚ ಶಿಕ್ಷಣಕ್ಕಾಗಿ ಅಥೆನ್ಸ್ ಪಟ್ಟಣಕ್ಕೆ ಹೋಗಿ ಪ್ಲೇಟೋನ ಅಕಾಡೆಮಿಯನ್ನು ಸೇರಿ ಅಲ್ಲಿ 20 ವರ್ಷಗಳ ಕಾಲ ವ್ಯಾಸಂಗ ನಡೆಸಿದ. ಪ್ಲೇಟೋ ಇವನನ್ನು ತನ್ನ ವಿದ್ಯಾಪೀಠದ ವಿಚಾರ ಚೈತನ್ಯ ವೆಂದು ಕರೆದಿರುತ್ತಾನೆ. ಗುರು ಏನನ್ನು ಬೋಧಿಸಿದರೂ ಅರಿಸ್ಟಾಟಲ್ ಅದಕ್ಕೆ ಪ್ರತಿಯಾದ ಪಕ್ಷವನ್ನು ಮಂಡಿಸದೆ ಬಿಡುತ್ತಿರಲಿಲ್ಲ. ಕರುಗಳು ತಾಯ ಮೊಲೆಯುಣ್ಣುವಾಗ ಅದನ್ನುತಿವಿದು ಗುದ್ದುವಂತೆ ಪಾಠ ಹೇಳುವಾಗ ಅರಿಸ್ಟಾಟಲ್ ತನ್ನನ್ನು ತಿವಿದು ಗುದ್ದುತ್ತಾನೆಂದು ಪೇಟೋ ನಕ್ಕು ನುಡಿದಿದ್ದಾನೆ. ತನ್ನ ಸಂತ ಅಭಿಪ್ರಾಯಗಳನ್ನು ತಿಳಿಸಲು ಅವಕಾಶ ಕೊಟ್ಟದ್ದು ಪೇಟೊನ ಉದಾರನೀತಿಯನ್ನು ಸ್ಪಷ್ಟ ಪಡಿಸುತ್ತದೆಯಲ್ಲದೆ ಅರಿಸ್ಟಾಟಲನ ವಿಚಾರನಿಷ್ಠೆಯನ್ನು ವ್ಯಕ್ತಗೊಳಿಸುತ್ತದೆ. ಅರಿಸ್ಟಾಟಲ್ ಆದರ್ಶ ಗುರುವಿನ ಶಿಷ್ಯ. ಅರಿಸ್ಟಾಟಲ್ ಒಂದು ಸಂದರ್ಭದಲ್ಲಿ ಹೀಗೆ ಹೇಳುತ್ತಾನೆ: ನಾನು ಪ್ಲೇಟೊನನ್ನು ಪ್ರೀತಿಸುತ್ತೇನೆ; ಆದರೆ ಸತ್ಯವನ್ನು ಇನ್ನೂ ಹೆಚ್ಚಾಗಿ ಪ್ರೀತಿಸುತ್ತೇನೆ. ಈ ಹೇಳಿಕೆ ಎಲ್ಲ ಗುರುಶಿಷ್ಯರೂ ಗಮನಿಸಿಬೇಕಾದ ಆದೇಶವನ್ನು ಒಳಗೊಂಡಿದೆ. ಪ್ಲೇಟೋನ ಮರಣಾನಂತರ ಅವನ ಸೋದರನ ಮಗ ಪ್ಸಿಸಿಪಸ್ ಪ್ಲೇಟೋನ ಅಕಾಡೆಮಿಯ ಉತ್ತರಾಧಿ ಕಾರಿಯಾದನೇ ಹೊರತು.ಪ್ಲೇಟೋ ನಂತೆ ಅದರ ಉತ್ತಮಾಧಿಕಾರಿಯಾಗ ಲಿಲ್ಲ. ಆದ್ದರಿಂದ ಅರಿಸ್ಟಾಟಲನಿಗೆ ಅಲ್ಲಿ ಇರಲು ಒಗ್ಗದೆ ತನ್ನ ಸಹಪಾಠಿ ಯಾದ ಝೆನೊಕ್ರೇಟೀಸನೊಡನೆ ಅಕಾಡೆಮಿಯನ್ನು ಬಿಟ್ಟು ತನ್ನ ಸ್ನೇಹಿತ ಹರ್ಮೀಸ್ ತನಗೆ ಬಹುಮಾನವಾಗಿ ಕೊಟ್ಟಿದ್ದ ಅಪ್ಸಸ್ ಪಟ್ಟಣದಲ್ಲಿ ನೆಲಸಿ ಒಂದು ವಿದ್ಯಾನಿಲಯವನ್ನು ಸ್ಥಾಪಿಸಿ ತನ್ನ ಸಹಪಾಠಿಯೊಡನೆ ಅದನ್ನು ಮೂರು ವರ್ಷಗಳ ಕಾಲ ನಡೆಸಿದ, ಇದೇ ಕಾಲದಲ್ಲಿ ಹರ್ಮೀಸ್ ತನ್ನ ತಂಗಿ ಪಿಥಿಯಾಸಳನ್ನು ಅರಿಸ್ಟಾಟಲನಿಗೆ ಕೊಟ್ಟು ಮದುವೆ ಮಾಡಿದ. ಅರಿಸ್ಟಾಟಲ್ ತನ್ನ ಹೆಂಡತಿಯೊಡನೆ ವಿಹರಿಸಲು ಲೆಸ್‍ಬಾಸ್ ದ್ವೀಪಕ್ಕೆ ಹೋದ. ಎರಡು ವರ್ಷಗಳ ಪರ್ಯಂತ ಅಲ್ಲಿ ಆತ ವಿಹಾರದ ಜೊತೆಗೆ ಪ್ರಾಣಿಿ ವಿಜ್ಞಾನದಲ್ಲೂ ಆಸಕ್ತನಾಗಿದ್ದ. ಹೆಂಡತಿ ತೀರಿಕೊಂಡ ಮೇಲೆ ಹರ್ವಿದಿಥೀಸ್‍ಳನ್ನು ಮದುವೆಯಾದ. ಅವಳಲ್ಲಿ ಹುಟ್ಟಿದ ಮಗನ ಹೆಸರು ನೈಕೊಮ್ಯಾಕಸ್, ಅವನ ಹೆಸರಿನಲ್ಲಿ ಅರಿಸ್ಟಾಟಲ್ ಎಥಿಕಾ ನೈಕೊಮ್ಯಾಕಿಯ ಎಂಬ ಪ್ರಸಿದ್ಧ ನೀತಿಗ್ರಂಥವನ್ನು ಬರೆದಿದ್ದಾನೆ.

ಪ್ರ ಶ.ಪೂ. 343ರಲ್ಲಿ ಮ್ಯಾಸಿಡಾನಿನ ದೊರೆ ಫಿಲಪ್ ತನ್ನ ಮಗ ಅಲೆಕ್ಸಾಂಡರನಿಗೆ ಗುರುವಾಗಬೇಕೆಂದು ಅರಿಸ್ಟಾಟಲನಿಗೆ ಆಹ್ವಾನವಿತ್ತ. ದೊರೆಯ ಆಹ್ವಾನವನ್ನು ಅಂಗೀಕರಿಸಿ ಫಿಲಿಪ್ಪನ ಆಸ್ಥಾನದಲ್ಲಿ ನೆಲಸಿ ಅಲೆಕ್ಸಾಂಡರನಿಗೆ ಕೆಲವು ವರ್ಷಗಳ ಕಾಲ ಅರಿಸ್ಟಾಟಲ್ ಪಾಠ ಹೇಳುತ್ತಿದ್ದ. ಫಿಲಿಪ್ ತೀರಿಕೊಂಡಮೇಲೆ ಇನ್ನೂ ಹರೆಯದಲ್ಲಿ ಕಾಲಿಡುತ್ತಿದ್ದ ಅಲೆಕ್ಸಾಂಡರ್ ವ್ಯಾಸಂಗಕ್ಕಿಂತಲೂ ದೇಶದ ಆಡಳಿತಕ್ಕೆ ಹೆಚ್ಚು ಗಮನ ಕೊಡಬೇಕಾಯಿತು. ಸಿಂಹಾಸನವನ್ನೇರಿದ ಕೂಡಲೆ ತನ್ನ ಜೈತ್ರಯಾತ್ರೆಗೆ ಸಜ್ಜುಗೊಳಿಸುವುದರಲ್ಲಿಮಗ್ನನಾದ. ಆದ್ದರಿಂದ ಅರಿಸ್ಟಾಟಲನಿಗೆ ಅವನನ್ನು ಬೇಟಿ ಮಾಡುವ ಅವಕಾಶ ಕಡಿಮೆಯಾಯಿತು. ಅವನಿಗೆ ಬೋಧಕನಾಗಿರುವ ಅಗತ್ಯ ತುಂಬ ಕಡಿಮೆಯೆಂದು ಅರಿಸ್ಟಾಟಲನಿಗೆ ಅನ್ನಿಸಿತು. ಪ್ರ ಶ.ಪೂ.335ರಲ್ಲಿ ಅಥೆನ್ಸಿಗೆ ಹಿಂತಿರುಗಿ ಅಲ್ಲಿ ಲಿಷಿಯಂ ಎಂಬ ತನ್ನ ವಿದ್ಯಾಪೀಠವನ್ನು ಸ್ಥಾಪಿಸಿ ಪ.ಶ.ಪೂ.323ರ ವರೆಗೆ ಹನ್ನೆರಡು ವರ್ಷಗಳ ಕಾಲ ಅದರ ಆಚಾರ್ಯನಾಗಿ ಇದ್ದ. ಇವನು ನಿಧಾನವಾಗಿ ಅಡ್ಡಾಡುತ್ತ ಶಿಷ್ಯ ವೃಂದಕ್ಕೆ ಪಾಠ ಹೇಳುತ್ತಿದ್ದನಾದುದರಿಂದ ಇವನ ಶಾಲೆಗೆ ಪೆರಿಪೆಟಿಟಿಕ್ ಶಾಲೆಯೆಂದು ಹೆಸರು ಬಂತು; ಇವನ ಅನುಯಾಯಿಗಳನ್ನು ಪೆರಿಪೆಟಿಟಿಕ್ಸ್ ಎಂದು ಕರೆಯುವುದು ವಾಡಿಕೆಯಾಯಿತು. ಅಲೆಕ್ಸಾಂಡರನ ಮರಣಾನಂತರ ಅಥೆನ್ಸಿನಲ್ಲಿ ಅವನ ವಿರೋಧಪಕ್ಷದವರು ಬಲಗೊಂಡು ಅವನಿಗೆ ಗುರುವಾದ ಅರಿಸ್ಟಾಟಲ್ ತಮ್ಮ ಹಗೆಯೆಂದೂ ದೇಶದ್ರೋಹಿ ಯೆಂದೂ ಅವನ ಮೇಲೆ ಆಪಾದನೆ ಹೂಡಿದರು. ಇನ್ನೊಬ್ಬ ತತ್ತ್ವಶಾಸ್ತ್ರಜ್ಞನನ್ನು ಕೊಂದ ಅಪಕೀರ್ತಿ ಅಥೆನ್ಸಿಗೆ ಬಾರದಿರಲೆಂದು ಎಣಿಸಿ ಅರಿಸ್ಟಾಟಲ್ ತಲೆತಪ್ಪಿಸಿಕೊಂಡು ಯುಒಬಾಕ್ಕೆ ಓಡಿಹೋದ. ಸ್ವಲ್ಪಕಾಲದಲ್ಲೇ ಅಂದರೆ ಪ.ಶ.ಪೂ.322ರಲ್ಲಿ ಅಲೇ ದೈವಾಧೀನನಾದ. ಪ್ರಕೃತಿಯ ವ್ಯಾಪಾರಗಳಲ್ಲಿ ಕುತೂಹಲ, ತೀಕ್ಷ್ಣವಾದ ತರ್ಕಶಕ್ತಿ, ಅನುಪಮವಾದ ಸ್ನೇಹಪರತೆ ಮತ್ತು ಔದಾರ್ಯಇವು ಅವನ ವ್ಯಕ್ತಿತ್ವದ ಮುಖ್ಯಗುಣಗಳು. ತತ್ತಾವಲೋಕನ ಅವನ ಜೀವನದ ಅಮೂಲ್ಯ ಸೌಖ್ಯವಾಗಿತ್ತು. ಅವನ ಕಾಲದಲಿದ್ದ ಸಮಸ್ತ ಕಲೆಗಳಲ್ಲೂ ಶಾಸ್ರಗಳಲ್ಲೂ ಅವನು ವಿಶೇಷ ಆಸಕ್ತಿ ಪಡೆದಿದ್ದನಲ್ಲದೆ ಅವುಗಳನ್ನು ಕುರಿತು ಸಾವಿರಾರು ವರ್ಷಗಳ ಕಾಲ ನಿಲ್ಲಬಹುದಾದ ಪ್ರಮಾಣಗ್ರಂಥಗಳನ್ನು ರಚಿಸಿದ.

ಪ್ಲೇಟೊನಂತೆ ಅರಿಸ್ಟಾಟಲ್ ಕೂಡ ಕೆಲವು ಸಂವಾದಗಳನ್ನು ಬರೆದಿದ್ದ. ಪೊಟ್ರಿಸಿಕಸ್ ಮತ್ತು ಡಿಫಿಲಸೋಫಿಯ ಎಂಬ ಸಂವಾದಗಳು ತತ್ವಕ್ಕೂ ಪೊಲಿಟಿಕಸ್, ಸೊಫಿಸ್ಟಿಕಸ್ ಮತ್ತು ಜೆಸ್ಟಿಸ್ ಎಂಬ ಸಂವಾದಗಳು ರಾಜಕೀಯಕ್ಕೂ ನೀತಿಗೂ ಸಂಬಂಧಪಟ್ಟವು. ಅವು ಈಗ ನಮಗೆ ದೊರೆತಿಲ್ಲ. ಅವುಗಳ ಕೆಲವು ತುಣುಕುಗಳು ಮಾತ್ರ ಸಿಕ್ಕಿವೆ. ಅವನ ಮಾತು ಸುವರ್ಣಧಾರೆ ಎಂದು ಸಿಸಿರೋ; ಶೈಲಿ ಸುಂದgವಾದದ್ದು, ಸಾರವತ್ತಾದದ್ದು ಎಂದು ಕ್ವಿನ್‍ಟಿಲಿಯನ್; ಶಕ್ತಿಯುತವಾದದ್ದು, ಸ್ಪಷ್ಟವಾದದ್ದು, ಲಲಿತವಾದದ್ದು ಎಂದು ಡಯೋನಿಯಸ್ ಹೊಗಳಿದ್ದಾರೆ. ಈ ಪ್ರಶಂಸೆಗಳು ಬಹುಶಃ ಈಗ ನಮಗೆ ದೊರೆಯದಿರುವ ಅವನ ಸಂವಾದಗಳನ್ನು ಕುರಿತವಾಗಿರಬಹುದು. ಈ ಗುಣಗಳೂ ಈಗ ನಮಗೆ ದೊರೆತಿರುವ ಅರಿಸ್ಟಾಟಲನ ಗ್ರಂಥಗಳಲ್ಲಿ ಕಾಣಬರುವುದಿಲ್ಲ. ಇವು ಬಹುಶಃ ಪ್ರಕಟಣೆಗಾಗಿ ಸಿದ್ಧಗೊಳಿಸಿದ ಗ್ರಂಥಗಳಲ್ಲ; ಪಾಠ ಹೇಳಲು ಅವನು ಗುರುತು ಮಾಡಿಕೊಂಡಿದ್ದ ಟಿಪ್ಪಣಿಗಳಿರಬಹುದು. ಇವನು ನಾಲ್ಕುನೂರು ಗ್ರಂಥಗಳನ್ನು ಬರೆದಿದ್ದನೆಂದು ತಿಳಿದಿದೆ. ಆದರೆ ಅವುಗಳಲ್ಲಿ ಹೆಚ್ಚು ಭಾಗ ನಷ್ಟವಾಗಿದೆ. ಉಳಿದಿರುವವುಗಳಲ್ಲಿ ಮುಖ್ಯವಾದುದನ್ನು ಆರು ಭಾಗಗಳಾಗಿ ವಿಂಗಡಿಸಬಹುದು.

  1. ತರ್ಕಶಾಸ್ತ್ರ: ಕೆಟಿಗೊರಿಯ, ಡಿ ಇಂಟರ್‍ಪ್ರಿಟೇಷನ, ಅನಲಿಟಿಕ ಪ್ರಯೋರ, ಅನಲಿಟಿಕ ಪಾಸ್ಟೇರಿಯೋರ, ಟಾಪಿಕ, ಡಿ ಸೋಫಿಸ್ಟಿಕ ಮತ್ತು ಎಲೆಂಕಿಸ್.
  2. ಭೌತವಿಜ್ಞಾನ: ಫಿಸಿಕ, ಡಿ ಕೋಲೊ, ಡಿ ಜನರಾಸಿಯೋನಿ, ವಿಟ್‍ಕರಪ್ಷನಿ ಮತ್ತು ಮೀಟಿಯೊರೊಲಾಜಿಕ.
  3. ಜೀವವಿಜ್ಞಾನ: ಹಿಸ್ಟೋರಿಯ ಅನಿಮೇಲಿಯಂ, ಡಿ ಪಾರ್ಟಿಬಸ್ ಅನಿಮೇಲಿಯಂ, ಡಿ ಅನಿಮಾ ಮತ್ತು ಪಾರ್ವಾನ್ಯಾಟುರಾಲಿಯ.
  4. ಪಥಮ ತತ್ತ್ವಗಳು: ಮೆಟಫಿಸಿಕ.
  5. ನೀತಿಶಾಸ್ರ್ತ ಮತ್ತು ರಾಷ್ಟ್ರಶಾಸ್ರ್ತ : ಎಥಿಕ ನೈಕೊಮ್ಯಾಕಿಯ, ಎಥಿಕ ಈಡೆಮಿಯ, ಮ್ಯಗ್ಸಾ ಮೊರೇಲಿಯ, ಪೊಲಿಟಿಕ ಮತ್ತು ಎಕನಾಮಿಕ.
  6. ಅಲಂಕಾರಶಾಸ್ತ್ರ ಮತ್ತು ಕಾವ್ಯಮೀಮಾಂಸೆ: ರೆಟೊರಿಕ, ಪೊಯೆಟಿಕ.

ಈ ಶಾಸ್ತ್ರಗಳನ್ನು ಕುರಿತ ವಿಷಯಗಳ ತುಂಬ ಸಂಗ್ರಹವಾದ ಪರಿಚಯ ಇಲ್ಲಿದೆ.

ತರ್ಕಶಾಸ್ತ್ರ[ಸಂಪಾದಿಸಿ]

ಅರಿಸ್ಟಾಟಲನಿಗೆ ಮುಂಚೆ ತರ್ಕಶಾಸ್ತ್ರ ಬೇರೆಯ ಶಾಸ್ತ್ರವಾಗಿರದೆ ವಾದವಿದ್ಯೆಯಲ್ಲಿ ಅಡಗಿಹೋಗಿತ್ತು. ಸಾಕ್ರಟೀಸ್ ಲಕ್ಷಣನಿರೂಪಣೆಗೂ ಪೇಟೊ ಆನ್ವೀಕ್ಷಿಕಿಗೂ ಜ್ಞಾನಮೀಮಾಂಸೆಗೂ ಹೆಚ್ಚು ಪ್ರಾಶಸ್ತ್ಯ ಕೊಟ್ಟರು. ಅರಿಸ್ಟಾಟಲ್ ಈ ಅಂಶಗಳನ್ನು ಸೇರಿಸಿಕೊಂಡು ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಅನುಮಾನದ ಸ್ವರೂಪವನ್ನು ಖಚಿತಗೊಳಿಸಿ ಇಂದಿನ ಪಾಶ್ಚಾತ್ಯ ತರ್ಕಶಾಸ್ರ್ತಕ್ಕೆ ತಳಹದಿ ಹಾಕಿದ. ಅವನ ತರ್ಕಶಾಸ್ರ್ತ್ತದಲ್ಲಿ, ಇಂದಿನ ಸಾಮಾನ್ಯ ತರ್ಕಶಾಸ್ತ್ರ ಗ್ರಂಥಗಳಲ್ಲಿ ಸೇರಿರುವ ವಿಷಯಗಳು ಅಡಕವಾಗಿವೆಯಲ್ಲದೆ ಜ್ಞಾನಮೀಮಾಂಸೆಯ ಅಂಶಗಳೂ ಸೇರಿವೆ. ಅವನ ಮೊದಲನೆಯ ತಾರ್ಕಿಕಗ್ರಂಥವಾದ ಕೆಟಿಗೊರಿಯದಲ್ಲಿ ವೈಶೇಷಿಕ ದಾರ್ಶನಿಕರು ಅಲೋಚ್ಯವಿಷಯಗಳನ್ನು ಹತ್ತು ಪದಾರ್ಥಗಳಾಗಿ ವಿಂಗಡಿಸಿದ್ದಾನೆ. ದ್ರವ್ಯ, ಗುಣ, ಪರಿಮಾಣ, ಸಂಬಂಧ, ದೇಶ, ಕಾಲ, ಭಂಗಿ, ಸ್ಥಿತಿ, ಕರ್ಮ ಮತ್ತು ಕರ್ಮಣಿತ್ವಇವು ಆ ಹತ್ತು ಪದಾರ್ಥಗಳು. ಎರಡನೆಯ ತಾರ್ಕಿಕಗ್ರಂಥವಾದ ಇಂಟರ್‍ಪ್ರಿಟೇಷನಾನಲ್ಲಿ ಲಕ್ಷಣನಿರೂಪಣೆ ಮತ್ತು ಶಾಬ್ದಬೋಧ ಸೇರಿವೆ. ಮೂರನೆಯದಾದ ಅನಲಿಟಿಕ ಪ್ರಯೋರದಲ್ಲಿ ನಿಗಮನತರ್ಕವೂ ನಾಲ್ಕನೆಯದಾದ ಅನಲಿಟಿಕ ಪಾಸ್ಟೇರಿಯೋರದಲ್ಲಿ ಅನುಗಮನತರ್ಕವೂ ಸೇರಿವೆ. ಕೊನೆಯದಾದ ಎಲೆಂಕಿಸ್‍ನಲ್ಲಿ ತರ್ಕಾಭಾಸಗಳನ್ನು ವರ್ಣಿಸಿದೆ. ಅನಲಿಟಿಕ ಪಯೋರದಲ್ಲಿ ಆತ ಮೂರು ಅವಯವಗಳುಳ್ಳ ನ್ಯಾಯವನ್ನು ನಿರೂಪಿಸಿ ಸಮಧ್ಯ ಮ ಅನುಮಾನದ ಸ್ವರೂಪವನ್ನು ಖಚಿತಪಡಿಸಿದ್ದಾನೆ. ಆತ ಸ್ಥಾಪಿಸಿದ ಮೂರು ಅವಯವಗಳ ನ್ಯಾಯ ಇಂದಿಗೂ ಪಾಶ್ಚಾತ್ಯ ತರ್ಕಶಾಸ್ರ್ತ ದಲ್ಲಿ ವಿರಾಜಿಸುತ್ತಿದೆ.

ಅರಿಸ್ಟಾಟಲನ ಕಾಲದಿಂದ ಸುಮಾರು 19 ಶತಮಾನಗಳ ಕಾಲ ಪಾಶ್ಚಾತ್ಯ ತಾರ್ಕಿಕರು ಅವನ ನಿಗಮನತರ್ಕಕ್ಕೆ ಮಾತ್ರ ಗಮನ ಕೊಟ್ಟು ಅವನ ಅನುಗಮನತರ್ಕನ್ನು ಅಲಕ್ಷಿಸಿದರು. ಪರಿಣಾಮವಾಗಿ ಅರಿಸ್ಟಾಟಲನ ತರ್ಕ ಕೇವಲ ನಿಗಮನತರ್ಕವೆಂಬ ತಪ್ಪು ಅಭಿಪ್ರಾಯ ನೆಲೆಗೊಂಡಿತು. ಪ್ರ.ಶ.16ನೆಯ ಶತಮಾನದಲ್ಲಿ ಬೇಕನ್ ಎಂಬ ಆಂಗ್ಲೇಯ ತಾರ್ಕಿಕ ಅರಿಸ್ಟಾಟಲನ ತರ್ಕಕ್ಕೆ ಅನುಗಮನದ ಆಧಾರವಿಲ್ಲದ್ದರಿಂದ ಅದು ಅಪ್ರಯೋಜಕವೆಂದು ಖಂಡಿಸಿ ಅನುಗಮನ ಪದ್ಧತಿಯ ಪತಾಕೆಯನ್ನು ಎತ್ತಿಹಿಡಿದ. ಆದ್ಧರಿಂದ ಅವನ ತರ್ಕಪದ್ಧತಿಗೆ ಬೇಕನ್ ಪದ್ಧತಿಯೆಂಬ ಹೆಸರು ಬಂದಿದೆ. ಆದರೆ ಈಚಿನ ಪಾಶ್ಚಾತ್ಯ ತಾರ್ಕಿಕರು ಬೇಕನ್ನ ನ ಪದ್ಧತಿ ಹೊಸದೇನೂ ಅಲ್ಲವೆಂದೂ ಅದು ಅರಿಸ್ಟಾಟಲನ ಅನಲಿಟಿಕ ಪಾಸ್ಟೇಏರಿಯೋರದಲ್ಲೇ ಉಕ್ತವಾಗಿದೆಯೆಂದೂ ಅರಿಸ್ಟಾಟಲನ ಗಮನತರ್ಕಕ್ಕೆ ಆಧಾರವಾಗಿ ಅನುಗಮನವನ್ನೂ ಒಳಗೊಂಡಿದೆಯೆಂದೂ ಸ್ವಷ್ಟಪಡಿಸಿದ್ದಾರೆ. ಅರಿಸ್ಟಾಟಲ್ ತನ್ನ ಜೀವವಿಜ್ಞಾನದಲ್ಲಿ ಉಪಯೋಗಿಸಿರುವುದು ವಿಶೇಷವಾಗಿ ಅನುಗಮನತರ್ಕ, ಆತ ಪ್ರಾಣಿಿಶಾಸ್ತ್ರದಲ್ಲಿ ನಡೆಸಿದ ಸಂಶೋಧನೆಗಳ ಮೂಲಕ ಆಧುನಿಕ ವೈಜ್ಞಾನಿಕ ಪದ್ದತಿಗೆ ಅಸ್ತಿಭಾರ ಹಾಕಿದನಂದು ಹೇಳಬಹುದು.

ಅರಿಸ್ಟಾಟಲ್ ತರ್ಕಶಾಸ್ತ್ರಕ್ಕೆ ಮಾಡಿದ ಮಹದುಪಕಾರವೆಂದರೆ ಸಾಮಾನ್ಯಗಳು ಪ್ರತ್ಯೇಕಗಳಿಂದ ಬೇರೆಯಾದುವಲ್ಲ ಎಂಬುದನ್ನು ಸ್ಪಷ್ಟಡಿಸಿದ್ದು. ಸಾಮಾನ್ಯವೂ ಪ್ರತ್ಯೇಕವೂ ಒಂದಕ್ಕೂಂದು ಆಂತರಿಕವಾದುವು; ಒಂದನ್ನೂಂದು ಬಿಟ್ಟು ಇರಲಾರವು ಎಂಬುದನ್ನು ತಿಳಿಸಿ ಆತ ಪೇಟೊನ ಜ್ಞಾನಮೀಮಾಂಸೆಯನ್ನು ಪರಿಪೂರ್ಣಗೊಳಸಿದ. ಈ ವಿಚಾರದಲ್ಲಿ ಅರಿಸ್ಟಾಟಲ್ ಪ್ಲೇಟೊನ ಸಿದ್ಧಾಂತವನ್ನು ಖಂಡಿಸಿದಂತೆ ತೋರಿದರೂ ಸೂಕ್ಷ್ಮವಾಗಿ ಪರಿಶೀಲಿಸಿದರೆ ಅಂತಿಮದಲ್ಲಿ ಅವರಿಬ್ಬರ ಭಾವಗಳು ವಿರುದ್ಧವಲ್ಲವೆಂದು ಬೋಧೆಯಾಗುತ್ತದೆ.

ಭೌತವಿಜ್ಞಾನ[ಸಂಪಾದಿಸಿ]

ಅರಿಸ್ಟಾಟಲ್‍ನ ಸಿದ್ಧಾಂತಗಳು ಈಗ ಮೂಲೆಗೆ ಬಿದ್ದಿವೆಯಾದರೂ ಅನೇಕ ಶತಮಾನಗಳ ಪರ್ಯಂತ ಅವು ಪಾಶ್ಚಾತ್ಯ ರಿಗೆ ಪರಮಸತ್ಯಗಳಾಗಿದ್ದವು. ಭೌತ್ತವಸ್ತು, ಆಕಾಶ, ಕಾಲ ಮತ್ತು ಚಲನೆ ಅರಿಸ್ಟಾಟಲನ ಭೌತವಿಜ್ಞಾನದ ಮೂಲ ಭಾವನೆಗಳು. ಅವನ ಅಭಿಪ್ರಾಯದಲ್ಲಿ, ಭೌತವಸ್ತು ತೀರ ಜಡವಾದದ್ದು, ಚಲನೆ ಇಲ್ಲದ್ದು. ಅದು ಬರಿದಾದ, ಅನಂತವಲ್ಲದ ಆಕಾಶದಲ್ಲಿ ನೇತುಬಿದ್ದಿರುವ ವಸ್ತು. ಕಾಲವೂ ಚಲನೆಯೂ ಇದಕ್ಕೆ ಬಾಹಿರವಾದಂತಹವು. ರೂಪವಿಲ್ಲದ ಭೌತವಸ್ತು ರೂಪತಾಳುವುದಕ್ಕೆ ಕಾರಣ. ಚಲನೆ ಚಲನೆ ನಾಲ್ಕು ಬಗೆಯಾಗಿದೆ. ಮೊದಲ ಬಗೆಯ ಚಲನೆ ಭೌತ್ತವಸ್ತುವಿನ ರೂಪವನ್ನು ಬದಲಾಯಿಸುತ್ತದೆ. ಎರಡನೆಯದು ಗುಣವನ್ನು ಬದಲಾಯಿಸುತ್ತದೆ. ಮೂರನೆಯದು ಪ್ರಮಾಣವನ್ನು ಬದಲಾಯಿಸುತ್ತದೆ. ನಾಲ್ಕನೆಯದು ಸ್ಥಳವನ್ನು ಬದಲಾಯಿಸುತ್ತದೆ. ಕಾಲ ಮತ್ತು ಆಕಾಶಗಳು ಅನಂತವಾಗಿ ವಿಭಾಗವಾಗತಕ್ಕವು. ಸೂರ್ಯಚಂದ್ರಾದಿಗಳು ಭೌತ್ತವಸ್ತುಗಳಲ್ಲ. ಅವುಗಳ ಸತ್ವವೂ ಸ್ವರೂಪವೂ ಭೌತ್ತವಸ್ತುವಿನಿಂದ ಬೇರೆಯಾದುವು. ಅವು ಶುದ್ಧ ಸತ್ತ್ವಪಡೆದ ದಿವ್ಯ ವಸ್ತುಗಳು.

ಪ್ರಾಣಿವಿಜ್ಞಾನ[ಸಂಪಾದಿಸಿ]

ಇದು ಅವನ ಭೌತವಿಜ್ಞಾನದಂತೆ ಆಕಾಶಪುರಾಣವಲ್ಲ ಪ್ರಾಣಿಿಗಳನ್ನೂ ಅವುಗಳ ಎಲುಬುಗಳನ್ನೂ ಚಿಪ್ಪುಗಳನ್ನೂ ಸಾವಧಾನದಿಂದ ನಿರಂತರವಾಗಿ ಕಣ್ಣಿಟ್ಟು ಪರೀಕ್ಷಿಸಿ ಕ್ರಮವರಿತು ವಿಂಗಡಿಸಿ, ವರ್ಗೀಕರಿಸಿ, ಅನುಗಮನದ ಆಧಾರದ ಮೇಲೆ ರಚಿಸಿದ ವಿಜ್ಞಾನವಿದು. ಅರಿಸ್ಟಾಟಲನಿಗೆ ಬಾಲ್ಯದಿಂದ ಈ ವಿಜ್ಞಾನದಲ್ಲಿ ಅತಿಶಯವಾದ ಆಸಕ್ತಿ ಇತ್ತು. ತಂದೆ ವೈದ್ಯನಾಗಿದ್ದುದೂ ಪ್ರಾಣಿವಿಜ್ಞಾನಿಯಾದ ಅಸ್‍ಕ್ಲಿಪಿಯಸ್ ಬಾಲ್ಯದಲ್ಲೇ ಪರಿಚಯವಾದದ್ದೂ ಆಸಕ್ತಿ ಬೆಳೆಯಲು ಕಾರಣವಿರಬಹುದು. ಮದುವೆ ಮಾಡಿಕೊಂಡು ತನ್ನ ಹೆಂಡತಿಯೊಡನೆ ವಿಹಾರಾರ್ಥವಾಗಿ ಲೆಸ್‍ಬಾಸ್ ದ್ವೀಪಕ್ಕೆ ಹೋದಾಗ ಎರಡು ವರ್ಷಗಳ ಕಾಲ ಸಸ್ಯಗಳ ಮಾದರಿಗಳನ್ನೂ ಸಮುದ್ರದ ಪ್ರಾಣಿಗಳ ಎಲುಬುಗಳನ್ನೂ ಚಿಪ್ಪುಗಳನ್ನೂ ಸಂಗ್ರಹಿಸುವುದೊಂದೇ ಅವನ ಮುಖ್ಯ ಕೆಲಸವಾಗಿತ್ತು. ಅಲೆಕ್ಸಾಂಡರ್ ನ ಗುರುವಾಗಿದ್ದ ಕಾಲದಲ್ಲಿ ಸಂಶೋಧನೆಗೆ ಬೇಕಾದ ಸಸ್ಯ ಗಳನ್ನೂ ಪ್ರಾಣಿಗಳನ್ನೂ ಅವುಗಳ ಅವಶೇಷಗಳನ್ನೂ ರಾಜಭಟರು ಒದಗಿಸುತ್ತಿದ್ದರು. ಅಲೆಕ್ಸಾಂಡರ್ ತನ್ನ ಜೈತ್ಯಯಾತೆಯ ಕಾಲದಲ್ಲಿ ವಿದೇಶಗಳಲ್ಲಿ ದೊರೆತ ಚಿತ್ರವಿಚಿತ್ರ ಪ್ರಾಣಿಗಳ ಮಾದರಿಗಳನ್ನು ತಿಳಿಯುವುದು ಎಷ್ಟು ಮಹತ್ವದ ಕೆಲಸ, ಅದನ್ನುತಿಳಿಯಲು ಯಾವ ವಿಶೇಷ ವಿಧಾನಗಳನ್ನು ಅನುಸರಿಸಬೇಕು ಎಂಬುದನ್ನು ಅರಿಸ್ಟಾಟಲ್ ತನ್ನ ಪಾರ್ಟಿಬಸ್ ಅನಿಮೇಲಿಯಂ ಗ್ರಂಥದಲ್ಲಿ ಆಧುನಿಕರನ್ನೂ ಅಚ್ಚರಿಗೊಳಿಸುವಷ್ಟು ಚೆನ್ನಾಗಿ ವಿವರಿಸುತ್ತಾನೆ, ವೈಜ್ಞಾನಿಕ ವರ್ಗೀಕರಣವಿಧಾನಕ್ಕೆ ಭದ್ರವಾದ ಬುನಾದಿಯನ್ನು ಏರ್ಪಡಿಸಿದ ಯಶಸ್ಸು ಆತನಿಗೆ ಸಲ್ಲಬೇಕು.

ಅರಿಸ್ಟಾಟಲ್ ಪರಿಣಾಮವಾದಿಯೆಂದು ಹೇಳುವುದುಂಟು. ಪ್ರಕೃತಿಯಲ್ಲಿ ಕ್ರಮವಾದ ಬೆಳೆವಣಿಗೆ ಇದೆ. ಕೆಳಮಟ್ಟದ ಪ್ರಕೃತಿಯ ಪರಿಣಾಮಗಳು ಮೇಲ್ಮಟ್ಟದ ಪ್ರಕೃತಿಯ ಪರಿಣಾಮಗಳಿಗೆ ತಳಹದಿಯಾಗಿವೆ. ಎಂದು ಮಾತ್ರ ಅರಿಸ್ಟಾಟಲ್ ತಿಳಿದಿದ್ದ. ಈಚಿನ ಪರಿಣಾಮಗಳಂತೆ ಮಾನವಜಾತಿಯೂ ಕಪಿಜಾತಿಯೂ ಒಂದೇ ಮೂಲದಿಂದ ಪರಿಣಾಮ ಗೊಂಡವೆಂದು ಆತ ತಿಳಿದಿರಲಿಲ್ಲ. ಅವನ ಪರಿಣಾಮವಾದ ಮುಖ್ಯವಾಗಿ ತಾತ್ತ್ವಿಕ ವೈಜ್ಞಾನಿಕವಲ್ಲ. (ಜಿ.ಎಚ್.)

ಮನಶ್ಶಾಸ್ತ್ರ[ಸಂಪಾದಿಸಿ]

ಅರಿಸ್ಟಾಟಲನ ಮನಶ್ಶಾಸ್ತ್ರದಲ್ಲಿ ವೈಜ್ಞಾನಿಕ ವಿಷಯಗಳೂ ತಾತ್ತ್ವಿಕ ವಿಷಯಗಳೂ ಮಿಲನವಾಗಿವೆ. ಅವುಗಳನ್ನು ಇಲ್ಲಿ ಹೀಗೆ ಸಂಗ್ರಹಿಸಬಹುದು. ನಿರ್ಜೀವ ವಸ್ತುಗಳಿಂದ ಜೀವಿಗಳನ್ನು ಪ್ರತ್ಯೇಕಿಸುವುದು ಆತ್ಮ. ಶರೀರ ಆತ್ಮದ ವಿಕಾಸ; ಆತ್ಮಶರೀರದ ವಿಕಾಸವಲ್ಲ. ಶರೀರಸಂರಕ್ಷಣೆ, ಸಂತಾನೋತ್ಪತ್ತಿ, ಇಂದ್ರಿಯವ್ಯಾಪಾರಗಳು, ವಾಸನಾವ್ಯಾಪಾರಗಳೂ ಇಚ್ಛೆ, ಪ್ರತಿಭೆ, ತರ್ಕ−ಇವು ಆತ್ಮದ ವ್ಯಾಪಾರಗಳು. ಸಸ್ಯಗಳ ಆತ್ಮವ್ಯಾಪಾರ ಆಹಾರಾರ್ಜನೆ ಮತ್ತು ಬೀಜೋತ್ಪತ್ತಿ ಮಾತ್ರವೇ. ಪ್ರಾಣಿಗಳ ಆತ್ಮಗಳ ಆತ್ಮಗಳು ಆಹಾರವನ್ನು ಸಂಪಾದಿಸಿಕೊಂಡು ಸಂತಾನವನ್ನು ಪೋಷಿಸುತ್ತವಲ್ಲದೆ ವಾಸನಾತ್ಮಕ ಸಂಸ್ಕಾರಗಳನ್ನೂ ಇಂದ್ರಿಯಾನುಭವಗಳನ್ನೂ ಪಡೆದಿರುತ್ತವೆ. ಮಾನವನ ಆತ್ಮಕ್ಕಾದರೋ ಇವೆಲಕ್ಕಿಂತ ಬುದ್ಧಿಶಕ್ತಿ ವಿಶಿಷ್ಟ್ಟ್ಟ್ಟವಾದುದ್ದು. ಪಂಚೇಂದ್ರಿಯಗಳಿಂದ ಹುಟ್ಟಿದ ಆಕೃತಿಗಳನ್ನು ಸಂವಿಧಾನಗೊಳಿಸುವುದು ಬುದ್ಧಿಯ ಕೆಲಸ. ಲೋಕಸಹಜವಾದ ತಿಳಿವನ್ನು ಪಾಶ್ಚಾತ್ಯ ರು ಕಾಮನ್‍ಸೆನ್ಸ್ ಎಂದು ಕರೆಯುವುದು ವಾಡಿಕೆ. ಇದು ಕೇವಲ ಬೌದ್ಧಿಕವಲ್ಲ, ಅಪ್ಪಟ ತಾರ್ಕಿಕ ಜ್ಞಾನವೂ ಅಲ್ಲ. ಅದು ವಿಶೇಷವಾಗಿ ಹೃದಯದ ಭಾವಗಳಿಂದ ಮಿಳಿತವಾದ ತಿಳಿವು. ಲೋಗರು ತಮಗೆ ತಿಳಿದಿದ್ವನ್ನು ನಾನು ತಿಳಿದಿದ್ದೇನೆ ಎಂದು ಹೇಳುವುದಕ್ಕಿಂತ ನನಗೆ ಹಾಗೆ ಅನ್ನಿಸುತ್ತದೆ; ನನ್ನ ಹೃದಯಕ್ಕೆ ಹಾಗೆ ತೋರುತ್ತದೆ ಎಂದು ಹೇಳುವುದು ರೂಢಿ. ಆದ್ದರಿಂದ ಅರಿಸ್ಟಾಟಲ್ ಸಾಮಾನ್ಯರ ತಿಳಿವಿಗೆ ಹೃದಯವೇ ಕಾರಣವೆಂದು ಹೇಳಿದ್ದಾನೆ. ಅರಿಸ್ಟಾಟಲ್‍ನ ಪ್ರಕಾರ ಬುದ್ಧಿಯ ಕೆಲಸ ಎರಡು ಬಗೆಯಾಗಿದೆ. ಇಂದ್ರಿಯಗಳಿಂದ ಬಂದ ಆಕೃತಿಗಳನ್ನು ಅಂಗೀಕರಿಸುವುದು ಮೊದಲನೆಯದು; ಅವುಗಳ ಸ್ವಭಾವಕ್ಕೆ ಯೋಗ್ಯವಾದ ಬೌದ್ಧಿಕರೂಪಗಳನ್ನು ಕೊಟ್ಟು ಸಂಯೋಗಗೊಳಿಸುವುದು ಎರಡನೆಯದು. ಬುದ್ಧಿಶಕ್ತಿವನ್ನು ವಿಚಾರಚೈತನ್ಯವೆಂದು ಕರೆಯಬಹುದು. ಈ ಚೈತನ್ಯ ಪ್ರಕೃತಿಯಲ್ಲಿ ಸುಪ್ತವಾಗಿದೆ. ಮಾನವಲ್ಲಿ ಎಚ್ಚೆತಿದೆ. ಸಮಸ್ತ ವಸ್ತುಗಳಿಗೂ ಆಧಾರವಾಗಿ ಅವುಗಳಲ್ಲಿ ಸುಪ್ತವಾಗಿರುವ ಭಾವಸತ್ವಗಳನ್ನು ತಿಳಿಯುವ ಶಕ್ತಿಯೇ ಬುದ್ಧಿಶಕ್ತಿ ಅಥವಾ ವಿಚಾರಚೈತನ್ಯ. ಇಲ್ಲಿ ಅರಿಸ್ಟಾಟಲ್ ಒಪ್ಪಿಕೊಂಡಿರುವ ಭಾವಸತ್ತ್ವಗಳು ಪ್ಲೇಟೊನ ಭಾವಸತ್ವಗಳೇ. ಇದರಿಂದ ಪ್ಲೇಟೊನ ಅಂತಿಮ ಸಿದ್ಧಾಂತಕ್ಕೂ ಅರಿಸ್ಟಾಟಲನ ಸಿದ್ಧಾಂತಕ್ಕೂ ವಿರೋಧವಿಲ್ಲವೆಂಬುದು ಸ್ಪಷ್ಟ.

ಪ್ಲೇಟೋ ಮತ್ತು ಪೈಥಾಗೊರಸ್ ಹೇಳುವಂತೆ ಆತ್ಮ ಶರೀರದಿಂದ ಬೇರೆ ಎಂಬುದನ್ನು ಅರಿಸ್ಟಾಟಲ್ ಅನುಮೋದಿಸುವುದಿಲ್ಲ. ಪೈಥಾಗೊರಸ್ ಹೇಳುವಂತೆ ಅದು ಒಂದು ಶರೀರದಿಂದ ಬೇರ್ಪಟ್ಟು ಮತ್ತೊಂದರಲ್ಲಿ ಸೇರಲಾರದು. ಒಂದೊಂದು ಪ್ರಾಣಿಯ ಶರೀರರಚನೆಯೂ ಅದಕ್ಕೆ ವಿಶಿಷ್ಟ್ಟ್ಟವಾದದ್ದು. ಅದರ ವ್ಯಾಪಾರವೂ ಅದಕ್ಕೀ ವಿಶಿಷ್ಟ್ಟ್ಟವಾದದ್ದು. ಆಯಾ ಶರೀರದ ರಚನೆ ಅದರ ಆತ್ಮ. ಪ್ರಾಣಿಗಳ ಶರೀರದ ರಚನೆಯೇ ಬೇರೆ. ಮನುಷ್ಯನ ಶರೀರದ ರಚನೆಯೇ ಬೇರೆ. ಆದ್ದರಿಂದ ಪ್ರಾಣಿಗಳ ಆತ್ಮ ಮನುಷ್ಯನ ಶರೀರದಲ್ಲಿ ಸೇರಲಾರದು. ಹಾಗೆಯೇ ಮನುಷ್ಯನ ಆತ್ಮ ಪ್ರಾಣಿಗಳ ಶರೀರದಲ್ಲಿ ಸೇರಲಾರದು. ಆಯಾ ಪ್ರಾಣಿಯಜೀವನ ವ್ಯಾಪಾರ ಕೊನೆಗೂಂಡಾಗ ಅದರ ಆತ್ಮ ಲಯವಾಗುತ್ತದೆ. ಆದ್ದರಿಂದ ಅದಕ್ಕೆ ಅಮರತ್ವವಿಲ್ಲ, ಪುನರ್ಜನ್ಮವಿಲ್ಲ, ಪರಲೋಕವಿಲ್ಲ. ಮಾನವನ ಆತ್ಮ ವಿಚಾರ ಚೈತನ್ಯರೂಪವಾದದ್ದು, ಆದ್ದರಿಂದ ಅದು ಪ್ರಾಣಿಗಳ ಆತ್ಮಗಳಿಗಿಂತ ಬೇರೆಯೇ ಸ್ವರೂಪಪಡೆದದ್ದು, ಅದು ದಿವ್ಯಚೈತನ್ಯಕ್ಕೆ ಅನುರೂಪವಾದದ್ದು. ಪ್ರತಿಯೊಬ್ಬ ಮಾನವನೂ ಸತ್ತಾಗ ಅವನ ವ್ಯಕ್ತಿತ್ವವನ್ನು ಕಳೆದು ಕೊಂಡು ಕೇವಲ ದಿವ್ಯರೂಪದಲ್ಲಿ, ದಿವ್ಯವಾದ ಪರಮಾತ್ಮನಲ್ಲಿ ಲೀನವಾಗುತ್ತದೆ. ಹಾಗೆ ಅದರಲ್ಲಿ ಲೀನವಾದುದರಿಂದ ಅದಕ್ಕೆ ನಿತ್ಯತ್ವ ಸಿದ್ಧಿಸುತ್ತದೆ. ಆಗ ಅದಕ್ಕೆ ಕಾಲ ಮತ್ತು ದೇಶಭೇದಗಳು ಅಂಟಿರುವುದಿಲ್ಲ. ಏಕೆಂದರೆ ಪರಮಾತ್ಮ ಕಾಲದೇಶಗಳಿಗೆ ಅತೀತವಾದದ್ದು. ಕಾಲದೇಶಗಳು ಪರಮಾತ್ಮನಲ್ಲಿ ಇವೆ. ಆದರೆ ಪರಮಾತ್ಮ ಕಾಲದೇಶಗಳಲ್ಲಿ ಇಲ್ಲ. (ಎಸ್.ಕೆ.ಆರ್.)

ಪ್ರಥಮ ತತ್ತ್ವಗಳು[ಸಂಪಾದಿಸಿ]

ಎಲ್ಲಕ್ಕೂ ಕಾರಣವಾದ ಎಲ್ಲವನ್ನೂ ಸೇರಿಸುವ, ಎಲ್ಲದರ ಮನಕ್ಕೂ ಗುರಿಯಾದ ಸುತ್ತಿನ ಸ್ವರೂಪವನ್ನು ತಿಳಿಸುವ ಶಾಸ್ತ್ರವನ್ನು ಅರಿಸ್ಟಾಟಲ್ ತತ್ತ್ವಶಾಸ್ತ್ರವೆಂದು ಕರೆದಿರುತ್ತಾರೆ. ಇವನ ತತ್ತ್ವಶಾಸ್ತ್ರದ ಮೂಲತತ್ತ್ವಗಳು ಎರಡು: ಪರಮಚೈತನ್ಯ ಮತ್ತು ಮೂಲಭೌತವಸ್ತು. ಮೂಲ ಭೌತವಸ್ತು ಪ್ರತ್ಯೇಕಗಳನ್ನು ಒದಗಿಸುತ್ತದೆ. ಚೈತನ್ಯ ರೂಪಗಳನ್ನು ಒದಗಿಸುತ್ತದೆ. ಇವೆರಡರ ಸಂಯೋಗದಿಂದ ವಿವಿಧ ವಸ್ತುಗಳಾಗುತ್ತವೆ. ಆಯಾರೂಪಕ್ಕೆ ಅನುಗುಣವಾಗಿ ಒಂದೊಂದು ವಸ್ತುವೂ ಬೇರೆ ಬೇರೆ ಅಂತಸ್ತನ್ನು ಪಡೆಯುತ್ತದೆ. ಪೃಥ್ವಿ, ಅಪ್, ವಾಯು, ತೇಜಸ್, ಸಸ್ಯಗಳು, ಪ್ರಾಣಿಗಳು, ಮಾನವರು ಹೀಗೆ ಕ್ರಮವಾಗಿ ಒಂದಕ್ಕಿಂತ ಒಂದು ಮೇಲಿನ ಪ್ರಾಣಿಗಳು, ಮಾನವರು ಹೀಗೆ ಕ್ರಮವಾಗಿ ಒಂದಕ್ಕಿಂತ ಒಂದು ಮೇಲಿನ ಅಂತಸ್ತಿನವು. ಎಲ್ಲಕ್ಕೂ ಕೆಳಗಿನದಾದ ಭೌತವಸ್ತುವಿನಿಂದ ಹಿಡಿದು ಎಲ್ಲಕ್ಕೂ ಮೇಲಿನದಾದ ಚೈತನ್ಯದವರೆಗೆ ಪ್ರಕೃತಿಯಲ್ಲಿ ಮೆಟ್ಟಿಲು ಮೆಟ್ಟಿಲಾಗಿ ಬೇರೆ ಬೇರೆ ಅಂತಸ್ತಿನ ವಸ್ತುಗಳಿವೆ, ಕೆಳಗಿನ ಅಂತಸ್ತಿನ ವಸ್ತುಗಳು ಮೇಲಿನ ಅಂತಸ್ತಿನ ವಸ್ತುಗಳಿಗೆ ಆಧಾರಗಳು; ಅವು ತಮಗಿಂತ ಮೇಲಿನವಾದ ವಸ್ತುಗಳಿಗೆ ಆಧಾರಗಳು. ಹೀಗೆ ಪ್ರಕೃತಿಯಲ್ಲಿ ಕ್ರಮವಾದ ಏರಿಕೆ, ಹೊಂದಿಕೆ ಇದೆ. ಪ್ರಕೃತಿಯಲ್ಲಿ ಸಾಮಾನ್ಯಗಳೂ ಪ್ರತ್ಯೇಕಗಳೂ ಬೇರೆ ಬೇರೆಯಾಗಿ ಇರಲಾರವು. ಇರವು ಕೇವಲ ಭಾವರೂಪವೂ ಅಲ್ಲ; ಕೇವಲ ಸಾಮಾನ್ಯವೂ ಅಲ್ಲ; ಪ್ರತ್ಯೇಕವೂ ಅಲ್ಲ. ಸಾಮಾನ್ಯವನ್ನು ಬಿಟ್ಟು ಪ್ರತ್ಯೇಕಗಳು ಇರಲಾರವು. ಅಂದರೆ ವಸ್ತುರೂಪದಲ್ಲಿ ಪ್ರಕಟವಾಗದ ಸಾಮಾನ್ಯಗಳು ಬರಿದಾದ, ಜೊಳ್ಳಾದ ಭಾವಗಳು. ಭಾವಗರ್ಬಿತ್ತವಲ್ಲದ ಪ್ರತ್ಯೇಕಗಳು ಅರ್ಥವಿಲ್ಲದವು.

ನಿಜವಾದ ಸಾಮಾನ್ಯಗಳು ವ್ಯಕ್ತಿನಿಷ್ಟಭಾವಗಳು, ವಿಶಿಷ್ಟ್ಟ್ಟ್ಟ ಸಾಮಾನ್ಯಗಳು ಈ ಸಾಮಾನ್ಯಗಳು ನಿಷ್ಕ್ರಿಯರೂಪದವಲ್ಲ. ಇವು ವಸ್ತುಗಳ ಅಂತರ್ಭಾವಗಳಾಗಿಅವು ತಮಗೆ ಸಹಜವಾದ ಪರಿಪೂರ್ಣತೆ ಪಡೆಯುವಂತೆ ಚೇತನಗೊಳಿಸುತ್ತವೆ. ಆ ಪರಿಪೂರ್ಣತೆವನ್ನು ಪಡೆಯದ ವಿನಾ ಅವಕ್ಕೆ ನಿಲುಗಡೆ ಇಲ್ಲ, ಸಾರ್ಥಕ್ಯವಿಲ್ಲ, ವಿಶ್ರಾಂತಿ ಇಲ್ಲ. ಬೀಜ ಫಲಭರಿತ ವೃಕ್ತವಾಗಲು ಮಿಡಿಯುತ್ತಾನೆ. ಅದು ಸಿದ್ಧಿಸಿದಾಗ ಅವನಿಗೆ ರೂಪ ಸಿದ್ಧಿಸುತ್ತದೆ. ಪರಿಪೂರ್ಣವಾಗುತ್ತದೆ.

ಹೀಗೆ ವಿಶ್ವದಲ್ಲಿರುವ ಪ್ರತಿಯೊಂದು ವಸ್ತುವೂ ತನ್ನ ಗುರಿವನ್ನು ಸಾಧಿಸಿಕೊಳ್ಳುವುದಲ್ಲದೆ, ತಮಗಿಂತ ಮೇಲಿನ ಅಂತಸ್ತಿನ ವಸ್ತುಗಳಿಗೆ ಆಧಾರವಾಗುತ್ತದೆ. ಭೂಮಿ, ಬೆಂಕಿ, ಗಾಳಿ, ಬೆಳಕು ತಮ್ಮ ಸ್ವಬಾವವನ್ನು ಸಾಧಿಸಿಕೊಳ್ಳುವುದರ ಜೊತೆಗೆ ಸಸ್ಯಗಳ, ಪ್ರಾಣಿಗಳ, ಮನುಷ್ಯನ ಪ್ರಾಣಾಧಾರಗಳಾಗುತ್ತವೆ. ಆದರೆ ತನ್ನ ಸ್ವಭಾವವನ್ನು ಈಡೇರಿಸಿಕೊಳುವುದೇ ಒಂದೊಂದರ ಗುರಿಯೂ ಆಗಿದೆ. ಮೇಲಂತಸಿನ ವಸ್ತುಗಳಿಗೆ ಅದು ಆಧಾರವಾದರೂ ಅವು ಸಾಧಿಸಿಕೊಳ್ಳಬೇಕಾದ ಗುರಿ ಅದರ ಗುರಿಯಲ್ಲ. ಮಾನವನ ಶೇಯಸ್ಸು ಪ್ರಕೃತಿಯ ಗುರಿಯಲ್ಲ. ಪ್ರಕೃತಿ ಮಾನವನಿಗೆ ಅಗತ್ಯ. ಮಾನವನ ಶ್ರೇಯಸ್ವನ್ನು ಈಡೇರಿಸುವುದು ಪ್ರಕೃತಿಗೆ ಸೇರಿದ ಕೆಲಸವಲ್ಲ. ಮಾನವನೇ ಎಲ್ಲಕ್ಕೂ ಮೇಲಿನವನಲ್ಲ . ಈ ಭೂಮಿಯಿಂದ ಆಚೆ ಮಾನವನಿಗಿಂತ ಉತ್ತಮವಾದ ವಸ್ತುಗಳಿವೆ ಎಂದು ಅರಿಸ್ಟಾಟಲನ ಭಾವನೆ. ಸೂರ್ಯಚಂದ್ರಾದಿಗಳು, ನಕ್ಷತ್ರಗಳು ಮಾನವನಿಗಿಂತ ಭಿನ್ನವಾದ ಕ್ವಿಂಟಸೆನ್ಸ್ ಅಂದರೆ ಶುದ್ಧಸತ್ವದಿಂದ ಕೂಡಿದವು. ಸೂರ್ಯಚಂದ್ರಾದಿಗಳು ದಿವ್ಯಮೂರ್ತಿಗಳು ಎಂಬುದು ಗ್ರೀಕರ ನಂಬಿಕೆ. ಅರಿಸ್ಟಾಟಲ್ ಕೂಡ ಆ ನಂಬಿಕೆಯಲ್ಲಿ ಭಾಗಿ. ನಕ್ಷತ್ರಗಳಿಗಿಂತಲೂ ಆಚೆ, ಅಂದರೆ ಆಕಾಶದ ಮಿತಿವನ್ನು ಮೀರಿ ಇರುವಂಥದ್ದು ಎಲ್ಲಕ್ಕಿಂತಲೂ ಪರಿಪೂರ್ಣವಾದದ್ದು−ಪರಮಚೈತನ್ಯ , ಈಶ್ವರ. ಪ್ರಕೃತಿಯಲ್ಲಿ ಮೆಟ್ಟಿಲು ಮೆಟ್ಟಿಲಾಗಿ ವಸ್ತುಗಳು ಪರಿಣಾಮಗೊಳ್ಳುತ್ತವೆಂದು ಈಗಾಗಲೇ ತಿಳಿದೆವಷ್ಟೆ, ಈ ಪರಿಣಾಮಗಳು ಉಂಟಾಗುವುದು ಹೇಗೆ ಎಂಬುದು ಮುಂದಿನ ಪ್ರಶ್ನೆ . ಒಂದು ವಸ್ತು ಪರಿಣಾಮಗೊಂಡಾಗ ಅದು ಯಾವ ಕಾರಣದಿಂದ ಹಾಗೆ ಪರಿಣಾಮ ಗೊಂಡಿತು ಎಂಬುವನ್ನು ತಿಳಿಸದ ವಿನಾ ಅದರ ಅರ್ಥ ಪೂರ್ಣವಾಗುವುದಿಲ್ಲ. ಪ್ರತಿಯೊಂದು ವಸ್ತುವೂ ಸಂಪೂರ್ಣವಾಗಿ ಪರಿಣಮಿಸಲು ಅರಿಸ್ಟಾಟಲ್ ನಾಲ್ಕು ಕಾರಣಗಳನ್ನು ತಿಳಿಸುತ್ತಾನೆ. ಈ ಕಾರಣಗಳು ಮಾನವನ ಪರಿಣಾಮಕ್ಕಲ್ಲದೆ ಎಲ್ಲ ವಸ್ತುಗಳ ಪರಿಣಾಮಕ್ಕೂ ಒಂದೇ ಸಮನಾಗಿ ಅನ್ವಯಿಸುತ್ತವೆ. ಇವನ್ನು ಸ್ಪಷ್ಟಪಡಿಸಲು ಮಾನವನನ್ನು ಬಿಟ್ಟು ಒಂದು ಸಸ್ಯ ವನ್ನು ಉದಾಹರಣೆಯಾಗಿ ಇಲ್ಲಿ ತೆಗೆದುಕೊಂಡಿದೆ. ಒಂದು ಗಿಡಕ್ಕೆ ಬೀಜ ಉಪಾದಾನಕಾರಣ. ವೃಕ್ಷತ್ವ, ಅದರ ಭಾವ ಅಥವಾ ರೂಪ ಕಾರಣ. ಬೀಜ ಮೊಳೆತು ಬೆಳೆಯುವುದಕ್ಕೆ ಮಣ್ಣು, ನೀರು, ಗಾಳಿ, ಬೆಳಕು−ಇವಲ್ಲ ಸೇರಿ ನಿಮಿತ್ತಕಾರಣ. ಫಲಭರಿತವಾಗುವುದು ಅದರ ಗುರಿ. ಅದು ಅದರ ಅಂತಿಮಕಾರಣ. ಈ ಕಾರಣ ಚತುಷ್ಟಯದಲ್ಲಿ ಯಾವುದೊಂದಿಲ್ಲ ದಿದ್ದರೂ ಯಾವುದೊಂದು ವಸ್ತುವೂ ಸಂಪೂರ್ಣವಾಗಿ ವಿಕಾಸವಾಗಲಾರದು.

ಇದುವರೆಗೂ ವಿಶ್ವವನ್ನು ವ್ಯಕ್ತಿದೃಷ್ಟಿಯಿಂದ ನೋಡಿದ್ದಾಯಿತು. ಈಗ ವಿಶ್ವವನ್ನು ಸಮಷ್ಟಿದೃಷ್ಟಿಯಿಂದ ನೋಡಬಹುದು. ವಿಶ್ವಕ್ಕೆಲ್ಲ ಕಾರಣ ಯಾವುದು ಎಂಬುದೇ ಸಮಷ್ಟಿ ದೃಷ್ಟಿಯಿಂದ ಹುಟ್ಟುವ ಪ್ರಶ್ನೆ . ಅರಿಸ್ಟಾಟಲನ ಅಭಿಪ್ರಾಯದಲ್ಲಿ ಈ ವಿಶ್ವ ಬದಲಾವಣೆಯುಳ್ಳದ್ದು, ಇದಕ್ಕೆ ಅಸ್ತಿತ್ವವಿಲ್ಲ. ಇದು ಕೇವಲ ಸಂಭಾವನಾರೂಪವಾದದ್ದು, ಅವ್ಯಕ್ತ, ಇರಬಹುದಾದ ಎಲ್ಲ ಪ್ರತ್ಯೇಕಗಳೂ ಇದರಲ್ಲಿ ಅಡಗಿವೆ. ಇದಕ್ಕೆ ಸ್ವತಃ ಚಲಿಸುವ ಶಕ್ತಿ ಇಲ್ಲ. ಇವನ್ನು ಚಲಿಸುವುದು ಪರಮಚೈತನ್ಯ . ಪರಮಚೈತನ್ಯ ಜಡವಸ್ತುವಿನಲ್ಲಿ ಅಡಗಿರುವ ಅನೇಕಾನೇಕ ಪ್ರತ್ಯೇಕಗಳಿಗೆ ತನ್ನಿಂದ ಹುಟ್ಟಿದ ರೂಪಕೊಟ್ಟುಅವುಗಳನ್ನು ಮೂರ್ತವಸ್ತುಗಳನ್ನಾಗಿಸುತ್ತದೆ. ಈ ರೂಪಗಳೇ ಆಯಾ ವಸ್ತುವಿಗೆ ಕಾರಣಗಳು. ಈ ವಿಶ್ವದ ವಿವಿಧವಸ್ತುಗಳು ತಮ್ಮ ಗುರಿವನ್ನು ಸಾಧಿಸಿಕೊಂಡು ಮೇಲಿನ ಅಂತಸ್ತಿನ ವಸ್ತುಗಳಿಗೆ ಆಧಾರವಾಗಿ ವ್ಯವಸ್ಥೆ ಗೊಳ್ಳು ವುದೇ ಈ ವಿಶ್ವದ ಅಂತಿಮ ಗುರಿ. ಹಾಗೆ ಆಗಿಸುವುದೆ ಈಶ್ವರನ ಉದ್ದೇಶ. ಈಶ್ವರನೇ ವಿಶ್ವದ ಅಂತಿಮಕಾರಣ. ಹೀಗೆ ವಿಶ್ವಕ್ಕೆ ಕಾರಣವಾದ ಕರಣಚತುಷ್ಟಯದಲ್ಲಿ ಜಡವಸ್ತು ಉಪಾದಾನಕಾರಣ, ಉಳಿದೆಲ್ಲ ಕಾರಣಗಳೂ ಪರಮಚೈತನ್ಯ ದಿಂದ ಬಂದುವು. ಅಂತಿಮದಲ್ಲಿ ಜಡವಸ್ತುವೂ ಚೈತನ್ಯ ವೂ ಬೇರೆಯಾದವು. ಆದ್ದರಿಂದ ಅರಿಸ್ಟಾಟಲನ ತತ್ವ ದೈತವಾಗಿಯೇ ಉಳಿಯುತ್ತದೆ. ಅರಿಸ್ಟಾಟಲನ ತತ್ವದಲ್ಲಿ, ಈ ವಿಶ್ವವನ್ನು, ಮುಖ್ಯವಾಗಿ ಪ್ರಕೃತಿತತ್ವವನ್ನು ನಿರೂಪಿಸಿರುವ ರೀತಿ ರಮಣೀಯವಾಗಿದೆ. ವ್ಯಕ್ತಿತ್ವ ಪುಂಜವಾದ ಪಾತ್ರಗಳಿಂದ ತುಂಬಿತುಳುಕುವ ನಾಟಕದಂತೆ ಅರಿಸ್ಟಾಟಲನ ಪ್ರಕೃತಿವಿಮರ್ಶೆ ಚಿತ್ತಾಕರ್ಷಕವಾದದ್ದು. ಆದರೆ ಅವನ ಈಶ್ವರತತ್ತ್ವವಾಗಲಿ ಮೂಲಜಡವಸ್ತುವಾಗಲಿ ಅವೆರಡಕ್ಕಿರುವ ಸಂಬಂಧವಾಗಲಿ ವಿಚಾರರಮಣೀಯಗಳಲ್ಲ, ಅವೆರಡೂ ಅತ್ಯಂತ ವಿರುದ್ಧವಾದ ದ್ವಂದ್ವಗಳು. ಅವನ ಜಡವಸ್ತು ನಿಷ್ಕ್ರಿಯವಾದದ್ದು, ನಿಸ್ಸತ್ತ್ವವಾದದ್ದು. ಅವನ ಈಶ್ವರ ಚಲಿಸದ ಬಾಲಕ. ಒಂದನ್ನೊಂದು ಬಹಿಷ್ಕರಿಸುವ ಈ ಎರಡು ತತ್ವಗಳು ಸೇರುವುದೆಂತು? ಚಲಿಸದೆಯೇ ಬಾಲಕನಾಗುವುದೆಂತು? ಎಲ್ಲ ಪ್ರತ್ಯೇಕಗಳಿಗೂ ಕಾರಣವಾದ ಜಡವಸ್ತುವಿಗೆ ಅಸ್ತಿತ್ವವೇ ಇಲ್ಲವಾದರೆ ಅದು ಅವುಗಳಿಗೆ ಕಾರಣವಾಗುವುದು ತಾನೆ ಹೇಗೆ? ಅಂತಿಮದಲ್ಲಿ ಪೂರ್ಣ ಅಸ್ತಿತ್ವವನ್ನು ಪಡೇದ ಪರಿಪೂರ್ಣವಾದ ಚೈತನ್ಯವೇ. ಪರಮಚೈತನ್ಯವೆಂಬುದು ಅರಿಸ್ಟಾಟಲನ ಇಂಗಿತ. ಅದೇ ಅವನ ಇಂಗಿತವಾದ ಪಕ್ಷದಲ್ಲಿ ಅವನ ತತ್ವ ಪೇಟೋನ ಅದ್ವೈತವನ್ನು ಸಮೀಪಿಸುತ್ತದೆ. ಅಸ್ತಿತ್ವವಿಲ್ಲದ ಭೌತ್ತವಸ್ತುವೂ ಚಲನೆ ಇಲ್ಲದ ಚೈತನ್ಯ ವೂ ಬೇರೆಯಾಗಿ ಉಳಿಯಲಾರವು.

ನೀತಿಶಾಸ್ತ್ರ[ಸಂಪಾದಿಸಿ]

ಪಾಶ್ಚಾತ್ಯರಲ್ಲಿ ನೀತಿಶಾಸ್ತ್ರರವನ್ನು ಪ್ರತ್ಯೇಕವಾಗಿ ಮೊಟ್ಟಮೊದಲಿಗೆ ಸ್ಥಾಪಿಸಿದವ ಅರಿಸ್ಟಾಟಲ್. ಇಂದಿಗೂ ಪಾಶ್ಚಾತ್ಯ ನೀತಿಶಾಸ್ರ್ತಜ್ಞರು ಆತ ಹಾಕಿಕೊಟ್ಟ ಮೇಲ್ಪಂಕ್ತಿವನ್ನು ಅನುಸರಿಸಿ ಅವನ ಮಾತುಗಳನ್ನು ಸ್ಮರಿಸಿ ತಮ್ಮ ನೀತಿವಿಚಾರವನ್ನು ಪ್ರಾರಂಭಿಸುತ್ತಾರೆ. ಮಾನವನ ಸದ್ವರ್ತನೆಯ ಧ್ಯೇಯವೇನು? ಯಾವುದನ್ನು ಲಕ್ಷ್ಯವಾಗಿ ಇಟ್ಟುಕೊಂಡು ಅವನು ನೀತಿಯ ದಾರಿಯಲ್ಲಿ ನಡೆಯಬೇಕು? ಇದು ನೀತಿಶಾಸ್ತ್ರದ ಮುಖ್ಯ ಪಶ್ನೆ. ಪ್ರತಿಯೊಂದು ವಸ್ತುವಿನ ಪರಿಣಾಮಕ್ಕೂ ಒಂದು ಲಕ್ಷ್ಯ, ಅಂತಿಮ ಕಾರಣ ಇದೆ. ಅದು ಅದರ ಸ್ವಬಾವದಿಂದ ಬೇರೆಯಲ್ಲ. ಅದರ ಸ್ವಬಾವವನ್ನು ಪರಿಪೂರ್ಣಗೊಳಿಸಿ ಕೊಳುವುದೇ ಅದರ ಲಕ್ಯ. ಹಾಗೆಯೇ ಮಾನವ ತನ್ನ ಸ್ವಭಾವವನ್ನು ಪರಿಪೂರ್ಣಗೊಳಿಸಿ ಕೊಳ್ಳುವುದೇ ಅವನ ನೀತಿಯ ಲಕ್ಷ್ಯ. ಮಾನವ ಎಲ್ಲ ಪ್ರಾಣಿಗಳಂತೆ ಹಸಿವೆ, ಕಾಮ, ಪೌರುಷ ಮುಂತಾದ ವಾಸನಾಸಂಸ್ಕಾಗಗಳನ್ನು ಪಡೆದಿರುತ್ತಾನೆ. ಆದರೆ ಮಾನವನಿಗೇ ವಿಶಿಷ್ಟವಾದದ್ದು ಅವನ ವಿವೇಚನಾಶಕ್ತಿ. ವಿವೇಚನೆ ಇಲ್ಲದೆ ವರ್ತಿಸುವ ನಿಜವಾದ ಪಶುಸಮಾನನೇ. ವಿವೇಚನೆಯಿಂದ ತನ್ನ ಹಸಿವು, ಕಾಮ, ಪುರುಷ ಮುಂತಾದವನ್ನು ಈಡೇರಿಸಿಕೊಳ್ಳುವುದು ಅವನಿಗೆ ಸಹಜವಾದ ನೀತಿ. ನೀತಿಯಿಂದ ನಡೆದುಕೊಳ್ಳುವುದು ಮಾನವನಿಗೆ ಸಹಜವಾದದ್ದು. ಹಾಗೆಂದರೆ ಎಲ್ಲರೂ ಎಲ್ಲ ಕಾಲದಲ್ಲೂ ನೀತಿವಂತರೆಂದಲ್ಲ. ಒಟ್ಟಿನಲ್ಲಿ ಮಾನವನ ಗಮನ ಅನೀತಿಗಿಂತಲೂ ನೀತಿಯ ಕಡೆ ಹರಿಯುವುದು ಸಹಜ. ನೀತಿ ಮಾನವನಿಗೆ ಸಹಜವಲ್ಲದಿದ್ದರೆ ನೀತಿ ತಪ್ಪಿದವ ತನ್ನ ನಡತೆಗಾಗಿ ನಾಚುತ್ತಿರಲಿಲ್ಲ. ಪರಮನೀಚನೂ ತಾನು ನಡೆಸಿದ ನೀಚಕೃತ್ಯಕ್ಕಾಗಿ ತತ್‍ಕ್ಷಣದಲ್ಲಿ ಅಲ್ಲದಿದ್ದರೂ ಕಾಲಾಂತರದಲ್ಲಿ ಮರುಗಿಯೇ ಮರುಗುತ್ತಾನೆ. ಅನೀತಿ ಆ ಕ್ಷಣದಲ್ಲಿ ಅವನಿಗೆ ಸಂತೋಷವಾಗಿ ತೋರಬಹುದು. ಆದರೆ ಅದು ನಿರಂತರವಾಗಿ ಸುಖಪ್ರದವಲ್ಲ. ನೀತಿಯಾದರೋ ಸದಾ ಸುಖಪ್ರದ. ನೀತಿಗಾಗಿ ಒಬ್ಬ ತನ್ನ ಸರ್ವಸ್ವವನ್ನೂ ಕಳೆದುಕೊಳ್ಳುತ್ತಾನಲ್ಲವೇ? ಅದು ಸುಖವೇ ಎಂದು ಕೇಳಬಹುದು. ಹೌದು, ಅದು ಸುಖ. ಹಾಗೆ ಕಳೆದುಕೊಳ್ಳುವುದು ಅವನಿಗೆ ಹಿತ. ಹಾಗೆ ಅವನು ನಡೆದುಕೊಳ್ಳದಿದ್ದಲ್ಲಿ ಆತ ಜೀವಮಾನಪರ್ಯಂತ ದುಃಖಪಡುತ್ತಿದ್ದ. ಧರ್ಮವೇ, ನಿನಗಾಗಿ ನಾನು ಎಲ್ಲವನ್ನೂ ಬಿಡಬೇಕಲ್ಲ ! ಎಂದು ಗೋಳು ಸುರಿಸುತ್ತಾ ಕೆಲವರು ನಡೆದುಕೊಳ್ಳುವುದಿಲ್ಲವೆ.? ಆ ನಡತೆಯಲ್ಲಿ ಸುಖವೆಲ್ಲಿದೆ, ಹಿತವೆಲ್ಲಿದೆ ಎಂದು ಕೇಳಬಹುದು. ಅದಕ್ಕೆ ಅರಿಸ್ಟಾಟಲ್‍ನ ಉತ್ತರ ಇದು: ಅಂಥ ನಡತೆ ನಿಜವಾಗಿ ನೀತಿಯಲ್ಲ, ಮನಸ್ಸೊಪ್ಪಿ ನಡೆಸಿದ್ದೇ ನೀತಿ, ತನ್ನ ಮನಸ್ಸಿಗೆ ಒಪ್ಪಿದ್ದು ಹಿತವೇ. ಹಿತ ಅಥವಾ ಸುಖ ನೀತಿಯಲ್ಲಿ ಅಗತ್ಯ ವಾಗಿ ಸೇರಿರುವ ಅಂಶ, ನೀತಿ ಆತ್ಮಪರಿಪೂರ್ಣ. ಆ ಪರಿಪೂರ್ಣತೆಯಲ್ಲಿ ಆತ್ಮಾನಂದ ಸೇರಿದೆ. ಆನಂದದಾಯಕವಾದ ಆತ್ಮಪರಿಪೂರ್ಣ ತೆಯೇ ನೀತಿಯ ನೆಲೆ. ಅರಿಸ್ಟಾಟಲನ ಈ ವಾದಕ್ಕೆ ಪರಿಪೂರ್ಣತಾವಾದವೆಂದು (ಯೂಡೀಮಾನಿಸಂ) ಹೆಸರು. ಆತ್ಮಪರಿಪೂರ್ಣತೆಯೇ ಆನಂದ. ಆನಂದವನ್ನು ಬಿಟ್ಟು ಆತ್ಮಪರಿಪೂರ್ಣತೆ ಇಲ್ಲ; ಆತ್ಮ ಪರಿಪೂರ್ಣತೆ ಮತ್ತು ಆನಂದ ಇವೆರಡೂ ಒಂದೇ ಎಂಬುವನ್ನು ಯೂಡೀಮಾನಿಸಂ ಪದದಲ್ಲಿ ಸೇರಿಸುವ ಮಾನಿಸಂ ಪದ ಸ್ಪಷ್ಟಪಡಿಸುತ್ತದೆ. ವಿವೇಚನಾಪರನಾದರೂ ಮಾನವ ವಿವೇಚಿಸುವ ಯಂತ್ರವಲ್ಲ. ಮಾನವ ಚೈತನ್ಯ ಜ್ಞಾನರೂಪವಾದದ್ದು, ಕ್ರಿಯಾರೂಪವಾದದ್ದು, ಪ್ರೇಮರೂಪವಾದದ್ದು ಅದ್ದರಿಂದ ಜ್ಞಾನ ಒಂದನ್ನೇ ಆಗಲಿ, ಕರ್ಮ ಒಂದನ್ನೇ ಆಗಲಿ, ಪ್ರೇಮ ಒಂದನ್ನೇ ಆಗಲಿ ಆಶ್ರಯಿಸುವುದು ಆತ್ಮಕ್ಕೆ ಸ್ವಾಬಾವಿಕವಲ್ಲ ಅದು ಏಕಪಕ್ಷೀಯನೀತಿ. ಅರಿಸ್ಟಾಟಲನದು ಏಕಪಕ್ಷೀಯ ನೀತಿಯಲ್ಲ. ಏಕಪಕ್ಷೀಯ ನೀತಿ ಅತಿನೀತಿ. ಅನೀತಿ, ಅತಿನಿಷ್ಠೆ ಅನಿಷ್ಠೆ ಅತಿವನ್ನು ಸರ್ವತ್ರ ತ್ಯಜಿಸಬೇಕು ಎಂಬುದು ಅವನ ಸಮನ್ವಯನೀತಿ, ಸಮಧ್ಯಮ ನೀತಿ, ಸುವರ್ಣ ನೀತಿ. ಕಾಮವವನ್ನು ಅದುಮಿಡು ಎಂದೂ ಆತ ಹೇಳುವುದಿಲ್ಲ. ಹರಿಯಬಿಡೆಂದೂ ವಾದಿಸುವುದಿಲ್ಲ. ಮಿತಿಯಲ್ಲಿಡು ಎಂಬುದೇ ಅವನ ಸುವರ್ಣಸೂತ್ರ ಈ ಸೂತ್ರಕ್ಕನುಗುಣವಾದ ಸದ್ವೃತ್ತಿಗಳೇ ಸದ್ಗುಣಗಳು. ಅಭೋಗಕ್ಕೂ ಅತಿಭೋಗಕ್ಕೂ ಮಧ್ಯ ಸ್ಥ ವಾದ ಸದ್ಗುಣ ಮಿತಬೋಗ. ಹುಚ್ಚುಸಾಹಸಕ್ಕೂ ಹೇಡಿತನಕ್ಕೂ ಮಧ್ಯಸ್ಥವಾದ ಸದ್ಗುಣ ಧೈರ್ಯ. ಲೋಭಕ್ಕೂ ದುಂದುಗಾರಿಕೆಗೂ ಮಧ್ಯಸ್ಥವಾ ದದ್ದು ಔದಾರ್ಯ. ಇವುಗಳಲ್ಲದೆ ಜ್ಞಾನಕ್ಕೇ ಸಂಬಂಧಪಟ್ಟ್ಟ ಸದ್ಗುಣಗಳನ್ನೂ ಅರಿಸ್ಟಾಟಲ್ ವಿವರಿಸುತ್ತಾನೆ. ಅವುಗಳಲ್ಲಿ ಲೋಕೋಚಿತಜ್ಞಾನ ಒಂದು. ಇದು ಮಾನವನಲ್ಲಿರಬೇಕಾದ ಒಂದು ಸದ್ಗುಣ ಎಂದು ಹೇಳಿರುವುದು ಅವನ ಔಚಿತ್ಯಜ್ಞಾನಕ್ಕೆ ಸಾಕ್ಷಿ. ಇದು ನಡೆನುಡಿಯ ರಮ್ಯತೆಗೆ ಸೇರಿದ್ದು, ಉಚಿತವರಿತವನನ್ನು ನೀತಿವಂತನೆಂದಾಗಲಿ ಉಚಿತವರಿಯದವನನ್ನು ನೀತಿಗೆಟ್ಟವನೆಂದಾಗಲಿ ನಾವು ಭಾವಿಸುವುದಿಲ್ಲ. ಸೌಂದರ್ಯಪ್ರಿಯನಾದ ಅರಿಸ್ಟಾಟಲನಿಗೆ ಉಚಿತ್ತವಲ್ಲದ ನಡೆಯಾಗಲಿ ನುಡಿಯಾಗಲಿ ಸಹ್ಯವಲ್ಲ ಅರಿಸ್ಟಾಟಲ್ ಹೀಗೆ ಹೇಳಿರುವುದು ಉಚಿತವೇ ಎಂದು ಕೇಳಬಹುದು. ಉಚಿತವಾದ ನಡೆ ನುಡಿ ಕಡ್ಡಾಯವೆಂದು ಆತ ಹೇಳಿದ್ದರೆ ಅದು ಅನುಚಿತವಾಗುತ್ತಿತ್ತು. ಅವನು ಹಾಗೆ ಹೇಳಿಲ್ಲ. ಒಬ್ಬನ ನಡೆನುಡಿಯಲ್ಲಿ ಔಚಿತ್ಯವಿರಲೇಬಾರದೆಂದು ನಾವಾದರೂ ವಾದಿಸಬಹುದೇ? ಜ್ಞಾನಕ್ಕೆ ಸಂಬಂಧಪಟ್ಟ್ಟ ಸದ್ಗುಣಗಳಲ್ಲಿ ತಾತ್ವಿಕವಿವೇಕ ಎಲ್ಲಕ್ಕಿಂತ ಮೇಲಿನದೆಂದು ಅರಿಸ್ಟಾಟಲನ ಅಭಿಮತ. ಬರಿಯ ತತ್ತ್ವಜ್ಞಾನ ತತ್ತ್ವವಿವೇಕವಲ್ಲ ಜೀವನವನ್ನು ಹದಗೊಳಿಸಿ ಕೊಳ್ಳಲು ಆ ಜ್ಞಾನವನ್ನು ಉಪಯೋಗಿಸಿಕೊಳ್ಳುವುದು ವಿವೇಕ. ತಾತ್ತ್ವಿಕನಾದವನು ಹೇಗೆ ನಡೆಯಬೇಕು ನುಡಿಯಬೇಕು ಎಂಬುವನ್ನು ಅರಿಸ್ಟಾಟಲ್ ವರ್ಣಿಸಿದ್ದಾನೆ. ಈ ವರ್ಣನೆವನ್ನು ಓದಿದಾಗ ನಮ್ಮೊಳಗೆ ಮೆಲುನಗೆ ಹುಟ್ಟಬಹುದು. ನಮಗೆ ತತ್ವ ಕೇವಲ ವಿಚಾರ ವಿಷಯ. ಅದು ನಮ್ಮ ಜೀವನಕ್ಕೆ ಹೊರತಾದದ್ದು. ಆದರೆ ಅದು ಅವನ ಜೀವನಕ್ಕೆ ಆಂತರಿಕವಾದದ್ದು. ನಂಬಿದಂತೆ ನಡೆಯುವುದು ಅವನಿಗೆ ಆಚಾರವಾಗಿ ತೋರಿತು. ಅದು ಅವನಿಗೆ ಪ್ರಿಯವಾಗಿ ಕಂಡಿತು. ಹಾಗಿರುವುದೇ ಪ್ರಾಮಾಣಿಕವೆನ್ನಿಸಿತು. ಅದೇ ಜೀವನದ ಶಾಂತಿ ಎಂದು ಬೋಧನೆಯಾಯಿತು. ತತ್ತ್ವಜ್ಞಾನ ವಿವೇಕವಾದರೆ ಬಾಧಕವೇನೂ ಅಲ್ಲ, ಒಳ್ಳೆಯದೇ. ಹಾಲು ಕೆನೆ ಕಟ್ಟಿದಂತಾಗುತ್ತದೆ. ತತ್ತ್ವವನ್ನು ಜೀವನದ ಒರೆಗಲ್ಲಿಗಿಟ್ಟು ನೋಡುವುದೇ ವಿವೇಕ. ವಿವೇಕದ ವಿಚಾರವಾಗಿ ಇಂದಿನ ಪಾಶ್ಚಾತ್ಯ ತಾತ್ತ್ವಿPರು ಏನೇ ಹೇಳಲಿ ಅದು ಭಾರತೀಯರಿಗೆ ಒಪ್ಪು. ಹೀಗೆ ಸುವರ್ಣ ಮಾಧ್ಯಮಕ್ಕೆ ಅನುಗುಣವಾದ ನಡತೆಯೇ ನ್ಯಾಯ, ನ್ಯಾಯವಾದ ನಡತೆ, ನ್ಯಾಯ ಎಂಬುದು ಎಲ್ಲ ಸದ್ಗುಣಗಳಿಗಿಂತ ವಿಶಾಲವಾದದ್ದು. ಎಲ್ಲ ಸದ್ಗುಣಗಳೂ ಅದರಲ್ಲಿಸೇರಿವೆ. ನ್ಯಾಯ ಎಂದರೆ ಸಕಲ ಸದ್ಗುಣಗಳ ಸಮ್ಮಿಳನ. ಇವು ಸದ್ಗುಣಗಳು ಎಂದು ತಿಳಿದಮಾತ್ರಕ್ಕೆ ಒಬ್ಬ ಸದ್ಗುಣಯಾಗುವುದಿಲ್ಲ; ಶೀಲವಂತ ನಾಗುವುದಿಲ್ಲ, ಶೀಲ ಸಾಧನೆಯಿಂದ ಮಾತ್ರ ಸಿದ್ಧಿಸತಕ್ಕದ್ದು. ನಿರಂತರವಾದ ಅಭ್ಯಾಸದಿಂದ ಅದು ಕುದುರುತ್ತದೆ. ಸದ್ವರ್ತನೆ ನಿತ್ಗಟ್ಟಲೆಯದಾದಾಗ ಅದು ನಮ್ಮೆ ಮರು ಸ್ವಭಾವವಾಗುತ್ತದೆ. ಅಭ್ಯಾಸಬಲದಿಂದ ಶೀಲ ಸುಗಮವಾಗುತ್ತದೆ. ಸುಖಪ್ರದವಾಗುತ್ತದೆ. ನೀತಿಜೀವನ ಹದವಾದ ಹಿತವಾದ ಜೀವನವಾಗುತ್ತದೆ. ಅಂಥ ಜೀವನದಿಂದ ತನಗೂ ಅನ್ಯಾಯವಿಲ್ಲ, ಪರರಿಗೂ ಅನ್ಯಾಯವಿಲ್ಲ. ಧರ್ಮವನ್ನೇ ಆತ್ಮಾರ್ಥವಾಗಿ ಉಳ್ಳವನು ಧರ್ಮಾತ್ಮ. ಅಂಥವನ ಆತ್ಮಾರ್ಥದಲ್ಲಿ ಪರಾರ್ಥವೂ ಸೇರಿದೆ. ಆತ್ಮತ್ಯಾಗವೂ ಸೇರಿದೆ. ಧರ್ಮಾತ್ಮತ್ಮ ತನ್ನ ದೇಶಕ್ಕಾಗಿ, ಸ್ನೇಹಿತನಿಗಾಗಿ ಐಶ್ವರ್ಯವನ್ನೂ ಯಶಸ್ಸನ್ನೂ ಪ್ರಾಣಿವನ್ನೂ ಒಪ್ಪಿಸಿ ಆನಂದಿಸುತ್ತಾನೆ. ಧರ್ಮವು ಆನಂದಮಯ, ಆನಂದವಿಲ್ಲದ ಧರ್ಮ ಗೊಡ್ಡುಧರ್ಮ. ಆದರೆ ಅರಿಸ್ಟಾಟಲ್ ಸುಖವೇ ಧರ್ಮವೆಂಬ ಸುಖತಾವಾದಿಯಲ್ಲ. ಫಲವೇ ಧರ್ಮವೆಂಬ ಫಲವಾದಿಯಲ್ಲ. ಧರ್ಮವೇ ಆನಂದವೆಂಬ ಧರ್ಮಾನಂದವಾದಿ.

ರಾಜ್ಯಶಾಸ್ರ್ತ[ಸಂಪಾದಿಸಿ]

ಚೆನ್ನಾಗಿ ಬಾಳಲು ಮಾನವನಿಗೆ ಜೀವನದ ಸೌಕರ್ಯಗಳು ಬೇಕು. ಸುಂದgವಾದ ಕೃತಿಗಳು ಬೇಕು. ಧರ್ಮಾಚರಣೆಗೆ ಸತ್ಯಾನ್ವೇಷಣಗಳಿಗೆ ಅವಕಾಶ ಬೇಕು. ಇವೆಲ್ಲವೂ ಅವನಿಗೆ ಸಾಧ್ಯ ವಾಗುವುದು ಆತ ಸಮಾಜಜೀವಿಯಾದ್ದರಿಂದ. ಸೇರಿ ಬಾಳುವುದು ಅವನಿಗೆ ಸಹಜವಾದ್ದರಿಂದ ಸಮಾಜಜೀವನ ಅವನ ಬೆನ್ನೇರಿ ಬಂದದ್ದು. ಆತ ಹುಟ್ಟಿದ್ದು ಸಮಾಜದಲ್ಲಿ, ಬೆಳೆಯುವುದು ಸಮಾಜದಲ್ಲಿ. ಇತರರೂಡನೆ ಬಾಳದೆ ತನ್ನ ಶ್ರೇಯಸವನ್ನು ಗಳಿಸಲಾರ. ತಾನು ಹುಟ್ಟಿದ ಸಮಾಜ ಪ್ರತಿಯೊಬ್ಬನ ಅಭ್ಯುದಯಕ್ಕೂ ಅಗತ್ಯವಾದ ಸಂಸ್ಥೆ. ರಾಷ್ಟ್ರ ನಮ್ಮ ಮಹಾಸಮಾಜ, ಗ್ರೀಕರಿಗಂತೂ ರಾಷ್ಟ್ರವೇ ಜೀವನದ ಉಸಿರು, ರಾಷ್ಟ್ರಜೀವನದಲ್ಲಿ ಅವರಿಗಿದ್ದ ಆಸಕ್ತಿ ಅನುಪಮ. ಅವರು ತಮ್ಮ ನಗರ ರಾಷ್ಟ್ರಗಳಲ್ಲಿ ನೇರವಾಗಿ ಭಾಗವಹಿಸುತ್ತಿದ್ದ ರು. ರಾಷ್ಟ್ರ ಸ್ವಾಬಾವಿಕ ಸಂಸ್ಥೆ ಎಂದು ಅವರು ಭಾವಿಸಿದ್ದು ಸಹಜವೇ. ಅರಿಸ್ಟಾಟಲನ ಭಾವನೆಯೂ ಅದೇ. ಅವನು ಪ್ರಥಮತತ್ತ್ವಕ್ಕೆ ಕೊಟ್ಟಷ್ಟೇ ರಾಷ್ಟ್ತತತ್ತ್ವಕ್ಕೂ ಪ್ರಾಶಸ್ತ್ಯ ಕೊಟ್ಟಿದ್ದೇನೂ ಆಶ್ಚರ್ಯಕರವಲ್ಲ. ಒಂದು ಸಮಾಜಕ್ಕೆ ಸೇರಿದ ಜನ ಎಲ್ಲರೂ ಸಮಾನ ಸ್ವಬಾವ ಪಡೆದಿರುವುದಿಲ್ಲ. ಆದ್ದರಿಂದ ಅವರ ಹಕ್ಕು ಬಾಧ್ಯತೆಗಳು ಸಮಾನವಾಗಿರಲಾರವು. ಕೆಲವರಿಗೆ ಬೇಸಾಯಗಾರ ರಾಗುವ ಯೋಗ್ಯತೆ ಹೆಚ್ಚಾಗಿದೆ. ಮತ್ತೆ ಕೆಲವರಿಗೆ ಯೋಧರಾಗುವ ಯೋಗ್ಯತೆ ಹೆಚ್ಚಾಗಿದೆ. ಮೇಧಾವಿಗಳಾದ ಕೆಲವರಿಗೆ ಶಾಸ್ತ್ರ, ಸಾಹಿತ್ಯ ಮತ್ತು ತತ್ತ್ವಾನ್ವೇಷಣದ ಯೋಗ್ಯತೆ ಬಲವಾಗಿದೆ. ಯೋಗ್ಯತೆಗೆ ತಕ್ಕಂತೆ ಹಕ್ಕುಬಾಧ್ಯತೆಗಳು ಹಂಚಿಕೆಯಾಗಬೇಕು. ಅದೇ ಸ್ವಬಾವಕ್ಕನುಗುಣವಾದ ರಾಷ್ರ್ಟದ ನ್ಯಾಯ, ಹಕ್ಕುಬಾಧ್ಯತೆಗಳನ್ನು ನ್ಯಾಯವಾಗಿ ವಿಧಾಯಕ ಮಾಡುವ ರಾಷ್ಟ್ರವೇ ನ್ಯಾಯವಾದ ರಾಷ್ಟ್ರ, ಒಳ್ಳೆಯ ರಾಷ್ಟ್ರ. ರಾಷ್ರ್ಟಗಳು ಹಲವು ಬಗೆಯಾಗಿವೆ. ಪ್ರಭುತ್ವಕ್ಕೆ ಯಾವುದು ಆಶ್ರಯವೋ ತದನುಗುಣ ವಾಗಿ ರಾಷ್ಟ್ರಗಳನ್ನು ವಿಂಗಡಿಸುವುದು ವಾಡಿಕೆ. ಪ್ರಭುತ್ವ ಒಬ್ಬ ರಾಜನಲ್ಲಿ ಕೇಂದ್ರೀಕೃತವಾಗಿದ್ದರೆ ಅದು ರಾಜಪ್ರಭುತ್ವದ ರಾಷ್ಟ್ರ. ಕೆಲವು ಶ್ರೀಮಂತರಲ್ಲಿ ಕೇಂದ್ರಿಕೃತವಾಗಿದ್ದರೆ ಶ್ರೀಮಂತರ ರಾಷ್ಟ್ರ, ಪ್ರಜೆಗಳಲ್ಲಿ ಕೇಂದ್ರೀಕೃತವಾಗಿದ್ದರೆ ಪ್ರಜಾಪ್ರಭುತ್ವರಾಷ್ಟ್ರ. ಒಂದು ರಾಷ್ಟ್ರ ನ್ಯಾಯರಾಷ್ಟ್ರವಾಗಬೇಕಾದರೆ ಅದು ರಾಜಪ್ರಭುತ್ವ, ಪ್ರಮುಖರ ಪ್ರಭುತ್ವ ಅಥವಾ ಪಜಾಪ್ರಭುತ್ವ ಮಾತ್ರವೇ ಆಗಬೇಕಾದ್ದಿಲ್ಲ. ರಾಜಪ್ರಭುತ್ವ ಒಳ್ಳೆಯದಾಗಬಹುದು ಅಥವಾ ಕೆಟ್ಟದಾಗಬಹುದು. ಪ್ರಮುಖರ ಪ್ರಭುತವೂ ಉಚ್ಚವಾದದ್ದಾಗಬಹುದು ಅಥವಾ

ನೀಚವಾದದ್ದಾಗಬಹುದು. ಪ್ರಜಾಪ್ರಭುತ್ವವೂ ಸುವ್ಯವಸ್ಥಿತವಾಗಿರಬಹುದು ಅಥವಾ ಅವ್ಯವಸ್ಥಿತ ವಾಗಿರಬಹುದು. ಅರಿಸ್ಟಾಟಲನ ಅಭಿಪ್ರಾಯದಲ್ಲಿ ಪ್ರಮುಖರ ಪ್ರಭುತ್ವ ಉತ್ತಮ ಪ್ರಭುತ್ವವಾಗುವ ಸಂಭವ ಹೆಚ್ಚು. ಸಾಮೂಹಿಕ ಸ್ವಾಮ್ಯವನ್ನೂ ಸಾಮೂಹಿಕ ಕುಟುಂಬ ಜೀವನವನ್ನೂ ತಾತ್ತ್ವಿಕರ ನಾಯಕತ್ವವನ್ನೂ ಪುರಸ್ಕರಿಸುವ ರಾಷ್ರ್ಟವೇ ಆದರ್ಶರಾಷ್ರ್ಟವೆಂದು ಪ್ಲೇಟೋನ ಸಿದ್ಧಾಂತ. ಈ ಸಿದ್ಧಾಂತವನ್ನು ಅರಿಸ್ಟಾಟಲ್ ತೀವವಾಗಿ ಖಂಡಿಸಿದ್ದಾನೆ. ವೈಯಕ್ತಿವಾಗಿ ಆಸ್ತಿ ಪಡೆಯಲೂ ಕುಟುಂಬಜೀವನವನ್ನು ನಡೆಸಲೂ ಮಾನವನಿಗೆ ಸ್ವಾತಂತ್ರ್ಯವಿಲ್ಲದಿದ್ದರೆ ಅವನಲ್ಲಿ ಸದ್ಗುಣಗಳು ಹುಟ್ಟಲು ಅವಕಾಶ ತಪ್ಪುತ್ತದೆ. ಅವುಗಳಿಗೆ ಅವಕಾಶ ಕೊಡದ ರಾಷ್ಟ್ರ ಮಾನವನ ನೈತಿಕ ಜೀವನವನ್ನೂ ಕುಂಠಿತಗೊಳಿಸುತ್ತದೆ ಎಂದು ಅರಿಸ್ಟಾಟಲನ ಅಭಿಮತ.

ಸೌಂದರ್ಯ ಮೀಮಾಂಸೆ[ಸಂಪಾದಿಸಿ]

ಪ್ಲೇಟೋ ಸ್ವತಃ ಶೇಷ್ಠ ಕವಿ. ಆದರೂ ಹೋಮರನಂಥ ಶೇಷ್ಠ ಕವಿಗಳಿಗೆ ತನ್ನ ಆದರ್ಶ ರಾಷ್ಟ್ರದಲ್ಲಿ ಮಾನ್ಯ ಸ್ಥಾನ ಕೊಡಲಿಲ್ಲ. ಅವನ ಆದರ್ಶರಾಷ್ಟ್ರದಲ್ಲಿ ತಾತ್ತಿಕರ ವಿಧಾಯಕತ್ವಕೆ ತಲೆಬಾಗಿ ಕವಿಗಳು ಉಳಿಯಬಹುದಾಗಿತ್ತು. ನೀತಿಗೆ ವಿರುದ್ಧವಾದ ಕವಿತೆಗಳನ್ನು ರಚಿಸಿದವರಿಗೆ ಆ ರಾಷ್ರ್ಟದಿಂದ ಉಚ್ಛಾಟನೆ ಸಿದ್ಧ. ಅರಿಸ್ಟಾಟಲ್ ಕವಿಯಲ್ಲ ದಿದ್ದರೂ ಕವಿಗಳ ಅಂತರಂಗಳನ್ನು ಚೆನ್ನಾಗಿ ಬಲ್ಲವ; ಕವಿಗಳ ಸ್ವಾತಂತ್ರ್ಯದ ಹಕ್ಕನ್ನು ಎತ್ತಿ ಹಿಡಿದವೆ. ಕವಿಯೂ ತತ್ವಜ್ಞಾನಿಯಷ್ಟೇ, ಬಹುಶಃ ಇನ್ನೂ ವಿಶೇಷರೀತಿಯಲ್ಲಿ ಸತ್ಯವನ್ನು ಹೃದ್ಯವಾಗಿ ತೋರಿಸಬಲ್ಲನೆಂದು ಅವನು ಸಾರಿದ. ಗ್ರೀಕರ ನಾಟಕಗಳನ್ನೂ ಪೌರಾಣಿಕ ಕಾವ್ಯಗಳನ್ನೂ ಕುರಿತು ಆತ ಬರೆದ ವಿಮರ್ಶೆಗಳು ಇಂದಿಗೂ ಮಾನ್ಯವಾಗಿವೆ.

ಪ್ಲೇಟೋ ಲಲಿತಕಲೆಗಳನ್ನು ಉಪಯುಕ್ತ ಕಲೆಗಳಿಂದ ಪ್ರತ್ಯೇಕಿಸಿ ವಿಮರ್ಶಿಸಲಿಲ್ಲ. ಇವೆರಡರ ಸ್ವರೂಪ ಭಿನ್ನವೆಂದು ಮೊಟ್ಟಮೊದಲಿಗೆ ಪ್ರತಿಪಾದಿಸಿದವ ಅರಿಸ್ಟಾಟಲ್. ಉಪಯುಕ್ತ ಕಲೆಗಳಲ್ಲಿ ಸೌಕರ್ಯ ಮುಖ್ಯವಾದದ್ದು, ಸೌಂದರ್ಯ ಅದಕ್ಕೆ ವಿಧೇಯವಾದದ್ದು, ಲಲಿತಕಲೆಗಳಲ್ಲಾದರೋ ಅವುಗಳ ಉಪಯೋಗ ಮುಖ್ಯವಲ್ಲ. ಲಲಿತ ಕಲೆಗಳನ್ನು ನಾವು ಅಪೇಕ್ಷಿಸುವುದು ಅದರ ಉಪಯುಕ್ತತೆಯ ಸಲುವಾಗಿ ಅಲ್ಲ, ಅವು ಕೊಡುವ ಸೌಂದರ್ಯಾನುಭವಕ್ಕಾಗಿಯೇ. ಲಲಿತಕಲೆಗಳಲ್ಲಿ ಚಿತ್ರ ಶಿಲ್ಪ, ಸಂಗೀತ, ಸಾಹಿತ್ಯ ಇವೆಲ್ಲವೂ ಸೇರಿವೆ, ಆದರೆ ಎಲ್ಲ ಕಲೆಗಳಿಗಿಂತಲೂ ಶ್ರೇಷ್ಠವಾದದ್ದು ರುದ್ರನಾಟಕ ಮತ್ತು ಪೌರಾಣಿಕಕಾವ್ಯ. ಪ್ಲೇಟೋನಂತೆ ಅರಿಸ್ಟಾಟಲ್ ಕೂಡ ಕಲೆ ಅನುಕರಣವೆಂದು ಹೇಳುತ್ತಾನೆ. ಆದರೆ ಅರಿಸ್ಟಾಟಲನ ಅನುಕರಣತತ್ವ ಪೇಟೊನ ತತ್ತ್ವದಿಂದ ಭಿನ್ನವಾದದ್ದು. ಪ್ಲೇಟೋನ ಪ್ರಕಾರ ಕಲೆ ಭೌತಿಕ ವಸ್ತುಗಳ ಅನುಕರಣ; ಲೌಕಿಕವಸ್ತು, ಭಾವನೆಗಳ ಅನುಕರಣ. ಭಾವನೆಗಳೇ ನಿತ್ಯಸತ್ಯ ಗಳಾದುದರಿಂದ ಲೌಕಿಕವಸ್ತುಗಳನ್ನು ಅನುಕರಿಸುವ ಕಲೆ ಸತ್ಯದಿಂದ ಮೂರು ಮೆಟ್ಟಿಲು ಕೆಳಗಿನದು. ಅರಿಸ್ಟಾಟಲನ ಅಭಿಪ್ರಾಯದಲ್ಲಿ ಕಲೆ ಲೌಕಿಕವಿಷಯಗಳ ಅನುಕರಣವಲ್ಲ. ಅದು ಪರಿಪೂರ್ಣವಾದ ಭಾವಗಳ ಅನುಕರಣ. ಆದ್ದರಿಂದ ಅದು ಲೌಕಿಕ ವಸ್ತುಗಳಿಗಿಂತಲೂ ಮೇಲಾದದ್ದು; ಸತ್ಯಕ್ಕೆ ಸಮೀಪವಾದದ್ದು. ವಸ್ತು ಮತ್ತು ವ್ಯಕ್ತಿಗಳನ್ನು ಲೌಕಿಕ ಪೂರ್ವಕಲ್ಪನೆಗ ಳಿಂದ ಬಿಡುಗಡೆ ಮಾಡಿ ಅವು ಸ್ವಾಭಾವಿಕವಾಗಿ ಇರಬೇಕಾದ ರೀತಿಯಲ್ಲಿ, ಅಂದರೆ ಸ್ವಸ್ವರೂಪದಲ್ಲಿ ಕಲೆ ರೂಪಗೊಳಿಸುತ್ತದೆ. ಕಲೆ ಬುದ್ಧಿಯ ಕಲ್ಪನೆಯಲ್ಲ; ಬರಿಯ ಇಂದ್ರಿಯಬಿಂಬವಲ್ಲ. ಇಂದ್ರಿಯಗಮ್ಯಬಿಂಬ ಗಳು ಹೃದಯದ ಭಾವಗಳೂಡನೆ ಪ್ರತಿಭೆಯ ಮೂಲಕ ಸಂಯೋಗವಾಗಿ ನಿರ್ಮಾಣವಾದದ್ದು ಕಲೆ. ಕಲೆಯ ಸೃಷ್ಟಿ ಪ್ರಕೃತಿಸೃಷ್ಟಿಗಿಂತ ಉತ್ತಮವಾದದ್ದು. ಅದು ಎಲ್ಲ ಬಗೆಯಾದ ವೈಪರೀತ್ಯಗಳನ್ನೂ ಅಸಂಭಾವ್ಯಗಳನ್ನು ತೊರೆದು ಮನೋಹರ ಭಾವಗಳನ್ನು ಸಾಕ್ಷಾತ್ಕರಿಸುತ್ತದೆ. ಕಲೆ ಜೀವಂತವಾದ ವ್ಯಕ್ತಿವನ್ನು ಸೃಷ್ಟಿಸುತ್ತದೆ; ಅದು ನಿರ್ಮಿಸುವ ವ್ಯಕ್ತಿ ಪ್ರತ್ಯೇಕವೂ ಅಲ್ಲ, ಸಾಮಾನ್ಯವೂ ಅಲ್ಲ. ಮಾನವ ಸಹಜಸತ್ತ್ವವನ್ನು ಪಡೆದಿರುವ ವ್ಯಕ್ತಿ. ಮಾನವಹೃದಯದಲ್ಲಿ ತಳಮಳಗುಟ್ಟುವ ಭಾವಗಳನ್ನು ಕವಿ ಸತ್ತ್ವರೂಪದಲ್ಲಿ ಪ್ರಕಾಶಪಡಿಸುವುದರಿಂದ ಲೌಕಿಕ ಸ್ಥಿತಿಯಲ್ಲಿ ಅವು ಪಡೆದಿದ್ದ ಕ್ಲೇಶವನ್ನು ಕಳೆದುಕೊಂಡು ವಿಶ್ರಾಂತ ಸ್ಥಿತಿಯಲ್ಲಿ ನಮ್ಮ ಹೃದಯಕ್ಕೆ ಗೋಚರವಾಗುತ್ತದೆ. ಲೌಕಿಕಭಾವಕ್ಕೆ ಅಂಟಿದ ಕ್ಲೇಶವನ್ನು ಮರೆಸಿ, ಕ್ಲೇಶಪಡಿಸದ ಶುದ್ಧಬಾವವನ್ನು ಸಾಕ್ಷಾತ್ಕಾರ ಮಾಡುವುದೇ ಅದರ ಕೆಲಸ. ಇದು ಅರಿಸ್ಟಾಟಲ್ ಪತಿಪಾದಿಸಿದ ಭಾವಶುದ್ಧಿ (ಕೆಥಾರ್ಸಿಸ್) ತತ್ತ್ವದ ಅರ್ಥವೆಂದು ಭಾವಿಸಬಹುದು. ಇದು ಹೀಗೆಯೇ ಎಂದು ಖಂಡಿತವಾಗಿ ಹೇಳಲಾಗದು. ಕಲೆ ವಿಜ್ಞಾನದಂತೆ ವಾಸ್ತವಸತ್ಯವನ್ನು ವ್ಯಕ್ತಗೊಳಿಸಲಾರದು. ಕಲೆ ತೋರಿಕೆ, ತೋರಿಕೆ ಯಾದರೂ ಅದು ಹೃದಯಮ್ಮತವೆಂಬ ಭಾವವನ್ನು ಹುಟ್ಟಿಸುವುದು. ಕವಿಯ ಚಮತ್ಕಾರ, ಮಾಟ, ಲೌಕಿಕ ಅನುಭವಗಳು ವಾಸ್ತವವಾದಂತಹವು. ಆದರೂ ವಾಸ್ತವಸ್ಥಿತಿಯಲ್ಲೇ ಅವುಗಳನ್ನು ವಿವರಿಸಿದರೆ ಅದು ಹೃದ್ಯವಾಗುವುದಿಲ್ಲ, ಹೃದಯ ಸಂಗತವಾಗುವುದಿಲ್ಲ. ಕಲೆಯ ಅಲೌಕಿಕದೃಷ್ಟಿಯಿಂದ ಮಾರ್ಪಟ್ಟಾಗ ವಾಸ್ತವವಲ್ಲದಿದ್ದರೂ ಸಂಭಾವ್ಯವಾಗುತ್ತವೆ. ಹೃದಯಕ್ಕೆ ಸಂಗತವಾಗುತ್ತವೆ. ಹೃದಯದಲ್ಲಿ ವಿಶ್ರಾಂತವಾಗುತ್ತವೆ. ಆದ್ದರಿಂದ ಅಸಂಭಾವ್ಯ ವಾದ ವಾಸ್ತವವಿಷಯಕ್ಕಿಂತಲೂ ಸಂಭಾವ್ಯವಾದ ತೋರಿಕೆಯೇ ಕಾವ್ಯದಲ್ಲಿ ಸೇರಲು ಯೋಗ್ಯವಾದದ್ದೆಂದು ಅರಿಸ್ಟಾಟಲ್ ಸ್ಪಷ್ಟಪಡಿಸಿದ್ದಾನೆ. ಕಲೆ ತೋರಿಕೆಯಾದರೂ ವಾಸ್ತವ ವಾದುದಕ್ಕಿಂತ ಸತ್ಪರಿಣಾಮಕಾರಿ, ಆನಂದದಾಯಕವಾದದ್ದು. (ಜಿ.ಎಚ್.)

ಸಾಕ್ರಟೀಸ್ ಮತ್ತು ಪ್ಲೇಟೊ ಆದರ್ಶವಾದಿಗಳು. ಅಲೌಕಿಕವೂ ಅತೀಂದ್ರಿಯವೂ ಆದ ಬೇರೊಂದು ಸತ್ಯ ಪ್ರಪಂಚ ಉಂಟೆಂದೂ ಈ ಪ್ರಪಂಚ ಅದರ ನೆರಳೆಂದೂ ಅವರ ನಂಬಿಕೆ. ಸತ್ಯಸಾಕ್ಷಾತ್ಕಾರಕ್ಕೆ ಪ್ರಯತ್ನಿಸಿ ಮಾನವ ತನ್ನ ಪಾರ್ಥಿವ ಆವರಣದಿಂದ ಮುಕ್ತನಾಗಬೇಕೆಂದು ಅವರ ಉಪದೇಶ. ಅದಕ್ಕೆ ವಿರುದ್ಧವಾಗಿ ಪ್ಲೇಟೊನ ಶಿಷ್ಯನಾದ ಅರಿಸ್ಟಾಟಲ್ ತನ್ನ ಗುರು ಹೇಳಿದ ಅಲೌಕಿಕ ಸತ್ಯ ಮತ್ತು ಸೌಂದರ್ಯವನ್ನು ಇಲ್ಲಿಯೇ ಈ ಲೋಕದಲ್ಲಿಯೇ ಸಾಧಿಸಬಹುದು, ಸಾಧಿಸಬೇಕು ಎಂದು ಹೇಳಿದ. ಅರಿಸ್ಟಾಟಲನ ಅಭಿಮತದಂತೆ ಸ್ವಯಂಪೂರ್ಣವಸ್ತುಗಳಲ್ಲಿನ ಸಾಮರಸ್ಯವನ್ನು ಗ್ರಹಿಸುವುದೇ ಸೌಂದರ್ಯಾನುಭವ. ಪ್ರಪಂಚದಲ್ಲಿನ ಪ್ರತಿಯೊಂದು ವಸ್ತುವೂ ಒಂದೊಂದು ಕಾರ್ಯಸಾಧನೆಗೆ ಉಪಕರಣವಾಗುವ ಯುಕ್ತತೆವನ್ನು ಪಡೆದಿರುತ್ತದೆ. ಉದಾಹರಣೆಗೆ ಏಣಿ. ಅದು ಮೇಲಕ್ಕೆ ಏರಲು ಉಪಯೋಗವಾಗುವ ಸಾಧನೆ. ಅದರ ಯುಕ್ತತೆವನ್ನು ಕಾರ್ಯನಿರ್ವಹಣ ದೃಷ್ಟಿಯಿಂದ ತಿಳಿಯಬೇಕಾಗಿದೆ. ಅದಕ್ಕೆ ಮೆಟ್ಟಿಲುಗಳು ಇಲ್ಲದಿದ್ದಲ್ಲಿ ನಿರುಪಯುಕ್ತವೆಂದೆನ್ನಿಸಿಕೊಂಡು ಕಾರ್ಯನಿರ್ವಹಣ ದೃಷ್ಟಿಯಿಂದ ಅದು ತಿರಸ್ಕೃತವಾಗುತ್ತದೆ. ಹಾಗೆಯೇ ಹಕ್ಕಿಗಳಿಗೆ ಹಾರಾಡಲು ನೆರವಾಗುವ ರೆಕ್ಕೆಗಳು ಯೋಗ್ಯಸಾಧನಗಳು, ಪದಗಳಿಗೆ ಅರ್ಥಗಳು ಇತ್ಯಾದಿ, ಪ್ರತಿಯೊಂದು ವಸ್ತುವಿನ ಯುಕ್ತತೆ ಅದರ ನಿರ್ಮಾಣದ ಉದ್ದೇಶವನ್ನು ಸಫಲಗೊಳಿಸುವುದರಲ್ಲಿದೆ. ಪ್ರಪಂಚದಲ್ಲಿ ಅನೇಕ ವಸ್ತುಗಳೂ ಇಂಥ ಯುಕ್ತತೆಯನ್ನು ಪಡೆದಿರುತ್ತವೆ. ಹಾಗೆಯೇ ಅನೇಕವು ಸ್ವಯಂ ಪರಿಪೂರ್ಣ, ಇಂಥ ಯುಕ್ತತೆಯಿಂದ ಕೂಡಿದ ಸ್ವಯಂ ಪರಿಪೂರ್ಣ ವಸ್ತುಗಳು ತಮ್ಮ ಸಂಕೀರ್ಣವ್ಯವಸ್ಥೆಗಳಲ್ಲಿ ಸಾಮರಸ್ಯದಿಂದ ಸೇರಿಕೊಂಡರೆ ಆಗ ಸೌಂದರ್ಯಸೂಚಕ. ಈ ವಿಚಾರಸರಣಿಯಂತೆ, ನಾನಾ ಸಾಧನೆಗಳ ಸಂಕಲನ ಅಯಾಚಿತವಾಗಿ, ಅನಪೇಕವಾಗಿ ಮತ್ತು ಸುಲಭವಾಗಿ ತೋರಿಸಿಕೊಡುವ ಒಂದು ಮೌಲ್ಯವೆ. ಸೌಂದರ್ಯ. ಒಂದು ವಸ್ತುವಿನ ಅಂಶಗಳು ಆಯಾಚಿತವಾಗಿ ಒಂದು ಸಮಗಕ್ಕೆ ಅಂಗಗಳಾದರೆ, ಆ ಸಮಗ್ರದ ವೃದ್ಧಿಗೂ ಸುಸ್ಥಿತಿಗೂ ಅವು ಕಾರಣವಾಗುತ್ತವೆ. ಒಂದು ನೂತನ ಚೈತನ್ಯ ಅವುಗಳ ಕೂಡುವಿಕೆಯಿಂದ ಉದ್ಭವಿಸಿದಂತಾಗಿ ಸಮಗ್ರದ ಸೃಷ್ಟಿಗೂ ಸ್ಥಿತಿಗೂ ಕಾರಣವಾಗುತ್ತದೆ. ಎಂದರೆ ಸಮಗ್ರದ ಭಾಗಿಗಳಾಗುವುದರಲ್ಲಿಅಂಶಗಳು ತಮ್ಮ ಶ್ರೇಷ್ಠತೆಯನ್ನು ಸಾಧಿಸುತ್ತವೆ. ಜಡವಸ್ತುವಿನ ಮೌಲ್ಯವೂ ಶ್ರೇಷ್ಠತೆಯೂ ಹೆಚ್ಚಬೇಕಾದರೆ ಅದು ಒಂದು ಚೈತನ್ಯ ದ ರೂಪವನ್ನಾದರೂ ಪಡೆಯಬೇಕು. ಉದಾಹರಣೆಗೆ, ಒಂದು ಕಲ್ಲು ಬರಿಯ ಕಲ್ಲಾಗಿರದೆ ವಿಗ್ರಹವಾಗಿ ಮಾರ್ಪಟ್ಟರೆ ಅದರ ಮೌಲ್ಯ ಹೆಚ್ಚುತ್ತದೆ. ಹಾಗೆಯೇ ಆ ಚೈತನ್ಯ ಮತ್ತೂ ಶ್ರೇಷ್ಠವಾಗಬೇಕಾದರೆ ಚಿತ್ತದ ಸಂಸರ್ಗಳನ್ನು ಹೊಂದಬೇಕು. ಎಂದರೆ ಚೈತನ್ಯ ಮೂಕಪ್ರಾಣಿಗಳಲ್ಲಿಯೂ ಮಾನವನ ಚಿತ್ತಪ್ರವೃತ್ತಿಗಳಿಂದಲೂ ವ್ಯಕ್ತಗೊಳ್ಳಬೇಕು. ಹಾಗಾದರೆ ಅದರ ಮೌಲ್ಯ ಉನ್ನತವಾಗುತ್ತದೆ. ಅಂಶಗಳು ಸಮಗ್ರವಾಗುವುದರಲ್ಲಿ ಜಡ ಚೇತನವಾಗುವುದರಲ್ಲಿ, ಚೇತನ ಚಿತ್ತಸಂಸರ್ಗವನ್ನು ಹೊಂದುವುದರಲ್ಲಿಮೌಲ್ಯ ರೂಪುಗೊಳ್ಳುತ್ತದೆ. ಭೌತಿಕ ಪ್ರಪಂಚದಲ್ಲಿಯೇ ಅಂಥ ಕಾರ್ಯವಿಶೇಷದಿಂದ ರೂಪುಗೊಂಡ ಮೌಲ್ಯವೇ ಸೌಂದರ್ಯ. ಕಲಾಕೃತಿಗಳು ಅಂಥ ಮೌಲ್ಯವನ್ನು ಸಾಧಿಸುತ್ತವೆ. ಕೆಳದರ್ಜೆಯ ವಸ್ತುಗಳು ಉತ್ತಮಸ್ಥಿತಿಗಳನ್ನು ಅನುಕರಣೆ ಮಾಡುವಂತೆ ಅಥವಾ ಉತಮ ಗುಣವಿಶೇಷಗಳನ್ನು ತಮ್ಮಲಿಯೇ ಪ್ರತಿಬಿಂಬಿಸುವಂತೆ ಎಸಗುವುದೇ ಕಲೆ. ಇದೇ ಕಲೆಯ ಸ್ವರೂಪ ಮತ್ತು ಕಲಾನಿರ್ಮಾಣದ ಚರಿತ್ರೆ. ಶ್ರೇಷ್ಠಮೌಲ್ಯಗ ಳೆಂದು ಪರಿಗಣಿತವಾಗಿರುವ ಧರ್ಮ, ನೀತಿಜ್ಞಾನ ಮುಂತಾದುವನ್ನು ಕಲೆ ಚಿತ್ರಿಸಿದರೆ ಅಥವಾ ಅಭಿವ್ಯಕ್ತಗೊಳಿಸಿದರೆ ಅದರ ಮೌಲ್ಯ ಹೆಚ್ಚುತ್ತದೆ. ತನ್ನ ಈ ಸಾಧನೆಯಿಂದ ಕಲೆ ಪಾರಲೌಕಿಕ ಅಥವಾ ಅತೀಂದ್ರಿಯ ಆಧರ್ಶಗಳನ್ನು ಇಲ್ಲಿಯೇ ಈ ಭೌತ್ರಪಂಚದ ಆವರಣದಲಿಯೇ ತೋರಿಸಿಕೊಡಬಲ್ಲುದು. ಇದೇ ಕಲೆಯ ಹಿರಿಮೆ ಮತ್ತು ಉದ್ದೇಶ. ಅರಿಸ್ಟಾಟಲ್ ಮುಂದೆ ಹೋಗಿ, ಕಲಾವಿದನ ಪತಿಭೆ ವಿರುದ್ಧ ಗುಣಗಳ ಸಾಮರಸ್ಯ ವನ್ನು ಸಾಧಿಸುವುದರ ಮೂಲಕ ವಿಶ್ವಬಾಂಧವ್ಯವನ್ನು ಏರ್ಪಡಿಸುವ ಒಂದು ಶಕ್ತಿ ಎನ್ನುತ್ತಾನೆ. ಕಲಾವಿದನಂದರೆ ಸಮದೃಷ್ಟಿ ಇರುವವ ಎಂದರ್x. ಆತನಿಗೆ ಯಾವುದರಲ್ಲಿಯೂ ವಿರೋಧ, ಆಭಾಸ, ವಿಕೃತಿ ಎನ್ನುವುದು ಕಂಡುಬರುವುದಿಲ್ಲ. ಎಲ್ಲದರಲ್ಲೂ ಸಮರ್ಪಕವಾದುದವನ್ನು ಕಾಣುವ ಮತ್ತು ಅರ್ಥಮಾಡಿಕೊಳುವ ವಿಶಿಷ್ಟ ಜಾಣ್ಮೆ ಕಲಾವಿದನ ಹುಟ್ಟುಗುಣ. ಹೀಗೆ ಕಲೆ ನಿಷ್ಪ್ರಯೋಜಕವನ್ನಾಗಿಯೂ ಮಾಡಬಲ್ಲುದು. (ಕೆ.ಬಿ.ಆರ್.)

ಭಾಷಣ ಕಲೆ (ರೆಟೊರಿಕ್)[ಸಂಪಾದಿಸಿ]

ತನ್ನ ಹಿಂದೆ ಆಗಿಬಂದ ವಿದ್ವಾಂಸರನ್ನೂ ಅವರ ಸೂತ್ರ ಸಿದ್ಧಾಂತಗಳನ್ನೂ ಆಸಕ್ತಿಯಿಂದ ಓದಿ ಮನನ ಮಾಡಿಕೊಂಡಿದ್ದ ಅರಿಸ್ಟಾಟಲ್ ನೂರಾರು ನಿದರ್ಶನಗಳನ್ನು ಮುಂದಿಟ್ಟುಕೂಂಡು ನಾನಾ ಅಭಿಪ್ರಾಯಗಳನ್ನು ವಿವೇಚಿಸಿ, ಒಪ್ಪ ಓರಣದಿಂದ ಅಚುಕಟ್ಟಾದ ತನ್ನ ವಿಧಾನವನ್ನು ರಚಿಸಿ ಕೊಟ್ಟ. ಮುಖ್ಯವಾದ ಎಲ್ಲ ಅಂಶಗಳನ್ನೂ ಅವನ ಪ್ರಕ್ರಮದಲ್ಲಿ ನಾವು ಕಾಣುತ್ತೇವೆ. ಅವನಿಂದೀಚೆ ಸಾವಿರಾರು ವರ್ಷ ಪ್ರಪಂಚ ಪ್ರಗತಿ ಹೊಂದುತ್ತ ಬಂದಿದ್ದರೂ ಭಾಷಣವಿದ್ಯೆಗೆ ಸಂಬಂಧಿಸಿದ ಮುಖ್ಯಾಂಶ ಒಂದೂ ಹೊಸದಾಗಿ ಎದ್ದುಬಂದಿಲ್ಲ.ಅರಿಸ್ಟಾಟಲನ ಭಾಷಣವಿಧ್ಯ ಮೇಲಾಗಿ ಗದ್ಯಸಾಹಿತ್ಯವನ್ನು ಕುರಿತ ವ್ಯಾಖ್ಯಾನ,ಗದ್ಯವೂ ಸಾಹಿತ್ಯವಾಗಬಹುದು ಎಂಬ ನಿಜಾಂಶ ಜನರ ಮನಸ್ಸನ್ನು ಹೊಗುವುದು ಎಲ್ಲ ದೇಶಗಳಲ್ಲಿಯೂ ಕಡಿಮೆ.ಆದರೆ ವಾಕ್ ಪದ್ಯನಿರ್ಮಾಣ ಕ್ಕಿಂತಲೂ ಮೊದಲು ಎಂಬುದನ್ನು ಎಲ್ಲರೂ ಬಲ್ಲರು. ಪ್ರಾಚೀನ ಗ್ರೀಕರು ಮಾತಾಳಿಗಳಾಗಿದ್ದರು-ವಾಚಾಳತ್ವದ ವಿಮೋಹ ದಿಂದಲ್ಲ.ಆವರ ಬಾಳಿನ ಅತ್ಯವಶ್ಯಕತೆಯ ಸಲುವಾಗಿ.ಆದ್ದರಿಂದ ಅರಿಸ್ಟಾಟಲನ ಹೊತ್ತಗೆಗೆ ಈಚಿನ ಆಲಂಕಾರಶಾಸ್ತ್ರ ಎಂಬ ಆರ್ಥವನ್ನು ಕೊಡಬಾರದು,ಪದ್ಯದ ಗುರಿ ಸಂತೋಷವಾದರೆ,ಭಾಷಣದ ಗುರಿ ಮನವೊಪ್ಪಿಸುವುದು.ತಂತ್ರ ಹೂಡಿ,ಅದೋ ಇದೋ ಅಕರ್ಷಣೆಯನ್ನಿಟ್ಟು ಮೋಸದಿಂದ ಭಾಷಣವಿದ್ಯೆಯನ್ನೇ ಪ್ಲೇಟೊ ತಿರಸ್ಕರಿಸಿಬಿಟ್ಟಿದ್ದ,ಅರಿಸ್ಟಾಟಲನ ಶ್ರದ್ಧೆಯೆಲ್ಲ ನ್ಯಾಯ ಸತ್ಯಗಳ ಕಡೆಗಿತ್ತು.ವಾಗ್ಮಿತೆಯ ಜಾಣ್ಮೆಯನ್ನು ಅವುಗಳ ಸೇವೆಗೂ ಏತಕ್ಕೆ ಉಪಯೋಗಿಸಬಾರದು?

ಭಾಷಣವಿದ್ಯೆಯ ಒಂದು ಮತ್ತು ಎರಡನೆಯ ಅಧ್ಯಾಯಗಳ ವಿಷಯ ಮನವೊಪ್ಪಿಸುವ ಸಾಮಗ್ರಿಯ(ಪಿಸ್ಟಿಸ್)ತಪಶೀಲು,ವಿಚಾರಣೆ.ಅಲ್ಲಿ ಮಾನವಸ್ವಭಾವದ ಮತ್ತು ಮಾನವ ಜೀವನದ ವಿವರಗಳನ್ನು ಕುರಿತ ಹೇಳಿಕೆಗಳು ನಿಬಿಡವಾಗಿವೆ.ಸೌಖ್ಯ,ಸ್ನೇಹ,ಸದ್ಗುಣ,ಸಂತಸ,ಭೀತಿ,ವೈಷಮ್ಯ ಮೊದಲಾದ ಯಾವ ವಿಚಾರವೇ ಆಗಲಿ ನೀತಿ ಪ್ರಮುಖವಾದ ಅದರ ಪ್ರತಿಪಾದನೆ ಅಲ್ಲಿ ಕಂಡುಬರುತ್ತದೆ.ಅರಿಸ್ಟಾಟಲನ ಸೂಕ್ತಿಗಳ ಬೇಕನ್ನನ ಪ್ರಬಂಧಗಳಲ್ಲಿ ಸಪ್ಪಳಗೈಯುವ ಚಾಟೂಕ್ತಿಗಳಂತೆ ಕಿವಿ ಹೋಗುತ್ತವೆ ಎಂದಿದ್ದಾರೆ ವಿಮರ್ಶಕರು.ಮೂರನೆಯ ಅಧ್ಯಾಯ ಪ್ರಮಾಣದಲ್ಲಿ ಚಿಕ್ಕದು.ನಮ್ಮ ಗಮನಕ್ಕೆ ಹೆಚ್ಚಾಗಿ ಬರಬೇಕಾದುದು ಅದೇ.ಅದರಲ್ಲಿ ವಿಷಯದ ಮಿಕ್ಕೆರಡು ಅಂಗಗಳಾದ ಶೈಲಿ(ಲೆಕ್ಸಿಸ್-ಸ್ಪೈಲ್).ಸುವ್ಯವಸ್ಥೆಗಳ(ಟಾಕ್ಸಿಸ್-ಅರೇಂಜ್ ಮೆಂಟ್) ವಿವರಣೆಯಿದೆ.ಅರಿಸ್ಟಾಟಲ್ ಪರಿಶೋಧನೆ ನಡೆಸಿ,ಯುಕ್ತವೆಂದು ಕಂಡುಕೊಂಡೂ,ಸುಲಭವಾಗಿಯೂ ಸ್ಪಷ್ಟವಾಗಿಯೂ ಉಚ್ಚರಿಸಿರುವ ವಿಧಿನಿಯಮ ಸಂಕೇತಗಳು ಈಗಲೂ ಮನ್ನಣೆಗೆ ಅರ್ಹವಾಗಿವೆ.ಶೈಲಿ ತಿಳಿಯಾಗಿರಬೇಕು,ಹಾಗೂ ಅದು ವಿಷಯಕ್ಕಿಂತ ಕೆಳಕ್ಕೂ ಇಳಿಯಬಾರದು ಮೇಲಕ್ಕೂ ಏರಬಾರದು.ರೂಪಕಾಲಂಕಾರ ಗದ್ಯಶೈಲಿಯ ಹಾಳತವಾದ ಭೂಷಣ.ಶ್ರೋತೃಗಳಲ್ಲಿ ಭಾವೋತ್ಕ ರ್ಷ ತುಂಬಿಸುವುದಕ್ಕೋಸ್ಕರ ಅತಿಕ್ಲಿಷ್ಟ ಅಥವಾ ಅನ್ಯದೇಶೀಯ ಅಥವಾ ರಭಸದ ಪದಗುಚ್ಛಗಳನ್ನು ಪ್ರಯೊಗಿಸಿದರೆ ನೀರಸವಾಗುತ್ತದೆ.ಪರಿಣಾಮ ಹಳಸಿಹೋದ ವಿಶೆಷಣಗಳೂ ಅತಿ ಗಳಹದ ಬಲನುಡಿಯೂ ನಿಷಿದ್ಧ.ಶೈಲಿ ಶುದ್ಧವಾಗಿ ಔನ್ನತ್ಯದಿಂದ ಕೂಡಿ ಅನುರೂಪ ವಾಗಿರತಕ್ಕದ್ದು.ಗದ್ಯಶೈಲಿಗೆ ಲಯಶೂನ್ಯತೆ(ಅರಿಹಿತ್ಮಾನ್) ಛಂದೋಬದ್ಧತೆ(ಎಮ್ಮೊಟ್ರಾನ್)ಎರಡೂ ಸಲ್ಲದು.ವಾಕ್ಯಧೋರಣೆ ಎರಡು ವಿಧ;ಪದಕ್ಕೆ ಪದವನ್ನು ಪೋಣಿಸುವ ಶಿಥಿಲಕ್ರಮ,ಪದಗುಚ್ಚಗಳನ್ನು ಹೊಸಿದು ಹುರಿ ಮಾಡುವ ಪೆಡಸು ಪದ್ಧತಿ(ಪೀರಿಯಾಡಿಕ್).

ರೋಮನ್ನರ ಮೂಲಕ,ಅವರ ಕೆಲವು ಅನುಬಂಧಗಳೊಡನೆ,ಭಾಷಣವಿದ್ಯೆ ಮಧ್ಯಯುಗ,ಹೊಸಹುಟ್ಟು,17,18,19ನೆಯ ಶತಮಾನಗಳು-ಹೀಗೆ ಎಲ್ಲ ಕಾಲಮಾನಗಳಲ್ಲೂ ವಿದ್ಯಾಭ್ಯಾಸದಲ್ಲೂ ಗ್ರಂಥರಚನೆಯಲ್ಲೂ ಗುರುಸ್ಥಾನವನ್ನು ಪಡೆದುಕೊಂಡಿತು.ಪಾಶ್ಛಾತ್ಯ ಸಂಸ್ಕೃತಿಗೆ ಅರಿಸ್ಟಾಟಲ್ ಎಷ್ಟರಮಟ್ಟಿಗೆ ಆಧಾರಪುರುಷ ಎಂಬುದನ್ನು ಇದರಿಂದ ಊಹಿಸಬಹುದು.

ಕಾವ್ಯಕಲೆ[ಸಂಪಾದಿಸಿ]

ಪೊಯೆಟಿಕ್ಸ್ ಎಂದು ಪ್ರಖ್ಯಾತವಾಗಿರುವ ಅರಿಸ್ಟಾಟಲನ ಗ್ರಂಥ ಉದ್ದೇಶಪೂರ್ವಕವಾಗಿ ಅಚ್ಚುಕಟ್ಟಾಗಿ ಬರೆದು ಮುಗಿಸಿದ ಲೇಖನವಲ್ಲ;ಉಪನ್ಯಾಸದಿಂದ ಹುಟ್ಟಿಬಂದ ನೆನಪು,ಟಿಪ್ಪಣಿಗಳ(ಎಪೊಮ್ನೆಮಾಟ-ನೋಟ್ಸ್ ಅಂಡ್ ಮೆಮೊರೈಡ)ಸಮೂಹ.ಅದ್ದರಿಂದ ಹಲವು ಪ್ರಸ್ತಾವಗಳಲ್ಲಿ ಅವನ ಇಂಗಿತ ಏನಿದ್ದಿರಬಹುದೆಂದು ತಿಳಿದುಕೊಳ್ಳುವುದೇ ಕಷ್ಟ; ವಾದ ವಿವಾದಕ್ಕಂತೂ ಕೊನೆಯೇ ಇಲ್ಲ.ಹೀಗಿದ್ದರೂ ಪಾಶ್ಛಾತ್ಯ ವಿಮರ್ಶೆಗೆ ಅಂದಿನಿಂದ ಇಂದಿನವರೆಗೂ ಅದೇ ತಳಹದಿ,ಆಕರ,ಪ್ರಚೋದನೆ.ಅದನ್ನು ವಿಮರ್ಶೆಯ ಪವಿತ್ರ ಪುಸ್ತಕವೆಂದು ಹೊಗಳುತ್ತಾರೆ.ಅದರ ಸಾರಾಂಶ ಹೀಗಿದೆ:

ಭವ್ಯಕಾವ್ಯ(ರುದ್ರನಾಟಕ),ಗಂಭೀರ ನಾಟಕ,ಹರ್ಷನಾಟಕ,ಪ್ರಗಾಥ,ಸಮಗೀತ,ಎಲ್ಲದರ ಸ್ಥೂಲ ಆಶಯವೂ ಅನುಕರಣೆ(ಮಿಮೆಸಿಸ್-ಇಮಿಟೇಷನ್),ಅವುಗಳಲ್ಲಿ ಒಂದರಿಂದ ಒಂದಕ್ಕೆ ಮೂರು ಅಂಶಗಳಲ್ಲಿ ವ್ಯತ್ಯಾಸ,1 ವಾಹಕ (ಮೀಡಿಯಂ),2 ವಿಷಯ(ಆಬ್ಜೆಕ್ಟ್),3 ಅನುಕರಣ ರೀತಿ (ಮೋಡ್ ಆಫ್ ಇಮಿಟೇಷನ್).ಲಯ,ಭಾಷೆ,ನಾದಸಂಯೋಗಗಳು ಒಂದೊಂದೇ ಆಗಿಯೋ ಕೂಡಿಕೊಂಡೋ ವಾಹಕವಾಗುತ್ತವೆ.ಭಾಷೆಯೇ ಮಾಧ್ಯಮವಾಗಿರುವ ಒಂದು ಕಲೆಯಿದೆ;ಅದರ ಎಲ್ಲ ಪ್ರಕಾರಗಳಿಗೂ ಅನ್ವಯಿಸುವ ಒಂದೇ ಹೆಸರು ಇಲ್ಲದಿರುವುದರಿಂದ ತೊಂದರೆ,ಛಂದಸ್ಸಿನಲ್ಲಿ ಬರೆದ ಮಾತ್ರಕ್ಕೆ ಬರಹ ಕಾವ್ಯವಾಗುವುದಿಲ್ಲ,ಬರೆದವ ಕವಿಯಾಗುವುದಿಲ್ಲ.

ಕಾರ್ಯದಲ್ಲಿ ತೊಡಗಿರುವ ಮನುಷ್ಯರೇ ಅನುಕರಣದ ವಿಷಯ.ವಾಸ್ತವಿಕ ಜೀವನದಲ್ಲಿರುವಂತೆಯೋ ಅದಕ್ಕಿಂತ ಮೇಲಾಗಿಯೋ ಅಥವಾ ಕೀಳಾಗಿಯೊ ಜನರನ್ನು ಅನುಕರಿಸಬಹುದು.ಗಂಭೀರ ನಾಟಕದ್ದು(ಟ್ರ್ಯಾಜಿಡಿ)ಎರಡನೆಯ ವಿಧ,ಹರ್ಷನಾಟಕದ್ದು(ಕಾಮೆಡಿ)ಮೂರನೆಯ ವಿಧ.ಇನ್ನೊಂದು ವ್ಯತ್ಯಾಸವನ್ನೂ ಗಮನಿಸಬೇಕು.ಕವಿ ಕಥೆಯನ್ನು ಹೇಳಬಹುದು ಅಥವಾ ಪಾತ್ರಗಳನ್ನು ನಮ್ಮ ಮುಂದೆ ನಡೆದಾಡಿಸಬಹುದು.ಎರಡನೆಯ ಬಗೆಯ ಕಾವ್ಯಗಳನ್ನು ನಾಟಕ ಎನ್ನುತ್ತಾರೆ.

ಕಾವ್ಯದ ಉದ್ಭವಕ್ಕೆ ಕಾರಣ ಎರಡು:ಅವೆರದಡೂ ನಮ್ಮ ಅಂತರದ ಆಳದಲ್ಲಿ ಇರುವಂಥವು.ಅನುಕರಣೆ ಮನುಷ್ಯನಿಗೆ ಬಾಲ್ಯದಿಂದ ಬಂದ ಸಹಜಗುಣ,ಅವನಿಗೆ ಅದೊಂದು ಹರ್ಷದಾಯಕ ಹವ್ಯಾಸ.ಎರಡನೆಯದಾಗಿ,ಮನುಷ್ಯನಿಗೆ ಲಯ ಮತ್ತು ನಾದಸಾಮರಸ್ಯಗಳೆಂದರೆ ಅಕ್ಮರೆ,ಸಹಜಪ್ರವೃತ್ತಿಯಿಂದ ಆರಂಭವಾದ ಒರಟು ಆಶುಕೃತಿಗೆಳಿಂದ ಕ್ರಮೇಣ ರೂಪುಗೊಂಡ ಕಾವ್ಯ ಆಮೇಲೆ ಇಬ್ಭಾಗವಾಗಿ ಬೆಳೆಯಿತು.ಗಂಭೀರ ಮನಸ್ಕರು ವೀರಪುರುಷರನ್ನೂ ಊದಾತ್ತ ಫಟನಾವಳಿಗಳನ್ನೂ ಕುರಿತು ಕಾವ್ಯ ಕಟ್ಟಿದರು.ಅವರಿಗೆಲ್ಲ ಹೋಮರ್ ಶಿರೋರತ್ನ. ಗಂಭೀರ ಕವಿಯಾದರೂ ಹೋಮರ್ ಹಾಸ್ಯಚತುರನಾಗಿದ್ದುದರಿಂದ ಉತ್ತಮ ಹರ್ಷನಾಟಕಕ್ಕೊ ಅವನೇ ಮಾರ್ಗದರ್ಶಿಯಾದ.ಲಘು ಜಾಯಮಾನದ ಗೇಲಿಗಾರರಾದರೋ ವೈಯಕ್ತಿಕ ವಿಡಂಬನೆಗಳನ್ನು ಕಟ್ಟಿ ತೃಪ್ತಿಪಟ್ಟರು.

ಗಂಭೀರನಾಟಕ ತನ್ನ ರೂಪವನ್ನು ಇನ್ನೂ ಪರಿಪೂರ್ಣತೆಗೆ ಕೊಂಡೊಯ್ದಿದೆಯೊ ಇಲ್ಲವೋ ಅದರ ಮೇಲೆ ತೀರ್ಮಾನವನ್ನೀಯುವಾಗ ಅದೊಂದನ್ನೇ ಪರಿಗಣಿಸಬೇಕೋ ಪ್ರೇಕ್ಷಕವರ್ಗವನ್ನೂ ಜೊತೆಯಲ್ಲಿ ಭಾವಿಸಬೇಕೋ ಅದು ಬೇರೆ ನಮ್ಮ ವಿಚಾರವನ್ನು ಕೆರಳಿಸುತ್ತದೆ.ಅದೆಂತಾದರೂ ಇರಲಿ.ಗಂಭೀರ ನಾಟಕ ಹರ್ಷನಾಟಕ ಎರಡೂ ಮೊದಮೊದಲು ಕೇವಲ ಆಶುರಚನೆಯಾಗಿದ್ದವು.ಒಂದು ಜನ್ಮವಾದದ್ದು ಪ್ರಗಾಥದಿಂದ;ಇನ್ನೊಂದಕ್ಕೆ ಮೂಲ ನಮ್ಮ ಎಷ್ಟೋ ನಗರಗಳಲ್ಲಿ ಈಗಲೂ ಬಳಕೆಯಲ್ಲಿರುವ ಶೃಂಗಾರ ರಸಭರಿತ ಲಾವಣಿಗಳು.ಗಂಭೀರನಾಟಕದ ಬೆಳೆವಣಿಗೆ ನಿಧಾನವಾಗಿ ನಡೆಯಿತು;ಒಂದು ಮಜಲನ್ನು ಮುಟ್ಟಿ ಅದು ನಿಂತುಬಿಟ್ಟಿದೆ.ಈಸ್ಕಿಲಸ್ ಎರಡನೆಯ ನಟನನ್ನು ತಂದು ಕೂಡಿಸಿದ;ನಾಟ್ಯಮೇಳದ(ಕೋರಸ್)ಪ್ರಭಾವವನ್ನು ಅವನು ಕುಗ್ಗಿಸಿದ.ಸೊಫೊಕ್ಲೀಸ್ ನಟರ ಸಂಖ್ಯೆಯನ್ನು ಮೂರಕ್ಕೆ ಏರಿಸಿದ;ವರ್ಣಚಿತ್ರದ ಪರದೆಗಳನ್ನು ಒದಗಿಸಿಕೊಟ್ಟ,ಬರುಬರುತ್ತ ಗಂಭೀರನಾಟಕದ ಭಾಷೆ ಕಸಕೀಳನ್ನು ಕೊಡವಿಕೊಂಡು ವೈಭವದ ಕಡಗೆ ತಿರುಗಿತು.ಟ್ರೋಕೀ ಗಣದ ಛಂದಸ್ಸು ಬಳಕೆಗೆ ಬಂದದ್ದು ಸಹಜವೆ.ಕಥಾವಸ್ತು ಸರಳತೆಯನ್ನು ಬಿಟ್ಟುಕೊಟ್ಟು ಸಂಕೀರ್ಣವಾಗಿ ಮೈತುಂಬಿಕೊಂಡಿತು.

ಕ್ಷುದ್ರ ಪಾತ್ರಗಳ ಅನುಕರಣೆ ಬರುತ್ತದೆ.ಹರ್ಷನಾಟಕದಲ್ಲಿ,ಅದರ ಮುಖ್ಯಾಂಗ ನೋವನ್ನಾಗಲಿ ನಾಶವನ್ನಾಗಲಿ ಊಂಟುಮಾಡದ ನ್ಯೂನತೆ ಅಥವಾ ಕುರೂಪ. ಹರ್ಷನಾಟಕದ ಚರಿತ್ರೆ ಅಷ್ಟೊಂದಾಗಿ ನಮಗೆ ಗೊತ್ತಿಲ್ಲ.ಮೊದಮೊದಲು ಅದನ್ನು ಯಾರೂ ಚಿತ್ತವಿಟ್ಟು ಲಕ್ಷಿಸಲಿಲ್ಲ.ಹರ್ಷನಾಟಕಕ್ಕೆ ನಾಟ್ಯಮೇಳದ ಬಳಕೆ ಉಂಟಾದದ್ದು ಈಚೆಗೆ.

ಭವ್ಯಕಾವ್ಯ ಗಂಭೀರನಾಟಕ ಎರಡಕ್ಕೂ ಮೇಲುತೆರದ ಪಾತ್ರಗಳೇ ಆಧಾರ.ಭವ್ಯಕಾವ್ಯದ ರೂಪ ಗಂಭೀರನಾಟಕದ ಹಾಗಲ್ಲ.ಸೂರ್ಯನ ಒಂದು ವರ್ತುಲ ಸಂಚಾರದ ಕಾಲದೊಳಗೇ ಮಿತಿಗೊಳ್ಳಲು ಗಂಭೀರನಾಟಕ ಯತ್ನಿಸುತ್ತದೆ;ಅದನ್ನು ಮೀರಿದರೂ ಅತ್ಯಲ್ಪ ಮೀರುತ್ತದೆ.ಭವ್ಯಕಾವ್ಯಕ್ಕಾರೋ ಕಾಲ ಪರಿಮಿತಿ ಏನೇನೂ ಇಲ್ಲ.ಭವ್ಯಕಾವ್ಯದ ಸಮಸ್ತ ಮೂಲಾಂಶಗಳೂ ಗಂಭೀರನಾಟಕದಲ್ಲಿ ಇವೆ; ಆದರೆ ಅದರ ಮೂಲಾಂಶಗಳೆಲ್ಲ ಭವ್ಯ ಕಾವ್ಯದಲ್ಲಿ ಕಾಣಬರುವುದಿಲ್ಲ.

ಗಂಭೀರನಾಟಕ ಅನುಕರಿಸುವ ಕಾರ್ಯಾವಳಿ ಘನಗಂಭೀರವಾದದ್ದು,ಪೂರ್ಣಕೃತಿ ಯುಳ್ಳದ್ದು,ಸಾಕಷ್ಟು ವಿಸ್ತಾರವುಳ್ಳದ್ದು,ಗಂಭೀರನಾಟಕದ ಭಾಷೆ ಅದರ ಬೇರೆ ಬೇರೆ ಭಾಗಗಳಿಗೆ ಸಮಂಜಸವಾದ ಅಲಂಕಾರಗಳಿಂದ ಕೂಡಿದ್ದು,ನಾಟಕಕ್ಕೆ ಕಾರ್ಯ ರೂಪ,ಕಥನ ರೂಪವಲ್ಲ;ಭಯ ಮರುಕಗಳ ಮೂಲಕ ಭಾವ ವಿರೇಚನೆ (ಕಥಾರ್ಸಿಸ್)ಅನ್ನು ಆಗಗೊಳಿಸುತ್ತದೆ ಅದು,ಗಂಭೀರನಾಟಕದ ಅಂಗಗಳು ಆರು;ವಸ್ತು ಸಂವಿಧಾನ,ಪಾತ್ರ, ಪದಕೋಶ,ಚಿಂತನೆ,ನೋಟ,ಸಂಗೀತ.

ಇವುಗಳಲ್ಲಿ ಅತ್ಯಂತ ಮುಖ್ಯವಾದದ್ದು ವಸ್ತುಸಂವಿಧಾನ,ಏತಕ್ಕೆಂದರೆ,ಗಂಭೀರನಾಟಕ ಘಟನಾವಳಿಯ ಅನುಕರಣೆ,ಮನುಷ್ಯರ ಅನುಕರಣೆಯಲ್ಲ;ಘಟನೆಗಳು ಅವುಗಳ ಹೊಂದಾವಣಿ-ಇದೇ ಅದರ ಗುರಿ.ಸಂವಿಧಾನ ಇಲ್ಲದಿದ್ದರೆ ಗಂಭೀರನಾಟಕ ಇಲ್ಲ;ಪಾತ್ರವಿಲ್ಲದೆ ಅದು ಇರಬಹುದು;ಟ್ರ್ಯಾಜಿಡಿಯ ರಸ,ಪರಿಣಾಮ ಘಟನೆಗಳಿಂದಲೇ ಒದಗತಕ್ಕದ್ದು.ಅಲ್ಲದೆ,ಪರಿಸ್ಥಿತಿಯ ಕ್ಶಿಪ್ರ ಪರಿಣಮ ಘಟನೆಗಳಿಂದಲೇ ಒದಗತಕ್ಕದ್ದು.ಅಲ್ಲದೆ,ಪರಿಸ್ಥಿತಿಯ ಕ್ಷಿಪ್ರ ಮಾರ್ಪಾಟು(ಪೆರಿಪೆಟೈಯ),ನಿಜದ ಗ್ರಹಿಕೆ(ರೆಕಾಗ್ನಿಷನ್),ಇವೆರಡೂ ರಾಗಚೋದಕ ವಿದ್ಯಮಾನಗಳು ಗಂಭೀರನಾಟಕದಲ್ಲಿ;ಅವು ವಸ್ತುಸಂವಿಧಾನಕ್ಕೆ ಸೇರಿದವು.ಈ ನಾಟಕದ ರಚನೆಯನ್ನು ಕಲಿಯುವವರು ಮೊದಲು ನುಡಿನೈಪುಣ್ಯವನ್ನೂ ಪಾತ್ರಚಿತ್ರಣವನ್ನೂ ಕಲಿತು,ಅನಂತರ ಸಂವಿಧಾನ ಕೌಶಲವನ್ನು ಅಭ್ಯಾಸಮಾಡುತ್ತಾರೆ.ಹೀಗೆ ಕಥಾಸಂವಿಧಾನ ಮೊಟ್ಟಮೊದಲ ತತ್ತ್ವ;ಅದೇ ಒಂದು ಬಗೆಯಲ್ಲಿ ಗಂಭೀರನಾಟಕದ ಆತ್ಮ.ಪಾತ್ರಕ್ಕೆ ಅಲ್ಲಿ ಎರಡನೆಯ ಸ್ಥಾನ;ಮೂರನೆಯದು ಚಿಂತನೆ;ನಾಲ್ಕನೆಯದು ನುಡಿಗಟ್ಟು;೫ನೆಯ ಜಾಗ ಸಂಗೀತಕ್ಕೆ;ಕಡೆಯದಾಗಿ ನೋಟದಲ್ಲಿನ ಕಲಾಂಶ ಬಲು ಸ್ವಲ್ಪ. ಸಮರ್ಪಕವಾದ ಆದಿ ಮಧ್ಯ ಅಂತ್ಯಗಳಿಂದ ಕೂಡಿರುವುದೇ ಸಂವಿಧಾನದ ಪೂರ್ಣಾಕಾರ; ಅದು ಹೇಗೋ ಪ್ರಾರಂಭವಾಗಿ ಹೇಗೋ ಕೊನೆಗೊಳ್ಳಬಾರದು. ಮಹತ್ತ್ವವೂ ಅದಕ್ಕೆ ಅತ್ಯಾವಶ್ಯಕ; ಅದಿಲ್ಲದಿದ್ದರೆ ಅದರ ಸೌಂದರ್ಯಕ್ಕೆ ಲೋಪ. ಎಂದರೆ. ಘಟನಾವಳಿಯ ನಡೆ ದುರದೃಷ್ಟದಿಂದ ಸೌಭಾಗ್ಯಕ್ಕೂ ಸೌಭಾಗ್ಯದಿಂದ ದುರದೃಷ್ಟಕ್ಕೂ ನ್ಯಾಯಸಮ್ಮತವಾಗಿ ತಿರುಗುವುದಕ್ಕೆ ಸೂಕ್ತ ಅವಕಾಶ ಇರುವುದೇ ಮಹತ್ವದ ತಾತ್ಪರ್ಯ. ಒಬ್ಬನೇ ನಾಯಕನಿದ್ದರೆ ಕಥೆಗೆ ಏಕತೆ ಉಂಟಾಯ್ತೆಂದು ಯೋಚಿಸುತ್ತಾರೆ. ಅದು ತಪ್ಪು. ಹೆರಕ್ಲೀಸ್ ಒಬ್ಬನೇ ಆದರೂ ಅವನ ಅನೇಕಾನೇಕ ಆಗುಹೋಗುಗಳನ್ನು ಒಟ್ಟುಗೂಡಿಸಿ ಏಕತೆ ಸಿದ್ಧಿಸುವುದಿಲ್ಲ. ಏಕತೆಯ ರಹಸ್ಯ ಹೊಮರನಿಗೆ ಗೊತ್ತಿದ್ದಿತು. ಒಡೀಸಿಯಸ್ಸನ ಕಥೆಯಲ್ಲಿ ಎಷ್ಟು ಬೇಕೊ ಅಷ್ವನ್ನು ಮಾತ್ರ ಅವನು ಉಳಿಸಿಕೊಂಡ. ಇತಿಹಾಸಕಾರನಿಗೂ ಕವಿಗೂ ಇರುವ ಭೇದ ಬರೀ ಗದ್ಯ ಪದ್ಯ ಲೇಖನವಲ್ಲ. ಏನು ನಡೆದಿದೆಯೊ ಅವನ್ನುಇತಿಹಾಸಕಾರ ತಿಳಿಸುತ್ತಾನೆ; ಏನು ನಡೆಯಬಹುದೊ ಅವನ್ನುಕವಿ ತಿಳಿಸುತ್ತಾನೆ. ಆದ್ದರಿಂದ ಚರಿತ್ರೆಗಿಂತ ಕಾವ್ಯ ಉಚ್ಚ, ಜ್ಞಾನಾತ್ಮಕ, ಅದು ವ್ಯಷ್ಟಿಯ ನಿರೂಪಣೆ, ಇದು ವಿಶ್ವವ್ಯಾಪಿಯಾದ ಸಮಷ್ಟಿಯ ನಿರೂಪಣೆ. ಎಲ್ಲ ಚಾರಿತ್ರಿಕ ಸಂಗತಿಗಳಲ್ಲದಿದ್ದರೂ ಅದೊ ಇದೊ ನಾಟಕದ ವಿಷಯವಾಗಬಹುದು. ಹಾಗೆ ಆಗಿರ ಬಹುದು ಎಂಬ ನ್ಯಾಯಕ್ಕೆ ಅದು ಅನುಸಾರವಾಗಿದ್ದಲ್ಲಿ, ಸುಮ್ಮನೆ ಒಂದಾದ ಮೇಲೊಂದರಂತೆ ಘಟನಾವಳಿಗಳನ್ನು ತಂದಿಟ್ಟರೆ ಸೊಗಸಾದ ಕಥಾವಸ್ತುವಾಗುವುದಿಲ್ಲ. ನಮ್ಮಲ್ಲಿ ಭಯ ಅಥವಾ ಮರುಕವನ್ನು ಹುಟ್ಟಿಸುವ ಶಕ್ತಿ ಘಟನೆಗೆ ಇರಬೇಕು; ಅರ್ಥಾತ್ ಆ ಘಟನೆ ಕಾರ್ಯಕಾರಣ ಸಂಬಂಧಕ್ಕೆ ಹೊಂದಿಕೊಂಡು ಆಶ್ಚರ್ಯಯುಕ್ತವಾಗಿರಬೇಕು. ಕಥಾವಸ್ತುವಿನಲ್ಲಿ ಎರಡು ಬಗೆ : ಸರಳ ಮತ್ತು ಸಂಕೀರ್ಣ. ಸ್ಥಿತಿಬದಲಾವಣೆಯೂ ನಿಜಗ್ರಹಿಕೆಯೂ ಯಾವುದರಲ್ಲಿ ಇವೆಯೋ ಅದೇ ಸಂಕೀರ್ಣ ಸಂವಿಧಾನ. ಸ್ಥಿತಿಬದಲಾವಣೆ ಯೊಂದಿಗೇ ನಿಜದ ಗ್ರಹಿಕೆಯೂ ಉಂಟಾದರೆ ಅದು ಅತ್ಯುತ್ತಮ; ಈಡಿಪಸ್‍ನಲ್ಲಿ ಹಾಗಿದೆ. ಸೂಕ್ತ ಕಟ್ಟಡದ ಕಥಾವಸ್ತು ಏಕಮುಖವಾಗಿ ನೇರವಾಗಿರಬೇಕು. ಸೌಖ್ಯದಿಂದ ಅಸೌಖ್ಯಕ್ಕೆ ಸ್ಥಿತಿಗತಿ ಬದಲಾಯಿಸತಕ್ಕದ್ದು. ಆ ಬದಲಾವಣೆಗೆ ದುರ್ಗುಣ ನಿಮಿತ್ತವಾಗದೆ ಯಾವುದೊ ದೊಡ್ಡ ಪ್ರಮಾದ ಅಥವಾ ನ್ಯೂನತೆ (ಹಮಾರ್ಷಿಯ-ಎರರ್ ಅಥವಾ ಫ್ರೇಲ್ಟಿ ) ನಿಮಿತ್ತವಾಗಬೇಕು. ನಾಯಕ ಸಂಪೂರ್ಣ ಸಜ್ಜನನೂ ಶುದ್ಧದುರ್ಜನನೂ ಆಗಿರಬಾರದು; ಮೊದಲನೆಯವನಿಗೆ ಕೇಡು ಪ್ರಾಪ್ತವಾದರೆ ಅದರಿಂದ ನಮಗೆ ಆಶಾಭಂಗ, ಜುಗುಪ್ಸೆ; ಎರಡನೆಯವನ ಪತನ ನ್ಯಾಯವೇ ಆದ್ದರಿಂದ ಕನಿಕರಕ್ಕೆ ಆಸ್ಪದವಿರದು. ನಮ್ಮ ಹೇಳಿಕೆಯನ್ನು ನಾಟಕರಂಗದ ವಾಡಿಕೆ ಅನುಮೋದಿಸುತ್ತದೆ. ಯೂರಿಪಿಡೀಸವನ್ನು ಹಳಿಯುವವರು ತಪ್ಪು ಮಾಡಿದ್ದಾರೆ. ಅವನ ನಾಟಕಗಳಲ್ಲಿ ಹಲವು ಅಸೌಖ್ಯದಲ್ಲಿ ಸಮಾಪ್ತಿಗೊಳ್ಳುವೆ. ಅದೇ, ನಾವು ತಿಳಿದಂತೆ ಸರಿಯಾದ ಸಮಾಪ್ತಿ. ಯೂರಿಪಿಡೀಸನಲ್ಲಿ ಯಾವುದೇ ದೋಷವಿದ್ದರೂ ಕವಿಗಳಲ್ಲಿ ಅತ್ಯಂತ ಟ್ರ್ಯಾಜಿಕ್ ಕವಿ ಅವನೇ ಎನ್ನಿಸುತ್ತದೆ. ಒಳ್ಳೆಯವರಿಗೆ ಒಂದು, ಕೆಟ್ಟವನಿಗೆ ಬೇರೊಂದು, ಇಂಥ ದ್ವಿಮುಖ ಪರಿಣಾಮವಿರುವ ಗಂಭೀರನಾಟಕ ಎರಡನೆಯ ದರ್ಜೆಯದು; ಅದನ್ನೇ ಪ್ರಥಮದರ್ಜೆಯದೆಂದು ಬಗೆಯುತ್ತಾರೆ. ಕೆಲವರು. ಅದಕ್ಕೆ ಪ್ರೇರಣೆ ನೋಟಕರ ದೌರ್ಬಲ್ಯ; ಅವರಿಗೆ ಇಷ್ಟವಾದಂತೆ ಬರೆಯುತ್ತಾನೆ ಕವಿ. ತನ್ಮೂಲಕ ಉತ್ಪತ್ತಿಯಾಗುವ ಸಂತೋಷ ನೈಜ ಟ್ರ್ಯಾಜಿಕ್ ಸಂತೋಷವೆ.; ಹರ್ಷನಾಟಕಕ್ಕೆ ಸರಿಯಾದದ್ದು. ದೃಶ್ಯ ಪ್ರದರ್ಶನದ ಮೂಲಕ ದಿಗಿಲುದಯೆಗಳನ್ನು ಎಬ್ಬಿಸಬಹುದು. ಆದರೆ ಕಥಾವಳಿಯ ಒಳಸಂವಿಧಾನದಿಂದ ಅವನ್ನುಪ್ರಚೋದಿಸುವುದು ಅದಕ್ಕಿಂತ ಉತ್ಕೃಷ್ಟವಾದ ರೀತಿ. ಗಂಭೀರನಾಟಕದಿಂದ ಯಾವ ಯಾವುದೋ ಸಂತೋಷವನ್ನು ಬಯಸಬಾರದು ನಾವು, ಅದಕ್ಕೆ ಒಪ್ಪುವಂಥದನ್ನೇ ಬಯಸಬೇಕು. ಭಯವನ್ನೂ ಕನಿಕರವನ್ನೂ ಉಂಟುಮಾಡಬಲ್ಲ ಸಂಗತಿಗಳನ್ನು ಪಟ್ಟಿ ಮಾಡೋಣ. ಇಬ್ಬರು ಸ್ನೇಹಿತರ ಮಧ್ಯೆ ಇಬ್ಬರು ಶತ್ರುಗಳ ಮಧ್ಯೆ ಅಪರಿಚಯಸ್ಥರಿಬ್ಬರ ಮಧ್ಯೆ ಜರುಗಬೇಕು ತಾನೆ ವ್ಯವಹಾರ. ಶತ್ರುಗಳಾಗಲಿ ಅಪರಿಚಯಸ್ಥರಾಗಲಿ ಒಬ್ಬರನ್ನೊಬ್ಬರು ಕೊಂದುಹಾಕಿದರೆ ಅದರಲ್ಲಿ ಯಾವ ಅನುಕಂಪೆಗೂ ಆಸ್ಪದವಿಲ್ಲ. ತಂದೆ, ತಾಯಿ, ಅಣ್ಣ ತಮ್ಮ ಇತ್ಯಾದಿ ರಕ್ತಸಂಬಂಧಿಗಳ ನಡುವೆ ಅಂಥ ವ್ಯಾಪಾರ ನಡೆದ ವರ್ತಮಾನ ದೊರೆತರೆ ಕವಿಗೆ ಪ್ರಯೋಜನ. ರೌದ್ರ ಕಾರ್ಯವನ್ನು ತಿಳಿದೂ ತಿಳಿದೂ ಮಾಡಬಹುದು; ಪೂರ್ತಿ ಅಜ್ಞಾನದಿದ ಮಾಡಬಹುದು; ವಿಚಾರವೆಲ್ಲವನ್ನೂ ಅರಿತು ಕೆಲಸಗೈ ಯುವುದಕ್ಕೆ ಹೋಗಿ ಹಠಾತ್ತಾಗಿ ಕಾರ್ಯಸಂಕಲವನ್ನು ಬಿಟ್ಟುಕೂಡಬಹುದು. ನಾಲ್ಕನೆಯದಾಗಿ, ತಿಳಿವಳಿಕೆಯಿಲ್ಲದೆ ಕೈಗೊಂಡ ಕಾರ್ಯ ಇನ್ನೇನು ಆಗಲಿದೆ ವನ್ನುವಾಗ ಕರ್ತನಿಗೆ ಅರಿವುಂಟಾಗಿ ಕರ್ಮಸಾಧನೆಯೇ ಆಗದೆ ನಿಲ್ಲಬಹುದು. ಇವು ನಾಲ್ಕೇ ಕಾರ್ಯಸಾಧನೆ ವಿಧಗಳು, ಇವುಗಳಲ್ಲಿ ಮೂರನೆಯದು ಅತಿ ಹೀನವಾದದ್ದು. ಕಾರ್ಯಾಚರಣೆ ನಡೆದುಹೋಗುವುದು ಅದಕ್ಕಿಂತ ಮೇಲು; ಅಜ್ಞಾನದಿಂದ ಅದು ಆಗುವುದು ಇನ್ನೂ ವಾಸಿ, ಎಲ್ಲಕ್ಕಿಂತ ಉತ್ಕೃಷ್ಟವಾದದ್ದು ನಾಲ್ಕನೆಯ ತೆರೆದ ನಿದರ್ಶನ.

ಪಾತ್ರದ ವಿಚಾರದಲ್ಲಿ ನಾಲ್ಕು ಉದ್ದೇಶಗಳನ್ನು ಗುರಿಯಾಗಿ ಇಟ್ಟುಕೊಳ್ಳತಕ್ಕದ್ದು. ಅದಕ್ಕೆ ಯೋಗ್ಯತೆ ಇರಬೇಕು; ಔಚಿತ್ಯವಿರಬೇಕು; ಪ್ರತ್ಯಕ್ಷ ಬಾಳಿನ ಯಥಾರ್ಥತೆ ಅದರಲ್ಲಿ ಕಂಡುಬರಬೇಕು; ಅವಿರೋಧತೆಯಿಂದ ಅದು ಶೋಭಿಸಬೇಕು. ಒಬ್ಬ ವ್ಯಕ್ತಿ ನುಡಿಯಲ್ಲಾಗಲಿ ಕೆಲಸದಲ್ಲಾಗಲಿ ತನ್ನ ಸ್ವಭಾವವನ್ನೂ ಆವಶ್ಯಕತೆವನ್ನು ಎಂದೂ ಮೀರಬಾರದು, ಕಥಾಸಂವಿಧಾನದಿಂದಲೇ ಗೋಜುಗೊಂದಲು (ಕಾಂಪ್ಲಿಕೇಷನ್) ಏಳಬೇಕು. ಅದರ ಅಂತಿಮ ಪರಿಹಾರ(ರೆಸಲೂಷನ್) ಆಗಬೇಕು. ಯಂತ್ರದಿಂದ ಇಳಿದು ಅವತರಿಸಿದ ದೇವತೆಯಿಂದ ಮುಕ್ತಾಯ ಆಗಕೂಡದು, ಕಥಾವಳಿಯೊಳಕ್ಕೆ ಅಸಂಬದ್ಧವಾದ (ಇರ್ರ್ಯಾಷನಲ್) ಅಂಶ ಯಾವೊಂದೂ ಪ್ರವೇಶಿಸಲಾಗದು. ಮಾನವಾತೀತ ಸಂಗತಿ ಕಥೆಯಲ್ಲಿ ಇರಲೇಬೇಕಾದರೆ ಅದು ನಾಟಕದ ವಸ್ತುವಿಗೆ ಹೊರಚ್ಚಾಗಿರತಕ್ಕದ್ದು. ದೃಶ್ಯ ಕಣಗೆ ಕಟ್ಟುವಂತೆ ರಚಿಸಬೇಕು. ಕವಿ, ಅನುಕಾರ್ಯರಿಗೆ ಸಮಂಜಸ ಸಾಮಾನು ಸರಂಜಾಮನ್ನೂ ಸೂಕ್ತ ಹಾವಭಾವಗಳನ್ನೂ ಸೂಚಿಸಿಕೊಡಬೇಕು. ಪ್ರತಿಯೊಂದು ಗಂಭೀರನಾಟಕವೂ ಎರಡು ಭಾಗವಾಗಿರುತ್ತದೆ. ಗೋಜು ಗೊಂದಲದ ತೊಡಕು ಒಂದು ಭಾಗ; ಅವನ್ನುಬಿಡಿಸುವುದು ಎರಡನೆಯ ಭಾಗ; ಸ್ಥಿತಿ ಬದಲಾವಣೆಯ ವರೆಗೂ ಮೊದಲನೆಯ ಭಾಗ ಅಲ್ಲಿಂದ ಮುಕ್ತಾಯದವರೆಗೂ ಎರಡನೆಯ ಭಾಗ. ಎರಡರಲ್ಲೂ ಸಮಾನ ದಕ್ಷತೆಯನ್ನು ತೋರಬೇಕು, ಕವಿ. ಭವ್ಯಕಾವ್ಯದ ಸಡಿಲತೆ ಗಂಭೀರನಾಟಕಕ್ಕೆ ಆಗದು. ನಾಟ್ಯಮೇಳವನ್ನು (ಕೋರಸ್) ಪಾತಗಳಲ್ಲಿ ಒಂದನ್ನಾಗಿ ಭಾವಿಸತಕ್ಕದ್ದು. ಆಂಗಿಕವಾಗಿ ಹೊಂದಿಕೊಂಡು ಅದು ಕಾರ್ಯಾವಳಿಯಲ್ಲಿ ಭಾಗವಹಿಬೇಕು. ಸೊಫೂಕ್ಲೀಸನ ಪದ್ಧತಿ ಸರಿ; ಯೂರಿಪಿಡೀಸನದು ಸರಿಯಲ್ಲ. ಇತ್ತೀಚಿನ ಕವಿಗಳಲ್ಲಿ ನಾಟ್ಯಮೇಳಕ್ಕೂ ನಾಟಕದ ವಸ್ತುವಿಗೂ ಏನೇನೂ ಸಂಬಂಧವಿಲ್ಲ; ಅಗೇಥಾನ್ ಅಂಥ ವಿರಚನೆವನ್ನು ಪ್ರಾರಂಭಿಸಿದ. ಎಂದರೆ. ಒಂದು ನಾಟಕದ ಮೇಳಗೀತವನ್ನೋ ಭಾಷಣವನ್ನೋ ಅಂಕವನ್ನೋ ಇನ್ನೊಂದಕ್ಕೆ ಸುಲಭವಾಗಿ ವರ್ಗಾಯಿಸಬಹುದಲವೇ. ಮುಂದಿನ ನಾಲ್ಕು ಅಧ್ಯಾಯಗಳಲ್ಲಿನ ಚಿಂತನೆ ನುಡಿಗಟ್ಟುಗಳ ಚರ್ಚೆ ಬರುತ್ತ್ತದೆ. ಅವೆಲ್ಲ ಆ ಕಾಲ ದೇಶಗಳಿಗೆ ಮಾತ್ರ ಅನ್ವಯಿಸತಕ್ಕವು. ಒಂದೇ ಛಂದಸ್ಸನ್ನು ಉಪಯೋಗಿಸುತ್ತ ಕಥನವಿಧಾನದಲ್ಲಿ ಅನುಕರಣೆ ನೆರವೇರಿಸುವ ಕಾವ್ಯವೂ ತನ್ನ ವಸ್ತುಸಂವಿಧಾನವನ್ನು ಗಂಭೀರನಾಟಕದಲ್ಲಿರುವಂತೆಯೇ ಕಟ್ಟತಕ್ಕದ್ದು. ನಾಟಕದ ನಿಯಮಗಳನ್ನೇ ಹಿಂಬಾಲಿಸತಕ್ಕದ್ದು. ಈ ದೃಷ್ಟಿಯಿಂದ ವೀಕ್ಷಿಸಿದರೆ ಹೋಮರನ ಮಹೋನ್ನತಿ ಸ್ವಯಂವೇದ್ಯ. ಭವ್ಯ ಕಾವ್ಯಕ್ಕೆ ವಿಸ್ತೀರ್ಣ ಅಧಿಕವಾಗಿದೆ; ಅನೇಕ ಘಟನಾವಳಿ ಗಳನ್ನು ಒಂದೇ ಸಲ ಅದು ಪ್ರರ್ದಶಿಸಬಲ್ಲದು. ಕವಿ ತಾನೇ ಮಾತನಾಡುವುದನ್ನು ಆದಷ್ಟು ಕಡಿಮೆ ಮಾಡಬೇಕು; ಇವನ್ನು ಹೋಮರ್ ಚೆನ್ನಾಗಿ ಬಲ್ಲ. ಅದ್ಭುತ ಕ್ರಿಯೆಗಳಿಗೆ ಭವ್ಯ ಕಾವ್ಯದಲ್ಲಿ ಹೆಚ್ಚು ಅವಕಾಶವಿದೆ; ನೇಪಥ್ಯ ದ ಮೇಲೆ ಅವು ಬಂದರೆ ನಗೆಗೀಡಾದೀತು. ಗಂಭೀರ ನಾಟಕದಲ್ಲಿ ಕವಿ ಆಗಬಹುದಲ್ಲದ ಆಗುಹೋವನ್ನು ಹಿಂದಿಕ್ಕಿ, ಆಗದಿದ್ದರೂ ಆಗಬಹುದಾದ್ವನ್ನು ಸ್ವೀಕರಿಸತಕ್ಕದ್ದು. ಕಾವ್ಯದೋಷಗಳಲ್ಲಿ ಎರಡು ವಿಧ; ಕಾವ್ಯದ ತಿರುಳಿಗೆ ಅಂಟಿಕೊಂಡವು ಮತ್ತು ಪ್ರಾಸಂಗಿಕವಾದವು. ವಿಮರ್ಶೆಮಾಡುವಾಗ ಇವನ್ನು ಮರೆಯಬಾರದು; ಹಾಗೂ ವಾಕ್ಯವೊಂವನ್ನು ಪ್ರತ್ಯೇಕಿಸಿಟ್ಟು, ಸಮಯ ಸನ್ನಿವೇಶಗಳನ್ನು ಬದಿಗೊತ್ತಿ, ಇದೇನು ಹೀಗಿದೆ? ಎನ್ನಬಾರದು. ಇನ್ನೊಂದು ಪ್ರಶ್ನೆಯುಂಟು; ಭವ್ಯಕಾವ್ಯ ಹೆಚ್ಚೋ ಗಂಭೀರನಾಟಕ ಹೆಚ್ಚೋ? ಟ್ರ್ಯಾಜಿಕ್ ಕಲೆ ವಯಸ್ಸಿನಿಂದ ಕಿರಿಯದು, ಭವ್ಯ ಕಾವ್ಯ ವಾಚನದ ಮೂಲಕ ಸುಸಂಸ್ಕೃತ ಮಂದಿಗೆ ರುಚಿಯಾಗುತ್ತದೆ; ನಾಟಕವಾದರೋ ಅಭಿನಯದ ಮೂಲಕ ಸಾಮಾನ್ಯ ಜನತೆಗೆ ಪ್ರಿಯವಾಗುತ್ತದೆ ಎಂದು ಕೆಲವರು ಹೇಳುತ್ತಾರೆ. ಇವನ್ನು ಒಪ್ಪುವಂತಿಲ್ಲ. ಅಂಗಚೇಷ್ಟೆ, ವಿಕಟತ್ವ, ವೈಪರೀತ್ಯ, ಅತಿ ಮುಂತಾದವು. ಕಾವ್ಯವಾಚನದಲ್ಲೂ ಆಗಬಹುದು. ಅಭಿನಯ ವ್ಯಾಪಾರವನ್ನೆಲ್ಲ ಒಟ್ಟಿಗೆ ಖಂಡಿಸುವುದು ಅನ್ಯಾಯ. ಗಂಭೀರನಾಟಕವನ್ನು ಓದಿ ಹರ್ಷಪಡುವುದಕ್ಕೆ ಅಡಚಣೆ ಏನೂ ಇಲ್ಲ. ಹೀಗೆ ಮೇಲೆ ಆರೋಪಿಸಿದ ಕಳಂಕ ಯಾವುದೂ ಗಂಭೀರನಾಟಕವನ್ನು ತಟ್ಟುವುದಿಲ್ಲ. ಗಂಭೀರನಾಟಕ ಭವ್ಯ ಕಾವ್ಯದ ಸಕಲ ಸದ್ಗುಣಗಳಿಂದಲೂ ಭರಿತವಾಗಿದೆ. ಭವ್ಯ ಕಾವ್ಯದ ಸಡಿಲತೆ ಅಸ್ಪಷ್ಟತೆ ವಿಳಂಬ ಯಾವುದೂ ಅದನ್ನು ಬಾಧಿಸದು. ಆದ್ದರಿಂದ ಗಂಭೀರನಾಟಕವೇ ಹೆಚಿನ ಪ್ರಭಾವದ ಕಲೆಯೆಂಬುದು ಸುವ್ಯಕ್ತ. ಇದು ಕಾವ್ಯಕಲೆಯ ಗಣಿಯಿಂದ ಆಯ್ದುತಂದ ಹಲಕೆಲವು ವಜ್ರ ವೈಡೂರ್ಯ; ಅದರಲ್ಲಿಕೊನೆಗೆ ಇಷ್ಟೇ ಮೊತ್ತದ ಇತರ ನವರತ್ನಗಳೂ ಹುದುಗಿರುವುದು ನಿಸ್ಸಂದೇಹ, ಇಂಥ ಪ್ರಸ್ಥಾನಗ್ರಂಥವನ್ನು ಅರಿಸ್ಟಾಟಲ್ ಏಕಾಂಗಿ ನಿರ್ಮಿಸಿದ. ಪ್ಲೇಟೋನ ಸವಾಲಿಗೆ ಅದು ಜವಾಬೆಂದು ಅನೇಕರ ನಂಬಿಕೆ, ಕಾವ್ಯನಾಟಕಗಳಿಂದ ಪುರುಷರಿಗೂ ಸಮಾಜಕ್ಕೂ ತುಂಬ ಅಪಾಯವೆಂಬ ದೂರನ್ನು ಪ್ಲೇಟೊ ತನ್ನ ಸಾಕ್ರಟೀಸನ ಮುಖದಿಂದ ಘೋಷಿಸಿದ. ಹೇಗೆಂದರೆ, ಕವಿಗಳು ಬರೆಯುವುದೆಲ್ಲ ಸುಳ್ಳು; ದೇವತೆಗಳಿಗೆ ರೋಷ ಮಾತ್ಸರ್ಯ ದುರ್ಮೋಹಗಳನ್ನಿತ್ತು ಅವವನ್ನು ಅವಹೇಳನಕ್ಕೆ ಈಡುಮಾಡುತ್ತಾರೆ; ಕವಿಕಲ್ಪನೆಯೆಲ್ಲ ಸ್ಥಿರಸತ್ಯ ದ ನಕಲಾದ ವಾಸ್ತವಿಕ ಪ್ರಪಂಚದ ನಕಲು. ನಾಟಕಮಂದಿರದಲ್ಲಿ ಕುಳಿತ ಜನ ಗಟ್ಟಿಯಾಗಿ ಅಳುವಂತೆಯೂ ಕನಿಕರಾಧಿಕ್ಯ ದಿಂದ ಕರಗುವಂತೆಯೂ ನಿಯಂತ್ರಿಸಿ, ಧೈರ್ಯಸ್ಥೈರ್ಯ ಸಾಹಸಗಳನ್ನು ಅವರು ಕಳೆದುಕೊಂಡು ನಿಸ್ಸತ್ವರೂ ನಿಸ್ತೇಜರೂ ಆಗುವಂತೆ ಕವಿಗಳು ಮಾಡಿ ಬಿಡುತ್ತಾರೆ. ಅಂಥ ಪುರುಷರಿಂದ ಸ್ವದೇಶದ ಸಂರಕ್ಷಣೆ ಎಂತು ನೆರವೇರೀತು? ದ್ರೋಹಿಗಳಾದ ಈ ಕವಿಗಡಣವನ್ನು ಆದರ್ಶರಾಜ್ಯದಿಂದ ಗಡಿಪಾರು ಮಾಡುವುದೇ ಉತ್ತಮ ಮಾರ್ಗ. ತನ್ನ ಗುರುವಿನಿಂದಾದ ಈ ಆಕ್ಷೇಪಣೆಗೆ ಸಮಗ್ರ ಸಮಾಧಾನವನ್ನು ಮುಂದಿಡುವುದಕ್ಕಾಗಿ ಅರಿಸ್ಟಾಟಲ್ ಕಾವ್ಯಕಲೆವನ್ನು ರಚಿಸಿದನೆ? ಅರಿಸ್ಟಾಟಲನ ಸ್ಮೃತಿಯಲ್ಲಿ ಪ್ಲೇಟೊ, ಸಾಕ್ರಟೀಸರು ಮಬ್ಬುಮಬ್ಬಾಗಿ ಸುಳಿದಾಡುತ್ತಿದ್ದಿರಬಹುದು, ಅಷ್ಟೆ. ಅಪೂರ್ಣ ಟಿಪ್ಪಣಿಗಳ ಮೂಟೆಯಾದರೂ ಅದರಲ್ಲಿಅರಿಸ್ಟಾಟಲ್ ಪ್ರಕಟಿಸುವ ಕಲಾಭಕ್ತಿ, ಸತ್ಯಶೃದ್ಧೆ , ಪ್ರಾಮಾಣಿಕತೆ, ವಿವೇಕ, ವಿಚಕ್ಷಣೆ, ಏಕಾಗ್ರಚಿತ್ತ ಮೊದಲಾದುವನ್ನು ಬಗೆದರೆ, ಲೇಖಕನಿಗೆ ವಿಚಾರಸರಣಿ ಒಂದರ ಮೇಲೆ ಮನಸ್ಸತು ನಿಶ್ಚಲವಾಗಿದೆ ಎಂದು ತೋರುತ್ತದೆಯೇ ಹೊರತು ವಾದವಿವಾದಕ್ಕೆ ಆತ ಚಿತ್ತ ತಿರುಗಿಸಬಲ್ಲನಂದು ಭಾಸವಾಗುವುದಿಲ್ಲ. ಅರಿಸ್ಟಾಟಲ್ ಪರಿಪೂರ್ಣ ದೇವತೆಯಲ್ಲ; ನಿರ್ದುಷ್ಟ ಮೇಲ್ಪಂಕ್ತಿಯಲ್ಲ, ನಿತ್ಯ ಬಳಕೆಯ ಕೈಪಿಡಿಯಲ್ಲ, ಅವನ ಕಾವ್ಯಕಲೆ. ಸಂಕುಚಿತತ್ವ ದೃಷ್ಟಿಮಾಂದ್ಯಗಳು ಅವನಲ್ಲಿ ಇಲ್ಲದೆ ಇಲ್ಲ; ಅರ್ಧೋಕ್ತಿ ಅತ್ಯುಕ್ತಿಗಳಿಂದ ತುಂಬಿದೆ ಅವನ ಕಿರುಹೊತ್ತಗೆ. ಗಂಭೀರನಾಟಕ ಭವ್ಯ ಕಾವ್ಯಕ್ಕಿಂತ ಹೆಚ್ಚು ಎನ್ನುವಾತನ ಮನೋರಾಜ್ಯ ವಿಶಾಲವಾದುದಲ್ಲ; ಅಷ್ಟೇಕೆ, ಆ ಪ್ರಶ್ನೆ ಗೆ ಬೇರಿಲ್ಲ, ಬುಡವಿಲ್ಲ. ಟ್ರ್ಯಾಜಿಕ್ ಘಟನೆಗಳನ್ನು ವರ್ಗೀಕರಣ ಮಾಡುವುದೂ ಒಂದೇ, ತಾರಾಪುಂಜಗ ವನ್ನು ಎಣಿಸಿ ಪೂರೈಸುವುದೂ ಒಂದೇ. ಗಂಭೀರನಾಟಕದ ನಾಯಕ ಕಳಂಕಬಾಹಿರನಾಗಿರ ಬಾರದೆ? ಕಳಂಕಪೂರ್ಣನಾದ ದುರುಳ ವ್ಯಕ್ತಿ ಅದರ ನಾಯಕನಾಗಲಾರನೆ? ಅರಿಸ್ಟಾಟಲನ ಸೂತ್ರಗಳಿಗೆ ನಿಷೇಧ ಪ್ರಾಚೀನ ಗ್ರೀಕ್ ಗಂಭೀರನಾಟಕಗಳಲ್ಲೇ ಸಿಗುತ್ತ್ತವೆ. ಅವೇತಕ್ಕೆ ಆ ಚಾಣಾಕ್ಷನ ಕಣ್ಣಿಗೆ ಬೀಳಲಿಲ್ಲ? ಅಸೌಖ್ಯವೇ ಗಂಭೀರನಾಟಕಕ್ಕೆ ಸರಿಯಾದ ಕೊನೆಯೆಂದು ಒಂದು ಕಡೆ ಉಗ್ಗಡಿಸಿದರೆ, ಇನ್ನೊಂದು ಕಡೆ ಇನ್ನೇನು ದುರಂತ ಆಗಲಿದೆ ವನ್ನುವಾಗ ಜ್ಞಾನೋದಯವಾಗಿ ಅದು ಆಗದೇ ಹೋಗುವುದು ಅತ್ಯುತ್ತಮ ಅಂತ್ಯ ಎಂದು ಉಚ್ಚರಿಸುತ್ತಾನೆ. ಸಮಾಧಾನದಿಂದ. ಇಂಥ ಪೂರ್ವಾಪರ ವಿರೋಧವಷ್ಟೇ ಅಲ್ಲದೆ, ನೀತಿಬೋಧೆಯ ಹೆಚ್ಚಳವೂ ಅವನ ಕೊರತೆ. ಈ ಪಟ್ಟಿಗೆ ಇನ್ನಷ್ಟು ವಿವರಗಳನ್ನು ಕೂಡಿಸಿದರೂ ಅರಿಸ್ಟಾಟಲ್ ದಿಟವಾಗಿ ಮಹಾಮೇಧಾವಿ, ಜ್ಞಾನಬೊಕ್ಕಸದ ಖಜಾಂಚಿ, ವಿಮರ್ಶೆಯ ಮುಂದಾಳು ಎಂಬ ಮಾವನ್ನು ಮಾತ್ರ ನಾವು ಮರೆಯುವಂತಿಲ್ಲ. ಲಲಿತಕಲೆಯ ಸ್ವರೂಪ, ಭವ್ಯಕಾವ್ಯದ ಲಕ್ಷಣ, ಚರಿತ್ರೆಯ ಕೆಲಸ, ಗಂಭೀರನಾಟಕದ ಉದ್ದೇಶ, ಅಂಗಾಂಗಗಳು, ಫಲ, ವಿಮರ್ಶೆಯ ಧ್ಯೇಯ, ವಿಧಾನ ಇತ್ಯಾದಿ ಜಟಿಲ ವಿಚಾರಗಳ ಮೇಲೆ ಎಷೊಂದು ಬೆಳಕನ್ನು ಚೆಲ್ಲಿದ್ದಾನೆ ನಿರಂತರವಾಗಿ ಜಿಜ್ಞಾಸೆಯನ್ನು ಎಬ್ಬಿಸುವ ವಿಮರ್ಶನಗ್ರಂಥಗಳಲ್ಲಿ ಅರಿಸ್ಟಾಟಲನ ಕಾವ್ಯಕಲೆಯ ಸಮೀಪಕ್ಕೆ ಬರುವ ಗ್ರಂಥ ಒಂದೂ ಇಲ್ಲ. (ಎಸ್.ವಿ.ಆರ್.) ಸರ್ವತೋಮುಖವಾದ ಅರಿಸ್ಟಾಟಲನ ಜ್ಞಾನವನ್ನು ಒಂದು ವಿಶ್ವಕೋಶಕ್ಕೆ ಹೋಲಿಸ ಬಹುದು. ಅರಿಸ್ಟಾಟಲನ ಜ್ಞಾನ ವಿಶಾಲವಾಗಿರುವುದರ ಜೊತೆಗೆ ಆಳವಾಗಿಯೂ ಇದೆ. ತರ್ಕಶಾಸ್ತ್ರ, ಪ್ರಥಮತತ್ತ್ವ, ನೀತಿಶಾಸ್ತ್ರ, ರಾಜ್ಯಶಾಸ್ತ್ರ, ಸೌಂದರ್ಯಮೀಮಾಂಸೆ ಇವು ವಿದ್ವಾಂಸರ ಗಮನವನ್ನು ಸೆಳೆಯುತ್ತವೆ. ಸಾಕ್ರಟೀಸ್ ತನಗೆ ಸಮಾನನಾದ ಶಿಷ್ಯವನ್ನು ಪಡೆದ. ಪ್ಲೇಟೊ ಕೂಡ ತನ್ನಷ್ಟೇ ಪತಿಭಾಶಾಲಿಯಾದ ಶಿಷ್ಯವನ್ನು ಪಡೆದ. ಆದರೆ ಅರಿಸ್ಟಾಟಲನಿಗೆ ತನ್ನಷ್ಟೇ ಪ್ರಭಾವಶಾಲಿಯಾದ ಶಿಷ್ಯನನ್ನು ಪಡೆಯುವ ಸೌಭಾಗ್ಯ ದೊರೆಯಲಿಲ್ಲ. (ಜಿ.ಎಚ್.)