ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅರುಣಗಿರಿನಾಥ
ಅರುಣಗಿರಿನಾಥ : 15ನೆಯ ಶತಮಾನದ ತಮಿಳು ಕವಿ. ತಮಿಳುನಾಡಿನ ಉತ್ತರ ಆರ್ಕಾಟು ಜಿಲ್ಲೆಯಲ್ಲ್ಲಿರುವ ತಿರುವಣ್ಣಾಮಲೈ ಜನ್ಮಸ್ಥಳ. ತಾಯಿ ಮುತ್ತಮ್ಮೈ. ಅಕ್ಕನ ಆರೈಕೆಯಲ್ಲಿ ಬೆಳೆದು, ಹೆಚ್ಚೇನೂ ಓದದೆ ಚಿಕ್ಕವನಾಗಿದ್ದಾಗಲೇ ದುರ್ವ್ರ್ಯಸನಗಳಿಗೆ ಬಲಿಯಾಗಿ, ದೇಹಾರೋಗ್ಯವನ್ನೂ ಕುಟುಂಬದ ಆಸ್ತಿಯನ್ನೂ ಕಳೆದುಕೊಂಡ. ಸೋದರಿ ಇದಕ್ಕ್ಕಾಗಿ ಖಂಡಿಸಿ ಬಿರುನುಡಿಯಲು ಮನನೂಂದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ. ತಿರುವಣ್ಣಾಮಲೈ ದೇವಾಲಯದ ಗೋಪುರದ ಮೇಲೇರಿ ಸಾಯಬೇಕೆಂದು ಕೆಳಗೆ ಹಾರಿದ. ಆಗೊಬ್ಬ ಸನ್ಯಾಸಿ (ಸುಬ್ರಹ್ಮಣ್ಯನೆ ಆ ಸಂನ್ಯಾಸಿ ಎಂದು ನಂಬಿಕೆ) ಅವವನ್ನು ನೆಲಕ್ಕೆ ಬೀಳಗೊಡದೆ ಹಿಡಿದು ಕಾಪಾಡಿದುದಲ್ಲದೆ, ದೈವಜ್ಞಾನೋಪದೇಶ ಮಾಡಿದ. ಮುರುಗನನ್ನು ಸ್ತುತಿಸಿ ಹಾಡುವಂತೆ ಅಪ್ಪಣೆ ಮಾಡಿದ. ಕೂಡಲೇ ಅರುಣಗಿರಿನಾಥ ಭಕ್ತಿಪರವಶನಾಗಿ ಹಾಡಲಾರಂಭಿಸಿದ. ಇದಾದ ಮೇಲೆ ಸಂನ್ಯಾಸಿಯಾಗಿ ತಿರುವಣ್ಣಾಮಲೈನ ಒಂದು ಮಠದಲ್ಲಿ ವಾಸಿಸ ತೊಡಗಿದ. ಅರುಣಗಿರಿಯ ನಾಥವನ್ನು ಅಂದರೆ ತನ್ನ ಆರಾಧ್ಯ ದೈವವನ್ನು ಹಾಡುಗಳಿಂದ ಅನುದಿನವೂ ಸ್ತುತಿಸಿ ಅರ್ಚಿಸಿದ, ಕೆಲವು ಕಾಲಾನಂತರ ಶೈವ ನಾಯನಾರುಗಳಂತೆ ತಾನೂ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿ, ಅಲ್ಲಲಿಯ ದೇವರನ್ನು ಪೂಜಿಸಬೇಕೆಂದು ಬಯಸಿ, ತೀರ್ಥಯಾತ್ರೆ ಕೈಗೊಂಡ. ಮುಖ್ಯವಾಗಿ ಸುಬ್ರಹ್ಮಣ್ಯ ಕ್ಷೇತ್ರಗಳನ್ನು ಸಂದರ್ಶಿಸಿ, ಹಲವು ಗೀತೆಗಳನ್ನು ಹಾಡಿದ, ದೇವರ ಮಹಿಮೆಗಳನ್ನು ಕೊಂಡಾಡುವ ಈ ಗೀತೆಗಳು, ತಿರುಪ್ಪುಗಳ್ ಎಂಬ ಹೆಸರಿನಿಂದ ಸಂಗ್ರಹಿತವಾಗಿವೆ.
ಭಾರತವನ್ನು ತಮಿಳಿನಲ್ಲಿ ರಚಿಸಿದ ವಿಲ್ಲಿಪುತೂರಾರ್ ಈತನ ಸಮಕಾಲೀನ. ಈತ ಸಾಧಾರಣಪಂಡಿತವನ್ನು ಕಂಡರೆ ವಾದಕ್ಕೆಳೆದು, ಸೋಲಿಸಿ ಸೋತವರ ಕಿವಿಗಳನ್ನು ಕೊಯ್ಯುತಿದ್ದ. ಅರುಣಗಿರಿನಾಥ ಈತನ ಗರ್ವಭಂಗಮಾಡಿದರೂ ಸ್ನೇಹ ಮತ್ತು ದಯೆಯಿಂದ ಕಂಡುಕೊಂಡ.
ಅರುಣಗಿರಿನಾಥನ ಪವಾಡಗಳು ಹಲವಿವೆ. ಅಂಥವುಗಳಲ್ಲಿ ಮುಖ್ಯವಾದ್ದು ಅವನ ಸಮಕಾಲೀನನಾದ ಪ್ರೌಢದೇವರಾಯನಿಗೆ ಸುಬ್ರಹ್ಮಣ್ಯವನ್ನು ಪ್ರತ್ಯಕ್ಷ ದರ್ಶನ ಮಾಡಿಸಿದ್ದು. ಅದಕ್ಕಾಗಿ ಮಯಿಲ್‍ವಿರುತ್ತಂ ಎಂಬ ಗ್ರಂಥ ರಚಿಸಿದ್ದಾನೆ. ಇನ್ನೊಂದು ಪವಾಡ, ದೇವಲೋಕದ ಪುಷ್ಪವಾದ ಕರ್ಪಕ ಮಲರ್ ಎಂಬುವನ್ನು ತರಲು ಗಿಳಿರೂಪದಲ್ಲಿ ಹೋದುದು. ಜೀವವಿಲ್ಲದ ಇವನ ದೇಹವನ್ನು ನೋಡಿದ ಜನರು, ಸತ್ತನೆಂದು ತಿಳಿದು ದೇಹವನ್ನು ದಹಿಸಿಬಿಡಲು, ಕವಿ ಗಿಳಿರೂಪದಲ್ಲಿಯೇ ಉಳಿದನಂತೆ.
ನಮಗೆ ದೊರೆಯುವ ತಿರುಪ್ಪುಗಳ್‍ನಲ್ಲಿ ಸಾವಿರಕ್ಕಿಂತ ಸ್ವಲ್ಪ ಹೆಚ್ಚು ಸಂಖ್ಯೆಯ ಹಾಡುಗಳು ಮಾತ್ರ ಸಿಗುತ್ತವೆ. ಅದಲ್ಲದೆ ಕಂದರ್ ಅನುಭೂತಿ, ಕಂದರ್ ಅಲಂಕಾರಂ, ಕಂದರ್ ಅಂತಾದಿ, ತಿರುವಗುಪ್ಪು, ವೇಲ್‍ವಿರುತ್ತಂ ಮತ್ತು ಮೊದಲೇ ಹೇಳಿದ ಮಯಿಲ್‍ವಿರುತ್ತಂ ಎಂಬ ಗ್ರಂಥಗಳನ್ನು ಈತ ರಚಿಸಿದ್ದಾನೆ.
ಸಂಗೀತರೂಪದಲ್ಲಿ ತಾಳಬದ್ಧವಾಗಿ ಹಾಡಲು ಅನುಕೂಲವಾಗುವಂತೆ ಅನುಪ್ರಾಸಾದಿ ಶಬ್ದಾಲಂಕಾರಗಳಿಂದ ಕೂಡಿ ಈ ಹಾಡುಗಳು ರಚಿತವಾಗಿವೆ. ಸುಬ್ರಹ್ಮಣ್ಯನ ಮೇಲೆ ವಿಶೇಷಭಕ್ತಿಯುಳ್ಳವರು ಇವನ್ನು ಮೆಚ್ಚಿ ಓದುತ್ತಾರೆ. ಆದರೆ, ಸಾಹಿತ್ಯದೃಷ್ಟಿಯಿಂದ ಈ ಗ್ರಂಥಗಳು ಸಾಧಾರಣ. ಹಾಡುಗಳು ಸಂಸ್ಕೃತ ಪದಭೂಯಿಷ್ಟವಾಗಿವೆ. ಹಲವು ಸಂಸ್ಕೃತ ಶಬ್ದಗಳು ತಮಿಳಿನಲ್ಲಿ ಪ್ರಯೋಗವಾಗುವಾಗ ಸಹಜವಾಗಿ ಆಗುವ ವ್ಯತ್ಯಾಸಗಳೂ ಆಗದೆ ಪ್ರಯೋಗವಾಗಿವೆ. ಇದು ಈ ಕವಿಯ ವೈಶಿಷ್ಯ. ತಿರುಪ್ಪುಗಳ್‍ನಲ್ಲಿ ವೇಶ್ಯೆಯರ ನಡತೆಗಳ ಟೀಕೆ ಮತ್ತು ಇತರ ಶೃಂಗಾರ ವಿಷಯಗಳ ಪ್ರತಿಪಾದನೆ ಇದೆ.
ಒಂದೊಂದು ಹಾಡಿನಲ್ಲಿ ಹಲವು ಪುರಾಣ ಕಥೆಗಳು ಎಡೆಗೊಳ್ಳುತ್ತವೆ. ಸಾಮಾನ್ಯವಾಗಿ ಹಾಡುಗಳು ಕ್ಲಿಷ್ಟವಾಗಿದ್ದು, ಸುಲಭದಲ್ಲಿ ಅರ್ಥವಾಗುವುದಿಲ್ಲ. ಮುಖ್ಯವಾಗಿ ಇವು ಸುಬ್ರಹ್ಮಣ್ಯವನ್ನು ಕುರಿತಾದ ಭಕ್ತಿಸ್ತೋತ್ರಗಳಾಗಿರುವುವಾದರೂ ಅನ್ಯದೈವಸ್ತುತಿಗಳು, ಅನ್ಬಿನ್ ಶಿರಪ್ಪು (ಪ್ರೀತಿಯ ಹಿರಿಮೆ), ಶಿವ£ಡಿಯಾರ್ ಇಣಕ್ಕಂ (ಶಿವಭಕ್ತ ಸಂಗ), ಆಶೈ ಅಡಕ್ಕಂ (ಆಸೆವನ್ನು ಅಂಕಿತಗೊಳಿಸುವುದು), ಅಯೋಗ್ಯರನ್ನು ಹಾಡಿಹೊಗಳುವುದರಿಂದ ಬರುವ ಕೇಡು, ಮತೀಯಕಲಹಗಳ ನಿಷ್ಫಲತೆ, ತೊಂಡಿನ್ ಶಿರಪ್ಪು (ಸೇವೆಯ ಮಹತ್ವ) ಮುಂತಾದ ಇತರ ವಿಷಯಗಳನ್ನೂ ಹೆಚ್ಚು ನಿಖರವಾಗಿ ಇಲ್ಲಿ ಕಾಣಬಹುದು. (ಎಸ್.ವಿ.ಎಸ್.)