ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅರ್ಕಾವತಿ ನದಿ
ಅರ್ಕಾವತಿ ನದಿ ನಂದಿದುರ್ಗದಲ್ಲಿ ಹುಟ್ಟಿ ಬೆಂಗಳೂರು ಜಿಲ್ಲೆಯಲ್ಲಿ ಉತ್ತರದಿಂದ ದಕ್ಷಿಣಕ್ಕೆ ಹರಿಯುತ್ತದೆ. ಕಾವೇರಿಯ ಮುಖ್ಯ ಉಪನದಿಗಳಲ್ಲೊಂದು. 120 ಮೈಲಿ ಉದ್ದವಿದೆ. ನೆಲಮಂಗಲದ ದಕ್ಷಿಣದ ಕಡೆಯಿಂದ ಬರುವ ಕುಮುದವತಿ, ಬೆಂಗಳೂರಿನ ಕಡೆಯಿಂದ ಬರುವ ವೃಷಭಾವತಿಗಳು ಇದರ ಉಪನದಿಗಳು. ಸಾವನ ದುರ್ಗ, ರಾಮಗಿರಿ, ಶಿವಗಿರಿ ಮೊದಲಾದ ಬೆಟ್ಟಗುಡ್ಡ ಪ್ರದೇಶ ಮತ್ತು ಸಾಧಾರಣ ಕಾಡುಪ್ರದೇಶಗಳ ಮೂಲಕ ದಕ್ಷಿಣಕ್ಕೆ ಹರಿಯುವುದರಿಂದ ನೀರಾವರಿಗೆ ಹೆಚ್ಚು ಪ್ರಯೋಜನಕಾರಿಯಾಗಿಲ್ಲ. ಆದರೂ ಮೇಲ್ಕಣಿವೆಯಲ್ಲಿ ಹೆಸರುಘಟ್ಟ ಮೊದಲಾದ ದೊಡ್ಡ ಕೆರೆಗಳಿಗೂ ದೊಡ್ಡ ಬಳ್ಳಾಪುರ ತಾಲ್ಲೂಕಿನಲ್ಲಿ ದೊಡ್ಡ ಬಳ್ಳಾಪುರ, ಕಾಕೋಳು ಮುಂತಾದ ಕೆರೆಗಳಿಗೂ ನೀರನ್ನೊದಗಿಸುತ್ತದೆ. ಮುಂದುವರಿದು ನೆಲಮಂಗಲ, ಮಾಗಡಿ, ರಾಮನಗರ ಮತ್ತು ಕನಕಪುರ ತಾಲ್ಲೂಕುಗಳು ಮೂಲಕ ಹರಿದು ಕನಕಪುರದ ಹತ್ತಿರ ಅಂಚಿನಲ್ಲಿ ಸಂಗಮದ ಬಳಿ ಕಾವೇರಿಯನ್ನು ಸೇರುತ್ತದೆ. ಮಳೆ ಕಡಿಮೆ ಬೀಳುವ ಪ್ರದೇಶದಲ್ಲಿರುವುದರಿಂದ ಬೇಸಗೆಯಲ್ಲಿ ಬಹುಮಟ್ಟಿಗೆ ಇದರ ಪಾತ್ರ ಒಣ ಮರಳಿನಿಂದ ತುಂಬಿರುತ್ತದೆ. ಆದರೂ ಸಂಪೂರ್ಣವಾಗಿ ಬತ್ತಿ ಹೋಗದೆ ನೀರು ಸಣ್ಣ ಪ್ರಮಾಣದಲ್ಲಿ ಹರಿಯುತ್ತಿರುತ್ತದೆ. ಮಳೆಗಾಲದಲ್ಲಿ ಅನೇಕ ಉಪನದಿಗಳ ನೀರು ಒದಗುವುದರಿಂದ ತುಂಬಿ ಹರಿಯುತ್ತದೆ. ಒಮ್ಮೊಮ್ಮೆ ಪ್ರವಾಹಗಳೂ ಕಾಣಿಸಿಕೊಳ್ಳುತ್ತವೆ. ಪ್ರವಾಹದ ಚಲನೆ 3500 ರಿಂದ 50000 ಕ್ಯೂಸೆಕ್ಸ್ವರೆಗಿರುವುದು. ನೆಲಮಂಗಲ, ಮಾಗಡಿ ಮತ್ತು ರಾಮನಗರಗಳಿಂದ ಬೆಂಗಳೂರಿಗೆ ಹೋಗುವ ಮಾರ್ಗಗಳಲ್ಲಿ ನದಿಗೆ ಅಡ್ಡಲಾಗಿ ದೊಡ್ಡ ಸೇತುವೆಗಳನ್ನು ನಿರ್ಮಿಸಿದ್ದಾರೆ. ಈಚೆಗೆ ಇದರ ನೀರನ್ನು ನೀರಾವರಿಗೆ ಉಪಯೋಗಿಸಿಕೊಳ್ಳಲು ಯೋಜನಾರೂಪವಾದ ಪ್ರಯತ್ನ ನಡೆಯುತ್ತಿವೆ. (ಎ.ಕೆ.)