ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಲಿ ಆದಿಲ್ ಷಾ I

ವಿಕಿಸೋರ್ಸ್ದಿಂದ

ಬಿಜಾಪುರದ 5ನೆಯ ಸುಲ್ತಾನ (1558-80). ಇಬ್ರಾಹೀಮನ ಮಗ ಮತ್ತು ಉತ್ತರಾಧಿಕಾರಿ. ಷಿಯಾ ಪಂಥದ ಅನುಯಾಯಿ. ಈತ ಆ ಪಂಥಕ್ಕೆ ಹೆಚ್ಚು ಪ್ರೋತ್ಸಾಹ ನೀಡಿದ್ದರಿಂದ ಸುನ್ನಿ ಪಂಗಡದವರಿಗೆ ಅಸಮಾಧಾನವುಂಟಾಯಿತಾಗಿ ಇವನು ತನ್ನ ಆಳ್ವಿಕೆಯ ಮೊದಲಲ್ಲಿಯೇ ಅನೇಕ ಎಡರುಗಳನ್ನು ಎದುರಿಸಬೇಕಾಯಿತು. ಪಟ್ಟಕ್ಕೆ ಬರುತ್ತಿದ್ದಂತೆಯೇ 1558ರಲ್ಲಿ ವಿಜಯನಗರದ ರಾಜನೊಡನೆ ಒಪ್ಪಂದವನ್ನು ಮಾಡಿಕೊಂಡು ಅಹಮದ್ನಗರದ ಮೇಲೆ ದಾಳಿ ಮಾಡಿದ. ಆದರೆ ಈ ಸಂದರ್ಭದಲ್ಲಿ ರಾಮರಾಯ ಮಹಮ್ಮದೀಯರ ಮೇಲೆ ಎಸಗಿದ ಕೃತ್ಯಗಳು ಬೇರೆ ರಾಜ್ಯಗಳ ಮಹಮ್ಮದೀಯರ ಮನನೋಯಿಸಿ ರೊಚ್ಚಿಗೇಳುವಂತೆ ಮಾಡಿದ್ದರಿಂದ ಅಲಿ ಮತ್ತು ರಾಮರಾಯನ ಮೈತ್ರಿ ಕಡಿಯಿತು. ಅನಂತರ ಮಹಮ್ಮದೀಯ ರಾಜ್ಯಗಳಾದ ಬಿಜಾಪುರ, ಅಹಮದ್‍ನಗರ, ಬಿದರೆ ಮತ್ತು ಗೋಲ್ಕೊಂಡದ ಸುಲ್ತಾನರು ಒಂದು ಒಕ್ಕೂಟವನ್ನು ಮಾಡಿಕೊಂಡು ವಿಜಯನಗರದ ಮೇಲೆ ಯುದ್ಧ ಸಾರಿದರು. ತಾಳೀಕೋಟೆಯಲ್ಲಿ 1565ರಲ್ಲಿ ನಡೆದ ಯುದ್ಧದಲ್ಲಿ ರಾಮರಾಯ ಸೋತು ಕೊಲೆಗೀಡಾದ. ಈ ಯುದ್ಧದಲ್ಲಿ ಹಾಗೂ ಅನಂತರ ವಿಜಯನಗರವನ್ನು ಸೂರೆಗೊಳ್ಳುವಲ್ಲಿ ಅಲಿ ಪ್ರಮುಖ ಪಾತ್ರ ವಹಿಸಿದ್ದ. ತಾಳೀಕೋಟೆಯ ಯುದ್ಧಾನಂತರ ಅಹಮದ್ನಗರದ ಸುಲ್ತಾನನೊಡನೆ ಒಪ್ಪಂದ ಮಾಡಿಕೊಂಡು ಪಶ್ಚಿಮ ಕರಾವಳಿಯಲ್ಲಿದ್ದ ಪೋರ್ಚುಗೀಸರ ವಿರುದ್ಧ ದಂಡೆತ್ತಿಹೋಗಿ ಗೋವೆಯನ್ನು ಮುತ್ತಿದ. ಆದರೆ ಪೋರ್ಚುಗೀಸರು ಇವನನ್ನು ಹಿಮ್ಮೆಟ್ಟಿಸಿದರು. ರಾಜ್ಯಕ್ಕೆ ಹಿಂದಿರುಗುವ ಮೊದಲು ಇವನು ಆದವಾನಿ ಕೋಟೆಯನ್ನು ಗೆದ್ದುಕೊಂಡ. 1573ರಲ್ಲಿ ತುರ್ಕಲನ್ನು ಗೆದ್ದ. ತರುವಾಯ, ವಿಜಯನಗರದ ಅಧೀನದಲ್ಲಿದ್ದು, ತಾಳೀಕೋಟೆಯ ಯುದ್ಧದ ಅನಂತರ ಸ್ವತಂತ್ರನಾಗಿ ಬಂಕಾಪುರದಲ್ಲಿ ಆಳುತ್ತಿದ್ದ ವೇಲಪರಾಯನ ಮೇಲೆ ದಂಡೆತ್ತಿಹೋದ. 15 ತಿಂಗಳ ಸತತ ಹೋರಾಟದಿಂದ ಬಂಕಾಪುರವನ್ನು ವಶಪಡಿಸಿಕೊಂಡ. ಅನಂತರ ಇವನ ದಂಡನಾಯಕ ಮಸ್ತಫ ಖಾನ್ ಚಂದ್ರಗುತ್ತಿಯನ್ನು ಸಾಧಿಸಿಕೊಂಡನಲ್ಲದೆ ಕರ್ನಾಟಕದ ಕೆಲವು ಸಣ್ಣಪುಟ್ಟ ನಾಯಕರುಗಳಿಂದ ಕಪ್ಪಕಾಣಿಕೆಗಳನ್ನು ವಸೂಲು ಮಾಡುವುದರಲ್ಲೂ ಯಶಸ್ವಿಯಾದ. ಅಲಿ ಆದಿಲ್ ಷಾ ಅನೇಕ ಬಾರಿ ಪೆನುಕೊಂಡವನ್ನು ಗಳಿಸಲು ಪ್ರಯತ್ನ ಪಟ್ಟು ವಿಫಲನಾದ. 1580ರಲ್ಲಿ ತನ್ನ ಅರಮನೆಯಲ್ಲಿಯೇ ಕೊಲೆಯಾದ. ಅನಂತರ ಇವನ ಸೋದರನ ಮಗ ಇಬ್ರಾಹೀಂ ಪಟ್ಟಕ್ಕೆ ಬಂದ. ಪ್ರಸಿದ್ಧ ಚಾಂದಬೀಬಿ ಅಲಿಯ ಹೆಂಡತಿ.