ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಲೆಕ್ಸಾಂಡ್ರಿಯ

ವಿಕಿಸೋರ್ಸ್ ಇಂದ
Jump to navigation Jump to search

ಉತ್ತರ ಈಜಿಪ್ಟಿನ ಮುಖ್ಯ ರೇವುಪಟ್ಟಣ. ಪ್ರ.ಶ.ಪು. 332ರಲ್ಲಿ ಮ್ಯಾಸಿಡೋನಿಯದ ದೊರೆ ಅಲೆಕ್ಸಾಂಡರ್ ಮಹಾಶಯನಿಂದ ಕಟ್ಟಲ್ಪಟ್ಟಿತೆಂದು ಪ್ರತೀತಿ.


ಈಜಿಪ್ಟ್ ದೇಶದ ಪ್ರಾಚೀನ ಮತ್ತು ಐತಿಹಾಸಿಕ ಪಟ್ಟಣವಾದರೂ ಈಗ ಇದೊಂದು ಆಧುನಿಕ ಮಹಾನಗರವಾಗಿದೆ. ಇದು ಕೆಳ ಈಜಿಪ್ಟಿನ ನೈಲ್ನದಿ ಹಾಗೂ ಮೆಡಿಟರೇನಿಯನ್ ಸಮುದ್ರಕ್ಕೆ ಸಮೀಪದಲ್ಲಿದೆ. ಇಲ್ಲಿಂದ ಕೈರೋಗೆ 207 ಕಿಮೀ ಈಜಿಪ್ಟಿನ ದೊಡ್ಡ ಪಟ್ಟಣಗಳ ರೈಲು ಸಂಪರ್ಕವಿದೆ. ಜನಸಂಖ್ಯೆ 33,80,000 (2001). ಅರಬ್ಬರೇ ಅಧಿಕ ಸಂಖ್ಯೆಯಲ್ಲಿ ದ್ದಾರೆ. ಮೆಡಿಟರೇನಿಯನ್ ವಾಯುಗುಣವಿದ್ದು ಮಳೆ ಕಡಿಮೆ. ಬೇಸಗೆಯಲ್ಲಿ ಆಲಿಕಲ್ಲಿನ ಮಳೆಯಾಗುತ್ತದೆ. ಡಿಸೆಂಬರ್‌ನಿಂದ ಮಾರ್ಚ್‌ ತಿಂಗಳವರೆಗೆ ಬಿಸಿಲಿನಿಂದ ಕೂಡಿದ ಹಿತಕರ ಹವೆ ಇರುತ್ತದೆ. ಅಗಲವಾದ ಕಾಲುವೆಗಳಿಂದ ನೀರು ಹಾಯಿಸಿ ಎರಡು ಬಂದರುಗಳನ್ನು ಈ ನಗರದ ಸಮೀಪದಲ್ಲಿ ನಿರ್ಮಿಸಲಾಗಿದೆ. ದೊಡ್ಡ ಕೈಗಾರಿಕೆ ಮತ್ತು ವ್ಯಾಪಾರಕೇಂದ್ರ. ಈಜಿಪ್ಟಿನ ಆಮದು ರಫ್ತುಗಳ ಬಹುಭಾಗ ಈ ರೇವುಪಟ್ಟಣದ ಮುಖಾಂತರವೇ ನಡೆಯುತ್ತಿದೆ. ಅಲೆಕ್ಸಾಂಡ್ರಿಯ ವಿಶ್ವವಿದ್ಯಾನಿಲಯದ ಕೇಂದ್ರ ಇಲ್ಲಿದೆ. (ಇದೇ ಹೆಸರಿನ ಅನೇಕ ಪಟ್ಟಣಗಳು ಯುರೋಪು ಮತ್ತು ಅಮೆರಿಕ ಖಂಡಗಳಲ್ಲಿವೆ).


ಅಲೆಕ್ಸಾಂಡರನ ಮರಣಾನಂತರ ಟಾಲಮಿ ಸಂತತಿಯ ಅರಸರು ಇದನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು. ಈ ಅರಸರ ಆಳ್ವಿಕೆಯ ಕಾಲದಲ್ಲಿ ಈ ನಗರ ಸರ್ವತೋಮುಖವಾದ ಅಭಿವೃದ್ಧಿ ಹೊಂದಿತು. ಕಲೆ, ಮತ, ವಿಜ್ಞಾನ ಹಾಗೂ ವ್ಯಾಪಾರ ಮುಂತಾದುವುಗಳಿಗೆ ಕೇಂದ್ರವಾಯಿತು. ಆ ಕಾಲದಲ್ಲಿ ಅಲೆಕ್ಸಾಂಡ್ರಿಯ ಮತ್ತು ಭಾರತದ ಮೌರ್ಯರ ರಾಜಧಾನಿಯಾದ ಪಾಟಲೀಪುತ್ರದ ಮಧ್ಯೆ ವಾಣಿಜ್ಯ, ರಾಜತಾಂತ್ರಿಕ ಹಾಗೂ ಮತೀಯ ಸಂಪರ್ಕವೇರ್ಪಟ್ಟಿತ್ತು. ವಿಶಾಲವಾದ ಮತ್ತು ಸುಂದರವಾದ ಅರಮನೆಗಳಿಂದಲೂ ಸುಸಜ್ಜಿತವಾದ ರಂಗಮಂಟಪಗಳಿಂದಲೂ ವಾಣಿಜ್ಯೋದ್ಯಮಗಳಿಂದಲೂ ಅಲೆಕ್ಸಾಂಡ್ರಿಯ ಶೋಭಿಸುತ್ತಿತ್ತು. ಜ್ಞಾನಪ್ರಿಯರೂ ಕಲಾಸಂಪನ್ನರೂ ಆದ ಟಾಲಮಿ ಅರಸರು ಸಹಸ್ರಾರು ಗ್ರಂಥಗಳಿಂದ ಕೂಡಿದ್ದ ಭವ್ಯ ಪುಸ್ತಕಭಂಡಾರವನ್ನು ಸ್ಥಾಪಿಸಿದ್ದರು. ಈ ಗ್ರಂಥಭಂಡಾರದಲ್ಲಿ ರೋಂ, ಗ್ರೀಸ್, ಭಾರತ ಮತ್ತು ಈಜಿಪ್ಟಿಗೆ ಸಂಬಂಧಿಸಿದ ಗ್ರಂಥಗಳಿದ್ದವು. ಪ್ರ.ಶ. 1ನೆಯ ಶತಮಾನದಲ್ಲಿ ಕ್ರೈಸ್ತಧರ್ಮ ಅಲ್ಲಿ ಪ್ರಚಾರವಾಯಿತು.


ಈಜಿಪ್ಟ್ ರಾಜ್ಯ ರೊಮನ್‍ಸಾಮ್ರಾಜ್ಯಕ್ಕೆ ಸೇರಿದ ಅನಂತರ ಈ ನಗರದ ಪ್ರಾಮುಖ್ಯತೆ ಇನ್ನೂ ಹೆಚ್ಚಿತು. ಇಡೀ ರೋಮನ್ ಸಾಮ್ರಾಜ್ಯದಲ್ಲಿ ಇದು ಎರಡನೆಯ ದೊಡ್ಡ ಮುಖ್ಯ ಪಟ್ಟಣವಾಗಿದ್ದು ವ್ಯಾಪಾರ ಮತ್ತು ನಾನಾ ಸಂಸ್ಕೃತಿಗಳ ಕೇಂದ್ರವಾಗಿತ್ತು. ಅಲ್ಲದೆ ರೋಮನ್ ಸಾಮ್ರಾಜ್ಯದ ದಾಸ್ತಾನು ಸಂಗ್ರಹನಗರಗಳಲ್ಲೊಂದಾಗಿತ್ತು. ಪ್ರ.ಶ. 641ರಲ್ಲಿ ಬಾಗ್ದಾದ್ ಕಲೀಫನಾದ ಉಮರನ ದಂಡನಾಯಕನೊಬ್ಬ ಅಲೆಕ್ಸಾಂಡ್ರಿಯವನ್ನು ಮುತ್ತಿ ವಶಪಡಿಸಿ ಕೊಂಡ. ತುರುಕರ ಪ್ರಾಬಲ್ಯ ಹೆಚ್ಚಿದಂತೆ ಈ ನಗರ ತನ್ನ ವಾಣಿಜ್ಯ ಮತ್ತು ಇತರ ಪ್ರಾಮುಖ್ಯಗಳನ್ನು ಕಳೆದುಕೊಂಡಿತು. 15ನೆಯ ಶತಮಾನದಲ್ಲಿ ಹೊಸ ಜಲಮಾರ್ಗಗಳನ್ನು ಕಂಡುಹಿಡಿದ ಅನಂತರ ಇತಿಹಾಸದ ಪುಟಗಳಿಂದ ಕಣ್ಮರೆಯಾಯಿತು. 1798ರಲ್ಲಿ ನೆಪೋಲಿಯನ್ ಈಜಿಪ್ಟಿನ ದಂಡಯಾತ್ರೆಯನ್ನು ಕೈಗೊಂಡು ಅಲೆಕ್ಸಾಂಡ್ರಿಯವನ್ನು ಮುತ್ತಿದಮೇಲೆ ಈ ನಗರ ಪುನಶ್ಚೇತನಗೊಳ್ಳತೊಡಗಿತು. 19ನೆಯ ಶತಮಾನದ ಪುವಾರ್ಧದಲ್ಲಿ ಮಹಮದಾಲಿಯ ಆಳ್ವಿಕೆಯಲ್ಲಿ ಅದರ ನವೋದಯ ಪ್ರಾರಂಭವಾಯಿತು. ಸಯ್ಯದ್ ಪಾಷಾನ ಆಳ್ವಿಕೆಯಲ್ಲಿ ಮತ್ತೆ ರಾಜಧಾನಿಯಾಯಿತು.


ಗ್ರೀಕ್ ರೋಮನ್ ಮತ್ತು ಅರಬ್ಬೀ ಲೇಖಕರ ಕೆಲವು ಕೃತಿಗಳಿಂದ ಈ ಊರು ಹಿಂದೆ ಸಾಂಸ್ಕೃತಿಕ ಚಟುವಟಿಕೆಗಳ ನೆಲೆಯೂ ವ್ಯಾಪಾರ ಕೇಂದ್ರವೂ ಆಗಿದ್ದಿತಲ್ಲದೆ, ಇಲ್ಲಿ ಬೇರೆ ಬೇರೆ ಕಾಲಗಳ ಸುಂದರ ಕಟ್ಟಡಗಳೂ ಇದ್ದುವೆಂದು ತಿಳಿದುಬರುತ್ತದೆ. ಪ್ರಪಂಚದ ಏಳು ಅದ್ಭುತಗಳಲ್ಲೊಂದೆಂದು ಪ್ರಸಿದ್ಧವಾಗಿರುವ 122 ಮೀ ಎತ್ತರದ ದೀಪಸ್ತಂಭ ಇಲ್ಲಿಯ ಫ್ಯಾರೋಸ್ ದ್ವೀಪದಲ್ಲಿದೆ. ಹಳೆಯ ವಾಸ್ತುಕೃತಿಗಳಲ್ಲಿ ಈಗ ಉಳಿದಿರುವುದು ಅತ್ಯಲ್ಪ. ಪಾಂಪೆಯ ಕಂಬವೆಂದು ಕರೆಯಲ್ಪಡುವ ಡಯೋಕ್ಲಿಷಿಯನ್ನನ ಸ್ಮಾರಕ ಅವುಗಳಲ್ಲೊಂದು. ಇದರ ಅಡಿಪಾಯದ ಕಟ್ಟೆಯ ಕಲ್ಲುಗಳ ಮೇಲೆ ಫಾರೋಗಳ ಕೆಲವು ಕುರುಹುಗಳು ಮಾತ್ರ ದೊರಕಿವೆ. ರೋಮ್ನ ಆಗಸ್ಟಸ್ನಿಂದ ಇಲ್ಲಿ ಸ್ಥಾಪಿತವಾದ ಎರಡು ದೊಡ್ಡ ಚೂಪು ಕಂಬಗಳಲ್ಲಿ (ಕ್ಲಿಯೋಪಾತ್ರಳ ಸೂಜಿಗಳು) ಈಗ ಒಂದು ನ್ಯೂಯಾರ್ಕ್ನಲ್ಲೂ ಇನ್ನೊಂದು ಲಂಡನ್ನಲ್ಲೂ ಇವೆ. ರೋಮನ್ನರ ಕಾಲದ ಕೆಲವು ಗೋರಿಗಳು ಊರಿನ ಸಮೀಪದಲ್ಲಿಯೇ ಉಳಿದುಬಂದಿವೆ.