ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಲೊ

ವಿಕಿಸೋರ್ಸ್ದಿಂದ

ದಕ್ಷಿಣ ಆಫ್ರಿಕ, ಅರೇಬಿಯ ಮತ್ತು ಮೆಡಿಟರೇನಿಯನ್ ದೇಶದ ಮೂಲವಾಸಿ ಸಸ್ಯಗಳು. ಕೆಲವು ಬಾಹ್ಯಲಕ್ಷಣಗಳಲ್ಲಿ ಅಗೆವೆ ಸಸ್ಯಗಳನ್ನು ಹೋಲುವುದರಿಂದ ಇವನ್ನು ಅಗೆವೆ ಸಸ್ಯಗಳೆಂದು ತಪ್ಪು ತಿಳಿವ ಸಾಧ್ಯತೆ ಇದೆ. ಕಾಂಡವಿಲ್ಲದೆ ಅಥವಾ ಚಿಕ್ಕ ಕಾಂಡವಿರುವ ಅಲೊ ಸಸ್ಯಗಳು ಪೊದೆಯಾಗಿ ಬೆಳೆಯುತ್ತವೆ. ಎಲೆಗಳು ಗುಂಪಾಗಿರುತ್ತವೆ. ಕೆಲವು ಸಸ್ಯಗಳಲ್ಲಿ ಎಲೆಗಳು ಸಾಲುಗಳಾಗಿ ಅಥವಾ ಹರಡಿಕೊಂಡು ಜೋಡಿಸಿ ಕೊಂಡಿರುತ್ತವೆ. ನೀಳವಾದ ಈ ಎಲೆಗಳ ಅಂಚು ನಯವಾಗಿದೆ. ಹಸಿರು ಬೂದು ಅಥವಾ ಹಳದಿ ಬಣ್ಣದ ಒರಟಾದ ಮುಳ್ಳುಗಳಿಂದ ಕೂಡಿವೆ. ಹೂಗೊಂಚಲು ಎಲೆಯ ಗುಂಪಿನ ತುದಿಯಲ್ಲಿ ಹೊರಬಂದು ಉದ್ದವಾದ ಅಕ್ಷದಿಂದ ಚಾಚಿಕೊಂಡಿರುತ್ತದೆ. ಹೂಗೊಂಚಲು ಅಂತ್ಯಾರಂಭಿ ಮಾದರಿಯದು. ಅಗೆವೆ ಸಸ್ಯಗಳು ಹೂಗೊಂಚಲು ಬಿಟ್ಟ ಅನಂತರ ಸಾಯುತ್ತವೆ. ಆದರೆ ಅಲೊ ಜಾತಿಯ ಸಸ್ಯಗಳು ಸಾಯುವುದಿಲ್ಲ. ಹೂಗಳ ಬಣ್ಣ ಕಿತ್ತಳೆ, ಕೆಂಪು ಅಥವಾ ಹಳದಿ; ಗಂಟೆಯಾಕಾರ.


ಅಲೊ ಸೆರ್ರುಲೇಟ ಕುಂಡ ಸಸ್ಯ

ಎಲೆಗಳನ್ನು ಕತ್ತರಿಸಿದಾಗ ಒಂದು ದ್ರಾವಣ ಹೊರಬಂದು, ಅನಂತರ ಅದು ಘನರೂಪವನ್ನು ತಾಳುತ್ತದೆ.ಇದರಲ್ಲಿರುವ ರೆಜಿನಸ್ ವಸ್ತುಗಳನ್ನು ಔಷಧಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಬೀಜ ಮತ್ತು ಕಾಂಡದ ತುಂಡುಗಳಿಂದ ಸಸ್ಯವನ್ನು ವೃದ್ಧಿ ಮಾಡಬಹುದು. ಅನ್ಯ ಪರಾಗ ಸ್ಪರ್ಶವಾದರೆ ತಮ್ಮ ಮೂಲ ಲಕ್ಷಣಗಳನ್ನು ಕಳೆದು ಕೊಳ್ಳಬಹುದಾದ್ದರಿಂದ ಬೀಜಗಳಿಂದ ವೃದ್ಧಿ ಮಾಡುವುದು ಹಿತಕರವಲ್ಲ. ಅಲೊ ಸಸ್ಯ ಅಗೆವೆ ಸಸ್ಯಗಳಿಗಿಂತ ಬೇಗ ಬೆಳೆಯುವ ಗುಣ ಹೊಂದಿದೆ. ಅಲೊ ಅರ್ಬೊರಿಸ್ಕೆನ್ಸ್‌ ಈ ಜಾತಿಯ ಒಂದು ಪ್ರಭೇದ. ಇದು ತನ್ನ ಮೂಲಸ್ಥಾನದಲ್ಲಿ ಸ್ವೇಚ್ಛೆಯಾಗಿ ಬೆಳೆದು ಸುಮಾರು 12' ಎತ್ತರ ಮುಟ್ಟಿದರೂ ಅನ್ಯ ಪ್ರದೇಶಗಳಲ್ಲಿ ಸುಮಾರು 6' ಎತ್ತರ ಬೆಳೆಯುತ್ತದೆ. ಕಾಂಡದ ಕೆಳಭಾಗದಿಂದ ಹೊರಬಂದು ಸರಿಯಾದ ಅವಕಾಶ ಸಿಕ್ಕಿದರೆ ಬೇರು ಬಿಡುತ್ತವೆ. ನೀಳವಾಗಿ 2' ಉದ್ದವಾಗಿ ಹಿಂದಕ್ಕೆ ಬಾಗಿದ್ದು ಅಂಚುಗಳಲ್ಲಿ ಮುಳ್ಳುಗಳು ಇವೆ. ಇದರ ಆಕಾರ ಕತ್ತಿಯಂತೆ, ಬಣ್ಣ ಬೂದುಮಿಶ್ರಿತ ಹಸುರು. ಹೂಗೊಂಚಲು ಉದ್ದವಾದ ಅಕ್ಷದ ಮೇಲೆ ಗೋಪುರದಂತೆ ಇದೆ. ಕೆಂಪುಬಣ್ಣ, ಅಲೊ ಅರಸ್ಟೆಟ ಎಂಬುದು ಇನ್ನೊಂದು ಪ್ರಭೇದ. ಇದು ನೇಟಾಲ್ ಮತ್ತು ಕೇಪ್ ಪ್ರಾವಿನ್ಸ್‌ನ ಮೂಲವಾಸಿ. ಇದರಲ್ಲಿ ನಿರ್ದಿಷ್ಟವಾದ ಕಾಂಡವಿಲ್ಲದುದು ವಿಚಿತ್ರ; ಇದರ ಎಲೆಗಳು 2' ಉದ್ದ 2'’ ಅಗಲವಾಗಿ ತೊಟ್ಟಿನ ಭಾಗದಲ್ಲಿ ಅಗಲವಾಗಿಯೂ ಮಂದವಾಗಿಯೂ ಇದ್ದು, ತುದಿಯ ಕಡೆಗೆ ಕಿರಿದಾಗಿ ತೆಳುವಾಗುತ್ತವೆ. ಎಲೆಗಳ ಆಕಾರ ಚಾಕುವಿನಂತೆ. ಅಂಚುಗಳು ಬಿಳಿಯ ಮುಳ್ಳುಗಳನ್ನು ಹೊಂದಿದ್ದು ಹೊಳೆಯುತ್ತವೆ. ಹೂಗೊಂಚಲಿನ ಬಣ್ಣ ಕೆಂಪು. ಈ ಜಾತಿಯ ಸಸ್ಯಗಳನ್ನು ಎಲೆಯ ತುಂಡುಗಳಿಂದ ವೃದ್ಧಿ ಮಾಡಬ ಹುದು. ಅಲೊ ಬ್ರೆವಿಫೋಲಿಯ ಎಂಬ ಪ್ರಭೇದದಲ್ಲಿ ಕಾಂಡ ಚಿಕ್ಕದು. ಅನೇಕ ಮೋಸುಗಳು ಹೊರಬಂದು ವೃತ್ತಾಕಾರದ ಗುಂಪುಗಳಾಗುತ್ತವೆ. ನೀಲಿಮಿಶ್ರಿತ ಹಸುರುಬಣ್ಣದ ಎಲೆಗಳು ತ್ರಿಕೋಣಾಕಾರವಾಗಿ ಚಿಕ್ಕದಾಗಿಯೂ ಮೆದುವಾ ಗಿಯೂ ಇವೆ. ಅಂಚುಗಳಲ್ಲೂ ಅಪುರ್ವವಾಗಿ ಎಲೆಗಳ ಕೆಳಭಾಗದಲ್ಲೂ ಮುಳ್ಳುಗಳು ಇವೆ. ಸ್ಥಳೀಯವಾಗಿ ಈ ಸಸ್ಯವನ್ನು ಲೋಳೆಸರ, ಹಪ್ಪಳದ ಎಲೆ ಎಂದು ಕರೆಯುವುದಿದೆ.


  • ಅಲೊ ಪೊಲಿಫಿಲಸ್ ಹೆಸರಿನ ಪ್ರಭೇದ ದಕ್ಷಿಣ ಆಫ್ರಿಕದಲ್ಲಿ ಹೆಚ್ಚು ಬೆಳೆಯುತ್ತದೆ. ಇದರ ಕಾಂಡದ ಎತ್ತರ 4'’. ಎಲೆಗಳು ಕಾಂಡದ ಮೇಲೆ ಸುರುಳಿಯ ರೂಪದಲ್ಲಿವೆ. ಇವು ಸುಮಾರು 8'’-12'’ ಉದ್ದ, 3'’-4'’ ಅಗಲವಾಗಿದ್ದು ತೊಟ್ಟಿನ ಕಡೆ ಮಂದವಾಗಿವೆ. ಎಲೆ ಕುಡುಗೋಲು ಆಕಾರದಲ್ಲಿದ್ದು ತುದಿಯಲ್ಲಿ ಕಂದು ಚುಕ್ಕೆಗಳಿಂದಲೂ ಅಂಚುಗಳಲ್ಲಿ ಬೂದುಮಿಶ್ರಿತ ಹಸುರುಬಣ್ಣದಿಂದಲೂ ಕೂಡಿರುತ್ತವೆ. ಅದರ ಅಂಚುಗಳಲ್ಲಿ 2-12 ಬಾಗಿರುವ ಮತ್ತು ಮೂರು ಮೂಲೆಯುಳ್ಳ ಮುಳ್ಳುಗಳಿವೆ. ಹೂಗೊಂಚಲು 20'’-24'’ ಎತ್ತರವಾಗಿದ್ದು ಹೆಚ್ಚು ಕವಲುಭಾಗಗಳಿರುತ್ತವೆ. ಹೂವಿನ ಉದ್ದ ಸುಮಾರು 1'’-y”. ಬಣ್ಣ ಹಸುರಾಗಿ ತುದಿ ಕಡುಗೆಂಪು.
ಅಲೊಮಿಟ್ರಿ ಫಾರ್ಮಿಸ್ ಕುಂಡ ಸಸ್ಯ


  • ಅಲೊ ಕೊನ್ಸಿನ್ನಾ ಪ್ರಭೇದ ಬಹು ಅಂದವಾದ ಸಸ್ಯವೆಂದು ಹೆಸರು ಪಡೆದಿದೆ. ಇದರ ಎಲೆಗಳು ಗುಂಪಿನಲ್ಲಿ ತೆಳುವಾಗಿದ್ದು ತುದಿಗಳು ಹಿಂದಕ್ಕೆ ಬಾಗಿರುತ್ತವೆ; ಕೆಳಭಾಗದಲ್ಲಿ ಬಿಳಿಯ ಮಚ್ಚೆಗಳು ಇವೆ. ಎಲೆಯ ಅಂಚುಗಳಲ್ಲಿ ತ್ರಿಕೋಣಾಕಾರದ ಮುಳ್ಳುಗಳಿವೆ.


  • ಅಲೊ ಹ್ಯೂಮಿಲಿಸ್ ಪ್ರಭೇದವೂ ಅಂದವಾದ ಸಸ್ಯವೆಂದು ಖ್ಯಾತಿ ಗಳಿಸಿದೆ. ಈ ಪ್ರಭೇದದ ಸಸ್ಯಗಳ ಗುಂಪಿನಲ್ಲಿ ಎಲೆಗಳು ಒತ್ತಾಗಿದ್ದು ಮುಳ್ಳುಗಳಿಂದ ಕೂಡಿರುತ್ತವೆ. ಮೇಲು ಮತ್ತು ಕೆಳಭಾಗದ ಸಾಲುಗಳಲ್ಲಿ ಮುಳ್ಳುಗಳಿವೆ. ಸಸ್ಯಗಳ ಪಕ್ಕದಲ್ಲಿ ತನ್ನ ತಾಯಿಸಸ್ಯ ವನ್ನು ಹೋಲುವ ಮೋಸುಗಳು ಕಾಣುತ್ತವೆ.


  • ಅಲೊ ಸಪೊನಾರಿಯ ಒಂದು ಕುಬ್ದ ಪ್ರಭೇದ. ಇದರ ಹಸುರು ಎಲೆಗಳ ಮೇಲೆ ಇರುವ ಬಿಳಿಯ ಮಚ್ಚೆಗಳೂ ಎಲೆಗಳು ಒತ್ತಾಗಿರುವ ಮತ್ತು ಮಧ್ಯೆ ತಗ್ಗಾಗಿರುವ ಗುಣಗಳೂ ಇದರ ವೈಚಿತ್ರ್ಯಕ್ಕೆ ಬಹುಮಟ್ಟಿನ ಕಾರಣವೆನಿಸಿವೆ. ಎಲೆಗಳು ಬುಡದಲ್ಲಿ ಅಗಲವಾಗಿದ್ದು ತುದಿಯ ಕಡೆ ಹೋದಂತೆ ಕಿರಿದಾಗುತ್ತವೆ; ಅಂಚುಗಳಲ್ಲಿ ತ್ರಿಕೋಣಾಕಾರದ ಕಂದುಬಣ್ಣದ ಮುಳ್ಳುಗಳಿವೆ.


  • ಅಲೊ ಸ್ಟ್ರಯೇಟ ಪ್ರಭೇದದಲ್ಲಿ ಕಾಂಡವಿಲ್ಲ. ಎಲೆಗಳು ನಿಬಿಡ. ಎಲೆಯ ಅಂಚುಗಳಲ್ಲಿ ಮುಳ್ಳುಗಳಿಲ್ಲದೆ ಬಿಳುಪಾದ ಎಳೆಗಳಿವೆ. ಲಾಲ್‌ಬಾಗಿನಲ್ಲಿ ಕೆಲವು ಕಲ್ಲೇರಿಗಳಲ್ಲಿ ಇವು ರಮ್ಯನೋಟಕ್ಕೆ ಹೆಸರಾಗಿವೆ. ಈ ಸಸ್ಯಗಳು ನಗರಗಳ ಅನೇಕ ಮನೆಗಳಲ್ಲಿ ಅಲಂಕಾರದ ಸಸ್ಯಗಳಾಗಿ ಶೋಭಿಸುತ್ತವೆ.


  • ಅಲೊವರಿಗೆಟ ಪ್ರಭೇದ ಸಾಮಾನ್ಯವಾಗಿ ಅನೇಕ ಕಡೆಗಳಲ್ಲಿ ಬೆಳೆಯುವುದನ್ನು ಕಾಣಬಹುದು. ಇದಕ್ಕೆ ನಿರ್ದಿಷ್ಟವಾದ ಕಾಂಡವಿಲ್ಲ. ಎಲೆಗಳು ಗುಂಪಾಗಿ ಕಾಣುತ್ತವೆ; ಅವುಗಳ ಅಂಚುಗಳಲ್ಲಿ ಮತ್ತು ಇತರ ಭಾಗಗಳಲ್ಲಿ ಬಿಳಿಯ ಮಚ್ಚೆಗಳು ಇವೆ. ಅತಿ ಹಸಿರು ಬಣ್ಣದ ಮಧ್ಯೆ ಇರುವ ಬಿಳಿಯ ಮಚ್ಚೆಗಳು ಅಂದಕ್ಕೆ ಮೆರುಗು ಕೊಡುತ್ತವೆ. ಈ ಸಸ್ಯಗಳ ಪಕ್ಕದಲ್ಲಿ ಮೋಸುಗಳು ಅಧಿಕವಾಗಿ ಬರುತ್ತವೆ. ಸಾಮಾನ್ಯವಾಗಿ ಮೋಸುಗಳಿಂದ ಈ ಸಸ್ಯವನ್ನು ವೃದ್ಧಿ ಮಾಡುತ್ತಾರೆ.