ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಲ್ಟ್ರಾಮರೀನ್

ವಿಕಿಸೋರ್ಸ್ದಿಂದ

ಹಸುರು ಮತ್ತು ಊದಾಬಣ್ಣದ ಹರಳುಗಳ ರೂಪದಲ್ಲಿ ದೊರೆಯುವ ಖನಿಜ. ಸ್ವಲ್ಪಾಂಶ ಗಂಧಕ ಇರುವ ಅಲ್ಯೂಮಿನಿಯಂ ಸೋಡಿಯಂ ಸಿಲಿಕೇಟ್ ಇದು ಎಂದು ಭಾವಿಸಲಾಗಿದೆ. ಕೃತಕ ಅಲ್ಟ್ರಾಮರೀನ್ ನೀಲಿಬಣ್ಣದ ವರ್ಣದ್ರವ್ಯ (ಪಿಗ್ಮೆಂಟ್). ಬಿಳಿ ಜೇಡಿಮಣ್ಣು, ಸೋಡ, ಇದ್ದಲು ಮತ್ತು ಗಂಧಕಗಳನ್ನು ಗಾಳಿ ಸಂಪರ್ಕವಿಲ್ಲದಂತೆ ಕಾಸಿದಾಗ ಒಂದು ಹಸಿರು ಬಣ್ಣದ ಪದಾರ್ಥ ಉತ್ಪನ್ನವಾಗುತ್ತದೆ. ಇದನ್ನು ನೀರಿನಲ್ಲಿ ತೊಳೆದು ಒಣಗಿಸಿ ಮತ್ತೆ ಗಂಧಕವನ್ನು ಸೇರಿಸಿ ಬೇಕಾದ ಬಣ್ಣದ ಛಾಯೆ ಬರುವವರೆಗೂ ಗಾಳಿಯಲ್ಲಿ ಕಾಸುತ್ತಾರೆ. ಈ ಪದಾರ್ಥವನ್ನು ನೀಲಿ ಎಂಬ ಹೆಸರಿನಲ್ಲಿ ಬಟ್ಟೆ ಒಗೆದು ಅಲುಬುವಾಗ ಬಳಸುತ್ತಾರೆ. ಪೇಂಟ್ ಲಾಕ್ಕರ್, ಕ್ಯಾಲ್ಸಿಮೈನ್, ಲಿನೋಲಿಯಂ, ಕಾಗದ ತಯಾರಿಕೆ ಇಲ್ಲೆಲ್ಲ ಇದರ ಉಪಯೋಗವಿದೆ.


ಯುರೋಪ್ ರಾಷ್ಟ್ರಗಳಿಗೆ ಈ ವಸ್ತುವನ್ನು ಕಡಲಾಚೆಯಿಂದ ಆಮದು ಮಾಡುತ್ತಿದ್ದುದ ರಿಂದ ಅಲ್ಟ್ರಾ (ಆಚೆಯಿಂದ) ಮರೀನ್ (ಕಡಲು) ಎಂಬ ಹೆಸರು ಬಂದಿತು. ಇದರ ಕೃತಕ ತಯಾರಿಕೆ ಯಶಸ್ವಿಯಾದದ್ದು 1820ರಲ್ಲಿ. ಅಲ್ಟ್ರಾಮರೀನಿನ ರಾಸಾಯನಿಕ ರಚನೆ ಸಮಸ್ಯಾತ್ಮಕವಾಗಿತ್ತು. 1929ರಲ್ಲಿ ಎಕ್ಸ್‌-ಕಿರಣಗಳ ಬಳಕೆಯಿಂದ ಇದನ್ನು ನಿರ್ಧರಿಸಿದರು. ಒಂದು ಘನರೂಪದ ಮತ್ತು ವಿಕೃತಶೃಂಗಗಳಿರುವ ಲ್ಯಾಟಿಸ್ ಇದರ ಆಕಾರ. ಅಲ್ಯೂಮಿನಿಯಂ ಮತ್ತು ಸಿಲಿಕಾನ್ ಪರಮಾಣುಗಳು ಇಲ್ಲಿ ಆಕ್ಸಿಜನ್ ಪರಮಾಣುಗಳ ನೆರವಿನಿಂದ ಬಂಧಿತ ವಾಗಿವೆ. ಅಲ್ಯೂಮಿನಿಯಂ ಮತ್ತು ಸಿಲಿಕಾನ್‌ಗಳ ನಿಷ್ಪತ್ತಿ ಮಿತಿಗಳೊಳಗೆ ಬದಲಾಗಬಹುದು; ಆದರೆ ಅವುಗಳ ಒಟ್ಟು ಮೊತ್ತ ಸದಾ 12. ಸಿಲಿಕಾನ್ ಪರಮಾಣುಗಳು ಅಲ್ಯೂಮಿನಿಯಂ ಪರಮಾಣುಗಳ ಸಂಖ್ಯೆಗಿಂತ ಸಾಮಾನ್ಯವಾಗಿ ಅಧಿಕ. ಇವುಗಳನ್ನು ಬಂಧಿಸುವ ಆಕ್ಸಿಜನ್ ಪರಮಾಣು ಸಂಖ್ಯೆ 24. ಲ್ಯಾಟಿಸ್‌ನ ಒಳಗೂ ಒತ್ತೊತ್ತಿಗೆ ಇರುವ ಲ್ಯಾಟ್ಟಿಸ್‌ಗಳ ವಿಕೃತಶೃಂಗ ಗಳು ಒದಗಿಸುವ ಪ್ರದೇಶಗಳಲ್ಲಿಯೂ ಸೋಡಿಯಂ ಮತ್ತು ಗಂಧಕದ ಪರಮಾಣುಗಳಿವೆ. ಇವುಗಳ ಸಂಖ್ಯೆ ಅಥವಾ ಸ್ಥಾನ ನಿರ್ದಿಷ್ಟವಾಗಿಲ್ಲ.


ಈ ಮೂಲವಸ್ತುಗಳ ಪ್ರಮಾಣ ಕೆಳಗೆ ತೋರಿಸಿದೆ.

ಸಿಲಿಕಾನ್ 17.75%-20.0% ಭಾರದಲ್ಲಿ
ಅಲ್ಯೂಮಿನಿಯಂ 12.30%-15.5% ಭಾರದಲ್ಲಿ
ಸೋಡಿಯಂ 12.80%-15.3% ಭಾರದಲ್ಲಿ
ಗಂಧಕ 10.00%-14.0% ಭಾರದಲ್ಲಿ

ಆಕ್ಸಿಜನ್ ಉಳಿದ ಅಂಶ (ಅತ್ಯಲ್ಪಾಂಶ ನೀರು ಮತ್ತು ಕಲ್ಮಷಗಳೂ ಸೇರಿವೆ) ಮೂಲವಸ್ತುಗಳ ಪ್ರಮಾಣದಲ್ಲಿ ವ್ಯತ್ಯಾಸ ಸಾಧ್ಯವಾಗಿರುವುದರಿಂದ ಭಿನ್ನ ಗುಣಗಳ ಅಲ್ಟ್ರಾಮರೀನ್‌ಗಳು ಉಂಟಾಗುತ್ತವೆ.