ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅವತಾರ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಎಂದರೆ ದೇವರು ಭೂಮಿಗೆ ಇಳಿದು ಬರುವುದು. ಹರಿವಂಶದ ಪ್ರಕಾರ ಇದಕ್ಕೆ ಪ್ರಾದುರ್ಭಾವವೆಂದು ಹೆಸರು. ನಿಗೂಢ ಹಾಗೂ ಅವ್ಯಕ್ತವಾದದ್ದು ವ್ಯಕ್ತವಾಗುವುದು ಎಂದು ಇದಕ್ಕೆ ಅರ್ಥ. ಪಕ್ಷಿ, ಮೃಗ, ಮನುಷ್ಯ ರೂಪಗಳಲ್ಲಿ ಹುಟ್ಟಿ ಬಂದು ದೇವರು ಉದ್ಧಾರದ ಕೆಲಸಗಳನ್ನು ಮಾಡುತ್ತಾನೆಂಬುದು ಈ ಕಲ್ಪನೆಯ ಸಾರಾಂಶ. ಹಿಂದೂಧರ್ಮದಲ್ಲಿ ಈ ಕಲ್ಪನೆಗೆ ಪ್ರಾಶಸ್ತ್ಯವಿದೆ. ಇತಿಹಾಸ ಪುರಾಣಗಳಲ್ಲಿ, ರಾಮ ಕೃಷ್ಣಾದಿ ಅವತಾರಗಳಲ್ಲಿ ನಂಬಿಕೆಯುಳ್ಳ ವೈದಿಕ ಪಂಥಗಳಲ್ಲಿ ಈ ಭಾವನೆ ಪ್ರಧಾನಸ್ಥಾನ ಪಡೆದಿದೆ. ಭಗವದ್ಗೀತೆ, ಹರಿವಂಶಗಳಲ್ಲಿ ಉತ್ತಮ ನಿದರ್ಶನಗಳನ್ನೂ ಕಾಣಬಹುದು. ಇದು ಶಿವಾದಿ ಸಕಲ ದೇವತೆಗಳ ವಿಷಯಕ್ಕೂ ಅನ್ವಯಿಸುತ್ತದೆ.


ಅಚಿಂತ್ಯಾತ್ಮಕವಾದ ಭಗವಂತ ವೈಕುಂಠದಲ್ಲಿರುತ್ತಾನಾದರೂ ಭೂಲೋಕಕ್ಕೆ ಭಕ್ತಾದಿಗಳ ಅನುಗ್ರಹಕ್ಕಾಗಿ ಅವತರಿಸಿ ಬರುತ್ತಾನೆ. ಧರ್ಮಕ್ಕೆ ಗ್ಲಾನಿ ಸಂಭವಿಸಿದಾಗ, ಅಧರ್ಮವನ್ನು ಮೂಲೋತ್ಪಾಟನೆ ಮಾಡಲು, ಧರ್ಮವನ್ನು ಪುನರುಜ್ಜೀವನಗೊಳಿಸಲು ಆತ ಅವತರಿಸುತ್ತಾನೆ (ಗೀತೆ). ಸಾಧುಗಳ ಪರಿತ್ರಾಣಕ್ಕಾಗಿ, ದುಷ್ಕರ್ಮಗಳ ವಿನಾಶಕ್ಕಾಗಿ, ಧರ್ಮ ಸಂಸ್ಥಾಪನಾರ್ಥ ವಾಗಿ ಯುಗಯುಗದಲ್ಲೂ ಹುಟ್ಟಿಬರುತ್ತಾನೆ (ಗೀತೆ).


ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ , ಬುದ್ಧ ಮತ್ತು ಕಲ್ಕಿ ಇವು ವಿಷ್ಣುವಿನ ದಶ ಅವತಾರಗಳು. ರಾಮಾವತಾರ, ಕೃಷ್ಣಾವತಾರಗಳು ಹೆಚ್ಚು ಖ್ಯಾತವಾಗಿವೆ. ಈ ಒಂದೊಂದು ಅವತಾರದಲ್ಲೂ ದೇವರು ಹೇಗೆ ಅಧರ್ಮವನ್ನು ತಡೆದು ಧರ್ಮವನ್ನು ಊರ್ಜಿತಗೊಳಿಸಿದನೆಂಬ ವಿಷಯ ಸೊಗಸಾಗಿ ನಿರೂಪಣೆಗೊಂಡಿದೆ.


ಈ ಅವತಾರಗಳು ನೇರವಾಗಿ ದೇವರೇ ತಾಳುವ ರೂಪಗಳು. ಇವಲ್ಲದೆ ಕೆಲವು ಅವತಾರಗಳು ಅಂಶಾವತಾರಗಳೆನಿಸಿಕೊಳ್ಳುತ್ತವೆ. ಕೆಲವು ಅವತಾರಗಳನ್ನು ದೇವಾಂಶಸಂಭೂತ ವೆಂದು ಕರೆಯಲಾಗಿದೆ. ಹನುಮಂತ ವಾಯುದೇವರ ಅಂಶ.


ಅವತಾರದ ಕಲ್ಪನೆ ಭಾರತೀಯರ ಮನಸ್ಸಿನಲ್ಲಿ ಎಷ್ಟರಮಟ್ಟಿಗೆ ರೂಢಿಸಲ್ಪಟ್ಟಿದೆ ಎಂದರೆ ಯಾರಲ್ಲಿ ವಿಶೇಷವಾದ ದೈವೀಗುಣಗಳನ್ನು ಕಾಣುತ್ತಾರೆಯೋ ಅವರನ್ನು ಜನ ಅವತಾರ ಪುರುಷರೆಂದು ನಂಬುತ್ತಾರೆ. ಅನೇಕ ಸಾಧುಸಂತರನ್ನು, ಆಚಾರ್ಯ ಮಹಾನುಭಾವರನ್ನು ದೇವರ ಅವತಾರಗಳೆಂದೂ ಅಂಶಪುರುಷರೆಂದೂ ನಂಬುವುದು ವಾಡಿಕೆಯಾಗಿದೆ.


ವಿಷ್ಣು ತಾನು ಅವತಾರ ಮಾಡುವುದಲ್ಲದೆ ತನ್ನ ಪರಿವಾರದವರನ್ನೂ ತನ್ನೊಡನೆ ಅವತಾರ ಮಾಡಿಸುತ್ತಾನೆ ಎಂಬುದು ಇನ್ನೊಂದು ನಂಬಿಕೆ. ಲಕ್ಷ್ಮಿ ರಾಮಾವತಾರದಲ್ಲಿ ಸೀತೆಯಾಗಿ ಹುಟ್ಟುತ್ತಾಳೆ. ಶ್ರೀಕೃಷ್ಣನಲ್ಲಿ ಅನುರಕ್ತರಾದ ಗೋಪಿಕೆಯರು ರಾಮಾವತಾರದ ಋಷಿಗಳು ಎಂದು ಹೇಳಲ್ಪಟ್ಟಿದೆ.


ಶ್ರೀರಾಮಾನುಜರು ಆದಿಶೇಷನ ಅವತಾರವೆಂದು ಶ್ರೀವೈಷ್ಣವರು ನಂಬುತ್ತಾರೆ.


ವೈಷ್ಣವಧರ್ಮದಲ್ಲಿ ಈ ಅವತಾರಗಳ ವಿಗ್ರಹಗಳನ್ನು ಪುಜಿಸುವ ವಾಡಿಕೆಯಿದೆ. ಈ ವಿಗ್ರಹಗಳನ್ನು ಅರ್ಚಾವತಾರವೆಂದು ಪಾಂಚರಾತ್ರಾಗಮಗಳಲ್ಲಿ ಕರೆದಿದೆ. ಭಗವಂತನ ಅವತಾರಗಳಲ್ಲಿ ಅರ್ಚಾವತಾರ ಅತಿ ಸ್ಥೂಲವಾದದ್ದು. ಇಂದ್ರಿಯಗಳಿಗೆ ಇಷ್ಟಪಟ್ಟಾಗ ಗೋಚರವಾಗಬಲ್ಲ ಅವತಾರ ಇದು. ಭಗವಂತನ ಸೌಲಭ್ಯ ಭಕ್ತ ಪರಾಧೀನತೆಯನ್ನು ಇದು ಸ್ಪಷ್ಟಪಡಿಸುತ್ತದೆಂದು ಇದಕ್ಕೆ ಸಂಬಂಧಪಟ್ಟ ಶಾಸ್ತ್ರಗಳು ವಿವರಿಸುತ್ತವೆ. ಅರ್ಚಾವತಾರದ ಪ್ರಯೋಜನಗಳನ್ನು ಮೂರು ವಿಧವಾಗಿ ವರ್ಣಿಸಿದೆ. ಅವು ರುಚಿಜನಕತ್ವ, ಶುಭಾಶ್ರಯತ್ವ, ಸೌಲಭ್ಯ. ರುಚಿಜನಕತ್ವ ಎಂದರೆ ಭಗವಂತನ ಕಡೆಗೆ ಮನಸ್ಸನ್ನು ಸ್ಥಿರಗೊಳಿಸಲು ಸಹಾಯ ಮಾಡುವ ಬಿಂಬ. ಸೌಲಭ್ಯ ಅಂದರೆ ಅದೃಶ್ಯನೂ ಅತಿಸೂಕ್ಷ್ಮನೂ ಆದ ದೇವರನ್ನು ತಮ್ಮ ಸಮೀಪಕ್ಕೆ ಬರಮಾಡಿಕೊಳ್ಳುವ ಸಾಧನ. ನಾವು ಪುಜಿಸುವ ಈ ಅರ್ಚಾಮೂರ್ತಿಗಳು ಪರಮಾತ್ಮನ ಪ್ರತೀಕಗಳು ಮಾತ್ರ. ಇವುಗಳ ಪುಜೆಯನ್ನು ಪ್ರತೀಕೋಪಾಸನೆ ಎಂದು ಕರೆದಿದೆ. ಪ್ರತಿಮೆಗಳ ಸ್ವರೂಪ, ಪ್ರಮಾಣ, ಲಾಸ್ಯ, ವಿನ್ಯಾಸಗಳು ಆಯಾ ದೇವತೆಗಳಿಗೆ ನಿರ್ದಿಷ್ಟವಾಗಿವೆ.


ಶೈವ, ವೀರಶೈವರಲ್ಲಿ ಕೂಡ ನಂದಿ, ಭೃಂಗಿ, ಸ್ಕಂದ, ವೀರಭದ್ರ, ಪಾರ್ವತಿ ಮೊದಲಾದವರು ಭೂಮಿಯಲ್ಲಿ ಅವತರಿಸಿದಂತೆ ಕಥೆಗಳಿವೆ. ಉದಾಹರಣೆಗೆ, ಬಸವೇಶ್ವರ ನಂದಿಯ, ಸಿದ್ಧರಾಮ ಭೃಂಗಿಯ, ಅಕ್ಕಮಹಾದೇವಿ ಪಾರ್ವತಿಯ, ಮಾಚಿದೇವ ವೀರಭದ್ರನ, ಚೆನ್ನಬಸವ ಷಣ್ಮುಖನ ಅವತಾರವೆಂದು ವೀರಶೈವಪುರಾಣಗಳಲ್ಲಿ ಹೇಳಿದೆ.