ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅವಹಟ್ಠ ಭಾಷೆ

ವಿಕಿಸೋರ್ಸ್ದಿಂದ

ಮಧ್ಯಕಾಲೀನ ಇಂಡೋ-ಆರ್ಯನ್ ಕೊನೆಯ ಹಂತವಾದ ಅಪಭ್ರಂಶಕ್ಕೆ ಪರ್ಯಾಯನಾಮ. ಈ ಭಾಷೆ ಮತ್ತಷ್ಟು ಪ್ರಾಚೀನ ರೂಪವನ್ನು ಪ್ರತಿನಿಧಿಸುವ ಪ್ರಾಕೃತಗಳಂತಲ್ಲದೆ ಅಪಭ್ರಂಶ ಸಾಹಿತ್ಯ ಸ್ವರೂಪವನ್ನು ಪಡೆದಿತ್ತು. ಪುರ್ವದಲ್ಲಿ ಗಡಿಯಂಚಿನ ಕೆಲವು ಭೇದಗಳೊಡನೆ ಬಂಗಾಳದಿಂದ ಹಿಡಿದು ಪಶ್ಚಿಮದಲ್ಲಿ ಗುಜರಾತಿನವರೆಗೆ ಈ ಭಾಷೆಯನ್ನು ಬಳಸಲಾಗುತ್ತಿತ್ತು. ಸಂಸ್ಕೃತ ವಿದ್ಯಾವಂತರ ಸಾಹಿತ್ಯ ಭಾಷೆಯಾಗಿದ್ದರೆ ಅಪಭ್ರಂಶ ಅಕ್ಷರಸ್ಥರ (ಅಂತೆಯೇ ಅನಕ್ಷರಸ್ಥರ) ಸಾಹಿತ್ಯ ಭಾಷೆಯಾಗಿತ್ತು. ಅಪಭ್ರಂಶದಲ್ಲಿ ಈ ಸಾಹಿತ್ಯ ಪರಂಪರೆ ಇದ್ದುದರಿಂದಲೇ ಆಧುನಿಕ ಇಂಡೋ-ಆರ್ಯನ್ ಭಾಷೆಗಳ (ಉತ್ತರ ಭಾರತದ ಆಧುನಿಕ ಭಾಷೆಗಳ) ಉಗಮದ ಅನಂತರವೂ ಅದು ಕೊನೆಯುಸಿರನ್ನೆಳೆಯಲಿಲ್ಲ. ಆದರೆ ಈ ಇಂಡೋ-ಆರ್ಯನ್ ಭಾಷೆಗಳ ಶಬ್ದರೂಪಗಳೂ ನುಡಿಗಟ್ಟುಗಳೂ ಈಚಿನ (1000-1500) ಅಪಭ್ರಂಶ ಕೃತಿಗಳಲ್ಲಿ ತಲೆದೋರಿವೆ: ಈ ಮಿಶ್ರ ಸಾಹಿತ್ಯ ಭಾಷೆಯನ್ನೇ ಅವಹಟ್ಠ ಎಂದು ಕೆಲವು ಲೇಖಕರು ಕರೆದಿದ್ದಾರೆ. ಸಂಸ್ಕೃತದ ಅಪಭ್ರಷ್ಟ (ಬಿದ್ದ ಎಂದು ಅರ್ಥ) ಎಂಬ ಶಬ್ದವೇ ಇದಕ್ಕೆ ಮೂಲ. ಅಪಭ್ರಂಶ ಎಂಬುದಕ್ಕೆ ಇದು ಪರ್ಯಾಯ ಶಬ್ದ.


ರಹಸ್ಯ ಧಾರ್ಮಿಕ ಪಂಥಗಳ (ಗೂಢ ಬೌದ್ಧ ಧರ್ಮ ಮತ್ತು ತಾಂತ್ರಿಕ ಶೈವಧರ್ಮ) ಕೆಲವು ಆಚಾರ್ಯರು ಹಾಡುಗಳನ್ನು, ಉಪದೇಶಾತ್ಮಕ ಪದಗಳನ್ನು ಅವಹಟ್ಠ ಭಾಷೆಯಲ್ಲಿ ರಚಿಸಿದ್ದಾರೆ. ಸರಹನ (1000) ದೋಹಾಕೋಶ ಮತ್ತು ಕಹ್ನ (1200 ಕ್ಕಿಂತಲೂ ಹಿಂದೆ) ಮತ್ತು ಪಹುದ ದೋಹಗಳಲ್ಲಿ (1400) ಇವು ಕಂಡುಬರುತ್ತವೆ. ಪ್ರೇಮಚಂದ್ರನ ಪ್ರಾಕೃತ ವ್ಯಾಕರಣದ ಕೊನೆಯ ಅಧ್ಯಾಯದಲ್ಲಿ ಧಾರ್ಮಿಕ ಆಶಯವನ್ನುಳ್ಳ ಹಲವಾರು ಪದ್ಯಗಳು ಉದಾಹೃತವಾಗಿವೆ. 15ನೆಯ ಶತಮಾನದಲ್ಲಿ ರಚಿತವಾದ ಅವಹಟ್ಠ ಛಂದೋ ರೂಪಗಳ ಸಂಕಲನ ಗ್ರಂಥವಾದ ಪ್ರಾಕೃತ ಪೈಂಗಳದಲ್ಲಿ ನಾನಾ ಪ್ರಕಾರದ ಅವಹಟ್ಠ ಕಾವ್ಯದ ಉತ್ತಮ ಸಂಗ್ರಹ ಕಾಣದೊರೆಯುತ್ತದೆ. ಅವಹಟ್ಠ ಭಾಷೆಯಲ್ಲಿ ರಚಿತವಾದ ಕೊನೆಯ ಪ್ರಮುಖ ಕೃತಿ ವಿದ್ಯಾಪತಿಯ ಕೀರ್ತಿಲತಾ ಚಂಪುರೂಪದಲ್ಲಿ ಬರೆದ ಇತಿಹಾಸ ಕಾವ್ಯ; ಲೇಖಕ ಮಿಥಿಲಾ ಪ್ರಾಂತ್ಯದ ಪ್ರಖ್ಯಾತನಾದೊಬ್ಬ ಕವಿ (15ನೆಯ ಶತಮಾನ). ಆತ ತನ್ನ ಸಂಸ್ಕೃತ ಭಾಷಾಪಾಂಡಿತ್ಯದಿಂದ ಪ್ರಾಂತೀಯ ಭಾಷೆಯಾದ ಮೈಥಿಲಿಯಲ್ಲಿ ರಚಿಸಿದ್ದ ಗೀತೆಗಳಿಂದಾಗಿ ಅತ್ಯಂತ ಪ್ರಖ್ಯಾತನಾಗಿದ್ದ.