ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅವೊಕ್ಯಾಡೊ
ಲಾರೇಸೀ ಕುಟುಂಬಕ್ಕೆ ಸೇರಿದ ಹಣ್ಣಿನಸಸ್ಯ. ಸಾಮಾನ್ಯ ಬಳಕೆಯ ಇಂಗ್ಲಿಷಿನಲ್ಲಿ ಇದಕ್ಕೆ ಅಲಿಗೇಟರ್ ಪೇರ್ ಎಂಬ ಹೆಸರಿದೆ. ಕನ್ನಡದಲ್ಲಿ ಬೆಣ್ಣೆಹಣ್ಣಿನ ಗಿಡ. ಸಸ್ಯವೈಜ್ಞಾನಿಕ ಹೆಸರು ಪರ್ಸಿಯ ಅಮೆರಿಕಾನ.
ಅವೊಕ್ಯಾಡೊ ಸಮಶೀತೋಷ್ಣವಲಯದ ಬೆಳೆ. ಇದರ ಬೇಸಾಯಕ್ಕೆ ಸಮುದ್ರಮಟ್ಟ ದಿಂದ ಹಿಡಿದು 400-1200 ಮೀ ಎತ್ತರದ ಪ್ರದೇಶ ಉತ್ತಮ. ಹೆಚ್ಚು ಉಷ್ಣತೆಯಿರುವ ಪ್ರದೇಶಗಳಲ್ಲಿ ಅವೊಕ್ಯಾಡೊ ಬೇಸಾಯ ಲಾಭದಾಯಕವಲ್ಲ. ವರ್ಷಪುರ್ತಿ 45-70 ಸೆಂ.ಮೀ ಮಳೆ ಬೀಳುವ ಪ್ರದೇಶಗಳಲ್ಲಿ ಇದರ ಬೇಸಾಯ ಯಶಸ್ವಿಯಾಗುತ್ತದೆ. ನೀರಿನ ಪುರೈಕೆ ಧಾರಾಳವಿರಬೇಕು. ಫಲವತ್ತಾದ ಮತ್ತು ಜೌಗಿಲ್ಲದ ಎಲ್ಲ ವಿಧವಾದ ಮಣ್ಣುಗಳಲ್ಲೂ ಬೇಸಾಯ ಮಾಡಬಹುದು. ಮೆಕ್ಕಲು ಮತ್ತು ಮರಳುಮಿಶ್ರಿತವಾದ ಮಣ್ಣು ಇದರ ಬೇಸಾಯಕ್ಕೆ ಅತ್ಯುತ್ತಮ.
ಅವೊಕ್ಯಾಡೊ ಸಸ್ಯಗಳನ್ನು ಲಿಂಗ(ಬೀಜ) ಮತ್ತು ನಿರ್ಲಿಂಗ ರೀತಿಗಳಿಂದ ಬೆಳೆಸಬಹುದು. ಕಣ್ಣುಹಾಕುವುದು, ಕಸಿಮಾಡುವುದು, ಲೇಯರ್ ಮಾಡುವುದು ಮುಂತಾದುವು ನಿರ್ಲಿಂಗ ರೀತಿಯ ವಿಧಾನಗಳು.
ಮುಖ್ಯ ಪ್ರಭೇದವಾದ ಪರ್ಸಿಯ ಅಮೆರಿಕಾನ, ಅಲ್ಲದೆ ಪರ್ಸಿಯ ಲಿಯೊಗೈನ ಮತ್ತು ಪರ್ಸಿಯ ಇಂಡಿಕ ಎಂಬವೂ ಈ ಬೇಸಾಯದಲ್ಲಿವೆ. ಕೆಲವು ತಳಿಗಳನ್ನು ಸ್ಥಳೀಯ ಹೆಸರುಗಳಿಂದ ಬೆಳೆಯಲಾಗುತ್ತಿದೆ. ಸಸಿ ನೆಟ್ಟ 6-7 ವರ್ಷಗಳ ಅನಂತರ ಫಲ ಬಿಡಲು ಪ್ರಾರಂಭಿಸುತ್ತದೆ. ಜನವರಿ ತಿಂಗಳಲ್ಲಿ ಹೂವು ಬಿಟ್ಟು ಅನ್ಯಪರಾಗದಿಂದ ಗರ್ಭಧಾರಣೆಗೊಂಡು ಫಲವನ್ನು ಕೊಡುತ್ತದೆ. ಸಾಮಾನ್ಯವಾಗಿ ಜೂನ್ ಜುಲೈ ತಿಂಗಳಲ್ಲಿ ಹಣ್ಣುಗಳು ಸಿಕ್ಕುತ್ತವೆ. ಹಸಿರು ತಳಿಗಳು ಆಗಸ್ಟ್ ಸೆಪ್ಟೆಂಬರ್ ತಿಂಗಳಲ್ಲಿ ಫಲವನ್ನು ಕೊಡುತ್ತವೆ.
ಅವೊಕ್ಯಾಡೊ ಇಳುವರಿ ಆಯಾ ಪ್ರಭೇದಗಳನ್ನು ಅನುಸರಿಸಿ ವ್ಯತ್ಯಾಸವಾಗುತ್ತದೆ. ಸಣ್ಣ ಗಾತ್ರದ ಫಲದ ಮರಗಳಲ್ಲಿ ಹಣ್ಣುಗಳ ಸಂಖ್ಯೆ ಹೆಚ್ಚು. ಗುಂಡಾಗಿ ಹಣ್ಣು ಬಿಡುವ ತಳಿಗಳು ಶೀಘ್ರವಾಗಿ ಫಲ ಕೊಡುತ್ತವೆ. ಚೆನ್ನಾಗಿ ಬೇಸಾಯ ಮಾಡಿದ ತೋಟಗಳಲ್ಲಿನ ಮರ 50ರಿಂದ 60 ಹಣ್ಣುಗಳನ್ನು ಕೊಡುತ್ತದೆ. ಇಳುವರಿ ಪ್ರತಿವರ್ಷ ವ್ಯತ್ಯಾಸವಾಗುವುದುಂಟು.
ಅವೊಕ್ಯಾಡೊ ಕೊಲಂಬಸನ ಕಾಲಕ್ಕೆ ಪುರ್ವದಲ್ಲಿಯೇ ಬೇಸಾಯದಲ್ಲಿತ್ತೆಂದು ಹೇಳಲಾಗಿದೆ. ಮೆಕ್ಸಿಕೊ ಅಥವಾ ದಕ್ಷಿಣ ಅಮೆರಿಕ ಇದರ ತೌರುಭೂಮಿ. 1819ರಲ್ಲಿ ಇದನ್ನು ಬೆಂಗಳೂರಿಗೆ ತಂದರೆನ್ನಲಾಗಿದೆ. ಈಗ ಎಲ್ಲೆಡೆಯಲ್ಲೂ ಅವೊಕ್ಯಾಡೊ ವಾಣಿಜ್ಯದೃಷ್ಟಿ ಯಿಂದ ಹೆಚ್ಚಿನ ಮಹತ್ವವನ್ನು ಪಡೆದಿದೆ. ಸೀಬೆಯ ಆಕಾರವುಳ್ಳ ಈ ಹಣ್ಣು ತಿರುಳಿನಿಂದ ತುಂಬಿ ಗಾತ್ರದಲ್ಲಿ ದೊಡ್ಡದಾಗಿ ಇರುತ್ತದೆ. ಹಣ್ಣುಗಳ ಉದ್ದಳತೆ 5-12 ಸೆಂಮೀ ವರೆಗೆ ಇದೆ. ಹಣ್ಣಿನಲ್ಲಿ ಒಂದೇ ಬೀಜವಿರುತ್ತದೆ. ಹಣ್ಣಿನ ಓಟೆಯ ಸುತ್ತಲೂ ಇರುವ ತಿರುಳು ಬೆಣ್ಣೆಯಂತೆ ಸ್ನಿಗ್ಧವಾಗಿದ್ದು ಇದರಲ್ಲಿ ಶೇ.30 ಕೊಬ್ಬಿನಂಶ ಇದೆ. ಪಿಷ್ಟದ ಪ್ರಮಾಣವೂ ಹೆಚ್ಚಾಗಿದೆ. ಅವೊಕ್ಯಾಡೊ ಹಣ್ಣಿನಲ್ಲಿರುವಷ್ಟು ಪ್ರೋಟೀನು ಬೇರಾವ ಹಣ್ಣಿನಲ್ಲಿಯೂ ಇರುವುದಿಲ್ಲ. ಅಲ್ಲದೆ, ಅದರಲ್ಲಿ ಜೀವಸತ್ವಗಳ ಪ್ರಮಾಣವೂ ಗಣನೀಯವಾಗಿದೆ. ಆದ್ದರಿಂದ ಇದು ಮಾನವನಿಗೆ ಬೇಕಾಗುವ ಬಹು ಅಮೂಲ್ಯ ಆಹಾರವಸ್ತು. ಅವೊಕ್ಯಾಡೊ ಹಣ್ಣಿನ ತೊಗಟೆಯೂ ಉಪಯುಕ್ತವೆನಿಸಿದೆ. ಅದರಿಂದ ಸುವಾಸನೆಯ ಎಣ್ಣೆಯನ್ನು ಉತ್ಪಾದಿಸುವರು.
ಪರ್ಸಿಯ ಗ್ರಾಟಿಸಿಮ ಎಂಬುದು ಅಮೆರಿಕದ ಉಷ್ಣವಲಯದ ಪ್ರದೇಶದಲ್ಲೂ, ಭಾರತದಲ್ಲೂ ಹೆಚ್ಚಾಗಿ ಬೆಳೆಯುತ್ತದೆ. ಭಾರತಕ್ಕೆ ಇದನ್ನು ಪೋರ್ಚುಗೀಸರು ಮೊದಲು ತಂದರು. ಹಣ್ಣಿನಲ್ಲಿ ಒಂದೇ ಬೀಜವಿದ್ದು ಹಣ್ಣು ತಿರುಳಿನಿಂದ ತುಂಬಿಕೊಂಡಿರುತ್ತದೆ, ಇದನ್ನು ಕೂಡ ಅಲಿಗೇಟರ್ಪೇರ್ ಎಂದೇ ಕರೆಯುವರು. ಪರ್ಸಿಯ ಇಂಡಿಕ ಎಂಬ ಪ್ರಭೇದ ಚಿಕ್ಕದೂ ಬಿರುಸಾದುದೂ ಆಗಿದೆ. ಇದನ್ನು ತೋಟಗಳಲ್ಲಿ ಸೌಂದರ್ಯಕ್ಕಾಗಿ ಬೆಳೆಸುತ್ತಾರೆ.