ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಶೋಕ
(ಪ್ರ.ಶ.ಪೂ. 273-232). ಭಾರತದ ಇತಿಹಾಸದಲ್ಲಿ ಅಮರನಾಗಿರುವ ಈತ ಬಿಂದುಸಾರನ ಮಗ. ಚಂದ್ರಗುಪ್ತ ಮೌರ್ಯನ ಮೊಮ್ಮಗ. ಬಿಂದುಸಾರನ ಆಳ್ವಿಕೆ ಕೊನೆಗೊಂಡ (ಪ್ರ.ಶ.ಪೂ. 273) ಕೆಲವು ವರ್ಷಗಳ ಅನಂತರ ಪಟ್ಟಕ್ಕೆ ಬಂದ. ಚಕ್ರಾಧಿಪತಿಯಾಗುವ ಮೊದಲು ತಕ್ಷಶಿಲ ಮತ್ತು ಉಜ್ಜಯಿನಿಗಳಲ್ಲಿ ರಾಜ್ಯಪಾಲನಾಗಿದ್ದ. ಪಟ್ಟಕ್ಕೆ ಬರಲು ಬಹಳ ಹೋರಾಡಬೇಕಾಯಿತು. ಬಿಂದುಸಾರ ತೀರಿಕೊಂಡ ಮೇಲೆ, ರಾಜ್ಯಕ್ಕಾಗಿ ಮಕ್ಕಳಲ್ಲಿ ಸತತ ಹೋರಾಟ ನಡೆಯಿತು. ಹೋರಾಟದಲ್ಲಿ ಅಶೋಕನಿಗೆ ವಿಜಯ ಲಭಿಸಿತು.
ಶಾಸನಗಳಲ್ಲಿ ಅಶೋಕನನ್ನು ದೇವಾನಾಂಪ್ರಿಯ ಅಂದರೆ ದೇವತೆಗಳಿಗೆ ಪ್ರಿಯನಾದವ ಎಂದು ಸಂಬೋಧಿಸಲಾಗಿದೆ. ಆಶೋಕ ಎಂಬ ಹೆಸರು ಮಸ್ಕಿ ಶಾಸನದಲ್ಲಿ ಕಂಡುಬರುತ್ತದೆ. ಪಿಯದಶಿ ಅಥವಾ ಪ್ರಿಯದರ್ಶಿ ಎಂಬುದು ಅಶೋಕನ ತಂದೆ ಮತ್ತು ತಾತಂದಿರ ಬಿರುದು. ಅಶೋಕನ ಬಗ್ಗೆ ಈ ಸಂಬೋಧನೆಯೂ ಉಂಟು. ಅಶೋಕ ಪಟ್ಟಕ್ಕೆ ಬಂದ ಮೊದಲ ವರ್ಷಗಳ ಬಗ್ಗೆ ಖಚಿತವಾಗಿ ಏನನ್ನೂ ಹೇಳಲಾಗುವುದಿಲ್ಲ. ಇತರ ಪ್ರಭುಗಳಂತೆ ಆತನೂ ರಾಜ್ಯವಿಸ್ತರಣೆಯಲ್ಲಿ ತೊಡಗಿದ್ದನೆಂದು ಹೇಳಲಾಗಿದೆ. ಅನಂತರ ಕೈಗೊಂಡ ಕಳಿಂಗಯುದ್ಧ ಅವನ ಜೀವನದಲ್ಲಿ ಒಂದು ಮಹತ್ತರ ಘಟನೆಯಾಗಿದೆ. ಅಲ್ಲಿ ಕಂಡ ರಕ್ತದ ಕೋಡಿ, ಕೊಲೆ, ಹಿಂಸೆ ಮುಂತಾದ ಘೋರ ಘಟನೆಗಳು ಅಶೋಕನ ಮನಸ್ಸನ್ನು ಬದಲಾಯಿಸಿದ. ದಿಗ್ವಿಜಯಕ್ಕೆ ಬಂದ ದೊರೆ ಧರ್ಮವಿಜಯಿಯಾಗಿ ಹಿಂತಿರುಗಿದ. ಅಂದಿನಿಂದ ಅಶೋಕನ ರಾಜನೀತಿಯಲ್ಲಿ ಅನೇಕ ಬದಲಾವಣೆಗಳಾದವು.
ಕಾಶ್ಮೀರದ ಚರಿತ್ರಕಾರ ಕಲ್ಹಣನ ಪ್ರಕಾರ ಅಶೋಕ ಮೊದಲಿಗೆ ಶಿವಭಕ್ತನಾಗಿದ್ದ. ಕಳಿಂಗ ಯುದ್ಧಾನಂತರ ಆತನ ಮನಸ್ಸು ಬೌದ್ಧ ಮತದತ್ತ ಹರಿಯಿತು. ಅಂದಿನಿಂದ ಆತ ಬುದ್ಧನ ಉಪಾಸಕನಾದ. ಬುದ್ಧಗಯೆಗೆ ತೆರಳಿ ಅಲ್ಲಿನ ಬೌದ್ಧಭಿಕ್ಷುಗಳೊಡನೆ ಸಂಬಂಧ ಬೆಳೆಸಿದ. ಬೌದ್ಧಧರ್ಮದ ಪ್ರಚಾರಕ್ಕಾಗಿ ಬಹಳ ಶ್ರಮಿಸಿದ. ಧಾರ್ಮಿಕ ಪ್ರವಾಸಗಳನ್ನು ಕೈಗೊಂಡು ಧರ್ಮಪ್ರಚಾರ ಮಾಡಿದ. ಬೌದ್ಧ ಸಾಹಿತ್ಯವನ್ನು ಆಳವಾಗಿ ಅಭ್ಯಾಸ ಮಾಡಿದ. ಬುದ್ಧನ ಜನ್ಮಸ್ಥಳವನ್ನು ಸಂದರ್ಶಿಸಿದ.
ಬೌದ್ಧಧರ್ಮ ಪ್ರಚಾರಕ್ಕಾಗಿ ಅಶೋಕ ಬಹಳ ಶ್ರಮಿಸಿದ. ರಾಜ್ಯದಲ್ಲೆಲ್ಲ ಧರ್ಮಸ್ತಂಭಗ ಳನ್ನು ನೆಡಿಸಿದ. ಧರ್ಮಮಹಾಮಾತ್ರರೆಂಬ ಅಧಿಕಾರಿಗಳನ್ನು ನೇಮಿಸಿದ. ಜೊತೆಗೆ ರಾಜುಕರು ಮತ್ತು ಪ್ರಾದೇಶಿಕರು ಎಂಬ ಎರಡು ಬಗೆಯ ಅಧಿಕಾರಿಗಳನ್ನು ನೇಮಿಸಿದ. ಭಾರತ ಶಾಸನಗಳ ಪಿತಾಮಹನೆಂದು ಗೌರವಿಸಲ್ಪಟ್ಟಿರುವ ಈತ ದೇಶದ ಎಲ್ಲ ಕಡೆಗಳಲ್ಲಿ ಶಿಲಾಶಾಸನಗಳನ್ನು ನೆಡಿಸಿದ. ಪ್ರಪಂಚದ ಅನೇಕ ಭಾಗಗಳಿಗೆ ಧರ್ಮ ನಿಯೋಗಗಳನ್ನು ಕಳುಹಿಸಿದ. ಅಶೋಕನ ಮಗ ಅಥವಾ ತಮ್ಮನಾದ ಮಹೇಂದ್ರನೇ ಸಿಂಹಳಕ್ಕೆ ಹೋದ ನಿಯೋಗದ ನಾಯಕನಾಗಿದ್ದ. ತಾನು ಬೌದ್ಧಧರ್ಮಾವಲಂಬಿಯಾಗಿದ್ದರೂ ಅಶೋಕ ಪರಧರ್ಮ ಸಹಿಷ್ಣುವಾಗಿದ್ದ. ಯಾವ ಧರ್ಮವನ್ನೂ ಆತ ನಿಂದಿಸಲಿಲ್ಲ. ಹಿಂದೂ ಧರ್ಮ ಮತ್ತು ಜೈನಧರ್ಮಗಳಿಗೂ ಉತ್ತೇಜನ ನೀಡಿದ. ತಾನು ಮೆಚ್ಚಿ ಅನುಸರಿಸಿದ ಬೌದ್ಧಧರ್ಮವನ್ನು ಎಂದೂ ಇಷ್ಟಕ್ಕೆ ವಿರೋಧವಾಗಿ ಯಾರ ಮೇಲೂ ಹೇರಲಿಲ್ಲ. ನೈತಿಕ ಮಾರ್ಗಗಳನ್ನು ಬಹಳವಾಗಿ ಅನುಮೋದಿಸಿದ. ನೀತಿಯಿಲ್ಲದೆ ಸುಖವನ್ನು ಪಡೆಯುವುದು ಬಹಳ ಕಷ್ಟ ಎಂದು ಶಾಸನಗಳ ಮೂಲಕ ಸಾರಿದ. ಆಧ್ಯಾತ್ಮಿಕ ಅಂತರಾಳ ಜೀವನದ ಉದ್ದೇಶಗಳಲ್ಲಿ ಒಂದಾಗಿರಬೇಕೆಂದು ಹೇಳಿದ ಕೀರ್ತಿ ಅವನದು. ತಾನು ಹೇಳಿದ್ದನ್ನು ನಿತ್ಯ ಜೀವನದಲ್ಲಿ ಮಾಡಿ ತೋರಿಸಿದ ಉದಾತ್ತ ವ್ಯಕ್ತಿ ಆತ. ಅಹಿಂಸೆಯನ್ನು ಬೋಧಿಸಿ ಅದುವೇ ಹಿರಿಯ ಧರ್ಮವೆಂದು ಒತ್ತಿ ಹೇಳಿದ.
ಅಶೋಕ ಮಾಡಿದಷ್ಟು ಜನೋಪಕಾರಿ ಕೆಲಸಗಳನ್ನು ಮಾಡಿದವರು ಚರಿತ್ರೆಯಲ್ಲಿ ಅತಿವಿರಳ. ಅವನ ಪ್ರಾಣಿದಯೆಯಂತೂ ವಿಶ್ವವಿಖ್ಯಾತವಾಗಿದೆ. ರಾಜ್ಯದಲ್ಲೆಲ್ಲ ಸಾಲು ಮರಗಳನ್ನು ನೆಡಿಸಿದ; ವಿಶ್ರಾಂತಿ ಗೃಹಗಳನ್ನು ತೆರೆದ; ಔಷಧಾಲಯಗಳನ್ನು ಕಟ್ಟಿಸಿದ. ದಾನಧರ್ಮಗಳಲ್ಲಂತೂ ಅವನದು ಎತ್ತಿದ ಕೈ. ಬಡವರು, ನಿರ್ಗತಿಕರು, ಅನಾಥರು, ಅಂಗವಿಕಲರು ಮೊದಲಾದವರಿಗೆ ಉದಾರವಾಗಿ ಸಹಾಯ ಮಾಡುತ್ತಿದ್ದ. ಬೇಡಿ ಬಂದ ಜನರಿಗೆ ಕೈತುಂಬ ನೀಡುತ್ತಿದ್ದ. ಅಶೋಕನಷ್ಟು ಜನಾನುರಾಗಿಗಳಾದ ದೊರೆಗಳು ಬಹಳ ಅಪರೂಪ.
ಅಶೋಕ ಚಕ್ರಾಧಿಪತ್ಯ ಯೋನ, ಕಾಂಭೋಜ, ಗಾಂಧಾರದಿಂದ ಹಿಡಿದು ಆಂಧ್ರ ದೇಶದವರೆಗೂ ಬಹು ವಿಸ್ತಾರವಾಗಿ ಹಬ್ಬಿತ್ತು. ಕಾಶ್ಮೀರ ಮತ್ತು ನೇಪಾಲಗಳೂ ಅಶೋಕನ ಅಧೀನದಲ್ಲಿದ್ದುವೆಂದು ಹೇಳಲಾಗಿದೆ. ಉತ್ತರ ಬಂಗಾಲ ಅವನ ರಾಜ್ಯದಲ್ಲಿ ಸೇರಿತ್ತು. ಅವನ ರಾಜ್ಯ ತಮಿಳು ದೇಶದವರೆಗೂ ಹಬ್ಬಿತ್ತು. ಈಚೆಗೆ ಬೆಳಕಿಗೆ ಬಂದಿರುವ ಕೆಲವು ಶಾಸನಗಳ ಪ್ರಕಾರ ಹಿಮಾಲಯದ ಅನೇಕ ಕಣಿವೆ ಪ್ರದೇಶಗಳು ಅಶೋಕನ ಆಳ್ವಿಕೆಗೊಳಪಟ್ಟಿದ್ದುವು.
ಭಾರತದ ಇತಿಹಾಸದಲ್ಲೇ ಏಕೆ, ಇಡೀ ಪ್ರಪಂಚದ ಇತಿಹಾಸದಲ್ಲಿ ಅಶೋಕನಿಗೆ ವಿಶಿಷ್ಟ ಸ್ಥಾನವಿದೆ. ಸಾವಿರಾರು ರಾಜಮಹಾರಾಜರುಗಳ ನಡುವೆ ಅವನು ಅತ್ಯಂತ ಪ್ರಕಾಶಮಾನವಾಗಿ ಶೋಭಿಸುತ್ತಿದ್ದಾನೆ. ಅವನ ಧರ್ಮಸಹಿಷ್ಣುತೆ, ಕಾರ್ಯತತ್ಪರತೆ, ಸೇವೆಯ ಮನೋಭಾವ, ಶಾಂತಿಪ್ರೇಮ-ಇವು ಸದಾಕಾಲವು ಅಚ್ಚಳಿಯದೆ ನಿಂತಿವೆ. ಅಷ್ಟು ದೊಡ್ಡ ಸಾಮ್ರಾಜ್ಯದ ಒಡೆಯನಾಗಿ, ಅದರ ಸೂತ್ರಧಾರಿಯಾಗಿ ಪ್ರಜೆಗಳ ಅಭ್ಯುದಯವನ್ನು ಪಾಲಿಸಿದ ಕೀರ್ತಿ ಅವನದು. ಅಶೋಕ ಚಾಣಾಕ್ಷ ರಾಜಕಾರಣಿಯೂ ಆಗಿದ್ದ. ಅತ್ಯುನ್ನತ ಯೋಧನೂ ಆಗಿದ್ದ. ಹಾಗಿಲ್ಲದಿದ್ದರೆ ಅಷ್ಟು ದೊಡ್ಡ ಸಾಮ್ರಾಜ್ಯವನ್ನು ನಡೆಸಿಕೊಂಡು ಹೋಗುವುದು ಕಷ್ಟವಾಗುತ್ತಿತ್ತು.