ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಸರ್‌ಬೈಜಾನ್

ವಿಕಿಸೋರ್ಸ್ದಿಂದ

ನೈಋತ್ಯ ಏಷ್ಯ ಮತ್ತು ಯುರೋಪ್ನಲ್ಲಿರುವ ಒಂದು ಸ್ವತಂತ್ರ ಗಣರಾಜ್ಯ. ರಷ್ಯಕ್ಕೆ ಸೇರಿದ್ದ ಇದು 1991ರಲ್ಲಿ ಸ್ವತಂತ್ರವಾಯಿತು. ಯುರೋಪಿಯನ್ ರಷ್ಯದ ಅತ್ಯಂತ ದಕ್ಷಿಣಭಾಗದಲ್ಲಿದೆ. (ಉತ್ತರ ಅಕ್ಷಾಂಶ 39° ಮತ್ತು 42°). ಪೂರ್ವದಲ್ಲಿ ಕ್ಯಾಸ್ಪಿಯನ್ ಸಮುದ್ರ, ದಕ್ಷಿಣದಲ್ಲಿ ಇರಾನ್, ಮತ್ತು ಟರ್ಕಿ,ಪಶ್ಚಿಮದಲ್ಲಿ ಆರ್ಮೀನಿಯನ್ ಗಣರಾಜ್ಯ, ಉತ್ತರದಲ್ಲಿ ಜಾರ್ಜಿಯ ಮತ್ತು ರಷ್ಯ ಗಣರಾಜ್ಯಗಳಿವೆ. ಉತ್ತರ ದಕ್ಷಿಣವಾಗಿ 385 ಕಿಮೀ ಪೂರ್ವ ಪಶ್ಚಿಮವಾಗಿ 475 ಕಿಮೀ ಇರುವ ಇದರ ಒಟ್ಟು ವಿಸ್ತೀರ್ಣ 86,600 ಚ.ಕಿಮೀ.


ಅಸರ್‌ಬೈಜಾನಿನ ಮೇಲ್ಮೈ ಲಕ್ಷಣ ಮೂರು ಮುಖ್ಯ ಸ್ವಾಭಾವಿಕ ವಿಭಾಗಗಳಿಂದ ಕೂಡಿದೆ- ಉತ್ತರದ ಕಕಾಸಸ್, ಕೇಂದ್ರದ ಶುಷ್ಕ ಸ್ಟೆಪ್ಪಿ ಮೈದಾನ ಮತ್ತು ನೈಋತ್ಯದ ಉಪ ಕಕಾಸಸ್ನ ಉನ್ನತ ಭಾಗ. ದೇಶದ ಶೇ.20 ಭಾಗ ತಗ್ಗು ಪ್ರದೇಶವಾಗಿದೆ. ಕೇಂದ್ರದ ಮೈದಾನದಲ್ಲಿ ಕುರಾ ನದಿಹರಿಯುತ್ತದೆ. ಅರಾಸ್ ಎಂಬುದು ಅದರ ಪ್ರಮುಖ ನದಿ. ಅರೆ ಮರುಭೂಮಿಯ ವಾಯುಗುಣ. ಬೇಸಗೆ ಅತಿ ಶಾಖವಾಗಿದ್ದು ಚಳಿಗಾಲವು ತಂಪಾಗಿರುತ್ತದೆ. ಗೋದಿ, ಹತ್ತಿ, ಬಾರ್ಲಿ, ಓಟ್ಸ್‌, ಸಕ್ಕರೆಗಡ್ಡೆ, ಆಲೂಗೆಡ್ಡೆ, ಬಾದಾಮಿ, ಹುಳಿಹುಣ್ಣು ಮತ್ತು ದ್ರಾಕ್ಷಿಗಳು ಪ್ರಮುಖ ಕೃಷಿ ಉತ್ಪನ್ನಗಳು. ಪೆಟ್ರೋಲಿಯಂ ಮತ್ತು ಸ್ವಾಭಾವಿಕ ಅನಿಲಗಳು ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಪ್ರಮುಖ ಸ್ಥಾನ ಹೊಂದಿವೆ. ಬಾಕು ಪ್ರಸಿದ್ಧ ತೈಲ ಶುದ್ಧೀಕರಣ ಕೇಂದ್ರ. ಸಮೀಪದಲ್ಲಿ ರಾಸಾಯನಿಕ ಕೈಗಾರಿಕೆಗಳಿವೆ. ಅಲ್ಯೂಮಿನಿಯಮ್ ಉತ್ಪಾದನೆಯಾಗುತ್ತದೆ. ಆಹಾರ ಪದಾರ್ಥಗಳ ಸಂಸ್ಕರಣೆ, ಜವಳಿ ಮತ್ತು ಜಮಖಾನಗಳ ತಯಾರಿಕಾ ಉದ್ಯಮಗಳು ಮುಖ್ಯವಾದವು.


ಇಲ್ಲಿನ ಜನಸಂಖ್ಯೆ 8,176,000 (2002). ಇವರಲ್ಲಿ ಬಹಳಷ್ಟು ಟರ್ಕಿ ಮೂಲದವರು, ಶೇ.80 ಮುಸಲ್ಮಾನ, ತಲಾ ಶೇ.8ರಷ್ಟು ರಷ್ಯನ್ನರು ಮತ್ತು ಅರ್ಮೀನರು. ಜನಸಂಖ್ಯೆಯಲ್ಲಿ ಶೇ.52 ಭಾಗ ಗ್ರಾಮೀಣರು. ಜನಸಾಂದ್ರತೆ ಪ್ರತಿ ಚ.ಕಿಮೀಗೆ 94.4 ಜನರು. ಬಾಕು ರಾಜಧಾನಿ, ಮುಖ್ಯನಗರ, ವಾಣಿಜ್ಯ ಮತ್ತು ವಿದ್ಯಾಕೇಂದ್ರ. ಇದರ ಜನಸಂಖ್ಯೆ 1,713,300 (2002) ಇಲ್ಲೊಂದು ವಿಶ್ವವಿದ್ಯಾನಿಲಯವಿದೆ. ಕಚ್ಚಾತೈಲ, ಸ್ವಾಭಾವಿಕ ಅನಿಲ, ರಾಸಾಯನಿಕ ವಸ್ತುಗಳು, ಮತ್ತು ರಫ್ತಾಗುತ್ತವೆ. ರಾಷ್ಟ್ರೀಯ ಆದಾಯದಲ್ಲಿ ಶೇ.80 ಭಾಗ ಹತ್ತಿ ತೈಲ ಉತ್ಪನ್ನಗಳಿಂದ ದೊರೆಯುತ್ತದೆ. ಆಹಾರ ಪದಾರ್ಥ ಮತ್ತು ಯಂತ್ರೋಪಕರಣಗಳು ಆಮದಾಗುತ್ತವೆ.