ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಸಲುಕಂತು
ಸಾಲ ಬೇಗ ತೀರುವ ವಿಧಗಳಲ್ಲಿ ಒಂದು (ಅಮಾರ್ಟೈಸೇಷನ್). ಇದರ ಪ್ರಕಾರ ಸಾಲಗಾರ ಮರುಪಾವತಿ ಮಾಡುವ ಪ್ರತಿ ಕಂತಿನಲ್ಲೂ ಆ ತಿಂಗಳಿನ ಬಡ್ಡಿಯ ಜೊತೆ ಅಸಲಿನ ಸ್ವಲ್ಪ ಭಾಗವೂ ಸೇರಿರುತ್ತದೆ. ಸಾಲದ ಕಾಲಾವಧಿ, ಬಡ್ಡಿ ದರ ಇವುಗಳನ್ನು ಲೆಕ್ಕಕ್ಕೆ ತೆಗೆದುಕೊಂಡು ಪ್ರತಿ ವರ್ಷಕ್ಕೂ ಎಷ್ಟು ಕಂತುಗಳನ್ನು ಸಾಲಗಾರ ಕಟ್ಟಬೇಕೆಂಬುದು ಮೊದಲೇ ನಿರ್ಧಾರವಾಗುತ್ತದೆ. ಸಾಮಾನ್ಯವಾಗಿ ಕಂತುಗಳು ಒಂದೇ ಮೊತ್ತದವು. ಸಾಲಗಾರನ ಅನುಕೂಲಕ್ಕೆಂದು ವರ್ಷದ ಕಂತನ್ನು ಹನ್ನೆರಡು ತಿಂಗಳಿಗೆ ಹಂಚಿಕೆ ಮಾಡಲೂಬಹುದು. ಪ್ರತಿ ತಿಂಗಳ ಕಂತು ಕೈಗೆ ಬಂದ ಕೂಡಲೇ ಸಾಲ ಕೊಟ್ಟಿರುವ ಸಂಸ್ಥೆ ತನಗೆ ಬರಬೇಕಾದ ಬಡ್ಡಿಯನ್ನು ತೆಗೆದುಕೊಂಡು ಉಳಿದುದನ್ನು ಅಸಲಿಗೆ ಜಮಾ ಮಾಡಿಕೊಳ್ಳುತ್ತದೆ. ಅಂದರೆ, ಪ್ರತಿ ಕಂತಿನಲ್ಲಿ ಅಸಲಿಗೆ ಮತ್ತು ಬಡ್ಡಿಗೆ ಹಣ ಸಂದಾಯವಾಗುವುದು. ಅಸಲು ಕಾಲಕ್ರಮೇಣ ತೀರುತ್ತ ಬಂದಂತೆ, ಬಡ್ಡಿಯ ಹಣವೂ ಕಡಿಮೆಯಾಗುತ್ತ ಬರುವುದು. ಇದರಿಂದ ಅಸಲಿಗೆ ಸೇರುವ ಮೊತ್ತ ಹೆಚ್ಚಿ ಸಾಲ ಬೇಗ ತೀರುವುದು. ಸಾಮಾನ್ಯವಾಗಿ ಬ್ಯಾಂಕುಗಳಿಂದಲೂ ಸಹಕಾರ ಸಂಘಗಳಿಂದಲೂ ತೆಗೆದುಕೊಳ್ಳುವ ಸಾಲವನ್ನು ಈ ಕ್ರಮದಲ್ಲಿ ತೀರಿಸುವ ಏರ್ಪಾಟು ಜಾರಿಯಲ್ಲಿದೆ.
ಅಸಲುಕಂತಿನ ತತ್ತ್ವವನ್ನು ಸಾಲಪತ್ರಗಳ ಮೇಲಿನ ಹೆಚ್ಚುವರಿ (ಪ್ರೀಮಿಯಂ) ಅಥವಾ ಇಳಿವರಿಯನ್ನು (ಡಿಸ್ಕೌಂಟ್) ತೊಡೆದು ಹಾಕಲು ಉಪಯೋಗಿಸಲಾಗುತ್ತದೆ. ಒಂದು ಸಾಲಪತ್ರವನ್ನು ಅದರ ಮುಖಬೆಲೆಗಿಂತ ಹೆಚ್ಚಿನ ಬೆಲೆಗೆ ಕೊಂಡು, ಸಾಲಪತ್ರದ ಕಾಲಾವಧಿಯ ಅನಂತರ ಮುಖಬೆಲೆಯ ಹಣವನ್ನು ಪಡೆದರೆ, ಪತ್ರಕೊಂಡವನಿಗೆ ಪತ್ರದ ಹೆಚ್ಚುವರಿಗೆ ಸಮವಾದಷ್ಟು ನಷ್ಟವುಂಟಾಗುತ್ತದೆ. ಸಾಲಪತ್ರದ ಮುಖಬೆಲೆಗಿಂತ ಕಡಿಮೆಬೆಲೆ ಕೊಟ್ಟು ಪತ್ರದ ಕಾಲಾವಧಿಯ ಅನಂತರ ಪತ್ರದ ಮುಖಬೆಲೆಯನ್ನು ಪಡೆದರೆ, ಪತ್ರ ಕೊಂಡವನಿಗೆ ಪತ್ರದ ಇಳಿವರಿಗೆ ಸಮನಾದ ಲಾಭವುಂಟಾಗುತ್ತದೆ. ಹೆಚ್ಚುವರಿ ಕೊಟ್ಟು ಪತ್ರದ ಮುಖಬೆಲೆಯನ್ನು ಪಡೆಯುವುದರಿಂದಾಗುವ ನಷ್ಟವನ್ನು ಹೀಗೆ ಸರಿಪಡಿಸಬಹುದು: ಹೆಚ್ಚುವರಿಯ ಹಣಕ್ಕೆ ಸಮನಾದ ಮೊತ್ತವನ್ನು ಪತ್ರದ ಕಾಲಾವಧಿಯಲ್ಲಿ ಪ್ರತಿ ವರ್ಷಕ್ಕೂ ಕಂತುಗಳಾಗಿ ವಿಭಜಿಸಲಾಗುವುದು. ಆಯಾ ವರ್ಷದ ಸಂಪಾದನೆಯಲ್ಲಿ, ಕಂತು ಹಣವನ್ನು ಸಾಲಪತ್ರದ ಹೆಚ್ಚುವರಿ ನಷ್ಟಕ್ಕೆ ಕಟ್ಟುತ್ತ ಹೋಗಲಾಗುವುದು. ಇದೇ ಪ್ರಕಾರ ಸಾಲಪತ್ರವನ್ನು ಇಳಿವರಿಯಲ್ಲಿ ಕೊಂಡು, ಸಾಲಪತ್ರದ ಮುಖಬೆಲೆಯನ್ನು ಪಡೆದಾಗ ಬರುವ ಲಾಭವನ್ನು ಪತ್ರದ ಮುಖಬೆಲೆಗೆ ಸರಿತೂಗಿಸುವ ಏರ್ಪಾಟು ಮಾಡಬಹುದು. ಇಳಿವರಿಯ ಮೊತ್ತಕ್ಕೆ ಸಮನಾದ ಮೊತ್ತವನ್ನು ಪತ್ರದ ಕಾಲಾವಧಿಗನುಗುಣವಾಗಿ ಕಂತುಗಳಾಗಿ ವಿಭಜಿಸಿ, ಪ್ರತಿ ವರ್ಷದ ಕಂತು ಹಣವನ್ನು ಸಾಲಪತ್ರದ ಲೆಕ್ಕಕ್ಕೆ ಜಮಾ ಮಾಡಲಾಗುವುದು.
ಅಸಲುಕಂತಿನತತ್ತ್ವವನ್ನು ಸಾಲಪತ್ರಗಳನ್ನು ನೀಡುವ ಸಂಸ್ಥೆ ಹೇಗೆ ಅನುಸರಿಸುತ್ತದೆಂಬು ದಕ್ಕೆ ಒಂದು ಉದಾಹರಣೆ: ಒಂದು ಕೂಡುಬಂಡವಾಳಸಂಸ್ಥೆ ರೂ. 10,000 (ಶೇ. 4 ಬಡ್ಡಿ) ಸಾಲಪತ್ರಗಳನ್ನು ಪತ್ರದ ಮುಖಬೆಲೆಯ ಶೇ. 90ಕ್ಕೆ ಮಾರಾಟ ಮಾಡುವುದು. ಇದರಿಂದ ಸಂಸ್ಥೆಗೆ ರೂ. 1,000 ಇಳಿವರಿ ನಷ್ಟವಾಯಿತು. ಇದರ ಪರಿಣಾಮವಾಗಿ ಸಂಸ್ಥೆಯ ಜವಾಬ್ದಾರಿಗಳ ಮೊತ್ತದಲ್ಲಿ ರೂ. 1,000ದಷ್ಟು ಹೆಚ್ಚಾದುದಲ್ಲದೆ, ಅದರ ಆಸ್ತಿಗಳ ಲೆಕ್ಕದಲ್ಲಿ ರೂ. 9,000 ಹೆಚ್ಚಾಯಿತು. ಈ ಎರಡು ಮೊಬಲಗುಗಳ ನಡುವೆ ಇರುವ ರೂ. 1,000 ವ್ಯತ್ಯಾಸವೇ ಸಾಲಪತ್ರದ ಇಳಿವರಿ. ಈ ಇಳಿವರಿ ಲೆಕ್ಕವನ್ನು ಸಂಸ್ಥೆ ಆಸ್ತಿ ಜವಾಬ್ದಾರಿ ಪಟ್ಟಿಯಲ್ಲಿ ಆಸ್ತಿಗಳ ಲೆಕ್ಕಕ್ಕೆ ಸೇರಿಸುವುದು. ಸಂಸ್ಥೆಯ ಆಸ್ತಿಗಳ ಪತ್ರದ ಬೆಲೆಗೆ ಸಮವಾದ ಆಸ್ತಿ ಸೇರಬೇಕಾದುದರಿಂದ ಇಳಿವರಿ ಮೊತ್ತವಾದ ರೂ. 1,000ವನ್ನು ಆಸ್ತಿಗಳ ಲೆಕ್ಕಕ್ಕೆ ಸೇರಿಸಬೇಕು. ಈ ಕಾರಣಕ್ಕಾಗಿ ಸಂಸ್ಥೆ ರೂ. 1,000ವನ್ನು ಪ್ರತಿ ವರ್ಷಕ್ಕೆ ಕಂತುಗಳಾಗಿ ವಿಭಜಿಸಿ, ಪತ್ರದ ಕಾಲಾವಧಿಯಲ್ಲಿ ಇಳಿವರಿ ಲೆಕ್ಕಕ್ಕೆ ಸೇರಿಸಿ ಇಳಿವರಿ ಲೆಕ್ಕವನ್ನು ಕಾಲಕ್ರಮೇಣ ವಜಾ ಮಾಡುತ್ತದೆ.