ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆ

ವಿಕಿಸೋರ್ಸ್ದಿಂದ

ಕನ್ನಡ ವರ್ಣಮಾಲೆಯಲ್ಲಿ ಎರಡನೆಯ ಅಕ್ಷರವಾದ ಆಕಾರ ಕ್ರಿ,ಪೂ. ಮೂರನೆಯ ಶತಮಾನದ ಅಶೋಕನ ಬ್ರಾಹ್ಮೀ ಲಿಪಿಯಲ್ಲಿ ಪ್ರತ್ಯೇಕ ರೂಪವನ್ನು ತಾಳದೆ, ಆಕಾರಕ್ಕೆ ದೀರ್ಘವನ್ನು ಸೂಚಿಸುವ ಒಂದು ಸಣ್ಣ ರೇಖೆಯನ್ನು ಮಾತ್ರ ಒಳಗೊಂಡಿದೆ. ಈ ರೂಪವೇ ಶಾತವಾಹನ, ಕದಂಬ, ಗಂಗ. ಬಾದಾಮಿ ಚಾಲುಕ್ಯರ ಕಾಲಗಳಲ್ಲೂ ಮುಂದುವರಿದಿದೆ. ಈ ಕಾಲದ ರೂಪಗಳಲ್ಲಿ ದೀರ್ಘಸೂಚಕ ರೇಖೆ ಡೊಂಕಾಗುತ್ತ ಹೋಗಿ, ಕೊನೆಗೆ ಹೊಯ್ಸಳರ ಕಾಲದಲ್ಲಿ ಒಂದು ಸಣ್ಣ ಕೊಂಡಿಯ ಆಕಾರವನ್ನು ಪಡೆದಿದೆ. ಕ್ರಿ.ಶ ಹದಿನೈದನೆಯ ಶತಮಾನದ ವಿಜಯನಗರ ಕಾಲದ ಶಾಸನಗಳಲ್ಲಿ ಈ ಕೊಂಡಿ ಅಕ್ಷರಕ್ಕೆ ಸೇರಿಕೊಂಡಿದೆ. ಈ ರೂಪವೇ ಮುಂದಿನ ಶತಮಾನಗಳಲ್ಲಿ ಮುಂದುವರಿದು ಈಗಿನ ಆಕಾರವಾಗಿದೆ. (ಎ.ವಿ.ಎನ್.)

ಕನ್ನಡ ವರ್ಣಮಾಲೆಯ ಈ ಎರಡನೆಯ ಅಕ್ಷರ ವಿವೃತ ಮಧ್ಯ ಅಗೋಲ ದೀರ್ಘ ಸ್ವರವನ್ನು ಸೂಚಿಸುತ್ತದೆ.

(ಎಚ್.ಎಂ.ಎನ್.)