ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಂಧ್ರ ಸಾಹಿತ್ಯ

ವಿಕಿಸೋರ್ಸ್ದಿಂದ

ಆಂಧ್ರ ಸಾಹಿತ್ಯ

ತೆಲುಗು ಸಾಹಿತ್ಯ ಚರಿತ್ರೆಯನ್ನು ಹೀಗೆ ವಿಭಾಗಿಸಬಹುದು: 1 ನನ್ನಯ್ಯನ ಹಿಂದಿನ ಕಾಲ (600-1000). 2 ಪುರಾಣ ಮತ್ತು ಭಾಷಾಂತರಗಳ ಕಾಲ (1000-1500). 3 ಪ್ರಬಂಧಗಳ ಕಾಲ (1500-1750): i. ಕೃಷ್ಣದೇವರಾಯನ ಕಾಲ (1500-1600). ii. ದಕ್ಷಿಣ ಪಂಥದ ಸಾಹಿತ್ಯ (1600-1750). 4 ತರುವಾಯದ ಪ್ರಬಂಧಗಳ ಕಾಲ (1750-1860). 5 ಆಧುನಿಕ ಕಾಲ (1860- 1960): i. ಆಧುನಿಕ ಭಾವಜಾಗ್ರತಿ (1860-1900). ii. ಆಧುನಿಕ ಸಾಹಿತ್ಯದ ಹೊಸ ಓಲುವೆಗಳು: (1900-1960).


ನನ್ನಯ್ಯನ ಹಿಂದಿನ ಕಾಲ(600-1000).[ಸಂಪಾದಿಸಿ]

ಕೆಲವು ಶಾಸನಗಳ ಹೊರತು, ಮಿಕ್ಕ ಯಾವ ಸಾಹಿತ್ಯವೂ ನಮ್ಮ ಗೋಚರಕ್ಕೆ ಬಂದಿಲ್ಲ. ಶಾಸನಗಳ ಪೈಕಿ, 600-1000 ಅವಧಿಯ ಶಾಸನಗಳು ತಗುವೋಜ, ಸೀಸ ಮತ್ತು ಮಧ್ಯಾಕ್ಕರ (ಪ್ರಾಯಶಃ ಕನ್ನಡ ಛಂದಸ್ಸುಗಳಿಂದ ತೆಗೆದುಕೊಂಡಿದ್ದಿರಬೇಕು) ಎಂಬ ದೇಸೀ ಛಂದಸ್ಸುಗಳಲ್ಲಿ ರಚಿತವಾದ ಪದ್ಯಗಳಲ್ಲೂ ಇವೆ. 


ಜೈನ ಕವಿಗಳಿಂದ ರಚಿತವಾದ ಕೆಲವು ತೆಲುಗು ಪದ್ಯಗಳಿದ್ದು ಜೈನರನ್ನು ಜೈನಮತವನ್ನೂ ನಾಶಗೊಳಿಸಿದುದರ ಫಲವಾಗಿ ಅವೂ ನಾಶಹೊಂದಿದುವೆಂದೂ ಹೇಳಲಾಗಿದೆ. ಇದು ಹೇಗಾದರೂ ಇರಲಿ, ಅಲ್ಪ ಸ್ವಲ್ಪ ಸಾಹಿತ್ಯ ರಚನೆಗಳು ಹಿಂದೆ ಇದ್ದಿರಬೇಕು, ಏಕೆಂದರೆ ಅವು ಇದ್ದಿರದಿದ್ದರೆ ನನ್ನಯ್ಯ ತನ್ನ ತೆಲುಗು ಮಹಾಭಾರತವನ್ನು ಸರ್ವಾಂಗ ಸುಂದರವಾದ ಶೈಲಿಯಲ್ಲಿ ಇದ್ದಕ್ಕಿದ್ದ ಹಾಗೆಯೇ ರಚಿಸಲಾಗುತ್ತಿರಲಿಲ್ಲ.


ಪುರಾಣ ಮತ್ತು ಭಾಷಾಂತರಗಳ ಕಾಲ: (1000-1500[ಸಂಪಾದಿಸಿ]

ನಮಗೆ ತಿಳಿದಂತೆ ತೆಲುಗುಭಾಷೆಯ ಮೊದಲ ಕವಿಯಾದ ನನ್ನಯಭಟ್ಟ (ನೋಡಿ- ನನ್ನಯ) ರಾಜಮಹೇಂದ್ರಿಯಲ್ಲಿದ್ದ ಪೂರ್ವ ಚಾಳುಕ್ಯವಂಶದ ಅರಸನಾದ ರಾಜರಾಜ ನರೇಂದ್ರನ (1022-1063) ಆಸ್ಥಾನದ ಕವಿಯಾಗಿದ್ದನು. ರಾಜನ ಆಶಯದಂತೆ, ಮಹಾಭಾರತದ ಆದಿ, ಸಭಾ ಪರ್ವಗಳನ್ನೂ ಅರಣ್ಯ ಪರ್ವದ ಒಂದು ಭಾಗವನ್ನೂ ರಚಿಸಿದ. ಈತನ ಕೃತಿ ಸಂಸ್ಕøತ ಮೂಲದ ಸರಳಾನುವಾದವಾಗಿದೆ. ಈತ ಪಂಪನ ಕನ್ನಡ ಕೃತಿಯನ್ನು ನೋಡಿರಬಹುದು. ತನ್ನ ಸ್ನೇಹಿತ ನಾರಾಯಣಭಟ್ಟನ ಉಪಕಾರ ಸ್ಮರಣೆ ಮಾಡಿದ್ದಾನೆ. ಈ ಉಪಕಾರ ಎಂಥದು ಎಷ್ಟರಮಟ್ಟಿನದು ಎಂಬುದು ನಮಗೆ ತಿಳಿದು ಬಂದಿಲ್ಲ. ಈತನ ಕೃತಿ ಅರೆಮುಗಿದಿದೆ. ಪ್ರಾಯಶಃ ಕವಿಯ ಅಕಾಲಿಕ ಮರಣ ಇದಕ್ಕೆ ಕಾರಣವಾಗಿರಬಹುದು. ಈ ಕೃತಿಯನ್ನು ಇನ್ನೂರು ವರ್ಷಗಳ ಆಚೆಗೆ ನೆಲ್ಲೂರಿನ ತಿಕ್ಕನ (1220-1300) ಮುಂದುವರಿಸಿದ. ಆದರೆ ತಿಕ್ಕನ ಅರಣ್ಯ ಪರ್ವವನ್ನು ಮುಗಿಸದೆ ವಿರಾಟ ಪರ್ವದಿಂದ ಹಿಡಿದು ಮಿಕ್ಕ 15 ಪರ್ವಗಳನ್ನು ಬರೆದು ಮುಗಿಸಿದ. ಅರಣ್ಯ ಪರ್ವವನ್ನು ಎರ್ರನ (1300-1380) ಸಮಾಪ್ತಿಗೊಳಿಸಿದ. ನನ್ನಯ್ಯ, ತಿಕ್ಕನ ಮತ್ತು ಎರ್ರನ ಎಂಬೀ ಮೂವರು ಕವಿತ್ರಯರೆಂದು ಪ್ರಖ್ಯಾತರಾಗಿದ್ದಾರೆ. ಅವರು ಬಳಸಿರುವ ಭಾಷೆ ಶ್ರೇಷ್ಠವೆಂದು ಪರಿಗಣಿತವಾಗಿದೆ. ತಿಕ್ಕನ ನಿರ್ವಚನೋತ್ತರ ರಾಮಾಯಣಂ ಮತ್ತು ವಿಜಯಸೇನಂ ಎಂಬ ಗ್ರಂಥಗಳನ್ನು ಬರೆದಿದ್ದಾನೆ. ಮೊದಲನೆಯದು ಉಳಿದುಕೊಂಡಿದೆ, ಎರಡನೆಯದು ನಷ್ಟವಾಗಿದೆ. ಅದರ ಕೆಲವು ಪದ್ಯಗಳು ಮುಂದಿನ ಕಾಲದ ಪ್ರಬಂಧರತ್ನಾಕರ ಎಂಬುದರಲ್ಲಿ ಗೋಚರಿಸುತ್ತವೆ. ಎರ್ರನನೂ ಹರಿವಂಶ ನೃಸಿಂಹಪುರಾಣ ಮತ್ತು ರಾಮಾಯಣಂ ಎಂಬ ಕೃತಿಗಳನ್ನು ರಚಿಸಿದ್ದಾನೆ. ಮೂರನೆಯ ಗ್ರಂಥ ಈಗ ಉಳಿದುಕೊಂಡಿಲ್ಲ. ಎಲ್ಲೋ ಕೆಲವು ಪದ್ಯಗಳು ಹದಿನೆಂಟನೆಯ ಶತಮಾನದ ಕೂಚಿಮಂಚಿ ತಿಮ್ಮ ಕವಿಯ ಸರ್ವಲಕ್ಷಣಸಾರಸಂಗ್ರಹಮು ಎಂಬ ಗ್ರಂಥದಲ್ಲಿ ಸಿಕ್ಕುತ್ತವೆ.

 	ಈ ಮೂರು ಕವಿಗಳ ಪೈಕಿ ನನ್ನಯ್ಯ ಸಂಸ್ಕøತ ಶಬ್ದಗಳನ್ನು ವಿಪುಲವಾಗಿ ಬಳಸಿದ. ತಿಕ್ಕನ ತೆಲುಗು ಮಾತುಗಳಿಗೂ ರೀತಿಗಳಿಗೂ ಹೆಚ್ಚು ಪ್ರಾಶಸ್ತ್ಯ ಕೊಟ್ಟು. ಎರ್ರನ ಸಂಸ್ಕøತ ತೆಲುಗುಗಳೆರಡಕ್ಕೂ ಸಮಪ್ರಾಧಾನ್ಯ ಕೊಟ್ಟ. 
 	ನನ್ನಯ್ಯನನ್ನು ವಾಗನುಶಾಸನನೆಂದು ಜನ ಕರೆಯುವದು ವಾಡಿಕೆ. ತಾವರಿತಂತೆ ಆತನೇ ತೆಲುಗಿನ ಮೊದಲ ಕವಿಯಾದುದರಿಂದ ಅಥವಾ ಕೆಲವು ವಿದ್ವಾಂಸರು ಆಂಧ್ರಶಬ್ಧಚಿಂತಾಮಣಿ ಎಂಬ ಸಂಸ್ಕøತ ಭಾಷೆಯಲ್ಲಿ ರಚಿತವಾದ ವ್ಯಾಕರಣಗಳನ್ನು ಆತ ಬರೆದನೆಂದು ತಿಳಿದುಕೊಂಡಿದ್ದರಿಂದ ಈ ಬಿರುದು ಆತನಿಗೆ ಬಂದಿರಬಹುದು. ಆದರೆ ಈ ವ್ಯಾಕರಣದಲ್ಲಿನ ಸೂತ್ರಗಳಿಗೂ ನನ್ನಯ್ಯನ ಪ್ರಯೋಗಗಳಿಗೂ ಅನೇಕ ಕಡೆಗಳಲ್ಲಿ ಸಾಮರಸ್ಯವಿಲ್ಲದಿರುವದರಿಂದ ಅವನ ತರುವಾಯ ಬಂದಿರುವ ಯಾವನೋ ಮತ್ತೊಬ್ಬನಿಂದ ಇದು ರಚಿತವಾಗಿದೆಯೆಂಬುದು ಈಗ ಸಿದ್ದಾಂತವಾಗಿದೆ. ತಿಕ್ಕನನನ್ನು ಕವಿಬ್ರಹ್ಮನೆಂದೂ ಉಭಯಕವಿ ಮಿತ್ರನೆಂದೂ ಕರೆಯುತ್ತಾರೆ. ಎರ್ರನನನ್ನು ಶಿವಭಕ್ತನಾದುದರಿಂದ ಶಂಭುದಾಸನೆಂದೂ ತನ್ನ ಕೃತಿಗಳಲ್ಲಿ, ಅದರಲ್ಲೂ ನೃಸಿಂಹಪುರದಲ್ಲಿ, ಈತ ಕಾವ್ಯ ಕಲೆಗಳನ್ನು ಪ್ರದರ್ಶಿಸುವದರಿಂದ ಪ್ರಬಂಧ ಪರಮೇಶ್ವರನೆಂದೂ ಜನ ಪ್ರೀತಿಯಿಂದ ಕರೆಯುತ್ತಾರೆ. 
 	ಶೈವ ಕವಿಗಳು (1150-1300): ರಾಜರಾಜೇಂದ್ರ ತೀರಿಕೊಂಡಾಗ (1063) ತೆಲುಗು ಸಾಹಿತ್ಯದ ಬೆಳವಣಿಗೆಗೆ ಅಡ್ಡಿತರುವಂಥ ರಾಜಕೀಯ, ಸಾಮಾಜಿಕ ಮತ್ತು ಮತೀಯ ವಿಪ್ಲವಗಳು ಉಂಟಾದವು. ಜೈನಧರ್ಮ ನಾಡಿನಲ್ಲಿರುವವರೆಗೂ ಶೈವರು, ವೈಷ್ಣವರು ಮತ್ತಿತರ ವೈದಿಕಧರ್ಮಾನುಯಾಯಿಗಳೂ ಜೈನರನ್ನೂ ಜೈನಮತವನ್ನು ಎದುರಿಸಲು ಒಗ್ಗೂಡಿದರು. ಆದರೆ ಸಾಮಾನ್ಯ ಶತ್ರುಕಾಲ್ತೆಗೆದ ಬಳಿಕ ಅವರು ತಮ್ಮತಮ್ಮಲ್ಲೇ ಹೋರಾಡಲು ಮೊದಲು ಮಾಡಿದರು. ಶೈವರು ಪ್ರಬಲಿಸಿದರು. ಮತ್ತು ಶಿವಮತವನ್ನು ನಾಡಿನಲ್ಲೆಲ್ಲ ಹರಡಲು ಪ್ರಾರಂಭಿಸಿದರು. ತಾವು ಸಂಸ್ಕøತದಲ್ಲೂ ತೆಲುಗಿನಲ್ಲೂ ಶ್ರೇಷ್ಠ ಪಂಡಿತರಾಗಿದ್ದರೂ ಕೆಲವರು ಕನ್ನಡದಲ್ಲೂ ಪರಿಶ್ರಮಹೊಂದಿದ್ದರೂ ಜನರ ಮೆಚ್ಚುಗೆಯನ್ನು ಪಡೆಯಲು ಅವರು ಸರಳ ಭಾಷೆಯನ್ನೂ ದೇಸೀ ಛಂದಸ್ಸುಗಳನ್ನು ಅವಲಂಬಿಸಿದರು. ಹನ್ನೆರಡನೆಯ ಶತಮಾನದ ಮಧ್ಯಕಾಲದಲ್ಲಿ ಪೂರ್ವ ಗೋದಾವರೀ ಜಿಲ್ಲೆಯ ದಕ್ಷಾರಾಮದಲ್ಲಿ ಜೀವಿಸಿದ್ದ ಮಲ್ಲಿಕಾರ್ಜುನ ಪಂಡಿತ ಪ್ರಥಮ ಶೈವಕವಿ. ಆತ ಶೈವ ಮತಕ್ಕೆ ತೆಲುಗು ಪ್ರದೇಶದಲ್ಲಿ ಒಂದು ಸ್ಥಿರವಾದ ಆಸರೆಯನ್ನು ಕಲ್ಪಿಸಿದ. ಆತನನ್ನು ಲಿಂಗಧಾರೀ ಸಂಸ್ಕøತಿಯ ಸಂಸ್ಥಾಪಕನೆಂದೂ ಕರೆಯುತ್ತಾರೆ. ಆತ ಸಂಸ್ಕøತದಲ್ಲೂ ತೆಲುಗಿನಲ್ಲೂ ಡೊಡ್ಡ ವಿದ್ವಾಂಸ. ಅನೇಕ ಕೃತಿಗಳನ್ನು ರಚಿಸಿದ್ದಾನೆ. ಅವನ ಗ್ರಂಥಗಳೆಲ್ಲ ಶೈವ ಮತಕ್ಕೆ ಮೀಸಲಾಗಿವೆ. ಅವುಗಳ ಪೈಕಿ ತುಮ್ಮೆದ ಪದಮುಲು (ತುಂಬಿಯ ಪದಗಳು), ಪ್ರಭಾತ ಪದಮುಲು, ವೆನ್ನೆಲ ಪದಮುಲು (ಬೆಳದಿಂಗಳ ಹಾಡುಗಳು)- ಮುಂತಾದ ತೆಲುಗು ಜನಗಳಿಗೆಂದೇ ಬರೆದ ಜನಪ್ರಿಯ ಕೃತಿಗಳಿವೆ. ಆದರೆ ಅವುಗಳೊಂದೂ ನಮ್ಮ ಪಾಲಿಗೆ ಉಳಿದುಬಂದಿಲ್ಲ. ಈತನ ಅನೇಕ ಕೃತಿಗಳ ಪೈಕಿ ದೇಸೀ ಛಂದಸ್ಸುಗಳಲ್ಲಿ ರಚಿತವಾಗಿರುವ ಶಿವತತ್ತ್ವಸಾರಮು ಎಂಬುದೊಂದು ಮಾತ್ರ ನಮಗೆ ದೊರೆತಿದೆ. ಅದರಲ್ಲಿ 489 ಪದ್ಯಗಳು ಮಾತ್ರ ಈಗ ಉಳಿದಿವೆ. ಈ ಗ್ರಂಥದಲ್ಲಿ ಇನ್ನಷ್ಟು ಪದ್ಯಗಳಿದ್ದವೋ ಅದು ಸಹ ನಮಗೆ ತಿಳಿದಿಲ್ಲ.
 	ನನ್ನೆ ಜೋಡ ಎಂಬ ಕವಿ ಕುಮಾರಸಂಭವನನ್ನು ರಚಿಸಿ ಈಶ್ವರನ ಅವತಾರವೆಂದೇ ತಾನು ಯಾರನ್ನು ಭಾವಿಸಿದ್ದನೋ ಆ ಘನವಿದ್ವಾಂಸ ಜಂಗಮ ಮಲ್ಲಿಕಾರ್ಜುನ ಶಿವಯೋಗಿಗೆ ಅದನ್ನು ಅರ್ಪಿಸಿದ. ನನ್ನೆ ಜೋಡನಾಗಲಿ ಆತನ ಕುಮಾರಸಂಭವವಾಗಲಿ ಲೋಕದ ದೃಷ್ಟಿಗೆ ಗೋಚರವಾಗಿಲ್ಲ. ಈ ಗ್ರಂಥವನ್ನು ದಿವಂಗತ ಮಾನವಲ್ಲಿ ರಾಮಕೃಷ್ಣ ಕವಿ 1914ರಲ್ಲಿ ಕಂಡುಹಿಡಿದ. ನನ್ನೆ ಜೋಡನ ಕಾಲದ ವಿಚಾರ ಚರ್ಚೆಗಿಟ್ಟುಕೊಂಡಿದೆ. ಈತ ನನ್ನಯ್ಯನಿಗೆ ಹಿಂದಿನವನೆಂದು ರಾಮಕೃಷ್ಣ ಕವಿ ಭಾವಿಸಿದ್ದ, ಆದರೆ ಅನೇಕ ವಿದ್ವಾಂಸರು ಈತ 12ನೆಯ ಶತಮಾನದ ಮಧ್ಯಭಾಗದಲ್ಲಿ ಜೀವಿಸಿದ್ದನೆಂದು ಭಾವಿಸುತ್ತಾರೆ. ಈತ ಜೋಡರಾಜ ವಂಶಕ್ಕೆ ಸೇರಿದವನು ಮತ್ತು ತೆಲುಗು ದೇಶದ ಒಂದು ಸಣ್ಣ ಪ್ರಾಂತ್ಯಕ್ಕೆ ಪ್ರಭುವಾಗಿದ್ದವನು. ಕುಮಾರ ಸಂಭವದಲ್ಲಿ ತನ್ನ ಕಾವ್ಯಕಲಾ ಪ್ರೌಢಿಮೆಯನ್ನು ಈತ ಮೆರೆಯಿಸುವದರಿಂದ ಈತನನ್ನು ಕವಿರಾಜ ಶಿಖಾಮಣಿ ಎಂದು ಜನ ಮನ್ನಿಸುತ್ತಾರೆ.
 	ತಾನು ಶೈವನಾಗಿದ್ದರೂ ಶೈವಮತವನ್ನು ಹರಡುವದರಲ್ಲಿ ಈತ ಆಸಕ್ತನಾಗಲಿಲ್ಲ. ಕುಮಾರಸಂಭವ ಒಂದು ಶ್ರೇಷ್ಠ ಪ್ರಬಂಧ. ಈತನ ಕಾಲದ ಮತ್ತು ಮುಂದಿನ ಕಾಲದ ಜನರಿಗೆ ಇಂಥ ಘನಕಾವ್ಯವೊಂದಿದೆ ಎಂಬುದರ ಪರಿವೆಯೂ ಇರಲಿಲ್ಲ. ಇದು ಅವರ ಗಮನಕ್ಕೆ ಬಂದಿದ್ದ ಪಕ್ಷದಲ್ಲಿ ಪ್ರಬಂಧದ ಶೈಲಿ ತನ್ನ ಮುಂಬರಿವಿಗೆ ಕಾಯಬೇಕಾಗಿರಲಿಲ್ಲ. ಕಾವ್ಯಲಾಕ್ಷಣಿಕರು ಪ್ರಬಂಧ ವಿಷಯದಲ್ಲಿ ವಿವರಿಸುವ ಸರ್ವಲಕ್ಷಣಗಳನ್ನೂ ಕುಮಾರಸಂಭವ ಪ್ರದರ್ಶಿಸುತ್ತದೆ. ಕಾವ್ಯದ ವಸ್ತು ಕುಮಾರಸ್ವಾಮಿಯ ಜನನದಲ್ಲಿ ಕೇಂದ್ರೀಕರಿಸಿದೆ. ಸತೀಜನನದಲ್ಲಿ ಪ್ರಾರಂಭವಾಗುವ ಕಥೆ ತಾರಕಾಸುರನ ಸಂಹಾರದಲ್ಲಿ ಮುಗಿಯುತ್ತದೆ. ಕೆಲವು ಪ್ರಸಂಗಗಳನ್ನೂ ವರ್ಣನೆಗಳನ್ನೂ ಈ ಕವಿ ಕಾಳಿದಾಸ ಮತ್ತು ಉದ್ಧಟರ ಕುಮಾರಸಂಭವಗಳಿಂದ ಎತ್ತಿಕೊಂಡಿದ್ದಾನೆ ಅಥವಾ ಅವುಗಳನ್ನು ಅವಲಂಬಿಸಿ ಬರೆದಿದ್ದಾನೆ. 
 	ಇತರ ಶೈವ ಕವಿಗಳ ಪೈಕಿ, ಇಬ್ಬರು ಪ್ರಧಾನರು, ಯಥಾ ವಾಕ್ಕುಲ ಅನ್ನಮಯನ ಇವರಲ್ಲೊಬ್ಬ. ಈತನ ಕಾಲ (ಸುಮಾರು ಕ್ರಿ.ಶ. 1242). ಈತನೊಬ್ಬ ಶೈವಕವಿ, ಶೈವಮತವನ್ನು ನಾಡಿನಲ್ಲಿ ಹರಡಲು ಆಸಕ್ತನಾದವ. ಸರ್ವೇಶ್ವರಶತಕಗಳೆಂಬ ಗ್ರಂಥಗಳನ್ನು ರಚಿಸಿದ್ದಾನೆ. ಈತನ ಕ್ರತಿಗಳಲ್ಲಿ ಶ್ರೆಷ್ಠ ಕವಿತಾಗುಣಗಳು ಗೋಚರಿಸುತ್ತವೆ. ಮತ್ತೊಬ್ಬ ಕವಿ ಓರಂಗಲ್ಲಿನ ಪಾಲ್ಕುರಿಕಿ ಸೋಮನ (1250-1300). ಈತನನ್ನು ಶೈವಾಚಾರಪರಾಯಣನೆಂದೂ ಸಂಸ್ಕøತ ತೆಲುಗು ಕನ್ನಡಗಳಲ್ಲಿ ಶ್ರೇಷ್ಠವಿದ್ವಾಂಸನೆಂದೂ ವಿಖ್ಯಾತನಾದ ಕವಿಯೆಂದೂ ಭಾವಿಸಲಾಗಿದೆ. ಈತ ಬಹಳ ಗ್ರಂಥಗಳನ್ನು ಬರೆದಿದ್ದಾನೆ. ಬಸವಪುರಾಣಂ, ಪಂಡಿತಾರಾಧ್ಯಚರಿತ್ರ, ಅನುಭವಸಾರ, ಚತುರ್ವೇದಸಾರ, ಕಚೆನ್ನಮಲ್ಲುಸೀಸಮಲು, ವಸ್ಕಧಿಪಶತ ಮತ್ತು ಬಸವೋದಾಹರಣ ಮುಂತಾದುವನ್ನೂ ಕನ್ನಡದಲ್ಲಿ ಬಸವರಗಡ ಗಂಗೋತ್ಪತ್ತಿರಗಡ ಮತ್ತು ಸದ್ಗುರುಗಡ ಮುಂತಾದುವನ್ನೂ ರಚಿಸಿ, ಈ ಕೃತಿಗಳ ಹೆಸರುಗಳು ಈತನ ತೆಲುಗು ಕಾವ್ಯವಾದ ಬಸವಪುರಾಣದಲ್ಲಿ ಬಂದಿವೆ. ಅವನ ಅನೇಕ ಕೃತಿಗಳ ಪೈಕಿ ಜನಪ್ರಿಯ ದ್ವಿಪದಿಗಳಲ್ಲಿ ರಚಿತವಾದ ಬಸವಪುರಾಣ ಮತ್ತು ಪಂಡಿತಾರಾಧ್ಯಚರಿತ್ರ ಸೇರಿವೆ; ಈ ಗ್ರಂಥಗಳಲ್ಲಿ ತೆಲುಗು ಶಬ್ದಗಳೂ ಅವುಗಳ ದೇಸೀನುಡಿದಟ್ಟುಗಳೂ ವಿಪುಲವಾಗಿವೆ. ಇವು ಶೈವರಿಂದಲ್ಲದೆ ತೆಲುಗು ಭಾಷಾವಿದ್ವಾಂಸರಿಂದಲೂ ಬಹಳ ಬೆಲೆಯುಳ್ಳ ಗ್ರಂಥಗಳೆಂದು ಪರಿಗಣಿತವಾಗಿವೆ.
	ಈ ಕಾಲದಲ್ಲಿ ಇಷ್ಟು ಪ್ರಸಿದ್ಧರಲ್ಲದ ಪಿಡುಪರ್ತಿ (15 ನೆಯ ಶತಮಾನ) ಕೆಲವು ಕವಿಗಳೂ ಇದ್ದಾರೆ. ಪಿಡುಪರ್ತಿ ಸೋಮನ ಪಾಲ್ಕುರಿಕಿ ಸೋಮನ ದ್ವಿಪದಿಯಲ್ಲಿ ರಚಿಸಿದ್ದ ಬಸವಪುರಾಣವನ್ನು ಪದ ಛಂದಸ್ಸಿಗೆ ತಿರುಗಿಸಿ ಬರೆದ. ಪಿಡುಪರ್ತಿ ಸೋಮನ ಅಲ್ಲಮಪ್ರಭುವಿನ ಲೀಲೆಗಳನ್ನು ವರ್ಣಿಸುವ ಪ್ರಭುಲಿಂಗಲೀಲ ಎಂಬುದನ್ನೂ ದ್ವಿಪದಿಯಲ್ಲಿ ರಚಿಸಿದ್ದಾನೆ. ಈ ಕೃತಿಯನ್ನು ಈತನ ಸಹೋದರನ ಮಗ ಬಸವಪ್ಪ ನಿಯತವಾದ ಪದ್ಯಛಂದಸ್ಸಿಗೆ ಪರಿವರ್ತಿಸಿದ್ದಾನೆ. 
 	ಈ ಕಾಲದ ರಾಮಾಯಣ ಕವಿಗಳು; ತಿಕ್ಕನ ವಿರಚಿತ ನಿರ್ವಚನೋತ್ತರ ರಾಮಾಯಣಕ್ಕೆ ಹಿಂದೆ ರಂಗನಾಥ ರಾಮಾಯಣವೆಂಬುದೊಂದಿತ್ತು. ಇದನ್ನು ಯಾರು ಬರೆದರೆಂಬ ವಿಷಯ ಚರ್ಚೆಗಿಟ್ಟುಕೊಂಡಿದೆ. ಹೆಸರೇ ಹೇಳುವ ಹಾಗೆ, ರಂಗನಾಥ ಎಂಬುವನೇ ಇದರ ಕವಿ ಎಂದು ಭಾವಿಸಲಾಗಿದೆ. ಆದರೆ ಆಂತರಿಕ ಸಾಕ್ಷ್ಯಗಳಿಂದ ಗೋನಬುದ್ಧ ರೆಡ್ಡಿ ಇದನ್ನು ರಚಿಸಿದನೆಂದು (1200) ಊಹಿಸಬೇಕಾಗುತ್ತದೆ. ತನ್ನ ಗುರುವಾದ ರಂಗನಾಥನಿಗೆ ಗೌರವವನ್ನು ಸೂಚಿಸುವುದಕ್ಕಾಗಿ ಆತನ ಅಂಕಿತವನ್ನೇ ಈ ಕಾವ್ಯಕ್ಕೆ ಕವಿ ಕೊಟ್ಟನೆಂದು ಹೇಳಲಾಗಿದೆ.

ಇದು ದ್ವಿಪದಿಯಲ್ಲಿ ರಚಿತವಾಯಿತು. ಏಕೆಂದರೆ ಆ ಕಾಲದಲ್ಲಿ ಜನಪ್ರಿಯ ಛಂದಸ್ಸುಗಳಲ್ಲೂ ಸರಳಮಾತಿನಲ್ಲೂ ಕಾವ್ಯಗಳನ್ನು ರಚಿಸಿ ಜನರ ಮೆಚ್ಚುಗೆಯನ್ನು ಗಳಿಸಿ ತಮ್ಮ ತಮ್ಮ ಮತಗಳನ್ನು ಅವರಲ್ಲಿ ಹರಡಬೇಕೆಂಬ ಸ್ಪರ್ಧೆ ಶೈವ ಮತ್ತು ವೈಷ್ಣವ ಕವಿಗಳಲ್ಲಿ ಹಬ್ಬಿತ್ತು. ಆದರೆ ವೈಷ್ಣವ ಪಂಥದ ಇತರ ಕವಿಗಳಲ್ಲನೇಕರು ಕೆಳಮಟ್ಟದಲ್ಲಿ ಕಾವ್ಯ ರಚಿಸಬೇಕೆಂಬುದನ್ನು ಒಪ್ಪಲ್ಲಿಲ್ಲ. ಆದುದರಿಂದ ಈ ದ್ವಿಪದ ರಾಮಾಯಣ ರಚಿತವಾದ ಕೂಡಲೇ ಕ್ರಮಬದ್ಧವಾದ ಪದ್ಯಕಾವ್ಯವೊಂದು ಮೈದೋರಿತು. ಅದರ ಹೆಸರು ಭಾಸ್ಕರ ರಾಮಾಯಣ. ಇದನ್ನು ಒಬ್ಬ ಕವಿ ರಚಿಸಲಿಲ್ಲ; ಒಂದೇ ಮನೆಯವರೋ ಅಥವಾ ಒಂದು ಸಾಹಿತ್ಯ ಪಂಥಕ್ಕೆ ಸೇರಿದವರೋ ಆ ನಾಲ್ವರು ನಿರ್ಮಿಸಿದರು- 1 ಹುಲಕ್ಕಿಭಾಸ್ಕರ ರಾಮಾಯಣ; ಅರಣ್ಯಕಾಂಡ, ಯುದ್ಧ ಕಾಂಡದ ಮೊದಲಭಾಗ; 2 ಮಲ್ಲಿಕಾರ್ಜುನಭಟ್ಟ (ಭಾಸ್ಕರನ ಮಗ); ಬಾಲ, ಕಿಷ್ಕಿಂಧ ಮತ್ತು ಸುಂದರಕಾಂಡಗಳು; 3 ಕುಮಾರ ರುದ್ರದೇವ (ಭಾಸ್ಕರನ ಶಿಷ್ಯ ಮತ್ತು ಸಾಹಿಣಿಮಾರನ ಮಗ); ಅಯೋಧ್ಯಾಕಾಂಡ; 4 ಅಯ್ಯಲಾಯಾ (ಭಾಸ್ಕರನ ಸ್ನೇಹಿತ ಮತ್ತು ಸಹೋದ್ಯೋಗಿ); ಯುದ್ಧಕಾಂಡದ ಉತ್ತರಾರ್ಧ. ಈ ಗ್ರಂಥ ಗೊನಬುದ್ಧರೆಡ್ಡಿಯ ಮೊಮ್ಮಗನ ಮಗ ಸಾಹಿಣಿಮಾರನಿಗೆ ಅಂಕಿತವಾಗಿರುವುದೊಂದು ಸೋಜಿಗದ ಸಂಗತಿ. ಗ್ರಂಥಾಂಕಿತಕ್ಕೆ ಸಮ್ಮತಿಸುವಾಗ ಆತ ಎರಡನೆಯ ಪ್ರತಾಪರುದ್ರದೇವನ (1225-1326) ಸಾಮಂತನಾದ ಪಾಳೆಯಗಾರನೊಬ್ಬನ ಅಶ್ವದಳಾಧಿಕಾರಿಯಾಗಿದ್ದ.

ತಿಕ್ಕನ ಸನಯಾಜಿ ವೈಷ್ಣವರಿಗೂ ಶೈವರಿಗೂ ರಾಜಿಮಾಡಿಸುವ ಸಲುವಾಗಿ ತನ್ನ ಮಹಾಭಾರತವನ್ನು ನೆಲ್ಲೂರಿನ ಹರಿಹರನಾಥನಿಗೆ ಅರ್ಪಿಸಿ ಹರಿಹರನಾಥ ಪಂಥವನ್ನು ಮೇಲಕ್ಕೇರಿಸಿ. ಆದರೆ ಈ ವಿಷಯದಲ್ಲಿ ಆ ಸಂಪೂರ್ಣವಾಗಿ ಜಯಶಾಲಿಯಾಗಲ್ಲಿಲ್ಲ. ಒಳಗುದಿಗಳು ಮುಂದುವರಿದೇ ಇದ್ದುವು.

 	ಮೇಲಿನ ನಾಲ್ಕು ಜನ ಕವಿಗಳಲ್ಲಿ ಭಾಸ್ಕರನೇ ಜ್ಯೇಷ್ಠ. ಆ ಕಾರಣದಿಂದಲೇ ಆ ಗ್ರಂಥಕ್ಕೆ ಭಾಸ್ಕರ ರಾಮಾಯಣವೆಂದು ಹೆಸರಾಯಿತು. ಕವಿಗಳೊಂದಿಗೆ ಅದರ ಭಾಷೆ. ಶೈಲಿ ಮತ್ತು ಕಾವ್ಯಗುಣಗಳು ವ್ಯತ್ಯಾಸಗೊಂಡಿವೆ. ಭಾಸ್ಕರನ ಅರಣ್ಯಕಾಂಡವೇ ಇವುಗಳಲ್ಲಿ ಶ್ರೇಷ್ಠತಮವಾಗಿದೆ. ಆತನ ಯುದ್ಧಕಾಂಡ ಒಳ್ಳೆಯ ಕಳಕಳಿಸುವ ವರ್ಣನೆಗಳಿಂದ ಕೂಡಿದೆ. ಮಲ್ಲಿಕಾರ್ಜುನನ ಪದ್ಯಗಳು ಶ್ರೀಮಂತವಾದ ಕಾವ್ಯ ಸೌಂದರ್ಯಗಳನ್ನು ಪ್ರದರ್ಶಿಸುತ್ತವೆ. ಕುಮಾರರುದ್ರನ ಭಾಷೆ ಮಿಕ್ಕೆಲ್ಲದಕ್ಕಿಂತಲೂ ಸರಳವಾಗಿದೆ, ಅಯ್ಯಲಾರ್ಯ ಉಕ್ತಿಯಲ್ಲಿ ಪ್ರೌಢಿಮೆಯನ್ನೂ ಭಾವದಲ್ಲಿ ಘನತೆ ಗಾಂಭೀರ್ಯಗಳನ್ನೂ ಪ್ರದರ್ಶಿಸಿದ್ದಾನೆ. ಒಟ್ಟಿನಲ್ಲಿ ಭಾಸ್ಕರರಾಮಾಯಣ ಒಂದು ಶ್ರೇಷ್ಠಗ್ರಂಥವೆಂದು ಪರಿಗಣಿತವಾಗದೆ. 
 	ಆ ಬಳಿಕ ತೆಲುಗುಸಾಹಿತ್ಯದಲ್ಲಿ ಇಪ್ಪತ್ತೈದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ರಾಮಾಯಣಗಳು ಪ್ರಕಟವಾದುವು. ಈ ದಿನದಲ್ಲೂ ವಿಶ್ವನಾಥ ಸತ್ಯನಾರಾಯಣ ಮತ್ತು ಆತ್ಮಕೂರಿ ಗೋವಿಂದಾಚಾರ್ಯುಲುಗಳಂಥ ಕವಿಗಳು ರಾಮಾಯಣಗಳನ್ನು ರಚಿಸಿದ್ದಾರೆ. ಮೊದಲನೆಯವ ರಾಮಾಯಣ ಕಲ್ಪವೃಕ್ಷಂ ಎಂಬುದನ್ನೂ ಎರಡನೆಯವ ಗೋವಿಂದ ರಾಮಾಯಣವೆಂಬುದನ್ನೂ ಬರೆದಿದ್ದಾರೆ. ಈಚಿನ ರಾಮಾಯಣಗಳಲ್ಲಿ 14 ನೆಯ ಶತಮಾನದ ಮೊಲ್ಲರಾಮಾಯಣ ಸರಳವೂ ಜನಪ್ರಿಯವೂ ಆಗಿದೆ. ಹತ್ತೊಂಬತ್ತನೆಯ ಶತಮಾನದ ಗೋಪಿನಾಥ ರಾಮಾಯಣ ಗಂಭೀರವಾಗಿದೆ; ವಾವಿಲಕೊಲನು ಸುಬ್ಬರಾಯನ ರಾಮಾಯಣ ವಾಲ್ಮೀಕಿರಾಮಾಯಣದ ಮೂಲಕ್ಕೆ ಹತ್ತಿರವಾಗಿರುವ ಭಾಷಾಂತರ. ಆಂಧ್ರಪ್ರದೇಶದ ರಾಷ್ಟ್ರಕವಿಯಾಗಿದ್ದ ದಿವಂಗತ ಶ್ರೀಪಾದ ಕೃಷ್ಣಮೂರ್ತಿ ಶಾಸ್ತ್ರಿಯದೂ ಮೂಲಕ್ಕೆ ಸಮೀಪವಾಗಿಯೂ ವಿಶದವಾಗಿಯೂ ಇರುವ ಭಾಷಾಂತರವಾಗಿದೆ.
 	ಈ ಕಾಲದ ಇತರ ಕವಿಗಳ ಪೈಕಿ ಈ ಕೆಳಗೆ ಕಾಣಿಸಿರುವವರು ಉಲ್ಲೇಖಾರ್ಹರು. ತಿಕ್ಕನನ ಚಿಕ್ಕಪ್ಪನೂ ಕಾದಂಬರಿಯನ್ನು ಪದ್ಯದಲ್ಲಿ ರಚಿಸಿದವನೂ ಆದ ಕೇತನ (1200-1250); ತಿಕ್ಕನನ ಶಿಷ್ಯನೂ ಮಾರ್ಕಂಡೇಯ ಪುರಾಣದ ಕರ್ತೃವೂ ಆದ ಮಾರನ (1295-1326); ಉಷಾಪರಿಣಯಂ, ನರಕಾಸುರವಧ ಮುಂತಾದ ಬಹು ಮನೋಹರವಾದ ಕಥೆಗಳನ್ನೊಳಗೊಂಡಿರುವ ಉತ್ತರ ಹರಿವಂಶವನ್ನುರಚಿಸಿರುವ ಮತ್ತು ಆ ಕಾಲದ ಅತ್ಯುತ್ತಮ ಕವಿಗಳಲ್ಲಿ ಒಬ್ಬನೆಂದು ಗಣ್ಯನಾದ ನಾಚನ ಸೋಮನ (ಸುಮಾರು 1360); ವಸಿಷ್ಠರಾಮಾಯಣ ಮತ್ತು ಪದ್ಮಪುರಾಣಗಳ ಕರ್ತೃ ಮಡಿಕಿ ಸಿಂಗನ (1420) ತನ್ನ ಕವಿತಾ ಸೌಂದರ್ಯಕ್ಕೆ ಹೆಸರುವೆತ್ತಿರುವ ವಿಕ್ರಮಾರ್ಕಚರಿತದ ಕವಿ ಜಕ್ಕನ (1406-22) ಮನಸೆಳೆದಂಥ ಕಥೆಗಳಿರುವ ಭೋಜರಾಜೀಯಂ ಎಂಬುದನ್ನೂ ರಸಾಭರಣ ಎಂಬ ಅಲಂಕಾರ ಗ್ರಂಥವನ್ನೂ ಛಂದೋದರ್ಪಣವೆಂಬ ಛಂದಸ್ಸುಗಳನ್ನು ಕುರಿತ ಗ್ರಂಥವನ್ನೂ ಬರೆದಿರುವ ಅನಂತಾಮಾತ್ಯ (1430).
 	ಶ್ರೀನಾಥ (1380-1445 ?) ಮತ್ತು ಬಮ್ಮೆರಪೋತನನನ್ನು (1430-1500) ಕುರಿತು ಒಂದೆರಡು ಮಾತುಗಳನ್ನು ವಿಶೇಷವಾಗಿ ಹೇಳಬೇಕಾಗಿದೆ. ಶ್ರೀನಾಥ ತನ್ನ ವಿದ್ವತ್‍ಪ್ರೌಢಿಮೆಗೂ ಕವಿತಾ ಕೌಶಲ್ಯಕ್ಕೂ ಖ್ಯಾತನಾಗಿದ್ದಾನೆ. ವೇಮರೆಡ್ಡಿಯ (1400-1420) ಕಾಲದಲ್ಲಿ ಈ ಕವಿ ಬಹು ಶ್ರೇಷ್ಠಪದವಿಯನ್ನು ಅಲಂಕರಿಸಿದ್ದ. ಈತ ಅನೇಕ ಗ್ರಂಥಗಳನ್ನು ರಚಿಸಿದ್ದಾನೆ. ದೇಶ ವಿಖ್ಯಾತನಾದ ಮಹಾವಿದ್ವಾಂಸನೀತ. ಈತನ ಕೃತಿಗಳ ಪೈಕಿ ಶೃಂಗಾರ ನೈಷಧವೆಂಬುದೊಂದು. ಇದು ಶ್ರೀಹರ್ಷನ ನೈಷಧಕಾವ್ಯದ ಸರಳಾನುವಾದ. ಇದನ್ನು ಅರ್ಥಮಾಡಿಕೊಳ್ಳುವುದು ಕಷ್ಟವೆಂಬ ಪ್ರತೀತಿಯಿದ್ದರೂ ಇದರಲ್ಲಿ ತುಂಬ ಸರಳವು ಬಹು ಮನೋಹರವೂ ಆದ ಕೆಲವು ಪದ್ಯಗಳಿವೆ. ಈತನ ಕಾಶೀಖಂಡಂ ಮತ್ತು ಭೀಮೇಶ್ವರ ಪುರಾಣಗಳು ಸಹ ಭಾಷಾಂತರಗಳೇ. ಆದರೆ ಕವಿತಾಗುಣದಲ್ಲಿ ಇವು ಮೂಲ ಕೃತಿಗಳನ್ನು ಮೀರಿಸಿವೆ. ಹರವಿಲಾಸಂ ಎಂಬುದನ್ನೂ ಈತನ ಅತ್ಯುತ್ತಮ ಕೃತಿಯೆಂದು ಪರಿಗಣಿಸಲಾಗಿದೆ. ದ್ವಿಪದ ಛಂದಸ್ಸಿನಲ್ಲಿರುವ ಈತನ ಪಲ್‍ನಾಟಿ ವೀರಚರಿತ್ರ ಎಂಬ ಜಾನಪದ ಕಥನ ಕವನ ಬಹು ಜನಪ್ರಿಯವಾಗಿದೆ. ಸಾಮಾನ್ಯವಾಗಿ ಈತನ ಕೃತಿಗಳನ್ನೂ ಮುಖ್ಯವಾಗಿ ಈತನ ಶಿವರಾತ್ರಿ ಮಾಹಾತ್ಮ್ಯವೆಂಬುದನ್ನೂ ನೋಡಿದರೆ ಈತ ಶೈವಮತನಿಷ್ಠನಲ್ಲ ಮತ್ತು ಪ್ರಚಾರಕನೂ ಅಲ್ಲ.
	ಬಮ್ಮೆರಪೋತನ ಮನಸಾವಾಚಾಕರ್ಮಣಾ ಒಬ್ಬ ನಿಜವಾದ ಭಕ್ತ. ತೆಲುಗು ಸಾಹಿತ್ಯದಲ್ಲಿ ಅತ್ಯಂತ ಜನಪ್ರಿಯವಾದ ಈತನ ಭಾಗವತ ಕವಿತಾ ಕೌಶಲದಲ್ಲೂ ಜಾನ್ ನುಡಿಗಳಲ್ಲೂ ಉನ್ನತ ಭಾವನೆಗಳಲ್ಲೂ ಭಕ್ತಿಯ ಧ್ಯೇಯ ನಿಷ್ಠೆಗಳಲ್ಲೂ ಬಹು ಶ್ರೀಮಂತವಾಗಿದೆ. ಆದರೆ ಇಲ್ಲಿನ 12 ಸ್ಕಂಧಗಳನ್ನೂ ಒಬ್ಬನೇ ರಚಿಸಲಿಲ್ಲ. ಅವುಗಳಲ್ಲಿ ಕೆಲವನ್ನು ಈತನ ಶಿಷ್ಯರಾದ ನಾರಯ, ಗಂಗನ, ಸಿಂಗನ ಎಂಬುವರು ರಚಿಸಿದರೂ ಅಧಿಕ ಭಾಗ ಪೋತನನಿಂದ ರಚಿತವಾಗಿದೆ; ಆ ಭಾಗವೇ ಎಲ್ಲಕ್ಕಿಂತ ಉತ್ತಮವಾದ ಭಾಗ. ಅದರಲ್ಲೂ ಧ್ರುವೋಪಾಖ್ಯಾನಂ, ಗಜೇಂದ್ರಮೋಕ್ಷಂ, ಪ್ರಹ್ಲಾದಚರಿತರ, ವಾಮನಚರಿತ್ರ, ರುಕ್ಮಿಣೀಕಲ್ಯಾಣಂ ಎಂಬಿವು ಜನರ ಮೆಚ್ಚುಗೆಯನ್ನು ಬಹಳವಾಗಿ ಪಡೆದಿವೆ. ಕೊನೆಯದನ್ನು ಅನೇಕ ತೆಲುಗು ತರುಣಿಯರು ಮೆಚ್ಚುತ್ತಾರೆ. ಪೋತನ ತನ್ನ ಕೃತಿಯನ್ನು ರಾಮನಿಗೆ ಅರ್ಪಿಸಿದ್ದಾನೆ. ತಾನು ಬಡವನಾಗಿದ್ದರೂ ಶ್ರೀಮಂತ ಅಭಿಮಾನಿಗಳಿಗೆ ಅದನ್ನು ಅರ್ಪಿಸಲು ಆತ ಒಡಂಬಡಲಿಲ್ಲ.

ಅಣ್ಣಮಾಚಾರ್ಯ ತಾಳ್ಲಪಾಕಂ (1485-1503) (ನೋಡಿ- ಅಣ್ಣಮಾಚಾರ್ಯ,-ತಾಳ್ಲಪಾಕಂ) ಕೀರ್ತನೆಗಳು, ಭಾವಗೀತೆಗಳು, ಮತ್ತು ಭಕ್ತಿಗೀತೆಗಳು ಮುಂತಾದುವನ್ನು ರಚಿಸಿ ತೆಲುಗು ಸಾಹಿತ್ಯಕ್ಕೆ ಒಂದು ಹೊಸ ಸಂಪತ್ತನ್ನು ಕೊಟ್ಟಿದ್ದಾನೆ. ಇವೆಲ್ಲವೂ ತಿರುಮಲೆಯ ಶ್ರೀ ವೆಂಕಟೇಶ್ವರನ ಮೇಲೆ ರಚಿತವಾಗಿವೆ. ಈತ ತೆಲುಗಿನಲ್ಲೂ ಸಂಸ್ಕøತದಲ್ಲೂ ರಚಿಸಿರುವ ಕೀರ್ತನೆಗಳ ಸಂಖ್ಯೆ 32,000 ಎಂದು ಹೇಳಲಾಗಿದೆ.


3 ಪ್ರಬಂಧಗಳ ಕಾಲ: (1500-1750).[ಸಂಪಾದಿಸಿ]

ಇದು ತೆಲುಗು ಸಾಹಿತ್ಯದ ಸ್ವರ್ಣಯುಗ. ಪೂರ್ವಭಾಗವನ್ನು ರಾಯಲಯುಗ ಎಂದು ಕರೆಯುತ್ತಾರೆ. ಏಕೆಂದರೆ, ಆಗ ಕೃಷ್ಣದೇವರಾಯನ (ನೋಡಿ- ಕೃಷ್ಣದೇವರಾಯ) (1503-1530) ಆಳ್ವಿಕೆ ಪ್ರಾರಂಭವಾಯಿತು. ಆತನ ಆಸ್ಥಾನದಲ್ಲಿ ಅಷ್ಟದಿಗ್ಗಜಗಳೆಂದು ಪ್ರಸಿದ್ಧರಾದ ಎಂಟು ಕವಿಗಳಿದ್ದರು. ಅವರಲ್ಲಿ ಒಬ್ಬನಾದ ಪೆದ್ದನನೇ (ನೋಡಿ- ಅಲ್ಲಸಾನಿ-ಪೆದ್ದನ) ಆಗಿನ ರಾಷ್ಟ್ರಕವಿ. ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಕೃಷ್ಣದೇವರಾಯ ಅತ್ಯಂತ ಶ್ರೀಮಂತನೂ ಸಾಹಿತ್ಯ ಮತ್ತು ಕಲೆಗಳಿಗೆ ಅತ್ಯುದಾರವಾದ ಆಶ್ರಯದಾತನೂ ಆಗಿದ್ದ. ಸ್ವತಃ ಆತ ಘನ ವಿದ್ವಾಂಸ ಮತ್ತು ಕವಿ; ಆಮುಕ್ತಮೌಲ್ಯದ ಎಂಬ ಘನವಾದ ಪ್ರಬಂಧ ಆತ ರಚಿಸಿದ ಕೃತಿ. ಸಂಸ್ಕøತದಲ್ಲೂ ಆತ ಹಲವು ಗ್ರಂಥಗಳನ್ನು ಬರೆದಿದ್ದನೆಂದು ಹೇಳಲಾಗಿದೆ. ದುರದೃಷ್ಟಾವಶಾತ್ ಅವುಗಳಲ್ಲಿ ಒಂದೂ ಈಗ ಉಳಿದಿಲ್ಲ. ವಿಷ್ಣುಭಕ್ತಿಯನ್ನು ಉಕ್ಕಿಸುವ ಆತನ ಆಮುಕ್ತ ಮೌಲ್ಯದ ಎಂಬ ಕಾವ್ಯ ಶ್ರೇಷ್ಠ ಕವಿತೆಯ ವರ್ಗಕ್ಕೆ ಸೇರಿದೆ. ಅದರಲ್ಲಿ ಬರುವ ಕಲ್ಪನೆಗಳೂ ಕವಿಸಮಯಗಳೂ ವಿದ್ವಾಂಸರು ಮೆಚ್ಚುವಂತಿದೆ. ಅಲ್ಲಿ ಗೋಚರಿಸುವ ಪ್ರಕೃತಿ ವರ್ಣನೆಗಳು ಕವಿಯ ಕುಶಲನೋಟವನ್ನೂ ಪ್ರದರ್ಶಿಸುತ್ತವೆ. ತೆಲುಗು ಭಾಷೆಯನ್ನು ಕಂಡರೆ ಆತನಿಗೆ ತುಂಬ ಪ್ರೀತಿ. ಆತನ ಕವಿತೆಯೊಂದರಲ್ಲಿ ತೆಲುಗು ಬರುವ "ದೇಶಭಾಷಾಲಂದು ತೆಲುಗುಲೇಸ್ಸಾ" (ದೇಶ ಭಾಷೆಗಳಲ್ಲೆಲ್ಲ ತೆಲುಗು ಒಳ್ಳೆಯದು) ಎಂಬ ಸಾಲನ್ನು ಅಷ್ಟೇ ಹೆಮ್ಮೆಯಿಂದ ತೆಲುಗರೆಲ್ಲರೂ ಪದೇಪದೇ ಹೇಳುತ್ತಾರೆ. ರಾಷ್ಟ್ರಕವಿ ಅಲ್ಲಸಾನಿ ಪೆದ್ದನ ಸ್ವಾರೋಚಿಷ ಮನುಚರಿತ ಎಂಬುದನ್ನು ಪ್ರಬಂಧದ ರೂಪದಲ್ಲಿ ರಚಿಸಿದ. ತೆಲುಗು ಸಾಹಿತ್ಯದ ಪಂಚ ಮಹಾಕಾವ್ಯಗಳಲ್ಲಿ ಇದು ಅತ್ಯುತ್ತಮವೆಂದು ಪರಿಗಣಿತವಾಗಿದೆ. ಮಿಕ್ಕ ನಾಲ್ಕು ಯಾವುವೆಂದರೆ, ಶ್ರೀನಾಥನ ಶೃಂಗಾರನೈಷಧಂ, ಕೃಷ್ಣದೇವರಾಯನ ಆಮುಕ್ತ ಮೌಲ್ಯದ, ಭಟ್ಟುಮೂರ್ತಿ (ಈತನನ್ನು ರಾಮರಾಜ ಭೂಷಣನೆಂದೂ ಕರೆಯುತ್ತಾರೆ.) ವಸ್ತುಚರಿತ್ರ ಮತ್ತು ತೆನಾಲಿ ರಾಮಕೃಷ್ಣನ ಪಾಂಡುರಂಗ ಮಾಹಾತ್ಮ್ಯ. ಕೆಲವು ವಿದ್ವಾಂಸರು ಪಿಂಗಳಿಸೂರನ ಕಲಾಪೂರ್ಣೋದಯ ಎಂಬುದನ್ನೂ ಮತ್ತೆ ಕೆಲವರು ಚೇಮಕೂರಿ ವೆಂಕಟ ಕವಿಯ ವಿಜಯವಿಲಾಸಂ ಎಂಬುದನ್ನೂ ತೆನಾಲಿ ರಾಮಕೃಷ್ಣನ ಪಾಂಡುರಂಗ ಮಹಾತ್ಮ್ಯದ ಬದಲು ಹೇಳುತ್ತಾರೆ. ಇದರಿಂದ ಮೇಲೆ ಹೇಳಿ, ಏಳು ಗ್ರಂಥಗಳೂ ತೆಲುಗು ಸಾಹಿತ್ಯದಲ್ಲಿನ ಅತ್ಯುತ್ತಮ ಗ್ರಂಥಗಳು ಎಂಬುದು ಗೊತ್ತಾಗುತ್ತದೆ. ಮೊದಲೆರಡರ ವಿಷಯವನ್ನು ಹಿಂದೆಯೇ ಪ್ರಸ್ತಾಪಿಸಲಾಗಿದೆ. ಮಿಕ್ಕವನ್ನು ಯುಕ್ತ ಸಂದರ್ಭದಲ್ಲಿ ಪ್ರಸ್ತಾಪಿಸಲಾಗುತ್ತದೆ.

 	ಕೃಷ್ಣದೇವರಾಯ ತನ್ನನ್ನು ಆಂಧ್ರಕವಿತಾ ಪಿತಾಮಹ ಅಲ್ಲಸಾನಿ ಪೆದ್ದನಾರ್ಯ ಎಂದು ಸಾಮಾನ್ಯವಾಗಿ ಕರೆಯುತ್ತಿದ್ದನೆಂದು ಪೆದ್ದನ ಹೆಮ್ಮೆಯಿಂದ ತನ್ನೊಂದು ಪದ್ಯದಲ್ಲಿ ಹೇಳಿಕೊಳ್ಳುತ್ತಾನೆ. ಈತನ ಕಾವ್ಯದಲ್ಲಿ ಪಾತ್ರಗಳಿಗೆ ತಕ್ಕ ಭಾಷೆ ಉದ್ದಕ್ಕೂ ಉಚಿತವಾಗಿ ಪ್ರಯುಕ್ತವಾಗಿದೆ. ಅಲಂಕಾರಯುಕ್ತವಾದ ಶೈಲಿಯಿಂದಲೂ ಸಹಜವೂ ಮನಸೆಳೆಯುವಂಥವೂ ಆದ ಪ್ರಸಂಗೋಚಿತ ವರ್ಣನೆಗಳಿಂದಲೂ ರಚಿತವಾಗಿದೆ. 
 	ಪಾರಿಜಾತಾಪಹರಣಂ ಎಂಬ ಕೃತಿಯನ್ನು ರಚಿಸಿದ ನಂದಿತಿಮ್ಮನ, ಕಾಳಹಸ್ತೀಶ್ವರ ಮಾಹಾತ್ಮ್ಯಂ ಎಂಬುದನ್ನು ಬರೆದ ಧೂರ್ಜಟಿ, ರಾಜಶೇಖರಚರಿತ್ರಂ ಎಂಬುದನ್ನು ರಚಿಸಿದ ಮಾದಯಗಾರಿ ಮಲ್ಲನ, ರಾಮಾಭ್ಯುದಯವನ್ನು ಬರೆದ ಅಯ್ಯಲರಾಜು ರಾಮಭದ್ರಡು. ಪಾಂಡುರಂಗಮಾಹಾತ್ಮ್ಯದ ತೆನಾಲಿರಾಮಕೃಷ್ಣ ಕವಿ, ರಾಧಾಮಾಧವಂ ಎಂಬುದನ್ನು ರಚಿಸಿದ ಚಿಂತಲಪುಡಿ ಯೆಲ್ಲನ ಮತ್ತು ನಿರಂಕುಶೋಪಾಖ್ಯಾನದ ಕರ್ತೃ ಕಮದುಕೂರಿ ರುದ್ರಕವಿ- ಇವರು ಕೃಷ್ಣದೇವರಾಯನ ಆಸ್ಥಾನದ ಅಷ್ಟದಿಗ್ಗಜಗಳು, ವಸುಚರಿತ್ರೆಯನ್ನು ಬರೆದ ಭಟ್ಟುಮೂರ್ತಿ ಅಥವಾ ರಾಮ ರಾಜಭೂಷಣ ಮತ್ತು ಪಿಂಗಲಸೂರನ್ನ ಎಂಬಿಬ್ಬರನ್ನೂ ಅಷ್ಟದಿಗ್ಗಜಗಳ ಪಂಕ್ತಿಗೆ ಸಾಂಪ್ರದಾಯಿಕವಾಗಿ ಸೇರಿಸಿದ್ದರೂ ಐತಿಹಾಸಿಕವಾಗಿ ಅವರು ಕೃಷ್ಣದೇವನ ಕಾಲಕ್ಕೆ ಸೇರಿದವರಲ್ಲ. ಅವರು ಮುಂದಿನ ಕಾಲ, ಕವಿಗಳು. ಅಷ್ಟಮಹರ್ಷೀಕಲ್ಯಾಣಂ ಎಂಬುದನ್ನು ಬಹುಮಾನಿತನೂ ಆಗಿದ್ದ. ಆದರೆ ಆತ ಅಷ್ಟದಿಗ್ಗಜಗಳ ಪಂಕ್ತಿಗೆ ಸೇರಲಿಲ್ಲ. ಪ್ರಾಯಶಃ ಶ್ರೇಷ್ಠಕಾವ್ಯವೆನಿಕೊಳ್ಳುವುದಕ್ಕೆ ಆಗ ಯೋಗ್ಯವೆನಿಸದಿದ್ದ ದ್ವಿಪದಿಯಲ್ಲಿ ತನ್ನ ಕಾವ್ಯವನ್ನು ರಚಿಸಿದ್ದರಿಂದ ಅದು ಮಹಾಕಾವ್ಯಗಳ ಪಟ್ಟಿಗೆ ಸೇರದೆ ಹೋಗಿರಬಹುದು.
 	ಪಿಂಗಳಿ ಸೂರನ (1515-1560) ಅನೇಕ ಗ್ರಂಥಗಳನ್ನು ರಚಿಸಿದ್ದಾನೆ. ಅವುಗಳಲ್ಲಿ ಮೂರು ಪ್ರಧಾನವಾಗಿವೆ; ತೆಲುಗು ಸಾಹಿತ್ಯದಲ್ಲಿ ನಮಗೆ ತಿಳಿದಿರುವಂತೆ ಪ್ರಥಮ ದ್ವ್ಯರ್ಥಿ ಕಾವ್ಯವಾದ ರಾಘವಪಾಂಡವೀಯಂ (1545) ಉಷಾಪರಿಣಯದಂಥದೇ ಆದ ಕಥಾವಸ್ತುವುಳ್ಳ ಸುಪರಿಷ್ಕøತ ಪ್ರಬಂಧವಾದ ಪ್ರಭಾವತೀಪರಿಣಯಂ (1547) ಮತ್ತು ತೆಲುಗು ಸಾಹಿತ್ಯದ ಪಂಚಮಹಾಕಾವ್ಯಗಳಲ್ಲಿ ಒಂದು ಎಂದು ಕೆಲವರೆಣಿಸುವ ಕಲಾಪೂರ್ಣೋದಯಂ ಎಂಬ ಪ್ರಖ್ಯಾತ ಪ್ರಬಂಧ. ಇದರ ಓಘ ಪದ್ಯದಲ್ಲಿ ಬರೆದಿರುವ ಒಂದು ಕಾದಂಬರಿಯಂತಿದೆ. ವಸ್ತು ತುಂಬ ಹೊಸದು. ಆದರೆ ಪಾತ್ರಗಳು ಪೌರಾಣಿಕ ಹೆಸರುಗಳನ್ನು ತಳೆದಿವೆ. 
 	ಭಟ್ಟುಮೂರ್ತಿ ಅಥವಾ ರಾಮರಾಜ ಭೂಷಣ ಎಂಬ ಕವಿ (1520 - 1585) ಕೃಷ್ಣದೇವರಾಯನ ಅಳಿಯನಾದ ರಾಮರಾಜನ ಆಸ್ಥಾನದಲ್ಲಿದ್ದು ಅನೇಕ ಕಾವ್ಯಗಳನ್ನು ರಚಿಸಿದನೆಂದು ಹೇಳಲಾಗಿದೆ. ಆದರೆ ನಮಗೆ ದೊರೆತಿರುವುದು ಮೂರು ಮಾತ್ರ. 1 ಸರಸಭೂಪಾಲೀಯಂ ಎಂಬ ಉತ್ಕøಷ್ಟ ಅಲಂಕಾರಶಾಸ್ತ್ರ ಗ್ರಂಥ, 2 ತೆಲುಗು ಪಂಚಮಹಾಕಾವ್ಯಗಳಲ್ಲಿ ಒಂದೆಂದು ಪರಿಗಣಿತವಾದ ವಸುಚರಿತ, 3 ಎರಡನೆಯ ದ್ವ್ಯರ್ಥಿಕಾವ್ಯವಾದ ಹರಿಶ್ಚಂದ್ರನಳೋಪಾಖ್ಯಾನಂ. ಗಂಭೀರವಾದ ಶೈಲಿಗೂ ಘನವಾದ ಉಕ್ತಿಗೂ ಈತನ ಕಾವ್ಯಗಳು ಪ್ರಸಿದ್ಧವಾಗಿವೆ.

ತೆಲುಗು ಸಾಹಿತ್ಯದ ದಾಕ್ಷಿಣಾತ್ಯ ಪಂಥ (1530-1750):[ಸಂಪಾದಿಸಿ]

ತೆಲುಗು ಸಾಹಿತ್ಯ ತಂಜಾವೂರು, ಮಧುರೈ ಪುದುಕೋಟ ಮತ್ತು ಮೈಸೂರುಗಳಲ್ಲಿ ಆಯಾ ಅರಸರ ಆಶ್ರಯದಲ್ಲಿ ಬೆಳೆಯಿತು. ದಾಕ್ಷಿಣಾತ್ಯ ಪಂಥದ ವಿಶಿಷ್ಟ ಲಕ್ಷಣಗಳಲ್ಲಿ ಈ ಕೆಳಗಿನವು ಗಮನಾರ್ಹವಾಗಿವೆ. ಇಲ್ಲಿನ ಅರಸರಲ್ಲೂ ಅಬ್ರಾಹ್ಮಣರಲ್ಲೂ ಹೆಂಗಸರಲ್ಲೂ ಕವಿಗಳು ಮುಖ್ಯ ತೆಲುಗು ಸೀಮೆಯಲ್ಲಿರುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ದ್ವಿಪದ ಮತ್ತು ಇತರ ದೇಸೀ ಛಂದಸ್ಸುಗಳ ಬಳಕೆ ಇಲ್ಲಿ ಹೆಚ್ಚಾಗಿದೆ; ಜೀವಂತವಾದ ಆಡು ಭಾಷೆಗೆ ಇಲ್ಲಿ ವಿಶೇಷ ಪ್ರಾಶಸ್ತ್ಯ ದೊರೆತಿದೆ. ಸಂಗೀತ, ಹಾಡು ಮತ್ತು ಯಕ್ಷಗಾನಗಳು ಸಾಹಿತ್ಯ ಭಾಗಗಳಾಗಿ ಹೆಚ್ಚು ಪ್ರಾಶಸ್ತ್ಯ ಪಡೆದಿವೆ. ಜನಗಳ ವಿಶೇಷ ಮೆಚ್ಚುಗೆಗೆ ಪಾತ್ರವಾಗಿ ಶೃಂಗಾರ ರಸ ಇಲ್ಲಿ ಮೆರೆಯುತ್ತಿದೆ. ಮನೋಹರವಾದ ಶಬ್ದಗಳಲ್ಲಿ ಹೇಳಿದ್ದಾದರೆ ಸೂಕ್ಷ್ಮಭಾವಗಳಿಗೂ ಜನರು ಅಸಹ್ಯಪಡುತ್ತಿರಲ್ಲಿಲ್ಲ; ಸಂಗೀತ, ಕಲೆ, ಕಸಬು ಜೀವನಚರಿತ್ರೆ ಮುಂತಾದ ಜ್ಞಾನವಾಹಿನಿಗಳಾದ ಪುಸ್ತಕಗಳೂ ಇಲ್ಲಿ ರಚಿತವಾಗಿ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಮಾರ್ಗಗಳನ್ನು ತೆರೆದಿವೆ. ಯಕ್ಷಗಾನಗಳ ಪ್ರವಾಹವೇ ಹೊರಟಿದೆ. ಗದ್ಯಸಾಹಿತ್ಯ ಬೆಳೆದಿದೆ.

ತಂಜಾವೂರು ಮಧುರೆ ಪುದುಕೋಟ ಮತ್ತು ಮೈಸೂರಿನ ಕೆಲವು ಶ್ರೇಷ್ಠ ಕವಿಗಳನ್ನೂ ಅವರ ಕೃತಿಗಳನ್ನು ಕುರಿತು ಸಂಕ್ಷಿಪ್ತವಾಗಿ ಕೆಳಗೆ ವಿವರಿಸಲಾಗಿದೆ.

 	ತಂಜಾವೂರಿನ ನಾಯಕ ಅರಸರಲ್ಲಿ ಸಂಸ್ಕøತದಲ್ಲೂ ಘನವಿದ್ವಾಂಸನೂ ಮತ್ತು ಸಂಗೀತ ಶಾಸ್ತ್ರಜ್ಞನೂ ಆದ ರಘುನಾಥ (1600-1631) ವಾಲ್ಮೀಕಿಚರಿತ್ರೆ ಮತ್ತು ಇತರ ಕಾವ್ಯಗಳನ್ನು ಗಜೇಂದ್ರಮೋಕ್ಷ ಮುಂತಾದ ಯಕ್ಷಗಾನಗಳನ್ನೂ ಅಚ್ಯುತಾಭ್ಯುದಯದಂಥ (ತನ್ನ ತಂದೆಯ ಜೀವನಚರಿತ್ರೆ) ದ್ವಿಪದ ಕಾವ್ಯಗಳನ್ನೂ ರಚಿಸಿದ. ಈತನ ಆಸ್ಥಾನದಲ್ಲಿ ನೈಪಧಪಾರಿಜಾತೀಯಂ ಎಂಬ ದ್ವ್ಯರ್ಥಿಕಾವ್ಯವನ್ನು ಬರೆದ ಕೃಷ್ಣಾಧ್ವರಿಯೂ ಶ್ರೇಷ್ಠ ಕಾವ್ಯಗಳೆನಿಸಿದ ವಿಜಯ ವಿಲಾಸಂ ಹಾಗೂ ಸಾರಂಗಧರ ಚರಿತ್ರ ಎಂಬುದನ್ನು ಬರೆದ ಚೆಮಕುರ ವೆಂಕಟ ರಾಜು ಎಂಬುವರಿದ್ದರು. ಪೌರಾಣಿಕ ಕಥೆಗಳನ್ನು ತೆಗೆದುಕೊಂಡು ಅನೇಕ ಯಕ್ಷಗಾಯನಗಳನ್ನು ರಘುನಾಥನಾಯಕಾಭ್ಯುದಯಂ ಮುಂತಾದ ದ್ವಿಪದ ಕಾವ್ಯಗಳನ್ನೂ ಅನೇಕ ರಗಡೆಗಳನ್ನೂ ಗೇಯಗಳನ್ನೂ ರಚಿಸಿದ್ದಾನೆ. ವಿಜಯರಾಘವ (1633-1673). ಈತನ ಆಸ್ಥಾನದಲ್ಲಿ ರಾಜಗೋಪಾಲ ವಿಲಾಸಪ್ರಬಂಧಂ ಎಂಬುದನ್ನು ಬರೆದ ಚಿಂಗಲ್ವಕಾಲ ಮತ್ತು ಸಂಸ್ಕøತ ಪ್ರಾಕೃತ ತೆಲುಗುಗಳಲ್ಲಿ ಒಳ್ಳೆಯ ಪಂಡಿತಳಾಗಿದ್ದು ಅನೇಕ ಕಾವ್ಯಗಳನ್ನು ಮನ್ನಾರದಾಸವಿಲಾಸಂ ಎಂಬಂಥ ಯಕ್ಷಗಾನಗಳನ್ನೂ ಬರೆದ ರಂಗಾಜಮ್ಮ ಎಂಬ ನಾಯಕಸಾನಿಯೂ ಇದ್ದರು. ನಾಯಕ ಅರಸರಂತೆ ಸಹಜಿ ಮಹಾರಾಜನೂ (1664-1712) ಅನೇಕ ಗ್ರಂಥಗಳನ್ನೂ ವಲ್ಲೀಕಲ್ಯಾಣಂ, ವಿಷ್ಣುಪಲ್ಲಕ್ಕಿಸೇನಾ ಪ್ರಬಂಧಂ ಮುಂತಾದ ಅನೇಕ ಗೇಯನಾಟಕಗಳನ್ನೂ ರಚಿಸಿದ್ದಾನೆ. ಈತ ಘನವಿದ್ವಾಂಸ. ಕವಿ. ತೆಲುಗು ಸಾಹಿತ್ಯವನ್ನು ಚೆನ್ನಾಗಿ ಪೋಷಿಸಿ ಬೆಳೆಸಿದವ. ತುಳಜಾಜೀ (ತುಕ್ಕೋಜಿ) ಮಹಾರಾಜ (1782-1736) ಶಿವಕಾಮಸುಂದರೀಪರಿಣಯಂ ಎಂಬುದನ್ನು ರಚಿಸಿದ್ದಾನೆ.
 	ಮಧುರೆಯ ನಾಯಕ ಅರಸರ ಆಳ್ವಿಕೆಯಲ್ಲಿ (1529-1736) ತೆಲುಗು ಸಾಹಿತ್ಯ ಕಾವ್ಯದೊಂದಿಗೆ ಗದ್ಯವನ್ನೂ ಬೆಳೆಸಿಕೊಂಡು ತನ್ನ ಅಭಿವೃದ್ಧಿಯ ವಿಶೇಷ ಲಕ್ಷಣವನ್ನು ಮೆರೆಸಿತು. ವಿಶ್ವನಾಥನಾಯಕನ ಕಾಲದಲ್ಲಿ (1529-1564) ಸ್ತಾನಪತಿ ರಾಯವಾಚಕಂ ಎಂಬುದನ್ನು ಬರೆದ. ಅದರ ಪೂರ್ವಘಟ್ಟದಲ್ಲಿ ಗದ್ಯದ ಸ್ವರೂಪ ಹೇಗಿರುತ್ತೆಂಬುದಕ್ಕೆ ಇದು ಮಾದರಿಯಾಗಿದೆ ಎನ್ನಬಹುದು. ಘನಕವಿಯೂ ವೀಣಾವಾದಕನೂ ಆದ ಶ್ರೀಕಾಮೇಶ್ವರ ಕವಿ (1623-1670) ಸತ್ಯಭಾಮಾ ಸಾಂತ್ವನಂ ಎಂಬುದನ್ನು ಬರೆದ. ಸಾಂತ್ವನ ಕಾವ್ಯಶ್ರೇಣಿಯ ಪ್ರಥಮ ಕೃತಿಯಾಗಿದೆ. ಗಣಪವರಪು ವೆಂಕಟಕವಿ (1674) ಪ್ರಬಂಧರಾಜವೆಂಕಟೇಶ್ವರ ವಿಜಯಂ ಎಂಬುದನ್ನು ರಚಿಸಿದ. ಇದು ಈತನ ದೃಢ ವಿದ್ವತ್ತನ್ನೂ ತೆಲುಗು ಮತ್ತು ಸಂಸ್ಕøತದಲ್ಲಿ ಈತನ ಭಾಷಾ ಪ್ರಭುತ್ವವನ್ನು ಪ್ರಬಂಧದ ರಚನೆಯಲ್ಲಿ ಬಗೆಬಗೆಯ ಚಮತ್ಕಾರ ಕೌಶಲಗಳನ್ನೂ ಸಾರಂಗಧರಚರಿತ್ರವನ್ನೂ ಶೃಂಗಾರರಸಭರಿತವಾದ ಅಹಲ್ಯಾ ಸಂಕ್ರಂದಂನಂ ಎಂಬ ಕಾವ್ಯವನ್ನೂ ರಚಿಸಿದ್ದಾನೆ.
 	ಪುದುಕೋಟ ಅರಸನ ಕಾಲದಲ್ಲಿ (1682-1839) ರಾಯರಘುನಾಥನ ಪಾರ್ವತೀಪರಿಣಯ ಕವಿತಾ ಕೌಶಲ್ಯಗಳಿಂದಲೂ ಸ್ವೋಪಜ್ಞವಾದ ವರ್ಣನೆಗಳಿಂದಲೂ ತುಂಬಿರುವ ಕಾವ್ಯವೆಂದು ಪರಿಗಣಿತವಾಗಿದೆ.

	ಮೈಸೂರು ಅರಸನ ಕಾಲಕ್ಕೆ ಬಂದರೆ ಚಿಕ್ಕದೇವರಾಯನ ಕಾಲದಲ್ಲಿ (1672-1704) ಕೊರವಂಜಿ ಮಾದರಿಯ ಯಕ್ಷಗಾನಗಳು ಬೆಳೆದವು. 1537ರಲ್ಲಿ ಬೆಂಗಳೂರನ್ನು ಕಟ್ಟಿ ಪ್ರಖ್ಯಾತನಾದ ಪೆದ್ದ ಕೆಂಪೇಗೌಡ ಆಗ ಶಿವನ ಸಮುದ್ರವೆಂದು ಹೆಸರಾಂತ ಪ್ರಾಂತ್ಯವನ್ನು ಆಳುತ್ತಿದ್ದ (1513-1569). ಈತ ಗಂಗಾಗೌರೀ ವಿಲಾಸವೆಂಬ ಒಳ್ಳೆಯ ಯಕ್ಷಗಾನವನ್ನು ರಚಿಸಿದ. ಕಲುವ ವೀರರಾಜು (1680-1750) ಮಹಾಭಾರತವನ್ನು (1730) ಪದ್ಯಗಂಧಿಯಾದ ಗದ್ಯದಲ್ಲಿ ಬರೆದ. ಆತನ ಮಗ ನಂಜರಾಜು ಹಾಲಾಸ್ಯಮಹಾತ್ಮ್ಯಂ ಮತ್ತು ಕಾಶೀಮಹಿಮದರ್ಪಣಂ ಎಂಬುದನ್ನು ದೇಸೀ ಗದ್ಯದಲ್ಲಿ ರಚಿಸಿದ. ಬಾಲಸರಸ್ವತಿ ಎಂಬ ಬಿರುದಿನ ಕೋಡೂರಿ ವೆಂಕಟಾಚಲ ಕವಿ (1650- 1700) ಶಿವರಹಸ್ಯಖಂಡಂ ಎಂಬುದನ್ನು ಅಲಂಕಾರಯುಕ್ತವಾದ ಶೈಲಿಯಲ್ಲಿ ಮತ್ತು ಕವಿತೆ ಮಿಂಚುವಂತೆ ರಚಿಸಿದ.

ಈಚಿನ ಪ್ರಬಂಧಕಾಲ (1700-1850):[ಸಂಪಾದಿಸಿ]

ಮೊಘಲರು ದಕ್ಷಿಣಕ್ಕೆ ದಾಳಿಯಿಡುತ್ತಲೂ ತತ್ಪರಿಣಾಮವಾಗಿ ಸಾಹಿತ್ಯಕ್ಕೆ ಆಸರೆ ತಪ್ಪಿಹೋಗಿ ಅದರ ಕ್ಷೀಣದಶೆ ಪ್ರಾರಂಭವಾಯಿತು. ದೀನರಾಜ ಜನ ಸ್ವಾವಲಂಬನ ತೊರೆದು ದೇವರುಗಳಿಗೆ ಮೊರೆಯಿಡಲು ಪ್ರಾರಂಭಿಸಿದರು. ಈ ಕಾಲದ ಮೂರು ಶತಕಗಳು ತೆಲುಗರ ಅತ್ಯಂತ ಹೀನದಶೆಯನ್ನು ತೋರಿಸುತ್ತವೆ. ನರಸಿಂಹಕವಿ ವಿರಚಿತ (1750) ಭದ್ರಾದ್ರಿರಾಮ ಶತಕಂ ಇದು ಮುಸಲ್ಮಾನರು ಮುತ್ತಿಗೆ ಹಾಕಿ ಊರುಗಳನ್ನು ಕೊಳ್ಳೆಹೊಡೆದು ಭದ್ರಾಚಲದ ದೇವಸ್ಥಾನಗಳನ್ನು ನಾಶಪಡಿಸಲು ಯತ್ನಿಸಿದಾಗ ರಚಿತವಾದುದು. ಕಾಸುಲ ಪುರುಷೋತ್ತಮ ವಿರಚಿತ ಆಂಧ್ರ ನಾಯಕಶತಕಂ ಇಂಥದೇ ಒಂದು ಸಂದರ್ಭದಲ್ಲಿ (1725) ರಚಿತವಾದುದು. ಇಲ್ಲಿನ ಆಶ್ಚರ್ಯವೇನೆಂದರೆ ಈ ಮೂರು ಸ್ಥಳಗಳಲ್ಲೂ ಸಂಭವಿಸಬಹುದಾದ ದುರಂತ ತಪ್ಪಿಹೋಯಿತು. ನಂಬುವ ಜನ, ದೇವರು ಇವರು ಮೊರೆಯನ್ನಾಲಿಸಿದನೆಂದು ಹೇಳುತ್ತಾರೆ.
 	ಈ ಹೀನಗಾಲದಲ್ಲಿ ಮೂವರು ಶ್ರೇಷ್ಠಕವಿಗಳು ಕಾಣಿಸಿಕೊಳ್ಳುತ್ತಾರೆ. ಆನೇಕ ಗ್ರಂಥಗಳನ್ನು ರಚಿಸಿರುವ ಕೂಚಿಮಂಚಿ ತಿಮ್ಮಕವಿ ರುಕ್ಮಿಣೀಪರಿಣಯವನ್ನೂ (1716) ತರುವಾಯ ರಸಿಕಜನಮನೋಭಿರಾಮಂ ಮುಂತಾದ ಅನೇಕ ಶೃಂಗಾರರಸದ ಕೃತಿಗಳನ್ನೂ ಮತ್ತು ಅಚ್ಚ ತೆಲುಗಿನಲ್ಲಿ ನೀಲಸುಂದರೀಪರಿಣಯಂ ಎಂಬುದನ್ನು ಬರೆದಿದ್ದಾನೆ. ಶಿವಭಕ್ತನಾಗಿ ಈತ ಶಿವಲೀಲಾವಿಲಾಸಂ ಎಂಬುದನ್ನು ರಚಿಸಿದ (1756).

	18ನೆಯ ಶತಮಾನದ ಮಧ್ಯಭಾಗದಲ್ಲಿ ಜೀವಿಸಿದ್ದ ಕಂಕಂಟಿ ಪಾಪರಾಜು ತೆಲುಗು ಸಾಹಿತ್ಯದಲ್ಲಿ ಮಹಾಪ್ರಬಂಧವೆಂದು ಪರಿಗಣಿತವಾದ ಉತ್ತಮರಾಮಾಯಣವನ್ನು ಬರೆದ. ಆದಿದಂ ಸೂರ ಕವಿ (1720-1785) ಕವಿಜನ ರಂಜನಂ ಎಂಬುದನ್ನು ರಚಿಸಿದ. ಇದರಲ್ಲಿ ಕಂಡು ಬರುವ ಕಾವ್ಯಕಲೆ ಭಟ್ಟುಮೂರ್ತಿಯ ಪ್ರಖ್ಯಾತವಾದ ವಸುಚರಿತ್ರದ ಕಾವ್ಯಕಲೆಯಂತೆ ಇರುವದರಿಂದ ಇದನ್ನು ಪಿಳ್ಳುವಸುಚರಿತ್ರವೆಂದು ಕರೆಯುತ್ತಾರೆ. ಈತ ವ್ಯಾಕರಣಕ್ಕೂ ಅಲಂಕಾರ ಶಾಸ್ತ್ರಕ್ಕೂ ಸಂಬಂಧಪಟ್ಟಂತೆ ಕವಿಸಮಸ್ಯಾವಿಚ್ಚದಂ, ಚಂದ್ರಲೋಕಂ ಎಂಬೆರಡು ಗ್ರಂಥಗಳನ್ನೂ ಬರೆದಿದ್ದಾನೆ. ಸರ್ವಕಾಮದ ಪರಿಣಯಂ ಎಂಬುದನ್ನು ರಚಿಸಿದ ಶಿಷ್ಟು ಕೃಷ್ಣಮೂರ್ತಿ (1790-1870) ಮತ್ತು ರಾವಣ ದಮ್ಮೀಯಂ ಎಂಬ ಪ್ರತಿಸ್ಪರ್ಧಿಯನ್ನೂ ಈ ಸಂದರ್ಭದಲ್ಲಿ ಹೆಸರಿಸಬಹುದು.
   	 ತೆಲುಗುಸಾಹಿತ್ಯದಲ್ಲಿ ಅನೇಕ ಶತಕಗಳಿದ್ದು ಅವುಗಳಲ್ಲಿ ವೇಮನಶತಕ ವಿಲಕ್ಷಣವಾಗಿದೆ. ಇದರ ಭಾಷೆ ಸರಳ, ಮಾತು ಬಿಗಿ, ಭಾವ ಗಂಭೀರ, ವಿಷ್ಣುವಿನ ಮೇಲಿನ ಕೃಷ್ಣಶತಕ, ರಾಯಣಶತಕಂ, ದಾಶರಥಿಶತಕಂ, ಶಿವನಮೇಲಿನ ವೃಷಾಧಿಪ ಶತಕಂ, ಕಾಲಹಸ್ತೀಶ್ವರ ಶತಕಂ ಮುಂತಾದವುಗಳಲ್ಲದೆ ಇತರ ಶತಕಗಳೂ ಇವೆ.


ಆಧುನಿಕ ಕಾಲ (1850-1960):[ಸಂಪಾದಿಸಿ]

ಪೋರ್ಚುಗೀಸರು, ಫ್ರೆಂಚರು ಮತ್ತು ಬ್ರಿಟಿಷರು ಈ ದೇಶಕ್ಕೆ ಬಂದು ರೂಢಮೂಲರಾದಾಗ ಭಾರತದಲ್ಲಿ ಆಧುನಿಕ ಭಾವನೆ ಉದಿಸಿತು. ಪರದೇಶೀ ಶಬ್ದಗಳಿಂದ ಭಾಷೆ ಶ್ರೀಮಂತವಾಯಿತು. ಬ್ರಿಟಿಷರು ಮೇಲೇರಿ ಇಂಗ್ಲೀಷರ ಮೂಲಕ ವಿದ್ಯಾಭ್ಯಾಸವನ್ನು ನಡೆಸಲೆಳಸಿದುದು ಇಂಗಿಷ್ ಸಾಹಿತ್ಯ ವ್ಯಾಸಂಗ ಮತ್ತು ಪಾಶ್ಚಾತ್ಯ ಭಾವನೆ ಮತ್ತು ವಿಚಾರಗಳೊಡನೆ ನಿಕಟ ಸಂಪರ್ಕ ಏರ್ಪಟ್ಟಿದ್ದು -ಇವುಗಳ ಫಲವಾಗಿ ಆಧುನಿಕ ಸಾಹಿತ್ಯದಲ್ಲಿ ಹೊಸ ಪ್ರವೃತ್ತಿಗಳೆದ್ದು ಮುಂಬರದುವು. ವಿಲಿಯಂ ಬ್ರೌನ್, ಕ್ಯಾಂಬೆಲ್ ಮತ್ತು ಸಿ. ಪಿ. ಬ್ರೌನ್ ಎಂಬಂಥ ಘನ ವಿದ್ವಾಂಸರು ತೆಲುಗು ಶಬ್ದಕೋಶಗಳನ್ನೂ ಆಧುನಿಕ ಸರಣಿಯಲ್ಲಿ ವ್ಯಾಕರಣಗಳನ್ನೂ ಪ್ರಕಟಿಸಿ ತೆಲುಗು ಭಾಷೆಗೆ ಮಹೋಪಕಾರ ಮಾಡಿದರು. ಕ್ರೈಸ್ತ ಮಿಷನರಿ ಸಂಸ್ಥೆಗಳು ಅಚ್ಚುಕೂಟಗಳನ್ನು ಸ್ಥಾಪಿಸಿದವು. ವಿದ್ಯಾಭ್ಯಾಸವನ್ನು ಕುದುರಿಸಿದವು. ಪುಸ್ತಕಗಳ ಪ್ರಕಟಣೆಗೆ ಪ್ರೋತ್ಸಾಹವಿತ್ತನು. ಸಿ. ಪಿ. ಬ್ರೌನ್ ಹಳೆಯ ಪ್ರೌಢಗ್ರಂಥಗಳನ್ನು ಪ್ರಕಟಿಸಿದನಲ್ಲದೆ ಆಧುನಿಕ ಗದ್ಯ ಸಾಹಿತ್ಯಕ್ಕೂ ಪ್ರೋತ್ಸಾಹ ಕೊಟ್ಟ. ಕೆ. ವೀರೇಶಲಿಂಗಂ ಪಂತುಲು (1847-1919) ತಾನು ಹಳೆಯ ಮಾದರಿಯನ್ನು ಸಂಪೂರ್ಣವಾಗಿ ಬಿಡದಿದ್ದರೂ ಹೊಸ ಪ್ರವೃತ್ತಿಯನ್ನು ಸಂಸ್ಥಾಪಿಸಿದನೆಂಬ ಕೀರ್ತಿಗೆ ಭಾಗಿಯಾಗಿದ್ದಾನೆ. ಕಾದಂಬರಿಗಳು, ಸಣ್ಣ ಕಥೆಗಳು, ನಾಟಕಗಳು, ನಗೆನಾಟಕಗಳು, ಪ್ರಬಂಧಗಲು, ಚಿಕ್ಕ ಪದ್ಯಗಳು, ಸಾಹಿತ್ಯವಿಮರ್ಶೆಗಳು, ಜೀವನ ಚರಿತ್ರೆಗಳು, ಆತ್ಮಚರಿತ್ರೆ ಮತ್ತು ತೆಲುಗು ಕವಿಗಳ ಚರಿತ್ರೆ-ಇವುಗಳನ್ನೆಲ್ಲ ಮೊದಲು ಬರೆಯಲು ತೊಡಗಿದವನು ಈತನೇ ಎಂದು ಹೇಳಬಹುದು. ಆಧುನಿಕ ತೆಲುಗು ಸಾಹಿತ್ಯದ ಯುಗಕರ್ತನೆಂದು ಈತನನ್ನು ಪರಿಭಾವಿಸಲಾಗಿದೆ. ಇಂಗ್ಲಿಷ ಸಾಹಿತ್ಯದಲ್ಲಿನ ಅನೇಕ ಗ್ರಂಥಗಳು, ಅದರಲ್ಲೂ ಮುಖ್ಯವಾಗಿ ಷೇಕ್ಸಪಿಯರನ ನಾಟಕಗಳು- ತೆಲುಗಿಗೆ ಪರಿವರ್ತಿತವಾಗಿವೆ. ಕಾಲಕ್ರಮೇಣ ಆಧುನಿಕ ಸರಣಿಯಲ್ಲಿ ಗದ್ಯ ರಚಿತವಾಗತೊಡಗಿತು. 1920ರಿಂದೀಚೆಗೆ ಆಧುನಿಕ ತೆಲುಗುಚಳುವಳಿಯ ಫಲವಾಗಿ ಆಡುಮಾತನ್ನೇ ಎಲ್ಲ ತರದ ಗದ್ಯ ಸಾಹಿತ್ಯಕ್ಕೂ ಬಳಸಲಾಯಿತು.

 	ಈ ಶತಮಾನದ ಆದಿಭಾಗದಲ್ಲಿ ಕಾವ್ಯಕ್ಷೇತ್ರದಲ್ಲಿ ಹೊಸ ಮಾದರಿಗಳಾದ ಸಣ್ಣ ಕವಿತೆಗಳು, ಭಾವಗೀತೆಗಳು, ಅಂತೆಯೇ ಕಥನಕವನಗಳು, ಶೋಕಗೀತಗಳು, ವಿಕಟಾನುಕರಣಗಳು, ವಿಡಂಬನೆಗಳು, ಆಧ್ಯಾತ್ಮಿಕ ಮತ್ತು ದಾರ್ಶನಿಕ ಕವಿತೆಗಳು ಮುಂತಾದುವುಗಳು ತಲೆದೋರಿದವು. ಗದ್ಯಕ್ಷೇತ್ರದಲ್ಲಿ ಕಥೆ, ಪ್ರಬಂಧಗಳು, ಸಾಹಿತ್ಯ ವಿಮರ್ಶೆ, ಚರಿತ್ರೆ ಮತ್ತು ರಾಜ್ಯಶಾಸ್ತ್ರಗಳಿಗೆ ಸಂಬಂಧಪಟ್ಟ ಪಠ್ಯ ಪುಸ್ತಕಗಳು, ವೈಜ್ಞಾನಿಕ ಕೃತಿಗಳು, ಜೀವನಚರಿತ್ರೆಗಳು, ಆತ್ಮಕಥೆಗಳು, ಜ್ಞಾನಪ್ರಸಾರದ ಪುಸ್ತಕಗಳು, ವಿಶ್ವಕೋಶಗಳು, ತೆಲುಗುಕವಿಗಳ ಮತ್ತು ಸಾಹಿತ್ಯ ಚರಿತ್ರೆ-ಮುಂತಾದವು ಬಂದಿವೆ. 1500ಕ್ಕೂ ಹೆಚ್ಚಿನ ದೊಡ್ಡ ಚಿಕ್ಕ ನಾಟಕಗಳು ಏಕಾಂಕಗಳೂ ರಚಿತವಾಗಿವೆ. ಹರಿಕಥೆಗಳ ಮತ್ತು ಬೊರ್ರ ಕಥೆಗಳ ರಚನೆಗೆ ತೆಲುಗುಸಾಹಿತ್ಯದ ವಿಶಿಷ್ಟ ಪ್ರಕಾರವಾಗಿದೆ. ಆಧುನಿಕ ರೀತಿಯಲ್ಲಿ ಮಕ್ಕಳಸಾಹಿತ್ಯ ನಿರ್ಮಾಣ ಪ್ರಾರಂಭವಾಗಿ (1910) ದಿನೇದಿನೇ ಬೆಳೆಯುತ್ತಿದೆ. 1900ರಲ್ಲಿ ತುಂಬ ವಿರಳವಾಗಿದ್ದ ಪತ್ರಿಕಾ ಸಾಹಿತ್ಯ ತುಂಬ ಚೆನ್ನಾಗಿ ಅಭಿವೃದ್ದಿಸಿದೆ. 1900ರಲ್ಲಿ ಎಲ್ಲೋ ಕೆಲವು 

ಕವಯತ್ರಿಯರಿದ್ದರು. ಈಗ ಅವರ ಸಂಖ್ಯೆ 150ಕ್ಕೂ ಹೆಚ್ಚಾಗಿದೆ.

 	ಈಗಿನ ಕಾಲದ ಬರಹಗಾರರ ಕೃತಿಗಳನ್ನು ಸಮೀಕ್ಷಿಸುವುದು ಅಸಾಧ್ಯವಾದ ಕೆಲಸ. ಈ ನಾಡಿನ ಗಮನಾರ್ಹರಾದ ಕವಿಗಳು, ನಾಟಕಕಾರರು, ಪ್ರಬಂಧಕಾರರು, ಇತರ ಬರೆಹಗಾರರ ಹೆಸರನ್ನೂ ಹೇಳುವುದಕ್ಕಾದರೂ ಇಲ್ಲಿ ಸ್ಥಳಾವಕಾಶವಿಲ್ಲ. ಆದ ಪ್ರಯುಕ್ತ ಅತ್ಯುಚ್ಚಸ್ಥಾನದಲ್ಲಿರುವ ಕೀರ್ತಿವೆತ್ತ ಲೇಖಕರನ್ನು ಕುರುತು ಮಾತ್ರ ಇಲ್ಲಿ ಹೇಳಲಾಗಿದೆ.
 	ಪ್ರಾಚೀನ ಪ್ರೌಢಕೃತಿಗಳ ಸಂಪ್ರದಾಯವನ್ನು ಸಂಪೂರ್ಣವಾಗಿ ಅಥವಾ ಸಂಪೂರ್ಣವೆನಿಸಬಹುದಾದಷ್ಟು ಮಟ್ಟಿಗೆ ಅನುಸರಿಸಿರುವ ಅತ್ಯುತ್ತಮ ಪ್ರತಿಭಾ ಸಂಪನ್ನರಾದ ಆಧುನಿಕ ಕವಿಗಳನ್ನು ಮೊದಲು ಎತ್ತಿಕೊಳ್ಳೋಣ. ಬಿಲ್ಲೇಶ್ವರೀಯಂ ಮತ್ತು ಮಂಗಳಗಿರಿ ಮಾಹಾತ್ಮ್ಯಂ ಎಂಬ ಕೃತಿಗಳನ್ನು ರಚಿಸಿದ ಕೊಕ್ಕೊಂಡ ವೆಂಕಟರತ್ನಂ (1842-1915) (ಈತ ಸಾಧಾರಣ ಮಾತುಕಥೆಗಳಲ್ಲೂ ಕಾವ್ಯ ಭಾಷೆಯನ್ನೇ ಉಪಯೋಗಿಸುತ್ತಿದ್ದ); ಅನೇಕ ಹಾಡುಗಳನ್ನು ರಚಿಸಿ ದೇವೀ ಭಾಗವತವನ್ನೂ ಇತರ ಸಂಸ್ಕøತ ನಾಟಕಗಳನ್ನೂ ಭಾಷಾಂತರಿಸಿರುವ ದಾಸು ಶ್ರೀರಾಮುಲು (1846-1908); ಮಹೇಂದ್ರ ವಿಜಯದ ಕರ್ತೃದೇವುಲಪಲ್ಲಿ ಸುಬ್ಬಯ್ಯಶಾಸ್ತ್ರಿ (1854-1909); ತನ್ನ ಭಕ್ತ ಚಿಂತಾಮಣಿ ಎಂಬ ಗ್ರಂಥಕ್ಕೆ ಪ್ರಖ್ಯಾತನಾದ ವದ್ದಡಿ ಸುಬ್ಬರಾಯಡು (1854-1938); ಮಹಾಭಾರತ, ಭಾಗವತ ಮತ್ತು ರಾಮಾಯಣ ಮಹಾಕಾವ್ಯಗಳನ್ನು ಮತ್ತು 150ಕ್ಕೂ ಮಿಕ್ಕಿನ ಕೃತಿಗಳನ್ನು ರಚಿಸಿರುವ ಎರಡನೆಯ ಆಂಧ್ರರಾಷ್ಟ್ರಕವಿಯಾದ ಶ್ರೀಪಾದ ಕೃಷ್ಣಮೂರ್ತಿಶಾಸ್ತ್ರಿ (1866-1960); ಅಷ್ಟಾವಧಾನ, ಶತಾವಧಾನಗಳನ್ನು ಜೊತೆಗೂಡಿ ಪ್ರದರ್ಶಿಸುತ್ತಿದ್ದುದಲ್ಲದೇ, ದೇವಿ ಭಾಗವತಂ, ಬುದ್ದ ಚರಿತೆ, ಶ್ರವಣಾನಂದಂ ಮುಂತಾದ ನೂರಕ್ಕೂ ಹೆಚ್ಚಿನ ಕೃತಿಗಳನ್ನು ಜೊತೆಗೂಡಿಯೇ ರಚಿಸಿ ಪ್ರಖ್ಯಾತರಾಗಿದ್ದ ದಿವಾಕರ್ಲ ತಿರುಪತಿ ಶಾಸ್ತ್ರಿ (1871-1919); ಮತ್ತು ಆಂಧ್ರದ ಪ್ರಥಮ ರಾಷ್ಟ್ರಕವಿ ಚಲ್ಲಪಿಲ್ಲ ವೆಂಕಟ ಶಾಸ್ತ್ರಿ (1870-1950); ಎಂಬ ತಿರುಪತಿ ವೆಂಕಟೇಶ್ವರಲು ಅವಳಿಜವಳಿ ಕವಿಗಳು; ಪಾಣಘ್ರೀತ ಮತ್ತು ಇತರ ಕವಿತೆಗಳನ್ನು ರಚಿಸಿದ. ಓಲೆಟಿ ರಾಮಶಾಸ್ತ್ರಿ (1883-1939); ಮತ್ತು ವಿದುಲ ರಾಮಕೃಷ್ಣಶಾಸ್ತ್ರಿ (1889-1919); ಎಂಬ ವೆಂಕಟರಾಮಕೃಷ್ಣ ಅವಳಿಜವಳಿ ಕವಿಗಳು; ಕವಿರಾಜಹಂಸರೆಂದು ಇಬ್ಬರೂ ಪ್ರಖ್ಯಾತರಾಗಿ ಕಾವ್ಯ ಕುಸುಮಾವಳಿ, ಏಕಾಂತಸೇವಾ ಮತ್ತು ರಾಮಾಯಣಂ ಮುಂತಾದ ಕೃತಿಗಳನ್ನು ರಚಿಸಿದ ಬಾಲಂತ್ರಪು ವೆಂಕಟರಾವ್ (1880); ಮತ್ತು ಓಲೆಟಿ ಪಾರ್ವತೀಶಂ (1882-1955); ಎಂಬ ವೆಂಕಟ ಪಾರ್ವತೀಶ್ವರ ಕವುಲು ಎಂದು ಖ್ಯಾತರಾದ ಅವಳಿಜವಳಿ ಕವಿಗಳು; ಪ್ರತಾಪಸಿಂಹ ಚರಿತ ಮುಂತಾದುವನ್ನು ರಚಿಸಿದ ರಾಜಶೇಖರ ಶತಾವಧಾನಿ (1888-1957); ಮತ್ತು ತನ್ನ ನೂತನ ಪುರಾಣಂ ಎಂಬುದಕ್ಕಾಗಿ ಕೀರ್ತಿಶಾಲಿಯಾಗಿರುವ ತ್ರಿಪುರನೇನಿ ರಾಮಸ್ವಾಮಿ (1890).

ಉದಾರವೂ ಸ್ವತಂತ್ರವೂ ಆದ ಭಾವನೆಗಳುಳ್ಳ ಆಧುನಿಕ ಕವಿಗಳ ಪೈಕಿ ಒಳ್ಳೆ ಕವಿಗಳೆಂದು ಹೆಸರಾಂತರಾದವರೆಂದರೆ: ಗುರಜಾದ ವೆಂಕಟ ಅಪ್ಪಾರಾವ್ (1862-1915). ಕನ್ಯಾಶುಲ್ಕಂ ಎಂಬ ಸಾಮಾಜಿಕ ನಾಟಕ್ಕೂ ಮತ್ತು ಸಣ್ಣ ಕಥೆಗಳಿಗೂ ಪ್ರಖ್ಯಾತನಾದ ಈತ ಜೀವಂತವಾಗಿರುವ ಆಡುಮಾತಿನಲ್ಲಿ ಹೊಸ ಛಂದಸ್ಸುಗಳಲ್ಲಿ ಆಧುನಿಕ ಮಾದರಿಯ ಕವಿತೆಗಳನ್ನೂ ಇತರ ರಚನೆಗಳನ್ನೂ ಪ್ರತಿಷ್ಠಾಪಿಸಿದನೆಂಬ ಕೀರ್ತಿಗೆ ಭಾಗಿಯಾಗಿದ್ದಾನೆ. ಕರುಣಾರಸಪರಿಪ್ಲುತವಾದ ಪುತ್ತಡಿ ಬೊಮ್ಮ ಪೂರ್ವಮ್ಮ ಎಂಬ ಕವಿತೆಯನ್ನೊಳಗೊಂಡಿರುವ ಈತನ ಮುಕ್ಕಾಲು ಸರಮುಲು ಮತ್ತು ಇತರ ಸಣ್ಣ ಕವಿತೆಗಳು ತುಂಬ ಜನಪ್ರಿಯವಾಗಿವೆ. ತೃಣಕಂಕಣಂ, ಕಾಷ್ಟಕಮಲ, ತೆನುಗುತೋಟ ಮುಂತಾದ ಅನೇಕ ಭಾವಗೀತೆಗಳನ್ನು ಬರೆದಿರುವ ರಾಯಪ್ರೋಲುಸುಬ್ಬರಾವ್ (1892) ಎಂಬಾತ ಆಧುನಿಕ ತೆಲುಗುಸಾಹಿತ್ಯದಲ್ಲಿ ಭಾವಗೀತೆಯನ್ನು ಸಂಸ್ಥಾಪಿಸಿದನೆಂದು ಭಾವಿಸಲಾಗಿದೆ. ಹೃದಯೇಶ್ವರಿ ವಕುಲಮಾಲ ಮುಂತಾದ ಅನೇಕ ಸಣ್ಣ ಕವಿತೆಗಳನ್ನು ಪದ್ಮಾವತೀಚರಣಚಕ್ರವರ್ತಿ ಮತ್ತು ಇತರ ಅನೇಕ ಪದ್ಯಮಯ ನಾಟಕಗಳನ್ನು ರಚಿಸಿರುವ ತಲ್ಲವಜ್ಜಲ ಶಿವಶಂಕರಶಾಸ್ತ್ರಿ (1892), ತನ್ನ ಎಂಕಿಪಾಟಲುಗೆ ಪ್ರಖ್ಯಾತನಾದ ನಂದೂರಿ ವೆಂಕಟಸುಬ್ಬರಾವ್ (1895-1957); ಕಿನ್ನರ ಸಾನಿಪಾಟಲು ಮತ್ತು ರಾಮಾಯಣ ಕಲ್ಪವೃಕ್ಷಂ ಮುಂತಾದುವಕ್ಕೆ ಪ್ರಖ್ಯಾತನಾಗಿ ನೂರಕ್ಕೂ ಮಿಗಿಲಿನ ಕೃತಿಗಳನ್ನು ರಚಿಸಿರುವ ವಿಶ್ವನಾಥಸತ್ಯನಾರಾಯಣ (1895); ಪಾನಶಾಲ, ಕೃಷೀವಲುಡು, ಅಗ್ನಿಪ್ರವೇಶಂ, ಮುಂತಾದುವನ್ನು ಬರೆದಿರುವ ದುವ್ವೂರಿ ರಾಮಿರೆಡ್ಡಿ (1895-1917); ಅಷ್ಟಾವಧಾನ ಕೃಷ್ಣಪಕ್ಷಂ, ಊರ್ವಶಿ, ಮತ್ತು ಪ್ರವಾಸಂ ಮುಂತಾದ ಕೃತಿಗಳಿಗೂ ಭಾವಗೀತೆಗಳಿಗೂ ಪ್ರಖ್ಯಾತನಾದ ದೇವುಲಪಲ್ಲಿ ವೆಂಕಟಕೃಷ್ಣಶಾಸ್ತ್ರಿ (1897); ತನ್ನ ಶಿವಭಾರತಕ್ಕೆ ಪ್ರಖ್ಯಾತನಾದ ಗಡಿಯಾರಂ ವೆಂಕಟಶಾಸ್ತ್ರಿ (1897); ತೆಲುಗುರಾಜು ಕೃತುಲು ಎಂಬ ಶೀರ್ಷಿಕೆಯಲ್ಲಿ ಅನೇಕ ಕವಿತೆಗಳನ್ನು ಪ್ರಕಟಿಸಿರುವ ಪೆನುಮಟ್ಸ ಸತ್ಯನಾರಾಯಣ ರಾಜು (1899); ತನ್ನ ಸೌಭದ್ರುನಿ ಪ್ರಣಯಾಯಾತ್ರಾ ಎಂಬುದಕ್ಕೆ ಪ್ರಖ್ಯಾತನಾದ ನಾಯನಿ ಸುಬ್ಬರಾವ್ (1899); ತನ್ನ ಪೆನುಗೊಂಡ ಪಾಟ ಎಂಬುದಕ್ಕೆ ಹೆಸರಾಂತಿರುವ ಕವಿ, ವಿಮರ್ಶಕ ಮತ್ತು ಅನ್ನಮಾಚಾರ್ಯನ ಕೀರ್ತನೆಗಳಿಗೆ ಸ್ವರಪ್ರಸ್ತಾರವನ್ನು ಹಾಕಿರುವ ಸಂಗೀತ ವಿದ್ವಾಂಸ ರಾಳ್ಳಪಳ್ಳಿ ಅನಂತಕೃಷ್ಣಶರ್ಮ (1893); ಅನೇಕ ಭಾವಗೀತೆ ರಚಿಸಿರುವ ಬಸವರಾಜು ಅಪ್ಪಾರಾವ್ (1894-1933); ಪಿರ್‍ದೌಸಿ, ಗಬ್ಬಿಲಂ, ಮುಂತಾದವನ್ನು ಬರೆದಿರುವ ಗುರ್ರಂ ಜಷುವ (1895); ಭಾಗವತರಣಂ ಮತ್ತು ದೇವೀ ಭಾಗವತಗಳನ್ನು ಅನೇಕ ಕಾದಂಬರಿಗಳನ್ನೂ ಸಣ್ಣ ಕಥೆಗಳನ್ನು ರಚಿಸಿರುವ ನೋರಿ ನರಸಿಂಹ ಶಾಸ್ತ್ರಿ (1900); ತನ್ನ ಸ್ವೇಚ್ಚಾಗಾನಂ ಎಂಬುದಕ್ಕೆ ಖ್ಯಾತನಾದ ಮಂಗಿಪುಡಿ ಪುರುಷೋತ್ತಮಶರ್ಮ (1893-1952); ಶಶಿಕಲಾ ಮತ್ತು ಇತರ ಕವಿಗಳ ಜೊತೆಗೆ ನಾರಾಯಣರಾವ್ ಹಿಮಬಿಂದು ಮತ್ತು ಇತರ ಕಾದಂಬರಿಗಳನ್ನೂ ಸಣ್ಣ ಕಥೆಗಳನ್ನೂ ಬರೆದಿರುವ ಅಡವಿಬಾಪಿರಾಜು (1895-1952) (ನೋಡಿ- ಅಡವಿ-ಬಾಪಿರಾಜು); ಬೃಂದಾವನಂ, ಪಂಚವಟೀ ಮತ್ತು ಇತರ ಸಣ್ಣ ಕವಿತೆಗಳನ್ನು ರಚಿಸಿರುವ ಮಾಧವಪೆದ್ದಿ ಬುಚ್ಚಿ ಸುಂದರಮು ಶಾಸ್ತ್ರಿ (1882-1950); ತನ್ನ ಮಲ್ಲಿಕಾಂಬ ಮತ್ತು ಸೆಲಯೇಲೆಗಾನಂ ಎಂಬುವುಗಳಿಗಾಗಿ ಖ್ಯಾತಿವೆತ್ತಿರುವ ಅಬ್ಬೂರಿ ರಾಮಕೃಷ್ಣರಾವ್ (1896); ತೊಲಕಾರಿ ಮತ್ತು ಸೌಂದರಾನಂದನಂ ಎಂಬ ಕೃತಿಗಳನ್ನು ಒಟ್ಟಿಗೆ ಸೇರಿ ರಚಿಸಿರುವ ಪಿಂಗಳಿ ಲಕ್ಷ್ಮೀಕಾಂತಂ (1894) ಮತ್ತು ಕಾಟುರಿ ವೆಂಕಟೇಶ್ವರರಾವ್ (1895); ಜಾನಪದ ಗೇಯಗಳಿಗೆ ಪ್ರಖ್ಯಾತನಾದ ಕವಿ ಕೊಂಡಲ ವೆಂಕಟರಾವ್ (1892); ತನ್ನ ಕಾದಂಬರಿಗಳಿಂದಲೂ ಸಣ್ಣ ಕಥೆಗಳಿಂದಲೂ ಕೀರ್ತಿವೆತ್ತು ಸಣ್ಣ ಸಣ್ಣ ಕಥನಕವನಗಳನ್ನು ಬರೆದಿರುವ ವೆಲ್ಲೂರಿ ಶಿವರಾಮಶಾಸ್ತ್ರಿ (1892); ದೀಪಾವಳಿ ಮತ್ತು ಇತರ ಸಣ್ಣ ಕವಿತೆಗಳಿಗೆ ಖ್ಯಾತಿವಂತನಾದ ವೇದುಲಸತ್ಯನಾರಾಯಣ ಶಾಸ್ತ್ರಿ (1900)-ಇವರು ಹೆಸರಾಂತರಾದರು.

ಆಧುನಿಕ ತರುಣ ಕವಿಗಳನ್ನು ಹೆಸರಿಸಲು ಸ್ಥಳಾವಕಾಶವಿಲ್ಲ. ಆದರೆ ಶ್ರೀ ಶ್ರೀ, ಆರುದ್ರ, ಸಿ. ನಾರಾಯಣರೆಡ್ಡಿ, ದಾಶರಥಿ, ಪಿಲಕಗಣಪತಿಶಾಸ್ತ್ರಿ, ಜನ್‍ಧ್ಯಾಲ ಪಾಪಯ್ಯಶಾಸ್ತ್ರಿ, ಬೊಡ್ಡುಬಾಪಿರಾಜು, ಬೊಯೀಭೀಮಣ್ಣ, ವಿದ್ವಾನ್ ವಿಶ್ವ1, ಮಲ್ಲವರಪ ವಿಶ್ವೇಶ್ವರರಾವ್, ಕೋನಕಕಳ್ಲ ವೆಂಕಟರತ್ನಂ, ನಾರ್ಲವೆಂಕಟೇಶ್ವರರಾವ್ ಪೈಡಿಪಾಟಿ ಸುಬ್ಬರಾಮಶಾಸ್ತ್ರಿ, ಆನಿಸೆಟ್ಟಿ ಸುಬ್ಬರಾವ್, ಇಂದ್ರಕಾಂತಿ ಹನುಮಚ್ಛಾಸ್ತ್ರಿ ಮತ್ತು ಇನ್ನೂ ಇತರ ಅನೇಕರು ಮುಂದಕ್ಕೆ ಬರುತ್ತಿದ್ದಾರೆ.

ನಾಟಕ ಮತ್ತು ಚಿಕ್ಕ ನಾಟಕ:[ಸಂಪಾದಿಸಿ]

1870 ಕ್ಕಿಂತ ಮುಂಚೆ ಯಾವ ನಾಟಕವಾಗಲಿ ಚಿಕ್ಕ ನಾಟಕವಾಗಲಿ ಇರಲಿಲ್ಲವೆಂಬುದು ಸೋಜಿಗದ ಸಂಗತಿ. ಸಂಸ್ಕøತನಾಟಕಗಳೂ ಕಾವ್ಯವಾಗಿ ಪರಿವರ್ತಿತವಾಗುತ್ತಿದ್ದುವು: ಪಿಳ್ಲಮರ್ರಿ ಪಿನವೀರಭದ್ರ ಎಂಬಾತ ಹದಿನೈದನೆಯ ಶತಮಾನದಲ್ಲಿ ಕಾಳಿದಾಸನ ಅಭಿಜ್ಞಾನ ಶಾಕುಂತಲವನ್ನು ದೀರ್ಘಕವನವಾಗಿ ರಚಿಸಿದ: ಕೃಷ್ಣಮಿಶ್ರನಿಂದ ರಚಿತವಾದ ಪರಬೋಧ ಚಂದ್ರೋದಯವೆಂಬ ಮತ್ತೊಂದು ಸಂಸ್ಕøತ ನಾಟಕವನ್ನು ಇದೇ ರೀತಿಯಲ್ಲಿ ನಂದಿಮಲ್ಲಣ ಮತ್ತು ಘಂಟಾಸಿಂಗಣ ಎಂಬ ಹದಿನೈದನೆಯ ಶತಮಾನದ ಅವಳಿಜವಳಿ ಕವಿಗಳು ತೆಲುಗು ಕಾವ್ಯವಾಗಿ ಪರಿವರ್ತಿಸಿದರು. ಆದರೆ ನಾಟಕದ ದಾಹವನ್ನು ನೂರಾರು ಯಕ್ಷಗಾನಗಳು ತಣಿಸುತ್ತಿದ್ದುವು. ನೆಲ್ಲೂರ ಜಿಲ್ಲೆಯ ಕಂದುಕ್ಕೂರಿ ರುದ್ರಕವಿ ಸುಮಾರು 1808 ರಲ್ಲಿ ಸುಗ್ರೀವ ವಿಜಯವೆಂಬ ಮೊದಲನೆಯ ಯಕ್ಷಗಾನವನ್ನು ರಚಿಸಿದ. ಮುಂದೆ ತಂಜಾವೂರು ಮಧುರೆಗಳಲ್ಲಿ ಅನೇಕ ಯಕ್ಷಗಾನಗಳು ರಚಿತವಾದುವು.

1876ರಲ್ಲಿ ವಾವಿಲಾಲ ವಾಸುದೇವಶಾಸ್ತ್ರಿ ಜೂಲಿಯಸ್ ಸೀಸóರ್ ಅನ್ನು ತೆಲುಗಿಗೆ ಭಾಷಾಂತರಿಸಿದ. 1880ರಲ್ಲಿ ಗುರುಜಾóದ ಶ್ರೀರಾಮಮೂರ್ತಿ ಮರ್‍ಚೆಂಟ್ ಆಫ್ ವೆನಿಸ್ ನಾಟಕದ ಮೊದಲೆರಡಂಕಗಳನ್ನು ಪರಿವರ್ತಿಸಿದ. ಈತ ಕೆಲವು ಗದ್ಯ ರಚನೆಗಳನ್ನು ನಾಟಕದಲ್ಲಿ ತಂದಿದ್ದಾನೆ. ಆದರೆ ವೀರೇಶಲಿಂಗಂ ಪಂತಲು ಈ ನಾಟಕವನ್ನು ಸಂಪೂರ್ಣವಾಗಿ ಪದ್ಯದಲ್ಲಿ ತೆಲುಗಿಗೆ ಭಾಷಾಂತರಿಸಿದ್ದಾರೆ. ಆ ತರುವಾಯ ಷೇಕ್ಸ್‍ಪಿಯರನ ಹನ್ನೆರಡಕ್ಕೂ ಮಿಕ್ಕ ನಾಟಕಗಳನ್ನು ಭಾಷಾಂತರಿಸಿಯೋ ಅನುವಾದಿಸಿಯೋ ತೆಲುಗಿಗೆ ತಂದುಕೊಳ್ಳಲಾಗಿದೆ. ಇವುಗಳಲ್ಲಿ ಅಧಿಕಸಂಖ್ಯೆಯವನ್ನು ವೀರೇಶಲಿಂಗಂ ರಚಿಸಿದ್ದಾನೆ. ಸಂಸ್ಕøತದಿಂದ ಒಂದು ನಾಟಕವನ್ನು ಮೊದಲು ಬಾರಿಗೆ ಭಾಷಾಂತರಿಸಿದವನು ಕೊಕ್ಕೊಂದ ವೆಂಕಟರತ್ನಂ: ಆ ನಾಟಕದ ಹೆಸರು ನರಕಾಸುರ ವಿಜಯವ್ಯಾಯೋಗಂ. ಅಭಿಜ್ಞಾನ ಶಾಕುಂತಲ, ರತ್ನಾವಳಿ ಮುಂತಾದ ಸಂಸ್ಕøತ ನಾಟಕಗಳನ್ನು ಪರಿವರ್ತಿಸಲು ತೊಡಗಿದವರಲ್ಲಿ ವೀರೇಶಲಿಂಗಂ ಎರಡನೆಯವ, ಮುಂದೆ ಹದಿನೈದು ಜನ ವಿದ್ವಾಂಸರು ಶಾಕುಂತಲವನ್ನು ಭಾಷಾಂತರಿಸಿದರು. ಆದರೂ ವೀರೇಶಲಿಂಗಮ್ಮಿನದೇ ಈಗಲೂ ಅತ್ಯುತ್ತಮವಾಗಿ ಉಳಿದಿದೆ. ಕೋರಾಡ ರಾಮಚಂದ್ರ ಕವಿಯ ಮಂಜರೀ ಮಧುಕರೀಯಂ (1860) ಎಂಬುದು ಪ್ರಥಮ ಸ್ವೋಪಜ್ಞ ತೆಲುಗು ನಾಟಕ. ವಾವಿಳೆಲವಾಸುದೇವ ಶಾಸ್ತ್ರೀಯ ನಂದಕರಾಜ್ಯಂ (1880) ಎಂಬುದು ಎರಡನೆಯದು, ವೀರೇಶಲಿಂಗಮ್ಮಿನ ಹರಿಶ್ಚಂದ್ರ ಮೂರನೆಯದು. ಆದರೆ ಮೊದಲಿನದು ಮಾತ್ರ ರಂಗದಲ್ಲಿ ಶೋಭಿಸಿ ಜನರ ಮೆಚ್ಚುಗೆ ಪಡೆಯಿತು. ಇಪ್ಪತ್ತನೆಯ ಶತಮಾನದ ಮೊದಲ ಭಾಗದಲ್ಲಿ ಇದು ಜನರನ್ನು ಆಕರ್ಷಿಸುತ್ತಲೇ ಹರಿಶ್ಚಂದ್ರ ರಂಗದ ಮೇಲೆ ಬರುವವರೆಗೂ ಇದು ಜನರನ್ನು ಆಕರ್ಷಿಸುತ್ತಲೇ ಇತ್ತು. ಸುವ್ಯವಸ್ಥಿತವಾದ ನಾಟಕ ಕಂಪೆನಿಗಳಿಗಾಗಿ ನಾಟಕಗಳನ್ನು ಬರೆಯುತ್ತಿದ್ದವರೆಂದರೆ: ಧರ್ಮಾವರಂ ಕೃಷ್ಣಮಾಚಾರ್ಯ (1853-1913) ಮತ್ತು ಆತನ ಸಮಕಾಲೀನನೂ ಸ್ಪರ್ಧಿಷ್ಣುವೂ ಆದ ಬಳ್ಳಾರಿಯ ಕೋಲಾಚಲಂ ಶ್ರೀನಿವಾಸರಾವ್, ಮತ್ತು ಪ್ರಥಮವಾಗಿ ವಿಷಾದ ಸಾರಂಗಧರವೆಂಬ ದುರಂತ ನಾಟಕವನ್ನು ಬರೆಯಲು ಯತ್ನಿಸಿದವ ಈತನೇ ತನ್ನ ವಿಜಯನಗರ ಸಾಮ್ರಾಜ್ಯಪತನಂ ಮುಂತಾದ ಐತಿಹಾಸಿಕ ನಾಟಕಗಳಿಗೆ ಪ್ರಖ್ಯಾತ. ಕಾಲಕ್ರಮೇಣ ಅನೇಕ ಸ್ವೋಪಜ್ಞನಾಟಕಗಳು ತೆಲುಗಿನಲ್ಲಿ ಮೂಡಿಬಂದುವು. ಚಿಲಕಮರ್ತಿ ಲಕ್ಷ್ಮೀನರಸಿಂಹನ ಗಯೋಪಾಖ್ಯಾನ ಮತ್ತು ಪ್ರಸನ್ನಯಾದವಂ, ಇಚ್ಛಾ ಪುರಪು ಯಜ್ಞ ನಾರಾಯಣ ರಸಪುತ್ರವಿಜಯಂ, ತಿರುಪತಿ ವೆಂಕಟೇಶ್ವರ ಕವಿಗಳ ಪಾಂಡವೋದ್ಯೋಗ ಮತ್ತು ಇತರ ಮಹಾಭಾರತ ನಾಟಕಗಳು, ಪಾನುಗಂತಿ ಲಕ್ಷ್ಮೀನರಸಿಂಹನ ಪಾದುಕಾ ಪಟ್ಟಾಭಿಷೇಕಂ ಮತ್ತು ಇತರ ನಾಟಕಗಳು- ಈ ಶತಮಾನದ ಪೂರ್ವ ಭಾಗಕ್ಕೆ ಸೇರಿದ ಇವು ಮೂರು ದಶಕಗಳವರೆಗೆ ರಂಗದ ಮೇಲೆ ವಿಜೃಂಭಿಸಿದುವು. ಆದರೆ ಗುರುಜಾದ ಅಪ್ಪಾರಾಯನ ಕ್ಯಾಶುಲ್ಕ ಎಂಬ ಸಾಮಾಜಿಕ ನಾಟಕ ಮತ್ತು ವೇದಂ ವೆಂಕಟರಾಯಶಾಸ್ತ್ರಿಯ ಪ್ರತಾಪರುದ್ರೀಯಂ ಎಷ್ಟು ಶ್ರೇಷ್ಠವಾಗಿವೆ ಎಂದರೆ, ಅವು ಅರುವತ್ತು ವರ್ಷಗಳಷ್ಟು ಹಿಂದೆ ರಚಿತವಾಗಿದ್ದರೂ ಅವನ್ನು ಈಗಲೂ ರಂಗದಲ್ಲಿ ಆಡಿತೋರುತ್ತಿದ್ದಾರೆ. ಜನವೂ ಮೆಚ್ಚುತ್ತಿದೆ.

 	ಇತ್ತೀಚಿನ ಕಾಲದಲ್ಲಿ ತುಂಬ ನಾಟಕಗಳ ಪ್ರವಾಹವೇ ಹರಿದಿದೆ. ಆಧುನಿಕ ಯುಗದ ಮಾದರಿಯ ಫಲವೆನಿಸಿರುವ ಮುದ್ದುಕೃಷ್ಣ ಸಾಮಾಜಿಕ ನಾಟಕಗಳನ್ನು ರಚಿಸಿದ್ದಾನೆ. ಅವುಗಳಲ್ಲಿ ಟೀ ಕಪ್ಪುಲೋ ತುಫಾನು ಮತ್ತು ಭೀಮಾಕಲಾಪಮುಲೋ-ಭಾಮಾಕಲಾಪಮು ಎಂಬವು ರಂಗದ ಮೇಲೆ ಜನರ ಮೆಚ್ಚುಗೆ ಗಳಿಸಿವೆ. ಏಮಿ ಮಗವಾಳ್ಳು ಎಂಬಂಥ ಚಿಕ್ಕ ನಾಟಕಗಳಿಗೆ ಪ್ರಸಿದ್ಧನಾದ ಪಿ. ವಿ. ರಾಜಮನ್ನಾರ್ ತಪ್ಪೆವರದಿ ಎಂಬ ನಾಟಕವನ್ನು ತುಂಬ ವಾಸ್ತವವೆನಿಸುವಂತೆ ಬರೆದ. ರಂಗದಲ್ಲಿ ಇದು ಬೇಗನೆ ಅದರಲ್ಲೂ ಮಹಾಖ್ಯಾತಿವಂತ ನಟನಾದ ರಾಘವಾಚಾರಿ ಇದರ ಮುಖ್ಯ ಪಾತ್ರವನ್ನು ನಟಿಸಿದಾಗ_ಬಹು ಜನಪ್ರಿಯವಾಯಿತು. ತೆಲುಗು ನಾಟಕಕ್ಷೇತ್ರದಲ್ಲಿ 500 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಚಿಕ್ಕ ನಾಟಕಗಳೂ ಏಕಾಂತ ನಾಟಕಗಳೂ ರಚಿತವಾಗಿವೆ.


ಕಾದಂಬರಿ ಮತ್ತು ಸಣ್ಣ ಕಥೆ[ಸಂಪಾದಿಸಿ]

ಕಂದುಕೂರಿ ವೀರೇಶಲಿಂಗಂ ತೆಲುಗಿನಲ್ಲಿ ಪ್ರಥಮ ಕಾದಂಬರಿಕಾರ. ಆತನ ರಾಜಶೇಖರ ಚರಿತ್ರೆ 1878ರಲ್ಲಿ ಪ್ರಕಟವಾಯಿತು. ಅದು ಗೋಲ್ಡ್‍ಸ್ಮಿತ್‍ನ ವಿಕಾರ ಆಫ್ ವೇಕ್‍ಫೀಲ್ಡ್‍ದ ಅನುವಾದ. ಇದನ್ನು ಹೇಗೆ ಹೊಂದಿಸಿಕೊಂಡಿದ್ದಾನೆಂದರೆ ಇದು ತೆಲುಗು ದೇಶದ ಒಂದು ಕಥೆಯಂತೆಯೇ ತೋರುತ್ತದೆ. ಆದ ಕಾರಣ ಇದನ್ನು ಐ. ಆರ್. ಹಚಿನ್‍ಸನ್ 1887ರಲ್ಲಿ ಇಂಗ್ಲಿಷಿಗೆ ಭಾಷಾಂತರಿಸಿದ. ಈ ಭಾಷಾಂತರವನ್ನು ಇಂಗ್ಲಿಷ್ ಓದುಗರು ಓದಿ ಮೆಚ್ಚಿದ್ದಾರೆ. 1893-1898ರಲ್ಲಿ ರಾಜಮಹೇಂದ್ರಿಯಲ್ಲಿ ನಡೆಸಿದ ವಾರ್ಷಿಕ ಸ್ಪರ್ಧೆಗಳ ಫಲವಾಗಿ ಕಾದಂಬರಿಗಳು ಹುಟ್ಟಿಕೊಂಡುವು. ಖಂಡವಲ್ಲಿ ರಾಮಚಂದ್ರುಡು, ಚಿಲಕಮರ್ತಿ ಲಕ್ಷ್ಮೀನರಸಿಂಹಂ ಮತ್ತು ತಲ್ಲಾಪ್ರಗಡ ಸೂರ್ಯನಾರಾಯಣರಾವ್ ಇವರು ತಮ್ಮ ಕಾದಂಬರಿಗಳಿಗಾಗಿ ಪಾರಿತೋಷಕಗಳನ್ನು ಪಡೆದರು. ಗೋಟೇಟಿ ಕನಕರಾಜುವಿನ (1894) ವಿವೇಕ ವಿಜಯಂ 'ಟಿ' ರಾಜಗೋಪಾಲರಾಯನ (1895) ತ್ರಿವಿಕ್ರಮವಿಲಾಸಂ, ಕೂನಪುಲಿ ಲಕ್ಷ್ಮೀನರಸಯ್ಯನ (1898) ಭಕ್ಷಿ ಎಂಬುವು ಚಿಂತಾಮಣಿ ಪಾರಿತೋಷಕವನ್ನು ಪಡೆದ ಇತರ ಕಾದಂಬರಿಗಳು. ರೆಂಟಾಲ ವೆಂಕಟಸುಬ್ಬರಾಯನ ಕೇಸರೀ ವಿಲಾಸಮು (1895). ಎಂಬುದು ಉಲ್ಲೇಖನಾರ್ಹವಾಗಿದೆ.

 	ತನ್ನ ರಾಮಚಂದ್ರ ವಿಜಯಂ (1894), ಹೇಮಲತಾ (1896) ಅಹಲ್ಯಾಬಾಯಿ (1893), ಕರ್ಪೂರ ಮಂಜರಿ (1898) ಮುಂತಾದ ಕಾದಂಬರಿಗಳಿಗೆ ಮೊಟ್ಟಮೊದಲ ಅತ್ಯುತ್ತಮ ಕಾದಂಬರಿಕಾರನೆಂಬ ಖ್ಯಾತಿಗೆ ಚಿಲಕಮರ್ತಿ ಭಾಗಿಯಾದ, ಆತನ ಸೌಂದರ್ಯತಿಲಕ ಎಂಬುದು ರೊಮೇಶದತ್ತನ ಲೇಕ್ ಆಫ್ ಪಾಮ್ಸ್ ಎಂಬುದರ ಭಾಷಾಂತರ.
 	ಇಪ್ಪತ್ತನೆಯ ಶತಮಾನದ ಮೊದಲ ಎರಡು ಅಥವಾ ಮೂರು ದಶಕಗಳಲ್ಲಿ, ಕೆ. ವಿ. ಲಕ್ಷ್ಮಣರಾಯನ ವಿಜ್ಞಾನ ಚಂದ್ರಿಕಾಮಂಡಲಿ ಮದರಾಸು, ಆಂಧ್ರ ಪ್ರಚಾರಿಣೀ ಗ್ರಂಥಮಾಲಾ, ಪೀತಾಪುರಂ, ಸರಸ್ವತಿ ಗ್ರಂಥಮಂಡಲ, ರಾಜಮಹೇಂದ್ರಿ, ವೇಗುಜುಕ್ಕ ಗ್ರಂಥಮಾಲಾ, ಬರಹಾಂಪುರ್ ಮುಂತಾದ ಸಾಹಿತ್ಯ ಸಂಸ್ಥೆಗಳ ಪ್ರೋತ್ಸಾಹದ ಫಲವಾಗಿ ಅನೇಕ ಕಾದಂಬರಿಗಳು ಹುಟ್ಟಿದುವು. ಭೋಗರಾಜು ನಾರಾಯಣಮೂರ್ತಿಯ ವಿಮಲಾದೇವಿ, ಚಿಲುಕುರಿ ವೀರಭದ್ರರಾಯನ ನಾಯಕುರಾಲು, ಕೇತವರಪು ವೆಂಕಟಶಾಸ್ತ್ರೀಯ ಲಕ್ಷ್ಮೀಪ್ರಸನ್ನಂ, ಎಂಬುವು ಆಕಾಲದ ಅತ್ಯುತ್ತಮ ಕಾದಂಬರಿಗಳು. ವಿಶ್ವನಾಥ ಸತ್ಯನಾರಾಯಣನ ವೇಯೀ ಪಾಡಗಲು ಮತ್ತು ಅಡವಿ ಬಾಪಿರಾಜುವಿನ ನಾರಾಯಣರಾವ್ ಎಂಬುವು ಆಂಧ್ರ ವಿಶ್ವವಿದ್ಯಾನಿಲಯದ ಬಹುಮಾನಗಳನ್ನು ಪಡೆದವು (1934). ವುಣ್ಣನ ಲಕ್ಷ್ಮೀನಾರಾಯಣನ ಮಾಲಪಲ್ಲಿ (1921) ಇದುವರೆಗೂ ರಚಿತವಾಗಿರುವ ಸಾಮಾಜಿಕ ಕಾದಂಬರಿಗಳ ಪೈಕಿ ಅತ್ಯುತ್ತಮವಾದುದೆಂದು ಪರಿಗಣಿತವಾಗಿದೆ. ಜಿ. ವಿ. ಕೃಷ್ಣರಾಯನ ಕೀಲುಬೊಮ್ಮಲು, ಟಿ. ಗೋಪಿಚಂದನ ಅಸಮರ್ಥನಿಜೀವಯಾತ್ರ, ಎಸ್, ವಿ, ಸುಬ್ಬರಾಯನ ಚಿವರಕು ಮಿಗಿಲೇದಿ ಮತ್ತು ಪಿ. ಸಾಂಬಶಿವರಾಯನ ಉದಯಕಿರಣಾಲು ಎಂಬವು ಇತ್ತೀಚಿನ ಶ್ರೇಷ್ಠ ಕಾದಂಬರಿಗಳು.


ಸಣ್ಣ ಕಥೆ:[ಸಂಪಾದಿಸಿ]

ಸ್ವೋಪಜ್ಞ ಸಣ್ಣಕಥೆಗಳನ್ನು ಬರೆಯುವುದರಲ್ಲಿ ಮೊದಲನೆಯವ ಗುರುಜಾóದ ಅಪ್ಪಾರಾವ್. ಆದರೆ ಈ ಕಲೆಯಲ್ಲಿ ಗುಡಿಪಾಟಿ ವೆಂಕಟಾಚಲಂ ಬೇಗನೆ ಆತನನ್ನು ಮೀರಿಸಿದ. ವೆಲ್ಲೂರಿ ಶಿವರಾಮಶಾಸ್ತ್ರಿ, ಚಿಂತಾದೀಕ್ಷಿತುಲು ಮತ್ತು ಇತರ ಅನೇಕ ಸಣ್ಣ ಕಥೆಗಾರರು ಜನಪ್ರಿಯವಾಗಿರುವ ಅನೇಕ ವಸ್ತುಗಳ ಮೇಲೆ ಸಣ್ಣ ಕಥೆಗಳನ್ನು ರಚಿಸಿದ್ದಾರೆ. ಭಾಮಿಡಿಪತಿ ಕಾಮೇಶ್ವರರಾಯನ ಸಣ್ಣ ನಾಟಕಗಳಂತೆಯೇ ಮುನಿಮಾಣಿಕ್ಯಮ್ಮಿನ ಕಥೆಗಳು ತಮ್ಮಲ್ಲಿನ ಹಾಸ್ಯಕ್ಕಾಗಿ ತುಂಬ ಜನಪ್ರಿಯವಾಗಿವೆ. ಶ್ರೀಪಾದಸುಬ್ರಮಣ್ಯಶಾಸ್ತ್ರಿಯ ಕಥೆಗಳು ತಮ್ಮ ದೇಸೀ ನುಡಿಗಟ್ಟಿನ ಆಡುಭಾಷೆಗಾಗಿ ಗಮನಾರ್ಹವಾಗಿವೆ. ಮಲ್ಲಾಡಿರಾಮಕೃಷ್ಣಶಾಸ್ತ್ರಿ, ಕೊಡವಟಿಕಂಟಿ ಕುಟುಂಬರಾವ್, ಗೋಪೀಚಂದ್ ಎಂಬುವರು ಈಗಿನ ಕಾಲದ ಶ್ರೇಷ್ಠ ಸಣ್ಣ ಕಥೆಗಾರರು.

	ಆಂಧ್ರ ಸಚಿತ್ರ ವಾರಪತ್ರಿಕಾ, ಆಂಧ್ರಪ್ರಭಾ ವಾರಪತ್ರಿಕಾ ಮುಂತಾದ ತೆಲುಗು ಪತ್ರಿಕೆಗಳು ಕ್ರಮಬದ್ಧವಾಗಿ ಸಣ್ಣ ಕಥೆಗಳನ್ನು ಪ್ರಕಟಿಸುತ್ತಿವೆಯಲ್ಲದೆ ಅವುಗಳ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ. 
 	ತೆಲುಗು ಸಾಹಿತ್ಯ ಈಗ ಎಲ್ಲ ಕ್ಷೇತ್ರಗಳಲ್ಲೂ ಶ್ರೀಮಂತವಾಗಿದೆ. ಆದರೆ ಈಚೆಗೆ ಹುಟ್ಟಿರುವ ಕೃತಿಗಳ ಪೈಕಿ ಬಹುಕಾಲ ನಿಲ್ಲತಕ್ಕ ಶ್ರೇಷ್ಠ ಕೃತಿಗಳೆಷ್ಟು ಎಂಬುದನ್ನು ಹೇಳಲಾಗುವುದಿಲ್ಲ.	

(ಎಸ್.ಜಿ.ವಿ.)