ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಗುಂಬೆ
ಆಗುಂಬೆ ಶಿವಮೊಗ್ಗದಿಂದ ಸುಮಾರು 50 ಮೈಲು ಪಶ್ಚಿಮಕ್ಕೂ ಅರಬ್ಬೀ ಸಮುದ್ರದ ದಕ್ಷಿಣ ಕನ್ನಡ ಜಿಲ್ಲೆಯ ದಡದಿಂದ ಸುಮಾರು 30 ಮೈಲು ಪೂರ್ವಕ್ಕೂ ಇರುವ ಸಹ್ಯಾದ್ರಿಯ ಅತ್ಯುನ್ನತ ಶ್ರೇಣಿಗಳಲ್ಲೊಂದು (750 05' ಪೂ. ರೇ. 300 31' ಉ.ಅ.). ಎತ್ತರ 2,314'. ಪಶ್ಚಿಮದ ತಳದಲ್ಲಿ ಸೋಮೇಶ್ವರ ಎಂಬ ಊರಿದೆ. ಪೂರ್ವದಲ್ಲಿ ಆಗುಂಬೆಯ ಪೇಟೆ ಇದೆ. ಸುತ್ತುಮುತ್ತ ದಟ್ಟವಾದ ಅರಣ್ಯವಿದೆ. ಮಳೆಗಾಲ ಮೂರು ತಿಂಗಳು ಇಲ್ಲಿ ಸದಾ ಜಡಿಮಳೆ ಬೀಳುತ್ತಿರುತ್ತದೆ (300 ಕ್ಕೂ ಹೆಚ್ಚು). ಭಾರತದಲ್ಲಿ ಅಧಿಕ ಮಳೆಬೀಳುವ ಪ್ರದೇಶಗಳಲ್ಲಿ ಇದೂ ಒಂದು. ದಕ್ಷಿಣ ಕನ್ನಡಜಿಲ್ಲೆಗೂ ಮೈಸೂರಿಗೂ ಸಂಪರ್ಕ ಕಲ್ಪಿಸುವ ರಸ್ತೆ ಸುತ್ತಿ ಸುತ್ತಿ ಆಗುಂಬೆ ಬೆಟ್ಟವನ್ನು ಏರುತ್ತದೆ. ಹಾಗೆ ಏರುವ ರಸ್ತೆ ಹತ್ತಾರು ಇಕ್ಕಟ್ಟಾದ ತಿರುವುಗಳಿಂದ (ಹೇರ್‍ಪಿನ ಕರ್‍ವ್ಸ್) ಕೂಡಿದೆ. ದಟ್ಟವಾದ ಕಾಡುಗಳಲ್ಲಿ ಕಡವೆ, ಕಾಡುಕೋಣಗಳು ಹೇರಳವಾಗಿವೆ. ಉಪಯುಕ್ತ ಗಿಡಮರಗಳಲ್ಲದೆ ಬಿದಿರು ದಟ್ಟವಾಗಿದೆ. ಸ್ವಲ್ಪ ಏಲಕ್ಕಿಯೂ ಬೆಳೆಯುತ್ತದೆ.
ಮಳೆಗಾಲದಲ್ಲಿ ಸಿಡಿಲು, ಗುಡುಗು, ಮಿಂಚು, ಮಳೆಗಳಿಂದ ಆಗುಂಬೆ ಭಯಂಕರವೆನಿಸುತ್ತದೆ. ದಟ್ಟಕಾಡಿನಿಂದಲೂ ಮಳೆಮೋಡಗಳ ಆವರಣದಿಂದಲೂ ಮಳೆಗಾಲ ಮೂರು ತಿಂಗಳು ಇಲ್ಲಿ ಸೂರ್ಯನ ಬಿಸಿಲು ಬೀಳುವುದು ತುಂಬ ಅಪೂರ್ವ. ಬಿರುಗಾಳಿಗೋ ಜಡಿಮಳೆಗೋ ದಿನವೂ ಒಂದಲ್ಲ ಒಂದು ಭೂತಾಕಾರದ ಮರ ರಸ್ತೆಗೆ ಅಡ್ಡವಾಗಿ ಬಿದ್ದು ಸಂಚಾರವನ್ನು ತಡೆಯುವುದಿದೆ. ಇಲ್ಲಿ ತಿರುಗುವ ಬಸ್ಸು ಲಾರಿಗಳು ಸಾಮಾನ್ಯವಾಗಿ ಕೊಡಲಿ ಗರಗಸಗಳನ್ನು ಇಟ್ಟುಕೊಂಡಿರುತ್ತವೆ. ಕರ್ನಾಟಕದ ಅತ್ಯಂತ ದಟ್ಟವಾದ ಅರಣ್ಯಶ್ರೀಯನ್ನು ಇಲ್ಲಿ ನೋಡಬಹುದು. ಘಟ್ಟದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರೆ ಇಲ್ಲಿಯ 200'-300' ಎತ್ತರದ ಬಗೆ ಬಗೆಯ ದೈತ್ಯವೃಕ್ಷಗಳು ಯಾವುದೋ ಪಾತಾಳದಿಂದೆದ್ದು ಬಂದವುಗಳಂತೆ ತಮ್ಮ ತಲೆಯನ್ನೆತ್ತಿ ಇಣುಕುತ್ತವೆ. ಇಲ್ಲಿಯ ಪ್ರದೇಶವೆಲ್ಲ ಜಿಗಣಿ ಜಾತಿಯ ಇಂಬುಳ ಎಂಬ ರಕ್ತಹೀರುವ ಕೀಟಗಳಿಂದ ತುಂಬಿದೆ. ತಮ್ಮ ತಾರಸ್ವರದಿಂದ ಕಿವಿಯನ್ನು ಕೊರೆಯುವ ಮರಚಾರಟೆಗಳ ಸಂಗೀತ ಇಲ್ಲಿ ಸರ್ವಸಾಮಾನ್ಯ. ಸಹ್ಯಾದ್ರಿಶ್ರೇಣಿಗಳಿಂದ ಮೇಲಿಂದ ಕೆಳಕ್ಕೆ ಧುಮುಕುವ ಚಿಕ್ಕಚಿಕ್ಕ ಜಲಪಾತಗಳಿಗೆ ಇಲ್ಲಿ ಲೆಕ್ಕವಿಲ್ಲ. ಅರಣ್ಯದ ಸುಮನೋಹರ ಭಯಂಕರತೆಯನ್ನು ಇಲ್ಲಿ ಅನುಭವಿಸಬಹುದು.
ಸೂರ್ಯಾಸ್ತಮಾನ: ಆಗುಂಬೆಯ ಪೇಟೆಯಿಂದ ಸುಮಾರು ಒಂದು ಮೈಲು ಪಶ್ಚಿಮದಲ್ಲಿ ಆಗುಂಬೆಯ ಜಗತ್ಪ್ರಸಿದ್ಧ ಸೂರ್ಯಾಸ್ತಮಾನ ದೃಶ್ಯವನ್ನು ಕಾಣಲು ಬೆಟ್ಟದ ನೆತ್ತಿಯಲ್ಲಿ ಒಂದು ರಂಗಸ್ಥಳವನ್ನು ಮಾಡಿದ್ದಾರೆ. ವರ್ಷವಿಡೀ-ಮಳೆಗಾಲ ಹೊರತು-ಈ ಭೂಮದೃಶ್ಯವನ್ನು ನೋಡಲು ದೇಶೀಯ, ವಿದೇಶೀಯ ಪ್ರವಾಸಿಗಳು ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಬರುತ್ತಾರೆ. ಮೋಡವಲ್ಲದ ಶುಭ್ರ ಸಂಜೆಗಳಲ್ಲಿ ಸೂರ್ಯಾಸ್ತವನ್ನು ನೋಡಲು ಚೆನ್ನ. ಈ ರಂಗಸ್ಥಳದಿಂದ ಇದ್ದಕ್ಕಿದ್ದಂತೆ ಸುಮಾರು 3,000' ಪಾತಾಳ ದರ್ಶನ ಮೈನವಿರೇಳಿಸುವಂಥದು. ಕೇವಲ ಆಳ ಮಾತ್ರವಲ್ಲ, ಪಡುಗಡಲ ತಡಿಯವರೆಗಿನ, ಅಲ್ಲಿಂದ ದಿಗಂತದ ಅಂಚಿನವರೆಗಿನ ಸುಮಾರು 30 ಮೈಲುಗಳ ವಿಸ್ತಾರ ಒಮ್ಮೆಗೇ ಕಣ್ಣುಗಳನ್ನು ತುಂಬುತ್ತದೆ. ಆ ಕ್ಷಣದಲ್ಲಿ ಆಗುವ ಅನುಭವ ಮಾತಿಗೆ ಮೀರಿದುದು; ಮೌನವಾಗಿ ಅನುಭವಿಸುವಂಥದು.
ಸೂರ್ಯಾಸ್ತಮಾನದ ಸುಂದರದೃಶ್ಯವನ್ನು ನೋಡಲು ರಂಗಸ್ಥಳದಲ್ಲಿ ಸಂಜೆಯ ಹೊತ್ತು ಕುಳಿತು ಪ್ರಕೃತಿ ತೋರುವ ವಿವಿಧವೇಷಗಳನ್ನು ಕಾಣಬೇಕು. ನಿಸರ್ಗ ತನ್ನ ನೂರಾರು ಸೀರೆಗಳನ್ನು ಉಟ್ಟು ಕಳಚುತ್ತಿರುತ್ತದೆ. ಅರಬ್ಬೀಸಮುದ್ರದಿಂದ ಹುಟ್ಟಿ ಸಾವಿರಾರು ಬೆಳ್ಳಿಮೋಡಗಳು ಬೆಳ್ಳಿಯ ವಿಮಾನಗಳಂತೆ ತೇಲಿ ಬರುತ್ತಿರುತ್ತವೆ. ಸೂರ್ಯನ ಬಿಸಿಲು ಪ್ರಖರವಾಗಿರುವ ಮಧ್ಯಾಹ್ನದ ಹೊತ್ತು ಸಮುದ್ರದ ಕಡೆಗೆ ನೋಡಬೇಕು. ಸಾವಿರಾರು ಮೈಲು ಅಗಲದ ಪಡುಗಡಲು ಕೇವಲ 2-3 ಅಗಲವಾಗಿ ದಿಗಂತರೇಖೆಯಲ್ಲಿ ಒಂದಾಗುವ ಅದ್ಭುತವನ್ನು ಕಾಣಬಹುದು. ಅಲೆಗಳಿಂದ ಸಂಚಲಿತವಾದ ಸಮುದ್ರ ಏನೋ ಜೀವಂತವಸ್ತು ಅತ್ತಿತ್ತ ಅಲುಗಾಡಿದಂತೆ ಕಾಣುವ ದೃಶ್ಯ ವಿಸ್ಮಯಕರವಾದುದು. ಸಮುದ್ರದಲ್ಲಿ ಓಡಾಡುವ ಬಿಳಿಯ ಹಾಯಿ ಬಿಚ್ಚಿದ ದೊಡ್ಡ ದೊಡ್ಡ ದೋಣಿಗಳನ್ನೂ ಹಡಗುಗಳನ್ನೂ ಕಾಣಬಹುದು.
ಸಂಜೆಯ ಹೊತ್ತೋ, ಸೌಂದರ್ಯದ ವಾರಿಧಿಯೇ ನಮ್ಮೆದುರು ನಿಲ್ಲುತ್ತದೆ. ಸೂರ್ಯ ತನ್ನ ಪ್ರಖರತೆಯನ್ನು ಕಳೆದುಕೊಂಡು ಇಳಿಯುತ್ತಿರುವಾಗ ಕ್ಷಣಕ್ಷಣವೂ ಸಮುದ್ರ ಸುತ್ತಮುತ್ತಲಿನ ಮೇಘಮಾಲೆ ಬಗೆಬಗೆಯ ಬಣ್ಣವನ್ನು ತಳೆಯುತ್ತವೆ. ಸೂರ್ಯಾಸ್ತಮಾನದ ನಾಟಕವನ್ನಾಡಲು ಪ್ರಕೃತಿ ನಿರ್ಮಿಸಿದ ಮಹಾಪಟವಾಗಿ ಪಶ್ಚಿಮಾಕಾಶ ಚಿತ್ರ ವೈಚಿತ್ರ್ಯಗಳಿಂದ ತುಂಬಿರುತ್ತದೆ. ಸೂರ್ಯ ಇಳಿಯುತ್ತಿರುವಂತೆ ಕಡಲು ಮೊದಮೊದಲು ಹೊಂಬಣ್ಣದ ಹಾಳೆಯಾಗಿದ್ದು, ದಿಗಂತರೇಖೆಗೆ ಹತ್ತಿರವಾದಾಗ ಸಮಸ್ತ ಸಮುದ್ರವಿಸ್ತಾರ ರಕ್ತಾರುಣರೇಖೆಯಾಗುತ್ತದೆ. ಪ್ರಕೃತಿಯ ಸುಂದರದೃಶ್ಯಗಳಲ್ಲಿ ಒಂದಾದ ಸೂರ್ಯಾಸ್ತಮಾನ ಭಾರತದಲ್ಲಿ ಮತ್ತೆಲ್ಲಿಯೂ ಇಷ್ಟು ಸುಂದರವಾಗಿ ಕಾಣಿಸುವುದಿಲ್ಲವಂತೆ, ಸಾವಿರಾರು ಮೈಲು ದೂರದಿಂದ ಆ ಒಂದು ಅಮೃತಗಳಿಗೆಯನ್ನು ಸವಿಯಲಿಕ್ಕಾಗಿ ಪ್ರವಾಸಿಗಳು ಬರುತ್ತಾರೆ. ಬಣ್ಣಬಣ್ಣದ ಮೋಡಗಳು ಆನೆಯ, ಸಿಂಹದ, ವಿವಿಧ ಪ್ರಾಣಿಗಳು, ನಮ್ಮ ಕಲ್ಪನೆಗನುಸಾರವಾಗಿ ಬಗೆಬಗೆಯ ರೂಪಗಳನ್ನು ತಾಳಿ ತಮ್ಮ ಪಾತ್ರಗಳನ್ನು ಅಭಿನಯಿಸಿ ಮರೆಯಾಗುತ್ತವೆ. ಯಾವ ಚಿತ್ರಕಾರನ ಚಿತ್ರವೂ ಈ ನಿಸರ್ಗ ನಿರ್ಮಿತ ಕಲಾಕೃತಿಗೆ ಸರಿದೂಗದು ಎಂದೆನಿಸುತ್ತದೆ. ಸೂರ್ಯ ಮುಳುಗುವ ಕೊನೆಯ ಒಂದು ಮಿನಿಟು ಹೊತ್ತಂತೂ ಅಪೂರ್ವ ರಸಗಳಿಗೆ ಎನ್ನಬೇಕು. ಆಗುಂಬೆಯ ಸೂರ್ಯಾಸ್ತಮಾನದ ಸಮಯ ಸೂರ್ಯ ಕವುಚಿಟ್ಟ ಸ್ವರ್ಣ ಕುಂಭಾಕೃತಿಯಾಗಿ, ಅರ್ಧಚಂದ್ರಾಕೃತಿಯಾಗಿ; ಕಟ್ಟಕಡೆಗೆ ಬಿದಿಗೆಯ ಚಂದ್ರಲೇಖೆಯಾಗಿ ತನ್ನ ಕೊನೆಯ ರೂಪದಲ್ಲಿ ಮರೆಯಾಗುವ ಸೌಂದರ್ಯ ನಾಟಕ ದೃಶ್ಯ ಆನಂದದ ಹುಚ್ಚು ಹಿಡಿಸುತ್ತದೆ. ಸಾಯುವುದರೊಳಗೆ ಈ ಒಂದು ಅಮೃತಗಳಿಗೆಯನ್ನು ಕಾಣದೆ ಹೋಗುವವನು ಮನುಷ್ಯನಲ್ಲ ಎಂದೆನಿಸುತ್ತದೆ.
ಪೌರಾಣಿಕ: ಆಗುಂಬೆ ಜಮದಗ್ನಿ-ರೇಣುಕಾದೇವಿಯರ ಮಗನಾದ ಪರಶುರಾಮನ ಊರು ಎಂಬ ನಂಬಿಕೆ ಇದೆ. ಅವನು ತನ್ನ ತಂದೆಯ ಮರಣಕ್ಕೆ ಕಾರಣನಾದ ಕಾರ್ತವೀರ್ಯಾರ್ಜುನನನ್ನು ಈಶ್ವರದತ್ತವಾದ ತನ್ನ ಪರಶುವಿಗೆ ಬಲಿಗೊಟ್ಟು, ಇಪ್ಪತ್ತೊಂದು ಬಾರಿ ಭೂಪ್ರದಕ್ಷಿಣೆ ಮಾಡಿ ಕ್ಷತ್ರಿಯ ಕುಲವನ್ನೇ ನಿರ್ಮೂಲ ಮಾಡಿದನಂತೆ. ಈ ಕ್ಷತ್ರಿಯಹತ್ಯೆಯ ಪಾಪವನ್ನು ಕಳೆದುಕೊಳ್ಳಲು ಅಶ್ವಮೇಧಯಾಗವನ್ನು ಮಾಡಿ, ಆತ ಸಮಸ್ತ ಭೂಮಿಯನ್ನು ಕಶ್ಯಪ ಋಷಿಗೆ ಧಾರೆಯೆರೆದು ದಾನಕೊಟ್ಟನಂತೆ. ಆಗ ಪರಶುರಾಮನಿಗೆ ಇರಲು ಸ್ಥಳವಿಲ್ಲದೆ ಆಗುಂಬೆಯ ಸಹ್ಯಾದ್ರಿಶಿಖರದಲ್ಲಿ ನಿಂತು ಎದುರುಗಡೆಯ ಸಮುದ್ರಕ್ಕೆ ಈ ಪರಶು ಹೋದಷ್ಟು ದೂರ ತನಗೆ ಸ್ಥಳಕೊಡು ಎಂದು ಪ್ರಾರ್ಥಿಸಿ ತನ್ನ ಕೊಡಲಿಯನ್ನು ಎಸೆದನಂತೆ. ಸಮುದ್ರ ಸಹ್ಯಾದ್ರಿಯಿಂದ ಹಿಂದಕ್ಕೆ ಉರುಳಿತಂತೆ. ಅಂದಿನಿಂದ ಆ ಭಾಗದ ಪಶ್ಚಿಮ ಕರಾವಳಿಯೆಲ್ಲ ಪರಶುರಾಮಕ್ಷೇತ್ರವೆಂದು ಹೆಸರಾಯಿತಂತೆ. ಹೀಗೆ ಪೌರಾಣಿಕವಾಗಿಯೂ ಆಗುಂಬೆಗೆ ಮಹತ್ವವಿದೆ.
(ಎ.ಆರ್.; ಜಿ.ಸಿ.ಎ.)