ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆದಿಶಂಕರಾಚಾರ್ಯ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಆದಿಶಂಕರಾಚಾರ್ಯ (789-820). ಅದ್ವೈತ ತತ್ತ್ವ ಪ್ರತಿಪಾದಕರಲ್ಲಿ ಅಗ್ರಗಣ್ಯರು. ಉಪನಿಷತ್ತುಗಳು, ಭಗವದ್ಗೀತೆ ಮತ್ತು ಬ್ರಹ್ಮಸೂತ್ರಗಳ ಮೇಲೆ ಆಳವೂ ಮೌಲಿಕವೂ ಆದ ಭಾಷ್ಯಗಳನ್ನು ಬರೆದಿದ್ದಾರೆ. ಅವರ ಅದ್ವೈತ ತುಂಬ ವಿಚಾರಪರವೂ ಮತ್ತು ತರ್ಕನಿಷ್ಠವೂ ಆದ ಸಿದ್ಧಾಂತ. ಅದು ಒಂದು ಕಲಾಕೃತಿಯಂತೆ ಪರಿಪೂರ್ಣವಾಗಿದೆ. ತನ್ನ ಸಿದ್ಧಾಂತಕ್ಕೆ ಆಧಾರವಾದ ತತ್ತ್ವಗಳನ್ನು ಅದರ ಅಂತಿಮ ಗುರಿಯನ್ನೂ ಸ್ಪಷ್ಟಪಡಿಸಿ ಅದರ ಎಲ್ಲ ಅಂಶಗಳನ್ನು ಸಾಂಗತ್ಯವಾಗಿ ವಿಶ್ರಾಂತಗೊಳಿಸಿದೆ. ಭಾರತೀಯ ಮತ್ತು ಪಾಶ್ಚಾತ್ಯ ದೇಶಗಳಲ್ಲಿ ಮೆಚ್ಚುಗೆ ಪಡೆದಿದೆ.

ಇಂಥ ಮಹಾಮಹಿಮರಾದ ತಾತ್ತ್ವಿಕರ ಜೀವನದ ವಿಚಾರವಾಗಿ ನಮಗೆ ತಿಳಿದಿರುವ ಅಂಶಗಳು ಅತ್ಯಲ್ಪ. ಇವರು ಯಾವ ಕಾಲದಲ್ಲಿ ಹುಟ್ಟಿ ಬೆಳೆದರು ಎಂಬುದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಇವರು ಕ್ರಿ.ಶ. ಆರನೆಯ ಶತಮಾನದ ಮಧ್ಯ ಅಥವಾ ಅಂತಿಮ ಭಾಗದಲ್ಲಿದ್ದಿರಬಹುದೆಂದು ತೇಲಂಗರು, ಕ್ರಿ.ಶ 980 ಅಥವಾ ಅದಕ್ಕೆ ಕೆಲವು ವರ್ಷಗಳ ಹಿಂದೆ ಇದ್ದಿರಬಹುದೆಂದು ಆರ್. ಜಿ. ಭಂಡಾರ್ಕರ್ ಅವರು ವಾದಿಸುತ್ತಾರೆ. ಕ್ರಿ.ಶ. 820 ರಲ್ಲಿ ನಿರ್ವಾಣ ಹೊಂದಿದರೆಂದು ಮ್ಯಾಕ್ಸ್‍ಮುಲ್ಲರ್ ಮತ್ತು ಮೆಕ್‍ಡೊನೆಲ್ ಅವರು ಅಭಿಪ್ರಾಯಪಡುತ್ತಾರೆ. ಕ್ರಿ.ಶ. ಒಂಬತ್ತನೆಯ ಶತಮಾನದ ಆದಿಯಲ್ಲಿ ಇದ್ದರೆಂದು ಬೆರ್ರಿಡೇಲ್ ಕೀತ್ ತಿಳಿಸುತ್ತಾನೆ. ಅಂತೂ ಅವರು ಬದುಕಿ ಬಾಳಿದ ಅವಧಿ ಮೂವತ್ತೆರಡು ವರ್ಷಗಳೇ ಎಂಬ ವಿಚಾರದಲ್ಲಿ ಹೆಚ್ಚೂ ಕಡಿಮೆ ಎಲ್ಲರ ಒಮ್ಮತವಿದೆ. ಇಷ್ಟು ಅವಧಿಯಲ್ಲಿ ಬಹುಶಃ ಅವರು ಸಾಧಿಸಿದಷ್ಟು ಮಹಾಕಾರ್ಯಗಳನ್ನಾಗಲಿ ರಚಿಸಿದಷ್ಟು ಮಹಾಗ್ರಂಥಗಳನ್ನಾಗಲಿ ಬೇರೆ ಯಾವ ಭಾರತೀಯನೂ ಸಾಧಿಸಿಲ್ಲ.

ಶಂಕರಾಚಾರ್ಯರ ಅನುಯಾಯಿಗಳು ಅವರ ಜೀವನ ಚರಿತ್ರೆಯನ್ನು ರಚಿಸಿದ್ದಾರೆ. ಅವುಗಳಲ್ಲಿ ಮಾಧವಾಚಾರ್ಯರ ಶಂಕರ ದಿಗ್ವಿಜಯ ಮತ್ತು ಆನಂದಗಿರಿಯ ಶಂಕರವಿಜಯ ಮುಖ್ಯವಾದವು. ಚಿದ್ವಿಲಾಸ ಮತ್ತು ಸದಾನಂದ ಇವರಿಬ್ಬರೂ ಶಂಕರಾಚಾರ್ಯರ ಜೀವನದ ಕೆಲವು ವಿವರಗಳನ್ನು ತಿಳಿಸಿದ್ದಾರೆ. ಸ್ಕಾಂದಪುರಾಣದಲ್ಲೂ ಕೆಲವು ವಿವರಗಳು ದೊರೆಯುತ್ತವೆ. ನಾರಾಯಣಾಚಾರ್ಯರು ತಮ್ಮ ಮಧ್ವವಿಜಯದಲ್ಲೂ ಮಣಿಮಂಜರಿಯಲ್ಲೂ ಶಂಕರಾಚಾರ್ಯರ ಜೀವನವನ್ನು ಕುರಿತು ಕೆಲವು ಅಂಶಗಳನ್ನು ತಿಳಿಸಿದ್ದಾರೆ. ಇವುಗಳಲ್ಲಿ ಬಹುಭಾಗ ಕೇವಲ ಕಾಲ್ಪನಿಕವಾದವು. ಚರಿತ್ರೆಯ ದೃಷ್ಟಿಯಲ್ಲಿ ಮುಖ್ಯವಾದುದಲ್ಲ. ಕ್ರಿ.ಪೂ. 44ರಲ್ಲಿ ಚಿದಂಬರದಲ್ಲಿ ಜನಿಸಿ, ಕ್ರಿ.ಪೂ. 12ರಲ್ಲಿ ದೈವಾಧೀನರಾದರೆಂದು ಆನಂದಗಿರಿಯವರು ತಿಳಿಸುತ್ತಾರೆ. ಇವರ ಅಭಿಪ್ರಾಯಕ್ಕೆ ಆಧಾರವಿಲ್ಲ.

ಶಂಕರಾಚಾರ್ಯರು ಮಲಬಾರಿನ ನಂಬೂದರಿ ಬ್ರಾಹ್ಮಣ ಜಾತಿಗೆ ಸೇರಿದವರು. ಕಾಲಟಿಯಲ್ಲಿ ಶಿವಗುರು ಮತ್ತು ಆರ್ಯಾಭಾಮಾದೇವಿ ಎಂಬ ದಂಪತಿಗಳ ಮಗನೆಂದು ಸಾಮಾನ್ಯವಾಗಿ ಎಲ್ಲರೂ ನಂಬಿರುತ್ತಾರೆ. ಶಂಕರಾಚಾರ್ಯರ ಮನೆತನದವರು ಶೈವರೆಂದೂ, ಶಾಕ್ತೇಯರೆಂದೂ ಎರಡು ಅಭಿಪ್ರಾಯಗಳಿವೆ. ಇವರು ಬಾಲ್ಯದಲ್ಲಿ ಗೌಡಪಾದರ ಶಿಷ್ಯರಾದ ಗೋವಿಂದರಲ್ಲಿ ವಿದ್ಯಾಭ್ಯಾಸ ಮಾಡಿದರು. ತಮ್ಮ ಗ್ರಂಥಗಳಲ್ಲಿ ಅವರು ಗೋವಿಂದರ ಶಿಷ್ಯರೆಂದು ಸ್ಪಷ್ಟವಾಗಿ ತಿಳಿಸಿರುತ್ತಾರೆ. ತುಂಬ ಚಿಕ್ಕ ಹುಡುಗನಾಗಿದ್ದಾಗಲೇ ಎಲ್ಲ ವೇದಗಳನ್ನೂ ಬಾಯಿಪಾಠ ಮಾಡಿದ್ದರೆಂದು ತಿಳಿದುಬರುತ್ತದೆ. ಯೌವ್ವನದಲ್ಲೇ ಅವರಿಗೆ ಸನ್ಯಾಸದ ಹಂಬಲು ಹಿಡಿಯಿತು. ತಾಯಿಗಾದರೋ ಮಗನು ಮದುವೆಯಾಗಿ ಮಕ್ಕಳನ್ನು ಪಡೆದುದನ್ನು ನೋಡಿ ಆನಂದಿಸುವ ಹೆಬ್ಬಯಕೆ. ಮಗನ ದೃಢಸಂಕಲ್ಪವನ್ನೂ ನಿರಂತರ ಬೇಡಿಕೆಯನ್ನೂ ಆಧರಿಸಿ ಅವಸಾನ ಕಾಲದಲ್ಲಿ ತನ್ನ ಬಳಿಗೆ ಬರಬೇಕೆಂದು ಮಗನಿಂದ ಮಾತು ಪಡೆದು ತಾಯಿ ಮಗನಿಗೆ ಸನ್ಯಾಸ ಸ್ವೀಕಾರಕ್ಕೆ ಒಪ್ಪಿಗೆ ಕೊಟ್ಟರು.

ತಾವು ತಿಳಿದ ತತ್ತ್ವವನ್ನು ಬೋಧಿಸಲು ಅವರು ತಮ್ಮ ಜೀವಮಾನವನ್ನೇ ಮುಡಿಪಾಗಿಟ್ಟು ಕನ್ಯಾಕುಮಾರಿಯಿಂದ ಹಿಡಿದು ಕಾಶ್ಮೀರದವರೆಗೆ ಇಡೀ ಭಾರತವನ್ನೆಲ್ಲ ಸುತ್ತಿದರು. ಬೇರೆ ಬೇರೆ ಕಡೆಗಳಲ್ಲಿ ಸಂಧಿಸಿದ ಭಿನ್ನ ಮತದವರೊಡನೆ ವಾದ ನಡೆಸಿದರು. ಪ್ರಸಿದ್ಧ ಮೀಮಾಂಸಕಾರರಾದ ಕುಮಾರಿಲಭಟ್ಟರನ್ನೂ ಮಂಡನಮಿಶ್ರರನ್ನೂ ವಾದದಲ್ಲಿ ಗೆದ್ದು ಅವರನ್ನು ತಮ್ಮ ಅನುಯಾಯಿಗಳಾಗಿ ಮಾಡಿಕೊಂಡರೆಂದು ತಿಳಿಯಬರುತ್ತದೆ. ಒಂದು ಸಂಪ್ರದಾಯದ ಪ್ರಕಾರ ಶಂಕರಾಚಾರ್ಯರು ಕುಮಾರಿಲಭಟ್ಟರ ಶಿಷ್ಯರು.

ವಿರಕ್ತರಾದ ಅವರು ಮಾನವ ಶ್ರೇಯಸ್ಸಿನಲ್ಲಿ ಆಸಕ್ತಿ ಪಡೆದಿದ್ದರು. ಕ್ಷೀಣದಶೆಯಲ್ಲಿದ್ದ, ಕುರುಡು ನಂಬಿಕೆಗಳಿಗೆ ಬಲಿಯಾಗಿದ್ದ ಅಸಹ್ಯಕರ ವರ್ತನೆಗಳಿಂದ ತುಂಬಿದ್ದ ಅಂದಿನ ಮತಗಳನ್ನು ಶುದ್ಧೀಕರಿಸಿ ಶುದ್ಧವಾದ ಹಲವು ಸಂಪ್ರದಾಯಗಳನ್ನು ಸ್ಥಾಪಿಸಲು ಹಗಲಿರುಳೂ ಶ್ರಮಿಸಿದರು. ಅದಕ್ಕಾಗಿ ದೇಶಾಟನೆಯನ್ನು ಕೈಗೊಂಡರು. ಕಾಮರೂಪದಲ್ಲಿ ಅಭಿನವಗುಪ್ತನೊಂದಿಗೆ ವಾದ ನಡೆಸಿ ಗೆದ್ದರೆಂದು ಐತಿಹ್ಯವಿದೆ. ಇದು ನಿಜವಾದರೆ ಅವರ ಜೀವನಕಾಲ ಇನ್ನೂ ಮುಂದೆ ಹೋಗಬೇಕಾಗುತ್ತದೆ. ಸಂನ್ಯಾಸಿಗಳಾದರೂ ತಾಯಿಯ ಅಂತ್ಯಕ್ರಿಯೆ ನಡೆಸಿ ಸಂಪ್ರದಾಯಶರಣರ ನೈಷ್ಠುರ್ಯಕ್ಕೆ ಪಾತ್ರರಾದರು. ಕಂಚಿಯಲ್ಲಿ ಕೆಲವು ಕಾಲವಿದ್ದು ಪುನಃ ಉತ್ತರ ದೇಶಗಳಿಗೆ ಹೋಗಿ ಕೇದಾರನಾಥದಲ್ಲಿ ತಮ್ಮ ಮೂವತ್ತೆರಡನೆಯ ವಯಸ್ಸಿನಲ್ಲಿ ನಿರ್ವಾಣ ಹೊಂದಿದರು.

ತಮ್ಮ ಕೆಲವೇ ವರ್ಷಗಳ ಜೀವನದಲ್ಲಿ ಶ್ರೀ ಶಂಕರಾಚಾರ್ಯರು ನಾಲ್ಕಾರು ಜನ ಒಂದೊಂದು ಪೂರ್ಣಜೀವಮಾನದಲ್ಲಿ ಸಾಧಿಸಬಹುದಾದಷ್ಟು ಸಾಧಿಸಿದ ಮಹಾಪುರುಷರು. ಪ್ರಸ್ಥಾನತ್ರಯಗಳೆಂದು ಪ್ರಸಿದ್ಧವಾದ ಮುಖ್ಯವಾದ ಉಪನಿಷತ್ತುಗಳು, ಬ್ರಹ್ಮ ಸೂತ್ರ ಮತ್ತು ಭಗವದ್ಗೀತೆಗಳ ಮೇಲೆ ಅತ್ಯುತ್ಕೃಷ್ಟವಾದ ಭಾಷ್ಯಗಳನ್ನು ಬರೆದಿದ್ದಾರೆ. ಅದ್ವೈತತತ್ತ್ವವನ್ನು ಸ್ಥಾಪಿಸುವುದೇ ಈ ಮೂರು ಭಾಷ್ಯಗಳ ಮುಖ್ಯೋದ್ಧೇಶ. ಅತಿ ಗಹನವಾದ ತತ್ತ್ವವನ್ನು ಇವರು ತುಂಬ ಸರಳವಾದ ಶೈಲಿಯಲ್ಲಿ ಹೇಳಿದ್ದಾರೆ. ಅಲ್ಲಲ್ಲಿ ಕಾಣಬರುವ ನವುರಾದ ಹಾಸ್ಯ ಅವರ ಬರವಣಿಗೆಯನ್ನು ಮನೋಹರವಾಗಿ ಮಾಡಿದೆ. ಅವರದ್ದು ತಿಳಿಯಾದ, ಗಂಭೀರವಾದ, ಸಾರಪ್ರಕಾಶನ ಯೋಗ್ಯವಾದ, ಸುಂದರ ಶೈಲಿ. ಬ್ರಹ್ಮಸೂತ್ರ ಭಾಷ್ಯ ಆಚಾರ್ಯರ ಎಲ್ಲ ಗ್ರಂಥಗಳಿಗಿಂತಲೂ ಸುಂದರವಾದುದು, ಪ್ರೌಢವಾದುದು ಎಂಬ ಪ್ರಶಂಸೆಗೆ ಪಾತ್ರವಾಗಿದೆ. ಶರೀರದಲ್ಲಿ ಸ್ಥಿತನಾದ ಆತ್ಮನ ವಿಚಾರವನ್ನು ಕುರಿತದ್ದಾದುದರಿಂದ ಬ್ರಹ್ಮಸೂತ್ರಗಳನ್ನು ಶಾರೀರಿಕ ಸೂತ್ರಗಳೆಂದೂ, ಭಾಷ್ಯವನ್ನು ಶಾರೀರಕ ಭಾಷ್ಯವೆಂದೂ ಕರೆಯುತ್ತಾರೆ. ಗೀತಾ ಭಾಷ್ಯದಲ್ಲಿ ಅನುಕ್ರಮವಾಗಿ ಪ್ರತಿ ಪದದ ಅರ್ಥವೂ ತಾತ್ಪರ್ಯವೂ ಇವೆ. ಈ ಭಾಷ್ಯ ಜ್ಞಾನಪರವಾದುದು. ಏಕೆಂದರೆ ತತ್ತ್ವಜ್ಞಾನದಿಂದ ಮಾತ್ರ ಮೋಕ್ಷ ಪ್ರಾಪ್ತಿ ಎಂಬುದು ಆಚಾರ್ಯರ ಅಭಿಪ್ರಾಯ. ಉಪನಿಷದ್ ಭಾಷ್ಯಗಳು ಮೂಲಕೃತಿಯಷ್ಟೇ ಸರಳವಾಗಿವೆ. ಸಾಹಿತ್ಯದ ದೃಷ್ಟಿಯಿಂದ ಇವಕ್ಕೆ ಮಹತ್ವ ಉಂಟು. ಪ್ರೌಢವೂ ಶಾಸ್ತ್ರೀಯವೂ ನೇರವೂ ಆದ ಗದ್ಯದ ಉತ್ತಮ ಮಾದರಿಗಳು ಇಲ್ಲಿವೆ.

ಪ್ರಸ್ಥಾನತ್ರಯ ಭಾಷ್ಯಗಳಲ್ಲಿ ಸಾಮರಸ್ಯವಿದೆ. ಏಕಮುಖವಾದ ದೃಷ್ಟಿ ಇದೆ. ಒಂದೇ ತತ್ತ್ವದ ನಿರೂಪಣೆಯೂ ಇದೆ. ಆಚಾರ್ಯರ ಸಿದ್ಧಾಂತಗಳನ್ನು ಆಮೂಲಾಗ್ರವಾಗಿ ತಿಳಿಯಲು ಇವು ಅತ್ಯಂತ ಅವಶ್ಯಕ. ಶಂಕರರು ತತ್ತ್ವಜ್ಞರಲ್ಲದೆ ಕವಿಗಳು. ಸ್ತೋತ್ರ ಸಾಹಿತ್ಯದಲ್ಲಿ ಅವರ ಹೆಸರು ಚಿರಸ್ಥಾಯಿಯಾಗಿದೆ. ಭಜಗೋವಿಂದಂ, ಭಜಗೋವಿಂದಂ, ಗೋವಿಂದಂ ಭಜ ಮೂಢಮತೇ, ಸಂಪ್ರಾಪ್ತೇ ಸನ್ನಿಹಿತೇ ಕಾಲೇ ನಹಿ ನಹಿ ರಕ್ಷತಿ ಡುಕೃಙ್ಕರಣೆ ಎನ್ನುವ ಸ್ತೋತ್ರವನ್ನು ಕೇಳದವರಿಲ್ಲ. ಈ ಸ್ತೋತ್ರಗಳಿಗೆ ಚರ್ಪಟ ಮಂಜರಿಕಾ, ಮೋಹಮುದ್ಗರ, ದ್ವಾದಶ ಮಂಜರೀ, ದ್ವಾದಶ ಪಂಜರಿಕಾ ಎಂಬ ಹೆಸರುಗಳಿವೆ. ಅವರ ಹೃದಯ ಉದಾರವಾದದ್ದು. ಶಿವ, ವಿಷ್ಣು, ಬ್ರಹ್ಮರಲ್ಲಿ ಅವರು ಒಂದೇ ರೀತಿಯಾಗಿ ಪ್ರೀತಿಯನ್ನು ತೋರಿಸಿರುತ್ತಾರೆ. ಶಿವನದಾಗಲಿ, ವಿಷ್ಣುವಿನದಾಗಲಿ, ದೇವಿಯದಾಗಲಿ ಅವರ ಒಂದೊಂದು ಸ್ತೋತ್ರವನ್ನು ಓದಿದಾಗಲೂ ಅವರು ಆ ದೇವತೆಯ ಪರಮ ಭಕ್ತರು, ಆ ದೇವತೆಯೇ ಅವರ ಇಷ್ಟದೇವತೆಯೋ ಎಂಬಂತೆ ಬೋಧೆಯಾಗುತ್ತದೆ. ಗಂಗಾ, ಯಮುನಾ, ನರ್ಮದಾ ನದಿಗಳ ಸ್ತೋತ್ರಗಳು ನಾದಲೀಲೆಯ ಸೌಂದರ್ಯವನ್ನು ಸೂಸುತ್ತವೆ. ಅವರ ಸೌಂದರ್ಯಲಹರಿಯ ತತ್ತ್ವ ಎಷ್ಟು ಗಂಭೀರವೋ ಅದರ ಶೈಲಿಯೂ ಅಷ್ಟೇ ಮನೋಹರ. ಇತರ ಸ್ತೋತ್ರಗಳಲ್ಲಿ ಮುಖ್ಯವಾದವು. ಅನ್ನಪೂರ್ಣೇಶ್ವರೀ ಸ್ತೋತ್ರ, ನರಸಿಂಹ ಕರಾವಲಂಬನ ಸ್ತೋತ್ರ, ಆನಂದಲಹರಿ, ಶಿಖರಣೀ ವೃತ್ತದ 20 ಪದ್ಯಗಳನ್ನುಳ್ಳ ಆನಂದಲಹರಿಯ ಮೇಲೆ ಮೂವತ್ತು ವ್ಯಾಖ್ಯಾನಗಳು ಬಂದಿವೆ. ಎಂದಮೇಲೆ ಅದರ ಪ್ರಾಮುಖ್ಯ ಸುಸ್ಪಷ್ಟವಾಗಿದೆ. ದೇವಿಯ ಸುಂದರ ಸ್ತುತಿಗಳನ್ನೊಳಗೊಂಡ ಈ ಪುಟ್ಟ ಸ್ತೋತ್ರಕಾವ್ಯ ಇಂದಿಗೂ ಜನಪ್ರಿಯವಾಗಿದೆ. ಆಥರ್ವಶಿಖಾ, ಆಥರ್ವ ಶಿರಸ್, ನೃಸಿಂಹತಾಪನೀಯ ಉಪನಿಷತ್ತುಗಳ ಮೇಲೆ ಅವರು ಭಾಷ್ಯಗಳನ್ನು ಬರೆದರೆಂದು ಹೇಳುವ ಒಂದು ವಾದವಿದೆ. ದಕ್ಷಿಣಾಮೂರ್ತಿ ಸ್ತೋತ್ರ, ಹರಿಮೀಡೆ ಸ್ತೋತ್ರ, ಸೋಹಮುದ್ಗರ, ದಶಶ್ಲೋಕೀ, ಅಪರೋಕ್ಷಾನುಭೂತಿ, ಆಪ್ತವಜ್ರಸೂಚಿ, ವಿಷ್ಣುಸಹಸ್ರನಾಮ ಭಾಷ್ಯ, ಸನತ್‍ಸುಜಾತ-ಇವು ಇತರ ಕೆಲವು ಮುಖ್ಯ ಕೃತಿಗಳು.

ಇವಲ್ಲದೇ ವೇದಾಂತ ವಿಚಾರವನ್ನೊಳಗೊಂಡು ಪದ್ಯರೂಪದಲ್ಲಿ ರಚಿತವಾಗಿರುವ ಇವರ ಇಪ್ಪತ್ತೈದಕ್ಕೂ ಹೆಚ್ಚಿನ ಕೃತಿಗಳು ಪ್ರಕರಣ ಗ್ರಂಥಗಳೆಂದು ಪ್ರಸಿದ್ಧವಿವೆ. ಶ್ರೀ ಶಂಕರಾಚಾರ್ಯರು ಜ್ಞಾನಯೋಗವೇ ಪರಮಸಿದ್ಧಿಗೆ ಏಕೈಕ ಮಾರ್ಗವೆಂದು ಬೋಧಿಸಿರುವುದು ನಿಜ. ಆದರೆ ಅವರ ಸ್ತೋತ್ರಗಳನ್ನು ಓದುತ್ತಿದ್ದಾಗ ನಮಗೆ ಅವರು ಭಕ್ತಿಯೋಗಿಗಳೆಂದೆನ್ನಿಸುತ್ತದೆ. ಜ್ಞಾನಕ್ಕೂ ಭಕ್ತಿಗೂ ಕರ್ಮಕ್ಕೂ ವಿರೋಧವನ್ನು ಬಗೆಯದ ಉದಾರ ಹೃದಯ ಅವರದೆಂದು ಬೋಧೆಯಾಗುತ್ತದೆ. ಅವರು ಬಾಲ್ಯದಲ್ಲಿ ಸಂಸಾರವನ್ನು ತೊರೆದು ಸಂನ್ಯಾಸಿಗಳಾದರೂ ಅವರ ಹೃದಯ ಮಾತ್ರ ನಿರಂತರವಾಗಿ ಮಾನವನಿಗೆ ಶ್ರೇಯಸ್ಸನ್ನುಂಟುಮಾಡುವುದರಲ್ಲಿ ಲೀನವಾಗಿತ್ತು. ಹಗಲಿರುಳೂ, ವರ್ಷದ ದಿನದಿನವೂ, ಬಾಳಿದ ಹಲವು ವರ್ಷಗಳೂ ಭಾರತದಲ್ಲಿ ಜನರ ಮತೀಯ ಜೀವನವನ್ನು ಸ್ವಚ್ಛಗೊಳಿಸಲು, ಬಲಪಡಿಸಲು ಅವರು ಶ್ರಮಿಸಿದರು.

ಶ್ರೀ ಶಂಕರಾಚಾರ್ಯರು ತಮ್ಮ ಕಾಲದಲ್ಲಿ ಪ್ರಚಾರದಲ್ಲಿದ್ದ ಎಲ್ಲ ಮತಗಳಲ್ಲೂ ಆಸಕ್ತಿ ತೋರಿಸಿ ಅವುಗಳಲ್ಲಿ ಕಂಡುಬಂದ ಲೋಪದೋಷಗಳನ್ನು ನಿವಾರಿಸಿದರು. ಸಾಮಾನ್ಯ ಜನರು ಕ್ಷುದ್ರ ದೇವತಾರಾಧನೆಯಲ್ಲೂ ನರಬಲಿ ಮುಂತಾದ ಘೋರ ಕೃತ್ಯಗಳಲ್ಲೂ ಭಾಗವಹಿಸುವುದನ್ನು ತೀವ್ರವಾಗಿ ಖಂಡಿಸಿದರು. ಭಕ್ತಿ ಪಂಥದವರ ಭಾವಾತಿರೇಕವನ್ನೂ, ಮೀಮಾಂಸಕರ ಬಾಹ್ಯಕರ್ಮಗಳನ್ನೂ, ಶೈವರ ಮಲ್ಲಾರಿ ಮುಂತಾದ ದೇವತೆಗಳ ಪೂಜೆಯನ್ನೂ ಖಂಡಿಸಿದರು. ಭಗವದ್ಗೀತೆಯ ಭಾಷ್ಯದಲ್ಲಿ ಭಕ್ತಿ, ಕರ್ಮ, ಜ್ಞಾನ ಮಾರ್ಗಗಳನ್ನು ಒಂದಕ್ಕೊಂದು ಪುಷ್ಟಿಕೊಡುವ ರೀತಿಯಲ್ಲಿ ತೆರೆದಿಟ್ಟರು. ಅವರು ಷಣ್ಮತಸ್ಥಾಪನಾಚಾರ್ಯರೆಂದು ಪ್ರಸಿದ್ಧರಾಗಿದ್ದಾರೆ. ಅವರು ಒಪ್ಪಿದ ಮತಗಳಲ್ಲಿ ನಾಲ್ಕು ಈಗಲೂ ಪ್ರಚಾರದಲ್ಲಿವೆ.

ಬೌದ್ಧಮತಗಳಲ್ಲಿ ಕುದುರಿದ್ದ ಶಿಸ್ತನ್ನು ಅವರು ಮನಗಂಡು ಅವುಗಳ ಮಾದರಿಯಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿದರು. ಅವುಗಳಲ್ಲಿ ಮುಖ್ಯವಾದದ್ದು ಶೃಂಗೇರಿಯ ಮಠ. ಇತರವು ಪೂರ್ವದಲ್ಲಿ ಪುರಿ, ಪಶ್ಚಿಮದಲ್ಲಿ ದ್ವಾರಕಾ, ಉತ್ತರದಲ್ಲಿ ಬದರೀನಾಥ್, ಕಂಚಿಯ ಕಾಮಕೋಟಿಗಳಲ್ಲಿವೆ.

ತಾತ್ತ್ವಿಕರು, ಕವಿಗಳು, ಮತಸುಧಾರಕರು ಆಗಿದ್ದಂತೆ ಶಂಕರರು ಭಕ್ತರೂ, ಸಂತರೂ ಆಗಿದ್ದರು. ಬಹುಮುಖವಾದ ಅವರ ವ್ಯಕ್ತಿತ್ವ ಸರ್ವಜನಾದರಣೀಯವಾಗಿದೆ.


(ನೋಡಿ- ಅದ್ವೈತ) (ಜಿ.ಎಚ್.)