ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆನೇಕಲ್

ವಿಕಿಸೋರ್ಸ್ದಿಂದ

ಆನೇಕಲ್

ಕರ್ನಾಟಕ ರಾಜ್ಯದಲ್ಲಿನ ಬೆಂಗಳೂರು ಜಿಲ್ಲೆಯ ಈಶಾನ್ಯದಲ್ಲಿರುವ ಒಂದು ಮುಖ್ಯ ಪಟ್ಟಣ ಮತ್ತು ತಾಲ್ಲೂಕು. ಎರಡು ಕಣಿವೆಗಳಿವೆ. ಪಶ್ಚಿಮದ ಭಾಗ ಬೆಟ್ಟಗುಡ್ಡಗಳಿಂದಲೂ ಕಾಡಿನಿಂದಲೂ ತುಂಬಿದೆ. ಇದು ನದಿಯ ಜಲಾನಯನ ಕಣಿವೆಗೆ ಸೇರಿದ್ದು. ಪೂರ್ವದ ಕಣಿವೆ ಪೊನ್ಯೈಯಾರ್ ನದಿಯ ಜಲಾನಯನ ಭೂಮಿಗೆ ಸೇರಿದೆ. ಈ ತಾಲ್ಲೂಕಿನ ಜನಸಂಖ್ಯೆ 2,98,961 ಹಾಗೂ ಪಟ್ಟಣದ ಜನಸಂಖ್ಯೆ 33,160.

ಬೆಂಗಳೂರು ನಗರದ ಆಗ್ನೇಯಕ್ಕೆ 36 ಕಿ.ಮೀ.ಗಳ ದೂರದಲ್ಲಿ 120 43 ಉತ್ತರ ಅಕ್ಷಾಂಶ ಮತ್ತು 770 42 ಪೂರ್ವರೇಖಾಂಶಗಳು ಸಂಧಿಸುವ ಭಾಗದಲ್ಲಿ ತಾಲ್ಲೂಕಿನ ಕೇಂದ್ರವಾದ ಆನೇಕಲ್ ಪಟ್ಟಣವಿದೆ. ಆನೇಕಲ್ ಪದದ ಅರ್ಥದ ಪ್ರಕಾರ ಆನೆಯಕಲ್ಲು ಅಥವಾ ಅಣಿಕಲ್ಲು ಎಂಬ ವ್ಯಾಖ್ಯಾನ ದೊರಕುತ್ತದೆ. ಆದರೆ ಇದಕ್ಕೆ ಸಂಬಂಧಪಟ್ಟ ಯಾವುದೇ ಕಥೆಯೂ ದೊರಕುವುದಿಲ್ಲ. ಇಲ್ಲಿ ಕೋಟೆ ಮತ್ತು ಕೆರೆಯನ್ನು 17ನೆಯ ಶತಮಾನದ ಪ್ರಾರಂಭದಲ್ಲಿ ಸಲಗತ್ತೂರ್ ವಂಶದ ಮುಖ್ಯಸ್ಥ ಕಟ್ಟಿಸಿದನೆಂದು ಪ್ರತೀತಿಯಿದೆ. ಒಂದು ಶತಮಾನ ಕಳೆದ ಅನಂತರ ಇದು ಮೈಸೂರಿಗೆ ಸೇರಿದುದಲ್ಲದೆ 1760ರಲ್ಲಿ ಹೈದರನ ಕೈವಶವಾಯಿತು. 1400ರಲ್ಲಿ ಇಲ್ಲಿನ ವಾಸಸ್ಥರು ಕ್ರೈಸ್ತ ದೇವಾಲಯವನ್ನು ಕಟ್ಟಿದರೆಂದು ತಿಳಿದುಬರುತ್ತದೆ. ಪೌರಸಭೆ 1870ರಲ್ಲಿ ಪ್ರಾರಂಭವಾಯಿತು. ಇತ್ತೀಚಿನ ಜನಜಾಗೃತಿಯ ಚಟುವಟಿಕೆಗಳಿಂದ ಪಟ್ಟಣ ಅನೇಕ ಕಾರ್ಯಕ್ಷೇತ್ರಗಳಲ್ಲಿ ಮುನ್ನಡೆಯುತ್ತಿರುವುದಲ್ಲದೆ ತಾಲ್ಲೂಕಿನ ಅಭಿವೃದ್ಧಿಗೂ ಸಹಾಯಕವಾಗಿದೆ. (ಎಂ.ಎಸ್.)