ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಯುರ್ವೇದ

ವಿಕಿಸೋರ್ಸ್ದಿಂದ

ಆಯುರ್ವೇದ

ಅಥರ್ವಣವೇದದ ಉಪವೇದವಾದ ಆಯುರ್ವೇದ ಬ್ರಹ್ಮನಿಂದ ಬಂದಿವೆಯೆಂದು ಹೇಳಲಾಗಿದೆ. ಆದ್ದರಿಂದ ಅದು ವೇದದಷ್ಟೇ ಪ್ರಾಚೀನ, ಅದರಂತೆ ಅಪೌರುಷೇಯ. ದಕ್ಷಪ್ರಜಾಪತಿ, ಅಶ್ವಿನಿ ದೇವತೆಗಳು, ಇಂದ್ರ-ಇವರಿಗೆ ಪರಂಪರಾಗತವಾಗಿ ಅಂದರೆ ಇಂದ್ರನಿಂದ ಭರದ್ವಾಜನಿಗೂ ಅವನಿಂದ ಇತರ ಋಷಿಗಳಿಗೂ ಉಪದೇಶಿಸಲ್ಪಟ್ಟಿದೆ ಎಂದಿದೆ.

ಸೂಕ್ಷ್ಮಪರಿಚಯ: ಆಯುರ್ವೇದ ಭಾರತೀಯ ವೈದ್ಯಶಾಸ್ತ್ರ. ನಮಗೆ ಗೋಚರವಾಗುವ ಎಲ್ಲ ದ್ರವ್ಯಗಳೂ ಪಂಚಮಹಾಭೂತಗಳ ಸಂಘಟನೆಯಿಂದಾಗಿವೆ. ಚೇತನಾದ್ರವ್ಯವೆನಿಸಿದ ಆತ್ಮನ ಸಂಯೋಗದಿಂದ ಜೀವರಾಶಿಗಳೇರ್ಪಡುತ್ತವೆ. ಈ ತತ್ವಕ್ಕನುಸಾರವಾಗಿ ಮನುಷ್ಯ, ಪಂಚಭೂತ ಮತ್ತು ಆತ್ಮ ಸೇರಿ ಆಗಿರುವ ಪ್ರಾಣಿ. ಇತರ ಪ್ರಾಣಿ, ಸಸ್ಯ, ಖನಿಜ, ಗಾಳಿ, ನೀರು ಮುಂತಾದುವುಗಳನ್ನು ಯುಕ್ತಿಯಿಂದ ಉಪಯೋಗಿಸಿಕೊಳ್ಳುತ್ತ ಮನುಷ್ಯ ತನ್ನ ಜೀವನವನ್ನು ಸಾಗಿಸುತ್ತಾನೆ. ಸಾಧನ ಚತುಷ್ಟಯಗಳಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳಿಗೆ ಇವನ ಶರೀರವೇ ಆಧಾರವಾದುದರಿಂದ ಇದನ್ನು ಯಾವ ಬಾಧೆಯೂ ಇಲ್ಲದಂತೆ ಬಹುಕಾಲ ಕಾಪಾಡಲು ಪ್ರಯತ್ನಪಡುತ್ತಾನೆ. ಇದೇ ಆರೋಗ್ಯರಕ್ಷಣೆ.

ಆರೋಗ್ಯ ಆಹಾರ, ದೇಶ, ಕಾಲ, ನಿದ್ರೆ, ಬ್ರಹ್ಮಚರ್ಯೆ, ನಡೆವಳಿಕೆ ಮುಂತಾದವುಗಳನ್ನವಲಂಬಿಸಿದೆ. ಇವುಗಳಲ್ಲಿ ಹೆಚ್ಚು ಕಡಿಮೆಯಾಗುವುದರಿಂದ ಆರೋಗ್ಯ ಕೆಡುವುದು. ಈ ಅವಸ್ಥೆಯೇ ರೋಗ. ಆರೋಗ್ಯದಲ್ಲೂ ಶರೀರ ಮತ್ತು ಮನಸ್ಸುಗಳ ಸ್ಥಿತಿಗೆ ಪಂಚಭೂತಗಳೇ ಕಾರಣ. ಪಂಚೀಕೃತವಾದ ಭೌತಿಕ ದ್ರವ್ಯಗಳಲ್ಲಿ ಪ್ರಧಾನವಾದುವು. ವಾಯು, ಆಗ್ನಿ ಮತ್ತು ಉದಕ. ಇವು ಶರೀರದಲ್ಲಿ ವಾಯು, ಪಿತ್ತ ಮತ್ತು ಕಫ ರೂಪದಲ್ಲಿವೆ. ಇವುಗಳ ಗುಣಕರ್ಮಗಳು ಶರೀರಾವಯವಗಳಿಗೆ (ಧಾತುಗಳಿಗೆ) ಸಮಾನವಾಗಿದ್ದರೆ ದೇಹಪೋಷಣೆಯನ್ನೂ ವಿಷಮವಾಗಿದ್ದರೆ ರೋಗ ಮತ್ತು ಮರಣವನ್ನೂ ಉಂಟುಮಾಡುವುವು. ನಿತ್ಯಜೀವನದಲ್ಲಿ ಆಹಾರಾದಿಗಳ ವ್ಯತ್ಯಾಸವಾಗುತ್ತಿದ್ದು ವಾತ, ಪಿತ್ತ ಮತ್ತು ಕಫಗಳು ಹೆಚ್ಚುಕಡಿಮೆಯಾಗಿ ಧಾತುಗಳನ್ನು ದೂಷಿಸುವುದರಿಂದ ಇವುಗಳಿಗೆ ದೋಷಗಳೆಂದು ಹೆಸರು ಬಂದಿದೆ. ಧಾತುಗಳು ಬಲಿಷ್ಠವಾಗುವವರೆಗೂ ಆಹಾರಾದಿಗಳ ಹೆಚ್ಚು ಕಡಿಮೆಯಿಂದ ಯಾವ ಬಾಧೆಯೂ ತೋರುವುದಿಲ್ಲ. ಆಗ ದೋಷಗಳ ಬಲ ಕಡಿಮೆಯಾಗಿರುವುದು. ಇದಕ್ಕೆ ವಿರುದ್ಧವಾಗಿದ್ದರೆ ದುಷ್ಟದೋಷಗಳು ರೋಗಕ್ಕೆ ಕಾರಣವಾಗುತ್ತವೆ. ಸರಿಯಾದ ವ್ಯಾಯಾಮ, ಸ್ನಿಗ್ಧಾಹಾರ ಮತ್ತು ಹಸಿವು ಇರುವ ಮನುಷ್ಯನಿಗೆ ವಿರುದ್ಧವಾದುವು ಪೀಡಿಸುವುದಿಲ್ಲ. ಆದರೂ ಅಭ್ಯಾಸವಿರುವ ಆಹಾರವನ್ನು ಮಿತವಾಗಿಯೇ ಸೇವಿಸಬೇಕು.

ರೋಗಕ್ಕೆ ಕಾರಣವಾದುದನ್ನು (ರೋಗಹೇತು) ವರ್ಜಿಸುವುದು, ರೋಗಲಕ್ಷಣಗಳಿಂದ (ಲಿಂಗ) ವಿಷಮ ದೋಷಗಳ ವೃದ್ಧಿಕ್ಷಯಗಳನ್ನು ಕಂಡುಹಿಡಿದು, ಅವುಗಳನ್ನು ಸಮಸ್ಥಿತಿಯಲ್ಲಿರಿಸಿ ಧಾತುಗಳ ಬಲವನ್ನು ಹೆಚ್ಚಿಸುವುದು(ಔಷಧ)-ಈ ವೈದ್ಯಪದ್ಧತಿಯ ತತ್ತ್ವಗಳು. ಹೇತುಲಿಂಗೌಷಧ ಜ್ಞಾನವನ್ನನುಸರಿಸಿ ಆರೋಗ್ಯವನ್ನು ರಕ್ಷಿಸಿಕೊಳ್ಳುವುದು ಎಲ್ಲ ಕಾಲಕ್ಕೂ ವಿಹಿತವಾಗಿದೆ. ಶರೀರದಲ್ಲಿ ಉತ್ಪತ್ತಿಯಾಗುವ ವಾತವಿಣ್ಮೂತ್ರಾದಿಗಳ ವೇಗಗಳನ್ನು ತಡೆಯುವುದು. ವೇಗವಿಲ್ಲದಿರುವಾಗ ಅದನ್ನು ಉಂಟುಮಾಡುವುದಕ್ಕೆ ಪ್ರಯತ್ನಿಸುವುದು ಎಲ್ಲ ರೋಗಗಳಿಗೂ ಸಾಮಾನ್ಯ ಕಾರಣವಾಗುವುವು. ಶಾರೀರಿಕ ಕ್ರಿಯೆಯಲ್ಲಿ ವ್ಯತ್ಯಾಸವಾಗಿ ಉಂಟಾಗುವ ರೋಗಕ್ಕೆ ನಿಜರೋಗವೆಂದೂ ಅಪಫಾತ, ಅಗ್ನಿ, ವಿಷ ಮುಂತಾದ ಹೊರಗಿನ ಕಾರಣಗಳಿಂದ ಸಂಭವಿಸುವ ರೋಗಕ್ಕೆ ಆಗಂತುಕವೆಂದೂ ಹೆಸರು. ಆಗಂತುಕದಲ್ಲಿ ಬಾಧೆಯಾದ ಅನಂತರ ದೋಷವೈಷಮ್ಯ ಕಂಡುಬರುವುದು. ಚಿಕಿತ್ಸೆಯನ್ನು ದೋಷಕ್ಕೆ ತಕ್ಕಂತೆಯೂ ವ್ಯಾಧಿಗೆ ತಕ್ಕಂತೆಯೂ ಎಂದರೆ ದೋಷಪ್ರತ್ಯನೀಕ ಮತ್ತು ವ್ಯಾಧಿಪ್ರತ್ಯನೀಕವೆಂದು ಎರಡು ಭಾಗ ಮಾಡುವುದುಂಟು. ರೋಗ ತನ್ನ ಸ್ಪಷ್ಟ ರೂಪವನ್ನು ಹೊಂದುವುದಕ್ಕೆ ಮೊದಲು ಶೋಧನ ಅಥವಾ ಶಮನಕ್ರಿಯೆಗಳಿಂದ ದೋಷಗಳನ್ನು ಸರಿಪಡಿಸುವುದು ದೋಷಪ್ರತ್ಯನೀಕ. ರೋಗ ಸ್ಪಷ್ಟವಾಗಿ ಮುಂದುವರಿಯುತ್ತಿದ್ದರೆ ರೋಗಹರಣಮಾಡುವ ಸಿದ್ಧೌಷಧ ಪ್ರಯೋಗ ವ್ಯಾಧಿಕ್ರುತ್ಸನೀಕವೆನಿಸುವುದು. ಚಿಕಿತ್ಸೆಗೆ ಕೇವಲ ಔಷಧಗಳೇ ಅಲ್ಲದೆ ಕ್ಷಾರ, ಕರ್ಮ, ಶಸ್ತ್ರಕರ್ಮ ಮತ್ತು ಅಗ್ನಿಕರ್ಮಗಳೆಂಬ ಬೇರೆ ಬೇರೆ ಉಪಾಯಗಳಿವೆ. ಕ್ಷಾರ ಮತ್ತು ಅಗ್ನಿಕರ್ಮಗಳು ದುರ್ಮಾಂಸ, ವಿಷದಂಶ ಮುಂತಾದುವನ್ನು ಸುಡುವುದರಲ್ಲೂ ಶಸ್ತ್ರಕರ್ಮ ಶಲ್ಯಾಹರಣ, ವಿದ್ರಧಿ (ಕುರು ಅಥವಾ ಬಾವು), ಅಧಿüಮಾಂಸ, ಅಸ್ಥಿಭಗ್ನ ಮುಂತಾದುವುಗಳಲ್ಲೂ ಉಪಯೋಗವಾಗಿವೆ. ನಾಡೀಪರೀಕ್ಷೆ, ಪಂಚಕರ್ಮ, ಲೋಹಾದಿಗಳ ಭಸ್ಮ ಪ್ರಯೋಗಗಳು ಚಿಕಿತ್ಸೆಯಲ್ಲಿ ಬಹಳ ಉಪಯುಕ್ತವಾಗಿವೆ. ವೈದ್ಯರು ತಮಗೆ ಬೇಕಾದ ಔಷಧಗಳನ್ನು ತಾವೇ ಮಾಡಿಕೊಳ್ಳುವುದು, ಏಕಮೂಲಿಕಾ ಪ್ರಯೋಗ, ಪಥ್ಯಕ್ರಮ, ಋತುಗಳಿಗೆ ತಕ್ಕ ಆಹಾರ ವಿಹಾರ ನಿಯಮಗಳು-ಇವು ಆಯುರ್ವೇದದ ವೈಶಿಷ್ಟ್ಯಗಳು.

ದೀರ್ಘಾಯುಸ್ಸು, ಸ್ಮøತಿ, ಮೇಧಾಶಕ್ತಿ ಮುಂತಾದುವನ್ನು ಪಡೆಯುವುದಕ್ಕೆ ರಸಾಯನ ಪ್ರಯೋಗಗಳುಂಟು. ಮನುಷ್ಯ ನೆಮ್ಮದಿಯಾಗಿದ್ದುಕೊಂಡು ತನ್ನ ವಂಶಾಭಿವೃದ್ಧಿ ಹಾಗೂ ಸುಖಸಂತೋಷಕ್ಕಾಗಿ ಸತ್ಸಂತಾನವನ್ನು ಪಡೆಯುವುದಕ್ಕೋಸ್ಕರ ವಾಜೀಕರಣವೆಂಬ ವಿಧಿಯುಂಟು. ಇವೆಲ್ಲವನ್ನೂ ಒಳಗೊಂಡಿರುವ ಆಯುರ್ವೇದವನ್ನು ಶಲ್ಯ, ಶಾಲಾಕ್ಯ, ಕಾಯಚಿಕಿತ್ಸಾ, ಭೂತವಿದ್ಯಾ, ಕೌಮಾರಭೃತ್ಯ, ಅಗದತಂತ್ರ (ವಿಷ ಚಿಕಿತ್ಸಾ) ರಸಾಯನ ತಂತ್ರ ಮತ್ತು ವಾಜೀಕರಣತಂತ್ರಗಳೆಂದು ಎಂಟುವಿಧವಾಗಿ ಮಾಡಿದ್ದಾರೆ.

ಇತಿಹಾಸ: ಭೂಲೋಕದಲ್ಲಿ ರೋಗರುಜಿನಗಳು ಜನರನ್ನು ಪೀಡಿಸುತ್ತಿರುವುದರಿಂದ ತಮ್ಮ ಪುರುಷಾರ್ಥಸಾಧನೆಗಳಿಗೆ ವಿಘ್ನವಾಗುತ್ತಿರುವುದನ್ನು ನಿವಾರಿಸುವುದಕ್ಕಾಗಿ ಹಿಂದೆ ಭಾರದ್ವಾಜನೇ ಮೊದಲಾಗಿ ಅನೇಕ ಮಹರ್ಷಿಗಳು ಹಿಮಾಲಯದ ತಪ್ಪಲಲ್ಲಿ ಸಭೆ ಸೇರಿದರು. ಇವರೆಲ್ಲರ ತೀರ್ಮಾನದಂತೆ ಭಾರದ್ವಾಜ ಇಂದ್ರನ ಬಳಿಗೆ ಹೋಗಿ ಆಯುರ್ವೇದವನ್ನು ತಿಳಿದುಬಂದು ಋಷಿಗಳಲ್ಲಿ ಪ್ರಚಾರಮಾಡಿದ. ಈ ಋಷಿಸಭೆಯನ್ನು ನಮ್ಮ ದೇಶದ ಮೊತ್ತಮೊದಲನೆಯ ವೈದ್ಯರ ಸಮ್ಮೇಳನವೆನ್ನಬಹುದು. ಇದರಲ್ಲಿ ಬೇರೆ ಬೇರೆ ದೇಶದ ವಿದ್ವಾಂಸರು ಭಾಗವಹಿಸಿದ್ದರು. ಇವರಲ್ಲಿ ಪುನರ್ವಸು ಆತ್ರೇಯ ತನ್ನ ಆರುಜನ ಶಿಷ್ಯರಾದ ಅಗ್ನಿವೇಶ, ಭೇಡ, ಜತೂಕರ್ಣ, ಪರಾಶರ, ಹಾರೀತ ಮತ್ತು ಕ್ಷಾರಪಾಣಿಗಳಿಗೆ ಈ ಶಾಸ್ತ್ರವನ್ನು ಹೇಳಿ ಕೊಟ್ಟ. ಇವರೆಲ್ಲರೂ ಪ್ರತ್ಯೇಕ ಪ್ರತ್ಯೇಕವಾಗಿ ಗ್ರಂಥಗಳನ್ನು ರಚಿಸಿದರು. ಅವುಗಳಲ್ಲಿ ಅಗ್ನಿವೇಶನ ತಂತ್ರವೇ ಶ್ರೇಷ್ಠವೆನಿಸಿತು. ಆದರೆ ಈ ಮೂಲಗ್ರಂಥ ಈಗ ನಮಗೆ ದೊರೆತಿಲ್ಲ. ಕ್ರಿ.ಪೂ. ಸುಮಾರು ಮೂರು ಅಥವಾ ಎರಡನೆಯ ಶತಮಾನದಲ್ಲಿ ಚರಕಾಚಾರ್ಯ ಈ ತಂತ್ರವನ್ನು ಸಂಸ್ಕರಿಸಿದ. ಅಂದಿನಿಂದೀಚೆಗೆ ಇದಕ್ಕೆ ಚರಕಸಂಹಿತೆ ಎಂದು ಹೆಸರುಬಂದಿದೆ. ಇತರರ ಗ್ರಂಥಗಳಲ್ಲಿ ಕೆಲವು ದೊರೆತಿಲ್ಲ. ದೊರೆತ ಗ್ರಂಥಗಳಲ್ಲಿ ಎಷ್ಟೊ ಭಾಗಗಳು ನಷ್ಟವಾಗಿವೆ. ಪರಾಶರ ಹಸ್ತ್ಯಾಯುರ್ವೇದದಲ್ಲೂ ನಿಪುಣನಾಗಿದ್ದನೆಂದು ತಿಳಿದುಬಂದಿದೆ. ಆಯುರ್ವೇದ ಗ್ರಂಥಗಳ ಹಿಂದಿನ ವ್ಯಾಖ್ಯಾನಕಾರರು ಈ ಗ್ರಂಥಗಳಿಂದ ಕೆಲವು ಆಧಾರಗಳನ್ನು ಉಲ್ಲೇಖಿಸಿದ್ದಾರೆ.

ಪುನರ್ವಸು ಅತ್ರೇಯ ತ್ರಿದೋಷಸಿದ್ಧಾಂತವನ್ನು ಕ್ರಮಬದ್ಧ ರೂಪಕ್ಕೆ ತಂದ. ಹಿಂದೆ ಮೂಲಿಕಾದಿಗಳನ್ನು ಅನುಭವದಿಂದ ಉಪಯೋಗಿಸುತ್ತಿದ್ದುದನ್ನು ಮಾರ್ಪಡಿಸಿ ಅವುಗಳ ರಸ, ಗುಣ, ವೀರ್ಯ, ವಿಪಾಕ ಮತ್ತು ಪ್ರಭಾವಗಳನ್ನು ಕಂಡುಹಿಡಿದು ದೋಷಗಳಿನುಸಾರವಾಗಿ ಚಿಕಿತ್ಸಿಸುವುದನ್ನು ಪ್ರಚಾರ ಮಾಡಿದ. ರಸಗಳು ಆರು ಮಾತ್ರ ಎಂಬುದನ್ನು ದೃಢಪಡಿಸುವುದಕ್ಕೆ ಒಂದು ಸಮ್ಮೇಳನವನ್ನೇ ನಡೆಸಿದ. ಆಗಿಂದಾಗ್ಯೆ ತದ್ವಿದ್ಯಾಸಂಭಾಷಾ ಪರಿಷತ್ತುಗಳನ್ನು ನಡೆಸುತ್ತಿದ್ದ. ಎಲ್ಲ ಕಡೆಗಳಿಂದಲೂ ಪ್ರಸಿದ್ಧ ವೈದ್ಯರು ಸೇರಿ ಚರ್ಚಿಸುತ್ತಿದ್ದರು. ಎಲ್ಲರೂ ಆತ್ರೇಯನ ತೀರ್ಮಾನಗಳನ್ನೇ ಅಂಗೀಕರಿಸುತ್ತಿದ್ದರು. ಈತ ಬಹುಶಃ ಕ್ರಿ.ಪೂ. 8-7ನೆಯ ಶತಮಾನದಲ್ಲಿದ್ದನೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಆತ್ರೇಯಪಂಥದವರು ವಿಶೇಷವಾಗಿ ಕಾಯಚಿಕಿತ್ಸೆಗೆ ಪ್ರಾಧಾನ್ಯ ಕೊಟ್ಟಿರುತ್ತಾರೆ. ಆಮ್ಲ ಉತ್ಪತ್ತಿ, ಅದರಿಂದಾಗುವ ವಿವಿಧ ರೋಗಗಳು-ಇವನ್ನು ವಿವರಿಸಿರುತ್ತಾರೆ.

ಎರಡನೆಯ ಪಂಥವೆಂದರೆ ಭಗವಾನ್ ಧನ್ವಂತರಿಯದು. ಈತ ಕ್ಷೀರಸಮುದ್ರದ ಮಥನಕಾಲದಲ್ಲಿ ಉದ್ಭವಿಸಿದನೆಂದೂ ಕೈಯಲ್ಲಿ ಅಮೃತಕಳಶವನ್ನಿಟ್ಟುಕೊಂಡು ಬಂದ ಆದಿದೇವನೆಂದೂ ರಾಮಾಯಣ, ಮಹಾಭಾರತ ಮತ್ತು ಹರಿವಂಶಪುರಾಣಗಳಲ್ಲಿ ಹೇಳಿದೆ. ಇವನನ್ನು ವಿಷ್ಣುವಿನ ಅವತಾರವೆಂದು ಇಂದಿಗೂ ವೈದ್ಯರು ಪೂಜಿಸುತ್ತಾರೆ. ವಿಷ್ಣು, ಬ್ರಹ್ಮವೈವರ್ತ ಮತ್ತು ವಾಯುಪುರಾಣಗಳ ಪ್ರಕಾರ ಧನ್ವಂತರಿ ಸೂರ್ಯನಿಂದ ಆಯುರ್ವೇದವನ್ನು ಕಲಿತನೆಂದು ತಿಳಿಯುತ್ತದೆ. ಸ್ಕಂದ, ಗರುಡ ಮತ್ತು ಮಾರ್ಕಂಡೇಯ ಪುರಾಣಗಳ ಪ್ರಕಾರ ಗಾಲವಋಷಿಯ ಮಗ ಸರ್ವಶಾಸ್ತ್ರ ಸಂಪನ್ನನಾಗಿದ್ದು ಅಶ್ವಿನಿ ಕುಮಾರರ ಶಿಷ್ಯನಾಗಿ ಧನ್ವಂತರಿ ಎಂಬ ಹೆಸರನ್ನು ಪಡೆದ. ಸುಶ್ರುತಸಂಹಿತೆಯ ಪ್ರಕಾರ ಕಾಶೀರಾಜನಾದ ದಿವೋದಾಸ ಆದಿದೇವ ಧನ್ವಂತರಿಯ ಅವತಾರಪುರುಷನೆಂದೂ ಶಲ್ಯತಂತ್ರವನ್ನು ಪ್ರಧಾನವಾಗಿ ಉಪದೇಶ ಮಾಡುವುದಕ್ಕಾಗಿ ಭೂಲೋಕಕ್ಕೆ ಪುನಃ ಬಂದನೆಂದೂ ಹೇಳಿದೆ.

ಅಹಂಹಿ ಧನ್ವಂತರಿರಾದಿದೇವೋ ಜರಾರುಜಾಮೃತ್ಯುಹರೋ„ಮರಾಣಾಮ್
ಶಲ್ಯಾಂಗಮಂಗೈರಪರೈರುಪೇತಂ ಪ್ರಾಪ್ತೋ„ಸ್ಮಿಗಾಂಭೂಯ ಇಹೋಪದೇಷ್ಟುಮ್ (ಸುಶ್ರುತಸಂಹಿತಾ)

ದಿವೋದಾಸನೆಂಬ ಧನ್ವಂತರಿ ಸುಶ್ರುತನನ್ನೇ ಮುಂದಾಗಿಟ್ಟುಕೊಂಡು ಔಪಧೇನವ, ವೈತರಣ, ಔರಭ್ರ ಮುಂತಾದವರಿಗೆ ಶಲ್ಯಚಿಕಿತ್ಸೆಯನ್ನೇ ಮುಖ್ಯವಾಗಿ ಉಪದೇಶಿಸಿದ. ಚರಕಸಂಹಿತೆಯಲ್ಲಿ ಅನುಸರಿಸಿರುವಂತೆಯೇ ಸುಶ್ರುತಸಂಹಿತೆಯಲ್ಲಿ ದ್ರವ್ಯಗಳ ರಸಾದಿಗಳು, ದೋಷಭೇದ-ಮುಂತಾದುವು ವಿವರಿಸಲ್ಪಟ್ಟಿವೆ. ಶಸ್ತ್ರಚಿಕಿತ್ಸೆಗೆ ಅವಶ್ಯವಾಗಿ ಆಮ, ಪಚ್ಯಮಾನ ಮತ್ತು ಪಕ್ವವಿದ್ರಧಿ, ಕ್ರಿಯಾಕಾಲ, ಪೂರ್ವಕರ್ಮ-ಇವು ವಿಶೇಷವಾಗಿ ವರ್ಣಿಸಲ್ಪಟ್ಟಿವೆ. ಮೂಢಗರ್ಭಚಿಕಿತ್ಸೆ (ಕ್ಯಾಟರ್ಯಾಕ್ಟ್ ರಿಹನೊಪ್ಲಾಸ್ಟ್ರಿ) ಎಂಬ ನೇತ್ರರೋಗ ನಾಸಾ ರೋಗ ಮುಂತಾದುವುಗಳ ಶಸ್ತ್ರ ಚಿಕಿತ್ಸೆಗಳನ್ನು ಆ ಕಾಲದಲ್ಲಿ ನಡೆಸುತ್ತಿದ್ದರು. ದಿವೋದಾಸ ಇಂದ್ರನ ಶಿಷ್ಯನೆಂದು ಸುಶ್ರುತಸಂಹಿತೆಯಲ್ಲಿ ಹೇಳಿದೆ. ಈತ ಕ್ರಿ.ಪೂ. 8ನೆಯ ಶತಮಾನದಲ್ಲಿದ್ದನೆಂದು ಗೊತ್ತುಪಡಿಸಿದ್ದಾರೆ. ಧನ್ವಂತರಿಯ ಹೆಸರಿನಲ್ಲಿ ಸುಮಾರು ಎಂಟು ಗ್ರಂಥಗಳು, ದಿವೋದಾಸನ ಹೆಸರಿನ ಚಿಕಿತ್ಸಾದರ್ಶನವೆಂಬುದು ಮತ್ತು ಕಾಶೀರಾಜನ ಚಿಕಿತ್ಸಾಕೌಮುದೀ ಮತ್ತು ಅಜೀರ್ಣಾಮೃತಗಳೆಂಬ ಗ್ರಂಥಗಳಿವೆ.

ಸುಶ್ರುತ ವಿಶ್ವಾಮಿತ್ರನ ಮಗ. ಈತನ ಸಂಹಿತೆ ಭಿಕ್ಷು ನಾಗಾರ್ಜುನನಿಂದ ಪ್ರತಿ ಸಂಸ್ಕರಣವಾಗಿ ದೊರೆತಿದೆ. ಮೂಲಗ್ರಂಥದಲ್ಲಿ ಐದು ಸ್ಥಾನಗಳು ದೊಡ್ಡ ಶಸ್ತ್ರಕ್ರಿಯೆಗಳನ್ನೊಳಗೊಂಡಿತ್ತೆಂದೂ ಮುಂದೆ ಬೇರೆಯವರು ನಷ್ಟಭಾಗವನ್ನು ಉತ್ತರ ತಂತ್ರದಲ್ಲಿ ಸೇರಿಸಿದರೆಂದೂ ಸಂಶೋಧಕರು ತಿಳಿಸುತ್ತಾರೆ. ಶಸ್ತ್ರಚಿಕಿತ್ಸೆಯ ಗ್ರಂಥಗಳಲ್ಲಿ ಇದೇ ಮೊದಲನೆಯದು. ಶಸ್ತ್ರಗಳ ವರ್ಣನೆ, ಕ್ರಿಯಾಕರ್ಮ, ಪೂರ್ವ ಮತ್ತು ಪಶ್ಚಾತ್ಕರ್ಮ ಇವು ಎಲ್ಲರಿಗೂ ಆಶ್ಚರ್ಯವನ್ನುಂಟುಮಾಡುತ್ತವೆ. ಅನೇಕರು ಈ ಸಂಹಿತೆಗೆ ವ್ಯಾಖ್ಯಾನ ಮಾಡಿದ್ದಾರೆ. ಎಂಟನೆಯ ಶತಮಾನದಲ್ಲಿ ಈ ಸಂಹಿತೆ ಅರಬ್ಬೀ ಭಾಷೆಗೆ ಭಾಷಾಂತರಿಸಲ್ಪಟ್ಟಿತು.

ಮಹಾಭಾರತದಲ್ಲಿ ಧನ್ವಂತರಿ ಪಂಥದ ಕಾಶ್ಯಪನ ಹೆಸರು ಉಲ್ಲೇಖವಾಗಿದೆ. ಈತ ವಿಷಚಿಕಿತ್ಸಕನೆಂದೂ ಪರೀಕ್ಷಿತರಾಜನನ್ನು ತಕ್ಷಕನೆಂಬ ಸರ್ಪ ಕಚ್ಚಿದಾಗ ಚಿಕಿತ್ಸಿಸಲು ಹೋಗಿದ್ದನೆಂದೂ ತಿಳಿಸಲಾಗಿದೆ.

ಬಾಲೋಪಚಾರ, ಬಾಲರೋಗಗಳ ಚಿಕಿತ್ಸೆಯಲ್ಲಿ ನಿಷ್ಣಾತನಾದ ಕಾಶ್ಯಪ ಕ್ರಿ. ಪೂ. 6ನೆಯ ಶತಮಾನಕ್ಕೆ ಸೇರಿದವ. ಈತ ರಚಿಸಿರುವ ಕಾಶ್ಯಪಸಂಹಿತೆಯಲ್ಲಿ ಬಹುಭಾಗ ನಷ್ಟವಾಗಿದೆ. ಆದರೂ ಇದರಲ್ಲಿ ಅಡಕವಾಗಿರುವ ಅನೇಕ ಸಂಗತಿಗಳು ಸಂಶೋಧನೆ ಮಾಡುವವರಿಗೆ ಉಪಯುಕ್ತವಾಗಿವೆ.

ಕ್ರಿ.ಪೂ. ಒಂದನೆಯ ಶತಮಾನದಲ್ಲಿ ಭಿಕ್ಷುರಾತ್ರೇಯನೆಂಬ ಪ್ರಸಿದ್ಧ ಪ್ರಾಧ್ಯಾಪಕ ತಕ್ಷಶಿಲೆಯ ವಿಶ್ವವಿದ್ಯಾನಿಲಯದಲ್ಲಿದ್ದ, ಈತನ ಶಿಷ್ಯ ಜೀವಕ ತಕ್ಷಶಿಲೆಯಲ್ಲಿ ವ್ಯಾಸಂಗ ಮಾಡಿ ಮಗಧದೇಶದ ಅನೇಕ ಕಡೆಗಳಲ್ಲಿ ಸಂಚರಿಸಿ ವೈದ್ಯವೃತ್ತಿಯನ್ನು ನಡೆಸಿದ. ಅನಂತರ ಬುದ್ಧದೇವನ ಆಸ್ಥಾನದ ಹೆಸರುವಾಸಿಯಾದ ವೈದ್ಯನಾದ. ಇವನ ಬುದ್ಧಿಚಾತುರ್ಯ, ಚಿಕಿತ್ಸಾಕೌಶಲಗಳು ಟಿಬೆಟ್, ಚೀನಾ ಪ್ರಾಂತ್ಯಗಳಲ್ಲೆಲ್ಲ ಹರಡಿದ್ದುವು. ಈತನ ಕಾಲ ಆರನೆಯ ಶತಮಾನ ಬೌದ್ಧಮತ ಪ್ರಚಾರದ ಮೂಲಕ ಆಯುರ್ವೇದ ಚಿಕಿತ್ಸೆ ಹಳ್ಳಿ ಹಳ್ಳಿಯಲ್ಲೂ ನಡೆಯುತ್ತಿತ್ತು.

ದೇವ ಮತ್ತು ಋಷಿಗಣಗಳಲ್ಲಿ ಇನ್ನೂ ಅನೇಕ ವೈದ್ಯಶ್ರೇಷ್ಠರು ಆಯುರ್ವೇದವನ್ನು ಪ್ರಸಾರ ಮಾಡಿದರು. ಇವರೆಲ್ಲರೂ ಹೆಚ್ಚಾಗಿ ಗಿಡಮೂಲಿಕೆ ಮತ್ತು ಪ್ರಾಣಿಜದ್ರವ್ಯಗಳನ್ನೇ ಉಪಯೋಗಿಸುತ್ತಿದ್ದರು. ಪಾದರಸ, ಲೋಹಾದಿಗಳ ಪ್ರಯೋಗಗಳು ಬಹಳ ವಿರಳ.

ಮೂರನೆಯದು ಶೈವಪಂಥ. ಈ ಪಂಥದ ವೈದ್ಯರು ಪಾದರಸವನ್ನೇ ಶಿವನ ರೂಪವೆಂದು ರಸಲಿಂಗ ಮಾಡಿ ಅದನ್ನು ಪೂಜಿಸುತ್ತಿದ್ದರು. ರಸವಾದದಲ್ಲಿ ಪರಾಕಾಷ್ಠೆಯನ್ನು ಪಡೆದು ಅದ್ಭುತ ಕಾರ್ಯಗಳನ್ನು ಮಾಡುತ್ತಿದ್ದರು. ರಸ, ತಾಮ್ರ ಮುಂತಾದುವನ್ನು ಚಿನ್ನವಾಗಿ ಪರಿವರ್ತಿಸುವುದನ್ನು ಸಾಧಿಸಿದ್ದರು. ಲೋಹಾದಿಗಳನ್ನು ಭಸ್ಮ ಮಾಡಿ ರೋಗಗಳನ್ನು ಚಮತ್ಕಾರವಾಗಿ ಹೋಗಲಾಡಿಸುತ್ತಿದ್ದರು. ಗೋವಿಂದ ಭಿಕ್ಷು, ಭಿಕ್ಷು ನಾಗಾರ್ಜುನ, ಸಿದ್ಧನಾಗಾರ್ಜುನ ಮುಂತಾದವರು ಈ ಶಾಸ್ತ್ರದಲ್ಲಿ ಪ್ರವೀಣರು. ಸಿದ್ಧನಾಗಾರ್ಜುನ ಪೂಜ್ಯಪಾದನೆಂಬ ಜೈನ ವೈದ್ಯನ ಸೋದರಳಿಯ, ಪೂಜ್ಯಪಾದನಿಂದ ವಿದ್ಯೆ ಕಲಿತ. ಸ್ವಲ್ಪ ಕಾಲದ ಅನಂತರ ಈತ ಬೌದ್ಧಮತಾವಲಂಬಿಯಾಗಿ ನೇಪಾಳ, ಟಿಬೆಟ್ಟುಗಳಲ್ಲೆಲ್ಲ ಮತಪ್ರಚಾರ, ಆಯುರ್ವೇದ ಪ್ರಚಾರಮಾಡುತ್ತ ಕೊನೆಗೆ ಶ್ರೀಶೈಲದಲ್ಲಿ ನೆಲೆಸಿದ. ರಸಸಿದ್ಧಿಯನ್ನು ಪಡೆದುದರಿಂದ ಈತನಿಗೆ ಸಿದ್ಧನಾಗಾರ್ಜುನನೆಂಬ ಹೆಸರು ಬಂದಿದೆ. ಕ್ರಿ.ಶ. ಸುಮಾರು 6ನೆಯ ಶತಮಾನದಲ್ಲಿ ಕರ್ಣಾಟಕದಲ್ಲಿ ಹುಟ್ಟಿ ಲೋಕಪ್ರಖ್ಯಾತನಾದ ಸಿದ್ಧನಾಗಾರ್ಜುನನನ್ನು ಯಾರೂ ಮರೆಯುವಂತಿಲ್ಲ.

ಭದಂತನಾಗಾರ್ಜುನ ಏಳನೆಯ ಶತಮಾನಕ್ಕೆ ಸೇರಿದವ. ಈತನ ಹಲ್ಲುಗಳು ಸ್ವಚ್ಛವಾಗಿ ಹೊಳೆಯುತ್ತಿದ್ದುದರಿಂದ ಭದಂತನಾಗಾರ್ಜುನನೆಂದು ಹೆಸರು ಬಂದಿದೆ. ರಸವೈಶೇಷಿಕಸೂತ್ರವೆಂಬ ಷಡ್ರಸಗಳ ಪಾಂಚಭೌತಿಕತ್ವ, ರಸಭೇದ ಮುಂತಾದುವನ್ನೊಳಗೊಂಡ ಸಂಸ್ಕøತ ಗ್ರಂಥವನ್ನು ರಚಿಸಿದ್ದಾನೆ. ಹೀಗೆ ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ತ್ರಿಮೂರ್ತಿಗಳ ಅನುಯಾಯಿಗಳಾಗಿ ಆತ್ರೇಯ ನಂತರ ಮತ್ತು ಶೈವ ಪದ್ಧತಿಗಳು ಕ್ರಮೇಣ ಅಭಿವೃದ್ಧಿಗೆ ಬಂದುವು. ಕ್ರಿ.ಶ. ಸುಮಾರು ನಾಲ್ಕನೆಯ ಶತಮಾನದಲ್ಲಿ ಅಷ್ಟಾಂಗಸಂಗ್ರಹ ಮತ್ತು ಅಷ್ಟಾಂಗಹೃದಯಗಳನ್ನು ಬರೆದ ವಾಗ್ಭಟ ಸಿಂಧೂದೇಶದ ಸಿಂಹಗುಪ್ತನ ಮಗ. ಕ್ರಿ.ಶ. ಒಂದು ಅಥವಾ ಎರಡನೆಯ ಶತಮಾನದವರೆಗೆ ಕಾಯ, ಬಾಲ, ಗ್ರಹ, ಶಾಲಾಕ್ಯ, ಶಲ್ಯ, ವಿಷ, ರಸಾಯನ ಮತ್ತು ವಾಜಿಕರಣಗಳೆಂಬ ಆಯುರ್ವೇದದ ಎಂಟುಭಾಗಗಳು ಶಾಸ್ತ್ರೀಯವಾಗಿ ಅಭ್ಯಸಿಸಲ್ಪಡುತ್ತಿದ್ದವು. ಅಲ್ಲಿಂದ ಮುಂದಕ್ಕೆ ಇನ್ನೂರು ವರ್ಷಗಳಲ್ಲಿ ದೇಶದ ರಾಜಕೀಯ ಮತ್ತು ಮತೀಯ ಗೊಂದಲಗಳಿಂದ ಶಾಸ್ತ್ರಾಭಿವೃದ್ಧಿ ನಿಂತುಹೋಯಿತು. ಗ್ರಂಥಗಳು ಖಿಲವಾಗುತ್ತ ಬಂದುವು. ವಾಗ್ಭಟ ತನ್ನ ಕಾಲದಲ್ಲಿ ದೊರೆತಷ್ಟು ವಿಷಯಗಳನ್ನೆಲ್ಲ ಕೂಡಿಹಾಕಿ ಚರಕ, ಸುಶ್ರುತ, ನಿಮಿ ಮುಂತಾದ ಸಂಹಿತೆಗಳ ಆಧಾರದ ಮೇಲೆ ತನ್ನ ಅಷ್ಟಾಂಗ ಗ್ರಂಥಗಳನ್ನು ಬರೆದು ಉಪಕರಿಸಿದ್ದಾನೆ. ರಸರತ್ನಸಮುಚ್ಚಯದ ಗ್ರಂಥಕರ್ತ ಇದೇ ಹೆಸರುಳ್ಳವ ಬೇರೊಬ್ಬನೆಂದು ಹೇಳಬಹುದು. ಏಕೆಂದರೆ ಶೈಲಿ, ತತ್ತ್ವಗಳು ಬೇರೆ ಬೇರೆ. ಅಷ್ಟಾಂಗಹೃದಯದಲ್ಲಿ ರಸದಯೋಗ ಅಥವಾ ಭಸ್ಮಪ್ರಯೋಗಗಳಿಲ್ಲ. ಒಂದೆರಡುಕಡೆ ಧಾತುಗಳ ಪ್ರಯೋಗವಿದ್ದರೂ ಅವು ಪ್ರತ್ಯೇಕವಾದುವು.

ವಾಗ್ಭಟನ ಅನಂತರ ಮಾಧವಕರ ರೋಗ ನಿಶ್ಚಯಮಾಡಲು ಮಾಧವನಿದಾನವನ್ನು ಬರೆದ. ಪಾಠಕ್ರಮಕ್ಕನುಸಾರವಾಗಿ ಪ್ರತ್ಯೇಕ ವಿಷಯವನ್ನುಳ್ಳದ್ದು. ಇದು ಮೊದಲನೆಯ ಗ್ರಂಥ. ಅನಂತರದ ಗ್ರಂಥಕರ್ತರಾದ ಶಾಙ್ರ್ಗಧರ, ಭಾವಮಿಶ್ರರು ಮೂಲಿಕೆ ಮತ್ತು ರಸೌಷಧಗಳನ್ನು ತಮ್ಮ ಗ್ರಂಥಗಳಲ್ಲಿ ಸೇರಿಸಿದ್ದಾರೆ. ಮಾಧವ ನಿದಾನ, ಶಾಙ್ರ್ಗಧರಸಂಹಿತೆ ಮತ್ತು ಭಾವಪ್ರಕಾಶಗಳನ್ನು ಲಘು ತ್ರಯಿಗಳೆಂದೂ ಚರಕ, ಸುಶ್ರುತ, ಅಷ್ಟಾಂಗಸಂಗ್ರಹಗಳನ್ನು (ಹೃದಯ) ಬೃಹತ್ರಯಿಗಳೆಂದೂ ಕರೆಯುತ್ತಾರೆ.

ಔಷಧ ನಿರ್ಮಾಣದಲ್ಲಿ ಕಾಲದಿಂದ ಕಾಲಕ್ಕೆ ಹೆಚ್ಚು ಕಲ್ಪಗಳು, ಯೋಗಗಳು ಮತ್ತು ರೀತಿಗಳು ಹೆಚ್ಚುತ್ತಾಬಂದುವು. ಈಚೀಚೆಗೆ ಕಾರ್ಖಾನೆಗಳು ಮತ್ತು ಮಾರಾಟ ರೀತಿಗಳು ಆಧುನಿಕ ಕ್ರಮದಂತಿವೆ. ಚರಕಸಂಹಿತೆಗೆ ಚಕ್ರಪಾಣಿ (ಕ್ರಿ.ಶ. 11ನೆಯ ಶತಮಾನ) ಸುಶ್ರುತಕ್ಕೆ ಡಲ್ಹಣ (11ನೆಯ ಶತಮಾನ), ಅಷ್ಟಾಂಗಸಂಗ್ರಹಕ್ಕೆ ಇಂದು (9ನೆಯ ಶತಮಾನ) ಅಷ್ಟಾಂಗಹೃದಯಕ್ಕೆ ಅರುಣದತ್ತ (12ನೆಯ ಶತಮಾನ) ಮತ್ತು ಹೇಮಾದ್ರಿ (13ನೆಯ ಶತಮಾನ)-ಇವರ ವ್ಯಾಖ್ಯಾನಗಳು ಹೆಸರುವಾಸಿಯಾಗಿವೆ.

ಕರ್ನಾಟಕದಲ್ಲಿ ಅನೇಕ ವೈದ್ಯರು ಸೇವೆಯನ್ನು ಸಲ್ಲಿಸಿದ್ದಾರೆ. ಇವರಲ್ಲಿ ಎಂಟನೆಯ ಶತಮಾನದ ಉಗ್ರಾದಿತ್ಯ, ಹನ್ನೆರಡನೆಯ ಶತಮಾನದ ಬೋಪದೇವ, ಹೇಮಾದ್ರಿ ಮುಂತಾದವರು ಗ್ರಂಥರಚನೆ, ವೈದ್ಯವೃತ್ತಿಗಳಲ್ಲಿ ಪ್ರಸಿದ್ಧರಾಗಿದ್ದಾರೆ. ಉಗ್ರಾದಿತ್ಯ ರಾಷ್ಟ್ರಕೂಟ ನೃಪತುಂಗನ ಆಸ್ಥಾನದಲ್ಲಿದ್ದ. ಜೈನಮತಕ್ಕೆ ಸೇರಿದವನಾದ್ದರಿಂದ ದೊಡ್ಡ ಚರ್ಚೆಯನ್ನೇ ನಡೆಸಿ ಔಷಧಗಳಲ್ಲಿ ಮಧು, ಮಾಂಸ ಮತ್ತು ಮದ್ಯಗಳನ್ನು ನಿಷೇಧಿಸಿದ. ಈತನ ಕಲ್ಯಾಣಕಾರಕ ಶೇಷ್ಠ ಗ್ರಂಥ. ಕಳಲೆಯ ವೀರರಾಜ (17ನೆಯ ಶತಮಾನ ಸಕಲವೈದ್ಯ ಸಂಹಿತಾರ್ಣವವೆಂಬ ಕನ್ನಡ ಮತ್ತು ತೆಲಗು ಸೇರಿರುವ ಗ್ರಂಥವನ್ನೂ ನಂಜರಾಜ ಭೂಪಾಲ ವೈದ್ಯಸಾರಸಂಗ್ರಹವೆಂಬ ಗ್ರಂಥವನ್ನೂ ಬರೆದಿದ್ದಾರೆ.)

ಆಧುನಿಕ ಯುಗ: ವಿಜ್ಞಾನ ಮುನ್ನಡೆದು ಜನಜೀವನ ಮತ್ತು ನಾಗರಿಕತೆಗಳು ಬದಲಾಗುತ್ತಿರುವ ಈ ಕಾಲದಲ್ಲಿ ಆಯುರ್ವೇದ ತತ್ತ್ವಗಳನ್ನನುಸರಿಸಿ ರೋಗ ಪ್ರತಿಬಂಧಕ ಮತ್ತು ನಿವಾರಣೆಗಳನ್ನು ಮಾಡಲು ಸಾಧ್ಯವೇ ಎಂಬ ಸಂಶಯ ಉಂಟಾಗುತ್ತದೆ. ಆಧುನಿಕ ನಾಗರಿಕತೆ ಕೃತಕವಾದ ಜೀವನಕ್ಕೆ ಪ್ರಾಧಾನ್ಯವನ್ನು ಕೊಡುತ್ತಿರುವುದರಿಂದ ಮನುಷ್ಯನ ಧಾತುಬಲ ಕಡಿಮೆಯಾಗುತ್ತಿದೆ. ಇದರಿಂದ ಹೊಸ ಹೊಸ ರೋಗಗಳೂ ಅವನ್ನು ಚಿಕಿತ್ಸಿಸುವುದಕ್ಕೆ ಸಾಧನಗಳೂ ಮತ್ತು ಅವುಗಳಿಂದಾಗುವ ಅಪಾಯಗಳೂ ಹೀಗೆ ಒಂದರಿಂದ ಮತ್ತೊಂದು ಸಮಸ್ಯೆ ಹುಟ್ಟುತ್ತಿವೆ. ವಾತಾವರಣಕ್ಕೆ ಹೊಂದಿಕೊಂಡು ಜೀವಿಸಬೇಕಾದುದು ಅನಿವಾರ್ಯ. ರೋಗವಿಜ್ಞಾನಕ್ಕೆ ಆಧುನಿಕ ಯಂತ್ರೋಪಕರಣ ಮತ್ತು ಪರೀಕ್ಷಾಕ್ರಮಗಳು ಬಹುಮಟ್ಟಿಗೆ ಸಹಾಯಕವಾಗಿವೆ. ದಿನದಿನಕ್ಕೆ ಹೊಸ ಔಷಧಗಳು ಬರುತ್ತಿವೆ. ಆದರೂ ಅನೇಕ ವ್ಯಾಧಿಗಳು ಚಿಕಿತ್ಸೆಗೆ ಕಠಿಣವಾಗಿಯೇ ಇವೆ. ಅಲ್ಪವ್ಯಾಧಿಗೆ ಬಲವತ್ತರವಾದ ಔಷಧಗಳನ್ನು ಉಪಯೋಗಿಸುವುದು, ಗುರುತರ ವ್ಯಾಧಿಯನ್ನು ಅಲಕ್ಷಿಸುವುದು ಮನಸ್ಸನ್ನು ಸ್ವೇಚ್ಛೆಯಾಗಿ ಬಿಡುವುದು-ಇವೆಲ್ಲ ಅನಾಯುಷ್ಯವಾದುವು.

ನೈಸರ್ಗಿಕ ತತ್ತ್ವಗಳನ್ನು ಬಿಟ್ಟು ಕ್ಲಿಷ್ಟ ಮಾರ್ಗವನ್ನು ಹಿಡಿದಿರುವುದೇ ಈ ಸಮಸ್ಯೆಗೆ ಕಾರಣವೆಂದು ಹೇಳಬಹುದು. ಪ್ರಾಚೀನವಾದ ಆಯುರ್ವೇದ ನಿಯಮಗಳು ನೈಸರ್ಗಿಕವಾದ ಜೀವನಕ್ಕೆ ಅನುಕೂಲವಾಗಿವೆ. ಇವನ್ನು ಈಗಿನ ಪರಿಸ್ಥಿತಿಗೆ ಸರಿ ಹೊಂದುವಂತೆ ಅಳವಡಿಸಿಕೊಳ್ಳುವುದು ಅತ್ಯಗತ್ಯ. ಶಾಸ್ತ್ರಬದ್ಧ ವಿಷಯಗಳನ್ನು ಪ್ರಾಯೋಗಿಕವಾಗಿಯೂ ಫಲಪ್ರದವಾಗಿರುವ ವಿಷಯಗಳನ್ನು ಶಾಸ್ತ್ರೀಯವಾಗಿಯೂ ಅಧ್ಯಯನ ಮಾಡಬೇಕು. ಆಯುರ್ವೇದಿಯ ಸಂಶೋಧನಾ ಕೇಂದ್ರಗಳಲ್ಲಿ ತ್ರಿದೋಷ ಸಿದ್ಧಾಂತಕ್ಕನುಸಾರವಾಗಿ ಸಂಹಿತಾಯುಗ ಮತ್ತು ಆಧುನಿಕ ಯುಗಗಳಲ್ಲಿ ಉಪಯುಕ್ತವಾಗಿರುವ ಭಾಗಗಳನ್ನು ಕ್ರೋಢಿಕರಿಸಿ ಪ್ರಚಾರಕ್ಕೆ ತರುವ ಏರ್ಪಾಡುಗಳಾಗಬೇಕು. ಈಗ ವೈದ್ಯರನೇಕರಿಗೆ ತಾವೇ ಔಷಧಗಳನ್ನು ಮಾಡಿಕೊಳ್ಳುವುದು ತೊಂದರೆಯಾಗಿದೆ. ಈಚೀಚೆಗೆ ಬೆಳೆಯುತ್ತಿರುವ ಔಷಧ ಕಾರ್ಖಾನೆಗಳಿಗೆ ಸಾಕಷ್ಟು ಉತ್ತೇಜನವಿಲ್ಲ. ಅಧಿಕ ಸಂಖ್ಯೆಗಳಲ್ಲಿ ಆಯುರ್ವೇದೀಯ ಶಿಕ್ಷಣಸಂಸ್ಥೆಗಳೂ ಚಿಕಿತ್ಸಾಲಯಗಳೂ ಪ್ರಚಾರ ಕೇಂದ್ರಗಳೂ ಏರ್ಪಟ್ಟರೆ ದೇಶದ ಸ್ವಾಸ್ಥ್ಯ ಸಮಸ್ಯೆ ಬಹುಮಟ್ಟಿಗೆ ಬಗೆಹರಿಯುವುದು. ಜನಸಾಮಾನ್ಯಕ್ಕೆ ಸತ್ಸಂತಾನದ ತಿಳಿವಳಿಕೆಯನ್ನು ಕೊಡುವುದರಿಂದ ಕುಟುಂಬ ಯೋಜನೆ ಸಾರ್ಥಕವಾಗುವುದು. (ಎಂ.ಎಂ.ಎಸ್.)