ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆರ್ಕಿಯಾಪ್ಟೆರಿಕ್ಸ್

ವಿಕಿಸೋರ್ಸ್ದಿಂದ
ಆರ್ಕಿಯಾಪ್ಟೆರಿಕ್ಸ್

ಮೀಸೊ ಜೋಯಿಕ್ ಅಥವಾ ಜುರಾಸಿಕ್ ಕಲ್ಪದ (ಸು.೧೮೧ ದಶಲಕ್ಷ ವರ್ಷಗಳಷ್ಟು ಹಿಂದೆ) ಇದ್ದ ಉರಗ ಮತ್ತು ಪಕ್ಷಿ ಲಕ್ಷಣಗಳೆರಡನ್ನೂ ಹೊಂದಿದ ಪ್ರಾಣಿಯ ಪಳೆಯುಳಿಕೆ. ವಾಯುಮಂ ಡಲವನ್ನು ಜಯಿಸುವ ಸರೀಸೃಪಗಳ ಪ್ರಯತ್ನ ಜುರಾಸಿಕ್ ಕಾಲದಲ್ಲಿ ಫಲಿಸಿ ದಂತೆ ತೋರುವುದು. ಅದೇ ಕಾಲದಲ್ಲಿ ಪಕ್ಷಿಗಳ ಉದಯವೂ ಆಗಿದೆ. ಜರ್ಮನಿಯ ಬವೇರಿಯ ಪ್ರಾಂತದ ಸೊಲೆನ್ ಹಾಪನ್ ಸುಣ್ಣ ಶಿಲೆಯಲ್ಲಿ ಎರಡು ಪಕ್ಷಿ ಅಸ್ಥಿಪಂಜರಗಳು ದೊರೆತಿವೆ. ಇವೇ ಅತ್ಯಂತ ಪ್ರಾಚೀನ ಪಕ್ಷಿ ಅಸ್ಥಿಪಂಜರಗಳು. ಅವುಗಳಲ್ಲಿ ಒಂದನ್ನು ಆರ್ಕಿಯಾಪ್ಟೆರಿಕ್ಸ್ ಎಂದೂ ಇನ್ನೊಂದನ್ನು ಆರ್ಕಿಯಾರ್ನಿಸ್ ಎಂದೂ ಕರೆಯಲಾಗಿದೆ. ಆರ್ಕಿಯಾ ಪ್ಟೆರಿಕ್ಸ್ ಬಹು ಚಿಕ್ಕ ಪಕ್ಷಿ. ಬಹುಶಃ ಗಾತ್ರದಲ್ಲಿ ಕಾಗೆಗಿಂತ ದೊಡ್ಡದಿರಲಾ ರದು. ಅದರ ಹೋಲಿಕೆ ನಮಗೆ ಪರಿಚಿತವಾದ ಪಕ್ಷಿಗಳಿಗಿಂತಲೂ ಹೆಚ್ಚು ಆರ್ಕಿಯೋಸಾರಿಯನ್ ಸರೀಸೃಪ ಗಳದ್ದೇ. ಅಂದರೆ ತಲೆಯ ಬುರುಡೆಯಲ್ಲಿ ಎರಡು ಕಪೋಲ ರಂಧ್ರಗಳಿವೆ. ದವಡೆಯಲ್ಲಿ ಹಲ್ಲುಗ ಳಿದ್ದು ಅವು ಗುಳಿಗಳಲ್ಲಿವೆ. ಬೆನ್ನೆಲುಬುಗಳು ಆ್ಯಂಫಿಕೋಯಿಲಸ್ ಮಾದರಿಯಲ್ಲಿವೆ. ಎದೆ ಎಲುಬು ಚಿಕ್ಕದಾಗಿದೆ. ಅಂಗೈನಲ್ಲಿ ಪಂಜರಗಳಿಂದ ಕೂಡಿದ ಮೂರು ಬೆರಳುಗಳಿವೆ. ಬಾಲ ದೇಹಕ್ಕಿಂತ ಉದ್ದ. ಇವೆಲ್ಲ ಸರೀಸೃಪದ ಲಕ್ಷಣಗಳು. ಆರ್ಕಿಯಾಪ್ಟೆರಿಕ್ಸ್ ನಲ್ಲಿ ಪಕ್ಷಿಜಾತಿಯ ಕೆಲವು ಲಕ್ಷಣಗಳನ್ನೂ ಕಾಣಬಹುದು. ದೊಡ್ಡ ಕಣ್ಣುಗೂಡುಗಳು ಇರುವುದರಿಂದ ಇದರ ತಲೆಬುರುಡೆ ಪಕ್ಷಿಗಳ ತಲೆಬುರುಡೆಯನ್ನು ಹೋಲುತ್ತದೆ. ರೆಕ್ಕೆ ಪುಕ್ಕಗಳು ಈಗಿನ ಪಕ್ಷಿಗಳ ರೆಕ್ಕೆ ಪುಕ್ಕಗಳಂತೆಯೇ ಇವೆ. ಹೀಗೆ ಆರ್ಕಿಯಾಪ್ಟೆರಿಕ್ಸ್ ಎಂಬ ಆದಿಪಕ್ಷಿ ಸರೀಸೃಪ ಮತ್ತು ಪಕ್ಷಿ ಜಾತಿಗಳೆರಡರ ಲಕ್ಷಣಗಳನ್ನು ಅಳವಡಿಸಿಕೊಂಡಿದ್ದ ಜೀವಿ. ಇದಕ್ಕೆ ರೆಕ್ಕೆ ಪುಕ್ಕಗಳಿದ್ದರೂ ಹೆಚ್ಚು ಹಾರಲು ಅಸಮರ್ಥವಾಗಿದ್ದಂತೆ ತೋರುವುದು. ಆದರೆ ಇದು ವೇಗವಾಗಿ ಓಡಬಲ್ಲುದಾಗಿತ್ತು. ಕ್ರಿಟೇಷ ಯುಗದ (ಸು. ೬೩ ದಶಲಕ್ಷ ವರ್ಷಗಳ ಹಿಂದೆ) ಪಕ್ಷಿಗಳು ಆರ್ಕಿಯಾಪ್ಟೆರಿಕ್ಸ್ ಮತ್ತು ನಿಜಪಕ್ಷಿ ವರ್ಗಗಳ ಮಧ್ಯವರ್ತಿಗಳಾಗಿದ್ದುವು. ಆರ್ಕಿಯಾಪ್ಟೆರಿಕ್ಸ್ ಹಾಗೆ ಹಲ್ಲುಗಳನ್ನು ಹೊಂದಿದ್ದರೂ ಉಳಿದ ಲಕ್ಷಣಗಳಲ್ಲಿ ಪಕ್ಷಿ ಜಾತಿಯ ಕಡೆಗೆ ದಿಟ್ಟ ಹೆಜ್ಜೆ ಇಟ್ಟಿದ್ದುವು. ಬಾಲ ಚಿಕ್ಕದಾಗಿತ್ತು. ಎಲುಬುಗಳು ಟೊಳ್ಳಾಗಿದ್ದು, ಗಾಳಿಯಿಂದ ತುಂಬಿಕೊಂಡಿದ್ದವು. ಕಪೋಲರಂಧ್ರ, ಪಾದಗಳು ಮತ್ತು ಟೊಂಕದ ಎಲುಬು ಮುಂತಾದವುಗಳು ಪಕ್ಷಿಯಲ್ಲಿರು ವಂತೆಯೇ ಇದ್ದವು. ಕ್ರಿಟೇಷ ಯುಗದಲ್ಲಿ ಎರಡು ಬಗೆಯ ಪಕ್ಷಿಗಳಿದ್ದವು. ಒಂದು ದೊಡ್ಡದು, ಮತ್ತೊಂದು ಚಿಕ್ಕದು. ದೊಡ್ಡದು ಕನ್ಸಾಸ್ ಪ್ರಾಂತ್ಯದ ನಿಯೋಬ್ರಾರ ಶಿಲೆಗಳಲ್ಲಿ ಸಿಕ್ಕಿರುವ ಹೆಸರಾರ್ನಿಸ್. ಇದು ಹಾರಲು ಅಸಮರ್ಥವಾಗಿತ್ತು. ಚಿಕ್ಕದಾದ ಇಕ್ತಿಯಾರ್ನಿಸ್ ದೊಡ್ಡ ರೆಕ್ಕೆಗಳನ್ನು ಹೊಂದಿ ಹಾರಬಲ್ಲದಾ ಗಿತ್ತು. ಇವೆರಡೂ ಜಲಪಕ್ಷಿಗಳು. ಆಧುನಿಕ ಜೀವಕಲ್ಪದ ಆದಿಯ ವೇಳೆಗೆ ಈಗಿನ ಪಕ್ಷಿಗಳ ಅವತರಣಿಕೆ ಆಗಿರುವ ಪ್ರಯುಕ್ತ, ಅವುಗಳಿಗೂ ಈಗಿನ ಪಕ್ಷಿಗಳಿಗೂ ಅಷ್ಟು ವ್ಯತ್ಯಾಸ ಕಾಣುವುದಿಲ್ಲ.