ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆರ್ಗೋನಾಟ್

ವಿಕಿಸೋರ್ಸ್ದಿಂದ
ಆರ್ಗೋನಾಟ್

ಒಂದು ಜಾತಿಯ ವಲ್ಕವಂತ ಮೃದ್ವಂಗಿ (ಚಿಪ್ಪಿನ ಪ್ರಾಣಿ). ಸಮುದ್ರದಲ್ಲಿ ಕಾಣದೊರೆಯುತ್ತದೆ. ಇದಕ್ಕೆ ಇರುವ ಎಂಟು ಶಿರಪಾದಗಳಲ್ಲಿ ಎರಡು ವಿಸ್ತಾರಗೊಂಡು ಜಾಲವಾಗಿ ಮಾರ್ಪಾಟಾಗಿವೆ. ಬಹು ಸುಂದರವಾದ ಚಿಪ್ಪನ್ನು (ಹೆಣ್ಣಿನಲ್ಲಿ ಮಾತ್ರ) ಹೊಂದಿದೆ. ಮೊಟ್ಟೆ ಮತ್ತು ಮರಿಗಳಿಗೆ ಚಿಪ್ಪು ತೊಟ್ಟಿಲಿನಂಥ ರಕ್ಷಣೆ. ಆರ್ಗೋನಾಟ್ನ ಚಿಪ್ಪು ಮುತ್ತಿನ ಚಿಪ್ಪಿನ ಪ್ರಾಣಿಗಳ ಚಿಪ್ಪಿನಂತೆ ಗೂಡಲ್ಲ; ಪ್ರಾಣಿ ವಾಸಿಸುವ ಮನೆಯೂ ಅಲ್ಲ; ಕೇವಲ ತೊಟ್ಟಿಲು ಮಾತ್ರ. ಇತರ ಎಲ್ಲ ಮೃದ್ವಂಗಿಗಳಂತೆ ಇದರ ಚಿಪ್ಪು ಮ್ಯಾಂಟಲ್ ಚರ್ಮದ ಮಡಿಕೆಯಿಂದ ಸ್ರವಿಸಿದ್ದಲ್ಲ; ಕರುಳು ಮೊದಲಾದವುಗಳನ್ನೊಳಗೊಂಡ ಚರ್ಮದ ಹೊರ ಮಡಿಕೆಯಿಂದ ಮಾಡಿದುದೂ ಅಲ್ಲ; ತನ್ನ ಎರಡು ಕೈಗಳಿಂದ ತಯಾರಾದ ಚಿಪ್ಪು. ಗಂಡು ಆರ್ಗೋನಾಟ್ಗಳಿಗೆ ಚಿಪ್ಪು ಇಲ್ಲದಿರುವುದೇ ಈ ಪ್ರಾಣಿಯ ವೈಶಿಷ್ಯ. ಗಂಡು ಗುಜ್ಜಾರಿ. ಅಂದ ಮಾತ್ರಕ್ಕೆ ಹೆಣ್ಣು ಅತಿ ದೊಡ್ಡದೆಂದು ಅರ್ಥವಲ್ಲ. ಕೇವಲ ಹತ್ತು ಹನ್ನೆರಡು ದಿವಸಗಳ ಮರಿಯಾದಾಗಿನಿಂದಲೇ, ಚಿಪ್ಪು ರೂಪುಗೊಳ್ಳುತ್ತದೆ. ದೇಹ ಬೆಳೆದಂತೆಲ್ಲ ಚಿಪ್ಪು ಕ್ರಮವಾಗಿ ಬೆಳೆಯುವುದು. ಚಿಪ್ಪಿನ ಬೆಳೆವಣಿಗೆಗೆ ಆರ್ಗೋನಾಟ್ನ ಎರಡು ಕೈಗಳೂ ಸ್ರವಿಸುವ ದ್ರವವೇ ಕಾರಣ. ದೊಡ್ಡ ಚಿಪ್ಪು ಸುಮಾರು ಒಂದು ಅಂಗುಲ ಉದ್ದವಿರುವುದು. ಹೆಣ್ಣು ಸಮುದ್ರದ ಆಳದಲ್ಲಿ ವಾಸಿಸುತ್ತ ಮೊಟ್ಟೆ ಇಡುವ ಕಾಲದಲ್ಲಿ ಮಾತ್ರ ಮೇಲಕ್ಕೆ ಬರುತ್ತದೆ. ಇವುಗಳಲ್ಲಿ ಸೈಡಮೆಂಟಲ್ ಗ್ರಂಥಿಗಳು ಇರುವುದಿಲ್ಲ. ಶ್ವಾಸಾಂಗಗಳನ್ನುಳ್ಳ ಈ ಪ್ರಾಣಿಗಳಿಗೆ ಎಂಟು ಕೈಗಳಿವೆ. ಸೂಕ್ಷ್ಮ ತಂತುಗಳನ್ನುಳ್ಳ ಬೇರೆ ಕೈಗಳಿಲ್ಲ. ಇದರ ದೇಹ ಚಿಕ್ಕದಾಗಿದ್ದು ದುಂಡಗಿರುವ ತಳಭಾಗವನ್ನು ಹೊಂದಿದೆ. ಹೀರುಬಟ್ಟಲುಗಳಲ್ಲಿ ಮಾಂಸಭರಿತವಾದ ಉಂಗುರಗಳಿಲ್ಲ. ಹೆಣ್ಣು ಆರ್ಗೋನಾಟನ್ನು ಪೇಪರ್ ನಾಟಿಲಸ್ ಎಂದು ಕರೆಯುವರು.