ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆರ್ಜೆಂಟೀನ

ವಿಕಿಸೋರ್ಸ್ದಿಂದ
ಆರ್ಜೆಂಟೀನ

ದಕ್ಷಿಣ ಅಮೆರಿಕದ ರಾಜ್ಯಗಳಲ್ಲಿ ಒಂದು (೩೫೦-೫೫೦ ದಕ್ಷಿಣ ಅಕ್ಷಾಂಶ, ೫೪೦೨೨°-೭೩೦೩೦° ಪಶ್ಚಿಮ ರೇಖಾಂಶ). ಉತ್ತರದಲ್ಲಿ ಬೊಲಿವಿಯ, ಪರಗ್ವೆ, ಪಶ್ಚಿಮದಲ್ಲಿ ಚಿಲಿ, ಪೂರ್ವ ಮತ್ತು ಈಶಾನ್ಯದಲ್ಲಿ ಬ್ರೆಜಿಲ್ ಮತ್ತು ಉರುಗ್ವೆ ದೇಶಗಳೂ ದಕ್ಷಿಣ ಮತ್ತು ಪೂರ್ವದಲ್ಲಿ ದಕ್ಷಿಣ ಅಂಟ್ಲಾಂಟಿಕ್ ಸಾಗರ ಸುತ್ತುವರೆದಿರುವ ಈ ದೇಶದ ವಿಸ್ತೀರ್ಣ ೨,೭೮೦,೪೦೦.ಚ.ಕಿಮೀ. ಜನಸಂಖ್ಯೆ ೩೯,೯೨೧,೮೩೩ (೨೦೦೨). ಉತ್ತರಕ್ಕೆ ಸ್ವಲ್ಪ ವಿಶಾಲವಾಗಿದ್ದು ದಕ್ಷಿಣಕ್ಕೆ ಹೋದಂತೆ ಇಕ್ಕಟ್ಟಾಗುತ್ತ ಹೋಗುತ್ತದೆ. ರಾಜಧಾನಿ ಬ್ಯೂನೆಸ್ ಐರಿಸ್. ಇದರ ಜನಸಂಖ್ಯೆ ೧೨,೪೩೧,೦೦೦. ಶೇ 89ರಷ್ಟು ಜನ ನಗರಗಳಲ್ಲಿ ವಾಸಿಸುತ್ತಾರೆ. ಉಳಿದ ಜನ ಹಳ್ಳಿಗಳಲ್ಲಿ ವಾಸವಾಗಿದ್ದಾರೆ. ಪ್ರತಿ ಸಾವಿರಕ್ಕೆ ಜನನ ಮರಣ ದರಗಳು ಕ್ರಮವಾಗಿ ೨೯ ಮತ್ತು ೯ ಆಗಿವೆ. ಈ ದೇಶದ ಜನ ವಿದ್ಯಾವಂತರು. ಅಕ್ಷರಸ್ಥರ ಸಂಖ್ಯೆ ಶೇ ೮೭ರಷ್ಟಿದೆ. ಒಕ್ಕಲುತನದಲ್ಲಿ ತೊಡಗಿದವರ ಸಂಖ್ಯೆ ಶೇ ೨೫ ರಷ್ಟು ಮಾತ್ರ. ಆದರೂ ಇದು ಕೃಷಿ ಪ್ರಧಾನ ರಾಷ್ಟ್ರ. ಇಲ್ಲಿನ ನಾಣ್ಯ ಪೆಸೊ. ಮುಖ್ಯ ಬೆಳೆಗಳು ಗೋದಿ, ಮೆಕ್ಕೆಜೋಳ, ರೈ, ಓಟ್ಸ್ ಮತ್ತು ಅಗಸೆನಾರು.

ಈ ದೇಶದ ಪಶ್ಚಿಮ ಆಂಡೀಸ್ ಪರ್ವತ ಉತ್ತರ ದಕ್ಷಿಣವಾಗಿ ಹಬ್ಬಿದೆ. ಬಹಳ ಎತ್ತರವಾಗಿರುವುದರಿಂದ ಹಿಮಾವೃತವಾಗಿರುತ್ತದೆ. ಉತ್ತರ ಭಾಗದಲ್ಲಿ ಅರಣ್ಯ ಪ್ರದೇಶವಿದೆ. ನೈಋತ್ಯಕ್ಕೆ ಫಲವತ್ತಾದ ಪಂಪಾಸ್ ಹುಲ್ಲುಗಾವಲು, ದಕ್ಷಿಣಕ್ಕೆ ಮರುಭೂಮಿ. ೧೫೮೦ರಲ್ಲಿ ಸ್ಪೇನ್ ದೇಶದವರು ಇದನ್ನು ಆಕ್ರಮಿಸಿಕೊಂಡರು. ಈ ವಸಾಹತುಗಾರರು ಇಲ್ಲಿಗೆ ಬಂದಕೂಡಲೆ ಇಲ್ಲಿಯ ಜನ ಬೆಳ್ಳಿಯ ಆಭರಣಗಳನ್ನು ಧರಿಸುವುದನ್ನು ಕಂಡು ಇಲ್ಲಿ ಬೆಳ್ಳಿ ಸಿಗಬಹುದೆಂದು ತಿಳಿದು ಇದನ್ನು ಬೆಳ್ಳಿಯ ನಾಡೆಂದು ಕರೆದರು. ಸ್ವಲ್ಪ ಕಾಲಾನಂತರ, ಬೆಳ್ಳಿ ಹೊರದೇಶಗಳಿಂದ ಆಮದಾಗುತ್ತಿದೆ ಎಂಬುದು ತಿಳಿದುಬಂತು.

ಈ ದೇಶವನ್ನು ಸ್ವಾಭಾವಿಕವಾಗಿ ನಾಲ್ಕು ಭಾಗಗಳಾಗಿ ವಿಂಗಡಿಸಬಹುದು.

  1. ಉತ್ತರ ಜಾಕೊ ಪ್ರದೇಶ.
  2. ಪಂಪಾಸ್ ಹುಲ್ಲುಗಾವಲು ಪ್ರದೇಶ.
  3. ಜಾಕೊ, ಪಂಪಾಸ್ ಮತ್ತು ಪಶ್ಚಿಮದ ಆಂಡೀಸ್ ಪರ್ವತಗಳ ನಡುವಿನ ಸೀಮೆ.
  4. ಪಟಗೋನಿಯ ತಪ್ಪಲು.

ಉತ್ತರದ ಜಾಕೊ ಪ್ರದೇಶ

[ಸಂಪಾದಿಸಿ]

ಪಶ್ಚಿಮಕ್ಕಿರುವ ಪರ್ವತಗಳ ತಪ್ಪಲಿನಿಂದ ಪೂರ್ವಕ್ಕಿರುವ ಪರಗ್ವೆ ನದಿಯ ಬಯಲಿನವರೆಗೆ ಹಬ್ಬಿ ಹೆಚ್ಚಾಗಿ ಅರಣ್ಯದಿಂದ ತುಂಬಿದೆ. ವಾಣಿಜ್ಯ ಮಾರುತಗಳ ಭಾಗದಲ್ಲಿ ಬರುವುದರಿಂದ ಮಳೆಯಾಗುತ್ತದೆ. ಮಳೆ ಪೂರ್ವಕ್ಕೆ ಹೆಚ್ಚಾಗಿ, ಪಶ್ಚಿಮಕ್ಕೆ ಹೋದಂತೆ ಕಡಿಮೆಯಾಗುತ್ತ ಹೋಗುತ್ತದೆ. ಆದುದರಿಂದ ಪೂರ್ವಕ್ಕೆ ಕಾಡುಗಳು ಹೆಚ್ಚು ದಟ್ಟವಾಗಿ ಬೆಳೆದಿವೆ. ಸಮುದ್ರ ಸಮೀಪವಾಗಿರುವುದರಿಂದ ಹವೆ ಹಿತಕಾರಿಯಾಗಿದೆ. ನದಿಗಳು ಸದಾ ತಮ್ಮ ದಿಕ್ಕನ್ನು ಬದಲಿಸುತ್ತಿರುತ್ತವೆ. ಆದ್ದರಿಂದ ವಿದ್ಯುತ್ತು ಮತ್ತು ನೀರಿನ ಸೌಕರ್ಯ ಪಡೆಯುವುದು ಕಷ್ಟ. ವಸಾಹತುಗಾರರಿಗೆ ಇಲ್ಲಿನ ಮೂಲ ನಿವಾಸಿಗಳ ಭಯ ಹೆಚ್ಚು. ದಕ್ಷಿಣ ಭಾಗದಲ್ಲಿ ಅರಣ್ಯ ಪ್ರದೇಶ ಕಡಿಮೆ. ಕುರಿಗಳನ್ನೂ ಪರ್ವತಗಳ ತಳಭಾಗಗಳಲ್ಲಿ ದನಗಳನ್ನೂ ಸಾಕುತ್ತಾರೆ. ಈ ಸ್ವಾಭಾವಿಕ ಪ್ರದೇಶ ಒಕ್ಕಲುತನ ಮತ್ತು ಔದ್ಯೋಗಿಕ ಬೆಳವಣಿಗೆಗೆ ಯೋಗ್ಯವಾಗಿಲ್ಲ. ಕ್ವೆಬ್ರೊಕೊ ಎಂಬ ಜಾತಿಯ ಗಿಡ ಇಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಮರ ಬಹಳ ಗಟ್ಟಿ. ಹುಳು ಹತ್ತುವುದಿಲ್ಲ. ಪರಗ್ವೆ ನದಿಯ ದಡದಲ್ಲಿ ಕಟ್ಟಿಗೆಯ ಉದ್ಯೋಗ ನಡೆಯುತ್ತದೆ. ಇಲ್ಲಿ ದಟ್ಟ ಜನಸಾಂದ್ರತೆ ಇರುವ ಪಟ್ಟಣಗಳು ಬಹಳ ಕಡಿಮೆ.

ಪಂಪಾಸ್ ಹುಲ್ಲುಗಾವಲು ಪ್ರದೇಶ

[ಸಂಪಾದಿಸಿ]

ಸಮಶೀತೋಷ್ಣವಲಯ ಭಾಗದಲ್ಲಿ ಸಮುದ್ರ ತೀರದಲ್ಲಿದೆ. ಹವಾಗುಣ ಬಹಳ ಸೌಮ್ಯ. ಹಿತಕರ, ಮೇಲಾಗಿ ಭೂಮಿ ಬಹಳ ಫಲವತ್ತಾಗಿರುವುದರಿಂದ ಆರ್ಜೆಂಟೀನದ ಜನದಟ್ಟಣೆಯ ಅತಿ ಮುಖ್ಯ ಪ್ರದೇಶವಾಗಿದೆ. ಬೇಸಗೆಯ ಸರಾಸರಿ ಶಾಖ ಪ್ರಮಾಣ ೮೦೦ ಫ್ಯಾ. ಮತ್ತು ಚಳಿಗಾಲದ ಸರಾಸರಿ ಶಾಖಪ್ರಮಾಣ ೬೦೦ ಫ್ಯಾ. ವಾಣಿಜ್ಯ ಮಾರುತಗಳಿಂದ ಬೇಸಗೆಯಲ್ಲಿ ೫೦"-೧೦೦".ಸೆಂ.ಮೀ ಮಳೆಯಾಗುತ್ತದೆ. ಪಶ್ಚಿಮಕ್ಕೆ ಹೋದಂತೆ ಮಳೆಯ ಪ್ರಮಾಣ ಕಡಿಮೆ ಆಗುತ್ತ ಹೋಗುತ್ತದೆ. ೪೦೦ ಅಕ್ಷಾಂಶದಿಂದ ದಕ್ಷಿಣಕ್ಕೆ ಎಂದರೆ ರಿಯೊ, ಕೊಲರಾಡೊ ಪ್ರಾಂತ್ಯದಿಂದ ದಕ್ಷಿಣಕ್ಕೆ ಮಳೆ ತೀರ ಕಡಿಮೆ. ಏಕೆಂದರೆ ಈ ಪ್ರದೇಶ ವಾಣಿಜ್ಯ ಪ್ರತಿ ಮಾರುತಗಳ ಪ್ರದೇಶದಲ್ಲಿದೆ. ಈ ಮಾರುತಗಳು ಆಂಡೀಸ್ ಪರ್ವತಗಳನ್ನು ದಾಟಿ ಬರುವಾಗ ತಮ್ಮ ತೇವಾಂಶವನ್ನು ಕಳೆದುಕೊಂಡಿರುತ್ತವೆ. ಇದನ್ನು ಪಂಪಾಸ್ ಪ್ರದೇಶವೆಂದು ಹೇಳಲಾಗುವುದಿಲ್ಲ. ನಿಜವಾದ ಪಂಪಾಸ್ ಪ್ರದೇಶವೆಂದರೆ ಬ್ಯೂನೆಸ್ ಐರಿಸ್ ಪ್ರಾಂತ್ಯ. ಇದು ಸಮುದ್ರಮಟ್ಟದಿಂದ ಸು. ೧೫೦ಮೀ ಎತ್ತರದಲ್ಲಿದೆ. ಇಲ್ಲಿ ಖನಿಜ ಸಂಪತ್ತು ಸಿಗುವುದಿಲ್ಲ. ಭೂಮಿ ಬಹಳ ಫಲವತ್ತಾಗಿರುವುದರಿಂದ ಒಕ್ಕಲುತನವೇ ಇಲ್ಲಿಯ ಮುಖ್ಯ ಉದ್ಯೋಗ.

ಇಲ್ಲಿಯ ಮಳೆ ಮತ್ತು ಫಲವತ್ತಾದ ಭೂಮಿ ಒಕ್ಕಲುತನ ಮತ್ತು ನಿವಾಸಕ್ಕೆ ಅನುಕೂಲವಾದುದರಿಂದ ಸ್ಪೇನಿನಿಂದ ಬಂದ ವಲಸೆಗಾರರು ಇಲ್ಲೇ ನೆಲಸಿದರು. ವಾಸಕ್ಕೆ ಅಡಚಣೆಗಳೇನೋ ಇದ್ದವು. ಅದು ಕೇವಲ ಹುಲ್ಲುಗಾವಲು. ಚಿಗರೆ ಮುಂತಾದ ಕೆಲವು ಪ್ರಾಣಿಗಳ ಹೊರತು ಕೃಷಿಗೆ ಉಪಯುಕ್ತ ಪ್ರಾಣಿಗಳೇ ಇರಲಿಲ್ಲ. ಆದ್ದರಿಂದ ಬಿತ್ತಲು ಬೀಜಗಳನ್ನು, ವ್ಯವಸಾಯದ ಸಲುವಾಗಿ ಕುದುರೆಗಳನ್ನು, ದನಕರುಗಳನ್ನು ಇವರು ಮೊದಲು ತಮ್ಮ ದೇಶದಿಂದ ತರಬೇಕಾಯಿತು. ಅಲ್ಲದೆ ಇಲ್ಲಿಯ ಮೂಲನಿವಾಸಿಗಳ ಪ್ರತಿಭಟನೆ ಬಲವತ್ತರವಾಗಿತ್ತು. ಬರುಬರುತ್ತ ಇವರು ಪರಸ್ಪರ ಹೊಂದಿಕೊಂಡು ಬಾಳುವುದನ್ನು ಕಲಿತರು. ಒಕ್ಕಲುತನದಲ್ಲಿ ಈ ಮೂಲ ನಿವಾಸಿಗಳನ್ನು ಕೂಲಿಗಳಂತೆ ದುಡಿಸಿಕೊಳ್ಳಲು ಪ್ರಾರಂಭಿಸಿದರು. ತಂಪು ಭಾಗಗಳಲ್ಲಿ ಗೋದಿಯನ್ನು, ಸ್ವಲ್ಪ ಬೆಚ್ಚಗಿರುವ ಕಡೆಗಳಲ್ಲಿ ಗೋವಿನಜೋಳ ಮತ್ತು ತೀರ ತಂಪಾಗಿರುವ ಕಡೆ ತೋಕೆ ಗೋದಿ (ಓಟ್ಸ್) ಧಾನ್ಯಗಳನ್ನು ಬೆಳೆಯತೊಡಗಿದರು.

ಈಗ ಆರ್ಜೆಂಟೀನ ತನ್ನ ಒಟ್ಟು ಗೋದಿ ಹುಟ್ಟುವಳಿಯ ¾ ಭಾಗವನ್ನು ರಫ್ತು ಮಾಡುತ್ತದೆ. ೧೮೭೦ರಿಂದ ಈ ಪ್ರದೇಶ ಭರದಿಂದ ಪ್ರಗತಿ ಹೊಂದುತ್ತಲಿದೆ. ಇದಕ್ಕೆ ಕಾರಣ ಪಶುಪಾಲನೆ, ಸಾಕುಪ್ರಾಣಿಗಳು. ಮೊದಲು ದನಗಳನ್ನು ತೊಗಲಿನ ಸಲುವಾಗಿ ಸಾಕುತ್ತಿದ್ದರು. ಆದರೆ ಈಗ ವೈಜ್ಞಾನಿಕ ಶೋಧನೆಗಳಿಂದ ಹಾಲು, ಬೆಣ್ಣೆ ಮತ್ತು ಮಾಂಸಗಳನ್ನು ತಯಾರಿಸಿ ಶಿತೀಕರಣ ಮಾಡಿ ಪರದೇಶಗಳಿಗೆ ರಫ್ತು ಮಾಡುತ್ತಾರೆ. ಒಕ್ಕಲುತನಕ್ಕಿಂತ ಈ ಉದ್ಯೋಗದಲ್ಲಿ ಹೆಚ್ಚು ಜನರಿದ್ದಾರೆ. ಇಲ್ಲಿಯ ಜನರು ಕುಟುಂಬ ಪ್ರಿಯರು. ಅವರದು ಅವಿಭಕ್ತಕುಟುಂಬಗಳು. ಒಂದೇ ಕುಟುಂಬದಲ್ಲಿ ಇನ್ನೂರು ಮುನ್ನೂರು ಜನ ವಾಸಿಸುತ್ತಾರೆ. ಇವರ ಮನೆಗಳು ದೊಡ್ಡ ರಾಜ ಮಹಲನ್ನು ಹೋಲುತ್ತವೆ. ಮನೆಯ ಸುತ್ತಲೂ ತೋಟಗಳು; ಅವುಗಳ ಆಚೆ ಸೇವಕರ ಮನೆಗಳು. ಇವರು ನಗರ ವಾಸಿಗಳು. ಮಹಿಳೆಯರು ಯುರೋಪಿನಲ್ಲಿ ಶಿಕ್ಷಣ ಪಡೆದು ಬರುತ್ತಾರೆ. ಆದರೂ ಹೆಚ್ಚಾಗಿ ಸಾರ್ವಜನಿಕ ರಂಗಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಮಧ್ಯಮ ವರ್ಗದ ಹೆಣ್ಣು ಮಕ್ಕಳು ಶಿಕ್ಷಕಿಯರಾಗಿ ಅಥವಾ ಕಾರಕೂನರಾಗಿ ಕೆಲಸ ಮಾಡುತ್ತಾರೆ. ಪ್ರತಿಯೊಂದು ದೃಷ್ಟಿಯಿಂದ ಈ ಪ್ರದೇಶ ಇಡೀ ದೇಶದಲ್ಲೇ ಅತಿ ಪ್ರಗತಿಪರಭಾಗವೆಂದು ಹೇಳಬಹುದು.


ಪೂರ್ವದ ಜಾಕೋ, ಪಂಪಾಸ್ ಮತ್ತು ಆಂಡೀಸ್ ಪರ್ವತಗಳ ಮಧ್ಯಭಾಗ

[ಸಂಪಾದಿಸಿ]

ಬೆಟ್ಟಗಳಿಂದ ಹಾಗೂ ಕೊಳ್ಳಗಳಿಂದ ಕೂಡಿದೆ. ಇದೊಂದು ಬರಡು ಪ್ರದೇಶ : ಕಾರಣ, ಆಗ್ನೇಯದಿಂದ, ಬೀಸುವ ವಾಣಿಜ್ಯ ಮಾರುತಗಳು ಇಲ್ಲಿಗೆ ಬರುವುದರೊಳಗಾಗಿ ತಮ್ಮ ತೇವಾಂಶವನ್ನು ಕಳೆದುಕೊಂಡಿರುತ್ತವೆ. ಕೇವಲ ೧೨-೧೫ಸೆಂ.ಮೀ ವರೆಗೆ ಮಳೆಯಾಗುತ್ತದೆ. ಅದೂ ಕೇವಲ ೩೦೦ ಯಿಂದ ೪೦೦ ಅಕ್ಷಾಂಶದವರೆಗೆ ಮಾತ್ರ. ೪೫೦ ಅಕ್ಷಾಂಶದಿಂದ ದಕ್ಷಿಣಕ್ಕೆ ಮಳೆಯೇ ಇಲ್ಲ. ೩೦೦ ರಿಂದ ೪೦೦ ಅಕ್ಷಾಂಶದ ನಡುವೆ ಚಳಿಗಾಲದಲ್ಲಿ ಮಳೆಯಾಗುವುದರಿಂದ ಮೆಡಿಟರೇನಿಯನ್ ವಾಯುಗುಣವಿದೆ. ದ್ರಾಕ್ಷಿ, ಕಿತ್ತಳೆ ಮುಂತಾದ ಹಣ್ಣುಗಳು ಮತ್ತು ಗೋದಿ ಬೆಳೆಯುತ್ತದೆ. ಈ ಪ್ರದೇಶದ ಉತ್ತರಕ್ಕೆ ಉಷ್ಣವಲಯದಲ್ಲಿ ಕಬ್ಬು ಬೆಳೆಯುತ್ತಾರೆ. ಕಡಿಮೆ ಮಳೆಯಾಗುವ ಭಾಗಗಳಲ್ಲಿ ಮತ್ತು ಕೊಳ್ಳಗಳಲ್ಲಿ ಹುಲ್ಲು ಬೆಳೆಯುತ್ತಾರೆ. ಕಡಿಮೆ ಮಳೆಯಾಗುವ ಭಾಗಗಳಲ್ಲಿ ಮತ್ತು ಕೊಳ್ಳಗಳಲ್ಲಿ ಹುಲ್ಲು ಬೆಳೆಯುವುದರಿಂದ ದನಗಳನ್ನು ಸಾಕುತ್ತಾರೆ. ಮಾಂಸದ ಉತ್ಪಾದನೆಯೇ ಮುಖ್ಯ ಉದ್ಯೋಗ. ಈ ಪ್ರದೇಶದ ಮುಖ್ಯ ನಗರವೆಂದರೆ ಮೆಂಡೋಸಾ, ಬ್ಯೂನೆಸ್ ಐರಿಸ್ ಇಲ್ಲಿಗೆ ಒಂದು ರೈಲು ಮಾರ್ಗವಿದೆ.

ಪಟಗೋನಿಯದ ತಪ್ಪಲು ಪ್ರದೇಶ

[ಸಂಪಾದಿಸಿ]

ರಿಯೋಕೊಲರಾಡೊ ಪ್ರಾಂತ್ಯದಿಂದ ಖಂಡದ ದಕ್ಷಿಣ ತುದಿಯವರೆಗೆ ಹಬ್ಬಿದೆ. ದಕ್ಷಿಣಕ್ಕೆ ಬಂದಂತೆ ಬಹಳ ಇಕ್ಕಟ್ಟಾಗುತ್ತ ಹೋಗುತ್ತದೆ. ಸಂಪುರ್ಣ ಮರುಭೂಮಿ. ದಕ್ಷಿಣ ಅಮೆರಿಕದ ಸಮಶೀತೋಷ್ಣವಲಯದಲ್ಲಿದೆ. ಆಂಡೀಸ್ ಪರ್ವತಕ್ಕೆ ಹೊಂದಿಕೊಂಡಿರುವ ಪಶ್ಚಿಮ ಭಾಗದಲ್ಲಿ ಚಳಿಗಾಲದಲ್ಲಿ ಸ್ವಲ್ಪ ಮಳೆಯಾಗುವುದರಿಂದ ಕುರಿಗಳನ್ನು ಸಾಕುತ್ತಾರೆ. ಜನಸಂಖ್ಯೆ ಕೇವಲ 1ಳಿ ಲಕ್ಷ. ಕೆಲವೆಡೆಗಳಲ್ಲಿ ನೀರಾವರಿಯ ಸಹಾಯದಿಂದ ಒಕ್ಕಲುತನ ಮಾಡುತ್ತಾರೆ. ಸಮುದ್ರ ಮಟ್ಟದಿಂದ ೩೦೦-೯೦೦ ಮೀ ಎತ್ತರವಾಗಿದ್ದು ಅಲ್ಲಲ್ಲಿ ಗುಡ್ಡಗಳಿಂದ ಕೂಡಿದೆ. ಸಾಗುವಳಿಗೆ ಯೋಗ್ಯವಾದ ಪ್ರದೇಶ ಬಹಳ ಕಡಿಮೆ. ಅಭಿವೃದ್ಧಿ ಸಾಲದು. ಬೆಟ್ಟಗಳಲ್ಲಿ ಇತ್ತೀಚೆಗೆ ಎಣ್ಣೆಯನ್ನು ತೆಗೆಯುತ್ತಾರೆ.

ಪಂಪಾಸ್ ಪ್ರದೇಶವೇ ಮುಖ್ಯ ಪ್ರಾಂತ್ಯ. ವ್ಯವಸಾಯವೇ ಪ್ರಧಾನ ಕಸಬು. ಬ್ಯೂನೆಸ್ ಐರಿಸ್ ಪ್ರಪಂಚದ ಪ್ರಮುಖ ನಗರದಲ್ಲಿ ಒಂದು. ರೋಜಾರಿಯೊದಲ್ಲಿ ಪ್ರಾಚೀನವಾದ ಒಂದು ವಿಶ್ವವಿದ್ಯಾಲಯವಿದೆ. ಈ ಪ್ರದೇಶದಲ್ಲಿ ಯುರೋಪ್ ಖಂಡದ ಎಲ್ಲ ಜನರೂ ಇದ್ದಾರೆ.

ನಾಗರಿಕರಾಗಬೇಕೆನ್ನುವ ಎಲ್ಲರಿಗೂ ಸರ್ಕಾರ ಅನೇಕ ಬಗೆಯ ಸೌಲಭ್ಯಗಳನ್ನು ಒದಗಿಸಿದೆ. ಹೆಚ್ಚು ಸೌಲಭ್ಯಗಳಿರುವುದು ವಿಶೇಷವಾಗಿ ಇಟಾಲಿಯನ್ ಮತ್ತು ಸ್ಪ್ಯಾನಿಷ್ ಜನರಿಗೆ. ಇಲ್ಲಿ ೪೨೦೦೦ಕಿಮೀ ಉದ್ದದ ರೈಲುಮಾರ್ಗವಿದೆ. ಈ ದೇಶ ಶಿಕ್ಷಣರಂಗದಲ್ಲಿ ಬಹಳ ಪ್ರಗತಿಹೊಂದಿದೆ. ಆರು ವಿಶ್ವವಿದ್ಯಾನಿಲಯಗಳು, ಎರಡು ಸಾವಿರ ಮಾಧ್ಯಮಿಕ ಶಾಲೆಗಳು ಮತ್ತು ಹದಿನಾಲ್ಕು ಸಾವಿರ ಪ್ರಾಥಮಿಕ ಶಾಲೆಗಳು ಇವೆ. ಈ ದೇಶದಲ್ಲಿ ರೋಮನ್ ಕೆಥೊಲಿಕ್ ಪಂಥದವರೇ ಹೆಚ್ಚು. ಇಲ್ಲಿಯ ನಿರ್ಯಾತಗಳು ದಕ್ಷಿಣ ಅಮೆರಿಕದ ಒಟ್ಟು ನಿರ್ಯಾತದ ಶೇ ೧೨ ರಷ್ಟಿದೆ. ಇಲ್ಲಿಂದ ಗೋದಿ, ಗೋವಿನ ಜೋಳ, ಅಗಸೆ, ಮಾಂಸ ಮತ್ತು ಮಾಂಸದ ಪದಾರ್ಥಗಳು, ಉಣ್ಣೆ, ಚರ್ಮ, ಎಣ್ಣೆಕಾಳುಗಳು ರಫ್ತಾಗುವ ಮುಖ್ಯ ಪದಾರ್ಥಗಳು. ಇವುಗಳ ಪೈಕಿ ಶೇ ೨೩ರಷ್ಟು ಇಂಗ್ಲೆಂಡಿಗೆ, ಶೇ ೨೦ ರಷ್ಟು ಬ್ರಿಟಿಷ್ ರಾಜ್ಯಗಳಿಗೆ, ಶೇ ೧೧ ರಷ್ಟು ಜರ್ಮನಿಗೆ, ಶೇ ೭ ರಷ್ಟು ಇಟಲಿಗೆ, ಶೇ ೭ ರಷ್ಟು ಬ್ರೆಜಿಲ್ಗೆ ಮತ್ತು ಶೇ ೩೨ ರಷ್ಟು ಇತರ ರಾಷ್ಟ್ರಗಳಿಗೆ ಹೋಗುತ್ತವೆ. ಆಮದಾಗುವ ವಸ್ತುಗಳಲ್ಲಿ ಶೇ ೨೦ ರಷ್ಟು ಬ್ರಿಟಿಷ್ ರಾಷ್ಟ್ರಗಳಿಂದ, ಶೇ ೧೨ ರಷ್ಟು ಜರ್ಮನಿಯಿಂದ, ಶೇ ೮ರಷ್ಟು ಬ್ರೆಜಿಲ್ನಿಂದ, ಶೇ ೭ ರಷ್ಟು ವೆನಿಜೂಲದಿಂದ, ಶೇ ೭ ಜಪಾನಿನಿಂದ ಮತ್ತು ಶೇ ೪೬ರಷ್ಟು ಉಳಿದ ರಾಷ್ಟ್ರಗಳಿಂದ ಬರುತ್ತವೆ.


ಚರಿತ್ರೆ

೧೬ನೆಯ ಶತಮಾನದ ಮೊದಲ ದಶಕಗಳಲ್ಲಿ ಸ್ಪೇನ್ ಮತ್ತು ಪೋರ್ಚುಗಲ್ ದೇಶಗಳ ಸಾಹಸಿಗ ನಾವಿಕರು ದಕ್ಷಿಣ ಅಮೆರಿಕಕ್ಕೆ ಹೋಗಿ ಅಲ್ಲಿನ ದೇಶಗಳ ಸಂಪತ್ತನ್ನು ಸೂರೆಗೊಳ್ಳಲುಪಕ್ರಮಿಸಿದಾಗ ಪೆರು ಮುಂತಾದ ದೇಶಗಳಲ್ಲಿ ಅವರು ಕಂಡ ಬೆಳ್ಳಿ ಮತ್ತು ಚಿನ್ನದ ಗಣಿಗಳನ್ನಾಗಲಿ, ಬಹುಕಾಲದಿಂದ ಬೆಳೆದು ಬಂದಿದ್ದ ನಾಗರಿಕತೆಯನ್ನಾಗಲಿ ಆರ್ಜೆಂಟೀನದಲ್ಲಿ ಕಾಣಲಿಲ್ಲ. ಅಲ್ಲದೆ ಸಣ್ಣ ಸಣ್ಣ ಪಂಗಡಗಳನ್ನು ಮಾಡಿಕೊಂಡು ಅಲ್ಲಿ ವಾಸಿಸುತ್ತಿದ್ದ ಇಂಡಿಯನ್ನರಿಂದ ಪ್ರಬಲ ಪ್ರತಿಭಟನೆಯನ್ನೆದುರಿಸಬೇಕಾಯಿತು. ಜುಆನ್ ದ ಗಾರೆ ಎಂಬ ಸ್ಪೇನಿನ ಅಧಿಕಾರಿ ೧೫೮೦ರಲ್ಲಿ ಬ್ಯೂನೆಸ್ ಐರಿಸ್ ನಗರವನ್ನು ಸ್ಥಾಪಿಸಿ ಇಂಡಿಯನ್ನರ ಪ್ರಾಬಲ್ಯವನ್ನು ಮುರಿದ ಮೇಲೆ ಅರ್ಜೆಂಟೈನ ಸ್ಪೇನಿನ ಆಡಳಿತಕ್ಕೆ ಸೇರಿತೆನ್ನಬಹುದು. ೧೭೭೬ರಲ್ಲಿ ದಕ್ಷಿಣ ಅಮೆರಿಕದಲ್ಲಿ ಸ್ಪೇನಿಗೆ ಸೇರಿದ ದೇಶಗಳನ್ನೆಲ್ಲ ಒಂದು ಪ್ರಾಂತ್ಯವನ್ನಾಗಿ ಮಾಡಿದಾಗ ಬ್ಯೂನೆಸ್ ಐರಿಸ್ ಅದರ ರಾಜಧಾನಿಯಾಯಿತು. ನೆಪೋಲಿಯನ್ನನ ಕಾಲದಲ್ಲಿ ಬ್ರಿಟಿಷರು ದೇಶವನ್ನು ಸ್ವಾಧೀನಪಡಿಸಿಕೊಳ್ಳಲೆತ್ನಿಸಿ ವಿಫಲರಾದರು. ಈ ವಿಜಯದಿಂದ ಉತ್ತೇಜಿತರಾದ ಆರ್ಜೆಂಟೀನದ ಪ್ರಜೆಗಳು ಸ್ವಾತಂತ್ರ್ಯಕ್ಕಾಗಿ ಸ್ಪೇನಿನ ವಿರುದ್ಧ ಹೋರಾಡತೊಡಗಿದರು. ಕೊನೆಗೆ ೧೮೧೦ರಲ್ಲಿ ಪ್ರಜಾಧಿಪತ್ಯ ಸ್ಥಾಪಿತವಾಯಿತು. ಆದರೂ ಸುಲಭವಾಗಿ ದೊರೆತಿದ್ದ ಇಂಥ ಸಂಪದ್ಭರಿತ ದೇಶವನ್ನು ಬಿಟ್ಟು ಕೊಡಲು ಸ್ಪೇನ್ ಒಪ್ಪಲಿಲ್ಲ; ಹೋರಾಟ ಮುಂದುವರೆಯಿತು. ೧೮೪೨ರ ಕೊನೆಗೆ ಅರ್ಜೆಂಟೀನದ ಸ್ವಾತಂತ್ರ್ಯವನ್ನು ಸ್ಪೇನ್ ಒಪ್ಪಲೇಬೇಕಾಯಿತು. ಸ್ವಾತಂತ್ರ್ಯವನ್ನು ಗಳಿಸಿದರೂ ದೇಶದಲ್ಲಿ ಅಂತರ್ಯುದ್ಧಗಳು ನಡೆಯುತ್ತಲೇ ಬಂದವು. ನೆರೆ ದೇಶಗಳೊಂದಿಗೆ ಹೋರಾಟವೂ ನಡೆಯಿತು. ಇದು ೧೯ನೆಯ ಶತಮಾನದ ಉತ್ತರಾರ್ಧದಲ್ಲೆಲ್ಲ ನಡೆಯಿತು. ಚಿಲಿ ದೇಶದೊಂದಿಗೆ ನಡೆದ ಯುದ್ಧ ನಿಂತು, ಎರಡು ದೇಶಗಳ ಗಡಿಯ ಉಸ್ಪಲಾಟ ಕಣಿವೆಯಲ್ಲಿ, ಕ್ರೈಸ್ತನ ಬೃಹತ್ ಶಿಲಾವಿಗ್ರಹವೊಂದು ೧೯೦೨ರಲ್ಲಿ ಸ್ಧಾಪಿತವಾದಾಗ ನೆರೆ ದೇಶಗಳೊಡನೆ ಯುದ್ಧ ನಿಂತಿತೆನ್ನಬಹುದು. ದೇಶದ ರಾಜಕೀಯ ಪರಿಸ್ಥಿತಿ ಮಾತ್ರ ಮುಂದೂ ಸ್ಥಿಮಿತಕ್ಕೆ ಬರಲಿಲ್ಲ. ಸೈನ್ಯದ ಸಹಾಯದಿಂದ ನಿರಂಕುಶಪ್ರಭುತ್ವ ಮುಂದುವರಿಯಿತು. ಮೊದಲ ಮಹಾಯುದ್ಧದಲ್ಲಿ ಅರ್ಜೆಂಟೈನ ತಟಸ್ಥವಾಗುಳಿದರೂ ಎರಡನೆಯ ಮಹಾಯುದ್ಧದ ಕೊನೆಯ ಕಾಲದಲ್ಲಿ ಮಿತ್ರ ರಾಷ್ಟ್ರಗಳ ಪಕ್ಷವಹಿಸಿ ಹೋರಾಟಕ್ಕಿಳಿಯಬೇಕಾಯಿತು. ೧೯೪೫ರಲ್ಲಿ ಅದಕ್ಕೆ ವಿಶ್ವಸಂಸ್ಥೆಯ ಸದಸ್ಯತ್ವ ದೊರಕಿತು. ಸೈನ್ಯದ ಬೆಂಬಲ ಪಡೆದ ನಿರಂಕುಶಾಧಿಕಾರವಂತೂ ಇಂದಿಗೂ ಮುಂದುವರಿದಿದೆ.


ಸರ್ಕಾರ ಪದ್ಧತಿ

ಈ ದೇಶವನ್ನು ೨೨ ರಾಜಕೀಯ ವಿಭಾಗಗಳನ್ನಾಗಿ ವಿಂಗಡಿಸಿದ್ದಾರೆ. ಇಲ್ಲಿಯ ರಾಜ್ಯವ್ಯವಸ್ಥೆಯನ್ನು ಸಂಯುಕ್ತ ರಾಜ್ಯವ್ಯವಸ್ಥೆಯೆಂದು ಹೇಳಬಹುದು. ಪ್ರಾಂತ್ಯಗಳ ರಾಜ್ಯವ್ಯವಸ್ಥೆಯೇ ಬೇರೆ. ಇದೂ ಕೂಡ ಸಂವಿಧಾನದಲ್ಲಿ ಉಲ್ಲೇಖಿಸಲ್ಪಟ್ಟಿದೆ. ಆರ್ಜೆಂಟೀನದ ರಾಷ್ಟ್ರೀಯ ಸರ್ಕಾರದ ಕಾರ್ಯಾಂಗದ ಶ್ರೇಷ್ಠ ಅಧಿಕಾರಿಯಾದ ಅಧ್ಯಕ್ಷ ಪರೋಕ್ಷವಾಗಿ ಚುನಾಯಿಸಲ್ಪಡುತ್ತಾನೆ. ಉಪಾಧ್ಯಕ್ಷರೂ ಇದ್ದಾರೆ. ಇವರ ಅಧಿಕಾರಾವಧಿ ಆರು ವರ್ಷ. ಶಾಸನಾಂಗದಲ್ಲಿ ಸೆನೆಟ್ ಮತು ಪ್ರತಿನಿಧಿ ಸಭೆಯೆಂಬ ಎರಡು ಸಭೆಗಳಿವೆ. ಸೆನೆಟ್ ಸದಸ್ಯರನ್ನು ಪರೋಕ್ಷವಾಗಿಯೂ ಪ್ರತಿನಿಧಿ ಸಭೆಯ ಸದಸ್ಯರನ್ನು ನೇರವಾಗಿಯೂ ಆರಿಸಲಾಗುತ್ತದೆ. ಶಾಸಕರ ಅಧಿಕಾರಾವಧಿ ಆರು ವರ್ಷ. ಕಡೆಯದಾಗಿ, ಆರ್ಜೆಂಟೀನದಲ್ಲಿ ಸುಪ್ರೀಮ್ಕೋರ್ಟಿನ ಹಿರಿಯತನದಲ್ಲಿ ನ್ಯಾಯಾಂಗ ಇಲಾಖೆ ಕಾರ್ಯ ನಿರ್ವಹಿಸುವುದು.


ಆರ್ಜೆಂಟೀನ ಅಮೆರಿಕ ಸಂಸ್ಥಾನದ ಸರ್ಕಾರ ವ್ಯವಸ್ಥೆಯನ್ನು ರೂಪಿಸಿಕೊಂಡರೂ ಈ ರಾಷ್ಟ್ರದಲ್ಲಿ ಭದ್ರ ಸರ್ಕಾರಗಳೇರ್ಪಡಲು ಆತಂಕಗಳುಂಟಾಗಿವೆ. ಆಗಾಗ್ಗೆ ಸೈನಿಕ ಕ್ರಾಂತಿಗಳು ಸಂಭವಿಸುತ್ತಿವೆ. ಅಧಿಕಾರದ ಹೋರಾಟ ತೀವ್ರವಾಗಿ ನಡೆದಿದೆ. ೧೯೪೨ರಲ್ಲಿ ಸೈನಿಕ ಕ್ರಾಂತಿ ಸಂಭವಿಸಿತು. ಇದರ ಫಲವಾಗಿ ರಾಜಕೀಯ ಪಕ್ಷಗಳು ಕಾನೂನುಬಾಹಿರ ಸಂಸ್ಥೆಗಳಾದವು. ಚುನಾವಣೆಗಳು ರದ್ದಾದವು. ಚುನಾಯಿತ ಸಭೆಗಳಿಲ್ಲದಾದವು. ಈ ಸಂದರ್ಭದಲ್ಲಿ ಮಹತ್ತ್ವಾಕಾಂಕ್ಷೆಯ ವ್ಯಕ್ತಿ ಪೆರೋನ್ ಅಧಿಕಾರಕ್ಕೆ ಬಂದ. ೧೯೪೬ರಲ್ಲಿ ಅಧ್ಯಕ್ಷನಾಗಿ ಚುನಾಯಿಸಲ್ಪಟ್ಟ. ತನ್ನ ಅಧಿಕಾರವನ್ನು ಕಾಯ್ದುಕೊಳ್ಳಲು ಹೊಸ ಸಂವಿಧಾನವನ್ನು ರಚಿಸಿದ. ಈ ಪ್ರಕಾರವಾಗಿ ಅಧ್ಯಕ್ಷ ಎಷ್ಟು ಬಾರಿಯಾದರೂ ಚುನಾವಣೆಗೆ ನಿಲ್ಲಲು ಅವಕಾಶವಾಯಿತು. ವಾಸ್ತವವಾಗಿ ಪೆರೋನ್ ಸರ್ವಾಧಿಕಾರಿಯಾದ. ಇವನ ಹೆಂಡತಿ ಅನಧಿಕೃತ ರಾಜತಾಂತ್ರಿಕ ವ್ಯಕ್ತಿಯಾಗಿ ಪ್ರಸಿದ್ಧಿಗಳಿಸಿದಳು.


ಆರ್ಜೆಂಟೀನ ತನ್ನದೇ ಆದ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿದೆ. ಇಲ್ಲಿಯ ಬಹುಸಂಖ್ಯಾತ ಜನ ರೋಮನ್ ಕೆಥೊಲಿಕ್ ಪಂಥಕ್ಕೆ ಸೇರಿದವರು. ಸಂವಿಧಾನ ಸರ್ವರಿಗೂ ಧಾರ್ಮಿಕ ಸ್ವಾತಂತ್ರ್ಯ ಕೊಟ್ಟಿದೆ. ನೆರೆಹೊರೆಯ ದೊಡ್ಡ ರಾಷ್ಟ್ರಗಳೊಡನೆ ಹೆಚ್ಚಿನ ಸೌಹಾರ್ದವನ್ನು ಸಾಧಿಸಿದಲ್ಲಿ ದೇಶ ಆರ್ಥಿಕವಾಗಿ ಮುಂದುವರಿಯಲು ಸಾಕಷ್ಟು ಅವಕಾಶಗಳಿವೆ.