ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆರ್ಥಿಕ ಸಂಪನ್ಮೂಲಗಳು
ದೇಶದ ಅಥವಾ ವ್ಯಕ್ತಿಯ ಆರ್ಥಿಕಾಭಿವೃದ್ಧಿಗೆ ಕಾರಣವಾದ ಶ್ರಮ, ಬಂಡವಾಳ ಮತ್ತು ಪ್ರಕೃತಿಸಂಪತ್ತುಗಳು (ಇಕನಾಮಿಕ್ ರಿಸೋರ್ಸಸ್).
ಆರ್ಥಿಕ ಚಟುವಟಿಕೆಗಳಲ್ಲಿ ಭಾಗಿಗಳಾಗಿರುವ ಎಲ್ಲ ವ್ಯಕ್ತಿಗಳ ಶಕ್ತಿ ಮತ್ತು ಕೌಶಲಗಳೇ ಶ್ರಮ. ಒಂದು ದೇಶದಲ್ಲಿ ವಾಸಿಸುವ ಜನಸಂಖ್ಯೆಯ ಮೇಲೆ ಅಲ್ಲಿನ ಶ್ರಮಸಂಪತ್ತು ನಿರ್ಧಾರವಾಗುವುದಿಲ್ಲ. ಅಲ್ಲಿನ ಕೆಲಸ ಮಾಡಬಲ್ಲ ಜನಸಂಖ್ಯೆ, ಅವರ ವಿದ್ಯಾಭ್ಯಾಸದ ಮಟ್ಟ, ವಿವಿಧಕಾರ್ಯಗಳಲ್ಲಿ ಇರುವ ಅರ್ಹತೆ ಮತ್ತು ಪ್ರಾವೀಣ್ಯ, ಭೌಗೋಳಿಕ ಅನುಕೂಲತೆ-ಈ ವಿಷಯಗಳಿಂದ ಅದು ನಿರ್ಧಾರವಾಗುತ್ತದೆ.
ಬಂಡವಾಳ ಮುಂದಿನ ಉತ್ಪಾದನಾಹಂತಕ್ಕೆ ಸಹಾಯವಾಗುವ ಸಾಮಗ್ರಿಗಳು, ಯಂತ್ರಗಳು, ಕಟ್ಟಡಗಳು ಇವುಗಳಿಂದ ಕೂಡಿರುತ್ತದೆ. ಸಂಪನ್ಮೂಲಗಳಲ್ಲಿ ಬಂಡವಾಳಕ್ಕೆ ಎರಡನೆಯ ಸ್ಥಾನ. ಬಂಡವಾಳದ ಕ್ರೋಡೀಕರಣೆ ಎಲ್ಲ ರಾಷ್ಟ್ರಗಳಲ್ಲೂ ಅತಿ ಮುಖ್ಯ ಸ್ಥಾನ ಪಡೆದುಕೊಂಡಿದೆ. ಅದರ ಶೇಖರಣೆ ಆರ್ಥಿಕಪ್ರಗತಿಯ ಮುಖ್ಯ ಚಿಹ್ನೆ. ಬಂಡವಾಳಶಾಹಿ ರಾಷ್ಟ್ರವಾಗಲಿ, ಸಮಾಜವಾದಿ ರಾಷ್ಟ್ರವಾಗಲಿ ಸಾಕಷ್ಟು ಬಂಡವಾಳವಿಲ್ಲದೆ ಯಾವ ಕೆಲಸವನ್ನೂ ಮಾಡಲಾಗುವುದಿಲ್ಲ.
ಪ್ರಕೃತಿಸಂಪತ್ತು ಪ್ರಕೃತಿದತ್ತವಾದ ಕೊಡುಗೆ. ಭೂಮಿ, ಖನಿಜ, ಸಸ್ಯ, ನೀರು, ವಾಯುಗುಣ ಇತ್ಯಾದಿಗಳನ್ನು ಇದು ಒಳಗೊಂಡಿದೆ.
ಈ ಮೂರು ಸಂಪನ್ಮೂಲಗಳ ಲಕ್ಷಣವೆಂದರೆ ಅವು ಪರಸ್ಪರ ಪ್ರತಿನಿಧಿಸಲು ಸಾಧ್ಯವಾದುವು. ಶ್ರಮವನ್ನು ಸಾಹಸ ಅಥವಾ ವ್ಯವಸ್ಥಾಪಕತ್ವಕ್ಕೆ ಸಂಬಂಧಿಸಿದ್ದೆಂದೂ ಕುಶಲ ಮತ್ತು ಅಕುಶಲ ದುಡಿಮೆ ಎಂದೂ ಎರಡು ಭಾಗಗಳಾಗಿ ವಿಂಗಡಿಸಬಹುದು. ಅತ್ಯಂತ ಹೆಚ್ಚು ಉತ್ಪಾದನೆಯಾಗುವಂಥ ದೇಶದ ಶ್ರಮಶಕ್ತಿಯ ಉಪಯೋಗ ಪಡೆದುಕೊಳ್ಳಲು ಶ್ರಮವಿಭಜನೆ ಮತ್ತು ಶ್ರಮ ವೈಶಿಷ್ಟ್ಯಗಳನ್ನು ಸಂಯೋಜನೆ ಗೊಳಿಸಬೇಕಾಗುತ್ತದೆ.
ಬಂಡವಾಳ ಸಂಪತ್ತು ವೃತ್ತಿಕೌಶಲ, ಅಲ್ಲಿನ ಜನರ ಉತ್ಪಾದನಾ ಶಕ್ತಿ, ಹಣ, ನಿವೇಶನದ ಸಾಮರ್ಥ್ಯ-ಇವುಗಳನ್ನು ಹೊಂದಿಕೊಂಡು ಹೋಗುತ್ತದೆ. ಅತ್ಯಂತ ಸಮರ್ಪಕ ರೀತಿಯಲ್ಲಿ ಬಂಡವಾಳ ಸಂಪತ್ತನ್ನು ವೃದ್ಧಿಪಡಿಸುವುದು ಒಂದು ಸಮಸ್ಯೆಯೇ. ಆಧುನಿಕ ಯುಗದಲ್ಲಿ ಉತ್ಪಾದನೆ ಸಂಕೀರ್ಣ ವಿಧಾನದ್ದಾಗಿರುವುದರಿಂದ ತಪ್ಪು ಲೆಕ್ಕಾಚಾರ ಬಂಡವಾಳ ಶೇಖರಣೆಗೆ ಅಡ್ಡಿಯನ್ನು ತರಬಹುದು.
ಈ ಸಂಪನ್ಮೂಲಗಳನ್ನು ಸಮರ್ಪಕ ರೀತಿಯಲ್ಲಿ ಸಂಯೋಜಿಸುವ ಕೆಲಸ ಉದ್ದಿಮೆ ಸಾಹಸಿಯದಾಗುತ್ತದೆ. ಆತನ ತೀರ್ಮಾನ ಸಾಧಾರಣವಾಗಿ ಒಂದು ಅಂಶದ ಉತ್ಪಾದನೆಗೆ ಅಗತ್ಯವಿರುವ ಸಂಪನ್ಮೂಲದ ಅಂಶದಮೇಲೆ ನಿರ್ಧಾರವಾಗುತ್ತದೆ. ಉತ್ಪಾದನಾ ವೆಚ್ಚ ಖಚಿತವಾಗಿ ಸಂಪನ್ಮೂಲದ ಇರುವಿಕೆಯ ಮೇಲೆ ನಿರ್ಧಾರವಾಗುತ್ತದೆ. ಅತ್ಯಂತ ಹೆಚ್ಚಿನ ಬಂಡವಾಳ ಶೇಖರಣೆ ಆ ಪ್ರದೇಶದಲ್ಲಿ ಪ್ರಕೃತಿಸಂಪತ್ತು ಮತ್ತು ಶ್ರಮಸಂಪತ್ತಿಲ್ಲದೆ ಅಸಾಧ್ಯ. ಉದಾಹರಣೆಗೆ, ಸಂಪನ್ಮೂಲಗಳಿಂದ ಶ್ರೀಮಂತವಿರುವ ರಾಷ್ಟ್ರಗಳು ಮಾತ್ರ ಇಂದಿನ ಅತ್ಯಂತ ಮುಂದುವರಿದ ರಾಷ್ಟ್ರಗಳಾಗಿವೆ. ಹಿಂದುಳಿದಿರುವ ರಾಷ್ಟ್ರಗಳಲ್ಲಿನ ಮುಖ್ಯ ಕೊರತೆಯೆಂದರೆ ಸಂಪನ್ಮೂಲಗಳು. ಔದ್ಯೋಗೀಕರಣ ಸಂಪನ್ಮೂಲಗಳ ಉಪಯುಕ್ತ ಸಂಯೋಜನೆಯ ಫಲ.
ಆವಿಷ್ಕಾರ ಮತ್ತು ಉದ್ಯಮಪ್ರಗತಿ ಸಂಪನ್ಮೂಲಗಳ ಉಪಯೋಗದ ವೇಗವರ್ಧಕಗಳಾಗ ಬಹುದು. ಉದಾಹರಣೆಗೆ ಯಂತ್ರಯುಗ ಭೂಮಿಯ ಉತ್ಪಾದನೆಯಲ್ಲಿ ಕ್ರಾಂತಿಯನ್ನೇ ಉಂಟುಮಾಡಿದೆ. ಅದು ಭೂಮಿಯ ಮೇಲೆ ಮಾನವಶ್ರಮದ ವೆಚ್ಚವನ್ನು ಕಡಿಮೆಮಾಡಿದೆ. ಸಂಪನ್ಮೂಲಗಳ ಮೇಲಿನ ಹಕ್ಕು ಸಮಾಜಸ್ಥಿತಿಯ ಮೇಲೆ ನಿರ್ಧಾರವಾಗುತ್ತದೆ. ಬಂಡವಾಳಶಾಹಿ ರಾಷ್ಟ್ರದಲ್ಲಿ ಇದರ ಮೇಲಿನ ಹಕ್ಕು ಹೆಚ್ಚಾಗಿ ವ್ಯಕ್ತಿಗಳದ್ದಾಗಿರುತ್ತದೆ. ಅವರು ಸಂಪನ್ಮೂಲಗಳ ಉಪಯೋಗವನ್ನು ಅವುಗಳ ಸಂಯೋಜನೆ, ಲಾಭನಷ್ಟದ ಲೆಕ್ಕಾಚಾರದಿಂದ ನಿರ್ಧರಿಸುತ್ತಾರೆ. ಇಂಥ ಕಡೆ ಪರಸ್ಪರ ಪೈಪೋಟಿ ಅನುಭೋಗಿಗಳ ಹಾಗೂ ಉತ್ಪಾದಕರ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ. ಸಂಪನ್ಮೂಲಗಳ ಹಂಚಿಕೆಯ ವಿಷಯದಲ್ಲಿ ಅನುಭೋಗಿಗೆ ನಿರ್ಧಾರ ಸ್ವಾತಂತ್ರ್ಯವಿರುತ್ತದೆ.
ಕಮ್ಯೂನಿಸ್ಟ್ ರಾಷ್ಟ್ರಗಳಲ್ಲಿ ಸಂಪನ್ಮೂಲಗಳ ಮೇಲಿನ ಅಧಿಕಾರ ಸರ್ಕಾರದ ಮೂಲಕ ಇಡೀ ಜನತೆಯ ಕೈಯಲ್ಲಿರುತ್ತದೆ. ಸಂಪನ್ಮೂಲಗಳ ಹಂಚಿಕೆಯ ವಿಷಯದಲ್ಲಿ ಸರ್ಕಾರದ ತೀರ್ಮಾನ ಕೊನೆಯದಾಗಿರುತ್ತದೆ. ಮಿಶ್ರ ಆರ್ಥಿಕ ವ್ಯವಸ್ಥೆಯ (ಮಿಕ್ಸೆಡ್ ಎಕಾನಮಿ) ರಾಷ್ಟ್ರಗಳಲ್ಲಿ ಸಂಪನ್ಮೂಲಗಳ ಮೇಲಿನ ಅಧಿಕಾರ ಸರ್ಕಾರ ಹಾಗೂ ವ್ಯಕ್ತಿ ಇಬ್ಬರ ಕೈಯಲ್ಲೂ ಇರುತ್ತದೆ. ಅತ್ಯಂತ ಮುಖ್ಯವಾದ ಅಂಶವೆಂದರೆ, ಸಂಪನ್ಮೂಲಗಳ ಸಮರ್ಪಕ ಸಂಯೋಜನೆಯು ಆರ್ಥಿಕಪ್ರಗತಿಯ ಮುಖ್ಯ ರಹಸ್ಯ.