ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಲೋಚನೆ

ವಿಕಿಸೋರ್ಸ್ದಿಂದ

ಮೂರ್ತ ಮತ್ತು ಅಮೂರ್ತ ವಸ್ತು ವಿಷಯಗಳಿಂದ ಪರಿಪ್ಲುತವಾದ ಜಗತ್ತಿನ ಪರಿಸರವನ್ನು ಅರ್ಥಮಾಡಿಕೊಳ್ಳುವಲ್ಲಿ, ಹೊಂದಿಕೊಂಡು ಬಳಸಿಕೊಳ್ಳುವಲ್ಲಿ, ಕಾರ್ಯಕಾರಣ ಸಂಬಂಧವನ್ನು ಕಲ್ಪಿಸುವಲ್ಲಿ ಮನಸ್ಸು ತೋರುವ ಕ್ರಿಯೆ ಪ್ರಕ್ರಿಯೆಗಳಿಗೆ ಈ ಹೆಸರಿದೆ (ಥಿಂಕಿಂಗ್). ಇದು ಮನುಷ್ಯನನ್ನು ಮೃಗದಿಂದ ಪ್ರತ್ಯೇಕಿಸುವ ವಿಶಿಷ್ಟಗುಣ ಎಂಬುದು ಅರಿಸ್ಟಾಟಲನ ಕಾಲದಿಂದಲೂ ತಿಳಿದಿರುವ ವಿಷಯವೇ ಆಗಿದೆ. ಯಾವುದು ಆಲೋಚಿಸಬಲ್ಲದೋ ಅದೇ ಮನಸ್ಸೆಂದು ಡೇಕಾರ್ಟ್ ಮುಂತಾದ ದಾರ್ಶನಿಕರು ಹೇಳಿದ್ದಾರೆ. ಆ ದೃಷ್ಟಿಯಿಂದ ಅದು ಜಡದಿಂದ ಭಿನ್ನವಾದುದೆಂದೂ ಭಾವಿಸಲಾಗಿದೆ. ಆದರೆ ಆಧುನಿಕ ಸಂಶೋಧನೆಗಳ ಪ್ರಕಾರ ಆಲೋಚನಾಪರತೆ ಮನುಷ್ಯನೊಬ್ಬನಿಗೇ ಮೀಸಲಾದ ವಿಶಿಷ್ಟಗುಣ ವೆಂದು ಹೇಳಲಾಗುವುದಿಲ್ಲ. ಜೀವವಿಕಾಸದ ನಿಚ್ಚಣಿಗೆಯಲ್ಲಿ ಮನುಷ್ಯನಿಂದ ಕೊನೆಗೆ ಇಲಿಯ ಪರ್ಯಂತ ಆಲೋಚನಾ ವ್ಯಾಪಾರ ಪ್ರಾಣಿಗಳಲ್ಲಿ ಜರುಗುತ್ತಿದೆಯೆಂಬುದಕ್ಕೆ ನಿದರ್ಶನಗಳಿವೆ. ಆದರೆ ಮನುಷ್ಯ ಆಲೋಚನಾ ವ್ಯಾಪಾರವನ್ನು ತುಂಬ ಅಭಿವೃದ್ಧಿಪಡಿಸಿ ಕೊಂಡಿದ್ದಾನೆ; ಈ ವ್ಯಾಪಾರದ ಪ್ರಕ್ರಿಯೆಗಳು ಸಂಕೀರ್ಣವೂ ಜಟಿಲವೂ ಆಗುವಂತೆ ಬೆಳೆದಿವೆ. ಅಲ್ಲದೆ ಆವರಣಕ್ಕೆ ಹೊಂದಿಕೊಂಡು ಬಾಳುವ ಪ್ರಯತ್ನದಲ್ಲಿ ಪ್ರಾಣಿಗಿಂತಲೂ ಮನುಷ್ಯ ಹೆಚ್ಚಾಗಿ ಆಲೋಚನಾಪ್ರಕ್ರಿಯೆಯನ್ನು ಬಳಸುತ್ತಲಿದ್ದಾನೆ. ಈ ದೃಷ್ಟಿಯಿಂದ ವಿಕಾಸಾನುಕ್ರಮದಲ್ಲಿ ಮನುಷ್ಯನಿಗೂ ಆತನ ಅತ್ಯಂತ ಸಮೀಪ ಬಂಧುವಿಗೂ ನಡುವೆ ತುಂಬ ಅಂತರವಿದೆ ಎಂಬುದು ಸ್ಪಷ್ಟ.

ಮನುಷ್ಯ ಬೆಳೆದಂತೆಲ್ಲ ಸಂಕೇತಗಳ ಮೂಲಕ ಈ ಪ್ರಪಂಚದೊಂದಿಗೆ ವ್ಯವಹರಿಸಲು ಕಲಿಯುತ್ತಾನೆ. ಲೋಕದೊಡನೆ ಯಾವಾಗಲೂ ನೇರವಾಗಿಯೇ ವ್ಯವಹರಿಸುವುದಕ್ಕೆ ಬದಲು ಪ್ರತೀಕಗಳು, ಮಾತುಗಳು, ಭಾವನೆಗಳು ಮತ್ತು ಭಾಷೆಗಳನ್ನು ಬಳಸುತ್ತಾನೆ. ಈ ಪ್ರಕಾರವಾಗಿ ಆತ ಬಹಿರಂಗವಾಗಿ ಕಾರ್ಯದಲ್ಲಿ ವ್ಯವಹರಿಸುವ ಬದಲು ಆಲೋಚಿಸಲು ಮೊದಲು ಮಾಡುತ್ತಾನೆ. ಹೊಂದಾವಣೆಯ ದೃಷ್ಟಿಯಲ್ಲಿ ಸಂಕೇತಗಳನ್ನು ಉಪಯೋಗಿಸು ವುದು ದಕ್ಷತೆಗೆ ಕಾರಣವಾಗುವುದು. ದೂರದಲ್ಲಿದ್ದುಕೊಂಡೇ ವಸ್ತುವಿನ ವಿಷಯದಲ್ಲಿ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುವುದು ಸಾಧ್ಯವಾಗುವುದು. ದೂರದಿಂದ ವಿಷಯವನ್ನು ಗ್ರಹಿಸಲು ಸಾಮರ್ಥ್ಯವುಳ್ಳ ಕಣ್ಣು ಕಿವಿ ಇತ್ಯಾದಿ ಇಂದ್ರಿಯಗಳನ್ನು ಪಡೆದುಕೊಂಡಿರುವ ಜೀವಿಗಳು ಸಮೀಪ ವಸ್ತುವರ್ತಿಗಳಾದ ಸ್ಪರ್ಶ ರಸನೆಗಳಂಥ ಇಂದ್ರಿಯಗಳುಳ್ಳ ಜೀವಿಗಳಿಗಿಂತ ಮೇಲುಗೈಯಾಗಿರುವುದೇನೂ ಆಶ್ಚರ್ಯವಲ್ಲ. ವಿಷಯ ಮೈ ಸೋಕುವುದಕ್ಕೆ ಬಹಳ ಮುಂಚೆಯೇ ದೂರದಿಂದಲೇ ಅದಕ್ಕೆ ತಕ್ಕ ಪ್ರತಿಕ್ರಿಯೆ ತೋರಿಸುವುದಕ್ಕೆ ಸಾಧ್ಯವಾಗುವುದು. ವಿಕಾಸಕ್ರಮದಲ್ಲಿ ಮೇಲಿನ ಹಂತದ ಜೀವಿಗಳಲ್ಲಿ ಈ ಸೌಕರ್ಯ ಕಂಡುಬರುತ್ತದೆ. ಕೆಳಗಿನ ಹಂತದ ಜಂತುಗಳ ನೆನಪಿನ ಅವಧಿಯೂ ತುಂಬ ಚಿಕ್ಕದು. ಮುಂದೇನಾಗ ಬಹುದೆಂಬ ವಿಚಾರದಲ್ಲೂ ಅವು ತಮ್ಮ ಊಹೆಯನ್ನು ಬಹುದೂರ ಓಡಿಸಲಾರವು. ಆದ್ದರಿಂದ ಅವುಗಳ ಆಸಕ್ತಿಯೆಲ್ಲ ವರ್ತಮಾನದಲ್ಲೇ ಕೇಂದ್ರೀಕೃತವಾಗಿದೆ. ಆದರೆ ಮನುಷ್ಯನಿಗೆ ಮಾತ್ರ ಬಹು ದೀರ್ಘಕಾಲದ ಅನೇಕ ವರ್ಷಗಳ ಹಿಂದಿನ ನೆನಪಿರುವುದಲ್ಲದೆ, ಹಿಂದಿನ ಅನುಭವಗಳನ್ನು ಕೂಡಿಟ್ಟುಕೊಂಡು ಅದರಿಂದ ಲಾಭ ಪಡೆಯುವ ವಿಧಾನಗಳೂ ಅವನ ವಶವಾಗಿವೆ. ಈ ವಿಧಾನದಿಂದ ಆತ ಆಗತಾನೆ ಕಳೆದುಹೋದ ಅನುಭವಗಳಿಂದ ಪಾಠ ಕಲಿಯುತ್ತಾನಲ್ಲದೆ ಅನೇಕ ತಲೆಮಾರುಗಳ ಅನುಭವಗಳೂ ಆತನ ಉಪಯೋಗಕ್ಕೆ ಒದಗುತ್ತವೆ. ಇದೇ ರೀತಿಯಲ್ಲಿ ಆತ ಮುಂದೊದಗುವ ವಸ್ತು ಮತ್ತು ಸಂದರ್ಭಗಳ ವಿಷಯದಲ್ಲೂ ಪರಿಣಾಮಕಾರಿಯಾಗಿ ವರ್ತಿಸಬಲ್ಲ. ಪ್ರಾಣಿಗಳು ಕೂಡ ಮುಂದೊದಗುವು ದಕ್ಕೆ ತಕ್ಕ ಹೊಂದಾಣಿಕೆಯನ್ನು ಈಗಿನಿಂದಲೇ ಮಾಡಿಕೊಳ್ಳುತ್ತವೆ. ಆದರೆ ಮನುಷ್ಯ ತನ್ನ ಆಲೋಚನಾಶಕ್ತಿಯ ಪರಿಣಾಮವಾಗಿ ಮುಂದೆ ದೂರದಲ್ಲೊದಗಬಹುದಾದುದನ್ನು ಈಗಲೇ ತಡೆಗಟ್ಟಬಲ್ಲ. ದೂರ ಭವಿಷ್ಯಕ್ಕೆ ಸಂಬಂಧಪಟ್ಟ ಯೋಚನೆಗಳು, ಹಂಚಿಕೆಗಳು-ಮುಂತಾದವು ಮನುಷ್ಯನ ಆಲೋಚನೆಯ ಶ್ರೇಷ್ಠತೆಯನ್ನು ಸೂಚಿಸುತ್ತವೆ. ಸಂಕೀರ್ಣವೂ ಪರಿವರ್ತನ ಶೀಲವೂ ಆದ ಪರಿಸರಕ್ಕೆ ತಕ್ಕಂತೆ ತಾನು ಹೊಂದಿಕೊಳ್ಳುವ ಸಾಮರ್ಥ್ಯವನ್ನು ಆತ ಪಡೆದಿದ್ದಾನೆ.

ಆಲೋಚನೆ ಎಂಬ ಶಬ್ದದ ಅರ್ಥ ನಿಷ್ಕೃಷ್ಟವಲ್ಲ. ನೆನಪು ಮಾಡಿಕೊಳ್ಳುವುದು, ಹಗಲುಗನಸು ಕಾಣುವುದು ಇತ್ಯಾದಿಗಳಿಂದ ಹಿಡಿದು ಕಲಾವಿದರ ವಿಜ್ಞಾನಿಗಳ ಮತ್ತು ನಿರ್ಮಾಪಕರ ಆಲೋಚನೆಗಳವರೆಗೂ ಇದರ ಅರ್ಥ ಹರಡಿದೆ. ಆಲೋಚನೆ ಎಂದರೆ ಭಾವಪರಂಪರೆ ಅಥವಾ ಭಾವಗತಿ. ಇದಕ್ಕಿಂತಲೂ ಪರಿಮಿತವೂ ನಿರ್ದಿಷ್ಟವೂ ಆದ ಅರ್ಥದಲ್ಲಿ ಹೇಳುವುದಾದರೆ ಒಂದು ಸಮಸ್ಯೆ ಎಬ್ಬಿಸಿದ ಭಾವಗತಿ ಎಂದು ಜೇಮಸ ಡ್ರೆವರ್ ಸೂಚಿಸಿದ್ದಾನೆ. ಈ ಅರ್ಥದಲ್ಲಿ ಸಮಸ್ಯೆಯೊಂದು ಉದ್ಭವಿಸಿದಾಗ ಆಲೋಚನೆ ಏಳುತ್ತದೆ: ಅದರ ಪರಿಹಾರದೊಂದಿಗೆ ಇದೂ ಕೊನೆಗೊಳ್ಳುತ್ತದೆ. ಅನಿರ್ದಿಷ್ಟ ಸಾಂಗತ್ಯ ಮತ್ತು ಅನಿಯಂತ್ರಿತ ಪ್ರತಿಭಾವಿಲಸನಗಳಿಗಿಂತ ಇದು ಬೇರೆ. ಸಮಸ್ಯೆಯೂ ಈ ಭಾವಗಳ ಸ್ವರೂಪ, ಸಂಯೋಗಿತೆಗಳನ್ನು ಮತ್ತು ಇತರ ಸಾಂಕೇತಿಕ ಪ್ರಕ್ರಿಯೆಗಳನ್ನು ತನ್ನ ಹತೋಟಿಯಲ್ಲಿಟ್ಟುಕೊಳ್ಳುತ್ತದೆ. ಈ ಪ್ರಕಾರವಾಗಿ ಸಂಕೇತಗಳ ಮೂಲಕ ಸಮಸ್ಯಾ ಪರಿಹಾರವೇ ಆಲೋಚನೆಯ ಮುಖ್ಯ ಗುಣವೆಂದು ಪರಿಗಣಿತವಾಗಿದೆ. ಆಲೋಚನೆ ಎಂಬುದು ಒಬ್ಬ ವ್ಯಕ್ತಿಯಲ್ಲಿ ಅಡಕವಾಗಿರುವ ಕ್ರಿಯೆ; ರೂಢಿಯಲ್ಲಿರುವ ಕ್ರಿಯೆಗಳಿಂದ ಅಥವಾ ವಿಧಿ ನಿಷೇಧಗಳಿಂದ ಅಥವಾ ಒಪ್ಪುತಪ್ಪುಗಳ ವಿಧಾನಗಳಿಂದ ಪರಿಹರಿಸಲಾಗದ ಸಮಸ್ಯೆಯಿಂದ ಆಲೋಚನೆ ಮೊದಲಾಗುತ್ತದೆ. ಆ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಕೆಲವು ಅನುಮಿತಿಗಳೂ ಪೂರ್ವಸಿದ್ಧಾಂತಗಳೂ ಆಲೋಚನೆಯಿಂದ ಫಲಿಸುತ್ತವೆ. ಹಿಂದಿನ ಅನುಭವಗಳು ಇದಕ್ಕೆ ಸಹಾಯವಾಗುತ್ತವೆ. ಇವು ಹೇರಳವಾದಷ್ಟೂ ಆತನ ಅನುಮಿತಿಗಳೂ ಪೂರ್ವ ಸಿದ್ಧಾಂತಗಳೂ ಹೆಚ್ಚು ಕುಶಲವಾಗುತ್ತವೆ. ತಕ್ಕಷ್ಟು ಅನುಭವಗಳು ತನಗೆ ದೊರೆತಿರುವ ಕ್ಷೇತ್ರದಲ್ಲಿ ಒಬ್ಬ ವ್ಯಕ್ತಿಯ ಆಲೋಚನೆ ಸುಸೂತ್ರವಾಗಿ ಸಾಗುತ್ತದೆ. ಹೀಗಾಗಲು ಆ ಸಂದರ್ಭಕ್ಕೆ ಅನುಗುಣವಾದ ಯಥಾರ್ಥಜ್ಞಾನ ಆತನಲ್ಲಿ ಹೇರಳವಾಗಿರಬೇಕಾದ್ದು ಅಗತ್ಯ.

ಈ ಅನುಮಿತಿಗಳನ್ನು ಪರಿಗ್ರಹಿಸುವುದಕ್ಕೂ ಪರಿತ್ಯಜಿಸುವುದಕ್ಕೂ ಮುಂಚೆ ಅವುಗಳನ್ನು ಪರಾಮರ್ಶಿಸಿ ಬೆಲೆಕಟ್ಟಬೇಕಾಗುತ್ತದೆ. ಅವುಗಳನ್ನು ಪ್ರತ್ಯಕ್ಷವಾಗಿ ಪರೀಕ್ಷಿಸುವುದಕ್ಕೆ ಮುನ್ನವೇ ಕೆಲವನ್ನು ಕೈಬಿಡಲಾಗುತ್ತದೆ. ಎಂದರೆ, ತತ್ಸಂಬಂಧವಾದ ತಿಳಿವಳಿಕೆಯ ಬೆಳಕಿನಲ್ಲಿ ಅವನ್ನು ಪರೀಕ್ಷಿಸಿದಾಗ ಅವು ಸಮಂಜಸವಾಗಿಲ್ಲದಿರುವುದರಿಂದ ಅದನ್ನು ತ್ಯಜಿಸಲಾಗುತ್ತದೆ. ಗಣಿತ ಕ್ಷೇತ್ರದಲ್ಲಿ ಕಲ್ಪನಾ ರಚನೆಯ ಪ್ರಕ್ರಿಯೆಗಳನ್ನು ವಿಶ್ಲೇಷಿಸುತ್ತ ಹಡಾಮಾರ್ಡ್ ಎಂಬಾತ ಒಬ್ಬ ಒಳ್ಳೆ ಗಣಿತಜ್ಞನಿಗೂ ಮತ್ತೊಬ್ಬ ಸಾಧಾರಣ ಗಣಿತಜ್ಞನಿಗೂ ಇರುವ ಅಂತರವನ್ನು ಕುರಿತು ಹೀಗೆ ಹೇಳುತ್ತಾನೆ: ಅದು ಇರುವುದು ಅವರು ಮಾಡುವ ತಪ್ಪುಗಳಲ್ಲಿ ಅಲ್ಲ; ಸಾಧಾರಣ ಗಣಿತಜ್ಞ ತನ್ನ ತಪ್ಪನ್ನು ಪರೀಕ್ಷೆಗೆ ಗುರಿಮಾಡಿ ಅನಂತರ ಅದು ತಪ್ಪೆಂದು ತಿಳಿದುಕೊಳ್ಳುತ್ತಾನೆ; ಆದರೆ ಕುಶಲ ಗಣಿತಜ್ಞ ತಪ್ಪು ಮಾಡುವುದಕ್ಕೆ ಮುಂಚೆಯೇ ಅದನ್ನು ತಿದ್ದಿಕೊಳ್ಳುತ್ತಾನೆ. ಹಾಗಿದ್ದರೂ ಅನೇಕ ಪುರ್ವಸಿದ್ಧಾಂತಗಳನ್ನು ಪ್ರತ್ಯಕ್ಷ ಪರೀಕ್ಷೆಗೇ ಒಳಪಡಿಸಬೇಕಾಗುತ್ತದೆ. ಕೆಲವು ಮನಶ್ಶಾಸ್ತ್ರಜ್ಞರು ಈ ರೀತಿ ಪುರ್ವಸಿದ್ಧಾಂತ ರಚನೆ, ಅದರ ಪರಿತ್ಯಾಗ ಮತ್ತೆ ಕೆಲವು ಪುರ್ವಸಿದ್ಧಾಂತಗಳ ಸೂಚನೆ-ಹೀಗೆ ಸಮಸ್ಯೆ ಪರಿಹಾರ ವಾಗುವವರೆಗೂ ಜರುಗುವ ವಿಚಾರದ್ಯೋತನವನ್ನು ಪರೋಕ್ಷವಾಗಿ ಜರುಗುವ ಪ್ರಯತ್ನದ ತಪ್ಪುವರ್ತನೆ ಎನ್ನುತ್ತಾರೆ. ಒಂದು ಸಮಸ್ಯೆಯ ಪರಿಹಾರಕ್ಕೆ ಮನುಷ್ಯ ಹಿಂದಿನ ಅನುಭವಗಳನ್ನು ಪುನಸ್ಸಂಘಟಿಸಿ ಹೊಸ ರೂಪದಲ್ಲಿ ಬಳಸಿಕೊಳ್ಳುತ್ತಾನೆ. ಆ ಸಮಸ್ಯೆಯೇ ಮನಸ್ಸಿಗೆ ತಂದುಕೊಳ್ಳಬೇಕಾದ ಸ್ಮೃತಿಯ ಸ್ವರೂಪವನ್ನು ನಿರ್ದೇಶಿಸುತ್ತದೆ. ಒಂದು ಮೋಟರುಗಾಡಿ ಯನ್ನು ನಡೆಸಲು ತೊಂದರೆಯುಂಟಾದಾಗ, ನಾವು ಸಾಮಾನ್ಯವಾಗಿ ಅದಕ್ಕೆ ಸಂಬಂಧಪಟ್ಟ ಹಿಂದಿನ ಅನುಭವಗಳನ್ನು ಸ್ಮರಣೆಗೆ ತಂದುಕೊಳ್ಳುತ್ತೇವೆ. ಪ್ರಕೃತ ಸಮಸ್ಯೆಯ ಪ್ರಜ್ಞೆ ಸಂಬಂಧಪಟ್ಟ ಮಾರ್ಗದಲ್ಲಿ ಮನೋಗತಿಯ ದಿಕ್ಕನ್ನು ನಿರ್ದೇಶಿಸುತ್ತದೆ. ಮೇಯಿರ್ ಎಂಬಾತ ಮೋಂಬತ್ತಿಯನ್ನು ಊದಿ ಆರಿಸುವುದು, ಟೊಪ್ಪಿ ನೇತುಹಾಕುವ ಗೂಟಗಳ ಚೌಕಟ್ಟನ್ನು ರಚಿಸುವುದು ಅಥವಾ ಪೆಂಡುಲಂ ಸಮಸ್ಯೆ ಮುಂತಾದ ಕುತೂಹಲಜನಕ ಪ್ರಯೋಗಾಭ್ಯಾಸಗಳಿಂದ ಆ ಸಮಸ್ಯೆಗಳ ಪರಿಹಾರಕ್ಕೆ ದಿಗ್ದರ್ಶನ ಎಷ್ಟು ಸಹಾಯಕವಾಗಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾನೆ. ದಾರಿ ತಪ್ಪಾದರೆ, ಅದೊಂದು ದೊಡ್ಡ ಅಡಚಣೆ ಯಾಗುತ್ತದೆ. ಬೇರೆ ಎಲ್ಲವನ್ನೂ ತ್ಯಜಿಸಿ, ಒಂದೇ ಒಂದು ದಾರಿಯನ್ನು ಹಿಡಿದು ಆಲೋಚನೆ ನಡೆದರೆ ಸಮಸ್ಯೆಯ ಗುರಿಯನ್ನು ಮುಟ್ಟಲು ತೀರ ಅಡೆತಡೆಗಳುಂಟಾಗುತ್ತವೆ. ತೊಂದರೆ ಎಲ್ಲುಂಟಾಗಿದೆ ಎಂಬುದನ್ನು ಮೊದಲು ಪತ್ತೆ ಮಾಡಿ, ಅದು ಸಾಧ್ಯವಾಗದಿದ್ದರೆ ಬೇರೆ ದಾರಿ ಹಿಡಿಯಿರಿ-ಎಂಬ ಸೂಚನೆಯನ್ನು ಪಡೆದವರು, ಅಂಥ ಸೂಚನೆಯನ್ನು ಪಡೆಯದವರಿ ಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಮಸ್ಯೆಯನ್ನು ಪರಿಹರಿಸಲು ಶಕ್ತರಾದರೆಂಬ ಗಣನೀಯ ಅಂಶವನ್ನು ಮೇಯಿರ್ ಕಂಡುಹಿಡಿದಿದ್ದಾನೆ.

ಹೊಸ ನಿರ್ಮಿತಿಗಳನ್ನೂ ಹೊಸ ಭಾವನೆಗಳನ್ನೂ ಕಲಾವಸ್ತುಗಳನ್ನೂ ದೊರಕಿಸಿ ಕೊಟ್ಟಿರುವ ಸೃಷ್ಟ್ಯಾತ್ಮಕ ಆಲೋಚನಾ ಪ್ರಕ್ರಿಯೆಗಳನ್ನು ವಿಶ್ಲೇಷಿಸಲಾಗಿದೆ. ಮನುಷ್ಯನ ಅನೇಕ ಕಲಾಕೃತಿಗಳು ಪರೀಕ್ಷಾಕ್ರಮದಿಂದ ಒಪ್ಪುತಪ್ಪುಗಳನ್ನು ಕಂಡುಕೊಳ್ಳುವ ಕಲಿಕೆಯಂತೆಯೇ ಕ್ರಮೇಣ ಬೆಳೆಯುತ್ತವೆ. ಎಲ್ಲ ಕಲಾವಸ್ತುಗಳ ವಿಷಯದಲ್ಲೂ ಅವುಗಳನ್ನು ರೂಪಗೊಳಿಸಬೇಕೆಂಬ ಆಸೆ ಅವುಗಳ ನಿರ್ಮಾಣದ ಅನೇಕ ಪ್ರಯತ್ನಗಳನ್ನು ಪ್ರಚೋದಿಸುತ್ತದೆ. ಗಮನಾರ್ಹವಾದ ಅಂತಃಸ್ಫೂರ್ತಿಗಳೂ ಪದೇ ಪದೇ ಈ ಕೆಲಸಕ್ಕೆ ನೆರವಾಗುತ್ತವೆ. ಈ ಪ್ರಕ್ರಿಯೆಯನ್ನು ಸಾಮಾನ್ಯವಾಗಿ ನಾಲ್ಕು ಹಂತಗಳಾಗಿ ವಿಭಜಿಸುತ್ತಾರೆ. ಸಿದ್ಧತೆ, ಗರ್ಭೀಕರಣ, ಸ್ಫೂರ್ತಿ ಮತ್ತು ಸತ್ಯಾಂಶ ಪರೀಕ್ಷೆ ಅಥವಾ ಪುನಃಪರಿಶೀಲನೆ-ಇವೇ ಆ ನಾಲ್ಕು ಹಂತಗಳು. ಸೃಷ್ಟ್ಯಾತ್ಮಕ ಆಲೋಚನೆಗಳೆಲ್ಲಕ್ಕೂ ಈ ಮೊದಲೇ ಹೇಳಿರುವಂತೆ ಅನುಭವ ಬೇಕು; ಮತ್ತು ಸಂಬಂಧಪಟ್ಟ ಸಂಗತಿಗಳು ಉದ್ದಿಷ್ಟ ಕ್ಷೇತ್ರದಲ್ಲಿ ಲಭ್ಯವಿರಬೇಕು. ಗಣಿತದ ಜ್ಞಾನವಿಲ್ಲದೆ, ಐನ್ಸ್ಟೀನ್ ತನ್ನ ಸಾಪೇಕ್ಷತಾವಾದಕ್ಕೆ ಸುಸ್ವರೂಪವನ್ನು ಕೊಡಲಾಗುತ್ತಿರಲಿಲ್ಲ. ಸಿದ್ಧತೆ ಅನೇಕ ಸಂಗತಿಗಳನ್ನು ಹೊಸದಾಗಿ ಜೋಡಿಸಿ ಅನೇಕ ಬಗೆಗಳಲ್ಲಿ ಹೊಂದಿಸಿಕೊಳ್ಳುವ ಕಾರ್ಯವನ್ನು ಒಳಗೊಂಡಿರುತ್ತದೆ. ಇದಕ್ಕೆ ಒಪ್ಪುತಪ್ಪುಗಳನ್ನು ಕಂಡುಹಿಡಿಯುವ ಅನೇಕ ಪ್ರಯೋಗಗಳೂ ಪ್ರಯತ್ನಗಳೂ ನಿಷ್ಫಲಾರಂಭಗಳೂ ನಡೆಯಬೇಕಾಗುತ್ತವೆ. ವಸ್ತುತಃ ಬೆವರು ಸುರಿಸಿ ದುಡಿಯುವುದೇ ಸ್ಫೂರ್ತಿ ಎಂದು ಎಡಿಸನ್ ಹೇಳಿದ್ದಾನೆ.

ಗರ್ಭೀಕರಣದ ಮುಖ್ಯ ಲಕ್ಷಣವೇನೆಂದರೆ, ಅದು ಯಾವ ಕಾರ್ಯದಿಂದಲೂ ಹೊರತೋರುವುದಿಲ್ಲ; ಯಾವ ಮುನ್ನಡೆಯನ್ನೂ ತೋರದ ಕಾಲವದು. ಸಮಸ್ಯೆ ಒಳಹರಿದಂತೆ ತೋರುತ್ತದೆ. ಬಹುಶಃ ಅದು ಸುಪ್ತಪ್ರಜ್ಞೆಯಲ್ಲಿ ಹೊಗೆಯಾಡುತ್ತಿರಬಹುದು. ಅನೇಕ ವೇಳೆ ಇದನ್ನು ಸ್ಫೂರ್ತಿ ಹಿಂಬಾಲಿಸುತ್ತದೆ. ಆಗ ಅದುವರೆಗೂ ಕೈಗೆಟುಕದಿದ್ದ ಸಮಸ್ಯೆ ಒಂದು ಕ್ಷಣದಲ್ಲಿ ಪರಿಹಾರವಾಗುತ್ತದೆ. ಅನೇಕವೇಳೆ ಅದು ಇದ್ದಕ್ಕಿದ್ದಂತೆಯೇ ಅನಿರೀಕ್ಷಿತವಾಗಿ ಬರುತ್ತದೆ.

ಇದಕ್ಕೆ ಆರ್ಕಿಮಿಡೀಸ್ ‘ಸಿಕ್ಕಿತು’ (ಯುರೇಕ) ಎಂದು ಮೈಮೇಲೆ ಬಟ್ಟೆಯಿಲ್ಲದುದರ ಪರಿವೆಯೂ ಇಲ್ಲದೆ ಉಗ್ಗಡಿಸುತ್ತ ಓಡಿದುದೇ ಮಾದರಿಯ ಉದಾಹರಣೆ. ಹೀಗೆ ಥಟ್ಟನೆ ಸಂಗತಿಗಳು ಮನಸ್ಸಂಘಟಿತವಾಗಿ ಸಮಸ್ಯೆಯನ್ನು ಅನಿರೀಕ್ಷಿತವಾಗಿ ಪರಿಹರಿಸುವ ಘಟನೆ ಉನ್ನತ ಸೃಷ್ಟ್ಯಾತ್ಮಕ ಕ್ರಿಯೆಗಳ ವಿಷಯದಲ್ಲೊಂದರಲ್ಲೇ ಅಲ್ಲದೆ ದೈನಂದಿನ ಸಮಸ್ಯೆಗಳ ಪರಿಹಾರದಲ್ಲೂ ಕಾಣಿಸಿಕೊಳ್ಳುತ್ತವೆ. ಅಂತಃಸ್ಫೂರ್ತಿ ಅಥವಾ ಅಂತರ್ದೃಷ್ಟಿ ಆಲೋಚನೆಯ ಕೊನೆಯ ಹಂತವಾಗುವುದು ಅಪುರ್ವ. ಅದಕ್ಕೆ ಬೆಲೆಕಟ್ಟಬೇಕು. ಪ್ರಯೋಗವನ್ನು ಪರೀಕ್ಷೆಗೀಡುಮಾಡಬೇಕು. ಕಾರ್ಯಕ್ಕೆ ಹಚ್ಚಬೇಕು. ಬೇಕಾದರೆ ಪುನಃ ಪರಿಶೀಲಿಸಲೂ ಬೇಕು. ಪ್ರತಿಯೊಬ್ಬ ವಿಜ್ಞಾನಿಗೂ ಯಂತ್ರಶಿಲ್ಪಿಗೂ ಹೊಳೆದ ಭಾವ ರೇಖಾಫಲಕದ ಮೇಲಲ್ಲದೆ ಕಾರ್ಯಕ್ಷೇತ್ರದಲ್ಲೂ ಬಳಕೆಗೆ ಅರ್ಹವಾಗಬೇಕೆಂಬುದೇನೂ ಇಲ್ಲ. ಅದು ನಿಜವಾದ ನವಸೃಷ್ಟಿ ಎಂದು ಹೇಳಿಸಿಕೊಳ್ಳುವ ಮೊದಲು ಅದನ್ನು ಅನೇಕ ಸಲ ಮಾರ್ಪಡಿಸಬೇಕಾಗುತ್ತದೆ.

ಭಾವನೆಗಳ ಬೆಳೆವಣಿಗೆ ಹೇಗಾಗುತ್ತದೆಯೆಂಬುದರ ವ್ಯಾಸಂಗ ಆಲೋಚನಾ ಸ್ವರೂಪದ ಮೇಲೆ ಹೆಚ್ಚಿನ ಬೆಳಕನ್ನು ಬೀರಿದೆ. ವಸ್ತುಗಳ ಸಾಮಾನ್ಯವಾದ ಮತ್ತು ವಿಶಿಷ್ಟವಾದ ಅಂಶಗಳನ್ನು ಪ್ರತಿನಿಧಿಸುವ ಸಾಧಾರಣ ಅಂಶಗಳೇ ಭಾವನೆಗಳು. ಅವು ಅನುಮಿತಿಯ ಫಲಗಳು. ಒಂದು ಸಲ ರೂಪ ತಾಳಿದರೆ ಅವು ಆಲೋಚನಾ ಪ್ರತಿಕ್ರಿಯೆಯಲ್ಲಿ ಗಮನಾರ್ಹವಾದ ಪಾತ್ರ ವಹಿಸುತ್ತವೆ. ಕಾಲ, ಶಕ್ತಿ, ದ್ರವ್ಯ, ವೇಗ ಇತ್ಯಾದಿ ಅಮೂರ್ತ ಭಾವನೆಗಳನ್ನು ಹೇಗೆ ಉಪಯೋಗಿಸುವುದೆಂಬುದರ ಕಲಿಕೆಯೇ ವಿದ್ಯಾಭ್ಯಾಸವೆನಿಸಿದೆ.

ಸಾರಗ್ರಹಣ ಮತ್ತು ಸಾಮಾನ್ಯೀಕರಣ ಪ್ರಕ್ರಿಯೆಗಳಿಂದ ಭಾವನೆಗಳು ಬೆಳೆಯುತ್ತವೆ. ಬೇರೆ ಎಂದು ತೋರುವ ಬೇವು, ಆಲ, ಅರಳಿ, ಮಾವು ಮುಂತಾದ ಮರಗಳೆಲ್ಲಕ್ಕೂ ಸಾಮಾನ್ಯವಾಗಿರುವ ಅಂಶಗಳನ್ನು ಗುರುತಿಸಿ ಆ ಸಾಮಾನ್ಯ ಗುಣಗಳನ್ನು ನೋಟಕ್ಕೆ ಪ್ರತ್ಯೇಕಿಸುತ್ತ ಅಂಥ ಸಾಮಾನ್ಯಾಂಶಗಳಿಗೆ ಮರ ಎಂಬ ಹೆಸರನ್ನು ಕೊಡುತ್ತಾನೆ. ಒಂದು ಹೊಸ ಮರವನ್ನು ಕಂಡಾಗ, ಈ ಸಾಮಾನ್ಯಾಂಶಗಳನ್ನು ಗುರುತಿಸಿ ಅದು ಒಂದು ಮರ ಎಂದುಕೊಳ್ಳುತ್ತಾನೆ. ಹೀಗೆ, ಒಂದು ಭಾವನೆಯಲ್ಲಿ ಎಲ್ಲ ಹಳೆಯ ಅನುಭವಗಳ ಸಾರ ತುಂಬಿಕೊಂಡಿರುತ್ತದೆ. ಹಾಗೂ ವಾಸ್ತವಿಕ ಮತ್ತು ವೈಯಕ್ತಿಕ ವಿಷಯಗಳನ್ನು ಮೀರುವ ಉಪಾಯವೊಂದು ಅವನೊಳಗೆ ಬೆಳೆಯುತ್ತದೆ. ಮರ ಎಂಬ ಸರಳಭಾವನೆ ಕೂಡ ಈ ಲೋಕವ್ಯವಹಾರದಲ್ಲಿ ಎಷ್ಟು ಉಪಯುಕ್ತವಾಗಿದೆ ಎಂಬುದು ಆ ಒಂದು ಉಪನಾಮದಲ್ಲಿ ಪ್ರಪಂಚದ ಅನೇಕ ಬೇರೆ ಬೇರೆ ಮರಗಳನ್ನು ಹೇಗೆ ಅಡಕ ಮಾಡಬಹುದೆಂಬುದನ್ನು ಪರಿಭಾವಿಸಿದರೆ ತಿಳಿಯುತ್ತದೆ. ಆಸ್ಟ್ರೇಲಿಯದ ಕೆಲವು ವರ್ಗಗಳ ಜನರಿಗೆ ಮರ ಎಂಬ ಭಾವನೆಯೇ ತಿಳಿಯದು. ಅವರು ಯೂಕಲಿಪ್ಟಸ್, ಮುಲ್ಗ, ಗೋಂದಿನ ಮರ ಇತ್ಯಾದಿ ಬೇರೆ ಬೇರೆ ವೃಕ್ಷಗಳ ವಿಚಾರದಲ್ಲಿ ಅವುಗಳ ಹೆಸರು ಹಿಡಿದೇ ವ್ಯವಹರಿಸಬೇಕು. ಈ ಭಾವನಾರಾಹಿತ್ಯದಿಂದ ಅವರಿಗೆ ಅನನುಕೂಲವೇ ಹೆಚ್ಚು. ಅವರ ಲೋಕವ್ಯವಹಾರ ರೀತಿಯಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚು.

ಮಕ್ಕಳಲ್ಲೂ ತರುಣರಲ್ಲೂ ಹೇಗೆ ಭಾವನೆಗಳು ಬೆಳೆಯುತ್ತವೆ ಎಂಬ ವಿಚಾರದಲ್ಲಿ ಕುತೂಹಲಕಾರಕ ಪ್ರಯೋಗಗಳು ನಡೆದಿವೆ. ಸು.7-8 ವರ್ಷಗಳವರೆಗೂ ಮಗುವಿನ ಆಲೋಚನೆ ಅಹಂಭಾವದಲ್ಲಿ ಕೇಂದ್ರೀಕೃತವಾಗಿರುತ್ತದೆ; ಅದರ ಇಷ್ಟಗಳೂ ಆಂತರಿಕ ಆವಶ್ಯಕತೆಗಳೂ ಅದನ್ನು ಬಹುವಾಗಿ ಪ್ರಭಾವಗೊಳಿಸುತ್ತವೆ; ಆದರೆ ಸುತ್ತಣ ಪರಿಸರ ಮತ್ತು ಅದರ ಗುಣಗಳ ಗ್ರಹಿಕೆಯಿಂದ ಅಷ್ಟಾಗಿ ಅಲ್ಲ. ವಸ್ತುಗಳ ಪ್ರೇರಣೆಯಿಂದ ಇಂದ್ರಿಯಗಳು ಮಾತ್ರ ಚಲಿಸುವ ಎಳೆಗಾಲದಿಂದ ಪ್ರಾರಂಭಿಸಿ ವಾಸ್ತವದೊಂದಿಗೆ ಮಾತ್ರ ವ್ಯವಹರಿಸುತ್ತ ಸಂಖ್ಯೆ, ಕಾಲ ದೇಶ ಮತ್ತು ಕಾರ್ಯಕಾರಣ ಸಂಬಂಧ ಇತ್ಯಾದಿ ಅಮೂರ್ತ ಭಾವನೆಗಳನ್ನು ಅದು ಕ್ರಮೇಣ ಪಡೆಯುತ್ತದೆ.ವಯಸ್ಕರಲ್ಲಿ ಭಾವನೆಗಳು ಬೆಳೆಯುವ ಪ್ರತಿಕ್ರಿಯೆಯ ಮೇಲೆ ಪ್ರಯೋಗಗಳು ಬೆಳಕನ್ನು ಚೆಲ್ಲಿರುವುದಲ್ಲದೆ ಕೆಳಮಟ್ಟದ ಪ್ರಾಣಿಗಳಲ್ಲೂ ಅದು ಇರುವ ಬಗೆಯನ್ನು ತೋರಿಸಿಕೊಟ್ಟಿವೆ. ಮಕ್ಕಳು, ಕೋತಿಗಳು ಮತ್ತು ಬೆಕ್ಕುಗಳು ಇವುಗಳಲ್ಲದೆ ಇಲಿ ಮುಂತಾದ ತುಂಬ ಕೆಳಮಟ್ಟದ ಪ್ರಾಣಿಗಳೂ ತ್ರಿಕೋಣತ್ವ ಸಾರಗ್ರಹಣವನ್ನು ಕಲಿತಿವೆ ಎಂದು ಪಿಯಾಜೆಟ್ ಎಂಬ ಪ್ರಸಿದ್ಧ ಮನಶ್ಶಾಸ್ತ್ರಜ್ಞ ಸೂಚಿಸಿದ್ದಾನೆ.

ಅನೇಕರು ತಾವು ಅಲೋಚನೆ ಮಾಡುವಾಗ ಮನಸ್ಸಿನಲ್ಲಿ ಪ್ರತೀಕಗಳಿರುವುದನ್ನು ತಿಳಿಸಿದ್ದಾರೆ. ಈ ಶತಮಾನದ ಆದಿಭಾಗದಲ್ಲಿದ್ದ ಮನಶಾಸ್ತ್ರಜ್ಞರು ಆಲೋಚನೆಯಲ್ಲಿ ಪ್ರತೀಕಗಳ ಸ್ಥಾನದ ವಿಚಾರವಾಗಿ ದೀರ್ಘ ಚಿಂತನೆಯಲ್ಲಿ ತೊಡಗಿದ್ದರು. ಸಮಸ್ಯಾಪರಿಹಾರ ಮತ್ತು ಆಲೋಚನೆಗಳಲ್ಲಿ ತೊಡಗಿರುವವರು ತಮ್ಮೊಳಗನ್ನು ತಾವೇ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮಾನಸಿಕ ಚಿತ್ರಗಳು ಆ ಪ್ರಕ್ರಿಯೆಯಲ್ಲಿ ಪಾಲುಗೊಳ್ಳುವುದು ಕಂಡುಬರಲಿಲ್ಲ. ವಸ್ತುತಃ ಅತ್ಯುನ್ನತವೂ ಸಂಕೀರ್ಣವೂ ಆದ ಆಲೋಚನೆಯಲ್ಲಿ ಅನೇಕ ವಿಜ್ಞಾನಿಗಳೂ ಆಲೋಚನಾಪರರೂ ಆಸಕ್ತರೂ ಆಗಿದ್ದರೂ ಕಣ್ಣಿಗೆ ಕಾಣುವಂಥ ಪ್ರತೀಕ ನಿರ್ಮಾಣದಲ್ಲಿ ಅಕುಶಲರಾಗಿರುವುದು ಕಂಡುಬರುತ್ತದೆ. ಅನೇಕವೇಳೆ ಅಷ್ಟು ಸಮರ್ಥರಲ್ಲದ ವ್ಯಕ್ತಿಗಳೂ ಬಾಲರೂ ಸ್ಪಷ್ಟ ಮತ್ತು ವಿಶದ ಚಿತ್ರಗಳನ್ನು ಕಾಣಬಲ್ಲರು. ಹಲಸಮಯಗಳಲ್ಲಿ ಕಣ್ಣಿಗೆ ಕಾಣುವ ಚಿತ್ರಕ್ಕೂ ತಾವು ಆಲೋಚಿಸುತ್ತಿರುವ ವಿಷಯಕ್ಕೂ ಏನೂ ಸಂಬಂಧವಿಲ್ಲವೆಂದು ಅನೇಕರು ಹೇಳುತ್ತಾರೆ. ಆಲೋಚನೆಯಲ್ಲಿ ಚಿತ್ರಗಳಿಲ್ಲದಿರುವುದು ಆವಶ್ಯಕವೆಂದು ಇವು ಹೇಳವು. ಆದರೆ ಕೆಲವು ವೇಳೆ ಚಿತ್ರಗಳಿರುವುದು ಆ ಪ್ರಕ್ರಿಯೆಗೆ ನೆರವಾಗಬಹುದು ಅಥವಾ ತಡೆಗಳನ್ನೊಡ್ಡಬಹುದು ಎಂಬುದನ್ನೂ ಮತ್ತು ಬೇರೆ ವಿಧವಾದ ಸಾಂಕೇತಿಕ ಪ್ರಕ್ರಿಯೆಗಳೂ ಈ ಸಂಬಂಧದಲ್ಲಿ ನಿಯುಕ್ತವಾಗುತ್ತವೆ ಎಂಬುದನ್ನೂ ಅವು ತಿಳಿಸಿಕೊಡುತ್ತವೆ.

ಆಲೋಚನೆಯಲ್ಲಿ ಎಲ್ಲ ಸಾಂಕೇತಿಕ ಪ್ರಕ್ರಿಯೆಗಳಿಗಿಂತ ಹೆಚ್ಚಿನ ಸ್ಥಾನವನ್ನು ಪಡೆದಿರುವುದು ಭಾಷೆ. ಅದನ್ನು ಅಂತರ ಭಾಷಾಕ್ರಿಯೆ ಅಥವಾ ಬಿಗಿಹಿಡಿದ ಭಾಷಣ ಎಂದು ಪರಿಭಾವಿಸ ಲಾಗಿದೆ. ವರ್ಡ್ಸ್ ವರ್ತ್ ಕವಿಯು ಮಾತೆಂಬುದು ಆಲೋಚನೆಯ ತೊಡಿಗೆಯಲ್ಲ, ಅದರ ಸ್ವರೂಪವೇ, ಅವತಾರವೇ ಎಂದಿದ್ದಾನೆ. ಆಲೋಚನೆ ಎಂಬುದು ಒಂದು ರೀತಿಯ ಒಳಮಾತುಗಾರಿಕೆಯೆ? ಅನೇಕ ವೇಳೆ ಮಕ್ಕಳು ಗಟ್ಟಿಯಾಗಿಯೇ ಆಲೋಚಿಸುತ್ತಾರೆ. ವಯಸ್ಕರೂ ತಮ್ಮ ತುಟಿಗಳನ್ನೂ ನಾಲಗೆಯನ್ನೂ ಆಡಿಸುತ್ತಾರೆ. ಇಲ್ಲದಿದ್ದರೆ ಚಿಂತಿಸುತ್ತಿರುವಾಗ ಕೈ ಬೆರಳುಗಳನ್ನು ಆಡಿಸುತ್ತಾರೆ. ಮಾತುಗಾರಿಕೆಯೂ ಆಲೋಚನೆಯೂ ಒಂದೇ ಎಂದು ಹೇಳಿದರೆ ತಪ್ಪಾಗುತ್ತದೆ. ಅನೇಕ ಪ್ರಾಣಿಗಳಿಗೆ ಮಾತು ಬರುತ್ತದೆಯೆಂದು ಹೇಳುವಂತಿಲ್ಲ. ಆದರೂ ಅವು ಆಲೋಚಿಸಬಲ್ಲವೆಂಬುದಕ್ಕೆ ಅನೇಕ ಪ್ರಮಾಣಗಳಿವೆ. ಭಾಷೆ ಇರುವಾಗಲೂ ಆಲೋಚನೆಯಲ್ಲಿ ಸ್ವಲ್ಪ ಅಂಶ ಭಾಷಾರಹಿತವಾದುದು. ಯಾವ ಹೆಸರೂ ಇಲ್ಲದ ವಸ್ತುವಿನ ವಿಚಾರವಾಗಿ ನಾವು ಆಲೋಚಿಸಬಲ್ಲೆವು. ಅನೇಕ ಮನಶ್ಶಾಸ್ತ್ರಜ್ಞರು ಆಲೋಚನೆಯನ್ನು ಮಾತುಗಳ ಮತ್ತು ಪ್ರತೀಕಗಳ ಸಹಾಯವಿಲ್ಲದೆಯೇ ನಡೆಸಬಹುದೆನ್ನುತ್ತಾರೆ. ಷೆಲ್ಲಿಯಂಥ ಕೆಲವು ಕವಿಗಳು ಕೂಡ ಆಲೋಚನೆಗೆ ಮಾತೊಂದು ತಡೆ ಎಂದು ಭಾವಿಸಿದ್ದರು. ಮಾತಿನ ಹೊರೆಯಿಂದ ತಪ್ಪಿಸಿದ ಹೊರತು ಒಂದು ಸಮಸ್ಯೆಯ ಸ್ವರೂಪಜ್ಞಾನ ತನಗಾಗುತ್ತಿರಲಿಲ್ಲವೆಂದು ಪ್ರಸಿದ್ಧ ವಿಜ್ಞಾನಿ ಗಾಲ್ಟನ್ ಹೇಳಿದ್ದಾನೆ. ಇನ್ನೂ ಮುಂದೆ, ಭಾವನೆಗಳ ನಿರ್ಮಾಣಕ್ಕೆ ಭಾಷೆ ಆವಶ್ಯಕವಲ್ಲ ಎಂಬುದು ಪ್ರಯೋಗಗಳಿಂದ ಸಿದ್ಧವಾಗಿದೆ.

ಮಾತುಗಳು ಆಲೋಚನೆಗೆ ಆವಶ್ಯಕವಲ್ಲ; ಅಲ್ಲದೆ, ಕೆಲವು ವೇಳೆ ಅವು ಅದಕ್ಕೆ ತಡೆಗಳನ್ನು ತರಬಹುದು. ಆದರೆ ಕೆಲ ಸಮಯಗಳಲ್ಲಿ ಸಮಸ್ಯಾಪರಿಹಾರಕ್ಕೆ ಮಾತು ಸಹಕಾರಿ ಎಂಬಂತೆ ತೋರಿಬರುತ್ತದೆ. ಲೋಕದ ಅನೇಕಾಂಶಗಳ ಸಂಕೇತ ಭಾಷಾರೂಪ ದಲ್ಲಿದೆ; ಮತ್ತು ನಮ್ಮ ಆಲೋಚನೆಯ ಬಹ್ವಂಶ ಇಂಥ ಸಂಕೇತಗಳ ಆಂತರಿಕ ನಿಯೋಜನೆ ಯಿಂದ ಜರುಗುತ್ತದೆ. ಮನುಷ್ಯನ ಸಂಸ್ಕೃತಿ ಹಬ್ಬಿದಂತೆಲ್ಲ, ಸಮಸ್ಯಾಪರಿಹಾರವನ್ನು ಸುಗಮವಾಗಿ ಮಾಡುವುದಕ್ಕಾಗಿ ಅನೇಕ ವಾಕ್ ಸಂಕೇತಗಳು ರೂಪುಗೊಂಡಿವೆ. ಬರಿ ವಸ್ತುಗಳನ್ನೊ ಪ್ರತೀಕಗಳನ್ನೊ ನೇರವಾಗಿ ಉಪಯೋಗಿಸುವಂತಾಗಿದ್ದರೆ ಇವುಗಳ ಪರಿಹಾರ ಅಷ್ಟು ಸುಲಭವಾಗಿ ಸಾಗುತ್ತಿರಲಿಲ್ಲ. ಇವರೆಡಕ್ಕೂ ಇರುವ ನಿಕಟ ಸಂಬಂಧವನ್ನು ಹ್ಯಾಮಿಲ್ಟನ್ ಒಂದು ಉಪಮೆಯ ಮೂಲಕ ಚೆನ್ನಾಗಿ ನಿರೂಪಿಸಿದ್ದಾನೆ. ಭಾಷಾನಿಯುಕ್ತಿಯನ್ನು ಮರಳ ದಡವೊಂದರಲ್ಲಿ ಒಂದು ಸುರಂಗವನ್ನು ತೋಡುವ ಕಾರ್ಯಕ್ಕೆ ಆತ ಹೋಲಿಸಿದ್ದಾನೆ. ತುಂಬ ಸೂಕ್ಷ್ಮವಾಗಿರುವ ವಿದ್ಯುತ್ ವಾಕ್ ತರಂಗಗ್ರಾಹಿಗಳ ಸಹಾಯದಿಂದ ಇತ್ತೀಚೆಗೆ ನಡೆಸಿದ ಪ್ರಯೋಗಗಳು ಆಲೋಚನಾ ಸಮಯದಲ್ಲಿ ಕಣ್ಣು, ಮಾಂಸಖಂಡಗಳು, ನಾಲಗೆ, ಕೊರಳುಗಳು, ಬಹು ಸೂಕ್ಷ್ಮವಾಗಿ ಚಲಿಸುತ್ತವೆ ಎಂಬುದನ್ನು ಸೂಚಿಸುತ್ತವೆ. ಮಾಂಸಖಂಡಗಳ ಈ ಚಲನೆಗಳು ಅನೇಕವೇಳೆ ಆಂತರಿಕ ಭಾಷೆ ಅಥವಾ ಇಂಗಿತಗಳೆಂದು ಪರಭಾವಿತವಾಗಿವೆ. ನಾಲಗೆ ಮತ್ತು ಕೊರಳುಗಳಲ್ಲಿ ಯಾವ ಚಲನೆಯೂ ತಲೆದೋರದ ಕಿವುಡ, ಮೂಗರನ್ನು ಈ ಪ್ರಯೋಗಕ್ಕೆ ನಿಯೋಜಿಸಿಕೊಂಡಾಗ ಅವರು ಗಣಿತದ ಸಮಸ್ಯೆಗಳನ್ನು ಬಿಡಿಸುತ್ತಿರುವಾಗ ಅವರ ಕೈಗಳಲ್ಲಿ ಕಾರ್ಯಸೂಚಿ ವಿದ್ಯುತ್ ಪ್ರವಾಹಗಳು ಕಂಡುಬಂದುವು; ಈ ಕೈಗಳೇ ಅವರು ಎಣಿಕೆಯಲ್ಲಿ ಉಪಯೋಗಿಸುವ ಅಂಗ.

ನರಮಂಡಲ ಕ್ಷೇತ್ರಗಳ ಸೂಕ್ಷ್ಮ ಚಲನೆಗಳೇ ಆಲೋಚನಾಕ್ರಿಯೆಯೆಂದೂ ಅಥವಾ ಅವಕ್ಕೆ ಅವೇ ಕಾರಣವೆಂದೂ ಹೇಳಿದರೆ ತಪ್ಪಾಗುವುದಾದರೂ ವ್ಯಕ್ತಿ ಆಲೋಚಿಸುತ್ತಿರುವಾಗ ಆತನ ನಾಲಗೆ ಮತ್ತು ಗಂಟಲುಗಳಲ್ಲಲ್ಲದೆ ಮೈಯೆಲ್ಲದರಲ್ಲಿಯೂ ಕ್ರಿಯಾಬಾಹುಳ್ಯ ಕಂಡುಬರುತ್ತದೆ.

ಆಲೋಚನಾಪ್ರಕ್ರಿಯೆಯ ವಿಷಯವಾಗಿ ಸಂಶೋಧನೆ ಏಕೆ ಹೇರಳವಾಗಿ ಮುಂದುವರಿ ದಿಲ್ಲವೆಂದು ಪ್ರಶ್ನಿಸಬಹುದು. ಆ ಪ್ರಕ್ರಿಯೆ ಆಂತರಂಗಿಕವಾದದ್ದು, ಸ್ವನಿರೀಕ್ಷಣೆಯಿಂದ ಮಾತ್ರ ಅದರ ಜ್ಞಾನ ಲಭ್ಯವಾಗಬೇಕು. ಈ ಕ್ರಮ ಯಾವಾಗಲೂ ತಥ್ಯವೆನಿಸದು, ವೈಜ್ಞಾನನಿಕವೆನಿಸದು. ಆಲೋಚನಾ ಪ್ರಕ್ರಿಯೆಗಳನ್ನು ವಿಷಯೀಕರಿಸುವ ವಿಧಾನಗಳನ್ನು ಕಂಡುಹಿಡಿದು ಅದು ನೇರವಾಗಿ ನಮ್ಮ ನಿರೀಕ್ಷಣೆಗೆ ಸಿಕ್ಕುವಂತೆ ಮಾಡುವ ಕ್ರಮವನ್ನು ತಿಳಿಯುವುದು ಈಗ ಅತ್ಯವಶ್ಯಕ. ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಬಾರ್ಟ್ಲೆಟ್ ಅವರೂ ಹಾರ್ವರ್ಡಿನ ಬ್ರೂನರ್ ಅವರೂ ನಡೆಸಿರುವ ಪ್ರಯೋಗಸಿದ್ಧ ವ್ಯಾಸಂಗಗಳು ಈ ದಿಸೆಯಲ್ಲಿ ಮುಂದಿಟ್ಟ ಮುಖ್ಯ ಹೆಜ್ಚೆಗಳಾಗಿವೆ. ಅವರು ಆಲೋಚನೆಯನ್ನು ಕೋರುವ ಸಮಸ್ಯೆಗಳ ಸ್ವರೂಪವನ್ನೂ ಪ್ರಚೋದಕ ಪರಿಸ್ಥಿತಿಗಳನ್ನೂ ಪ್ರಕಟನಾರೀತಿಗಳನ್ನೂ ಇತರ ಅಂಶಗಳನ್ನೂ ಕ್ರಮಬದ್ಧವಾಗಿ ಬದಲಾಯಿಸಿ ಪ್ರತಿಕ್ರಿಯೆಯ ಬದಲಾವಣೆಗಳನ್ನು ಪರೀಕ್ಷಿಸಿರುವರು ಸಂಕೇತ ಶಾಸ್ತ್ರ.