ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಲ್ಫಾಲ್ಫ

ವಿಕಿಸೋರ್ಸ್ದಿಂದ

ಲೆಗ್ಯೊಮಿನೋಸಿ ಕುಟುಂಬದ ಪಾಪಿಲಿಯೊನೇಸಿ ವಿಭಾಗಕ್ಕೆ ಸೇರಿದ ಗಿಡ. ಲೊಸರ್ನ ಎಂದೂ ಕರೆಯಲಾಗುವ ಈ ಗಿಡಕ್ಕೆ ಕನ್ನಡದಲ್ಲಿ ಕುದುರೆ ಮಸಾಲೆಸೊಪ್ಪು ಎಂದು ಹೆಸರಿದೆ. ಇದನ್ನು ದನಗಳ ಮತ್ತು ಕುದುರೆಗಳ ಮೇವಿಗಾಗಿ ಹುಲ್ಲುಗಾವಲುಗಳಲ್ಲಿ ಬೆಳೆಸುತ್ತಾರೆ. ಮಣ್ಣಿನ ಸಾರವನ್ನು ಹೆಚ್ಚಿಸುವುದಕ್ಕಾಗಿಯೂ ಬೆಳೆಸುವುದಿದೆ.

ಸಾಮಾನ್ಯವಾಗಿ 1'-4' ಎತ್ತರಕ್ಕೆ ಬೆಳೆಯುವ ಈ ಗಿಡದಲ್ಲಿ ನೆಲದಲ್ಲೇ ಭಾಗಶಃ ಹುದುಗಿರುವ ಮುಖ್ಯಕಾಂಡವಿದೆ. ಈ ಕಾಂಡದಿಂದ ಸುಮಾರು 20-30 ಸಣ್ಣ ರೆಂಬೆಗಳು ಮೇಲ್ಮುಖವಾಗಿ ಬೆಳೆಯುತ್ತದೆ. ಪ್ರತಿಯೊಂದು ರೆಂಬೆಯಲ್ಲಿಯೂ ಪರ್ಯಾಯ ಜೋಡಣೆ ಹೊಂದಿರುವ ಸಂಯುಕ್ತ ಎಲೆಗಳಿವೆ. ಒಂದೊಂದು ಸಂಯುಕ್ತ ಎಲೆಯಲ್ಲಿಯೂ ಮೂರು ಕಿರುಎಲೆಗಳಿವೆ. ರೆಂಬೆಗಳ ಮೇಲ್ಭಾಗದಲ್ಲಿರುವ ಎಲೆಗಳ ಕಂಕುಳಿನಿಂದ ರೇಸಿಮ್ ಹೂಗೊಂಚಲುಗಳು ಬೆಳೆಯುತ್ತವೆ ಹೂಗಳ ಬಣ್ಣ ಊದಾ. ಕಾಯಿಗಳು ಸುರುಳಿಯಾಗಿ ಸುತ್ತಿಕೊಂಡಿದ್ದು ಪ್ರತಿಯೊಂದರಲ್ಲಿಯೂ 2-8 ಅಥವಾ ಹೆಚ್ಚು ಹುರುಳಿ ಬೀಜದ ಆಕಾರದ ಚಿಕ್ಕ ಬೀಜಗಳಿವೆ. ಮುಖ್ಯಕಾಂಡದ ಕೆಳಭಾಗದಿಂದ ಭೂಮಿಯೊಳಕ್ಕೆ ಆಳವಾಗಿ ಇಳಿದಿರುವ ತಾಯಿಬೇರು ಪ್ರಮುಖವಾಗಿರುವ ಬೇರಿನ ಸಮೂಹ ಬೆಳೆಯುತ್ತದೆ. ಈ ತಾಯಿಬೇರು ಪರಿಸ್ಥಿತಿ ಅನುಕೂಲವಾಗಿದ್ದಾಗ 30'-50' ಆಳದವರೆಗೂ ಬೆಳೆಯಬಲ್ಲದು.

ಆಲ್ಫಾಲದಲ್ಲಿ ಹಲವಾರು ಪ್ರಭೇದಗಳಿವೆ. ಮುಖ್ಯವಾಗಿ ಮೆಡಿಕ್ಯಾಗೊ ಸಟೈವ ಮತ್ತು ಮೆಡಿಕ್ಯಾಗೊ ಫಾಲ್ಕೇಟ ಎಂಬ ಎರಡು ಪ್ರಭೇದಗಳನ್ನು ಬೆಳೆಸುತ್ತಾರೆ. ಮೊದಲನೆಯ ಪ್ರಭೇದ ಊದಾಬಣ್ಣದ ಹೂಗಳನ್ನು ಮೇಲಕ್ಕೆ ನೇರವಾಗಿ ಬೆಳೆಯುತ್ತದೆ. ಇದರ ಕಾಯಿಗಳು ಸುರುಳಿಯಾಗಿ ಸುತ್ತಿಕೊಂಡಿವೆ. ಎರಡನೆಯದು ಹಳದಿಬಣ್ಣದ ಹೂಗಳನ್ನು ಹೊಂದಿದ್ದು, ಸ್ವಲ್ಪ ಬಾಗಿಕೊಂಡು ಬೆಳೆಯುತ್ತದೆ. ಇದರ ಕಾಯಿಗಳು ಕುಡುಗೋಲಿನ ಆಕಾರದಲ್ಲಿವೆ.

ಆಲ್ಫಾಲ್ಫ ಗಿಡ ಅತ್ಯಂತ ಒಣ ಹವೆಯನ್ನೊ ಅತ್ಯುಷ್ಣ ಅಥವಾ ಅತಿ ಶೀತ ವಾತಾವರಣವನ್ನೂ ತಡೆದುಕೊಂಡು ಚೆನ್ನಾಗಿ ಬೆಳೆಯಬಲ್ಲ ಶಕ್ತಿ ಹೊಂದಿರಲು ಬಲು ಆಳಕ್ಕೆ ಬೆಳೆಯುವ ಇದರ ತಾಯಿಬೇರೇ ಕಾರಣ. ಇದರ ಬೇರಿನ ಮೂಲಕ ನೆಲದಲ್ಲಿ ಎಷ್ಟೇ ಆಳದಲ್ಲಿರಬಹುದಾದ ನೀರನ್ನೂ ಹೀರಿಕೊಂಡು ಗಿಡ ಚೆನ್ನಾಗಿ ಬೆಳೆಯುತ್ತದೆ. ಆದ್ದರಿಂದಲೇ ಇದನ್ನು ಒಣಹವೆಯಿರುವ ಸರಿಸುಮಾರು ಬಂಜರು ಎನ್ನಬಹುದಾದ ಪ್ರದೇಶಗಳಲ್ಲಿ ಬೆಳೆಸುತ್ತಾರೆ.

ಬೀಜ ಬಿತ್ತಿದ ಹಲವಾರು ತಿಂಗಳುಗಳಲ್ಲಿಯೇ ಗಿಡ ಬೆಳೆದರೂ ಕೊನೆಯ ಪಕ್ಷ 2-3 ವರ್ಷಗಳಾದರೂ ಅದನ್ನು ಹಾಗೆಯೇ ಕತ್ತರಿಸದೆ ಬಿಡುತ್ತಾರೆ. ಆಮೇಲೆ ಪ್ರತಿವರ್ಷವೂ 2-8 ಬಾರಿ ಸೊಪ್ಪನ್ನು ಕತ್ತರಿಸಬಹುದು. ಸಾಮಾನ್ಯವಾಗಿ ಒಂದು ಎಕರೆಗೆ 2-4 ಟನ್ ಸೊಪ್ಪು ದೊರಕುವುದಾದರೊ ಚೆನ್ನಾಗಿ ನೀರು ಹಾಯಿಸಿದಲ್ಲಿ ಉತ್ಪನ್ನ 10 ಟನ್ಗಳವರೆಗೊ ಹೆಚ್ಚಬಲ್ಲದು ಇದರ ಸೊಪ್ಪು ಅಧಿಕ ಪೌಷ್ಟಿಕಾಂಶಗಳನ್ನು ಹೊಂದಿದ್ದು ದನಗಳಿಗೆ, ಕುದುರೆಗಳಿಗೆ ರುಚಿಕರವಾಗಿಯೂ ಇರುತ್ತದೆ. ಇದರಲ್ಲಿ 10% ಭಾಗ ಪ್ರೋಟೀನ್, 8% ಭಾಗ ಲವಣಾಂಶಗಳೊ ಅಲ್ಲದೆ ಎ, ಇ, ಡಿ ಮತ್ತು ಕೆ ಜೀವಾತುಗಳು ಇವೆ.

ಮೂಲತಃ ಪೂರ್ವ ಮೆಡಿಟರೆನಿಯನ್ ಪ್ರದೇಶವಾಸಿಯಾದ ಈ ಗಿಡ ರಷ್ಯ ದೇಶದ ದಕ್ಷಿಣದಲ್ಲಿರುವ ಕಾಕಸಸ್ ಪರ್ವತಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಬಹಳ ಹಿಂದಿನ ಕಾಲದಿಂದಲೂ ಇದರ ವ್ಯವಸಾಯ ರೂಢಿಯಲ್ಲಿದೆ. ಕ್ರಿ.ಪು. 400ರ ಸುಮಾರಿನಲ್ಲಿಯೇ ಇದನ್ನು ಗ್ರೀಸ್ ದೇಶದಲ್ಲಿ ಬೆಳೆಸುತ್ತಿದ್ದರೆಂದು ದಾಖಲೆಯಿದೆ. ಇದರ ಸೊಪ್ಪಿನ ಉತ್ಕೃಷ್ಟಗುಣದಿಂದಾಗಿ ಈ ಗಿಡವನ್ನು ಪ್ರಪಂಚದ ಎಲ್ಲ ದೇಶಗಳಲ್ಲೂ ಬೆಳೆಸುತ್ತಿದ್ದಾರೆ. ಇತ್ತೀಚಿನ ಅಂದಾಜಿನ ಪ್ರಕಾರ ಸುಮಾರು 6 ಕೋಟಿ ಎಕರೆಗಳಷ್ಟು ಪ್ರದೇಶದಲ್ಲಿ ಆಲ್ಫಾಲ್ಫವನ್ನು ಬೆಳೆಸಲಾಗುತ್ತಿವೆ. ಮುಖ್ಯವಾಗಿ ಅಮೆರಿಕದ ಸಂಯುಕ್ತ ಸಂಸ್ಥಾನಗಳು, ದಕ್ಷಿಣ ಅಮೆರಿಕ, ಕೆನಡ, ಯೂರೋಪ್ ದೇಶಗಳಲ್ಲಿ ಇದನ್ನು ಹೆಚ್ಚಾಗಿ ಬೆಳೆಸುತ್ತಿದ್ದಾರೆ.

ಆಲ್ಫಾಲ್ಫ ಮುಖ್ಯವಾಗಿ ಹಸುರು ಮೇವಾಗಿ ಉಪಯೋಗವಾಗುವುದಾದರೂ ಇದರ ಸೊಪ್ಪನ್ನು ಕೋಳಿ, ಹಂದಿ ಮುಂತಾದ ಪ್ರಾಣಿಗಳ ಮಿಶ್ರ ಆಹಾರ ತಯಾರಿಕೆಯಲ್ಲಿಯೂ ಉಪಯೋಗಿಸುತ್ತಾರೆ. ಅಲ್ಲದೆ ಇದರ ವ್ಯವಸಾಯದಿಂದ ಭೂಮಿಯಲ್ಲಿನ ನೈಟ್ರೊಜನ್ ಪ್ರಮಾಣ ಹೆಚ್ಚುವುದೆಂದು ಕಂಡುಬಂದಿದೆ. ಇದರ ಬೇರುಗಂಟುಗಳಲ್ಲಿ ಕೆಲವು ವಿಶಿಷ್ಟ ಜಾತಿಯ ಬ್ಯಾಕ್ಟೀರಿಯವಿದ್ದು ಅವು ವಾತಾವರಣದಲ್ಲಿನ ನೈಟ್ರೊಜನ್ನನ್ನೇ ಭೂಮಿಯಲ್ಲಿ ಸ್ಥಿರೀಕರಣಗೊಳಿಸುವುದರಲ್ಲಿ ಸಹಾಯ ಮಾಡುತ್ತವೆ. ಹೀಗೆ ಭೂಮಿಯ ಸಾರ ಹೆಚ್ಚುತ್ತದೆ.

ಈ ಗಿಡಕ್ಕೆ ಹಲವಾರು ಬಗೆಯ ಬೂಷ್ಟು, ಬ್ಯಾಕ್ಟೀರಿಯ ವೈರಸ್ ರೋಗಗಳು ಮತ್ತು ಹುಳುಗಳು ತಗಲುತ್ತವೆ. ಕೆಲವು ಬಾರಿ ಗಣನೀಯ ನಷ್ಟವನ್ನುಂಟು ಮಾಡುವುದೂ ಉಂಟು. ಈ ರೋಗಗಳನ್ನು ರಾಸಾಯನಿಕ ಔಷಧಿಗಳ ಉಪಯೋಗದಿಂದ ತಡೆಯಬಹುದು. ಅಲ್ಲದೆ ರೋಗನಿರೋಧಕ ಶಕ್ತಿಯನ್ನುಳ್ಳ ತಳಿಗಳನ್ನು ಅಭಿವೃದ್ಧಿಪಡಿಸುವುದರಿಂದ ರೋಗಗಳಾಗಲಿ, ಹುಳುಗಳಾಗಲಿ ಅಂಟದಂತೆ ಮಾಡಬಹುದಾಗಿದೆ.