ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಲ್ಬರ್ಟ್ ಸರೋವರ

ವಿಕಿಸೋರ್ಸ್ದಿಂದ

ಆಫ್ರಿಕದ ಕಾಂಗೊ ಗಣರಾಜ್ಯದ ಪೂರ್ವ ಸರಹದ್ದಿನಲ್ಲಿದೆ. ವಿಸ್ತೀರ್ಣ 2,064 ಚ.ಮೈ. ಉದ್ದ ಸು. 160 ಕಿ.ಮೀ. ಅಗಲ ಸು 36 ಕಿ.ಮೀ. ಆಳ ಸು. 50'. ಸಮುದ್ರಮಟ್ಟಕ್ಕಿಂತ 2,018' ಎತ್ತರದಲ್ಲಿದೆ. ಬಂಡೆಯ ಕಡಿದಾದ ಮುಖಗಳಿಂದಲೂ ಅರಣ್ಯಮಯವಾದ ಇಳುಕಲುಗಳಿಂದಲೂ ಆವರಿಸಲ್ಪಟ್ಟಿವೆ. ಹತ್ತಿರದ ನೀರಿನ ಬುಗ್ಗೆಗಳಿಂದ ಬೇಸಗೆಯಲ್ಲಿ ಲವಣಗಳನ್ನು ತಯಾರಿಸುತ್ತಾರೆ. ಸೆಂಲಿಕಿ ಮತ್ತು ವಿಕ್ಟೋರಿಯ ನೈಲ್ ನದಿಗಳು ಇದಕ್ಕೆ ಬಂದು ಸೇರುತ್ತವೆ. ಬೆಹ್ರ್ ಎಲ್ ಜೆಬೆಲ್ ಎಂಬ ನದಿ ಈ ಸರೋವರದಿಂದ ಹೊರಟು ಉತ್ತರಕ್ಕೆ ಹರಿದು ಬೆಹ್ರೆ ಎಲ್ ಘಸಲ್ ಎಂಬ ನದಿಯನ್ನು ಸೇರುತ್ತವೆ. ಈ ಸಂಗಮವೇ ವ್ಹೈಟ್ ನೈಲ್ ನದಿಯ ಮೂಲ. ಬೆಹ್ರ್ ಎಲ್ ಜೆಬೆಲ್ ನದಿಯನ್ನು ಆಲ್ಬರ್ಟ್ನೈಲ್ ಎಂದೂ ಕರೆಯುತ್ತಾರೆ. ಸರೋವರದ ದಕ್ಷಿಣಕ್ಕೆ ನಯಾನ್ ಜಾ‌ ಎಂಬ ದೊಡ್ಡ ಬಯಲು ಸೆಂಲಿಕಿ ನದಿಯಿಂದ ಸುತ್ತುವರಿದಿದೆ. ಈ ಸರೋವರದಿಂದ ವಿಕ್ಟೋರಿಯ ನೈಲ್ ನದಿಯ ಮರ್ಚಿಸನ್ ಜಲಪಾತದವರೆಗೂ ಹಡಗು ಸಂಚಾರ ವ್ಯವಸ್ಥೆಯಿದೆ. ಸರ್ ಸಾಮ್ಯುಯಲ್ ಬೇಕರ್ ಎಂಬ ಆಂಗ್ಲೇಯ ಇದನ್ನು 1864ರಲ್ಲಿ ಕಂಡುಹಿಡಿದು ವಿಕ್ಟೋರಿಯ ರಾಣಿಯ ಪತಿ ಆಲ್ಬರ್ಟನ ಹೆಸರನ್ನು ಈ ಸರೋವರಕ್ಕೆ ಇಟ್ಟ. ಇದಕ್ಕೆ ಆಲ್ಬರ್ಟ್ ನ್ಯಾನ್ಜ ಎಂದೂ ಹೆಸರಿದೆ.