ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಲ್ಸಿಬೈಯಡೀಸ್

ವಿಕಿಸೋರ್ಸ್ದಿಂದ

ಪ್ರ.ಶ.ಪು. 451-404. ಅಥೆನ್ಸಿನ ಅತ್ಯಂತ ಸಮರ್ಥ ರಾಜಕಾರಣಿ ಗಳಲ್ಲೊಬ್ಬ ಹಾಗೂ ದಂಡನಾಯಕ. ಅಥೆನ್ಸ್ ನಗರದ ಶ್ರೀಮಂತ ಮನೆತನದಲ್ಲಿ ಜನಿಸಿದ. ಪೆರಿಕ್ಲೀಸರ ಹತ್ತಿರ ಸಂಬಂಧಿ. ಸಾಕ್ರಟೀಸನ ಮೆಚ್ಚುಗೆಗೆ ಪಾತ್ರನಾದವ. ಬಾಲ್ಯದಿಂದಲೂ ಸ್ವಚ್ಛಂದ ಜೀವನ ನಡೆಸಿದ; ಆಗಿನ ತರುಣರಿಗೆ ಅಚ್ಚುಮೆಚ್ಚಿನ ಗೆಳೆಯನಾದ; ಇವನ ಹುಚ್ಚು ಸಾಹಸ, ಮನಸ್ವೀ ನಡತೆಗಳನ್ನು ಅಥೆನ್ಸಿನ ಜನಸಾಮಾನ್ಯರೂ ಮೆಚ್ಚಿದರು. ಇದರಿಂದ ತೀರ ಸ್ವಾರ್ಥಿಯಾಗಿ ಬೆಳೆದ ಇವನಿಗೆ ರಾಜ್ಯದ ಹಿತಕ್ಕಿಂತ ತನ್ನ ಹಿತವೇ ಹೆಚ್ಚಾಯಿತು. ಅಥೆನ್ಸಿನ ಸಂಪ್ರದಾಯ ಪಕ್ಷದ ಮುಖಂಡನಾದ ನಿಕಿಯಾಸ್ ಪ್ರ.ಶ.ಪು. 421ರಲ್ಲಿ ಸ್ಪಾರ್ಟದೊಂದಿಗೆ ಮೂವತ್ತು ವರ್ಷಗಳ ಒಪ್ಪಂದ ಮಾಡಿಕೊಂಡಿದ್ದ. ಆಲ್ಸಿಬೈಯಡೀಸ್ ಅಥೆನ್ಸಿನ ತೀವ್ರಗಾಮಿ ಪಕ್ಷಕ್ಕೆ ಸೇರಿ, ಸ್ಪಾರ್ಟದ ವೈರಿ ಆರ್ಗಾಸ್ನೊಂದಿಗೆ ಅಥೆನ್ಸ್ ರಾಜಕೀಯ ಮೈತ್ರಿ ಹೊಂದುವಂತೆ ಮಾಡಿದ. ಆರ್ಗಾಸ್ ಸ್ಪಾರ್ಟದ ಮೇಲೆ ಯುದ್ಧ ಹೂಡಿದಾಗ ಅಥೆನ್ಸ್ ಅದರ ಸಹಾಯಕ್ಕೆ ಹೋಗಲಿಲ್ಲ; ಆರ್ಗಾಸ್ ಸೋತು ಹಿಮ್ಮೆಟ್ಟಬೇಕಾಯಿತು. ಕೊಂಚ ಕಾಲಾನಂತರ ರಾಜಕೀಯವೈರಿಗಳು ಈತನಮೇಲೆ ಅನಾಚಾರದ ಆಪಾದನೆ ಹೊರಿಸಿದ್ದರಿಂದ ಸ್ಪಾರ್ಟಕ್ಕೆ ಓಡಿಹೋದ. ಅಲ್ಲಿ ಅಥೆನ್ಸಿನ ಮೇಲೆ ಯುದ್ಧ ಹೂಡುವಂತೆ ಸ್ಪಾರ್ಟನರನ್ನು ಪ್ರೇರೇಪಿಸಲೆತ್ನಿಸಿದ. ಪರಿಣಾಮವಾಗಿ ಪ್ರ.ಶ.ಪು. 410ರಲ್ಲಿ ಸ್ವದೇಶಕ್ಕೆ ಹಿಂತಿರುಗುವಂತಾಯಿತು. ಮೂರುವರ್ಷ ಕಾಲ (410-407) ಸ್ಪಾರ್ಟದ ಮೇಲೆ ನಡೆದ ಯುದ್ಧದಲ್ಲಿ ಭೂ ಮತ್ತು ನೌಕಾ ಪಡೆಗಳ ದಂಡನಾಯಕನಾಗಿ ಕದನಗಳಲ್ಲಿ ವಿಜಯಗಳಿಸಿ ಅಥೆನ್ಸಿಗೆ ಕೀರ್ತಿ ತಂದ. ಒಂದು ಕಾಳಗದಲ್ಲಿ ಕೈಕೆಳಗಿನ ಸೇನಾಧಿಕಾರಿಯೊಬ್ಬ ಮಾಡಿದ ತಪ್ಪಿಗಾಗಿ ದೇಶಭ್ರಷ್ಟನಾಗಬೇಕಾಯಿತು. ಒಬ್ಬ ಪಾರಸಿಕನ ಕೈಯಿಂದ ಹತನಾದ. ಈತ ಸಾಕ್ರಟೀಸನ ಪ್ರಿಯಶಿಷ್ಯನಾದರೂ ಅವನಂತೆ ವಿವೇಕಿಯೂ ತಾತ್ತ್ವಿಕನೂ ಅಲ್ಲ. ತನ್ನ ಸ್ವಾರ್ಥದಿಂದ ಸಾಮಾಜಿಕ ಹಾಗೂ ರಾಜಕೀಯ ಜೀವನವನ್ನೀತ ಕಲಕಿದ. ಯುವಕರ ದುರ್ನಡತೆಗೆ ಕಾರಣನಾದನೆಂದು ಸಾಕ್ರಟೀಸನ ಮೇಲೆ ಹೊರಿಸಿದ ಆಪಾದನೆಗೆ ಈ ಶಿಷ್ಯ ಪುಷ್ಟಿಕೊಡುವಂತಿದ್ದನೆಂದು ಹೇಳಬಹುದು. ಈತನ ಸಾರ್ವಜನಿಕ ಜೀವನವನ್ನು ಥೂಸಿಡೈಡಿಸನೂ ಖಾಸಗಿ ಜೀವನವನ್ನು ಪ್ಲುಟಾರ್ಕನೂ ಬರೆದಿದ್ದಾರೆ.