ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಸ್ತಿಕ್ಯ ಮತ್ತು ನಾಸ್ತಿಕ್ಯ
ಭಾರತೀಯ ದರ್ಶನಗಳ ವಿಂಗಡನೆಗೆ ಆಧಾರಗಳಾದ ಭಾವನೆಗಳು. ಸಾಮಾನ್ಯವಾಗಿ ದೇವರನ್ನು ನಂಬುವವರು ಆಸ್ತಿಕರೆಂದೂ, ನಂಬದವರು ನಾಸ್ತಿಕರೆಂದೂ ಪಾಶ್ಚಾತ್ಯರು ಭಾವಿಸುವುದುಂಟು. ಭಾರತೀಯ ಸಂಪ್ರದಾಯದ ಪ್ರಕಾರ ಇದು ಶಾಸ್ತ್ರೀಯ ವಿಂಗಡನೆಯಲ್ಲ. ಸಂಪ್ರದಾಯಾನುಸಾರವಾಗಿ ಒಂದು ಮತ ಆಸ್ತಿಕಮತವೆಂದು ಗಣಿಸಲ್ಪಡಬೇಕಾದರೆ ಅದು ಮೂರು ಮುಖ್ಯ ಲಕ್ಷಣಗಳನ್ನು ಪಡೆದಿರಬೇಕು. ಅದು ವೇದಪ್ರಮಾಣವೆಂದೂ ಪುನರ್ಜನ್ಮ ಮತ್ತು ಕರ್ಮಭಾವನೆಗಳು ನಿಜವೆಂದೂ ನಂಬಿರಬೇಕು. ಈ ಲಕ್ಷಣಗಳಿಗನುಸಾರವಾಗಿ ಭಾರತೀಯ ದರ್ಶನಗಳಲ್ಲಿ ಆರನ್ನು ಆಸ್ತಿಕದರ್ಶನಗಳೆಂದು ಪರಿಗಣಿಸಲಾಗಿದೆ: ಪುರ್ವಮೀಮಾಂಸಾ, ಉತ್ತರಮೀಮಾಂಸಾ, ಸಾಂಖ್ಯ, ಯೋಗ, ನ್ಯಾಯ ಮತ್ತು ವೈಶೇಷಿಕ ದರ್ಶನಗಳು. ಬೌದ್ಧ, ಜೈನ ಮತ್ತು ಚಾರ್ವಾಕ ದರ್ಶನಗಳನ್ನು ನಾಸ್ತಿಕ ದರ್ಶನಗಳೆಂದು ಕರೆಯಲಾಗಿದೆ. ಏಕೆಂದರೆ ಇವು ಮೇಲೆ ಹೇಳಿದ ಮೂರು ಲಕ್ಷಣಗಳನ್ನು ಪಡೆದಿಲ್ಲ. ಬೌದ್ಧರು ಮತ್ತು ಜೈನರು ಕರ್ಮ ಮತ್ತು ಪುನರ್ಜನ್ಮ ಭಾವನೆಗಳನ್ನು ಒಪ್ಪಿದರೂ ವೇದವನ್ನು ಪ್ರಮಾಣವಾಗಿ ಗಣಿಸಿರುವುದಿಲ್ಲ. ಚಾರ್ವಾಕ ದರ್ಶನವಾದರೋ ಈ ಮೂರನ್ನೂ ನಿರಾಕರಿಸುತ್ತದೆ. ಈಶ್ವರಭಾವನೆಯನ್ನು ಒಪ್ಪುವುದಿಲ್ಲವಾದ್ದರಿಂದ ಇವು ನಾಸ್ತಿಕ ದರ್ಶನಗಳೆಂಬ ತಪ್ಪು ಭಾವನೆ ಇದೆ. ಹಾಗೆ ಭಾವಿಸಿರುವುದಕ್ಕೆ ಇವು ಈಶ್ವರಭಾವನೆಯನ್ನು ನಿರಾಕರಿಸಿರುವುದು ಕಾರಣವಲ್ಲ. ಏಕೆಂದರೆ ಈಶ್ವರಭಾವನೆ ಅಸಿದ್ಧವೆಂದು ಹೇಳುವ ಸಾಂಖ್ಯದರ್ಶನವನ್ನು ಸಾಂಪ್ರದಾಯಿಕವಾಗಿ ಆಸ್ತಿಕದರ್ಶನವೆಂದು ಭಾವಿಸಲಾಗಿದೆ. ವೇದಪ್ರಾಮಾಣ್ಯ, ಕರ್ಮ ಮತ್ತು ಪುನರ್ಜನ್ಮಗಳಲ್ಲಿ ನಂಬಿಕೆ-ಇವೇ ಆಸ್ತಿಕತೆಯ ಮೂರು ಅಗತ್ಯ ಲಕ್ಷಣಗಳು. ಇವುಗಳಲ್ಲಿ ಯಾವುದೊಂದನ್ನಾ ದರೂ ಒಪ್ಪದಿದ್ದಲ್ಲಿ, ಆ ದರ್ಶನ ನಾಸ್ತಿಕ ದರ್ಶನವೆಂದು ಗಣಿಸುವುದು ಸಂಪ್ರದಾಯ.