ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಸ್ಪಿರಿನ್

ವಿಕಿಸೋರ್ಸ್ದಿಂದ

ತಲೆನೋವಿನ ಮದ್ದಾಗಿ ಹರ್ಮನ್ ಡ್ರೀಸರ್ (1893) ಜಾರಿಗೆ ತಂದ ಅಸಿಟೈಲ್ ಸ್ಯಾಲಿಸಿಕಾಮ್ಲದ ವ್ಯಾಪಾರ ನಾಮ. ಸ್ಯಾಲಿಸಿಕಾಮ್ಲದ ಮೇಲಿನ ಅಸಿಟಿಕ್ ಆನ್ಹೈಡ್ರೈಡಿನ ರಸಾಯನ ವರ್ತನೆಯಿಂದ ತಯಾರಾಗುವ, ಹರಳಂತಿರುವ, ನೀರಲ್ಲಿ ಸುಲಭವಾಗಿ ವಿಲೀನವಾಗದ, ಬಿಳಿಯ ಪುಡಿ. ತಲೆನೋವಿಗಾಗಿ ಬಲು ಸಾಮಾನ್ಯ ಬಳಕೆಯಲ್ಲಿರುವ ಮನೆಮದ್ದು. ನುಂಗಿದ ಕೂಡಲೇ ರಕ್ತಗತವಾಗಿ ಪರಿಣಾಮಕಾರಿಯಾಗು ವುದು. ಕೇವಲ ಮನಸ್ಸಿನ ಮೇಲೆ ಪರಿಣಾಮಕಾರಿಯಾಗುವ ತಣಿಕವಾಗಿ (ಪ್ಲಸಿಬೊ) ಇರಬಹುದಾದರೂ ಜ್ವರ, ತಲೆನೋವಿಂದ ನರಳುತ್ತಿರುವ ರೋಗಿಯಲ್ಲಿ, ಜ್ವರದ ಮುಂಚಿನ ಮೈ ಕೈ ಕಾಲುಗಳ ನೋವುಗಳನ್ನು ಹೋಗಲಾಡಿಸಿ ಮೈ ಬೆವರಿಳಿಸಿ ಜ್ವರವಿಳಿಸುವುದರಲ್ಲಿ ಅನುಮಾನವಿಲ್ಲ. ಇದರಿಂದಲೇ ಇದರ ಸೇವನೆಯ ಆನಂತರ ರೋಗಿ ಚಳಿಗೆ ಮೈಯೊಡ್ಡದೆ ಕೆಲಕಾಲ ಬೆಚ್ಚಗಿರಬೇಕು. ಉಳಿದ ಸ್ಯಾಲಿಸಿಲೇಟುಗಳಂತೆ ತೀವ್ರ ಕೀಲುವಾತದ ಜ್ವರದಲ್ಲಿ (ಅಕ್ಯೂಟ್ ರೂಮ್ಯಾಟಿಕ್ ಫೀವರ್) ಕೀಲುಗಳ ನೋವು, ಜ್ವರಗಳನ್ನು ಕಳೆದರೂ ಆಸ್ಪತ್ರೆಬೇನೆಯ ತೊಡಕುಗಳನ್ನು ಮಾತ್ರ ತಗ್ಗಿಸದು. ಗುಂಡಿಗೆಯಲ್ಲೂ ರೋಗ ಹರಡಿಕೊಂಡು ಕವಾಟಗಳನ್ನು ಹಾಳುಗೆಡಹುವುದು ಅಂಥ ಒಂದು ತೊಡಕು. ಪ್ರಪಂಚದಲ್ಲಿ ಟನ್ನುಗಳಗಟ್ಟಲೆ ಆ್ಯಸ್ಪಿರಿನ್ ಖರ್ಚಾಗುತ್ತಿದೆ. ಬಲುಮಂದಿಗೆ ಇದರಿಂದ ತೊಂದರೆ ಕಂಡಿಲ್ಲ. ಆದರೆ ಮತ್ತೆ ಮತ್ತೆ ಅಭ್ಯಾಸವಾಗಿ ನುಂಗುವ, ಹೆಚ್ಚಾಗಿ ಸೇವಿಸುವ ಕೆಲವರಿಗೆ ಒಗ್ಗದೆ ಚರ್ಮದಲ್ಲಿ ತುರುಚೆ,ದದ್ದು, ಮರೆಹಾರಿಕೆಯ (ಅನಫೈಲಾಕ್ಟಿಕ್) ಬೇನೆ ಕಾಣಿಸಿಕೊಳ್ಳಬಹುದು. ತುರುಚೆ,ದದ್ದು (ಅರ್ಟಿಕೇರಿಯ) ಏಳುವವರು ಇದನ್ನು ಸೇವಿಸಬಾರದು. ಆ್ಯಸ್ಪಿರಿನ್ ನುಂಗಿದಾಗ ಜಠರವನ್ನು ಕೆರಳಿಸಬಹುದು. ನೂರಕ್ಕೆ 50-70 ಮಂದಿಯಲ್ಲಿ ಇದರಿಂದ ಹೊರಗಾಣದೆಯೇ ಒಳಗೊಳಗೇ ಜಠರದಿಂದ ರಕ್ತ ಸುರಿದು ಮಲದಲ್ಲಿ ರಕ್ತ ಬೀಳುವುದಕ್ಕೂ ರಕ್ತವಾಂತಿಗೂ ಎಡೆಯಾಗಬಹುದು. ಬೇಗನೆ ನುಣ್ಣಗೆ ಪುಡಿಯಾಗಿ ಚೆನ್ನಾಗಿ ಕರಗುವಂತೆ ಹೆಚ್ಚು ನೀರಿನೊಂದಿಗೆ ನುಂಗಿದರೆ ಈ ತೊಂದರೆ ತಗ್ಗುವುದು. ಮುಟ್ಟಾಗುವವರಲ್ಲಿ ಇದರಿಂದ ಇನ್ನಷ್ಟು ರಕ್ತ ಕೊರೆಯಾಗ ಬಹುದು. ಹೊಟ್ಟೆ ಹುಣ್ಣಾಗಿರುವವರು ಇದನ್ನು ಬಳಸದಿರುವುದು ಒಳ್ಳೆಯದು. ಇಂಥವರಿಗಾಗಿ, ಕರಗುವ ಆ್ಯಸ್ಪಿರಿನ್ ಇದೆ. ಇದರಲ್ಲಿ ಆ್ಯಸ್ಪಿರಿನ್ನಿನೊಂದಿಗೆ ಸೀಮೆಸುಣ್ಣವೂ ಸಿಟ್ರಿಕಾಮ್ಲವೂ (ಸಿಟ್ರಿಕ್ ಆ್ಯಸಿಡ್) ಸೇರಿವೆ. ಇದನ್ನು ನುಂಗಿದ ಮೇಲೆ, ಕೆರಳಿಸದ ಮೆಲುಪಿನ ಸುಣ್ಣದ ಅ್ಯಸ್ಪಿರಿನ್ ಆಗುತ್ತದೆ. ಮಿತಿಮೀರಿ ಸೇವಿಸಿದರೆ, ಕಿವಿಯಲ್ಲಿ ಗುಂಯ್ಗುಡಿಕೆ, ತಲೆನೋವು, ತಲೆದಿಪ್ಪಟೆ, ಕಣ್ಣುಮಂಜು, ತಬ್ಬಿಬ್ಬು, ಓಕರಿಕೆ, ವಾಂತಿ, ಭೇದಿಗಳಾಗುತ್ತವೆ. ಇದೇ ಸ್ಯಾಲಿಸಿಲೇಟುವಿಷತೆ (ಸ್ಯಾಲಿಸಿಲಿಸಂ).