ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಹಾರ ಮತ್ತು ಕೃಷಿ ಸಂಸ್ಥೆ

ವಿಕಿಸೋರ್ಸ್ದಿಂದ

ವಿಶ್ವಸಂಸ್ಥೆಯೊಂದಿಗೆ ಸಂಯೋಜಿತವಾದ ವಿಶೇಷ ಸಂಸ್ಥೆಗಳಲ್ಲೊಂದು (ಫುಡ್ ಅಂಡ್ ಅಗ್ರಿಕಲ್ಚರ್ ಆರ್ಗನೈಸೇಷನ್; ಎಫ್.ಎ.ಒ.) ದ್ವಿತೀಯ ಮಹಾಯುದ್ಧಾನಂತರದಲ್ಲಿ ಎಂದರೆ 1956 ಅಕ್ಟೋಬರ್ 16ರಂದು ಸ್ಥಾಪಿತವಾದ ಇದು ವಿಶ್ವಸಂಸ್ಥೆ ಜನಿಸುವುದಕ್ಕೆ 8 ದಿನ ಮುಂಚೆ ಹುಟ್ಟಿತು. ಹಸಿವಿನ ನಿವಾರಣೆಯೇ ಈ ಸಂಸ್ಥೆಯ ವಿಶೇಷ ಸಮಸ್ಯೆ. ವರ್ಜಿನಿಯದ ಹಾಟ್ಸ್ಪ್ರಿಂಗ್ ಎಂಬಲ್ಲಿ ಹಲವು ರಾಷ್ಟ್ರಗಳ ಪ್ರತಿನಿಧಿಗಳ ಸಮಾವೇಶದಲ್ಲಿ ಜನ್ಮತಳೆದ ಈ ಸಂಸ್ಥೆಗೆ ಅದರದೇ ಆದ ನಿಬಂಧನೆಗಳೂ ಸದಸ್ಯ ಸಂಪತ್ತಿಯೂ ಉಂಟು. ಆಹಾರ ಮತ್ತು ಕೃಷಿ ಸಂಸ್ಥೆಯ ಎಲ್ಲ ಸದಸ್ಯರೂ ವಿಶ್ವಸಂಸ್ಥೆಗೆ ಸೇರಿದವರಲ್ಲ. ಇದಕ್ಕೆ ಸದಸ್ಯರು ಕೊಡುವ ವಂತಿಗೆಯ ರೂಪದಲ್ಲಿ ತನ್ನದೇ ಆದ ವರಮಾನವೂ ತನ್ನದೇ ಆದ ನಿಯಂತ್ರಣ ಮಂಡಲಿಯೂ ಉಂಟು. ಈ ಮಂಡಲಿ ಎರಡು ವರ್ಷಕ್ಕೊಮ್ಮೆ ಆಹಾರ ಮತ್ತು ಕೃಷಿಗೆ ಸಂಬಂಧಿಸಿದ ಸಮ್ಮೇಳನಗಳನ್ನು ನಡೆಸುತ್ತದೆ.

ಆಹಾರ ಮತ್ತು ಕೃಷಿ ಸಂಸ್ಥೆಯ ಸ್ಥಾಪನೆಗೆ ಪೂರ್ವದಲ್ಲಿ ಎರಡು ಸಂಸ್ಥೆಗಳು ಈ ಸಂಸ್ಥೆಯ ಕಾರ್ಯ ನಿರ್ವಹಿಸುತ್ತಿದ್ದುವು. ವ್ಯವಸಾಯ ವಸ್ತುಗಳ ಬೆಲೆಗಳಲ್ಲೂ ಬೇಡಿಕೆ ಹಾಗೂ ಸರಬರಾಜುಗಳಲ್ಲೂ ಹಠಾತ್ತನೆ ಸಂಭವಿಸುವ ಏರಿಳಿತಗಳ ಪರಿಣಾಮಗಳಿಂದ ರೈತರನ್ನು ರಕ್ಷಿಸುವುದು 1905ರಲ್ಲಿ ರೋಮಿನಲ್ಲಿ ಸ್ಥಾಪಿತವಾಗಿದ್ದ ಅಂತಾರಾಷ್ಟ್ರೀಯ ಕೃಷಿಸಂಸ್ಥೆಯ ಉದ್ದೇಶವಾಗಿತ್ತು. ಆ ಸಂಸ್ಥೆಯ ಸ್ಥಾನದಲ್ಲಿ ಆಹಾರ ಮತ್ತು ಕೃಷಿ ಸಂಸ್ಥೆ ಸ್ಥಾಪಿತವಾದ್ದರಿಂದ ಅದರ ಕರ್ತವ್ಯ ನಿರ್ವಹಣೆ ಈ ಸಂಸ್ಥೆಯದೇ ಆಯಿತು. ದೇಹಪೋಷಣೆ ಹಾಗೂ ಆರೋಗ್ಯಪಾಲನೆಯ ಸಮಸ್ಯೆಗಳ ಪರಿಹಾರ ಲೀಗ್ ಆಫ್ ನೇಷನ್ಸ್ (ನೋಡಿ) ಸಂಸ್ಥೆಯ ಕರ್ತವ್ಯಗಳಲ್ಲೊಂದಾಗಿತ್ತು. ಈ ಕರ್ತವ್ಯವನ್ನೂ ಆಹಾರ ಮತ್ತು ಕೃಷಿ ಸಂಸ್ಥೆ ವಹಿಸಿಕೊಂಡಿತು. ಆ ಎರಡು ಸಂಸ್ಥೆಗಳು ಮುಂದುವರಿದ ರಾಷ್ಟ್ರಗಳಿಗೆ ಸಂಬಂಧಿಸಿದಂತೆ ಮಾತ್ರವೇ ಈ ಸಮಸ್ಯೆಗಳಿಗೆ ಗಮನ ಹರಿಸುತ್ತಿದ್ದುವು. ಆದರೆ ಆಹಾರ ಮತ್ತು ಕೃಷಿ ಸಂಸ್ಥೆಯ ಸ್ಥಾಪನೆಯಲ್ಲಿ ಹೊಸದಾಗಿ ಸ್ವಾತಂತ್ರ್ಯ ಪಡೆದ ಹಾಗೂ ಅಭಿವೃದ್ಧಿ ಹೊಂದದ ರಾಷ್ಟ್ರಗಳೂ ಆಸಕ್ತಿವಹಿಸಿದ್ದರಿಂದ ಸಹಜವಾಗಿಯೇ ಈ ಸಂಸ್ಥೆಯ ಲಕ್ಷ್ಯ ಇಡೀ ಏಷ್ಯಕ್ಕೇ ವ್ಯಾಪಿಸಿತು.

ದ್ವಿತೀಯ ಮಹಾಯುದ್ಧದ ಫಲವಾಗಿ ಜರ್ಝರಿತವಾದ ಆರ್ಥಿಕ ವ್ಯವಸ್ಥೆಯ ರಾಷ್ಟ್ರಗಳ ಜನಸಮೂಹಗಳ ಆಹಾರ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಈ ಸಂಸ್ಥೆ ಆದ್ಯ ಗಮನ ನೀಡಿತು. ಕ್ರಮೇಣ ಇತರರ ಸಮಸ್ಯೆಗಳನ್ನೂ ಇದು ಪರಿಹರಿಸುವ ಕ್ರಮ ಕೈಕೊಂಡಿತು. ಕೆಲವು ರಾಷ್ಟ್ರಗಳಲ್ಲಿ ಹೆಚ್ಚು ಉತ್ಪನ್ನವೂ ಇನ್ನು ಕೆಲವು ರಾಷ್ಟ್ರಗಳಲ್ಲಿ ಆಹಾರಾಭಾವವೂ ಸಂಭವಿಸುತ್ತಿರುವುದನ್ನು ಲಕ್ಷ್ಯಕ್ಕೆ ತೆಗೆದುಕೊಂಡು ವಿಶ್ವದಲ್ಲಿ ಆಹಾರದ ಉತ್ಪಾದನೆಯನ್ನೂ ವಿತರಣೆಯನ್ನೂ ಸುಧಾರಿಸುವತ್ತ ಇದು ದೃಷ್ಟಿ ಹರಿಸಿತು. ಪ್ರಪಂಚದಲ್ಲಿ ಏರುತ್ತಿರುವ ಜನಸಂಖ್ಯೆಯ ದೃಷ್ಟಿಯಿಂದ ಆಹಾರ ಸಮಸ್ಯೆಯ ಗಾತ್ರವನ್ನೂ ಸ್ವರೂಪವನ್ನು ಅಳೆದು ಅದರ ಪರಿಹಾರಕ್ಕೆ ತೀವ್ರಕ್ರಮ ಕೈಕೊಳ್ಳುವ ಕೆಲಸದಲ್ಲಿ ನಿರತವಾಯಿತು. ಹೆಚ್ಚು ಆಹಾರವನ್ನೂ ಇತರ ಬೆಳೆಗಳನ್ನೂ ಉತ್ಪಾದಿಸುವುದು ಹೇಗೆ? ಸಸ್ಯಗಳಿಗೂ ಪ್ರಾಣಿಗಳಿಗೂ ತಗಲುವ ರೋಗಾದ್ಯುಪದ್ರವಗಳನ್ನು ನಿವಾರಿಸುವುದೆಂತು? ಶೇಖರವಾದ ಆಹಾರ ವಸ್ತುಗಳು ಕೆಡದಂತೆ ಅವನ್ನು ರಕ್ಷಿಸುವ ವಿಧಾನ ಯಾವುದು? ಹೊಲ, ಅರಣ್ಯ ಹಾಗೂ ಮತ್ಸ್ಯಕ್ಷೇತ್ರಗಳ ಉತ್ಪನ್ನದ ಮಟ್ಟವನ್ನಧಿಕಗೊಳಿಸುವುದೆಂತು? ಇತ್ಯಾದಿ ವಿಚಾರವಾಗಿ ರಾಷ್ಟ್ರಗಳಿಗೆ ಈ ಸಂಸ್ಥೆಯ ತಜ್ಞರು ಸಲಹೆ ನೀಡುತ್ತಿದ್ದಾರೆ. ಮುಂದುವರಿದ ರಾಷ್ಟ್ರಗಳಲ್ಲಿ ಕೃಷಿಯ ಹೊಸ ವಿಧಾನಗಳನ್ನು ಕಲಿಯಲು ಸಹಾಯವಾಗುವಂತೆ ನಾನಾ ರಾಷ್ಟ್ರಗಳ ವಿದ್ಯಾರ್ಥಿಗಳಿಗೆ ಈ ಸಂಸ್ಥೆಯಿಂದ ವೇತನಗಳು ದೊರಕುತ್ತವೆ. ವ್ಯವಸಾಯ, ಅರಣ್ಯೋದ್ಯಮ ಹಾಗೂ ಮತ್ಸ್ಯೋದ್ಯಮಗಳಲ್ಲಿ ಉಪಯುಕ್ತವಾಗುವ ಸಾಹಿತ್ಯ ಪ್ರಕಟಣೆಯ ಕಾರ್ಯದಲ್ಲೂ ಈ ಸಂಸ್ಥೆ ಉದ್ಯುಕ್ತವಾಗಿದೆ. ಇದು ವಿಶ್ವ ವ್ಯವಸಾಯ ಪರಿಸ್ಥಿತಿಯನ್ನು ಸರ್ವದಾ ಪರಿಶೀಲಿಸುತ್ತಿದ್ದು ಅದಕ್ಕೆ ಸಂಬಂಧವಾದ ಅಂಕಿಅಂಶಗಳನ್ನೊದಗಿಸುತ್ತದೆ. ಈ ಸಂಸ್ಥೆಯ ಸು.2000 ಪರಿಣತರು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ವ್ಯವಸಾಯಾಭಿವೃದ್ಧಿಯ ವಿಚಾರದಲ್ಲಿ ನೆರವು ನೀಡುತ್ತಿದ್ದಾರೆ. ವಿಶ್ವಬ್ಯಾಂಕೇ ಮುಂತಾದ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ನೆರವಿನಿಂದ ಇದು ಅಭಿವೃದ್ಧಿ ಕಾರ್ಯಗಳಿಗೆ ಬಂಡವಾಳ ಒದಗಿಸುವ ಕೆಲಸದಲ್ಲೂ ನಿರತವಾಗಿದೆ. ಹೊಸ ಹೊಸ ನೆಲವನ್ನು ಕೃಷಿಗೆ ಒಳಪಡಿಸುವ ಕಾರ್ಯದಲ್ಲಿ ಸಹಾಯ ನೀಡುತ್ತಿದೆ. ಇದು 1960ರಲ್ಲಿ ಆರಂಭಿಸಿದ ‘ಹಸಿವಿನಿಂದ ವಿಮೋಚನೆ’ ಎಂಬ ಚಳವಳಿಯ ಮೂಲಕ ಈ ಸಮಸ್ಯೆಯ ಅರಿವು ಜನರಲ್ಲಿ ಮೂಡುವಂತೆ ಮಾಡಿ, ಇದರ ಪರಿಹಾರಕಾರ್ಯದಲ್ಲಿ ಸಾರ್ವಜನಿಕರ ಬೆಂಬಲ ಗಳಿಸುವುದಕ್ಕೂ ಪ್ರಯತ್ನ ನಡೆಸಿದೆ. ಇದರ ಫಲವಾಗಿ ವಿಶ್ವಸಂಸ್ಥೆ ಹಾಗೂ ಆಹಾರ ಮತ್ತು ಕೃಷಿ ಸಂಸ್ಥೆಗಳ ಸಂಯುಕ್ತ ನೇತೃತ್ವದಲ್ಲಿ ಹತ್ತು ಕೋಟಿ ಡಾಲರುಗಳ ಆರಂಭನಿಧಿಯುಳ್ಳ ವಿಶ್ವ ಆಹಾರಯೋಜನೆಯೊಂದು ರೂಪಿತವಾಗಿದೆ.

1951ರಲ್ಲಿ ಈ ಸಂಸ್ಥೆಯ ಪ್ರಧಾನಕಾರ್ಯಾಲಯ ವಾಷಿಂಗ್ಟನ್ನಿನಿಂದ ರೋಮಿಗೆ ವರ್ಗವಾಯಿತು. ಉತ್ತರ ಅಮೆರಿಕಕ್ಕಾಗಿ ಒಂದು ಪ್ರಾದೇಶಿಕ ಕಚೇರಿ ವಾಷಿಂಗ್ಟನ್ನಿನಲ್ಲಿ ಸ್ಥಾಪಿತವಾಯಿತು,. ಕೈರೊ, ಬಾಂಗ್ಕಾಕ್, ನವದೆಹಲಿ, ಸ್ಯಾಂಟಿಯಾಗೊ, ರಯೋಡಿಜನೈರೊ ಮತ್ತು ಮೆಕ್ಸಿಕೊ ನಗರಗಳಲ್ಲೂ ಇದರ ಪ್ರಾದೇಶಿಕ ಕಚೇರಿಗಳ ಸ್ಥಾಪನೆಯಾಯಿತು. ಅರಣ್ಯೋದ್ಯಮಕ್ಕೆ ಸಂಬಂಧಿಸಿದಂತೆ ಜಿನೀವಾದಲ್ಲಿ ಒಂದು ಉಪಕಚೇರಿಯೂ ವಿಶ್ವಸಂಸ್ಥೆಯೊಂದಿಗೆ ಸಂಪರ್ಕ ಹೊಂದಿರುವುದಕ್ಕಾಗಿ ನ್ಯೂಯಾರ್ಕಿನಲ್ಲಿ ಒಂದು ಕಚೇರಿಯೂ ಇವೆ.