ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಹಾರ - ಶುದ್ಧ, ಅಶುದ್ಧ

ವಿಕಿಸೋರ್ಸ್ ಇಂದ
Jump to navigation Jump to search

ಶರೀರದ ಆರೋಗ್ಯಕ್ಕೆ ಯಾವ ಆಹಾರ ಉತ್ತಮ, ಯಾವ ಆಹಾರ ರೋಗಕಾರಕ ಎಂಬುದು ಮನುಷ್ಯನಿಗೆ ಕಾಲಾನುಗತವಾಗಿ ತಿಳಿದು ಬಂದಿರುವ ವಿಷಯ. ಅಲ್ಪಕಾಲದಲ್ಲಿಯೇ ಕೆಟ್ಟುಹೋಗುವ ಆಹಾರ ಪದಾರ್ಥಗಳಿಂದ ಈ ರೀತಿಯ ಹಾನಿಯುಂಟಾಗುವುದು. ಮಾಂಸ, ಹಣ್ಣು ಮತ್ತು ತರಕಾರಿಗಳು ಇದಕ್ಕೆ ಉದಾಹರಣೆ ಆದರೆ, ಈ ಸಮಸ್ಯೆ ಉದ್ಭವಿಸಲು ಕಾರಣವೇನು ? ಭಾವೀ ಉಪಯೋಗದ ದೃಷ್ಟಿಯಿಂದ ಆಹಾರವನ್ನು ಕೂಡಿಟ್ಟಾಗ, ಆಹಾರ ಈ ರೀತಿ ನಂಜಾಗಿ ಅಥವಾ ರೋಗಕಾರಕ ಸೂಕ್ಷ್ಮಜೀವಿಗಳಿಗೆ ಮಧ್ಯವರ್ತಿಯಾಗಿ ಪರಿಣಮಿಸುವುದು. ಕೆಲವು ಆಹಾರ ಪದಾರ್ಥಗಳು ಹಳಸಿದರೆ, ಅವುಗಳಲ್ಲಿ ಸೂಕ್ಷ್ಮಜೀವಿಗಳು ವೃದ್ಧಿಯಾಗುವುವು. ಇಂಥ ಆಹಾರವನ್ನು ಸೇವಿಸಿದಾಗ ಸೂಕ್ಷ್ಮಜೀವಿಗಳ ದೆಸೆಯಿಂದ ಮತ್ತು ಅವು ಉತ್ಪತ್ತಿ ಮಾಡುವ ನಂಜುವಸ್ತುವಿನಿಂದ ಶರೀರಕ್ಕೆ ಹಾನಿಯುಂಟಾಗುವುದೆಂದು ವೈಜ್ಞಾನಿಕ ಪರಿಶೀಲನೆಗಳಿಂದ ಖಚಿತವಾಗಿದೆ. ಈ ಸಮಸ್ಯೆಯಲ್ಲಿ ಆಹಾರ ಪದಾರ್ಥಗಳ ಪರೀಕ್ಷೆ, ನಿರ್ಮಲವಾತಾವರಣ, ಪಾತ್ರೆ, ಯಂತ್ರಸಾಧನ ಮುಂತಾದುವನ್ನು ತೊಳೆದು ಶುಚಿಯಾಗಿಡುವುದು-ಇವುಗಳನ್ನು ಮುಖ್ಯವಾಗಿ ಪರಿಗಣಿಸಬೇಕಾಗುತ್ತದೆ. ಆಧುನಿಕ ಜೀವನದಲ್ಲಿ ಹಾನಿಕಾರಕ ಆಹಾರಗಳ ಸಮಸ್ಯೆ ಒಂದಲ್ಲ ಒಂದು ವಿಧದಲ್ಲಿ ನಮ್ಮನ್ನು ಕಾಡುತ್ತಿದೆ. ಆಹಾರ ಪದಾರ್ಥಗಳ ಸಾಗಾಣಿಕೆ, ಅವುಗಳ ತಯಾರಿಕೆ-ಈ ಹಂತಗಳಲ್ಲಿ ಅವು ಅನೇಕ ಕೈಗಳನ್ನು ಹಾಯಬೇಕಾಗುತ್ತದೆ. ಇದರಿಂದ ಆಹಾರ ಪದಾರ್ಥ ಕೆಡುವ ಸಂಭವವಿದೆ. ಪಟ್ಟಣಗಳಲ್ಲಿ ಉಪಾಹಾರ ಹಾಗೂ ಫಲಾಹಾರ ಮಂದಿರಗಳಲ್ಲಿ ಜನ ಆಹಾರ ಪದಾರ್ಥಗಳನ್ನು ಸೇವಿಸುವುದು ಸಾಮಾನ್ಯವಾಗಿದೆ. ಆದರೆ ಇಂಥ ಮಂದಿರಗಳಲ್ಲಿ, ಆಹಾರ ಪದಾರ್ಥಗಳನ್ನು ತಯಾರಿಸುವ ಸ್ಥಳ ಹಾಗೂ ಸಲಕರಣೆಗಳು ಕ್ರಿಮಿರಹಿತವಾಗಿರಬೇಕು. ಜನರು ನಿರ್ದುಷ್ಟವಾದ ಆರೋಗ್ಯಕಟ್ಟಳೆಗಳನ್ನು ಚಾಚೂ ತಪ್ಪದೆ ಪಾಲಿಸುವಂತಿರಬೇಕು. ಆಹಾರ ವಸ್ತುಗಳಲ್ಲಿ ಕೈಯಾಡಿಸುವ ಅನೇಕರ ಕೈಗಳಲ್ಲಿ ಹಲವಾರು ಸೂಕ್ಷ್ಮ ಕ್ರಿಮಿಗಳಿರುವುದು ವ್ಯಕ್ತವಾಗಿದೆ. ಹೀಗೆ, ಕಲ್ಮಷ ಎನ್ನುವುದು ಕಣ್ಣಿಗೆ ಕಾಣುವ ಕೊಳೆಗೆ ಮಾತ್ರವೇ ಅನ್ವಯಿಸದೆ, ಸಾಮಾನ್ಯದೃಷ್ಟಿಗೆ ಅಗೋಚರವಾದ ಸಾವಿರಾರು ಅಷ್ಟೇ ಏಕೆ, ಲಕ್ಷಾಂತರ ಸೂಕ್ಷ್ಮಜೀವಿಗಳಿಗೂ ಸಂಬಂಧಿಸಿದೆ ಎಂದು ತಿಳಿಯಬಹುದು.

ಇತ್ತೀಚಿನ ಪರಿಶೋಧನೆಗಳಿಂದ ಸೂಕ್ಷ್ಮಜೀವಿಗಳ ಬಗೆಗೆ ಇನ್ನೂ ಹೆಚ್ಚು ವಿವರಗಳು ದೊರೆತಿವೆ. ಅವು ಹರಡುವ ರೀತಿ ಆಹಾರ ಪದಾರ್ಥಗಳ ಮೇಲೆ ಅವುಗಳ ಧಾಳಿ-ಈ ವಿವರಗಳನ್ನು ತಿಳಿಯಲು ಸಾಧ್ಯವಾಗಿದೆ. ಈ ಜೀವಿಗಳು ಮೂಗು ನಾಲಗೆ ಮತ್ತು ಮಲಾಶಯಗಳಲ್ಲಿ ಮನೆ ಮಾಡಿದ್ದರೆ, ಅಂಥ ಮನುಷ್ಯರು ಅವುಗಳ ಸಂಗ್ರಹಾಲಯ ವಾಗುವುದರಲ್ಲಿ ಸಂದೇಹವಿಲ್ಲ.

ಸಾಮಾನ್ಯವಾಗಿ ಆರೋಗ್ಯವಂತರ ಮೂಗಿನಲ್ಲಿ ಕೂಡ ಸ್ಟಾಫಿಲೋಕಾಕೈ ಎಂಬ ಹಾನಿಕಾರಕ ಸೂಕ್ಷ್ಮಜೀವಿಗಳು ಇರುತ್ತವೆ. ಮೂಗನ್ನು ಮುಟ್ಟಿದಾಗ, ಅದರಲ್ಲೂ ನೆಗಡಿಯಿಂದ ನರಳುವ ಕಾಲದಲ್ಲಿ, ಇವು ಕೈಯನ್ನು ಸೇರುವ ಅವಕಾಶವಿದೆ. ಚರ್ಮದ ಒಳಪದರ ಮತ್ತು ಕೂದಲಿನ ಗ್ರಂಥಿಗಳಲ್ಲಿ ಇವು ವಾಸಿಸಬಲ್ಲವು. ಅಲ್ಲಿಂದ ಆಹಾರವನ್ನು ಸುಲಭವಾಗಿ ಸೇರಲು ಹೆಚ್ಚು ತಡೆಯಿರುವುದಿಲ್ಲ. ಇಂಥ ಸೂಕ್ಷ್ಮಜೀವಿಗಳನ್ನು ಅತಿನೇರಳೆ ಕಿರಣಗಳಿಂದ ನಾಶಗೊಳಿಸಬಹುದು. ಆದರೆ ಇದು ಎಷ್ಟರಮಟ್ಟಿಗೆ ಫಲಕಾರಿಯಾಗುತ್ತದೆಂದು ಹೇಳುವುದು ಸಾಧ್ಯವಿಲ್ಲ.

ಸಾಲ್ಮೊನೆಲ್ಲ ಎಂಬ ಸೂಕ್ಷ್ಮಜೀವಿಗಳ ಗುಂಪು ಮನುಷ್ಯ ಮತ್ತು ಇತರ ಪ್ರಾಣಿಗಳ ಕರುಳಿನಲ್ಲಿ ಮನೆಮಾಡಿಕೊಳ್ಳುತ್ತವೆ. ಇವುಗಳಿಂದ ಓಕರಿಕೆ, ದುರ್ಗಂಧಯುಕ್ತ ಮಲ, ಹೊಟ್ಟೆನೋವು, ಬಾಯಾರಿಕೆ ಮುಂತಾದ ಪರಿಸ್ಥಿತಿಗಳು ತಲೆದೋರುತ್ತವೆ. ಈ ಜೀವಿಗಳು ಆಮಶಂಕೆ, ವಿಷಮಶೀತಜ್ವರಗಳ ಕ್ರಿಮಿಗಳೊಂದಿಗೆ ಮಲದಲ್ಲಿ ಹೊರಬೀಳುತ್ತವೆ. ಮುಖ್ಯವಾಗಿ, ಶುದ್ಧ ಆಹಾರವನ್ನು ಪಡೆಯಲು, ಈ ಮುಂದೆ ಕೊಟ್ಟಿರುವ ಅಂಶಗಳನ್ನು ನೆನಪಿನಲ್ಲಿಡಬೇಕು.

  1. ಆಹಾರದಲ್ಲಿ ನಂಜನ್ನುಂಟುಮಾಡುವ ಸೂಕ್ಷ್ಮಜೀವಿಗಳಿಗೆ ಮನುಷ್ಯನ ಶರೀರ ಸ್ವಾಭಾವಿಕ ಆವಾಸಸ್ಥಾನ.
  2. ಆಹಾರ ವಸ್ತುಗಳನ್ನು ಕೂಡಿಡುವ ಜಾಗ ಮತ್ತು ಅಡುಗೆಮನೆ ಶುಭ್ರವಾಗಿರಬೇಕು. ಗಾಳಿ ಹಾಗೂ ಬೆಳಕು ಧಾರಾಳವಾಗಿ ಬರುವಂತಿರಬೇಕು. ಪಾತ್ರೆಗಳನ್ನು ಚೊಕ್ಕಟವಾಗಿಡಬೇಕು.
  3. ಅಡುಗೆಮಾಡುವವರು ಆರೋಗ್ಯ ವಿಷಯವನ್ನೂ ಆಹಾರ ವಸ್ತುಗಳನ್ನು ನಿರ್ಮಲವಾಗಿ ಬಳಸುವ ಬಗೆಗಳನ್ನೂ ಅರಿತಿರಬೇಕು.

ಹಲವುಬಾರಿ ಕಲಬೆರಕೆಯಾದ ಆಹಾರ ಪದಾರ್ಥಗಳ ಸೇವನೆಯಿಂದ ಹಾನಿ ಸಂಭವಿಸುವುದೂ ಉಂಟು (ನೋಡಿ- ಆಹಾರದ ಕೀಳ್ಬೆರಕೆ). ಅನೇಕರು ಇದರಿಂದ ಮರಣಕ್ಕೆ ಕೂಡ ತುತ್ತಾಗುವರು. ಕಲಬೆರಕೆಯಿಂದ ಆಹಾರ ಪದಾರ್ಥದ ರೂಪ, ಬಣ್ಣ ಮತ್ತು ವಿಶಿಷ್ಟಗುಣಗಳಲ್ಲಿ ಬದಲಾವಣೆಗಳಾಗಬಹುದು. ಆಹಾರ ಪದಾರ್ಥದ ಪೌಷ್ಟಿಕ ಗುಣ ಸ್ವಲ್ಪಮಟ್ಟಿಗೆ ಅಥವಾ ಬಹಳವಾಗಿಯೇ ನಷ್ಟವಾಗಬಹುದು. ಆಹಾರ ಪದಾರ್ಥಗಳನ್ನು ಕೇವಲ ಲಾಭದ ದೃಷ್ಟಿಯಿಂದ ಮಾರಿದಾಗ ಅಥವಾ ಕೊಂಡಾಗ ಅದು ಬಹುಮಟ್ಟಿಗೆ ಕೆಳದರ್ಜೆಯದಾಗಿರುತ್ತದೆ. ಈ ರೀತಿಯ ಕಲಬೆರಕೆಯಲ್ಲಿ ಹಲವಾರು ವಿಧಗಳಿವೆ. ಮುಖ್ಯವಾಗಿ ಪದಾರ್ಥದ ಪ್ರಮಾಣವನ್ನು ಹೆಚ್ಚಿಸುವುದಕ್ಕೋಸ್ಕರ ಅಥವಾ ಕೀಳುದರ್ಜೆಯ ಪದಾರ್ಥವನ್ನು ಹೆಚ್ಚು ಆಕರ್ಷಣೀಯವಾಗಿ ಮಾಡುವುದಕ್ಕೆಂದು ಕಲಬೆರಕೆ ಮಾಡುತ್ತಾರೆ. ಸಾಮಾನ್ಯಜನತೆ ಇದನ್ನು ವಿವೇಚಿಸಿ ತಿಳಿಯುವುದು ಅಷ್ಟು ಸುಲಭವಲ್ಲ. ಇದಕ್ಕಾಗಿ ಸರ್ಕಾರದವರು ಆಯಾ ಪ್ರಾದೇಶಿಕ ಆಹಾರ ಪದಾರ್ಥಗಳಿಗನುಗುಣವಾಗಿ ಕಾಯಿದೆಗಳನ್ನು ಕೂಡ ಮಾಡಿದ್ದಾರೆ. ಉದಾಹರಣೆಗೆ, ಕಾಫಿಪುಡಿಗೆ ಸಾಮಾನ್ಯವಾಗಿ ಹುಣಿಸೇಬೀಜ ಅಥವಾ ಖರ್ಜೂರ ಬೀಜದ ಪುಡಿಗಳನ್ನು ಬೆರೆಸುತ್ತಾರೆ. ಒಳ್ಳೆಯ ತುಪ್ಪದೊಡನೆ ವನಸ್ಪತಿಯನ್ನು ಬೆರೆಸಿ ಮಾರುವುದನ್ನು ತಡೆಗಟ್ಟುವುದು ಒಂದು ಸುಪರಿಚಿತ ಸಮಸ್ಯೆಯಾಗಿದೆ.