ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇಂಗ್ಲಿಷ್ ಭಾಷೆ

ವಿಕಿಸೋರ್ಸ್ದಿಂದ

ಇಂಗ್ಲೆಂಡಿನ ಜನರ ನುಡಿ. ಕಾಮನ್ವೆಲ್ತ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಇದನ್ನು ಮಾತೃಭಾಷೆಯನ್ನಾಗುಳ್ಳ ಜನರ ಸಂಖ್ಯೆ 25 ದಶಲಕ್ಷ. ಆಫ್ರಿಕ, ಭಾರತ ಮತ್ತು ಜಪಾನುಗಳಂಥ ಇತರ ದೇಶಗಳಲ್ಲಿ ಎರಡನೆಯ ಭಾಷೆಯಾಗಿ ಇಂಗ್ಲಿಷನ್ನು ಬಳಸುವವರ ಸಂಖ್ಯೆಯೂ ಅಷ್ಟೇಇದೆ. ಈ ದೃಷ್ಟಿಯಿಂದ ಚೀನಿ ಭಾಷೆಗೆ ಪ್ರಥಮ ಸ್ಥಾನವಾದರೆ ಇಂಗ್ಲಿಷಿಗೆ ದ್ವಿತೀಯ ಸ್ಥಾನ (500 ದಶಲಕ್ಷ). 873 ಮಿಲಿಯನ್ ಇಂಡೊ-ಯುರೋಪಿಯನ್ ವರ್ಗಕ್ಕೆ ಸೇರಿದ ಭಾಷೆಗಳಲ್ಲಿ ಒಂದು. ಇದನ್ನು ಮೊದಲ ಭಾಷೆಯಾಗಿ 309-400 ಮಿಲಿಯನ್ ಜನ ಮಾತನಾಡುತ್ತಾರೆ, ದ್ವಿತೀಯ ಭಾಷೆಯಾಗಿ 199 ಮಿಲಿಯನ್ - 1.4 ಬಿಲಿಯನ್ ಜನ ಮಾತನಾಡುತ್ತಾರೆ. ಒಟ್ಟಾರೆ 500 ಮಿಲಿಯನ್ನಿಂದ 1.8 ಬಿಲಿಯನ್. ಇದು 53 ದೇಶಗಳಲ್ಲಿ ಅಧಿಕೃತ ಭಾಷೆಯಾಗಿದೆ. ಆ ವರ್ಗದ ಭಾಷೆಗಳನ್ನು ಪೌರಸ್ತ್ಯ, ಪಾಶ್ಚಾತ್ಯ ಎಂದು ಎರಡು ಪಂಗಡಗಳಾಗಿ ವಿಂಗಡಿಸುವುದು ವಾಡಿಕೆ. ನೂರು ಎಂದು ಅರ್ಥ ಕೊಡುವ ಸಂಸ್ಕೃತದ ಶತಂ ಮತ್ತು ಲ್ಯಾಟಿನಿನ ಸೆಂಟಂ ಆಧಾರದ ಮೇಲೆ ಅವಕ್ಕೆ ಶತಂ ಪಂಗಡವೆಂದೂ ಸೆಂಟಂ ಪಂಗಡವೆಂದೂ ಹೆಸರು ಬಂದಿದೆ. ಶತಂ ಪಂಗಡದಲ್ಲಿ ಸಂಸ್ಕೃತ ಮತ್ತು ಅವುಗಳಿಂದ ಆಧುನಿಕ ಭಾರತೀಯ ಭಾಷೆಗಳೂ ಇರಾನೀ ಮತ್ತು ಅದರ ಉಪಯೋಗಗಳೂ ಸೇರಿವೆ. ಸೆಂಟಂ ಪಂಗಡಗಳಲ್ಲಿ ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳೂ ಟ್ಯೂಟಾನಿಕ್ ಅಥವಾ ಜರ್ಮನ್ ಭಾಷೆಗಳೂ ಅವುಗಳಿಂದ ಉಗಮವಾಗಿ ಆಧುನಿಕ ಐರೋಪ್ಯ ಭಾಷೆಗಳೂ ಸೇರಿವೆ. ಇಂಗ್ಲಿಷ್ ಭಾಷೆ ಟ್ಯೂಟಾನಿಕ್ ಒಳಪಂಗಡದ ಶಾಖೆಗಳಲ್ಲಿ ಒಂದು. ಇಂಡೋ-ಯುರೋಪಿಯನ್ ಭಾಷೆಗಳ ಲಕ್ಷಣಗಳಲ್ಲಿ ಲಿಂಗಭೇದ, ಸಂಖ್ಯಾಭೇದ, ಮೊದಲಾದವನ್ನು ಸೂಚಿಸಲು ಮೂಲಪದಗಳಿಗೆ ಬೇರೆ ಬೇರೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸುವುದೂ ಒಂದು (ವಿಭಕ್ತಿಗೆ ಇಂಗ್ಲಿಷ್ ಪದ ಇನ್ಫ್ಲೆಕ್ಷನ್ ಎಂದು. ಆದ್ದರಿಂದ ಭಾಷೆಗಳು ಇನ್ಫ್ಲೆಕ್ಷನಲ್) ಪದಗಳ ಉಚ್ಚಾರಣೆಯಲ್ಲೂ ಈ ಭಾಷೆಗಳಲ್ಲಿ ಸಾದೃಶ್ಯ ಕಂಡುಬರುತ್ತದೆ. ಉದಾಹರಣೆಗೆ, ಸಂಸ್ಕೃತದ ಪಿತರ್ ಲ್ಯಾಟಿನ್ನಿನಲ್ಲಿ, ಪೇಟರ್, ಜರ್ಮನ್ ಭಾಷೆಯಲ್ಲಿ ವೇಟರ್, ಡಚ್ ಭಾಷೆಯಲ್ಲಿ ಇಂಗ್ಲಿಷಿನಲ್ಲಿ ಫಾದರ್ ಆಗಿರುತ್ತದೆ. ಹಾಗೆಯೇ ಮಾತರ್, ಮೇಟರ್, ಮೀಟರ್, ಮದರ್ ಎಂದೂ ಭ್ರಾತರ್, ಫ್ರೇಟರ್, ಬ್ರದರ್ ಎಂದೂ ಸಪ್ತ, ಸೆಫ್ಟೆಮ್, ಜಿ಼ೕಬೆನ್, ಜೆ಼ವೆನ್, ಸೆವೆನ್ ಎಂದೂ ಆಗುತ್ತವೆ. ಪದಗಳಿಗೆ ಭಾಷಾಶಾಸ್ತ್ರದಲ್ಲಿ ಜ್ನಾತಿ ಪದಗಳೆಂದು ಹೆಸರು ಬಂದಿದೆ. ಇಂಥ ಒಂದು ಮೂಲಪದದಿಂದ ಬಂದಿರಬೇಕು ಎಂಬುದು ಆ ಶಾಸ್ತ್ರದ ಸಿದ್ಧಾಂತ. ಇದಲ್ಲದೆ ಟ್ಯೂಟಾನಿಕ್ ಗುಂಪಿಗೆ ಸೇರಿದ ಭಾಷೆಗಳು ತಮ್ಮವೇ ಆದ ಸಾಮಾನ್ಯ ಲಕ್ಷಣಗಳನ್ನು ಹೊಂದಿವೆ. ಅವುಗಳಲ್ಲಿ ಭೂತ-ವರ್ತಮಾನ, ಏಕವಚನ-ಬಹುವಚನ, ಕರ್ತರಿಪ್ರಯೋಗ-ಕರ್ಮಣಿ ಪ್ರಯೋಗ-ಹೀಗೆ ಸರಳ ಎರಡೆರಡೇ ವಿಭಾಗಗಳಿರುವುದನ್ನು ಗಮನಿಸಬಹುದು. ಒಂದು ಪದದ ಮಧ್ಯದಲ್ಲಿ ಬರುವ ಸ್ವರವನ್ನು ಬದಲಾಯಿಸುವುದರಿಂದ ಭೂತಕಾಲವನ್ನು ಮಾಡಬಹುದಾದುದು ಇವುಗಳ ಇನ್ನೊಂದು ವೈಶಿಷ್ಟ್ಯ (ಉದಾ: ಸಿಂಗ್, ಸ್ಯಾಂಗ್). ಹೀಗೆ ಬದಲಾಗುವ ಪದಗಳಿಗೆ ಸ್ಟ್ರಾಂಗ್ ವರ್ಬುಗಳೆಂದೂ ಜ, eಜ ಸೇರಿಸಿ ಭೂತಕಾಲವಾಗುವ ವೀಕ್ ವರ್ಬುಗಳೆಂದೂ ಹೆಸರು. ಗುಣವಾಚಕಗಳು ವಾಕ್ಯದಲ್ಲಿ ಕ್ರಿಯಾಪದದ ಅನಂತರ ಬರಬಹುದು, ನಾಮವಾಚಕದ ಹಿಂದೆ ಬರಬಹುದು. ಉದಾ.ದಟ್ ಬಾಯ್ ಈಸ್ ಗುಡ್; ದಟ್ ಈಸ್ ಎ ಗುಡ್ ಬಾಯ್. ಇಲ್ಲಿ ಎರಡು ಪ್ರಯೋಗಳಲ್ಲೂ (ಗುಡ್) ಎಂಬ ಪದದ ರೂಪ ಇದ್ದಂತೆಯೇ ಇರುತ್ತದೆ. ಇತರರ ಭಾಷೆಗಳಲ್ಲಿ ಅದು ಬದಲಾಗುತ್ತದೆ. ಇದೇ ವಾಕ್ಯಗಳ ಕನ್ನಡ ರೂಪ-ಆ ಹುಡುಗ ಒಳ್ಳೆಯವನು; ಅವನು ಒಳ್ಳೆಯ ಹುಡುಗ ಎಂದಾಗುತ್ತವೆ. ಮೂರನೆಯದಾಗಿ ಟ್ಯೂಟಾನಿಕ್ ಭಾಷೆಗಳಲ್ಲಿ ಪದಗಳನ್ನು ಉಚ್ಚರಿಸುವಾಗ ಅವುಗಳ ಒಂದು ಭಾಗದ ಮೇಲೆ ಒತ್ತಡ ಬೀಳುತ್ತದೆ. ಈ ಒತ್ತಡ ನಿರ್ದಿಷ್ಟವಾಗಿದ್ದು ಬದಲಾವಣೆಯಾಗದು (ಇತರ ಭಾಷೆಗಳಲ್ಲಿ ಈ ಒತ್ತಡ ಇಡೀ ಪದದ ಎಲ್ಲ ಭಾಗಗಳ ಮೇಲೂ ಸಮನಾಗಿ ಹರಡಿರುತ್ತದೆ ಅಥವಾ ಕೊನೆಕೊನೆಗೆ ಬರುತ್ತದೆ). ನಾಲ್ಕನೆಯದಾಗಿ, ಟ್ಯೂಟಾನಿಕ್ ಭಾಷೆಗಳಲ್ಲಿ ಇಂಡೋ-ಯುರೋಪಿಯನ್ ಭಾಷೆಯ ವ್ಯಂಜನಗಳು ವ್ಯತ್ಯಾಸ ಹೊಂದಿರುತ್ತವೆ. ಭ-ಬ, ಪ-ಫ, ಘ-ಗ, ಕ-ಹ-ಹೇಗೆ. ಇದರ ಫಲವಾಗಿ ಸಂಸ್ಕೃತದ ಪದಂ ಕ್ರಮೇಣ ಇಂಗ್ಲಿಷಿನ ಫುಟ್, ಸಂಸ್ಕೃತದ ದ್ವಯ ಇಂಗ್ಲಿಷಿನ ಟೂ, ಸಂಸ್ಕೃತದ ದಂತ ಇಂಗ್ಲಿಷಿನ ಟೂತ್ ಆಗುತ್ತದೆ. ಈ ಬದಲಾವಣೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ವಿವರಿಸಿದವರು ಜರ್ಮನಿಯ ಗ್ರಿಮ್ ಮತ್ತು ಡೆನ್ಮಾರ್ಕಿನ ವೆರ್ನರ್. ಈ ವಿಚಾರದಲ್ಲಿ ಅವರು ರೂಪಿಸಿದ ನಿಯಮಗಳು ಗ್ರಿಮ್ಸ್ ಲಾ, ವೆರ್ನರ್ಸ್ ಲಾ ಎಂದು ಪ್ರಸಿದ್ಧವಾಗಿವೆ. ಹೀಗೆ ಟ್ಯೂಟಾನಿಕ್ ಭಾಷೆಗಳೆಲ್ಲವುಗಳ ಗುಣಗಳನ್ನು ಪಡೆದಿರುವುದಲ್ಲದೆ ಇಂಗ್ಲಿಷ್ ತನ್ನದೇ ಆದ ಕೆಲವು ವಿಶೇಷ ಲಕ್ಷಣಗಳನ್ನು ಪಡೆದಿದೆ. ಕೆಲವು ಶತಮಾನಗಳಲ್ಲೇ ಇಂಗ್ಲಿಷ್ ಪದಗಳ ಉಚ್ಚಾರಣೆಯಲ್ಲಿ ಬದಲಾವಣೆಯುಂಟಾಗಿ ಅವುಗಳ ಮೇಲೆ ಬೀಳುವ ಒತ್ತಡ ಪದಗಳ ಅಂತ್ಯಭಾಗದಿಂದ ಆದಿಭಾಗಕ್ಕೆ ಸರಿದುದು ಇವುಗಳಲ್ಲಿ ಒಂದು. ಹದಿನೈದನೆಯ ಶತಮಾನದಲ್ಲಿ ಇಂಗ್ಲಿಷ್ ಪದಗಳು ವಿಭಕ್ತಿ ಪ್ರತ್ಯಯಗಳನ್ನು ಕಳೆದುಕೊಂಡವು. ಇದರ ಫಲವಾಗಿ ವಾಕ್ಯದಲ್ಲಿ ಒಂದು ಪದಕ್ಕೂ ಇನ್ನೊಂದಕ್ಕೂ ಇರುವ ಸಂಬಂಧದ ಸೂಚನೆ ವಾಕ್ಯದಲ್ಲಿ ಆಯಾ ಪದದ ಸ್ಥಾನವನ್ನು ಅವಲಂಬಿಸಿರುತ್ತದೆಯೇ ಹೊರತು ಪದದ ಸ್ವರೂಪವನ್ನಲ್ಲ. ಹೀಗೆ ವಿಭಕ್ತಿ ಪ್ರತ್ಯಯಗಳಿಲ್ಲದ ಕಾರಣ ಇಂಗ್ಲಿಷ್ ವಾಕ್ಯಗಳಲ್ಲಿ ಪದಗಳ ಜೋಡಣೆ ಒಂದು ನಿರ್ದಿಷ್ಟ ಕ್ರಮವನ್ನು ಅನುಸರಿಸಿಯೇ ಬರಬೇಕಾಗುತ್ತದೆ. (ಕರ್ತೃ, ಕ್ರಿಯೆ, ಕರ್ಮ-ಹೀಗೆ). ಈ ಕ್ರಮದಲ್ಲಿ ವ್ಯತ್ಯಾಸವಾದರೆ ಅರ್ಥದಲ್ಲೇ ವ್ಯತ್ಯಾಸವಾಗಬಹುದು. ಪದವನ್ನು ವಾಕ್ಯದಿಂದ ಪ್ರತ್ಯೇಕಿಸಿದರೆ ಅದು ಕರ್ತೃವೋ ಕರ್ಮಪದವೋ ಹೇಳಲಾಗುವುದಿಲ್ಲ. (ಕನ್ನಡದಲ್ಲಿ ಇದು ಬಹು ಸುಲಭ). ವಿಭಕ್ತಿ ಪ್ರತ್ಯಯಗಳಿಲ್ಲದೆ ಹೋಗಿರುವುದರಿಂದ ಕೆಲವು ವೇಳೆ ನೇರವಾಗಿ ಹೇಳುವುದನ್ನು ಬಳಸಿಕೊಂಡು ಹೇಳಬೇಕಾಗುತ್ತದೆ. ಉದಾಹರಣೆಗೆ, ಷಷ್ಠೀವಿಭಕ್ತಿಯಲ್ಲಿ ಆಫ್ ಪದದ ಪ್ರಯೋಗ ಬಳಕೆಗೆ ಬಂದಿದೆ. ಕಿಂಗ್ಸ್ ಪ್ಯಾಲೆಸ್ ಎಂಬ ಮಾತನ್ನು ಪ್ಯಾಲೆಸ್ ಆಫ್ ದಿ ಕಿಂಗ್ ಎಂದು ಹೇಳುವುದು ಇದಕ್ಕೊಂದು ನಿದರ್ಶನ. ಕೆಲವು ವೇಳೆ ಅರ್ಥ ವ್ಯತ್ಯಾಸವನ್ನು ಸೂಚಿಸಲು ಧ್ವನಿವ್ಯತ್ಯಾಸವನ್ನೂ ಮಾಡಬೇಕಾಗುತ್ತದೆ. ಇವೆಲ್ಲಕ್ಕಿಂತಲೂ ಹೆಚ್ಚಾಗಿ, ಯಾವ ಮೂಲದಿಂದಲಾದರೂ ಸಾಮಗ್ರಿಯನ್ನು ಪಡೆದು ಅದನ್ನು ತನ್ನದಾಗಿ ಮಾಡಿಕೊಳ್ಳುವ ಶಕ್ತಿ ಇಂಗ್ಲಿಷಿನ ಮುಖ್ಯ ಲಕ್ಷಣವೆನ್ನಬಹುದು.

ಇಂಗ್ಲಿಷ್ ಭಾಷೆಯನ್ನು ಹಳೆಯ ಇಂಗ್ಲಿಷ್, ಮಧ್ಯಯುಗದ ಇಂಗ್ಲಿಷ್, ಆಧುನಿಕ ಇಂಗ್ಲಿಷ್ ಎಂದು ಮೂರು ವರ್ಗಗಳಾಗಿ ವಿಭಜಿಸುವುದುಂಟು. ಮೊದಲನೆಯದು ಟ್ಯೂಟಾನಿಕ್ ತಂಡಗಳು ಪ್ರ.ಶ. 449ರಲ್ಲಿ ಬ್ರಿಟನ್ನಿಗೆ ಬರತೊಡಗಿದಂದಿನಿಂದ 1100 ರವರೆಗೆ. ಮಧ್ಯಯುಗ ಸು. 1100ರಿಂದ 1500ರ ವರೆಗೆ. 1500ರಿಂದ ಈಚಿನ ಕಾಲವನ್ನು ಆಧುನಿಕಯುಗವೆನ್ನಬಹುದು.

ಇಂಗ್ಲಿಷ್ ಭಾಷೆಯ ಚರಿತ್ರೆ ಆರಂಭವಾಗುವುದು ಟ್ಯೂಟಾನಿಕ್ ತಂಡಗಳಿಗೆ ಸೇರಿದ ಜ್ಯೂಟರು, ಸ್ಯಾಕ್ಸನರು ಮತ್ತು ಆಂಗ್ಲರು ಸ್ಕಾಂಡಿನೇವಿಯ ಪ್ರದೇಶದಿಂದ ಬ್ರಿಟನ್ನಿಗೆ ಬಂದಾಗ, ಇವರಲ್ಲಿ ಮೂರನೆಯ ತಂಡದವರಾದ ಆಂಗ್ಲರಿಂದಲೇ ಇಂಗ್ಲೆಂಡ್ ಮತ್ತು ಇಂಗ್ಲಿಷ್ ಎಂಬ ಪದಗಳು ಬಂದಿರುವುದು. ಜ್ಯೂಟರು ಕೆಂಟ್ ಮತ್ತು ಐಲ್ ಆಫ್ ವೆಟೆನಲ್ಲೂ ಸ್ಯಾಕ್ಸನರು ಮೊದಲು ಕೆಂಟನ್ನು ಬಿಟ್ಟು ಥೇಮ್ಸ್ ನದಿಯ ದಕ್ಷಿಣಕ್ಕಿರುವ ಇತರ ಪ್ರದೇಶಗಳಲ್ಲೂ ಅನಂತರ ಥೇಮ್ಸಿನ ಉತ್ತರಕ್ಕಿರುವ ಎಸೆಕ್ಸ್ ಮತ್ತು ಮಿಡ್ಲ್ಸೆಕ್ಸ್ ಭಾಗಗಳಲ್ಲೂ ಆಂಗ್ಲರು ಇಂದಿನ ಇಂಗ್ಲೆಂಡಿನ ಉಳಿದೆಲ್ಲ ಭಾಗಗಳಲ್ಲೂ ನೆಲೆಸಿದರು. ಈ ಮೂರು ತಂಡಗಳವರೂ ಒಂದೇ ಭಾಷೆಯ ಉಪಭಾಷೆಗಳನ್ನು ಆಡುತ್ತ್ತಿದ್ದವರು. ಕಾಲಕ್ರಮೇಣ ಆ ಉಪಭಾಷೆಗಳೆಲ್ಲವೂ ಬೆರೆತು ಇಂಗ್ಲಿಷ್ ಆಯಿತು. ಅವುಗಳಲ್ಲಿ ಆಂಗ್ಲರ ಉಪಭಾಷೆಯೇ ಪ್ರಧಾನವಾದುದು. ಆದ್ದರಿಂದ ಆ ಸಮ್ಮಿಶ್ರಿತ ಭಾಷೆಗೆ ಇಂಗ್ಲಿಷ್ ಎಂಬ ಹೆಸರು ಬಂದಿರುವುದು ಉಚಿತವೇ ಆಗಿದೆ. ಎಷ್ಟೋ ಕಾಲ ಉಪಭಾಷೆಗಳು ಬೇರೆ ಬೇರೆಯೇ ಆಗಿದ್ದು ಮಧ್ಯಯುಗದಲ್ಲಿ ಇಂಗ್ಲೆಂಡಿನ ಮಧ್ಯಭಾಗದಲ್ಲಿ ಬಳಕೆಯಲ್ಲಿದ್ದ ಈಸ್ಟ್ ಮಿಡ್ಲೆಂಡಿನ ಭಾಷಾಪ್ರಭೇದ ಪ್ರಧಾನ ಸ್ಥಾನ ಪಡೆದು ಪ್ರಮಾಣಭೂತವಾದ ಇಂಗ್ಲಿಷ್ ಆಯಿತು. ಆ್ಯಂಗ್ಲೊ-ಸ್ಯಾಕ್ಸನರು ಇಂಗ್ಲೆಂಡಿಗೆ ಬರುವುದಕ್ಕೆ ಮೊದಲು ಅಲ್ಲಿದ್ದವರು ಕೆಲ್ಟ್ ಬುಡಕಟ್ಟಿನ ಜನ. ಪ್ರ.ಶ.ಪು. 55ರಲ್ಲಿ ಈ ಕೆಲ್ಟರು ಜೂಲಿಯಸ್ ಸೀಸರನ ರೋಮನ್ ಸೈನಿಕರ ಆಕ್ರಮಣಕ್ಕೆ ಒಳಗಾದರು. ಇಂಗ್ಲೆಂಡ್ ಸು. 450 ವಷರ್Àಗಳ ಕಾಲ ರೋಮನ್ ಸಾಮ್ರಾಜ್ಯದ ಒಂದು ದೂರದ ಪ್ರಾಂತ್ಯವಾಗಿತ್ತು. ಪ್ರ.ಶ. 412ರಲ್ಲಿ ಹೂಣರು ರೋಮಿಗೆ ದಾಳಿಯಿಟ್ಟಾಗ ರೋಮನ್ ಚಕ್ರವರ್ತಿ ಬ್ರಿಟನ್ನಿನಲ್ಲಿದ್ದ ತನ್ನ ಸೈನಿಕರನ್ನೆಲ್ಲ ಹಿಂದಕ್ಕೆ ಕರೆಸಿಕೊಂಡ. ರಕ್ಷಣಾರಹಿತವಾದ ಆ ದ್ವೀಪ ಆ್ಯಂಗ್ಲೊ-ಸ್ಯಾಕ್ಸನರ ಮುತ್ತ್ತಿಗೆಗೆ ಸುಲಭವಾಗಿ ಗುರಿಯಾಯಿತು. ಮೊದಮೊದಲು ವಿರಳವಾಗಿಯೂ ಅನಂತರ ತಂಡತಂಡವಾಗಿಯೂ ಬಂದ ಆ್ಯಂಗ್ಲೊ-ಸ್ಯಾಕ್ಸನರು ಕೆಲ್ಟರನ್ನು ಇಂಗ್ಲೆಂಡಿನ ಪುರ್ವಭಾಗಗಳಿಂದ ಪಶ್ಚಿಮಕ್ಕೂ ಅನಂತರ ವೇಲ್ಸಿಗೂ ಅಟ್ಟಿದರು. ಹಿಂದೆ ಇಂಗ್ಲೆಂಡಿನಲ್ಲಿದ್ದ ಗೇಲಿಕ್ ಬುಡಕಟ್ಟಿನ ಜನ ಕೆಲ್ಟರಿಂದ ಇದೇ ತೆರನಾದ ಉಚ್ಚಾಟನೆಗೆ ಗುರಿಯಾಗಿದ್ದರು. ಈಗ ಕೆಲ್ಟರು ವೇಲ್ಸಿಗೆ ಬಂದಾಗ ಗೇಲರು ಉತ್ತರದ ಸ್ಕಾಟ್ಲೆಂಡಿಗೂ ಪಶ್ಚಿಮದ ಸಮುದ್ರದಾಚೆಯ ಐರ್ಲೆಂಡಿಗೂ ಧಾವಿಸಿದರು. ಈಗಲೂ ವೇಲ್ಸಿನ ಜನಸಾಮಾನ್ಯರು ಆಡುವ ವೇಲ್ಷ ಕಲ್ಟರ ಸಿಮ್ರಿಕಿನಿಂದ ಬಂದುದು. ಸ್ಕಾಟ್ಲೆಂಡ್ ಮತ್ತು ಐರ್ಲೆಂಡಿನಲ್ಲಿ ಗೇಲಿಕ್ ಭಾಷೆಯ ಸಂತತಿ ಕಂಡುಬರುತ್ತದೆ.

ಆ್ಯಂಗ್ಲೊ-ಸ್ಯಾಕ್ಸನರು ಕೆಲ್ಟರೊಡನೆ ಅರಸು-ಆಳುಗಳ ಸಂಬಂಧವನ್ನು ಮಾತ್ರ ಹೊಂದಿದ್ದರೆಂದು ತೋರುತ್ತದೆ. ಕೆಲ್ಟಿಕ್ ಭಾಷೆಯಿಂದ ಇಂಗ್ಲಿಷಿಗೆ ಬಂದಿರುವ ಪದಗಳು ಬಹಳ ಸ್ವಲ್ಪ. ಬ್ರಿನ್ (ಗುಡ್ಡ), ಟಾರ್ (ಕಡಿದಾದ ಎತ್ತರದ ಬಂಡೆ), ಕ್ರ್ಯಾಗ್ (ಬಂಡೆ), ಕೂಂಬ್ (ಕಣಿವೆ) - ಇಂಥ ಕೆಲವೇ ಪದಗಳು ಸೇರಿವೆ. ಕೆಲವು ಸ್ಥಳಗಳ ಹೆಸರುಗಳಲ್ಲಿ ಕೆಲ್ಟಿಕ್ ಭಾಷೆಯ ಪ್ರಭಾವ ಇನ್ನೂ ಕಂಡುಬರುತ್ತದೆ. ಉದಾ. ಡನ್ಕೂಂಬ್ ಹಾಲ್ ಕೂಂಬ್, ಟಾರ್ಕ್ರಾಸ್, ಟಾರ್ಹಿಲ್, ಲಂಡನ್ (ಮಣ್ಣಿನ ಕೋಟೆ), ಡೋವರ್, ಯಾರ್ಕ್, ಮೊದಲಾದ ಪಟ್ಟಣಗಳ ಹೆಸರುಗಳು ಕೆಲ್ಟರವೇ. ಏವನ್, ಎಸ್ಕ್, ಡೀ, ಡರ್ವೆಂಟ್, ಔಸ್, ಕ್ಯಾಮ್, ಥೇಮ್ಸ್, ಸೆವೆರ್ನ್ - ಮೊದಲಾದ ನದಿಗಳಿಗೆ ಹೆಸರು ಕೊಟ್ಟವರೂ ಅವರೇ. ಒಟ್ಟಿನ ಮೇಲೆ ಇಂಗ್ಲಿಷಿನಲ್ಲಿ ಕೆಲ್ಟಿಕ್ ಪದಗಳ ಅಭಾವ ಇಷ್ಟು ಹೆಚ್ಚಾಗಿರುವುದನ್ನು ನೋಡಿದರೆ ಕೆಲ್ಟರಿಗೂ ಆ್ಯಂಗ್ಲೊ-ಸ್ಯಾಕ್ಸನರಿಗೂ ಇದ್ದ ಪರಸ್ಪರ ಸಂಬಂಧ ವ್ಯವಹಾರಗಳು ಬಹಳ ಕಡಿಮೆಯಾಗಿದ್ದುವೆಂದು ಕಾಣುತ್ತದೆ.

ಕೆಲ್ಟರ ಅನಂತರ ಇಂಗ್ಲೆಂಡಿನಲ್ಲಿ ಪ್ರಬಲರಾಗಿದ್ದ ರೋಮನರ ಭಾಷೆ ಲ್ಯಾಟಿನ್. ಆದರೆ ಆ ಕಾಲದಲ್ಲಿ ಲ್ಯಾಟಿನ್ನಿನ ಪ್ರಭಾವವೂ ಇಂಗ್ಲಿಷಿನ ಮೇಲೆ ಹೇಳಬಹುದಾದಷ್ಟೇನೂ ಇರಲಿಲ್ಲ. ಇತರ ಭಾಷೆಗಳಿಂದ ಪದಗಳನ್ನು ತೆಗೆದುಕೊಳ್ಳುವ ಪದ್ಧತಿ ಪ್ರಾಚೀನ ಇಂಗ್ಲಿಷಿಗಿನ್ನೂ ಒಗ್ಗಿ ಬಂದಿರಲಿಲ್ಲ. ಬ್ರಿಟನ್ನಿನಲ್ಲಿದ್ದ ರೋಮನ್ ಆಡಳಿತಗಾರರೂ ಸೈನಿಕರೂ ವ್ಯಾಪಾರಿಗಳೂ ಅನಂತರ ಪ್ರ.ಶ. 597ರಿಂದ ಬರತೊಡಗಿದ ಕ್ರೈಸ್ತಪಾದ್ರಿಗಳೂ ಉಪಯೋಗಿಸುತ್ತಿದ್ದ ಕೆಲವು ಪದಗಳು ಮಾತ್ರ ಈ ಯುಗದ ದುರ್ಬಲ ಲ್ಯಾಟಿನ್ ಪ್ರಭಾವವನ್ನು ಪ್ರತಿಬಿಂಬಿಸುತ್ತವೆ. ರೋಮಿನ ಸೈನ್ಯ ಶಿಬಿರಗಳು ಇದ್ದ ಸ್ಥಳಗಳ ಹೆಸರುಗಳು ಇಂದೂ ಆ ಚಾರಿತ್ರಿಕ ಸಂಗತಿಗೆ ಕನ್ನಡಿಗಳಾಗಿವೆ. ಕ್ಯಾಸ್ಟರ್ ಮತ್ತು ಚೆಸ್ಟರ್ (ಕ್ಯಾಸ್ಟ್ರ-ಶಿಬಿರ) ಎಂಬ ಉತ್ತರ ಪ್ರತ್ಯಯಗಳಿಂದ ಅಂತ್ಯವಾಗುವ ಹೆಸರುಗಳು ಇಂಥವು. ಕಾಲ್ಚೆಸ್ಟರ್, ರಾಚೆಸ್ಟರ್, ವಿಂಚೆಸ್ಟರ್, ಡಂಕಾಸ್ಟರ್, ಲಂಕಾಸ್ಟರ್, ಗ್ಲ್ಲಾಸ್ಟರ್, ಲೆಸ್ಟರ್, ಎಕ್ಸೆಟರ್ ಇವೆಲ್ಲ ಹಿಂದೆ ರೋಮನ್ ಸೈನ್ಯ ಶಿಬಿರಗಳಾಗಿದ್ದುವೆಂದು ಅವುಗಳ ಹೆಸರುಗಳಿಂದಲೇ ಗೊತ್ತಾಗುತ್ತದೆ. ರೋಮನರು ದೊಡ್ಡ ರಸ್ತೆಗಳನ್ನು ನಿರ್ಮಿಸಿದರು. ಅವುಗಳಲ್ಲಿ ಒಂದು ಏವನ್ ನದಿಯನ್ನು ದಾಟಿ ಉತ್ತರಕ್ಕೆ ಹೋಗಿದ್ದ ಸ್ಥಳದಲ್ಲೇ ಮುಂದೆ ಷೇಕ್್ಸಪಿಯರನ ತೌರೂರಾದ ಸ್ಟ್ರಟ್ಫರ್ಡ್ ಆನ್ ಏವನ್ ಇದ್ದುದು. (ಸ್ಟ್ರಾಟಾ=ಸ್ಟ್ರೀಟ್=ರಸ್ತೆ) ರೋಮನರಿಂದ ಈ ಅವಧಿಯಲ್ಲಿ ಬಂದ ಇತರ ಕೆಲವು ಪದಗಳು ವ್ಯಾಪಾರಕ್ಕೂ ಸುಖಜೀವನಕ್ಕೂ ಸಂಬಂಧಪಟ್ಟವು. ವೈನ್ (ವೀನಮ್), ಚೀಪ್ (ಚೀಪಿಯನ್), ಮಾಂಗರ್ (ಮಾಂಗಿಯನ್-ಮ್ಯಾಂಗೀರ್=ವ್ಯಾಪಾರ), ಮಿಂಟ್ (ಮೊನೆಟ=ನಾಣ್ಯ), ಪೌಂಡ್ (ಪಾಂಡಾ), ಮೈಲ್, ಮಿಲ್, ಕುಕ್ (ಕೊಕ್ ನೂಸ್), ಕಪ್, ಕೆಟ್ಲ್, ಪಿಲೊ, ಆನಿಯನ್ ಇತ್ಯಾದಿ. ಕ್ರೈಸ್ತಮತದ ಬಿಷಪ್ (ಬಿಸ್ಕಪ್) ಪದವೂ ಈ ಕಾಲದ್ದೇ.

ಆ್ಯಂಗ್ಲೊ-ಸ್ಯಾಕ್ಸನರು ತಮ್ಮೊಡನೆ ತಂದ ಭಾಷೆಯಲ್ಲಿ ಬೇಕಾದಷ್ಟು ಪದಗಳಿದ್ದುವು. ಪುಟ್ಟ ಪದಗಳಿಂದ ಕೂಡಿದ್ದ ಭಾಷೆಯದು. ಆ ಪದಗಳು ಈಗಲೂ ಇಂಗ್ಲ್ಲಿಷ್ ಭಾಷೆಯ ಬೆನ್ನುಮೂಳೆಯಂತಿವೆ. ಆ್ಯಂಗ್ಲೊ-ಸ್ಯಾಕ್ಸನರು ತಮ್ಮ ಭಾಷೆಯಲ್ಲಿಯ ಪದಗಳನ್ನೇ ಸಂದರ್ಭಾನುಸಾರ ಜೋಡಿಸಿಕೊಂಡು ಹೊಸ ಪದಗಳನ್ನು ಸೃಷ್ಟಿಸುತ್ತಿದ್ದರು. ಅವರು ಬೇರೆ ಭಾಷೆಗಳಿಂದ ಪದಗಳನ್ನು ತೆಗೆದುಕೊಳ್ಳುವುದು ತೀರಾ ಅಪೂರ್ವವಾಗಿತ್ತು. ಆದರೆ ಕಾಲಕ್ರಮೇಣ ಇಂಗ್ಲಿಷ್ ಬೆಳೆದು ಶಕ್ತಿಪೂರ್ಣವಾದುದು ನಾನಾ ಮೂಲೆಗಳಿಂದ ಶಬ್ದಸಂಚಯನ ಮಾಡಿ.

ಆ್ಯಂಗ್ಲೊ-ಸ್ಯಾಕ್ಸನರು ತಮ್ಮದೇ ಆದ ಮತವನ್ನು ಹೊಂದಿದ್ದರು; ಆ ಮತಕ್ಕೆ ಸೇರಿದ ದೇವರುಗಳನ್ನು ಪೂಜಿಸುತ್ತಿದ್ದರು. ಆ ದೇವರುಗಳಲ್ಲಿ ಹಿರಿಯನಾದ ವೋಡೆನನ ಹೆಸರು ಈಗಲೂ ಇಂಗ್ಲಿಷಿನ ವೆಡ್ನೆಸ್ಡೆ (ಮೋಡೆನ್ಸ್ಡೇ, ಬುಧವಾರ) ಅಲ್ಲಿದೆ. ಹೀಗೆಯೇ ಥರ್್ಸಡೆ ಅವರ ಗುಡುಗು ಸಿಡಿಲುಗಳ ದೇವರು ಥಾರ್ ನಿಂದಲೂ ಫ್ರೈಡೆ ಫ್ರಿಯಾ ಎಂಬ ಸ್ತ್ರೀ ದೇವತೆಯಿಂದಲೂ ಟ್ಯೂಸ್ಡೇ ಟ್ಯೂಸ್ ಎಂಬ ದೇವರಿಂದಲೂ ಬಂದಿವೆ. ಪ್ರ.ಶ. 507ರಲ್ಲಿ ಇಂಗ್ಲೆಂಡಿಗೆ ಕ್ರೈಸ್ತಧರ್ಮ ಬಂದಿತು. ಅದರಿಂದ ಬ್ರಿಟನ್ನಿನ ಮುಖ ಅಂದೂ ಅನಂತರವೂ ಯುರೋಪಿನ ಸಂಸ್ಕೃತಿಯ ಕೇಂದ್ರವಾಗಿದ್ದ ಇಟಲಿಯ ಕಡೆ ತಿರುಗಿದ್ದು ಮಾತ್ರವಲ್ಲದೆ ಕ್ರೈಸ್ತಧರ್ಮಕ್ಕೆ ಸಂಬಂಧಪಟ್ಟ ಲ್ಯಾಟಿನ್ ಪದಗಳು ಎಷ್ಟೋ ಇಂಗ್ಲಿಷಿಗೆ ಬಂದವು. ಉದಾ: ಇಂಗ್ಲಿಷಿನ ಮಾಂಕ್, ಮಿನಿಸ್ಟರ್, ಬಿಷಪ್, ಮತ್ತು ಪ್ರೀಸ್ಟ್ ಪದಗಳು ಕ್ರಮವಾಗಿ ಲ್ಯಾಟಿನ್ನಿನ ಮೆನಕಸ್, ಮೊನ್ಯಾಸ್ಟೀರಿಯಮ್, ಎಪಿಸ್ಕೋಪಸ್ ಮತ್ತು ಪ್ರಿಸ್ಬಿಟರ್ ಪದಗಳಿಂದ ಬಂದುವು. ಆ್ಯಬಟ್, ಆಮ್ಸ್, ಆಲ್ಟರ್, ಆನ್ತೆಮ್, ಕ್ಯಾಂಡ್ಲ್, ಕ್ಲರ್ಕ್, ಟೆಂಪ್ಲ್ ಮೊದಲಾದವೂ ಈ ಕಾಲದ ಪದಗಳೇ.

ಪ್ರ.ಶ. 9ನೆಯ ಶತಮಾನದಲ್ಲಿ ಡೆನ್ಮಾರ್ಕಿನ ಡೇನರು (ವೈಕಿಂಗರು) ಇಂಗ್ಲೆಂಡಿಗೆ ದಾಳಿಯಿಟ್ಟು ಅದರ ಕೆಲವು ಭಾಗಗಳನ್ನು ಗೆದ್ದು ರಾಜ್ಯಸ್ಥಾಪನೆಗೈದರು. ಡೇನರೂ ಇಂಗ್ಲಿಷರೂ ಮೂಲತಃ ಒಂದೇ ಬುಡಕಟ್ಟಿಗೆ ಸೇರಿದವರಾದ್ದರಿಂದ ಎಷ್ಟು ಪದಗಳು ಅಥವಾ ಯಾವ್ಯಾವ ಪದಗಳು ಅವರಿಂದ ಇಂಗ್ಲಿಷಿಗೆ ಬಂದವು ಎಂದು ಖಚಿತವಾಗಿ ಹೇಳುವುದು ಕಷ್ಟ. ಏಕೆಂದರೆ ಡೇನರಿಂದ ಬಂದಂತೆ ಕಾಣುವ ಪದ ಮೊದಲೇ ಇಂಗ್ಲಿಷಿನಲ್ಲಿ ಇದ್ದಿರಬಹುದು. ಆದರೆ ಸ್ಕೈ, ಗೇಯ್ಟ್ ಮೊದಲಾದ ನಾಮಪದಗಳೂ ದೆ, ದೇರ್, ದೆಮ್ ಎಂಬ ಸರ್ವನಾಮಗಳೂ ಡೇನಿಷ್ ಭಾಷೆಯಿಂದ ಇಂಗ್ಲಿಷಿಗೆ ದತ್ತವಾದ ಶಬ್ದಗಳು ಎಂಬುದು ನಿರ್ವಿವಾದ. ಸಿಸ್ಟರ್, ಗಿಫ್ಹ್ಟ್ಗಳೂ ಡೇನಿಷ್ ಭಾಷೆಯಿಂದ ಬಂದಂಥವೇ. ಡೇನಿಷ್ ಭಾಷೆಯಲ್ಲಿ ಪಟ್ಟಣಕ್ಕೆ ಬೈ (ಅಥವಾ ಬಿ), ಹಳ್ಳಿಗೆ ಥಾರ್ಪ್ ಎಂದಿದೆ. ಇಂಗ್ಲೆಂಡಿನ ಆಲ್ಥಾರ್ಪ್, ಲಿನ್ ಥಾರ್ಪ್, ಡಾರ್ಬಿ, ರಗ್ಬಿ, ಗ್ರಿಮ್ಸ್ಬಿ ಎಂಬ ಸ್ಥಳಗಳ ಹೆಸರುಗಳು ಡೇನರು ಇಂಗ್ಲೆಂಡಿನಲ್ಲಿದ್ದ ನೆನಪನ್ನು ನಮಗುಂಟುಮಾಡಿಕೊಡುತ್ತವೆ. ಹೊಲಗಳ ನಡುವಿನ ಮನೆಗೆ ಟಾಫ್ಟ್ ಎಂದೂ ಪ್ರತ್ಯೇಕವಾಗಿರುವ ಸ್ಥಳಕ್ಕೆ ತ್ವ್ಯೇಯ್ಟ್ ಎಂದೂ ಡೇನಿಷ್ ಭಾಷೆಯ ಪದಗಳು. ಇಂಗ್ಲೆಂಡಿನ ಈಸ್ಟ್ಟಾಫ್ಟ್ ನಾರ್ತ್ಟಾಫ್ಟ್, ಬ್ರ್ಯೇತ್ವೇಯಗಳಲ್ಲಿ ಈ ಪದಗಳಿವೆ. ಇಂಗ್ಲಿಷಿನ ಲಾ, ಔಟ್ಲಾ ಪದಗಳೂ ಡೇನರ ಆಳಿಕೆಯ ಕುರುಹುಗಳಾಗಿ ಉಳಿದಿವೆ.

ಡೇನರ ಆಕ್ರಮಣದ ಅನಂತರ ಇಂಗ್ಲೆಂಡಿನಲ್ಲಿ ಸಂಭವಿಸಿದ ಅತಿದೊಡ್ಡ ಘಟನೆಯೆಂದರೆ 1066ರಲ್ಲಿ ಫ್ರಾನ್ಸಿನ ನಾರ್ಮಂಡಿ ಪ್ರಾಂತ್ಯದ ವಿಲಿಯಂ ಆ ದೇಶಕ್ಕೆ ಮುತ್ತಿಗೆ ಹಾಕಿ ಗೆದ್ದು ಫ್ರೆಂಚ್ ಆಡಳಿತವನ್ನು ಸ್ಥಾಪಿಸಿದ್ದು. ನಾರ್ಮಂಡಿ ಪ್ರಾಂತ್ಯದವರೂ ಆ್ಯಂಗ್ಲೊ-ಸ್ಯಾಕ್ಸನರು, ಡೇನರು ಮೊದಲಾದವರ ಹಾಗೆಯೇ ಉತ್ತರದಿಂದ ಬಂದವರೇ. ಆದರೆ ಇಂಗ್ಲೆಂಡಿಗೆ ಬಂದ ಔತ್ತರೇಯರಂತಲ್ಲದೆ ಅವರು ತಾವು ಗೆದ್ದ ದೇಶದ ಜನರ ಭಾಷೆಯನ್ನೂ ಜೀವನಕ್ರಮವನ್ನೂ ಸ್ವೀಕರಿಸಿದ್ದವರು. ತತ್ಫಲವಾಗಿ ಅವರು ಆಡುತ್ತಿದ್ದ ಭಾಷೆಯೂ ಫ್ರೆಂಚ್ ಭಾಷೆಯೇ-ಅದರ ಅಶುದ್ಧವಾದ ಒಂದು ರೂಪ. ವಿಲಿಯಂ ಇಂಗ್ಲೆಂಡಿನ ಅಧಿಪತಿಯಾದಾಗ ಅವನೊಡನೆ ಈ ನಾರ್ಮನ್ ಫ್ರೆಂಚ್ ಜನರ ಮತ್ತು ಅವರ ಭಾಷೆಯ ಪ್ರಾಬಲ್ಯ ಅಲ್ಲಿ ಆರಂಭವಾಗಿ ಸುಮಾರು ನಾಲ್ಕು ಶತಮಾನಗಳ ಕಾಲ ಮುಂದುವರಿಯಿತು. ಇದರಿಂದ ಇಂಗ್ಲಿಷಿನಲ್ಲಿ ಕ್ರಾಂತಿಕಾರಕವಾದ ಬದಲಾವಣೆಗಳಾದುವು. ಇಂಗ್ಲಿಷ್ ವ್ಯಾಕರಣ ನಿಯಮಗಳು ಸಡಿಲಗೊಂಡು ಸುಲಭವಾದವು. ಉದಾಹರಣೆಗೆ, ಲಿಂಗಭೇದಗಳು ಸ್ತ್ರೀ, ಪುರುಷ, ನಪುಂಸಕ ಎಂದು ಮೂರೇ ಆದುದಲ್ಲದೆ ಪದಗಳಿಗೆ ಲಿಂಗಭೇದಗಳನ್ನು ಆರೋಪಿಸುವ ಪದ್ಧತಿಯಿಲ್ಲದಂತಾಯಿತು. ವಾಕ್ಯದಲ್ಲಿ ಪದಗಳ ವಿನ್ಯಾಸ ಸರಳವಾಯಿತು. ವಿಭಕ್ತಿ ಪ್ರತ್ಯಯಗಳ ಪ್ರಯೋಗ ಕ್ರಮೇಣ ಕಡಿಮೆಯಾಗಿ ಕೊನೆಗೆ ನಿಂತೇ ಹೋಯಿತು. ಇವೆಲ್ಲ ಬದಲಾವಣೆಗಳಿಗೂ ನಾರ್ಮನ್ನರ ಆಕ್ರಮಣ ಒಂದೇ ಕಾರಣವೆಂದಲ್ಲ. ಆದರೆ ಅವು ಅದರಿಂದ ತ್ವರಿತಗೊಂಡುದು ನಿಸ್ಸಂದೇಹ. ನಾರ್ಮನ್ ಆಡಳಿತದ ಸ್ಥಾಪನೆಯಿಂದ ಇಂಗ್ಲಿಷಿನಲ್ಲಿ ಆದ ಅತ್ಯಂತ ಪರಿಣಾಮಕಾರಕವಾದ ಮಾರ್ಪಾಡೆಂದರೆ ಆ ಭಾಷೆಯ ಪದಸಂಪತ್ತಿನ ವೃದ್ಧಿ. ಅದುವರೆಗೂ ಆ್ಯಂಗ್ಲೊ ಸ್ಯಾಕ್ಸನ್ ಭಾಷೆಯೊಂದನ್ನೇ ನಂಬಿಕೊಡಿದ್ದ ಇಂಗ್ಲಿಷ್ ಸಾವಿರಾರು ಫ್ರೆಂಚ್ ಪದಗಳನ್ನು ತೆಗೆದುಕೊಂಡಿತು. ಅದಕ್ಕಿಂತಲೂ ಹೆಚ್ಚಾಗಿ ಹೇಗೆ ಪರಭಾಷೆಗಳಿಂದ ಬರುವ ಶಬ್ದಸಂಪತ್ತಿಗೆ ಆಶ್ರಯವೀಯುವ ಅಭ್ಯಾಸ ಅದರಲ್ಲಿ ಬೆಳೆದು ಮುಂದೆಯೂ ಅದರ ಶ್ರೀಮಂತಿಕೆ ಹೆಚ್ಚಲು ಅವಕಾಶವಾಯಿತು. ಸೈನಿಕ ವಲಯ, ಲೌಕಿಕ ಆಡಳಿತ, ಧಾರ್ಮಿಕ ವ್ಯವಸ್ಥೆ, ನ್ಯಾಯ ವ್ಯವಹಾರ, ಸಾಮಾಜಿಕ ಜೀವನ, ಆಹಾರ ಪಾನೀಯಗಳು ಮೊದಲಾದ ನಾನಾ ಕ್ಷೇತ್ರಗಳಲ್ಲಿ ಫ್ರೆಂಚ್ ಪದಗಳು ಇಂಗ್ಲೆಂಡಿಗೆ ತಂಡತಂಡವಾಗಿ ಬಂದವು. ಅನೇಕ ತಲೆಮಾರುಗಳ ಕಾಲ (14ನೆಯ ಶತಮಾನದ ಮಧ್ಯಭಾಗದವರೆಗೆ) ಫ್ರೆಂಚ್ ಭಾಷೆ ತಾನೇ ತಾನಾಗಿ ಇಂಗ್ಲೆಂಡಿನ ಆಳರಸರ, ಆಡಳಿತಗಾರರ, ಶ್ರೀಮಂತವರ್ಗದವರ ಭಾಷೆಯಾಗಿತ್ತು. ಅವರೆಲ್ಲ ಇಂಗ್ಲೆಂಡಿನಲ್ಲೇ ನೆಲೆಸಿ ಇಂಗ್ಲಿಷರೇ ಆದುದರಿಂದ ಆ ಭಾಷೆಯ ಪದಗಳೂ ಇಂಗ್ಲಿಷಿನ ಶಬ್ದಭಂಡಾರವನ್ನು ಸೇರಿ ಅದನ್ನು ಬಹುಮುಖಿಯಾಗಿ ಮಾಡಿದವು. ಇಂದಿಗೂ ಇಂಗ್ಲಿಷ್ ಶಬ್ದಕೋಶದಲ್ಲಿ ದೊಡ್ಡ ಪಾಲು ಫ್ರೆಂಚ್ ಭಾಷೆಯಿಂದ ಬಂದ ಪದಗಳಾಗಿವೆ. ಈ ಪದಗಳೆಷ್ಟೋ ಮೂಲತಃ ಲ್ಯಾಟಿನ್ ಪದಗಳು: ಆ ಭಾಷೆಯಿಂದ ಫ್ರೆಂಚಿಗೆ ಬಂದಿದ್ದು ಫ್ರೆಂಚಿನಿಂದ ಇಂಗ್ಲಿಷಿನ ಮೂಲಕ ನಮ್ಮ ದೇಶದಲ್ಲಿ ಕೂಡ ಅವು ಬಳಕೆಗೆ ಬಂದಿವೆ. ಸ್ಯೂಟ್, ಪ್ಲೀಡ್, ಜಡ್ಜ್, ಜ್ಯೂರಿ,ಟಿನ್ಯೂರ್, ಮ್ಯಾರಿ, ಮ್ಯಾರಿಜ್, ಪ್ಯುನಿ, ಕ್ಲರ್ಜಿ, ಏಂಜಲ್, ಫ್ರಯರ್, ಸರ್ವಿಸ್, ಸೇಂಟ್, ರೆಲಿಕ್, ಫೀಸ್ಟ್, ಸ್ಯಾಕ್ರಿಫೈಸ್, ಪ್ರೇಯರ್, ಸೆರ್ಮನ್, ಪ್ರೀಚ್, ಪಾರ್ಲಿಮೆಂಟ್, ಸಾವರಿನ್, ಸ್ಟೇಟ್, ಗೌರ್ನಮೆಂಟ್, ಕೌನ್ಸಿಲ್, ಕೌನ್ಸೆಲ್, ಎಕ್ಸ್ಚೆಕರ್, ಛಾನ್ಸಲರ್, ಮಿನಿಸ್ಟರ್, ಆರ್ಮರ್, ಬ್ಯಾನರ್, ಸೊಲ್ಜರ್ ಆಫೀಸರ್, ಬ್ಯಾಟ್ಲ್, ವಾರ್, ಪೀಸ್, ಅಸಾಲ್ಟ್, ಸಾರ್ಜೆಂಟ್, ಲೆಫ್ಟಿನೆಂಟ್, ಎನಿಮಿ, ಎಸ್ಕೇಪ್, ನೇವಿ, ಮಾರ್ಚ್, ವೈಕೌಂಟ್, ಬ್ಯಾರನ್, ಡ್ಯೂಕ್, ಪ್ರಿನ್ಸ್, ಕರ್ಟಿಸಿ, ಸ್ಕೂಲ್-ಇವೆಲ್ಲ ಫ್ರೆಂಚ್ ಪದಗಳು. ಅನೇಕ ಹೊಸ ವೃತ್ತಗಳೂ ಅವುಗಳಿಗೆ ಸಂಬಂಧಪಟ್ಟ ಪದಗಳೂ ಫ್ರೆಂಚರಿಂದ ಇಂಗ್ಲೆಂಡಿಗೆ ಬಂದುವು - ಹೇಬರ್ ಡ್ಯಾಷರ್, ಡ್ರೇಪರ್ ಮೊದಲಾದವು. ಸುಖೋಪಕರಣಗಳಾದ ಗೌನ್, ವೇಲ್, ಕ್ಲೋಕ್, ಕರ್ಚಿಫ್, ಎಂಬ್ರಾಯ್ಡರಿ, ಜೂಯೆಲ್ ಮೊದಲಾದವೂ ಫ್ರೆಂಚ್ನಿಂದ ಬಂದುವೇ. ಫ್ರೆಂಚ್ ಯಜಮಾನರಿಗೆ ಆಹಾರ ಒದಗಿಸುತ್ತ್ತಿದ್ದವರು ಇಂಗ್ಲಿಷ್ ಆಳುಗಳು. ಯಜಮಾನರು ಬೀಫ್ (ಎತ್ತು). ವೀಲ್ (ಜಿಂಕೆ), ಮಟನ್ (ಕುರಿ), ಪೋರ್ಕ್ (ಹಂದಿ) ಇತ್ಯಾದಿಯಾಗಿ ಪ್ರಾಣಿಗಳ ಹೆಸರುಗಳನ್ನು ಸೂಚಿಸುವ ಪದಗಳನ್ನು; ಉಪಯೋಗಿಸುತ್ತಿದ್ದರು. ಅದೇ ಪ್ರಾಣಿಗಳಿಗೆ ಇಂಗ್ಲಿಷರು ಆಕ್ಸ್, ಡೀರ್, ಷೀಪ್, ಸ್ವೈನ್ ಎಂದು ಹೇಳುತ್ತಿದ್ದರು. ಕಾಲಕ್ರಮೇಣ ಎರಡೆರಡು ಪದಗಳೂ ಇಂಗ್ಲಿಷಿನಲ್ಲಿ ಉಳಿದುಕೊಂಡು ಫ್ರೆಂಚ್ ಪದಗಳು ಮಾಂಸಕ್ಕೂ ಇಂಗ್ಲಿಷ್ ಪದಗಳು ಪ್ರಾಣಿಗಳಿಗೂ ಮೀಸಲಾದವು. ಹೀಗೆ ಇಂಗ್ಲಿಷಿನ ಪದಗಳ ಅರ್ಥನಿಷ್ಕೃಷ್ಟತೆ ಹೆಚ್ಚಿತು. ಇಂಥ ಪದಗಳು ಇನ್ನೂ ಅನೇಕ ಬಂದವು. ಉದಾ. ಹಟ್-ಕಾಟೇಜ್, ಹೌಸ್-ಮನ್ಷನ್, ಫ್ರೆಂಡ್ಷಿಪ್-ಏಮಿಟಿ, ಹಾರ್ಟಿ-ಕಾರ್ಡಿಯಲ್, ಎಂಡ್-ಟರ್ಮಿನೇಟ್, ವಿಷ್-ಡಿಸೈರ್, ಹಿಂಡರ್-ಪ್ರ್ರಿವೆಂಟ್. ಇವುಗಳಲ್ಲಿ (ಮೊದಲನೆಯ) ಇಂಗ್ಲಿಷ್ ಪದಗಳೂ (ಎರಡನೆಯ) ಫ್ರೆಂಚ್ ಪದಗಳೂ ಮೊದಮೊದಲು ಒಂದೇ ಅರ್ಥವುಳ್ಳವಾಗಿದ್ದು ಬರುಬರುತ್ತ ಅರ್ಥವ್ಯತ್ಯಾಸವನ್ನು ತಳೆದವು. ಫ್ರೆಂಚ್ ಧಾತುಗಳಿಗೆ ಇಂಗ್ಲಿಷಿನ ಪ್ರತ್ಯಯಗಳನ್ನು ಸೇರಿಸಿ ಹೊಸ ಪದಗಳ ನಿರ್ಮಾಣ ಮಾಡುವುದು ನಡೆಯಿತು. ಉದಾ. ಕ್ಲೋಸ್-ನೆಸ್, ಡ್ಯೂಕ್-ಡಮ್, ಕಂಪ್ಯಾನಿಯನ್-ಷಿಪ್. ಈ ಪದಗಳನ್ನು ತೆಗೆದುಕೊಳ್ಳುವಾಗ ಫ್ರೆಂಚ್ ಭಾಷೆಯಲ್ಲಿ ಅವಕ್ಕಿದ್ದ ಉಚ್ಚಾರಣೆಯನ್ನು ಇಂಗ್ಲಿಷಿನ ಉಚ್ಚಾರಣಾ ರೀತಿಗೆ ಹೊಂದಿಸಿಕೊಳ್ಳಲಾಯಿತು. ಮಧ್ಯಯುಗದಲ್ಲಿ ಬಂದ ಫ್ರೆಂಚ್ ಪದಗಳಿಗೂ ಅನಂತರ ಬಂದ ಪದಗಳಿಗೂ ಇದೇ ವ್ಯತ್ಯಾಸ. ಉದಾಹರಣೆಗೆ, ಇತ್ತೀಚಿನ ಕಾಲದಲ್ಲಿ ಫ್ರೆಂಚ್ ಭಾಷೆಯಿಂದ ಇಂಗ್ಲಿಷಿಗೆ ಬಂದಿರುವ ಕಾನಿಸ್ಯೂರ್, ಅಮೆಟ್ಯೂರ್, ಷೆಫ್, ವ್ಯಾಲೆ, ಗ್ಯರಾಜ್ ಪದಗಳ ಉಚ್ಚಾರಣೆಗಳು ಮೂಲದಲ್ಲಿದ್ದಂತೆಯೇ ಇಂಗ್ಲಿಷಿನಲ್ಲೂ ಇವೆ. ಕೊನೆಯ ಪದ ಗ್ಯರಾಜ್ ಇಂಗ್ಲಿಷ್ ಮೋಟಾರು ಮಾಲೀಕರುಗಳಲ್ಲೂ ಚಾಲಕರಲ್ಲೂ ಹೆಚ್ಚು ಹೆಚ್ಚಾಗಿ ಬಳಕೆಗೆ ಬರುತ್ತಿರುವುದಕ್ಕೆ ಅದರ ಬದಲಾಗುತ್ತ್ತಿರುವ ಉಚ್ಚಾರಣೆ ಸಾಕ್ಷಿ. ಗ್ಯಾರೇಜ್ ಎಂದೂ ಅನೇಕರು ಅದನ್ನು ಈಗ ಉಚ್ಚರಿಸುತ್ತಾರೆ. ಎಂದರೆ ಒತ್ತಡ ಪದದ ಮೊದಲ ಭಾಗದ ಮೇಲೆ ಬೀಳುತ್ತದೆ. ಹೀಗಾಗುವುದು ಇಂಗ್ಲಿಷ್ ಪದಗಳ ಉಚ್ಚಾರಣೆಯ ವೈಶಿಷ್ಟ್ಯ. 16ನೆಯ ಶತಮಾನದಿಂದ ಈಚೆಗೆ ಬ್ರಿಗಂ ಟೀನ್, ರೆಂಡವೋ, ಕಾರ್ಸ್ಯೇರ್, ವಾಲಿ, ವಾಸ್, ಮುಸ್ಟಾಷ್, ಪ್ರಾಮೆನೇಡ್, ಪಿಕಂಟ್, ಟ್ಯಾಬ್ಲೊ, ಬ್ಯಾಲೆ, ಲಿಯೇಸಾನ್, ನಯೀವ್, ಪಾನ್ಷಾನ್, ಎಮಿಗ್ರೆ, ಕೊರ್, ಕೂಲ್ಡಸಾಕ್, ಸಾಲಾನ್, ರೆಸೂಮೆ, ಕ್ಲೀಷೆ, ಎಲೀಟ್, ಫಿಆನ್ಸೆ, ರೆಸಾನ್ಡೆಟರ್, ಕಾಮುಫ್ಲಾಜ್-ಮೊದಲಾದ ಅನೇಕ ಫ್ರೆಂಚ್ ಪದಗಳು ಇಂಗ್ಲಿಷಿಗೆ ಬಂದು ಅದರ ಸಂಪತ್ತನ್ನು ಹೆಚ್ಚಿಸಿವೆ. ಈ ಪದಗಳ ಉಚ್ಚಾರಣೆ ಮೂಲ ಫ್ರೆಂಚಿನ ಉಚ್ಚಾರಣೆಯೇ ಆಗಿರುವುದನ್ನು ಕಾಣಬಹುದು. ಜನಸಾಮಾನ್ಯರಲ್ಲದೆ ವಿದ್ಯಾವಂತರು ವಿಶಿಷ್ಟ ಉದ್ದೇಶಗಳಿಗಾಗಿ ಅವನ್ನು ತೆಗೆದುಕೊಂಡು ಬಳಸಿರುವುದೇ ಇದಕ್ಕೆ ಕಾರಣ.

15ನೆಯ ಶತಮಾನ ಇಂಗ್ಲಿಷ್ ಭಾಷೆಯ ಇತಿಹಾಸದಲ್ಲಿ ಪರ್ವಕಾಲ. ಆ ಅವಧಿಯಲ್ಲಿ ಇಂಗ್ಲಿಷ್ ಪದಗಳು ತಮ್ಮ ವಿಭಕ್ತಿ ಪ್ರತ್ಯಯಗಳನ್ನು ಕಳೆದುಕೊಂಡುವು. ಅಲ್ಲದೆ ಪದಗಳ ಉಚ್ಚಾರಣೆಯಲ್ಲೂ ವಿಫುಲವಾಗಿ ಬದಲಾವಣೆಯಾಯಿತು. ಉಚ್ಚಾರಣೆ ಮತ್ತು ಒತ್ತಡ ನಿಷ್ಕೃಷ್ಟವಾಗಿಲ್ಲದಿದ್ದಾಗ ಉತ್ತಮ ಕಾವ್ಯ ಬರುವುದು ಅಸಂಭವವಾಯಿತು. ತತ್ಕಾರಣ 15ನೆಯ ಶತಮಾನದ ಇಂಗ್ಲಿಷ್ ಸಾಹಿತ್ಯ ಕ್ಷೇತ್ರ ಬರಡಾಯಿತು. ಪರಿಸ್ಥಿತಿ ಉತ್ತಮಗೊಂಡು ಪದಗಳ ಉಚ್ಚಾರಣೆಯಲ್ಲಿ ಒಂದು ಸ್ತಿಮಿತತೆ ತಲೆದೋರಿದ ಮೇಲೆಯೇ ಮತ್ತೆ ಒಳ್ಳೆಯ ಸಾಹಿತ್ಯ-ಅದರಲ್ಲೂ ಕಾವ್ಯ-ಬರತೊಡಗಿದ್ದು. ಇದು ನಡೆದುದು 16ನೆಯ ಶತಮಾನದ ಎರಡನೆಯ ತಲೆಮಾರಿನ ಸುಮಾರಿಗೆ.

16ನೆಯ ಶತಮಾನದ ಇಂಗ್ಲಿಷ್ ಭಾಷೆ, ಸಾಹಿತ್ಯಗಳೆರಡೂ ಇನ್ನೊಂದು ಪ್ರಬಲವಾದ ಪ್ರಭಾವಕ್ಕೆ ಒಳಗಾದುವು. ಆಗ ನಡೆದ ಸಾಂಸ್ಕೃತಿಕ ನವೋದಯವೇ ಅದು. ಇಟಲಿ, ಪ್ರಾಚೀನ ರೋಮ್ ಮತ್ತು ಗ್ರೀಸ್ಗಳ ಸಾಹಿತ್ಯ, ಕಲೆ ಮೊದಲಾದವು ಪಶ್ಚಿಮ ಯುರೋಪಿನ ಜನರ ಮನೋಧರ್ಮದ ಮೇಲೆ ವಿಪುಲವಾದ ಪ್ರಭಾವ ಬೀರಿದ್ದಲ್ಲದೆ ಅವರ ಭಾಷೆಯೂ ಗ್ರೀಕ್ ಮತ್ತು; ಲ್ಯಾಟಿನ್ ಭಾಷೆಗಳಿಂದ ಪದಸಂಪತ್ತನ್ನು ಪಡೆದು ಸಮೃದ್ಧವಾಯಿತು. ಈ ಪದಗಳನ್ನು ತೆಗೆದುಕೊಂಡು ಇಂಗ್ಲಿಷಿನಲ್ಲಿ ಬಳಸಿದವರು ಪಂಡಿತರು-ಪಂಡಿತರಿಗಾಗಿ ಬರೆದ ಪುಸ್ತಕಗಳಲ್ಲಿ. ಆದ್ದರಿಂದ ಮೊದಮೊದಲು ವಿದ್ಯಾವಂತರ ವಲಯಗಳಿಗೆ ಸೀಮಿತವಾಗಿದ್ದ ಈ ಪದಗಳು ವಿದ್ಯೆ ಜನರಲ್ಲಿ ಹರಡಿದಂತೆಲ್ಲ ಸರ್ವಜನಪ್ರಿಯವಾದವು. ಲ್ಯಾಟಿನ್ ಮತ್ತು ಗ್ರೀಕ್ ಪದಗಳನ್ನು ತೆಗೆದುಕೊಳ್ಳುವ ಪ್ರವೃತ್ತಿ ಅಭ್ಯಾಸಗಳಂತೂ ಇಂಗ್ಲಿಷಿನಲ್ಲಿ ಇಂದಿಗೂ ನಿಂತಿಲ್ಲ. ಫ್ರೆಂಚ್ ಪದಗಳೂ ಲ್ಯಾಟಿನ್ ಪದಗಳೂ ಇಂಗ್ಲಿಷಿನ ಶಬ್ದಮಂದಿರದ ಆಧಾರಸ್ತಂಭಗಳಂತಿವೆ. ಎಷ್ಟು ಕ್ಷೇತ್ರಗಳಲ್ಲಿ ಎಷ್ಟು ಬಗೆಯ ಪದಗಳು ಬಂದುವೆಂಬುದು ಕೆಲವು ಉದಾಹರಣೆಗಳನ್ನು ಪರಿಶೀಲಿಸಿದರೆ ವಿದಿತವಾಗುತ್ತದೆ. ಲ್ಯಾಟಿನ್ನಿನ ಇಕ್ವಸ್ ಎಂಬ ಪದದಿಂದ ಇಂಗ್ಲಿಷಿನ ಈಕ್ವಲ್, ಈಕ್ವೇಟರ್, ಈಕ್ವಿವಲೆಂಟ್, ಅಡೆಕ್ವೆಟ್ ಪದಗಳೂ ಅನ್ನಸ್ (ವರ್ಷ) ಪದದಿಂದ ಇಂಗ್ಲಿಷಿನ ಆನ್ಯುಯಲ್, ಬೈಯನಿಯಲ್, ಪೆರಿನಿಯಲ್ ಪದಗಳೂ ಕಾರ್ಪಸ್ ಪದದಿಂದ ಕಾಪ್ರ್ಸ್, ಕೋರ್, ಕಾರ್ಪೊರೇಷನ್, ಕಾರ್ಪುಲೆಂಟ್ ಪದಗಳೂ ಕ್ರೆಡೊದಿಂದ ಕ್ರೀಡ್, ಕ್ರೆಡಿಬಲ್, ಇನ್ಕ್ರೆಡಿಬಲ್, ಕ್ರೆಡೆನ್್ಸ, ಮಿಸ್ಕ್ರಿಯೆಂಟ್ ಪದಗಳೂ ಮ್ಯಾಗ್ನಸ್ ಪದದಿಂದ ಮೇಜರ್, ಮೇಯರ್, ಮ್ಯಾಗ್ನೇಟ್, ಮ್ಯಾಗ್ನಿಫೈ, ಮ್ಯಾಗ್ನಿಟ್ಯೂಡ್ ಪದಗಳೂ ವೈಭವದಿಂದ ವಿವಿಡ್, ವಿವೇಷಸ್, ರಿವೈವ್, ಸರ್ವೈವ್ ಪದಗಳೂ ಬಂದಿವೆ. ವಾಸ್ತವವಾಗಿ ಇಂಥ ಸಾವಿರಾರು ಉದಾಹರಣೆಗಳನ್ನು ಕೊಡಬಹುದು. ಒಂದು ಲ್ಯಾಟಿನ್ ಮೂಲಪದದಿಂದ ಅನೇಕ ಇಂಗ್ಲಿಷ್ ಪದಗಳು ಹೇಗೆ ಬರಬಹುದೆಂಬುದನ್ನು ಈ ಉದಾಹರಣೆಗಳು ತೋರಿಸುತ್ತವೆ. ಗ್ರೀಕ್ ಭಾಷೆಯಿಂದಲೂ ಇಂಗ್ಲಿಷಿಗೆ ಇದೇ ತೆರನಾದ ಸಹಾಯವಾಗಿದೆ. ವಿದ್ವತ್ಪ್ರಪಂಚಕ್ಕೆ ಸೇರಿದ ನೂರಾರು ಪದಗಳು ಆ ಭಾಷೆಯಿಂದ ಬಂದುವು. ಆಂತ್ರೊಪಾಲಜಿ, ಮಿಸಾಂಚಿತ್ರೋಪ್, ಫಿಲಾಂತ್ರೊಪಿಸ್ಟ್, ಆಟೋಕ್ರಾಟ್, ಆಟೋಗ್ರಾಫ್, ಅನಾಟಮಿ, ಆಟೋಬಯಾಗ್ರಫಿ, ಆಟೊಮೊಬೈಲ್, ಬೈಬಲ್, ಬಿಬ್ಲಿಯಾಗ್ರಫಿ. ಬಿಬ್ಲಿಯೋಮೇನಿಯಕ್, ಇಡಿಯಟ್, ಇಡಿಯಮ್, ಇಡಿಯೊಸಿನ್ಕ್ರಸಿ, ಪೇಥಾಸ್, ಆ್ಯಂಟಿಪತಿ, ಸಿಂಪತಿ, ಪೆಟ್ರಿಫೈ, ಪೆಟ್ರೋಲಿಯಮ್, ಪೆರೆಂತೆಸಿಸ್-ಇವೆಲ್ಲ ಅಂಥ ಪದಗಳೇ. ಗ್ರೀಕಿನಿಂದ ಬಂದಿರುವ ಪದಗಳಲ್ಲಿ ಇವು ಕೇವಲ ಕೆಲವು ಮಾತ್ರ. ಸಂಸ್ಕೃತದ ಮೂಲ ಧಾತುಗಳಿಂದ ನಾವು ಸಂದರ್ಭಾನುಸಾರ ಅನೇಕ ಪದಗಳನ್ನು ರೂಪಿಸಿಕೊಳ್ಳಬಹುದಾಗಿರುವಂತೆ ಗ್ರೀಕ್ ಮೂಲಗಳಿಂದಲೂ ಇಂಗ್ಲಿಷರು ಮಾಡಿದ್ದಾರೆ. ಉದಾ : ಜೆಟಿಯೊ (ನಾನು ಅನ್ವೇಷಿಸುತ್ತೇನೆ) ಎಂಬ ಮೂಲಪದದಿಂದ ಜೆಟೆಮಾ (ಅನ್ವೇಷಣ ವಿಷಯ), ಜೆಟೆಟಿಸ್ (ಅನ್ವೇಷಣ ವಿಧಾನ), ಜೆಟೆಟೀಸ್ (ಅನ್ವೇಷಕ), ಜಟೆಟಿಕೋಸ್ (ಅನ್ವೇಷಣ ಶಕ್ತ ಅಥವಾ ಅನ್ವೇಷಣಾಸಕ್ತ)-ಹೀಗೆ ಪದಗಳನ್ನು ಪಡಯಲಾಗಿದೆ. ಈ ಕೆಲಸ ಇಂದೂ ನಡೆಯುತ್ತಿದೆ. ವಿಜ್ಞಾನಿಗಳು ತಮ್ಮ ಅನ್ವೇಷಣೆಗಳಿಗೂ ತಯಾರಿಕೆಗಳಿಗೂ ಹೊಸ ಹೆಸರುಗಳು ಬೇಕಾದಾಗ ಗ್ರೀಕ್ ಮತ್ತು ಲ್ಯಾಟಿನ್ ಮೂಲಗಳಿಗೆ ಕೈಚಾಚಿ ಅರ್ಥಸೂಚಕವಾದ ಹೆಸರುಗಳನ್ನು ಸೃಷ್ಟಿಸಿದ್ದಾರೆ. ಇವಲ್ಲದೆ ಆಲ್ಪಬೆಟ್, ಡ್ರಾಮ, ಕ್ರೈಟೀರಿಯನ್, ಪಾಲೆಮಿಕ್, ಆರ್ಕೆಸ್ಟ್ರಾ, ಡಾಗ್ಮ, ಮ್ಯೂಸಿಯಂ, ಅಟ್ಲಾಸ್, ಮೊದಲಾದ ಪದಗಳೆಲ್ಲ ಗ್ರೀಕ್ ಭಾಷೆಯಿಂದ ಬಂದಿರುವುವೇ, ಇಂಗ್ಲಿಷಿನಲ್ಲಿ ವಿಜ್ಞಾನ, ಕಲೆ, ಸಾಹಿತ್ಯ ವಿಮರ್ಶೆ, ತತ್ತ್ವಶಾಸ್ತ್ರ ಮೊದಲಾದ ವಿಷಯಗಳನ್ನು ವ್ಯಾಸಂಗ ಮಾಡುವವರೆಲ್ಲರೂ ಗ್ರೀಕ್ ಭಾಷೆಗೆ ಋಣಿಗಳು. ಪೇಲಿಯಂಟಾಲಜಿ, ಹೈಡ್ರೊಸ್ಟ್ಯಾಟಿಕ್ಸ್, ಮೆಗಾಲೋ ಮೇನಿಯಾ ಇತ್ಯಾದಿಯಾಗಿ ಪಾರಿಭಾಷಿಕ ಪದಗಳ ದೊಡ್ಡ ಪಟ್ಟಿಯನ್ನೇ ಕೊಡಬಹುದು. ಈ ಲ್ಯಾಟಿನ್ ಮತ್ತು ಗ್ರೀಕ್ ಪದಗಳ ಬಳಕೆಯ ಪರಿಣಾಮವಾಗಿ ಇಂಗ್ಲಿಷಿನಲ್ಲಿ ಪಂಡಿತಮಾನ್ಯವಾದ ಕ್ಲಿಷ್ಟಶೈಲಿಯೊಂದು ಕಡೆ, ಸಾಧಾರಣರಿಗೆ ಅರ್ಥವಾಗಬಲ್ಲ ಸರಳಶೈಲಿಯೊಂದು ಕಡೆ ಬೆಳೆದುವು. ಕಾಲಕ್ರಮೇಣ ಇವೆರಡೂ ಮಿಳನವಾಗಿ ಸಂದರ್ಭೋಚಿತವಾಗಿ ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳಿಂದ ಬಂದ ಪದಗಳ-ಆದರೆ ಒಟ್ಟಿನ ಮೇಲೆ ಇಂಗ್ಲಿಷ್ ಪದಗಳ-ಬಳಕೆ ವಾಡಿಕೆಯಾಗಿ ಉತ್ತಮವೂ ಎಲ್ಲ ಭಾವಗಳನ್ನೂ ಅರ್ಥಗಳನ್ನೂ ಸೂಚಿಸಬಲ್ಲುದೂ ಆದ ಶೈಲಿ ಬರಹಗಾರರಿಗೂ ಜನರಿಗೂ ಪ್ರ್ರಿಯವಾಗಿವೆ.

ಪ್ರಾಚೀನ ಭಾಷೆಗಳಾದ ಲ್ಯಾಟಿನ್ ಮತ್ತು ಗ್ರೀಕುಗಳಿಗಲ್ಲದೆ ಆಧುನಿಕ ಐರೋಪ್ಯ ಭಾಷೆಗಳಿಗೂ ಇಂಗಿಷ್ ಋಣಿಯಾಗಿದೆ. ಫ್ರೆಂಚ್ ಭಾಷೆಯ ಪ್ರಭಾವವನ್ನು ಕುರಿತು ಆಗಲೇ ಹೇಳಲಾಗಿದೆ. ಇಟ್ಯಾಲಿಯನ್, ಸ್ಪ್ಯಾನಿಷ್, ಪೋರ್ಚುಗೀಸ್, ಜರ್ಮನ್, ಡಚ್, ರಷ್ಯನ್, ಟರ್ಕಿಷ್, ಮೊದಲಾದ ಭಾಷೆಗಳಿಂದಲೂ ಪದಗಳು ಬಂದಿವೆ. ಸಾಹಿತ್ಯ, ಕಲೆ ಮೊದಲಾದ ಕ್ಷೇತ್ರಗಳಿಗೆ ಸೇರಿದ ಪದಗಳು ಇಟ್ಯಾಲಿಯನ್ನಿನಿಂದ ಹೆಚ್ಚಾಗಿ ಬಂದಿರುವುದು ಇಟಲಿ ನವೋದಯದ ತವರುನಾಡಾದುದರಿಂದ. ಸ್ಟೂಡಿಯೊ, ಫ್ರೆಸ್ಕೊ, ಕ್ಯಾರಾಸ್ಕೂರೂ, ರೆಪ್ಸಿಕಾ, ಮಾಟೋ, ಸ್ಟ್ಯಾಂಜಾಕ್ಯುಪೋಲಾ, ಪಯಾಜಾ, ವಾಯ್ಲಿನ್-ಇವೆಲ್ಲ ಇಟ್ಯಾಲಿಯನ್ ಪದಗಳು. ಬೇರೆ ಪದಗಳೂ ಅದರಿಂದ ಬೇಕಾದಷ್ಟು ಬಂದಿವೆ. ಸ್ಫ್ಯಾನಿಷ್ ಭಾಷೆಯಿಂದ ಗ್ರಾಂಡಿ, ನೀಗ್ರೊ, ಪೊಟಾಟೊ, ಎಸ್ಪ್ಲನೇಡ್, ಕೈನ್ಯಾನ್, ರೆನೆಗ್ಯಾಡೊ, ಟೊಬ್ಯಾಕೊ ಮೊದಲಾದ ಪದಗಳೂ ಪೋರ್ಚುಗೀಸ್ ಭಾಷೆಯಿಂದ ಕ್ಯಾಸ್ಟ್, ಪಗೋಡ, ಆಮಾಕೋಕೊ, ವೆರಾಂಡಾ ಮೊದಲಾದ ಪದಗಳೂ ರಷ್ಯನ್ ಭಾಷೆಯಿಂದ ಸ್ಟೆಪ್ಪಿ, ಬಾಲ್ಷೆವಿಕ್ ಪದಗಳೂ ಟರ್ಕಿಷ್ ಭಾಷೆಯಿಂದ ಕಾಫಿ, ಆಗಾ, ಕಿಯಾಸ್ಕ್, ಪಾಷಾ ಮೊದಲಾದವೂ, ಜರ್ಮನ್ ಭಾಷೆಯಿಂದ ಜೀಟ್ಗೀಸ್ಟ್, ಜಿಂಕೆ, ಕಿಂಡರ್ಗಾರ್ಟನ್ ಪದಗಳೂ ಡಚ್ ಭಾಷೆಯಿಂದ ಸಮುದ್ರಯಾನಕ್ಕೆ ಸಂಬಂಧಪಟ್ಟ ಕಮೋಡರ್, ಯಾಟ್, ಹಾಪ್, ಡಾಕ್, ಡಿಕ್ಯ್ಗಳೂ ಚಿತ್ರಲೇಖನಕ್ಕೆ ಸಂಬಂಧಿಸಿದ ಲ್ಯಾಂಡ್ಸ್ಕೇಪ್, ಸ್ಕೆಚ್, ಈಸೆಲ್, ಮೊದಲಾದವೂ ಬಂದಿವೆ. ಆಯಾ ದೇಶದ ಪದಗಳು ಆ ದೇಶಗಳು ಯಾವ ಯಾವ ಕಲೆಗಳಿಗೆ, ಶಾಸ್ತ್ರಗಳಿಗೆ, ಕಾರ್ಯಗಳಿಗೆ ಪ್ರಸಿದ್ಧವಾಗಿವೆ ಎಂಬುದನ್ನು ಸೂಚಿಸುತ್ತವೆ.

ಯುರೋಪಿನ ಭಾಷೆಗಳಲ್ಲದೆ ಅಮೆರಿಕದ ಸಂಯಕ್ತ ಸಂಸ್ಥಾನಗಳಿಂದಲೂ ದಕ್ಷಿಣ ಅಮೆರಿಕದಿಂದಲೂ ಇಂಗ್ಲಿಷ್ ಅನೇಕ ಪದಗಳನ್ನು ತೆಗೆದುಕೊಂಡಿದೆ. ಹೊರನಾಡುಗಳೊಂದಿಗೆ ಇಂಗ್ಲೆಂಡಿನ ಸಂಪರ್ಕ ಹೆಚ್ಚಿದಂತೆಲ್ಲ ಈ ಪದಗಳ ಸಂಗ್ರಹಣ ಹೆಚ್ಚುತ್ತಲೇ ಬಂದಿದೆ. ಅಮೆರಿಕದ ಸಂಯುಕ್ತ ಸಂಸ್ಥಾನಗಳ ಭಾಷೆಯೂ ಇಂಗ್ಲಿಷೇ. ಆದರೆ ಆ ದೇಶಕ್ಕೆ ಯುರೋಪಿನ ನಾನಾ ಪ್ರದೇಶಗಳಿಂದ ವಲಸೆಬಂದ ಜನ ತಮ್ಮ ತಮ್ಮ ಭಾಷೆಗಳ ಪ್ರಭಾವನ್ನು ಅಲ್ಲಿನ ಇಂಗ್ಲಿಷಿನ ಮೇಲೆ ಬೀರಿದ್ದಾರೆ. ಮಾತೃದೇಶವನ್ನು ಬಿಟ್ಟು ಸಾವಿರಾರು ಮೈಲಿಗಳ ದೂರ ಹೋದ ಅಮೆರಿಕದ ಇಂಗ್ಲಿಷ್ ತನ್ನದೇ ಆದ ಕೆಲವು ವೈಶಿಷ್ಟ್ಯಗಳನ್ನು ಪಡೆಯಿತು. ಪದಗಳ ಉಚ್ಚಾರಣೆಯಲ್ಲೇ ಹಲಕೆಲವು ವ್ಯತ್ಯಾಸಗಳು ಕಂಡುಬರುತ್ತವೆ. ಇಂಗ್ಲಿಷಿನಲ್ಲಿ ಈಗ ಫಿಗರ್, ಗೆಟ್, ಕ್ಯಾಚ್ ಎಂದು ಉಚ್ಚಾರಣೆಯಿರುವ ಪದಗಳು ಅಮೆರಿಕದ ಕೆಲವಡೆಗಳಲ್ಲಿ ಫಿ಼ಗ್ಗರ್, ಗಿಟ್, ಕೆಚ್ ಎಂಬ ಉಚ್ಚಾರಣೆ ಪಡೆದಿವೆ. ಹಿಂದೆ ಈ ಪದಗಳು ಇಂಗ್ಲೆಂಡಿನಲ್ಲೂ ಇದೇ ರೀತಿಯ ಉಚ್ಚಾರಣೆಯನ್ನು ಹೊಂದಿದ್ದು ಅನಂತರ ಬದಲಾವಣೆ ಹೊಂದಿದವು. ಅಮೆರಿಕದ ಕೆಲವು ಭಾಗಗಳಲ್ಲಿ ಮಾತೃದೇಶದಲ್ಲೇ ಇಲ್ಲವಾಗಿರುವ ಅಂಥ ಉಚ್ಚಾರಣೆಗಳು ಇನ್ನೂ ಜೀವಂತವಾಗಿವೆ. ಪದಗಳಲ್ಲೂ ವ್ಯತ್ಯಾಸಗಳುಂಟು. ಇಂಗ್ಲಿಷರು ಇಲ್ ಎಂಬುದನ್ನು ಅಮೆರಿಕನ್ನರು ಸಿಕ್ ಎನ್ನುತ್ತಾರೆ. (ಇಂಗ್ಲೆಂಡಿನಲ್ಲಿ ಸಿಕ್ ಎಂದರೆ ವಾಂತಿ ಬರುವಂತಾಗುವುದು ಎಂದರ್ಥ). ಇಂಗ್ಲೆಂಡಿನ ಡ್ರೈವರ್ ಅಮೆರಿಕದ ಇಂಜಿನಿಯರ್, ಇಂಗ್ಲೆಂಡಿನ ಲಗೇಜ್ ಅಮೆರಿಕದ ಬ್ಯಾಗೇಜ್, ಇಂಗ್ಲೆಂಡಿನ ರೈಲ್ವೆ ಅಮೆರಿಕದ ರೈಲ್ರೋಡ್, ಇಂಗ್ಲೆಂಡಿನ ಗಾರ್ಡ್ ಅಮೆರಿಕದ ಕಂಡಕ್ಟರ್ ಆಗುತ್ತವೆ. ಆ ದೇಶದ ಮೂಲನಿವಾಸಿಗಳಾದ ರೆಡ್ ಇಂಡಿಯನ್ನರಿಂದ, ವಲಸೆ ಬಂದು ನೆಲೆಸಿದ ಸ್ಪ್ಯಾನಿಷ್, ಜರ್ಮನ್, ಐರಿಷ್, ಫ್ರಂಚ್, ಮೊದಲಾದವರಿಂದ ಅಲ್ಲಿನ ಇಂಗ್ಲಿಷಿಗೆ ಹಲವಾರು ಪದಗಳು ಬಂದು ಸೇರಿ ಇಂಗ್ಲಿಷ್ ಭಾಷೆಯ ಒಟ್ಟು ಶಬ್ದಸಮೂಹ ಹೆಚ್ಚಿದೆ. ದಕ್ಷಿಣ ಅಮೆರಿಕನ್ನರು ಇಂಗ್ಲಿಷ್ ಕಾಗುಣಿತವನ್ನು ಕೂಡ ಸರಳಗೊಳಿಸಲು ಪ್ರಯತ್ನಿಸಿದ್ದಾರೆ. ಉದಾ: ಅoಟoಡಿ, ಣಡಿಚಿveಟeಡಿ ಪದಗಳು ಇಂಗ್ಲಿಷಿನ ಛಿoಟouಡಿ, ಣಡಿಚಿveಟeಡಿ ಪದಗಳ ಅಮೆರಿಕನ್ ರೂಪಗಳು. ಉಚ್ಚರಿಸದೆ ಇರುವ ಅಕ್ಷರಗಳನ್ನು ಹೀಗೆ ಬಿಡಲಾಗಿದೆ.

ಪೌರ್ವಾತ್ಯ ದೇಶಗಳಿಂದಲೂ ಇಂಗ್ಲಿಷ್ ಶಬ್ದಭಂಡಾರಕ್ಕೆ ಕೊಡುಗೆ ಸಂದಿದೆ. ಫಕೀರ್, ಜೀರೋ, ಹೌರಿ, ಹೂಕಾ, ಫೌಲ್, ಸಿರಪ್, ಗಾರ್ಬಲ್, ಟ್ಯಾರಿಫ್, ಟ್ಯಾಮರಿಂಡ್, ಅಸ್ಯಾಸಿನ್, ಮ್ಯಾಗಜಿನ್ ಮೊದಲಾದ ಪದಗಳು ಅರಬ್ಬೀ ಭಾಷೆಯಿಂದಲೂ ಪ್ಯಾರಡೈಸ್, ಜಾಸ್ಮಿನ್, ಅಜ್ಯೂರ್, ಖಾಕಿ, ಪಾಲ್, ಚೆಸ್, ಮಸ್ಕ್ ಮೊದಲಾದವು ಪಾರಸೀ ಭಾಷೆಯಿಂದಲೂ ಟೀ, ಕ್ವೋಟೋಗಳು ಚೀನಿಭಾಷೆಯಿಂದಲೂ ಕಿಮೋನೋ, ಹರ-ಕಿರಿ, ಗೈಯ್ಷಾ, ಜುಜಿಟ್ಸು, ಜಿನ್ರಿಕ್ಷ ಪದಗಳು ಜಪಾನಿ ಭಾಷೆಯಿಂದಲೂ ಬೂಮರಾಂಗ್, ಒರಾಂಗ್ ಓಟಾಂಗ್ ಷಿಂಪಾಂಜಿ, ಟ್ಯಾಟೂ, ಟ್ಯಾಬೂ ಮೊದಲಾದವು ಪೆಸಿಫಿಕ್ ದ್ವೀಪಗಳಿಂದಲೂ ಬಂದಿವೆ. ನಮ್ಮ ಭಾರತೀಯ ಭಾಷೆಗಳೂ ಬೇಕಾದಷ್ಟು ಪದಗಳನ್ನು ಇಂಗ್ಲಿಷಿಗೆ ಕೊಟ್ಟಿವೆ. ಕ್ಯಾಲಿಕೋ, ಚಿಂಟ್ಸ್, ಕೋಪ್ರ, ಕಾಯಿರ್, ಷುಗರ್, ಇಂಡಿಗೊ, ಮಾಂಡ್, ಬೀಟ್ಲ್, ಅರೆಕ, ಸ್ಯಾಂಡಲ್, ಆಯಾ, ಬ್ಯಾನ್ಯನ್, ಸಾಂಬೂರ್, ಷಿಕಾರ್, ಜಗ್ಗರ್ನಾಟ್, ಲೂಟಿ, ಯೋಗಿ, ಧರ್ಮ, ಸಮಾಧಿ, ಸಂಸಾರ, ಪಂಡಿತ ಮೊದಲಾದವುಗಳೆಲ್ಲ ಭಾರತೀಯ ಪದಗಳೇ. ಇಂಥ ಪದಗಳು ಸಾವಿರಾರಿವೆ ಎಂದು ತಜ್ಞರು ಲೆಕ್ಕ ಹಾಕಿದ್ದಾರೆ.

ಮೇಲಿನ ವಿವರಗಳು ಇಂಗ್ಲಿಷ್ ಭಾಷೆ ಹೇಗೆ ನಿಸ್ಸಂಕೋಚವಾಗಿ ಜಗತ್ತ್ತಿನ ಎಲ್ಲ ಭಾಷೆಗಳಿಂದಲೂ ತನಗೆ ಬೇಕಾದ, ಅನುಕೂಲವಾದ ಪದಗಳನ್ನು ತೆಗೆದುಕೊಂಡು ವಿವಿಧ ಮುಖಗಳ ಶಬ್ದಸಂಪತ್ತನ್ನು ವೃದ್ಧಿಪಡಿಸಿಕೊಂಡಿದೆ. ಹೀಗೆ ಎಲ್ಲ ಅನುಭವಗಳ, ಭಾವಗಳ, ಆಲೋಚನೆಗಳ ಅಭಿವ್ಯಕ್ತಿಗೂ ಸಾಮರ್ಥ್ಯವನ್ನು ಗಳಿಸಿದೆ ಎಂಬುದರ ಅರಿವು ಸ್ವಲ್ಪಮಟ್ಟಿಗಾದರೂ ನಮಗೆ ತೋರದಿರದು. ಹೀಗೆ ಅದು ಎಲ್ಲ ಕಡೆಯಿಂದಲೂ ಶಬ್ದಸಂಪತ್ತನ್ನು ಪಡೆದಿರುವುದರಿಂದಲೇ ಜಗತ್ತಿನ ಅತ್ಯಂತ ವ್ಯಾಪಕವೂ ಪ್ರಭಾವಯುತವೂ ಆದ ನುಡಿಯಾಗಿ ಶೋಭಿಸುತ್ತ್ತಿರುವುದು.

ಇಂಗ್ಲಿಷ್ ಭಾಷೆ ಬೆಳೆದಿರುವುದು ಕೇವಲ ಪರಭಾಷಾಪದಗಳನ್ನು ತೆಗೆದುಕೊಂಡು ತನ್ನ ಭಂಡಾರಕ್ಕೆ ಸೇರಿಸಿಕೊಳ್ಳುವುದರಿಂದಲೇ ಅಲ್ಲ. ಅದರಲ್ಲಿ ಸಾಹಿತ್ಯ ಸೃಷ್ಟಿ ಮಾಡಿರುವ ಪ್ರಸಿದ್ಧ ಲೇಖಕರನೇಕರು ಹೊಸ ಹೊಸ ಪದಗಳನ್ನೂ ಪದಗುಚ್ಛಗಳನ್ನೂ ರೂಪಿಸಿ ಅದರ ಅಭಿವ್ಯಕ್ತಿಶಕ್ತಿಯನ್ನು ಹೆಚ್ಚಿಸಿದ್ದಾರೆ. ಅವರೆಲ್ಲರೂ ತಮ್ಮ ಭಾಷೆಯ ಪದಗಳನ್ನು ಹೊಸ ಹೊಸ ರೀತಿಗಳಲ್ಲಿ ಉಪಯೋಗಿಸಿ ಅವುಗಳಿಗೆ ಹೊಸ ಜೀವವನ್ನೇ ಕೊಟ್ಟಿದ್ದಾರೆ. ಹೊಸ ಪದಗಳನ್ನು ಸೃಷ್ಟಿಸುವುದು ಹೇಗೆ ಭಾಷೆಯ ಭಂಡಾರವನ್ನು ಬೆಳೆಸುವುದೊ ಹಾಗೆಯೇ ಇರುವ ಪದಗಳ ನೂತನ ಸಂಯೋಜನೆ ಮತ್ತು ಪ್ರಯೋಗಗಳು ಅದರಲ್ಲಿರುವ ಅಭಿವ್ಯಕ್ತಿಸಾಧ್ಯತೆಗಳನ್ನು ಬೆಳೆಸುತ್ತವೆ. ಛಾಸರ್, ಸ್ಪೆನ್ಸರ್, ಬೈಬಲಿನ ಪ್ರಸಿದ್ಧ ಇಂಗ್ಲಿಷ್ ಭಾಷಾಂತರವಾದ ದಿ ಆಥರೈಸ್ಡ್ ವರ್ಷನ್ನಿನ ಕರ್ತರು. ಷೇಕ್ಸ್ ಪಿಯರ್, ಸ್ಪೆನ್ಸರ್, ಮಿಲ್ಟನ್ ಇವರನ್ನು ಈ ಸಂದಂರ್ಭದಲ್ಲಿ ಮುಖ್ಯರೆಂದು ನೆನೆಯಬೇಕು. ಬೈಬಲಿನ ಭಾಷಾಂತರದಿಂದ ಇಂಗ್ಲಿಷಿಗೆ ಪೀಸ್ ಮೇಕರ್, ಲಾಂಗ್ ಸಫರಿಂಗ್, ಲವಿಂಗ್ ಕೈಂಡ್ ನೆಸ್, ಮಾರ್ನಿಂಗ್ ಸ್ಟಾರ್, ಫರ್ಮಮೆಂಟ್, ಡ್ಯಾಮ್ಸೆಲ್ ಮೊದಲಾದ ಮುದ್ದಾದ ಮಾತುಗಳು ಸಿಕ್ಕಿರುವುದಲ್ಲದೆ, ನ್ಯೂ ವೈನ್ ಇನ್ ಓಲ್ಡ್ ಬಾಟಲ್, ಹೌಸ್ ಡಿವೈಡೆಡ್ ಅಗ್ಯೇನ್ಸ್ಟ ಇಟ್ಸೆಲ್ಪ್, ದಿ ಅವರ್ ಹ್ಯಾಸ್ ಕಮ್, ದಿ ಇಲೆವಂತ್ ಅವರ್, ಎ ಲೇಬರ್ ಆಫ್ ಲವ್, ಟು ಸಿ ಐ ಟು ಐ, ಕ್ಯಾಸ್ಟ್ ಪಲ್ಸ್ ಬಿಫೋರ್ ಸ್ವೈನ್, ಮೊದಲಾದ ಅರ್ಥ ಪೂರ್ಣವಾದ ನೂರಾರು ಪದಗುಚ್ಛಗಳು ಬಂದಿವೆ. ಫುಟ್ ಬಾಲ್, ಮಲ್ಟಿ ಟ್ಯೂಡಿನಸ್ ಇನ್ ಕಾರ್ನಡೈನ್, ಹೋಮ್ ಕೀಪಂಗ್, ಎ ಹೆವೆನ್ ಕಿಸಿಂಗ್ ಹಿಲ್, ದಿ ಸಿಯರ್ ಅಂಡ್ ಯಲ್ಲೊ ಲೀಫ್, ಟು ಬಿ ಆರ್ ನಾಟು ಟು ಬಿ, ಅಂಡರ್ ದಿ ಗ್ರೀನ್ವುಡ್ ಟ್ರೀ, ದಿ ಟೈಮ್ ಈಸ್ ಔಟ್ ಆಫ್ ಜಾಯಿಂಟ್, ಬ್ರೆವಿಟಿ ಈಸ್ ದಿ ಸೋಲ್ ಆ¥sóï ವಿಟ್ ಮೊದಲಾದ, ಇಂಗ್ಲಿಷ್ ಬಲ್ಲವರು ಮತ್ತೆ ಮತ್ತೆ ಉಪಯೋಗಿಸುವ ಸಾವಿರಾರು ಪದಗಳೂ ಪದಗುಚ್ಛಗಳೂ ಷೇಕ್ಸ್ಪಿಯರನವು. ನಾಮಪದವನ್ನು ಕ್ರ್ರಿಯಾಪದವಾಗಿ ಉಪಯೋಗಿಸುವುದು ಇತ್ಯಾದಿ ಪ್ರಯೋಗಗಳಲ್ಲಿ ಷೇಕ್್ಸಪಿಯರ್ ಎತ್ತಿದ ಕೈ. ಸ್ಪೆನ್ಸರ್ ಮತ್ತು ಮಿಲ್ಟನರೂ ಇದೇರೀತಿ ತಮ್ಮದೇ ಆದ ಪದಗಳನ್ನು ಸೃಷ್ಟಿಸಿ ಭಾಷೆಗೆ ನೀಡಿದ್ದಾರೆ. ಅವರ ಅನಂತರ ಬಂದ ಲೇಖಕರು ತಮ್ಮ ತಮ್ಮ ಯೋಗ್ಯತಾನುಸಾರ ಈ ಕೆಲಸ ಮಾಡಿರುವರು. ಒಂದು ಭಾಷೆ ಬೆಳೆಯಲು ಅದರಲ್ಲಿ ಕೃತಿರಚನೆ ಮಾಡುವ ಬರೆಹಗಾರರು ಹೇಗೆ ಸಹಾಯಕರಾಗಬಹುದು ಎಂಬುದಕ್ಕೆ ಈ ಇಂಗ್ಲಿಷ್ ಲೇಖಕರು ಅತ್ಯುತ್ತಮ ನಿದರ್ಶನಗಳಾಗಿದ್ದಾರೆ.

ಇಂಗ್ಲಿಷ್ ಭಾಷೆ ಇನ್ನೊಂದು ರೀತಿಯಲ್ಲಿ ಬೆಳೆದಿದೆ. ಒಂದೇ ಅರ್ಥವನ್ನು ಕೊಡುವ ಅನೇಕ ಶಬ್ದಗಳು ಯಾವ ಭಾಷೆಯಲ್ಲಾದರೂ ಬರುವುದುಂಟು. ಸಾಮಾನ್ಯ ಜನ ಅನಾವಶ್ಯಕವಾದ ಇಂಥ ಪದಗಳನ್ನೆಲ್ಲ ಬಳಸಲು ಇಷ್ಟಪಡುವುದಿಲ್ಲ. ಆದ್ದರಿಂದ ಕಾಲಕ್ರಮೇಣ ಅವುಗಳಲ್ಲಿ ಕೆಲವನ್ನು ಮರೆತುಬಿಡಬಹುದು. ಇಲ್ಲದಿದ್ದರೆ ಒಂದು ಅರ್ಥದಲ್ಲಿ ಒಂದು ಅಥವಾ ಎರಡು ಪದಗಳನ್ನು ಇಟ್ಟುಕೊಂಡು ಮಿಕ್ಕ ಪದಗಳನ್ನು ಸ್ವಲ್ಪ ಬೇರೆ ಅರ್ಥಕೊಡುವಂತೆ ಮಾರ್ಪಡಿಸಿಕೊಳ್ಳಬಹುದು. ಇಂಗ್ಲಿಷಿನಲ್ಲೂ ಇಂಥ ಅರ್ಥವ್ಯತ್ಯಾಸ ನಾನಾರೀತಿಯಲ್ಲಿ ನಡೆದಿದೆ. ಅಂಕಿತನಾಮಗಳು ಸಾಮಾನ್ಯನಾಮಗಳಾಗುವುದು ಒಂದು ಉದಾಹರಣೆ. ಸ್ಯಾಂಡ್ವಿಚ್ ಎಂದರೆ ಇಂದು ಎರಡು ಬ್ರೆಡ್ ಚೂರುಗಳ ನಡುವೆ ಏನಾದರೂ ವ್ಯಂಜನಪದಾರ್ಥವಿಟ್ಟು ಮಾಡಿರುವ ತಿನಿಸು. ಅದರ ಹೆಸರು ಅದನ್ನು ಮೊದಲು ಬಳಕೆಗೆ ತಂದ ಲಾರ್ಡ್ ಸ್ಯಾಂಡ್ವಿಚ್ಚನದು. ರಸ್ತೆಗೆ ಟಾರು ಹಾಕುವುದಕ್ಕೆ ಮ್ಯಾಕಡಮೈಸ್ ಎನ್ನುವುದುಂಟು-ಮ್ಯಾಕ್ ಆಡಮ್ ಅದರ ಪ್ರವರ್ತಕರಲ್ಲಿ ಒಬ್ಬನಾದ್ದರಿಂದ, ಬಾಯ್ಕ್ಕಾಟ್, ಲಿಂಡ್, ಮೆಂಟಾರ್, ವೋಲ್ಟ್, ಡಾಹ್ಲಿಯಾ, ಗಿಲೊಟಿನ್, ಪ್ಯಾಶ್ಚರೈಸ್ ಮೊದಲಾದ ಪದಗಳೆಲ್ಲ ಹೀಗೆ ಬಂದವು. ಸ್ಥಳಗಳ ಹೆಸರುಗಳಿಂದಲೂ ಕೆಲವು ಪದಗಳು ಬಂದಿವೆ. ಕ್ಯಾಲಿಕಟ್ನಿಂದ ಕ್ಯಾಲಿಕೊ, ಡಾಮಸ್ಕಸಿನಿಂದ ಡಾಮಾಸ್ಕ್, ಈಜಿಪ್ಟಿನಿಂದ ಜಿಪ್ಸಿ, ಇತ್ಯಾದಿ. ಕೆಲವು ಹೆಸರುಗಳು ಮೊದಲು ಒಂದೇ ಒಂದು ವಸ್ತುವನ್ನು ಸೂಚಿಸುತ್ತಿದ್ದು ಈಚೆಗೆ ಸಾಮಾನ್ಯವಾಗಿವೆ. ಮೂಲವಸ್ತುಗಳನ್ನು ಹೋಲುವ ಇತರ ವಸ್ತುಗಳಿಗೂ ಅವನ್ನು ಬಳಸುವ ವಾಡಿಕೆ ಬಂದಿದೆ. ಉದಾ: ಪೈಪ್ ಎಂಬ ಪದ ಮೂಲತ: ಕೊಳವೆ. ಇದನ್ನು ಕೊಳಲು, ನಳಿಗೆ, ಸಿಗಾರು-ಹೀಗೆ ಬೇರೆ ಬೇರೆ ಸಂದರ್ಭಗಳಲ್ಲಿ ಉಪಯೋಗಿಸುತ್ತಾರೆ. ಟಂಗ್, ನಾಲಿಗೆ, ಬೆಂಕಿಯ ಜ್ವಾಲೆ, ಭೂಮಿಯ ಚಾಚು, ಹೀಗೆಲ್ಲಾ ಆಗಿದೆ. ಇನ್ನೂ ಕೆಲವು ಪದಗಳು ಅರ್ಥವಿಸ್ತರಣೆಹೊಂದಿವೆ. ಕಂಪ್ಯಾನಿಯನ್ ಮೊದಲು ಭೋಜನದಲ್ಲಿ ಸಂಗಾತಿಯಾಗಿದ್ದವು. ಈಗ ಯಾವ ಸಂಗಾತಿಯಾದರೂ ಆಗಬಹುದು. ಕಫೂರ್ಯ್ ಮೊದಲು ರಾತ್ರಿ ಹೊತ್ತಿನಲ್ಲಿ ಮನೆಯಲ್ಲಿರಬೇಕೆಂದಿದ್ದುದು ಈಗ ಯಾವ ಹೊತ್ತಿನಲ್ಲಾದರೂ ಆದೀತು. ಮೇಕೆ ಕೊಲ್ಲುವವನಾಗಿದ್ದ ಬುಚರ್ ಈಗ ಯಾವ ಪ್ರಾಣಿಯನ್ನಾದರೂ ಕಡಿದು ಮಾರುತ್ತಾನೆ. ಈ ಪ್ರವೃತ್ತಿಗೆ ವಿರುದ್ಧವಾದುದು ಅರ್ಥ ಸಂಕುಚಿತವಾಗುವುದು. ಮೀಟ್ ಯಾವ ಆಹಾರವಾದರೂ ಆಗಬಹುದಾಗಿತ್ತು; ಈಗ ಮಾಂಸ ಮಾತ್ರ; ಡೀರ್ ಯಾವ ಪ್ರಾಣಿಯಾದರೂ ಆಗಿದ್ದುದು ಈಗ ಜಿಂಕೆ ಮಾತ್ರ; ‘ಸ್ಟಿಂಕ್’ ಯಾವ ವಾಸನೆಯಾದರೂ ಆಗಿರಬಹುದಾಗಿದ್ದುದು ಈಗ ಕೆಟ್ಟ ವಾಸನೆ ಮಾತ್ರ. ವಾಯೆಜ್ ಯಾವ ಯಾನವಾದರೂ ಆಗಿದ್ದುದು ಈಗ ನೌಕಾಯಾನ ಮಾತ್ರ. ಕೆಲವು ಸಾರಿ ಕಾಗುಣಿತ ವ್ಯತ್ಯಾಸದಿಂದ ಅರ್ಥವ್ಯತ್ಯಾಸವೂ ಆಗಿಬಿಟ್ಟಿದೆ. ಘಿÆ್ರ-ಥರೊ, ಹ್ಯೂಮನ್-ಹ್ಯುಮೇನ್, ಟು-ಟೂ, ಮ್ಯಾಂಟಲ್-ಮ್ಯಾಂಟ್ಲ್ ಹೀಗೆ. ಕೆಲವು ಪದಗಳು ಅಶುಭಸೂಚಕವೆಂಬ ಕಾರಣದಿಂದ ಜನ ಅವಕ್ಕೆ ಬದಲಾಗಿ ಬೇರೆ ಪದಗಳನ್ನು ಬಳಸುತ್ತಾರೆ. ಉದಾಹರಣೆಗೆ ಸಮಾಧಿ ಎಂಬ ಅರ್ಥ ಕೊಡುವ ಗ್ರೇವಿಗೆ ಬದಲಾಗಿ ಸಿಮೆಟರಿ ಎನ್ನುವುದು. ಸಿಮೆಟರಿ ವಾಸ್ತವವಾಗಿ ಮಲಗುವ ಸ್ಥಳ ಮಾತ್ರ. ಲಿಂಗಭೇದಗಳನ್ನು ಸೂಚಿಸಲು ಬೇರೆ ಬೇರೆ ಪದಗಳು ಸೃಷ್ಟಿಯಾಗಿ ಪದಗಳು ಬೆಳೆವುದುಂಟು: ಕನ್ನಡದ ಹೆಣ್ಣು ಕುದುರೆ, ಹೆಣ್ಣುನಾಯಿ, ಹೆಣ್ಣು ಹುಲಿ ಮೊದಲಾದ ಪದಗಳಿಗೆ ಇಂಗ್ಲಿಷಿನಲ್ಲಿ ಮೇರ್, ಬಿಚ್, ಟೈಗ್ರೆಸ್ ಇತ್ಯಾದಿಯಾಗಿ ಪ್ರತ್ಯೇಕ ಪದಗಳೇ ಇವೆ. ಕೆಲವು ಪದಗಳ ಅರ್ಥ ಬರಬರುತ್ತ ಉಚ್ಚವಾದರೆ ಇನ್ನು ಕೆಲವು ಪದಗಳ ಅರ್ಥ ಕೀಳಾಗುತ್ತದೆ. ಉದಾ : ಪೈರೇಟ್ ಎಂದರೆ ಸಾಹಸಿ ಎಂದಷ್ಟೆ ಇದ್ದುದು ಈಗ ಕಡಲ್ಗಳ್ಳ ಎಂದಾಗಿದೆ. ಹೊಸ ಅರ್ಥಕ್ಕೂ ಮೂಲ ಅರ್ಥಕ್ಕೂ ಈಗಲೂ ಸ್ವಲ್ಪಮಟ್ಟಿನ ಸಂಬಂಧ ಉಳಿದುಕೊಂಡು ಬಂದಿರುವುದನ್ನು ಗಮನಿಸಬೇಕು. ಸ್ಲೈ, ಕ್ರಾಫ್ಟಿ, ಕನಿಂಗ್ ಎಂಬ ಪದಗಳ ಮೂಲ ಅರ್ಥ ಚತುರ ಎಂದಿದ್ದುದು ಈಗ ಕದೀಮ ಎಂದಾಗಿದೆ. ಇದಕ್ಕೆ ವಿರುದ್ಧವಾಗಿ ಕುದುರೆಯ ಆಳು ಎಂಬರ್ಥದ ಮಾರ್ಷಲ್ ಈಗ ಸೈನ್ಯಾಧಿಕಾರಿಯ ಬಿರುದು; ಸೇವಕ ಎಂದರ್ಥ ಕೊಡುತ್ತ್ತಿದ್ದ ಮಿನಿಸ್ಟರ್ ಈಗ ಮಂತ್ರಿ ಅಥವಾ ಧರ್ಮಬೋಧಕ. ಹೀಗೆ ಬೇರೆ ಬೇರೆ ಅರ್ಥ ಬಂದಾಗ ಪದ ಹಿಂದಿನದೇ ಆದರೂ ಅದು ಹೊಸ ಪದದ ಸೃಷ್ಟಿಗೆ ಸಮವಾಗುತ್ತದೆ.

ಇಂಗ್ಲಿಷಿನಲ್ಲಿ ಇಂಥ ಹೊಚ್ಚ ಹೊಸ ಪದಗಳ ಸೃಷ್ಟ್ಟಿಯೂ ಆಗಿದೆ. ಒಂದು ಪದದಿಂದ ಇನ್ನೊಂದನ್ನು ರೂಪಿಸಿಕೊಳ್ಳುವುದೂ ನಡೆದಿದೆ (ಕ್ರಿಯಾಪದಗಳ ವಿವಿಧ ಭೇದಗಳನ್ನು ಸೂಚಿಸಲು ಈ ರೀತಿಯ ಪದಸೃಷ್ಟಿ ಸಹಾಯಕವಾಗುತ್ತದೆ). ಉದಾ: ಸಿಂಗ್-ಸ್ಯಾಂಗ್-ಸಂಗ್-ಸಾಂಗ್ ಇತ್ಯಾದಿ. ಇದಲ್ಲದೆ ಎರಡು ಬೇರೆ ಬೇರೆ ಪದಗಳನ್ನು ಸೇರಿಸಿ ಒಂದು ಪದವಾಗಿಸಿರುವುದೂ ಉಂಟು. ಉದಾ : ಹೌಸ್-ಟಾಪ್, ರೇಲ್-ವೇ, ವೀಕ್-ಎಂಡ್, ಸ್ವೀಟ್-ಮೀಟ್, ಅಪ್-ಗ್ರೇಡ್, ಮೊದಲಾದವು. ಪದಗಳನ್ನು ಸಂಕ್ಷಿಪ್ತಗೊಳಿಸಿಯೂ ಬೇರೆ ಪದಗಳನ್ನು ಪಡೆಯಲಾಗಿದೆ. ಆಮ್ನಿಬಸ್ ನಿಂದ ಬಸ್, ಫೋಟೋಗ್ರಾಫಿನಿಂದ ಫೊ಼ಟೋ, ಅಮೆಂಡಿನಿಂದ ಮೆಂಡ್, ವೆಟೆರಿನರಿಯಿಂದ ವೆಟ್-ಹೀಗೆ.

ಇವಲ್ಲದೆ ಪ್ರಾಂತೀಯ ಪ್ರಯೋಗಗಳು, ಆಡುಮಾತು, ಅಶಿಷ್ಟಭಾಷೆ, ರಹಸ್ಯಭಾಷೆ ಇವುಗಳಿಂದಲೂ ಬಂದ ಎಷ್ಟೋ ಪದಗಳು ವರ್ಷವರ್ಷವೂ ಇಂಗ್ಲಿಷಿನ ಶಬ್ದಸಂಪತ್ತನ್ನು ವಿಸ್ತರಿಸುತ್ತಿವೆ.

ಇಂಗ್ಲಿಷ್ ಭಾಷೆ ಶಾಖೋಪಶಾಖೆಯಾಗಿ ಹೀಗೆಲ್ಲ ಬೆಳೆದು ಮಹತ್ತರವಾದ ವೃಕ್ಷವಾಗಿ ನಿಂತಿದೆ. ಅದರ ಬೆಳವಣಿಗೆಯ ರಹಸ್ಯವಿರುವುದು ಅದು ಯಾವ ಪ್ರಭಾವಕ್ಕಾದರೂ ತನ್ನ ಬಾಗಿಲನ್ನು ತೆರೆದಿಟ್ಟಿರುವುದು. ಆಧುನಿಕ ಯುಗದಲ್ಲಿ ವಿಜ್ಞಾನಿಗಳು ತಮ್ಮ ಆವಶ್ಯಕತೆಗಳಿಗಾಗಿ ಬೇಕು ಬೇಕಾದಷ್ಟು ಹೊಸ ಪದಗಳನ್ನು ಸೃಷ್ಟಿಸಿಕೊಂಡಿದ್ದಾರೆ, ಸೃಷ್ಟಿಸುತ್ತಲಿದ್ದಾರೆ. ಟೆಲಿಗ್ರಾಫ್, ಟೆಲಿಫೋನ್, ಅಲ್ಯೂಮಿನಿಯಂ ಇತ್ಯಾದಿ ಹೆಸರುಗಳ ಜೊತೆಗೆ ಇತ್ತೀಚಿನ ರೇಡಾರ್, ಸ್ಪೇಸ್ ಷಿಪ್, ಮಾಡ್ಯೂಲ್ ಮೊದಲಾದ ಪದಗಳನ್ನೂ ಇಲ್ಲಿ ಸೂಚಿಸಬಹುದು. ವಿಜ್ಞಾನದ ಬೆಳೆವಣಿಗೆ ಭಾಷೆಯ ಬೆಳೆವಣಿಗೆಗೆ ಹೇಗೆ ಸಾಧಕವಾಗಬಹುದೆಂಬುದಕ್ಕೆ ಇಂಗ್ಲಿಷಿನಲ್ಲಿ ಒಳ್ಳೆಯ ನಿದರ್ಶನಗಳು ದೊರೆಯುತ್ತವೆ. ರೇಡಿಯೋ, ಟೆಲಿವಿಷನ್, ಸಿನಿಮಾ ಮೊದಲಾದವು ಇಂಗ್ಲಿಷನ್ನು ಜಗತ್ತಿನಾದ್ಯಂತವೂ ಹರಡುವ ಸಾಧನಗಳಾಗಿ ಪರಿಣಮಿಸಿವೆ. ಇಂಗ್ಲಿಷಿನ ಕಾಗುಣಿತ ಸ್ವಲ್ಪ ಕ್ಲಿಷ್ಟವೆಂದು ಅದನ್ನು ಹೊಸದಾಗಿ ಕಲಿಯತೊಡಗಿದವರಿಗೆ ಅನ್ನಿಸಬಹುದಾ ದರೂ ಅದು ದುರ್ಭರವಾಗುವಂಥ ಸಮಸ್ಯೆಯೇನೂ ಅಲ್ಲ. ಇಂಗ್ಲಿಷರೂ ಅಮೆರಿಕದವರೂ ತಾವೇ ಈ ಕಷ್ಟವನ್ನು ಮನಗಂಡು ಕಾಗುಣಿತವನ್ನು ಸುಧಾರಿಸಲು ಪ್ರಯತ್ನಿಸಿದ್ದಾರೆ. ಆದರೆ ಜನ ಅಷ್ಟು ಸುಲಭವಾಗಿ ತಮ್ಮ ಪದ್ಧತಿಗಳನ್ನು ಬಿಟ್ಟುಕೊಡುವುದಿಲ್ಲ. ಇಂಗ್ಲಿಷ್ ವ್ಯಾಕರಣ ವಿಪರೀತ ನಿಯಮಗಳಿಂದ ಭಾಷೆಯ ಉಸಿರುಕಟ್ಟಿಸದೆ ಸುಲಭವಾಗಿದೆ ಯೆಂದೇ ಹೇಳಬಹುದು. ಈ ಎಲ್ಲ ಕಾರಣಗಳಿಂದ ಅದು ಜಗತ್ತಿನ ಅತ್ಯಂತ ಹೆಚ್ಚಿನ ಸಂಖ್ಯೆಯ ಜನ ಮಾತಾಡುವ ಅಥವಾ ಅರ್ಥಮಾಡಿಕೊಳ್ಳಬಲ್ಲ ಭಾಷೆಯಾಗಿದೆ. ಅದರ ಪದಗಳ ಸಂಖ್ಯಾ ವಿಪುಲತೆ ಮತ್ತು ಅರ್ಥನಿಷ್ಕೃಷ್ಟತೆಗಳಿಗೆ ಆ ಭಾಷೆಯಲ್ಲಿ ಬಂದಿರುವ ನಿಘಂಟುಗಳು ಸೂಚಕವಾಗಿವೆ. ಅವುಗಳಲ್ಲಿ 18ನೆಯ ಶತಮಾನದಲ್ಲಿ ಪ್ರಕಟವಾದ ಜಾನ್ಸನ್ನನನಿಘಂಟು ಇಂದೂ ತನ್ನದೇ ಆದ ಒಂದು ಸ್ಥಾನ ಪಡೆದಿದೆ. ಅಲ್ಲಿಂದೀಚೆಗೆ ಬಂದಿರುವ ವೆಬ್ಸ್ಟರ್ರವರ ನಿಘಂಟು. ಆಕ್್ಸಫರ್ಡ್ ನಿಘಂಟು, ರ್ಯಾಂಡಮ್ ಹೌಸ್ ನಿಘಂಟು ಮೊದಲಾದುವು ಪ್ರಸಿದ್ಧವಾಗಿವೆ. ಆಕ್್ಸಫರ್ಡ್ ನಿಘಂಟು ಇಂಗ್ಲಿಷ್ ಭಾಷೆಗೆ ಸಂಬಂಧಪಟ್ಟ ವಿಷಯಗಳಲ್ಲಿ ದೊಡ್ಡ ಪ್ರಮಾಣ ಗ್ರಂಥ. ಈ ನಿಘಂಟುಗಳ ಪುಟಗಳನ್ನು ತಿರುವಿಹಾಕುವುದೇ ಒಂದು ವಿದ್ಯಾಭ್ಯಾಸ. ಇಂಗ್ಲಿಷಿನ ಕಲಿಕೆ ಇಂದು ಇಡೀ ಜಗತ್ತಿನ ಸಂಸ್ಕೃತಿಯನ್ನೂ ಜನರನ್ನೂ ಪರಿಚಯ ಮಾಡಿಕೊಡಬಲ್ಲ ಪರಿಣಾಮಕಾರಿ ಸಾಧನಗಳಲ್ಲಿ ಒಂದು ಎಂದು ನಿಸ್ಸಂದೇಹವಾಗಿ ಹೇಳಬಹುದು.